ನಿಹಾಲ್ ಮುಹಮ್ಮದ್ ಕುದ್ರೋಳಿ
(ಕಾನೂನು ವಿದ್ಯಾರ್ಥಿ, ಅಲೀಘಡ ಮುಸ್ಲಿಂ ವಿಶ್ವವಿದ್ಯಾಲಯ ಮಲಪುರಂ ಶಾಖೆ)

ದೇಶದೆಲ್ಲಡೆ ನಡೆಯುತ್ತಿರುವ ಪ್ರತಿಭಟನೆಗಳ ಕಿರು ಪರಿಚಯ ಮತ್ತು ಮಾಹಿತಿ.

ಭಾರತದಲ್ಲಿ ಮತ್ತೊಮ್ಮೆ ಪ್ರತಿಭಟನೆಗಳು ತಲೆಯೆತ್ತಿವೆ. ಆದರೆ ಈ ಬಾರಿ ಪ್ರತಿಭಟನೆಯ ಮುಂಚೂಣಿಯಲ್ಲಿರುವುದು ಮುಸ್ಲಿಮರು, ದಲಿತರು ಅಥವಾ ಬೇರೆ ಯಾವುದೇ ಅಲ್ಪಸಂಖ್ಯಾತರಲ್ಲ. ಈ ಸಲ ಮುಂಚೂಣಿಯಲ್ಲಿರುವುದು ನಮ್ಮ ದೇಶದ ಬೆನ್ನೆಲುಬಾದಂತಹ ರೈತರು. ಯಾಕಾಗಿ ನಮ್ಮ ರೈತರು ಇಂದು ರಸ್ತೆಗಿಳಿದು ಪ್ರತಿಭಟಿಸುತ್ತಿದ್ದಾರೆ ಎಂಬುವುದನ್ನು ನಾವಿಂದು ತಿಳಿಯೋಣ.

Q. 1. ರೈತರು ಯಾಕೆ ಪ್ರತಿಭಟನೆ ಮಾಡುತ್ತಿದ್ದಾರೆ ಮತ್ತು ಈ ಪ್ರತಿಭಟನೆಗಳು ವಿಪಕ್ಷ ತನ್ನ ರಾಜಕೀಯ ಲಾಭಗಳಿಗಾಗಿ ಸೃಷ್ಟಿಸಿದ ತಂತ್ರವೇ ?

ಉ: ರೈತರಿಗೆ ಸಂಬಂಧಪಟ್ಟಂತಹ ಮೂರು ಮಸೂದೆಗಳನ್ನು ಸರಕಾರ ಏಕಾ ಏಕಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪಾಸ್ ಮಾಡಿತ್ತು. ಈ ಕಾಯ್ದೆಗಳಲ್ಲಿರುವಂತಹ ಕೆಲವು ಅಂಶಗಳು ತಮ್ಮ ಜೀವನವನ್ನು ಅಪಾಯಕ್ಕೆ ಒಳಪಡಿಸಬಹುದೆಂಬ ಭಯದಿಂದ ರೈತರು ರಸ್ತೆಗಿಳಿದು ಪ್ರತಿಭಟಿಸುತ್ತಿದ್ದಾರೆ. ಇನ್ನು ಸರಕಾರ ಹೇಳುತ್ತಿದೆ ಈ ಪ್ರತಿಭಟನೆಗಳು ವಿಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ ಹೆಣೆಯುತ್ತಿರುವ ತಂತ್ರವಾಗಿವೆಯೆಂದು. ಹಾಗಾಗಿದ್ದರೆ ಕೇಂದ್ರ ಸರಕಾರದಲ್ಲಿ ಇದ್ದಂತಹ ಶಿರೊಮನಿ ಅಕಾಲಿದಳದ ಮಂತ್ರಿ ಹರ್ಸಿಮ್ರತ್ ಕೌರ್ ಬಾದಲ್ ರವರು ಯಾಕೆ ರಾಜೀನಾಮೆ ನೀಡಿದರು? ಅದೇ ರೀತಿ ಯಾವ ಕಾರಣಕ್ಕೆ ರಾಜಕೀಯದ ಜೊತೆ ಯಾವುದೇ ಸಂಬಂಧವಿಲ್ಲದಂತಹ ರಾಕ್ಸ್ಟಾರ್ ದಿಲ್ಜಿತ್ ದೋಸಾನ್ಜ್ ರವರು ರೈತರಿಗೆ ತಮ್ಮ ಬೆಂಬಲವನ್ನು ಸೂಚಿಸಿದರು? ಅದಲ್ಲದೆ ಎಷ್ಟೋ ರೈತ ಪರ ಸಂಘಟನೆಗಳು ಈ ಮಸೂದೆಯ ವಿರುದ್ಧ ಪ್ರತಿಭಟನೆ ಘೋಷಿಸಿದ್ದಾರೆ. ಇದರಿಂದ ಸ್ಪಷ್ಟವಾಗುನೆಂದೇನೆಂದರೆ ಇದು ವಿಪಕ್ಷದಿಂದ ರೈತರ ಮನಸಿನಲ್ಲಿ ತಪ್ಪುಕಲ್ಪನೆ ಮೂಡಿಸಿ ಸೃಷ್ಟಿಸಿದಂತಹ ಪ್ರತಿಭಟನೆಯಲ್ಲ ಬದಲಾಗಿ ನಿಜಕ್ಕೂ ಇದರಲ್ಲಿ ಸಮಸ್ಯೆಗಳಿವೆ ಎಂಬ ಭಯ ರೈತರಲ್ಲಿ ಹುಟ್ಟಿಕೊಂಡ ಕಾರಣದಿಂದ ತಲೆಯೆತ್ತಿದ ಪ್ರತಿಭಟನೆಗಳಿವು.

