ಕಥೆ

ಹಂಝ ಮಲಾರ್

ನಾನು ಮಗುವನ್ನು ಕೊಂದೆ…
ಅಲ್ಲಲ್ಲ, ನಾನು ಮಗುವನ್ನು ಕೊಂದಿದ್ದೇನೆ…
ಯಾವ ಹಂತಕನಿಗೂ ಕಡಿಮೆಯಿಲ್ಲದೆ ಶಿಕ್ಷೆಗೆ ನಾನು ಸಿದ್ಧವಾಗಿದ್ದೇನೆ…
ನನಗೆ ಶಿಕ್ಷೆ ಕೊಡುವವರು ಯಾರು? ಸಮಾಜವಾ? ನಾವು ನಂಬಿದ ದೇವರಾ?… ನನಗೊಂದೂ ಗೊತ್ತಾಗುತ್ತಿಲ್ಲ. ಸಮಾಜಕ್ಕೆ ನಾನೀಗಲೂ ಆದರ್ಶ ವ್ಯಕ್ತಿ. ನನ್ನನ್ನು ಅನುಕರಣೆ ಮಾಡುವ ಅಭಿಮಾನಿಗಳ ಸಂಖ್ಯೆ ಒಂದಿಷ್ಟು ಹೆಚ್ಚಾಗಿದೆ ಅಂದರೆ ಉತ್ಪ್ರೇಕ್ಷೆಯಾಗಲಾರದು. ನಾನು ರಾಜಕೀಯ ಪುಢಾರಿಯಲ್ಲ. ಸರಕಾರದ ಅಥವಾ ಖಾಸಗಿ ಸಂಸ್ಥೆಗಳ ಭ್ರಷ್ಟ ಅಧಿಕಾರಿಯಲ್ಲ. ಕಾನೂನನ್ನು ಕೈಗೆತ್ತಿಕೊಳ್ಳುವ ಪೊಲೀಸ್ ಅಧಿಕಾರಿಯಲ್ಲ. ನಾನೊಬ್ಬ ಕಲಾವಿದ. ಅದ್ಭುತ ಭಾಷಣಕಾರ. ದೇಶದ ನಾನಾ ಕಡೆ ನನ್ನ ಕಲೆಯ ಪ್ರದರ್ಶನವಾಗಿದೆ. ನನ್ನ ಚಿತ್ರಕಲೆಗಳು ಲಕ್ಷಾಂತರ ರೂಪಾಯಿಗೆ ಮಾರಾಟವಾಗಿದೆ. ಕಲೆಯ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಲು ಸಂಪನ್ಮೂಲ ವ್ಯಕ್ತಿಯಾಗಿ ಆಮಂತ್ರಿಸುತ್ತಿದ್ದಾರೆ. ಕಲೆಯ ಹಿನ್ನಲೆ-ಮುನ್ನಲೆ ಎಲ್ಲ ನನಗೆ ಚೆನ್ನಾಗಿ ಗೊತ್ತು ಎಂಬ ಅಹಂಭಾವವೂ ಉಂಟಾಗಿದೆ. ಅಷ್ಟೇ ಅಲ್ಲ, ನಾನು ಒಳ್ಳೆಯ ಭಾಷಣಕಾರನೂ ಹೌದು. ಹಾಗಾಗಿ ನಾಡಿನ ಬಹುತೇಕ ವಿಶ್ವವಿದ್ಯಾನಿಲಯಗಳು ಕೂಡ ಅತಿಥಿ ಉಪನ್ಯಾಸಕನಾಗಿ ಕರೆಯುತ್ತವೆ. ನನ್ನ ಉಪನ್ಯಾಸ ಕೇಳಿದ ಸಾವಿರಾರು ವಿದ್ಯಾರ್ಥಿಗಳು ಹಸ್ತಾಕ್ಷರ ಸಹಿಗಾಗಿ ಮುಗಿ ಬಿದ್ದದ್ದಿದೆ. ನಾನೂ ಅಷ್ಟೆ, ನೈತಿಕ ಮೌಲ್ಯವನ್ನೇ ಪ್ರತಿಪಾದಿಸಿದ್ದೇನೆ. ಅದೇ ಜೀವನದ ಮೂಲ ಸಾರ ಎಂದಿದ್ದೇನೆ. ಮನುಷ್ಯನಿಗೆ ನೈತಿಕತೆ ಎಂಬುದು ಇಲ್ಲದಿದ್ದರೆ ಬದುಕು ಶೂನ್ಯ ಎಂದಿದ್ದೇನೆ. ಈ ಜಗತ್ತಿನಲ್ಲಿ ಪ್ರತಿಯೊಬ್ಬ ಜೀವಿಗೂ ಬದುಕುವ ಹಕ್ಕಿದೆ. ಅದನ್ನು ಕಸಿಯಲು ಯಾರಿಗೂ ಸಾಧ್ಯವಿಲ್ಲ. ಜನರ ಮೂಲಭೂತ ಹಕ್ಕುಗಳನ್ನು ಒದಗಿಸಿಕೊಡುವ ಜವಾಬ್ದಾರಿ ಸರಕಾರದ್ದು. ಅದಕ್ಕಾಗಿ ಜನರು ಪ್ರಾಣ ತ್ಯಾಗ ಮಾಡಬೇಕಾಗಿಲ್ಲ. ಅದನ್ನು ಪೂರೈಸಿಕೊಡಲಾಗದಿದ್ದರೆ ಸರಕಾರದ ಮುಖ್ಯಸ್ಥರು ಪೀಠ ತ್ಯಾಗ ಮಾಡಬೇಕು ಎಂದೆಲ್ಲಾ ಕರೆ ನೀಡಿದ್ದೇನೆ. ಅದು ಒಂದಲ್ಲ… ಹತ್ತಾರು ಬಾರಿ. ಆದಾಗ್ಯೂ ಜನಪ್ರತಿನಿಧಿಗಳು, ರಾಜಕಾರಣಿಗಳು, ಆಡಳಿತ ನಡೆಸುವ ಮುಖ್ಯಸ್ಥರು ನನ್ನನ್ನು ಕೊಂಡಾಡಿದ್ದಾರೆ. ಸಮಾಜಕ್ಕೆ ಮಾದರಿ ಎಂದು ಪ್ರಶಂಶಿಸಿದ್ದಾರೆ. ಬಹುಶ: ನಾನು ಕೊನೆಯುಸಿರೆಳದ ಬಳಿಕ ತಿಳಿಸುವ ಸಂತಾಪ ಸೂಚಕ ಸಭೆ ಅಥವಾ ಹೇಳಿಕೆಯಲ್ಲಿ “ನಾಡು ಅಮೂಲ್ಯ ಸಂಪತ್ತನ್ನು ಕಳಕೊಂಡಂತಾಗಿದೆ’ಎಂದು ಹೇಳಿಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಪ್ರಗತಿಪರ ಸಂಘಟನೆಗಳಂತೂ ನನ್ನನ್ನೇ ಉಪನ್ಯಾಸಕರನ್ನಾಗಿ ಆಹ್ವಾನಿಸುತ್ತವೆ. ಅಲ್ಲೆಲ್ಲಾ ನಾನು ಆ ವೇದಿಕೆಗೆ ತಕ್ಕಂತೆ ಮಾತನಾಡುತ್ತಿದ್ದೆ. ನಿರೀಕ್ಷೆಗೂ ಮೀರಿದ ಚಪ್ಪಾಳೆಗಿಟ್ಟಿಸಿಕೊಳ್ಳುತ್ತಿದ್ದೆ. ಆರಂಭ ದಿನಗಳಲ್ಲಿ ಒಬ್ಬ ಪ್ರಜ್ಞಾವಂತ ಮನುಷ್ಯನಾಗಿ, ಪ್ರಗತಿಶೀಲನಾಗಿ ಅದು ನನ್ನ ಕರ್ತವ್ಯ ಎಂದು ಭಾವಿಸುತ್ತಿದ್ದೆ. ಆದರೆ, ದಿನಗಳೆದಂತೆ ನನಗೆ ಸಿಗುವ ಪ್ರಚಾರ, ಸಮಾಜದಲ್ಲಿ ನನ್ನ ಸ್ಥಾನಮಾನ, ಜನರು ನನ್ನ ಮೇಲಿಟ್ಟ ನಂಬಿಕೆ, ತೋರುವ ಪ್ರೀತಿ… ಇದೆಲ್ಲಾ ನನ್ನ ಅಹಂಕಾರವನ್ನು ಮತ್ತಷ್ಟು ಹೆಚ್ಚಿಸತೊಡಗಿತು. ನನಗೆ ಬದುಕಿನಲ್ಲಿ ಎಂದೂ ಅಭದ್ರತೆ ಕಾಡಲಿಲ್ಲ. ಆಹಾರ ಅಥವಾ ಹಣದ ಸಮಸ್ಯೆ ಕಾಡಲಿಲ್ಲ. ಹಾಗಾಗಿ ಇತರರಿಗೆ ಒಣ ಉಪದೇಶಗಳನ್ನು ನೀಡಲು ನಾನು ಹಿಂಜರಿಯಲಿಲ್ಲ. ಅದನ್ನೆಲ್ಲಾ ಬದುಕಿನ ಒಂದು ಮಜಲು ಎಂದು ಭಾವಿಸಿಕೊಂಡಿದ್ದೇನೆ.
ನನಗೀಗ 40ರ ಹರೆಯ. ಒಂಟಿ ಬದುಕು. ಐದು ವರ್ಷದ ಹಿಂದೆ ಸರಕಾರ ನನ್ನ ಸಾಧನೆಯನ್ನು ಮನ್ನಿಸಿಯೋ, ಸರಕಾರದ ವಿರುದ್ಧ ಟೀಕಿಸಬಾರದು ಎಂಬ ಕಾರಣಕ್ಕೋ ಏನೋ, ಉಡುಗೊರೆ ರೂಪದಲ್ಲಿ ನಿವೇಶನವೊಂದನ್ನು ಕೊಟ್ಟಿತ್ತು. ಅದರಲ್ಲೇ ಒಂದು ಪುಟ್ಟ ಮನೆಯನ್ನು ಕಟ್ಟಿಸಿಕೊಂಡು ಬದುಕುತ್ತಿದ್ದೇನೆ. ಹಾಗಾಗಿ ನಾನು ಈಗ ಸರಕಾರದ ವಿರುದ್ಧ ಸೊಲ್ಲೆತ್ತುವಂತಿಲ್ಲ. ಆ ನೈತಿಕತೆಯನ್ನೂ ನಾನು ಕಳಕೊಂಡಿದ್ದೇನೆ. ಅಲ್ಲದೆ ಪ್ರಗತಿಪರರೂ ನನ್ನ ಈ ವಂಚನೆಯನ್ನು ಅರಿತು ದೂರ ಮಾಡಿದ್ದಾರೆ.
