ಭಯೋತ್ಪಾದನ ಸಂಘಟನೆಯಲ್ಲಿ ಸೇರುವ ಆರೋಪದಲ್ಲಿ, ಭಯೋತ್ಪಾದನೆ ವಿರೋಧಿ ಕಾನೂನಿನಡಿಯಲ್ಲಿ ಅನ್ಯಾಯವಾಗಿ ಬಂಧಿಸಲ್ಪಟ್ಟು , ನಂತರ ಮಾನವ ಹಕ್ಕುಗಳ ಹೋರಾಟಗಾರನಾಗಿ ಹೊರಹೊಮ್ಮಿದ ಶಾಹಿದ್ ಅಜ್ಮಿ ನಮಗೆ ನಿಜವಾಗಿಯೂ ಸ್ಪೂರ್ತಿದಾಯಕವಾಗಿದ್ದಾರೆ.

ಮುಂಬೈ ಮೂಲದ ಮಾನವ ಹಕ್ಕುಗಳ ವಕೀಲರಾದ ಶಾಹಿದ್ ಅಜ್ಮಿ ಅವರ ಹತ್ಯೆಯಾಗಿ ದಶಕಕ್ಕೂ ಹೆಚ್ಚು ಕಾಲ ಕಳೆದಿದ್ದರೂ, ಈ ಪ್ರಕರಣದಲ್ಲಿ ಇನ್ನೂ ಯಾರೊಬ್ಬರಿಗೂ ಶಿಕ್ಷೆಯಾಗಿಲ್ಲ (conviction).
ಗಮನಿಸಬೇಕಾದ ವಿಷಯವೆಂದರೆ, 2010ರ ಫೆಬ್ರವರಿ 11ರಂದು ಮುಂಬೈನ ಕುರ್ಳಾ ಪ್ರದೇಶದ ಟ್ಯಾಕ್ಸಿಮೆನ್ಸ್ ಕಾಲೋನಿಯಲ್ಲಿರುವ ತಮ್ಮ ಕಚೇರಿಯಲ್ಲಿ ವಕೀಲ ಶಾಹಿದ್ ಅಜ್ಮಿ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಹತ್ಯೆಯಾದ ಸಮಯದಲ್ಲಿ ಅವರು ಭಯೋತ್ಪಾದನೆ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದ ಹಲವಾರು ಮುಸ್ಲಿಂ ಯುವಕರ ಪರವಾಗಿ ವಾದಿಸುತ್ತಿದ್ದರು. ಕೇವಲ ಏಳು ವರ್ಷಗಳ ತಮ್ಮ ಅಲ್ಪಾವಧಿಯ ವೃತ್ತಿಜೀವನದಲ್ಲೇ ಅವರು ಭಯೋತ್ಪಾದನೆ ಆರೋಪಕ್ಕೆ ಒಳಗಾದ 17 ಮಂದಿಗೆ ನ್ಯಾಯಾಲಯದಿಂದ ಖುಲಾಸೆ (acquittal) ದೊರಕುವಂತೆ ಮಾಡಿದ್ದರು; ಅವರ ಹತ್ಯೆಯ ನಂತರವೂ ಇನ್ನೂ ಹಲವು ಮಂದಿಗೆ ಖುಲಾಸೆ ದೊರಕಿತು.

ಶಾಹಿದ್ ಅಜ್ಮಿ ಯಾರು?

ಶಾಹಿದ್ ಅಜ್ಮಿ ಮುಂಬೈನ ಸ್ಲಮ್ ಪ್ರದೇಶವೊಂದರಲ್ಲಿ ಜನಿಸಿ ಬೆಳೆದವರು. ವಕೀಲ ಶಾಹಿದ್ ಅಜ್ಮಿ ಅವರು 1992ರ ಬಾಂಬೆ ಗಲಭೆಗಳ ತೀವ್ರ ಪರಿಣಾಮಕ್ಕೆ ತುತ್ತಾಗಿದ್ದರು; ಆಗ ಅವರಿಗೆ ಕೇವಲ 16 ವರ್ಷ. ಬಾಬರಿ ಮಸೀದಿ ಧ್ವಂಸದ ನಂತರದ ಘಟನೆಗಳಲ್ಲಿ ಮುಂಬೈನಲ್ಲಿ ಮುಸ್ಲಿಮರನ್ನು ಗುರಿಯಾಗಿಸಲಾಗುತ್ತಿದೆ ಎಂಬ ಕಾರಣಕ್ಕೆ ಮನನೊಂದು, ಅವರು ಮುಂಬೈ ತೊರೆದು ಕಾಶ್ಮೀರದಲ್ಲಿನ ಪ್ರತ್ಯೇಕತಾವಾದಿ ಸಂಘಟನೆಯೊಂದಕ್ಕೆ ಸೇರಿದರು. ಕಾಶ್ಮೀರದಿಂದ ಹಿಂದಿರುಗಿದ ನಂತರ, 1994ರಲ್ಲಿ ದೆಹಲಿ ಪೊಲೀಸರ ವಿಶೇಷ ತನಿಖಾ ತಂಡವು (Special Cell) ಅವರನ್ನು ಮುಂಬೈನಲ್ಲಿ ಬಂಧಿಸಿತು. ವರದಿಗಳ ಪ್ರಕಾರ, ಶಿವಸೇನಾ ನಾಯಕ ಬಾಲ್ ಠಾಕ್ರೆ ಸೇರಿದಂತೆ ಭಾರತದ ಕೆಲವು ಉನ್ನತ ರಾಜಕಾರಣಿಗಳನ್ನು ಹತ್ಯೆ ಮಾಡಲು ‘ಸಂಚು ರೂಪಿಸಿದ್ದಾರೆ’ ಎಂಬ ಆರೋಪದಡಿ ಅವರನ್ನು ಬಂಧಿಸಲಾಯಿತು.


ಅವರು ದೆಹಲಿಯ ತಿಹಾರ್ ಜೈಲಿನಲ್ಲಿ ಸುಮಾರು ಏಳು ವರ್ಷಗಳನ್ನು ಕಳೆದರು. ಜೈಲಿನಲ್ಲಿದ್ದಾಗಲೇ ಅವರು ತಮ್ಮ ಕಾಲೇಜು ಶಿಕ್ಷಣವನ್ನು ಪ್ರಾರಂಭಿಸಿದರು. ಪದವಿ ಪೂರ್ಣಗೊಳಿಸಿ, ನಂತರ ‘ಕ್ರಿಯೇಟಿವ್ ರೈಟಿಂಗ್’ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.
ತಪ್ಪಾಗಿ ಹೊರೆಸಲಾದ ಆರೋಪಗಳಿಂದ ಮುಕ್ತರಾದ ನಂತರ, ಅವರು ಕಾನೂನು ಪದವಿ (ಎಲ್.ಎಲ್.ಬಿ.) ಪಡೆಯಲು ಮತ್ತೆ ಮುಂಬೈಗೆ ಮರಳಿದರು .
ಎಲ್.ಎಲ್.ಬಿ. ಪೂರ್ಣಗೊಳಿಸಿದ ಬಳಿಕ, ಶಾಹಿದ್ ಅಜ್ಮಿ ಅವರು ನಂತರ ಸಂಸದರಾದ ಪ್ರಸಿದ್ಧ ಕ್ರಿಮಿನಲ್ ವಕೀಲ ಮಜೀದ್ ಮೆಮನ್ ಅವರ ಬಳಿ ಕಿರಿಯ ವಕೀಲರಾಗಿ ವೃತ್ತಿಜೀವನ ಆರಂಭಿಸಿದರು. ಶೀಘ್ರದಲ್ಲೇ, 2002ರ ಭಯೋತ್ಪಾದನೆ ತಡೆ ಕಾಯ್ದೆ (POTA) ಅಡಿಯಲ್ಲಿ ಬಂಧಿತರಾದ ಮುಸ್ಲಿಂ ವ್ಯಕ್ತಿಗಳ ಪ್ರಕರಣಗಳನ್ನು ಅವರು ಕೈಗೆತ್ತಿಕೊಳ್ಳಲು ಶುರುಮಾಡಿದರು. ರಕ್ಷಣಾ ವಕೀಲರಾಗಿ ಅವರ ಮೊದಲ ಪ್ರಮುಖ ಯಶಸ್ಸು 2002ರ ಘಾಟ್‌ಕೋಪರ್ ಬಸ್ ಸ್ಫೋಟ ಪ್ರಕರಣದಲ್ಲಿ ದೊರಕಿತು. ಆ ಪ್ರಕರಣದಲ್ಲಿ POTA ಅಡಿಯಲ್ಲಿ ಬಂಧಿಸಲ್ಪಟ್ಟ ಮತ್ತು ಮುಖ್ಯ ಆರೋಪಿ ಎಂದು ಪಟ್ಟಿ ಮಾಡಲಾಗಿದ್ದ ಆರಿಫ್ ಪಾನ್ವಾಲಾ ಅವರಿಗೆ ನ್ಯಾಯ ದೊರಕಿಸುವಲ್ಲಿ ಅವರು ಯಶಸ್ವಿಯಾದರು.