Q. 2. ಈ ಮಸೂದೆಗಳು (Ordinance) ಏನು ಹೇಳುತ್ತವೆ?

ಈ ಮುಂಚೆ ಹೇಳಿದಂತೆ ರೈತರಿಗೆ ಸಂಬಂಧಪಟ್ಟಂತಹ ಮೂರು ಮಸೂದೆಯಲ್ಲಿ ಮುಖ್ಯವಾಗಿ ಏನಿದೆಯೆಂದು ನಾವು ತಿಳಿಯೋಣ. ಇದರಲ್ಲಿ ಮೊದಲನೆಯ ಮಸೂದೆಯಲ್ಲಿ ಎಪಿ. ಎಂ. ಸಿ(APMC) ಮಾರ್ಕೆಟ್ಗಳನ್ನು ಹೊರತುಪಡಿಸಿ ನೇರವಾಗಿ ವ್ಯಾಪಾರಸ್ಥರ ಜೊತೆಗೆ ವ್ಯಾಪಾರ ನಡೆಸುವಂತಹ ಸ್ವಾತಂತ್ರ್ಯವನ್ನು ರೈತರಿಗೆ ನೀಡಲಾಗಿದೆ. ಎರಡನೆಯ ಮಸೂದೆಯಲ್ಲಿ ಬೆಳೆಗಳನ್ನು ಸಂಗ್ರಹಿಸಿಡುವುದು ಕಾನೂನು ಬಾಹಿರವಲ್ಲ ಎಂಬ ಉಲ್ಲೇಖವಿದೆ. ಅದೇ ರೀತಿ ಮೂರನೆಯ ಮಸೂದೆಯಲ್ಲಿ ರೈತರು ನೇರವಾಗಿ ವ್ಯಾಪಾರಸ್ಥರ ಜೊತೆಗೆ ಕಾಂಟ್ರ್ಯಾಕ್ಟ್ ಗಳನ್ನು ನಡೆಸಬಹುದೆಂಬ ಕುರಿತು ಉಲ್ಲೇಖಿಸಲಾಗಿದೆ.