ನನ್ನ ಪ್ರೀತಿಯ ಹೆಂಡತಿ ಮೂರು ವರ್ಷದ ಹಿಂದೆ ಕಣ್ಮರೆಯಾಗಿದ್ದಾಳೆ. ಅಂದಿನಿಂದ ನನ್ನ ಬದುಕು ನರಕ ಸದೃಶ್ಯವಾಗಿದೆ. ದೇಹದಲ್ಲಿ ಹಿಂದಿನ ಚೈತನ್ಯವಿಲ್ಲ. ನಾನು ನಾನಾಗಿ ಉಳಿದೂ ಇಲ್ಲ. ನಂಗೊತ್ತು… ನನ್ನನ್ನು ಈಗ ಯಾರೂ ಅತಿಥಿ ಉಪನ್ಯಾಸಕನಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಕರೆಯುವುದಿಲ್ಲ. ನನ್ನಲ್ಲಿ ಹಿಂದಿನ ವಾಕ್ಚಾತುರ್ಯವೂ ಇಲ್ಲ. ಆದರೆ, ನನ್ನ ಮೇಲೆ ಜನರಿಗಿರುವ ನಂಬಿಕೆ ಅಥವಾ ವಿಶ್ವಾಸಕ್ಕೆ ಕಿಂಚಿತ್ತೂ ಹೊಡೆತ ಬಿದ್ದಿಲ್ಲ. ಸೂರ್ಯ ಉತ್ತರದಲ್ಲಿ ಮುಳುಗುತ್ತದೆ ಎಂದು ನಾನು ಬಾಯಾರೆ ಹೇಳಿದರೂ ಅದನ್ನು ನಂಬುವ ಜನರು ಈಗಲೂ ಇದ್ದಾರೆ. ಅಂತಹ ಮುಗ್ಧ ಜನರಲ್ಲಿ “ನಾನೊಂದು ಮಗುವನ್ನು ಕೊಂದೆ” ಎಂದರೆ ಅವರು ನಂಬಿಯಾರೇ? ಯಾರ ಮಗು? ಹೇಗೆ ಕೊಂದಿರಿ? ಹೆಣ್ಣಾ… ಗಂಡಾ? ಕೊಂದ ಮೇಲೆ ಮೃತದೇಹವನ್ನು ಏನು ಮಾಡಿದಿರಿ? ಎಂದೆಲ್ಲಾ ಜನರು ಪ್ರಶ್ನಿಸಿಯಾರೇ? ಒಂದು ವೇಳೆ ಪ್ರಶ್ನಿಸಿದರೆ ನನಗೆ ಉತ್ತರಿಸಲು ಸಾಧ್ಯವೇ?

ನಿಜ, ಈ ಸಂಗತಿ ನನಗೆ ಮತ್ತು ನನ್ನ ಹೆಂಡತಿಗೆ ಮಾತ್ರ ಗೊತ್ತು. ಅಂದು ನಾನು ಕಟುಕನಾಗಿದ್ದೆ. ಆದರೆ, ಅವಳು… ಅವಳು ಯಾಕೆ ಆ ಮಗುವನ್ನು ಕೊಲ್ಲಲು ಮನಸ್ಸು ಮಾಡಿದಳು? ನಮ್ಮಿಬ್ಬರ ಪೈಕಿ ಒಬ್ಬರು ಮನಸ್ಸು ಬದಲಾಯಿಸಿದ್ದರೆ ಇಂದು ಆ ಮಗು ನನಗೊಂದು ನಿಧಿಯಾಗುತ್ತಿತ್ತಲ್ಲವೇ?.
ಆ ಕೆಟ್ಟ ನಿರ್ಧಾರದಿಂದ ನಾವಿಬ್ಬರು ಅಕ್ಕಪಕ್ಕ ಕುಳಿತು ಅದೆಷ್ಟೋ ಬಾರಿ ಅತ್ತದ್ದಿದೆ. ಆ ಕ್ಷಣ ನಮ್ಮ ಮನಸ್ಸಿನೊಳಗೆ ಆ ಶೈತಾನ ಹೇಗೆ ಪ್ರವೇಶಿಸಿದ? ಅವನ ಮಾತಿಗೆ ಯಾಕೆ ನಾವು ತಲೆ ತೂಗಿದೆವು? ನಮಗ್ಯಾಕೆ ಅಲ್ಲಾಹನ ಭಯ ಕಾಡಲಿಲ್ಲ? ದಿನಂಪ್ರತಿ ಐದು ಬಾರಿ ನಮಾಜ್ ಮಾಡುವ, ರಮಝಾನ್ ಉಪವಾಸ ಆಚರಿಸುವ, ನಿತ್ಯ ಖುರ್‍ಆನ್ ಪಠಿಸುವ ನಮಗೆ ಯಾಕೆ ಆ ಮಗುವನ್ನು ಕೊಲ್ಲಲು ಮನಸು ಬಂತು? ಅದನ್ನು ಕೊಲ್ಲುವುದು ಪಾಪ ಎಂದು ಯಾಕೆ ಅನಿಸಲಿಲ್ಲ? ಅದು ಗಂಡಾ… ಹೆಣ್ಣಾ? ಯಾರಿಗೊತ್ತು? ನಾಳೆ ಅಲ್ಲಾಹನ ಮಹಷರಾ ಎಂಬ ನ್ಯಾಯಾಲಯದಲ್ಲಿ ಆ ಮಗು ಕೋಟ್ಯಂತರ ಜನರ ಮುಂದೆ “ಇವರು ನನ್ನನ್ನು ಕೊಂದವರು’ ಎಂದು ಕೈ ಬೆರಳು ತೋರಿಸಿ ನನ್ನ ಮತ್ತೊಂದು ಮುಖವನ್ನು ಅನಾವರಣಗೊಳಿಸದೇ?.