ಶಾಹಿದ್ ಅಜ್ಮಿ ಹೋರಾಡಿ ಗೆದ್ದ ಪ್ರಮುಖ ಪ್ರಕರಣಗಳಲ್ಲಿ ಫಹೀಮ್ ಅನ್ಸಾರಿ ಅವರದ್ದು ಒಂದು. 26/11 ಭಯೋತ್ಪಾದನಾ ದಾಳಿಯ ಆರೋಪಿಯಾಗಿ, ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡಿದ್ದಾನೆ ಎಂಬ ಆರೋಪದಡಿ ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿಗಳು ಅವರನ್ನು ಬಂಧಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಯುತ್ತಿರುವ ಸಮಯದಲ್ಲೇ ಶಾಹಿದ್ ಅಜ್ಮಿ ಅವರನ್ನು ಹತ್ಯೆ ಮಾಡಲಾಯಿತು. ಅವರ ಮರಣದ ಕೆಲವು ತಿಂಗಳುಗಳ ನಂತರ, ಅವರ ಕಿರಿಯ ಸಹೋದರ ಖಾಲಿದ್ ಅಜ್ಮಿ ತಮ್ಮ ಕಾನೂನು ಪದವಿಯನ್ನು ಪೂರ್ಣಗೊಳಿಸಿ, ಅಣ್ಣನ ಧ್ಯೇಯವನ್ನು ಮುಂದುವರಿಸಿದರು.

ಶಾಹಿದ್ ಅಜ್ಮಿಯ ಹತ್ಯ

2010ರ ಇದೇ ದಿನ, ರಾತ್ರಿ ಸುಮಾರು 9:00 ಗಂಟೆಗೆ, ನ್ಯಾಯಾಲಯದಿಂದ ಮರಳಿ ಬಂದ ಶಾಹಿದ್ ಅಜ್ಮಿ ಅವರನ್ನು ತಮ್ಮ ಕಚೇರಿಯಲ್ಲಿ ಗ್ರಾಹಕರಂತೆ ನಟಿಸಿ ಬಂದಿದ್ದ ನಾಲ್ವರು ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದರು. ವರದಿಗಳ ಪ್ರಕಾರ, ಆರಂಭದಲ್ಲಿ ಐದು ಮಂದಿಯನ್ನು ಆರೋಪಿಗಳೆಂದು ಗುರುತಿಸಲಾಗಿತ್ತು. ಗ್ಯಾಂಗ್‌ಸ್ಟರ್ ಸಂತೋಷ್ ಶೆಟ್ಟಿ ಅವರನ್ನು 2014ರ ಅಕ್ಟೋಬರ್‌ನಲ್ಲಿ ಪ್ರಕರಣದಿಂದ ಬಿಡುಗಡೆ ಮಾಡಲಾಗಿದ್ದು, ಉಳಿದ ನಾಲ್ವರ ವಿರುದ್ಧ 2017ರ ಆಗಸ್ಟ್‌ನಲ್ಲಿ ಕೊಲೆ ಮತ್ತು ಅಪರಾಧ ಸಂಚು ಆರೋಪಗಳನ್ನು ವಿಧಿಸಲಾಯಿತು. ನಾಲ್ವರಲ್ಲಿ ಇಬ್ಬರಾದ ಪಿಂಟೂ ದಗಾಳೆ ಮತ್ತು ವಿನೋದ ವಿಚಾರೆ ಅವರು ಪ್ರಸ್ತುತ ಜಾಮೀನಿನಲ್ಲಿದ್ದಾರೆ; ದೇವೇಂದ್ರ ಜಗಟಾಪ್ ಮತ್ತು ಹಸ್ಮುಖ್ ಸೋಲಂಕಿ ಅವರು ಜೈಲಿನಲ್ಲಿದ್ದಾರೆ.