Q. 3. APMC ಏನು? MSP ಏನು? ಇದರಿಂದ ರೈತರಿಗಾಗುವ ಲಾಭವೇನು?

ಈವರಿಗೆನ ಭಾರತದ ಕೃಷಿ ವ್ಯವಸ್ಥೆಯಲ್ಲಿ ರೈತರು ಎಪಿಎಂಸಿ ಅನ್ನು ಸಂಪರ್ಕಿಸಿ ತಮ್ಮ ಬೆಳೆಗಳನ್ನು ವ್ಯಾಪಾರಸ್ಥರಿಗೆ ಮಾರಾಟ ಮಾಡುತ್ತಿದ್ದರು. ಇಲ್ಲಿ ಎಪಿಎಂಸಿ ಯು ರೈತರ ಮತ್ತು ವ್ಯಾಪಾರಸ್ಥರ ನಡುವಿನ ಮಧ್ಯಮವರ್ತಿಯಾಗಿ ಕಾರ್ಯ ನಿರ್ವಹಿಸುತ್ತಿತ್ತು. ಇಲ್ಲಿ ಆಕ್ಷನ್ ಗಳು ನಡೆಯುತ್ತಿತ್ತು ಮತ್ತು ರೈತರಿಗೆ ಪ್ರೈಸ್ ಡಿಸ್ಕವರಿ ಮಾಡಲು ಸುಲಭವಾಗುತ್ತಿತ್ತು. ಅದೇ ರೀತಿ ರೈತರಿಗೆ ತಮ್ಮ ಬೆಳೆಯನ್ನು ಯಾವುದೇ ವ್ಯಾಪಾರಸ್ಥರಿಗೆ ಮಾರಾಟ ಮಾಡಲು ಸಾಧ್ಯವಾಗದ ಪರಿಸ್ಥಿತಿಯು ಎದುರಾದರೆ ಸರಕಾರವು ನೇರವಾಗಿ ರೈತರಿಂದ ನಿರ್ದಿಷ್ಟ MSP (Minimum Support Price) ನೀಡಿ ಖರೀದಿಸುತಿತ್ತು.
1965 ರಲ್ಲಿ ನಿರ್ಮಾಣಗೊಂಡಂತಹ ಎಪಿಎಂಸಿ ಗಳು ಗ್ರೀನ್ ರೆವಲ್ಯೂಷನ್ ಸಫಲವಾಗುವಲ್ಲಿ ಮುಖ್ಯ ಪಾತ್ರವನ್ನು ವಹಿಸಿತ್ತು. ಇದರಿಂದಾಗಿ ಎಷ್ಟೋ ರೈತರು ಲಾಭ ಪಡೆಯುತ್ತಿದ್ದಾರೆ. ಪಂಜಾಬ್ ಮತ್ತು ಹರಿಯಾಣ ಪ್ರದೇಶಗಳಲ್ಲಿ ರೈತರು ಕಿಸಾನ್ ಬಚಾವೋ ಮಂಡಿ ಬಚಾವೋ ಎಂಬ ಘೋಷಣೆ ಜೊತೆಗೆ ರಸ್ತೆಗೆ ಇಳಿದಿದ್ದಾರೆ. ಇಲ್ಲಿ ಮಂಡಿ ಎಂದರೆ ಇದೇ ಎಪಿಎಂಸಿ ಗಳಾಗಿವೆ. ದೇಶದ ಕೇವಲ 6 ಪರ್ಸೆಂಟ್ ರೈತರು ಇದರ ಉಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ ಆದರೆ ಅದರ ಸಂಪೂರ್ಣ ಉಪಯೋಗವನ್ನು ಎಲ್ಲ ರೈತರು ಪಡೆಯಲು ಆರಂಭಿಸಿದರೆ ನಮ್ಮ ದೇಶದಲ್ಲಿ ರೈತರ ಸಂಕಷ್ಟಗಳು ಒಂದು ಮಟ್ಟಕ್ಕೆ ಕಡಿಮೆಯಾಗಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಆದರೆ ಈ ಎಪಿಎಂಸಿ ಗಳಲ್ಲಿರುವಂತಹ ಉದ್ಯೋಗಸ್ಥರು ಭ್ರಷ್ಟಾಚಾರವನ್ನು ಮಾಡುತ್ತಿದ್ದಾರೆ ಎಂಬ ಆರೋಪಗಳೂ ಇವೆ. ಕಿಸಾನರನ್ನು ಶೋಷಣೆಗೆ ಒಳಪಡಿಸುವುದು, ಬೆಳೆಗಳ ಸಂಗ್ರಹಣೆ ಮಾಡುವುದು, ಮತ್ತು ಇತರ ಭ್ರಷ್ಟ ಕಾರ್ಯಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ಈ ಎಪಿಎಂಸಿ ಗಳನ್ನು ಈ ಕಾಯ್ದೆಗಳಲ್ಲಿ ಮುಟ್ಟಲಿಲ್ಲ ಎಂದು ಸರಕಾರವು ಹೇಳುತ್ತಿದೆ ಆದರೂ ರೈತರು ಯಾಕೆ ಪ್ರತಿಭಟಿಸುತ್ತಿದ್ದಾರೆ ಎನ್ನುವುದನ್ನು ನಾವು ನೋಡೋಣ.