ನನ್ನಾಕೆ ಆ ಕೆಟ್ಟ ಕ್ಷಣದ ನಂತರ ತುಂಬಾ ಅಧೀರರಾಗಿದ್ದಳು. ನಾನೆಂಥ ತಪ್ಪು ಮಾಡಿಬಿಟ್ಟೆವು? ನಾಳೆ ಅಲ್ಲಾಹು ನೀಡುವ ಶಿಕ್ಷೆಯನ್ನು ಅನುಭವಿಸಲು ನಮಗೆ ಸಾಧ್ಯವೇ? ನಮ್ಮ ಕೈಯಾರೆ ನಾವು ಅದನ್ನು ಕೊಂದು ಹಾಕಿದೆವಲ್ಲಾ… ನಿಜಕ್ಕೂ ನಾವು ಮನುಷ್ಯರಾ? ಛೆ… ನಾವೆಂತಹ ತಪ್ಪು ಮಾಡಿ ಬಿಟ್ಟೆವು. ಕೇವಲ ನಮ್ಮ ಕ್ಷಣಿಕ ಸುಖಕ್ಕಾಗಿ ನಾವು ಅದನ್ನು ಕೊಂದು ಹಾಕಿದೆವಲ್ಲಾ… ಹೀಗೆ ಅವಳು ಆಗಾಗ ದು:ಖಿಸುತ್ತಿದ್ದಳು. ನಾನು ಒಳಗೊಳಗೆ ದು:ಖಿಸುತ್ತಾ, ಅವಳನ್ನು ಸಮಾಧಾನ ಪಡಿಸುತ್ತಿದ್ದೆ. ನೋವು ಮರೆಯಲು ನಾನು ಮೇಲಿಂದ ಮೇಲೆ ಪೈಂಟಿಂಗ್‍ನಲ್ಲಿ ತೊಡಗಿಸಿಕೊಂಡೆ. ಸೆಮಿನಾರ್‍ಗಳಲ್ಲಿ ಭಾಗವಹಿಸುವ ಪ್ರಯತ್ನ ಮಾಡಿದೆ. ನನ್ನ ಜೋಳಿಗೆಯಲ್ಲಿದ್ದ ಎಲ್ಲ ಜ್ಞಾನ ಭಂಡಾರವನ್ನು ಹೊರಗೆ ಚೆಲ್ಲಿ ಮನಸ್ಸನ್ನು ಹಗುರಗೊಳಿಸಲು ಪ್ರಯತ್ನಿಸಿದೆ. ಆದರೆ, ನನಗೆ ಎಲ್ಲೂ ಅವಕಾಶ ಸಿಗಲೇ ಇಲ್ಲ. ಹಾಗಾಗಿ ನಾನು ದಿನದಿಂದ ದಿನಕ್ಕೆ ಜರ್ಜರಿತನಾದೆ.

ಆದರೂ… ಪುಟ್ಟ ಮಕ್ಕಳು ನಗುವಾಗ ನಾನೂ ಮಗುವಾಗುತ್ತೇನೆ. ಆ ಮಗುವಿನಲ್ಲಿ ನಾನು ನನ್ನ ಕೈಯಾರೆ ಕೊಲ್ಲಲ್ಪಟ್ಟ ಮಗುವನ್ನು ಕಾಣಲು ಹಾತೊರೆಯುತ್ತೇನೆ. ಇಲ್ಲ… ಕೊಂದು ಹಾಕಲ್ಪಟ್ಟ ಆ ಮಗುವನ್ನು ನನಗೆ ಮರಳಿ ಪಡೆಯಲು ಸಾಧ್ಯವಿಲ್ಲ. ಅದರ ಬುದ್ಧಿಮತ್ತೆಯನ್ನು ಅಳೆಯಲು, ಅದರ ನಡೆನುಡಿಯನ್ನು ಅರಿಯಲು ನಾನು ವಿಫಲನಾಗಿದ್ದೇನೆ. ಯಾಕೆಂದರೆ ನಾನೊಬ್ಬ ನರಹಂತಕ.
ಹಂತಕರನ್ನು ಈ ಸಮಾಜ ಹೇಗೆ ಕಾಣುತ್ತದೆ ಎಂದು ನಿಮಗೆಲ್ಲಾ ಚೆನ್ನಾಗಿ ಗೊತ್ತು. ಯಾವುದೇ ಮೂಲೆಯಲ್ಲಾದರೂ ಸರಿ, ಹತ್ಯೆ ನಡೆದ ತಕ್ಷಣ ಜನರು ಗುಂಪು ಸೇರುತ್ತಾರೆ. ಪರಸ್ಪರ ಮಾತನಾಡಿಕೊಳ್ಳುತ್ತಾರೆ. ಹತ್ಯೆಯಾದವರ ಬಗ್ಗೆ ಕನಿಕ ವ್ಯಕ್ತಪಡಿಸುತ್ತಾರೆ. ಹತ್ಯೆ ಮಾಡಿದವರನ್ನು ನಿಂದಿಸುತ್ತಾರೆ. ಪೊಲೀಸರು ಬರುತ್ತಾರೆ. ತನಿಖೆಯ ಹೆಸರಿನಲ್ಲಿ ಅದೇನೋ ಪ್ರಶ್ನಿಸಿ ದಾಖಲಿಸಿಕೊಳ್ಳುತ್ತಾರೆ. ಹಾಗೇ ಹತ್ಯೆ ಮಾಡಿದ ಆರೋಪಿಯನ್ನು ಬಂಧಿಸಿ ಲಾಕಪ್ಪಿನೊಳಗಿಟ್ಟು ಹಂತಕ ಯಾವ ಕೆಟಗರಿಯವ ಎಂದು ನೋಡಿಕೊಂಡು ಅದಕ್ಕೆ ತಕ್ಕಂತೆ ತದುಕುತ್ತಾರೆ ಅಥವಾ ಬಿರಿಯಾನಿ ಕೊಟ್ಟು ಉಪಚರಿಸುತ್ತಾರೆ. ಕೊನೆಗೆ ನ್ಯಾಯಾಲಯಕ್ಕೆ ಹಾಜರುಪಡಿಸುತ್ತಾರೆ. ತಕ್ಷಣಕ್ಕೆ ನ್ಯಾಯಾಂಗ ಬಂಧನವಾಗುತ್ತದೆ. ಮುಂದೆ ಆತ ಕಂಬಿ ಎಣಿಸಬಹುದು ಅಥವಾ ಜಾಮೀನು ಪಡೆದು ಹೊರಗೆ ಬರಬಹುದು. ಅದೆಲ್ಲಾ ಹಣವನ್ನು ಅವಲಂಬಿಸಿರುತ್ತದೆ. 90 ದಿನದೊಳಗೆ ಪೊಲೀಸರು ಚಾರ್ಜ್‍ಶೀಟ್ ಸಲ್ಲಿಸುತ್ತಾರೆ. ಸಾಕ್ಷಿಗಳ ವಿಚಾರಣೆ ನಡೆಯುತ್ತದೆ. ಮುಂದೊಂದು ದಿನ ಆರೋಪಿಗೆ ಶಿಕ್ಷೆಯಾಗಬಹುದು ಅಥವಾ ಆತ ನಿರ್ದೋಷಿ ಎಂದು ನ್ಯಾಯಾಲಯ ತೀರ್ಪು ಕೊಟ್ಟೀತು.