ಹಂಸಲ್ ಮೆಹ್ತಾ ಅವರ ‘ಶಾಹಿದ್’ ಚಲನಚಿತ್ರ

ಈ ಸಿನಿಮಾ 2013ರಲ್ಲಿ ತೆರೆಕಂಡಿತು . ನಿರ್ದೇಶಕ ಹಂಸಲ್ ಮೆಹ್ತಾ ಅವರು ಧೈರ್ಯಶಾಲಿ ಕಾರಣಕ್ಕಾಗಿ ತಮ್ಮ ಜೀವನವನ್ನೇ ಅರ್ಪಿಸಿದ ವಕೀಲ ಶಾಹಿದ್ ಅಜ್ಮಿ ಅವರ ಜೀವನ ಮತ್ತು ಕಾರ್ಯಗಳನ್ನು ಆಧರಿಸಿ ‘ಶಾಹಿದ್’ ಎಂಬ ಚಿತ್ರವನ್ನು ನಿರ್ಮಿಸಿದರು. ಈ ಚಿತ್ರದಲ್ಲಿ ರಾಜ್‌ಕುಮಾರ್ ರಾವ್ ಅವರು ಶಾಹಿದ್ ಅಜ್ಮಿ ಅವರ ಪಾತ್ರವನ್ನು ನಿರ್ವಹಿಸಿದ್ದರು. ಈ ಪಾತ್ರಕ್ಕಾಗಿ ರಾಜ್‌ಕುಮಾರ್ ರಾವ್ ಅವರಿಗೆ ‘ಅತ್ಯುತ್ತಮ ನಟ’ ರಾಷ್ಟ್ರೀಯ ಪ್ರಶಸ್ತಿ ಲಭಿಸಿತು.

ಹಂಸಲ್ ಮೆಹ್ತಾ ಅವರು ಬರೆದಂತೆ:
“ಶಾಹಿದ್ ಅಜ್ಮಿ, ನೀವು ನನ್ನ ಜೀವನವನ್ನು ಹೇಗೆ ಬದಲಾಯಿಸಿದ್ದೀರಿ ಎಂಬುದನ್ನು ನಿಮಗೆ ಹೇಳಲು ಸಾಧ್ಯವಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು! ನೀವು ಎಲ್ಲಿದ್ದರೂ ಧನ್ಯವಾದಗಳು, ಶಾಹಿದ್.”

ಶಾಹಿದ್ ಅಜ್ಮಿ ಅವರ ವೃತ್ತಿಪರ ಸಿದ್ಧಾಂತ

ಫಹೀಮ್ ಮಾತ್ರವೇ ಶಾಹಿದ್ ಅವರು ಪ್ರತಿನಿಧಿಸಿದ ಭಯೋತ್ಪಾದನೆ ಆರೋಪಿಯಾಗಿರಲಿಲ್ಲ. ಅವರು ಖುಲಾಸೆಗೊಳಿಸಿದ ಏಕೈಕ ವ್ಯಕ್ತಿ ಇವರಲ್ಲ. 2002ರ ಘಾಟ್‌ಕೋಪರ್ ಸ್ಫೋಟ ಪ್ರಕರಣ, 7/11 ಮುಂಬೈ ರೈಲು ಸ್ಫೋಟಗಳು, 2006ರ ಔರಂಗಾಬಾದ್ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳುವ ಪ್ರಕರಣ ಮತ್ತು 2006ರ ಮಾಲೇಗಾಂವ್ ಸ್ಫೋಟ ಪ್ರಕರಣಗಳಲ್ಲಿ ಆರೋಪಿತರ ಪರವಾಗಿ ಶಾಹಿದ್ ಅವರು ವಾದಿಸಿದ್ದರು.
ಅವರ ಕೆಲಸದ ಕಾರಣಕ್ಕೇ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಹಲವರು ನಂಬುತ್ತಾರೆ. ಹ್ಯೂಮನ್ ರೈಟ್ಸ್ ವಾಚ್ ಸಂಸ್ಥೆಯ ಭಯೋತ್ಪಾದನೆ ವಿಭಾಗದ ಸಂಶೋಧಕಿ ಮತ್ತು “The ‘Anti-Nationals’: Arbitrary Detention and Torture of Terrorism Suspects in India” ವರದಿಯ ಲೇಖಕಿ ಲೆಟ್ಟಾ ಟೇಲರ್ ಅವರು ಇಮೇಲ್ ಸಂಭಾಷಣೆಯಲ್ಲಿ ಹೇಳಿದ್ದು ಹೀಗಿದೆ: 2009ರ ಜೂನ್‌ನಲ್ಲಿ ನಾನು ಅಜ್ಮಿಯನ್ನು ಭೇಟಿಯಾದಾಗ, “ಅವರು ಮಾತನಾಡುತ್ತಿದ್ದುದನ್ನು ಕೇಳುತ್ತಾ ಅವರ ಭವಿಷ್ಯದ ಬಗ್ಗೆ ನನಗೆ ಸಹಜವಾಗಿಯೇ ಆತಂಕ ಉಂಟಾಯಿತು.”