Q. 4.ಸರಕಾರ ಈ ಮಸೂದೆಗಳನ್ನು ಜಾರಿಗೆ ತರುವ ಉದ್ದೇಶವೇನು?

ಸರಕಾರವು ದೇಶದಲ್ಲಿ ಎಲ್ಲಾ ವಿಭಾಗಗಳಲ್ಲಿ ಯೂನಿಫಾರ್ಮಿಟಿ ತರುವಂತಹ ಪ್ರಯತ್ನವನ್ನು ಮಾಡುತ್ತಿದೆ. ಒಂದು ದೇಶ ಒಂದು ಭಾಷೆ ಒಂದು ದೇಶ ಒಂದು ಟ್ಯಾಕ್ಸ್, ಇದೀಗ ಒಂದು ದೇಶ ಒಂದು ಮಾರುಕಟ್ಟೆ ಮಾಡಲು ಹೊರಟಿದೆ. ಈ ಮಸೂದೆಗಳನ್ನು ಕುರಿತು ಪ್ರಧಾನಮಂತ್ರಿ ಐತಿಹಾಸಿಕ ಎಂದು ಕರೆದಿದ್ದಾರೆ. ಎಲ್ಲಾ ಮಸೂದೆಗಳನ್ನು ಐತಿಹಾಸಿಕ ಎಂದು ಕರೆಯುವ ಒಂದು ಚರಿತ್ರೆ ಈ ಸರಕಾರಕ್ಕೆ ಇದೆ. ಈ ಮುಂಚೆ ಜಿಎಸ್ಟಿ ಅನ್ನು ಎರಡನೆಯ ಸ್ವಾತಂತ್ರ್ಯ ಎಂದು ಕರೆದಿದ್ದರು. ಆದರೆ ಅದರ ವೈಫಲ್ಯತೆಯನ್ನು ನಾವು ಇವತ್ತು ಅನುಭವಿಸುತ್ತಿದ್ದೇನೆ. ಆತ್ಮ ನಿರ್ಭರ ಭಾರತವನ್ನು ಕಟ್ಟುವುದರಲ್ಲಿ ಇದು ಒಂದು ಹೆಜ್ಜೆ ಎಂದು ಸರಕಾರ ಹೇಳುತ್ತಿದೆ. ದೇಶದ ರೈತರನ್ನು ಭ್ರಷ್ಟ ಮದ್ಯಮವರ್ತಿಯಿಂದ ಮುಕ್ತಗೊಳಿಸಿ ವ್ಯಾಪಾರಸ್ಥರ ಜೊತೆ ನೇರವಾಗಿ ವ್ಯಾಪಾರ ಮಾಡುವ ಸ್ವಾತಂತ್ರ್ಯವನ್ನು ರೈತೆರಿಗೆ ನೀಡಲು ಇಚ್ಚಿಸುತ್ತದೆ. ಅದೇ ರೀತಿ ಕಾರ್ಪೊರೇಟ್ ಕಂಪನಿಗಳು ರೈತರ ಜೊತೆ ಕಾಂಟ್ರಾಕ್ಟ್ ನಿರ್ಮಿಸಲು ಸ್ವಾತಂತ್ರ್ಯವನ್ನು ನೀಡಿದೆ. ಇದರಿಂದ ರೈತರನ್ನು ಇನ್ನಷ್ಟು ಬಲಪಡಿಸಲು ಸರಕಾರ ಪ್ರಯತ್ನಿಸುತ್ತಾ ಇದೆ. ಅದೇ ಸಮಯದಲ್ಲಿ ಅದಾನಿ ಹಾಗೂ ಅಂಬಾನಿ ಗ್ರೂಪ್ಗಳು ಕೃಷಿ ಕ್ಷೇತ್ರಕ್ಕೆ ಪ್ರವೇಶಿಸಿದ ತಕ್ಷಣವೇ ಈ ಮಸೂದೆಗಳನ್ನು ತಂದದ್ದು ಜನರ ಮನಸ್ಸಿನಲ್ಲಿ ಸಂಶಯವನ್ನು ಉಂಟುಮಾಡಿದೆ. ಇದರಿಂದ ಸರಕಾರವು ರೈತರನ್ನು ಬಲಪಡಿಸಲು ಇಷ್ಟಪಡುತ್ತಿದೆಯೇ? ಅಥವಾ ಕಾರ್ಪೊರೇಟ್ ಕಂಪೆನಿಗಳನ್ನು ಬಲಪಡಿಸಲು ಇಷ್ಟಪಡುತ್ತಿದೆಯೋ? ಎಂಬ ಸಂದೇಹ ಜನರಲ್ಲಿ ಮನೆಮಾಡಿದೆ.