ಆದರೆ, ನನಗೆ ಅದ್ಯಾವುದೂ ಇಲ್ಲ. ಸಾವಿನ ವ್ಯಾಪಾರಿಗಳೆನಿಸಿಕೊಂಡ ವೈದ್ಯರಿಗೂ ಶಿಕ್ಷೆ ಇಲ್ಲ. ನಾವೆಲ್ಲ ಸಮಾಜದ ಮುಂದೆ ಸತ್ಪ್ರಜೆಗಳು. ನಾವು ನಮ್ಮದೇ ಆದ ಅಸ್ಮಿತೆಯನ್ನು ಕಂಡು ಕೊಂಡಿದ್ದೇವೆ. ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳಲು ನಾನಾ ರೂಪ ತಾಳುತ್ತೇವೆ. ವರ್ಷಕ್ಕೊಂದರಂತೆ ಹಡೆಯುತ್ತಲೇ ಆ ಮಕ್ಕಳನ್ನು ಸಾಕಿ ಸಲಹುದರಲ್ಲೇ ತೃಪ್ತಿ ಕಾಣುವ ಪ್ರಾಮಾಣಿಕತೆ, ಹೃದಯವಂತಿಕೆ ಇಲ್ಲದ ನಿಷ್ಪಾಪಿಗಳು ನಾವು. ನಮಗೆ ಸಮಾಜದಲ್ಲಿ ಮರ್ಯಾದೆ ಬೇರೆ ಕೇಡು!. ಅಲ್ಲಾಹನ ನ್ಯಾಯಾಲಯದ ಮುಂದೆ ನಾವು ಹೇಡಿಗಳು. ಆದರೆ, ಸಮಾಜದ ಮುಂದೆ ನಾವು ಆದರ್ಶವಾದಿಗಳು.
ನನ್ನವಳು ನನಗಿಂತ ಮುಂಚೆ ಕಣ್ಮುಚ್ಚಲು ಅವಳನ್ನು ಕಾಡುತ್ತಿದ್ದ “ಮಗುವನ್ನು ಕೊಂದ” ಪಾಪವೇ ಕಾರಣ, ಅಂದು ತೆಗೆದುಕೊಂಡ ಆ ಕೆಟ್ಟ ನಿರ್ಧಾರ ಅವಳನ್ನು ಹಿಂಡಿ ಹಿಪ್ಪೆ ಮಾಡುತ್ತಿತ್ತು. ಅವಳ ಮನಸ್ಸನ್ನು ಪದೇ ಪದೇ ಕೊರೆಯುತ್ತಿತ್ತು, ಸದಾ ಕೆದಕುತ್ತಿತ್ತು. ನನಗಿನ್ನೂ ನೆನಪಿದೆ. ಭ್ರೂಣ ಹತ್ಯೆಯ ಬಗ್ಗೆ ಪ್ರಕಟವಾಗಿದ್ದ ಪತ್ರಿಕೆಯೊಂದರ ಸಂಚಿಕೆಯನ್ನು ನಾನವಳ ಕಣ್ತಪ್ಪಿಸಿ ಮನೆಯಲ್ಲಿ ಅಡಗಿಸಿಟ್ಟರೂ ಅವಳು ಅದ್ಹೇಗೋ ಪತ್ತೆ ಹಚ್ಚಿ ಓದತೊಡಗಿದಳು. ಹಾಗೇ ಕಣ್ಣೀರಾದಳು. “ಇತ್ತೀಚಿನ ಅಂಕಿ ಅಂಶದ ಪ್ರಕಾರ ಜಗತ್ತಿನಲ್ಲಿ ಪ್ರತೀ ವರ್ಷ ಸುಮಾರು 5 ಕೋಟಿ ಮುಗ್ಧ ಶಿಶುಗಳು ಜನ್ಮ ತಾಳುವ ಮುನ್ನವೇ ಅವರ ಬದುಕುವ ಹಕ್ಕನ್ನು ಕಸಿಯಲಾಗುತ್ತದೆ. ಅದರಲ್ಲಿ ನನ್ನದೂ ಒಂದು ಸೇರಿತಲ್ಲಾ ಎಂದು ಹಲುಬುತ್ತಾಳೆ. ಅಷ್ಟೇ ಅಲ್ಲ,ಗರ್ಭಪಾತ ಮಾಡುವಾಗ ಆ ಭ್ರೂಣ ಅಳುತ್ತದೆಯಂತೆ… ಕಿರುಚುತ್ತದೆಯಂತೆ” ಎಂದು ಪದೇ ಪದೇ ಹೇಳಿ ಅಳುತ್ತಿದ್ದಳು, ಕೊರಗುತ್ತಿದ್ದಳು. ಆವಾಗ ನಾನವಳನ್ನು ಸಮಾಧಾನ ಪಡಿಸಲೂ ಸಾಧ್ಯವಾಗದೆ ನಾನೂ ಅಳುತ್ತೇನೆ. ಹೀಗೆ ಇಬ್ಬರೂ ಭುಜಕ್ಕೆ ಭುಜ ಕೊಟ್ಟು ಅತ್ತದ್ದು ಎಷ್ಟು ಬಾರಿಯೋ ಏನೋ?. ಹಾಗಂತ ನಮಗೆ ಮಕ್ಕಳೇ ಇರಲಿಲ್ಲ ಅಂತಲ್ಲ. ಇಬ್ಬರು ಮುದ್ದಾದ ಗಂಡು ಮಕ್ಕಳಿದ್ದರು. ಅದೂ ಒಂದೊಂದು ವರ್ಷದ ಅಂತರದಲ್ಲಿ ಹುಟ್ಟಿದ ಮಕ್ಕಳು. ಇಬ್ಬರನ್ನು ಭೂಮಿ ಆಕಾಶ, ಸೂರ್ಯ ಚಂದ್ರ ನಕ್ಕು ನಲಿಯುವಂತೆ ಸಾಕಿದ್ದೆವು. ಇಬ್ಬರೂ ಅವಳಿ ಜವಳಿಗಳಂತಿದ್ದರು. ಅವರ ಒಡನಾಟಗಳನ್ನು ಕಂಡಾಗ ನಮಗವರು ಸಹೋದರರಂತೆ ಕಾಣಿಸಿಕೊಳ್ಳದೆ ಜೀವಕ್ಕೆ ಜೀವ ಕೊಡುವ ಗೆಳೆಯರಂತಿದ್ದರು. ನಾವೂ ಅಷ್ಟೆ, ಅವರಿಗೆ ಅಪ್ಪ ಅಮ್ಮರಾಗುವುದರ ಜೊತೆಗೆ ಆತ್ಮೀಯ ಗೆಳೆಯರಾಗಿದ್ದೆವು. ಆ ಮಕ್ಕಳೂ ಅಷ್ಟೆ, ನಮ್ಮಿಬ್ಬರನ್ನು ತೀರಾ ಹಚ್ಚಿಕೊಂಡಿದ್ದರು.