ಟೇಲರ್ ಅವರಿಗೆ ಶಾಹಿದ್ ಅವರ ಭವಿಷ್ಯದ ಬಗ್ಗೆ ಉಂಟಾದ ಆತಂಕವು ಆಧಾರರಹಿತವಾಗಿರಲಿಲ್ಲ. ಅದೇ ವರ್ಷದ ಏಪ್ರಿಲ್‌ನಲ್ಲಿ, ಕರಾವಳಿ ಕರ್ನಾಟಕದ ಮಂಗಳೂರಿನಲ್ಲಿ ಮತ್ತೊಬ್ಬ ಮುಸ್ಲಿಂ ವಕೀಲ ನೌಶಾದ್ ಕಾಶಿಮ್‌ಜಿ ಅವರನ್ನು ಹತ್ಯೆ ಮಾಡಲಾಗಿತ್ತು. ಕಾಶಿಮ್‌ಜಿ ಅವರು ತಮ್ಮ ಹಿರಿಯರಾದ ಪುರುಷೋತ್ತಮ ಪೂಜಾರಿ ಅವರೊಂದಿಗೆ ಹಲವು ಭಯೋತ್ಪಾದನೆ ಆರೋಪಿತರ ಪರವಾಗಿ ವಾದಿಸಿದ್ದರು.

ಅವರನ್ನು “ಭಯೋತ್ಪಾದಕರ ವಕೀಲರು” ಎಂದು ಹಣೆಪಟ್ಟಿ ಕಟ್ಟಲಾಗಿತ್ತು ಮತ್ತು ಕೇವಲ ಹಿಂದುತ್ವ ಸಂಘಟನೆಗಳ ಸದಸ್ಯರಿಂದಷ್ಟೇ ಅಲ್ಲದೆ, ಕೆಲವು ಕಡೆಗಳಲ್ಲಿ ಸಹ ವಕೀಲರಿಂದಲೂ ಅವರು ದಾಳಿಗೆ ಒಳಗಾಗಿದ್ದರು.
ಆದಾಗ್ಯೂ, ಶಾಹಿದ್ ಅವರ ಜೈಲಿನ ಜೀವನವು ಭಯೋತ್ಪಾದನೆ ಆರೋಪಕ್ಕೆ ಒಳಗಾದವರ ಬಗ್ಗೆ ಅವರಿಗೆ ಹೆಚ್ಚು ಸಹಾನುಭೂತಿಯನ್ನು ಮೂಡಿಸಿತು ಮತ್ತು ಭಾರತೀಯ ಕ್ರಿಮಿನಲ್ ನ್ಯಾಯವ್ಯವಸ್ಥೆಯ ಕುರಿತು ಅಪರೂಪದ ಒಳನೋಟಗಳನ್ನು ನೀಡಿತು. ಇದರಿಂದ ಅವರು ಕೇವಲ ಧೈರ್ಯಶಾಲಿ ವಕೀಲರಷ್ಟೇ ಅಲ್ಲ, ಶೋಷಿತರ ಮತ್ತು ಪೀಡಿತರ ಪರವಾಗಿ ಪರಿಣಾಮಕಾರಿಯಾಗಿ ಹೋರಾಡುವ ವಕೀಲರಾಗಿ ರೂಪುಗೊಂಡರು.