Q. 5. ಮಸೂದೆಯ ಯಾವ ಅಂಶಗಳ ವಿರುದ್ಧ ರೈತರು ಪ್ರತಿಭಟಿಸುತ್ತಿದ್ದಾರೆ?

ಎಪಿಎಂಸಿ ಗಳನ್ನು ನಿಲ್ಲಿಸುವುದಿಲ್ಲ ಎಂದು ಸರಕಾರ ಹೇಳಿದರೂ ರೈತರು ಯಾಕೆ ಪ್ರತಿಭಟಿಸುತ್ತಿದ್ದಾರೆ? ಎಪಿಎಂಸಿಯಲ್ಲಿ ವ್ಯಾಪಾರ ಮಾಡುವುದಾದರೆ ಟ್ಯಾಕ್ಸ್ ಕಟ್ಟಬೇಕು ಆದರೆ ನೇರವಾಗಿ ವ್ಯಾಪಾರಸ್ಥರ ಜೊತೆಗೆ ವ್ಯಾಪಾರ ನಡೆಸುವುದಾದರೆ ಟ್ಯಾಕ್ಸ್ ಕಟ್ಟುವ ಅವಶ್ಯಕತೆ ಇಲ್ಲ. ಇದರಿಂದಾಗಿ ಸಮಯದ ಜೊತೆ ಎಪಿಎಂಸಿಗಳು ಬಂದ್ ಆಗಬಹುದೆಂಬ ಭಯವೂ ರೈತರಲ್ಲಿದೆ. ಇದರಿಂದಾಗಿ ಈಗ ಸಿಗುತ್ತಿದ್ದಂತಹ MSP(Minimum Support Price) ಕೂಡ ಸಿಗುವುದು ನಿಲ್ಲಬಹುದೆಂಬ ಹೆದರಿಕೆ ಅವರಲ್ಲಿದೆ. ಬಿಹಾರದಲ್ಲಿ 2006ರಲ್ಲಿ ಎಪಿಎಂಸಿ ಆಕ್ಟ್ ರದ್ದು ಮಾಡಿದಾಗ ರೈತರು ಹೆಚ್ಚಿನಂಶ ಬೆಳೆಗಳನ್ನು ಅವರಿಗೆ ಸಾಮಾನ್ಯವಾಗಿ ಸಿಗುತ್ತಿದ್ದಂತಹ msp ಗಿಂತಲೂ ಕಡಿಮೆ ಹಣಕ್ಕೆ ನೀಡಿದಂತಹ ಘಟನೆ ನಡೆದಿತ್ತು. ಆದ್ದರಿಂದಾಗಿ ರೈತರು ಇದೇ ಪರಿಸ್ಥಿತಿ ನಮಗೂ ಬರಬಹುದು ಎಂಬ ಭಯವನ್ನು ಸ್ಪಷ್ಟಪಡಿಸಿದ್ದಾರೆ.