ನಾನು “ನಾವಿಬ್ಬರು, ನಮಗಿಬ್ಬರು” ಎಂಬ ಪಾಲಿಸಿಗೆ ಅಂಟಿಕೊಂಡವ. ಆದರೆ, ನನ್ನಾಕೆ ನಾಲ್ಕು ಮಕ್ಕಳ ತಾಯಿಯಾಗುವ ಕನಸು ಕಂಡಿದ್ದಳು. “ಬೇಡ… ಸದ್ಯ ಇಬ್ಬರು ಮಕ್ಕಳು ಸಾಕು” ಎಂದು ನಾನು ಹಠಕ್ಕೆ ಬಿದ್ದರೆ, ನನ್ನಾಕೆ ಕೆಂಡವಾಗಿದ್ದಳು. ಕೊನೆಗೆ ನಾನೇ ನನ್ನ ಪರಿಚಯದ ವೈದ್ಯರ ಬಳಿ ಕರೆದೊಯ್ದೆ.
ಎಳೆಯ ಪ್ರಾಯ, ವರ್ಷದ ಅಂತರದಲ್ಲಿ ಇಬ್ಬರು ಮಕ್ಕಳ ತಾಯಿಯಾಗಿದ್ದೀರಿ. ಸದ್ಯ ಬೇಡ. ಈ ಮಕ್ಕಳು ಬೆಳೆದು ಶಾಲೆಯ ಮೆಟ್ಟಲೇರಿ ಬರುವವರೆಗೂ ಕಾಯಿರಿ. ಮತ್ತೆ ನಾಲ್ಕಲ್ಲ… ಎಂಟು ಮಕ್ಕಳನ್ನು ಹೆತ್ತ ಮಹಾ ತಾಯಿಯ ಪುಣ್ಯ ಕಟ್ಟಿಕೊಳ್ಳಿರಿ. ನಿಮ್ಮ ಆರೋಗ್ಯದ ಹಿತದೃಷ್ಟಿಯಿಂದ ನಾನು ಈ ವಿಷಯ ಹೇಳುತ್ತಿದ್ದೇನೆ ಎಂದು ನಮ್ಮ ಕುಟುಂಬದ ವೈದ್ಯರು ಹೇಳಿದಾಗ ನನ್ನಾಕೆ ಸುಮ್ಮನಾಗಿದ್ದಳು. ಆದರೆ, ವೈದ್ಯರಿಗೆ ಹಾಗೆಲ್ಲ ಹೇಳಿಕೊಟ್ಟಿದ್ದು ನಾನು ಅಂತ ಕೊನೆಗೂ ನನ್ನಾಕೆಗೆ ತಿಳಿದಿರಲಿಲ್ಲ.

ಇಬ್ಬರು ಮಕ್ಕಳು ಬೆಳೆಯುತ್ತಿದ್ದರು. ಅವರನ್ನು ಯಾವ ಶಾಲೆಗೆ ಸೇರಿಸುವುದು ಎಂಬುದರ ಬಗ್ಗೆ ನಾವು ರಾತ್ರಿ ಹಗಲೆನ್ನದೆ ಚರ್ಚಿಸುತ್ತಿದ್ದೆವು. ಸರಕಾರಿ ಶಾಲೆ ಬೇಡ, ಡೊನೇಶನ್ ಜಾಸ್ತಿ ಕೊಟ್ಟರೂ ಚಿಂತೆ ಇಲ್ಲ. ಒಳ್ಳೆಯ ಶಿಕ್ಷಣ ಸಂಸ್ಥೆಗೆ ಅವರನ್ನು ಸೇರಿಸೋಣ. ಸುಶಿಕ್ಷಿತರನ್ನಾಗಿ ಮಾಡೋಣ ಎಂದು ನನ್ನಾಕೆ ಒತ್ತಾಯಿಸುತ್ತಿದ್ದಳು.
ನಾನಾಗ ಪ್ರಸಿದ್ಧಿಗೆ ಬಂದಿದ್ದ ಕಾಲ. ಹಣಕ್ಕೆ ಕೊರತೆ ಇರಲಿಲ್ಲ. ಕುಳಿತಲ್ಲೆ ನನಗೆ ಬೇಕಾದ ಶಿಕ್ಷಣ ಸಂಸ್ಥೆಗೆ ಮೊಬೈಲ್ ಕರೆ ಮಾಡಿ ಎರಡು ಸೀಟು ಬೇಕು ಎಂದರೆ “ಬನ್ನಿ ಸಾರ್” ಎನ್ನುವವರೆ!. ನಾನು ಕುಂಚಕ್ಕೆ ಸ್ವಲ್ಪ ವಿರಾಮ ಕೊಟ್ಟು ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದ್ದು ಇನ್ನೂ ನೆನಪಿದೆ.