ಅಮೆರಿಕಾದ ಸಿವಿಲ್ ಮತ್ತು ಕ್ರಿಮಿನಲ್ ರಕ್ಷಣಾ ವಕೀಲರಾದ ರಾಯ್ ಬ್ಲಾಕ್ ಅವರ ಮಾತುಗಳು ಅವರಿಗೆ ಮಾರ್ಗದರ್ಶನವಾಗಿದ್ದವು:
“ಅನ್ಯಾಯವನ್ನು ತೋರಿಸುವ ಮೂಲಕ ಅವರು ನನಗೆ ನ್ಯಾಯವನ್ನು ಪ್ರೀತಿಸಲು ಕಲಿಸಿದರು. ನೋವು ಮತ್ತು ಅವಮಾನವೇನೆಂಬುದನ್ನು ಕಲಿಸುವ ಮೂಲಕ ಅವರು ನನ್ನ ಹೃದಯದಲ್ಲಿ ಕರುಣೆಯನ್ನು ಜಾಗೃತಗೊಳಿಸಿದರು. ಈ ಕಷ್ಟಗಳ ಮೂಲಕ ನಾನು ಕಠಿಣ ಪಾಠಗಳನ್ನು ಕಲಿತೆನು — ಪೂರ್ವಾಗ್ರಹದ ವಿರುದ್ಧ ಹೋರಾಡಿ, ದಮನಕಾರರ ವಿರುದ್ಧ ಹೋರಾಟ ನಡೆಸಿ, ನೊಂದವರ ಮತ್ತು ಶೋಷಿತರ ಪರ ನಿಲ್ಲಿ.”

ತಮ್ಮ ಕೆಲವು ಸಾರ್ವಜನಿಕ ಸಂದರ್ಶನಗಳಲ್ಲಿ ಒಂದರಲ್ಲಿ, ಸ್ಫೋಟಗಳ ಸಂತ್ರಸ್ತರ ಬಗ್ಗೆ ತಮ್ಮ ಭಾವನೆಗಳನ್ನು ಅವರು ಹಂಚಿಕೊಂಡಿದ್ದರು. “ಅವರು ಅನುಭವಿಸಿದ ಕಷ್ಟಗಳನ್ನು ಕೇಳಿದಾಗ ನನಗೆ ತುಂಬಾ ನೋವಾಗುತ್ತದೆ; ಹೃದಯ ಹಿಂಡಿದಂತಾಗುತ್ತದೆ,” ಎಂದು ಅವರು ಹೇಳಿದರು. “ಆದರೆ ಇವೆಲ್ಲ ಇದ್ದರೂ, ಕೇವಲ ಸ್ಫೋಟ ಪ್ರಕರಣದ ಆರೋಪ ಇದೆ ಎಂಬ ಕಾರಣಕ್ಕೆ ನಿರಪರಾಧಿಯನ್ನು ಜೈಲಿಗೆ ಅಥವಾ ಗಲ್ಲುಗಂಬಕ್ಕೆ ಕಳುಹಿಸುವುದನ್ನು ನೋಡಲು ನನಗೆ ಎಂದಿಗೂ ಸಾಧ್ಯವಿಲ್ಲ.”

ಗಮನಾರ್ಹವಾದ ಸಂಗತಿ ಏನೆಂದರೆ, ಶಾಹಿದ್ ಅವರ ಕೆಲಸ ಮತ್ತು ಪರಂಪರೆ ಭಾರತದೆಲ್ಲೆಡೆ ನೂರಾರು ಯುವಕರಿಗೆ ಕಾನೂನನ್ನು ವೃತ್ತಿಯಾಗಿ ಆಯ್ಕೆಮಾಡಲು ಹಾಗೂ ಶೋಷಿತರ ಮತ್ತು ದಮನಕ್ಕೊಳಗಾದವರ ನ್ಯಾಯಕ್ಕಾಗಿ ಹೋರಾಡಲು ಪ್ರೇರಣೆಯಾಗಿದೆ.

LEAVE A REPLY

Please enter your comment!
Please enter your name here