ಎಪಿಎಂಸಿಯಲ್ಲಿ ಸಮಸ್ಯೆಗಳಾದರೆ ಅದನ್ನು ಸರಿಪಡಿಸುವುದನ್ನು ಬಿಟ್ಟು ಸರಕಾರ ಎಪಿಎಂಸಿ ಗಳನ್ನು ಕಾಲಕ್ರಮೇಣ ಇಲ್ಲವಾಗಿಸುವ ಹುನ್ನಾರವನ್ನು ಮಾಡುತ್ತಿದೆ ಎಂದು ಜನರು ವಿರೋಧಿಸುತಿದ್ದಾರೆ. ಇನ್ನು ವ್ಯಾಪಾರಸ್ಥರ ಜೊತೆ ನೇರವಾಗಿ ರೈತರು ವ್ಯಾಪಾರ ನಡೆಸುವುದರಿಂದ ಕೆಲವು ಸಮಸ್ಯೆಗಳು ಉಂಟಾಗಬಹುದು. ಇದರಲ್ಲಿ ಮೊದಲನೆಯದಾಗಿ ನಮ್ಮ ರೈತರ ಆರ್ಥಿಕ ಸ್ಥಿತಿ, ಸಾಮಾಜಿಕ ಬೆಳವಣಿಗೆ, ವಿದ್ಯಾಭ್ಯಾಸ ಮಟ್ಟ ಬಹಳ ಕಡಿಮೆಯಾದುದರಿಂದ ರೈತರು ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳ ಜೊತೆ ನೇರವಾಗಿ ವ್ಯಾಪಾರ ನಡೆಸಲು ಹೊರಟರೆ ಇದರಲ್ಲಿ ಯಾರು ಲಾಭ ಪಡೆಯಬಹುದು ಎಂಬುದು ಸಾಮಾನ್ಯವಾಗಿ ನಮಗೆಲ್ಲರಿಗೂ ಅರ್ಥಮಾಡಿಕೊಳ್ಳಬಹುದು. ರೈತರನ್ನು ಶೋಷಣೆಗೆ ಒಳಪಡಿಸಿ ಅವರ ಜೀವನವನ್ನು ಅಪಾಯಕ್ಕೆ ದೂಡುವ ಕೆಲಸವನ್ನು ಈ ಕಾರ್ಪೊರೇಟ್ ಕಂಪನಿಗಳು ಮಾಡಬಹುದು. ಯಾವುದೇ ಕಾನೂನು ಜ್ಞಾನವಿಲ್ಲದಂತಹ ನಮ್ಮ ರೈತರು ಕಾರ್ಪೊರೇಟ್ ಕಂಪನಿಗಳ ಜೊತೆ ಕಾಂಟ್ರಾಕ್ಟ್ ಮಾಡಲು ಹೊರಟರೆ ಅವರು ಮೋಸಕ್ಕೆ ಒಳಪಡುವ ಸಾಧ್ಯತೆಗಳು ಇವೆ. ಅದಲ್ಲದೆ ಎಪಿಎಂಸಿಗಳಲ್ಲಿ ತಮ್ಮ ಬೆಳೆಗಳಿಗೆ ಎಷ್ಟು ಹಣ ಸಿಗಬಹುದೆಂದು ಅವರಿಗೆ ಅಂದಾಜು ಸಿಗುತ್ತಿತ್ತು ಆದರೆ ಇಲ್ಲಿ ಅದು ಅಸಾಧ್ಯ. ಯಾರದೇ ಸಹಾಯವಿಲ್ಲದ ನಮ್ಮ ದೇಶದ ರೈತರು ಇದರಿಂದಾಗಿ ಸಂಕಷ್ಟಕ್ಕೆ ಒಳಪಡುವುದು ಖಂಡಿತ.