ಹಾಗೆ ನೋಡಿದರೆ, ನನ್ನದು ಕಲಾವಿದರ ಕುಟುಂಬವಲ್ಲ. ಮನೆಯಲ್ಲಿ ಯಾವುದೇ ಚಿತ್ರಗಳನ್ನು ತೂಗು ಹಾಕಲು ಬಿಡದ ಸಂಪ್ರದಾಯಸ್ಥರ ಕುಟುಂಬದಲ್ಲಿ ಹುಟ್ಟಿ ಬೆಳೆದ ನನಗೆ ಚಿತ್ರ ಕಲೆ ಹೇಗೆ ಕರಗತವಾಯಿತೋ ಗೊತ್ತಾಗುತ್ತಿಲ್ಲ. ನನಗೆ ಯಾರೂ ಗುರುಗಳಿರಲಿಲ್ಲ. ಮನೆಯಲ್ಲಿ ಅದಕ್ಕೆ ಪೂರಕ ವಾತಾವರಣವೂ ಇರಲಿಲ್ಲ. ಆದರೆ, ನಾನು ಅದನ್ನೊಂದು ಧ್ಯಾನವಾಗಿ ಸ್ವೀಕರಿಸಿದೆ. ಅದರ ನಾನಾ ಮಜಲುಗಳನ್ನು ಅರಿತುಕೊಂಡೆ. ಪ್ರತೀ ಚಿತ್ರಗಾರಿಕೆ ಸಂದರ್ಭವೂ ನಾನು ವಿದ್ಯಾರ್ಥಿಯಾದೆ. ಪ್ರಸಿದ್ಧಿಗಳು ನನ್ನನ್ನು ಬೇರೆ ಬೇರೆ ಬಾಗಿಲುಗಳಾಚೆ ಕಳುಹಿಸಿಕೊಟ್ಟಿತ್ತು. ಮುಂದೆ ಮಕ್ಕಳಾದರೆ ನನಗೆ ಅದರ ಆರೈಕೆಗೆ ಸಮಯ ಬೇಕು. ಸದ್ಯ ನನಗೆ ಅಷ್ಟು ಸಮಯವಿರಲಿಲ್ಲ. ಹಾಗಾಗಿ ನಾನು ನನ್ನಾಕೆಯನ್ನು ಪರೋಕ್ಷವಾಗಿ ವಂಚಿಸಿದೆ. ನನ್ನ ವಂಚನೆಯ ಮುಖ ಅರಿಯದ ಆಕೆ, ಆರೋಗ್ಯದ ಹಿತದೃಷ್ಟಿಯಿಂದ ಅಲ್ವಾ ಎಂದು ನಂಬಿ ನನ್ನ ಕೆಟ್ಟ ಚಾಳಿಗೆ ಸಾಥ್ ನೀಡಿದಳು.

ಅದೊಂದು ದಿನ ನಾನು ಕುಂಚ ಹಿಡಿದಿದ್ದೆ. ಅದರಲ್ಲೇ ಮಗ್ನಳಾಗಿದ್ದ ನನ್ನ ಬಳಿ ಬಂದ ನನ್ನಾಕೆ “ನನಗಿನ್ನೂ ಮುಟ್ಟಾಗಿಲ್ಲ” ಎಂದು ಆತಂಕಿಸಿದಳು. ಹೆಣ್ಮಕ್ಕಳಿಗೆ ಆ ಏರುಪೇರು ಸಹಜ. ಸುಮ್ಮನಿರು ಎಂದು ತಮಾಶೆಗೆ ಗದರಿಸಿದೆ. “ಇಲ್ಲಾರೀ… ನನಗೆ ಹೊಟ್ಟೆ ನೋವು ತಡೆಯಲಿಕ್ಕೆ ಆಗುತ್ತಿಲ್ಲ. ಅಲ್ಲದೆ ಬಯಕೆಯ ಲಕ್ಷಣಗಳು ಗೋಚರಿಸುತ್ತಿವೆ” ಎಂದಳು.
“ಇದೊಳ್ಳೆಯ ಕತೆಯಾಯಿತಲ್ಲ… ಸಮಾಗಮವೇ ಆಗಿಲ್ಲ. ಇನ್ನು ಬಯಕೆಯ ಮಾತೆಲ್ಲಿಂದ ಬಂತು? ನಿನಗೆ ಏನೋ ಭ್ರಮೆ. ಫ್ಯಾಂಟಸಿ ಲೋಕದಲ್ಲಾದರೂ ಸರಿ, ಸ್ವಲ್ಪ ಅನುಭವಿಸು…” ನಾನೆಂದೆ.
“ಇಲ್ಲಾರಿ… ನಾನು ಹೇಳುವುದು ತಮಾಶೆಯ ಮಾತಲ್ಲ. ನನ್ನ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಿ” ಎನ್ನುತ್ತಾ ಅಳತೊಡಗಿದಳು. ಕೊನೆಗೆ, ಅವಳ ಒತ್ತಡಕ್ಕೆ ಮಣಿದು ಹೆರಿಗೆ ತಜ್ಞೆಯ ಬಳಿ ಕರೆದೊಯ್ದೆ.
“ನಿಮ್ಮಾಕೆ ಗರ್ಭಿಣಿ” ಎಂದು ವೈದ್ಯೆ ಹೇಳಿದಾಗ, ನಾನು ಗರಬಡಿದಂತಾದೆ.
“ಏನು ಅಚಾತುರ್ಯವಾಯಿತಾ?” ವೈದ್ಯೆ ಕೇಳಿದರು.
“ಹೌದು…”ಎಂಬಂತೆ ನಾನು ತಲೆ ಅಲ್ಲಾಡಿಸಿದೆ.
“ಬೇಡ ಬಿಡಿ… ಮೂರು ಮಾತ್ರೆ ತೆಗೆದುಕೊಳ್ಳಿ… ಒಂದುವರೆ ಸಾವಿರ ರೂಪಾಯಿಯಾಗುತ್ತದೆ” ಎನ್ನುತ್ತಾ ವೈದ್ಯೆ ವ್ಯವಹಾರಕ್ಕಿಳಿದರು.
“ಆರೋಗ್ಯಕ್ಕೇನೂ ತೊಂದರೆ ಇಲ್ಲವಾ?”
“ಇಲ್ಲ”
ನಾನು ನನ್ನಾಕೆಯ ಮುಖ ನೋಡಿದೆ.
