ಶಿಕ್ರಾನ್ ಶರ್ಫುದ್ದೀನ್ ಮನೆಗಾರ್
ಪಾಂಡೇಶ್ವರ್, ಮಂಗಳೂರು

ಕವನ

(ಕಲ್ಯಾಣಪುರದಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ಕವಿಗೋಷ್ಠಿಯಲ್ಲಿ ಮಂಡಿಸಿದ ಕವನವಿದು)

ಬರೆಯುತ್ತಿ ಆಗಾಗ ನಮಗೆ ಪತ್ರ ನೀನು, ಮಗ
ಇರಬೇಕೆಂದು ನಾವು ಸದಾ ಸಂತೋಷದಿಂದ!
ಓದಲು ಬಲು ಸಿಹಿ ಪತ್ರದಲ್ಲಿ… ಈ ಮಾತು…!
ವಿಚಾರಿಸುತ್ತಿ ಹೆತ್ತವರ ಆರೋಗ್ಯವನ್ನು ನೀನು ಆಗಾಗ!
ಆದರೆ,
ನಮ್ಮನ್ನು ಸಂತೋಷದಲ್ಲಿಡಲಾರೆ ನೀನು ನಮಗೆ
ನಿನ್ನ ಸಂಪತ್ತಿನಿಂದ – ಡಿಗ್ರಿ ಡಿಪ್ಲೋಮಗಳಿಂದ!!!
ನಿನ್ನ ವಿದ್ಯೆಯಲ್ಲಿ – ಸಂಪತ್ತಿನಲ್ಲೆಲ್ಲಿ ತೃಪ್ತಿ ಸಿಗುವುದೇ?

ಮಸಣವಾಗಿದೆ ನಮ್ಮ ಮನೆ… ಕೇಳು ಮಗನೇ…!
ಇದ್ದಾವಿಲ್ಲಿ ಎರಡು ಮುದಿ ದೇಹಗಳು!
ಕಾಡುತ್ತಿದೆ ನಮಗೆ ಯಾವಾಗ ಏನಾಗಬಹುದೆಂಬ ಭೀತಿ
ಹೇಗಿರಲಿ ಸುಖದಿಂದ ನಾವು ಇಲ್ಲಿ… ಹೇಳು ಮಗನೇ…!
ಆದರೆ,
ಪ್ರಾರ್ಥಿಸುವೆವು ನಾವಿಬ್ಬರು, ನಿನಗಾಗಿ…

ನಿನ್ನ ಮಡದಿಗಾಗಿ… ನಿನ್ನ ಮಕ್ಕಳಿಗಾಗಿ…!

ಸುಯೋಗವಿಲ್ಲ ನಮಗೆ ಮೊಮ್ಮಕ್ಕಳೊಂದಿಗೆ ಕಳೆಯುವ…
ಸೌಭಾಗ್ಯವಿಲ್ಲ ನಮಗೆ ಸೊಸೆಯ ಕೈಯಿಂದ ತಿನ್ನುವ…
ಮಕ್ಕಳ ನಲಿವಿಲ್ಲದ ನಮ್ಮ ಈ ಮನೆ-
ಸೊಸೆಯ ಗೆಜ್ಜೆನಾದ ಕೇಳದ ನಮ್ಮ ಈ ಅಂಗಳ-
ಮಸಣವಾಗಿದೆ… ಕೇಳು ಮಗನೇ…!
ಆದರೆ,
ಮರೆಯದಿರು ಸೊಸೆ,
ನಿನ್ನ ಗರ್ಭದಲ್ಲಿ ಬೆಳೆಯುತ್ತಿರುವ ಭ್ರೂಣ
ನಿಮ್ಮನ್ನೇ ನೋಡಿ ಕಲಿಯುತ್ತಿದ್ದಾನೆ!
ದೇವರು ಭ್ರೂಣೀಗಾದರು ಸದ್ಬುದ್ಧಿ ಕರುಣಿಸಲಿ!

ಬರೀ ವಿದೇಶಿ ನೌಕರಿ ಮತ್ತು ಸಂಪತ್ತು- ಸಫಲ ಜೀವನವಲ್ಲ!
ಸಿಗುವುದಿಲ್ಲ ಪರಮಸುಖ ಹೆತ್ತವರಿಗೆ ಅದರಿಂದ!
ತೀರಿದ ಮೇಲೆ ತಾಜ್ ಮಹಲ್ ಕಟ್ಟಿದರೇನು ಫಲ?
ಆದರೆ,
ನಾವು ತೀರಿ ಹೋದ ಮೇಲೆ, ಗೋರಿಯನ್ನೊಮ್ಮೆ
ನೋಡಲು ಬಾ ಮಗ…

LEAVE A REPLY

Please enter your comment!
Please enter your name here