Q. 6. ರೈತರು ಮುಂದಿಡುತ್ತಿರುವ ಬೇಡಿಕೆಗಳೇನು?

ಮುಖ್ಯವಾಗಿ ರೈತರು 4 ಬೇಡಿಕೆಗಳನ್ನು ಸರಕಾರದ ಮುಂದಿಡುತ್ತಿದ್ದಾರೆ. ಹೊಸದಾಗಿ ತಂದಂತಹ ಮಸೂದೆಗಳನ್ನು ಹಿಂಪಡೆಯುಬೇಕು, ಎಪಿಎಂಸಿ ಮಾರುಕಟ್ಟೆಗಳನ್ನು ಸಂರಕ್ಷಿಸುವುದು ಮತ್ತು ಅದರಲ್ಲಿರುವಂತಹ ಭ್ರಷ್ಟಾಚಾರವನ್ನು ಇಲ್ಲದಾಗಿಸಬೇಕು. ತಮ್ಮ ಎಲ್ಲಾ ಸಾಲಗಳನ್ನು ಮನ್ನಿಸಬೇಕು ಮತ್ತು MSP (minimum support price) ಕುರಿತು ಹೊಸ ಕಾನೂನು ತರುವುದು. ರೈತರಿಗೆ ಒಂದು ದೇಶ ಒಂದು ಮಾರುಕಟ್ಟೆಯ ಬದಲಾಗಿ ಒಂದು ದೇಶ ಒಂದು MSP ಯ ಅಗತ್ಯವಿದೆಯೆಂಬುದು ರೈತರ ಒಕ್ಕೊರಳ ಬೇಡಿಕೆಯಾಗಿದೆ.

  1. ರೈತರ ಮತ್ತು ಸರಕಾರದ ಮಧ್ಯೆ ಇಷ್ಟೊಂದು ಅಂತರ ಸೃಷ್ಟಿಯಾಗಲು ಕಾರಣಗಳೇನು?
    ಈ ಸರಕಾರವು ತಮ್ಮ ಅಹಂಕಾರದಿಂದ ಎಲ್ಲಾ ಮಸೂದೆಗಳನ್ನು ಹಾಗೂ ಅಭಿಪ್ರಾಯಗಳನ್ನು ಏಕಾಏಕಿಯಾಗಿ ಯಾರ ಜೊತೆಗೂ ಚರ್ಚಿಸದೆ ಜಾರಿಗೊಳಿಸುತ್ತಿದೆ. ತಾವು ಏನು ತೀರ್ಮಾನ ಕೈಗೊಂಡರೂ ಜನರು ನಮ್ಮನ್ನು ಬೆಂಬಲಿಸುತ್ತಾರೆಂಬ ಅಚಂಚಲ ಭರವಸೆಯು ಸರಕಾರಕ್ಕಿತ್ತು ಆದರೆ ಇದೀಗ ಡಿಮಾನಿಟೈಸೇಷನ್, ಜಿಎಸ್ಟಿಯಂತಹ ಹಲವು ಕಾಯ್ದೆಗಳ ವೈಫಲ್ಯಗಳು ನಮ್ಮ ಆರ್ಥಿಕ ವ್ಯವಸ್ಥೆಯ ಕುಸಿತಕ್ಕೆ ಕಾರಣವೆಂಬುದನ್ನು ಅರಿತ ಪ್ರಜೆಗಳು ಸರಕಾರದ ತೀರ್ಮಾನಗಳ ವಿರುದ್ಧ ಪ್ರತಿಭಟಿಸಲು ಆರಂಭಿಸಿದ್ದಾರೆ. ಇದರಿಂದಾಗಿ ಸರಕಾರದ ಮತ್ತು ರೈತರು, ಒಟ್ಟಾಗಿ ಜನರ ಮಧ್ಯೆ ಇಷ್ಟೊಂದು ದೊಡ್ಡ ಅಂತರವು ಸೃಷ್ಟಿಯಾಗಲು ಮುಖ್ಯ ಕಾರಣ. ಒಂದು ಪ್ರಜಾಪ್ರಭುತ್ವ ದೇಶದ ಮೂಲಭೂತ ತತ್ವಗಳನ್ನು ಎತ್ತಿಹಿಡಿದುಕೊಂಡು ಸರಕಾರವು ಜನರ ಜೊತೆ ಮುಕ್ತ ಚರ್ಚೆ ನಡೆಸಿ ತಮ್ಮ ತೀರ್ಮಾನಗಳನ್ನು ಜನರ ಹಿತಕ್ಕಾಗಿ ಬದಲಾವಣೆಗೊಳಿಸಲು ಯಾವಾಗಲೂ ತಯಾರಾಗಬೇಕು.

LEAVE A REPLY

Please enter your comment!
Please enter your name here