ಅವಳೂ ನನ್ನ ಮುಖ ನೋಡಿದಳು.
ಇಬ್ಬರ ಕಣ್ಣಲ್ಲೂ ನೀರು ಆಟವಾಡತೊಡಗಿತು.
ಏನು ಮಾಡಬೇಕು ಎಂದು ತೋಚದೆ ನಾನು ವೈದ್ಯೆಯತ್ತ ಕಣ್ಣು ಹಾಯಿಸಿದೆ.
“ಸದ್ಯ ನಿಮಗೆ ಮಗು ಬೇಡಾಂತ ಕಾಣುತ್ತೆ… ಅಲ್ವಾ?”
ನಾನು ಹೌದೆಂದು ತಲೆಯಾಡಿಸಿದೆ.
ಕೆಲಕಾಲ ನಾವಿಬ್ಬರು ಸುಮ್ಮನಿದ್ದೆವು.
“ಬೇಗ ಒಂದು ನಿರ್ಧಾರಕ್ಕೆ ಬನ್ನಿ… ಹೊರಗೆ ರೋಗಿಗಳು ಕಾಯುತ್ತಿದ್ದಾರೆ”- ವೈದ್ಯೆ ಮತ್ತೆ ಕಟುವಾದರು.
“ಮಾತ್ರೆ ಕೊಡಿ”- ನನಗರಿವಿಲ್ಲದಂತೆ ನಾನು ಕ್ರೂರಿಯಾದೆ. ಹಾಗೇ ಒಂದುವರೆ ಸಾವಿರ ರೂಪಾಯಿಯನ್ನು ಅತ್ತ ಚೆಲ್ಲಿದೆ. ನನ್ನಾಕೆಯನ್ನು ನರ್ಸ್ ಒಳಗೆ ಕರೆದೊಯ್ದಳು. 10 ನಿಮಿಷದ ಬಳಿಕ ನರ್ಸ್‍ಳನ್ನು ಆತು ಹಿಡಿದು ಹೊರ ಬಂದಳು. ಅವಳಿಗೆ ನಿಲ್ಲಲು ತ್ರಾಣವೇ ಇರಲಿಲ್ಲ. ಉಳಿದ ಎರಡು ಮಾತ್ರೆಯನ್ನು ಮನೆಯಲ್ಲಿ ಕೊಡಿ ಎನ್ನುತ್ತಾ ನರ್ಸ್ ನಮ್ಮನ್ನು ಸಾಗಹಾಕಿದಳು. ಹೇಗೋ, ಅಲ್ಲಿಂದ ಮನೆ ಸೇರಿದ್ದೆವು. ಆದರೆ, ನನ್ನಾಕೆಯ ದೇಹದಲ್ಲಿ ನಿತ್ರಾಣವೇ ಇರಲಿಲ್ಲ. ಇಬ್ಬರು ಮಕ್ಕಳು ಅಮ್ಮನ ಅವಸ್ಥೆ ಕಂಡು ಪಿಳಿ ಪಿಳಿ ಕಣ್ಣು ಬಿಟ್ಟರು.
“ಒಂದು ಮಾತ್ರೆ ತೆಗೆದೊಡನೆ ನನಗೆ ಹೀಗಾಗಿದೆ. ಇನ್ನೆರಡು ಮಾತ್ರ ತೆಗೆಯಲು ನನ್ನಿಂದ ಸಾಧ್ಯವಿಲ್ಲ. ನಾನು ಇಹಲೋಕ ತ್ಯಜಿಸುವ ಮುನ್ನ ವೈದ್ಯರ ಬಳಿ ಕರೆದೊಯ್ಯಿರಿ” ಎಂದು ಅಳತೊಡಗಿದಳು. ಆ ಕರಾಳ ರಾತ್ರಿಯನ್ನು ಹೇಗೋ ಹಗಲು ಮಾಡಿದೆವು. ಬೆಳಗ್ಗೆ ಎದ್ದೊಡನೆ ನಾನು ಮತ್ತೆ ವೈದ್ಯೆಯ ಬಳಿ ಕರೆದೊಯ್ದು ವಿಷಯ ತಿಳಿಸಿದೆ.
ಅದು ಆರೋಗ್ಯಕ್ಕೇನೂ ತೊಂದರೆ ಕೊಡುವುದಿಲ್ಲ ಎಂದು ಹೇಳಿದ ವೈದ್ಯೆ “ಅದನ್ನು ಸಹಿಸಲು ಸಾಧ್ಯವಾಗದಿದ್ದರೆ ಅಬಾರ್ಷನ್ ಮಾಡಿಸೋಣ. ಅದಕ್ಕೆ ನೀವು ಮತ್ತೆ 2 ಸಾವಿರ ರೂಪಾಯಿ ಕೊಡಬೇಕು” ಎಂದರು. ಈ ಸಂಕಟದಿಂದ ಪಾರಾದರೆ ಸಾಕು ಎಂದು ಭಾವಿಸಿದ ನಾನು ಅದಕ್ಕೂ ಸಮ್ಮತಿಸಿದೆ. ಎಲ್ಲ ಕಾರ್ಯ ಮುಗಿದೊಡನೆ “ಈ ಮಾತ್ರೆಯನ್ನು ಮರಳಿ ಪಡೆಯುವಿರಾ?” ಎಂದು ನಾನು ಉಸುರಿದೆ. “ಇದೇನು ಅಂಗಡಿಯಾ?” ಎಂದು ವೈದ್ಯೆ ಗದರಿಸಿದರು. ಅಂತೂ 2 ಸಾವಿರ ರೂಪಾಯಿ ಪಾವತಿಸಿ ಅಲ್ಲಿಂದ ಹೊರಗೆ ಕಾಲಿಟ್ಟೆ.

ನನ್ನಾಕೆ ಮೊದಲಿನಂತಾಗಲು ಒಂದು ವಾರ ಹಿಡಿದಿತ್ತು.
“ಈ ಅಚಾತುರ್ಯ ಯಾವಾಗ ಘಟಿಸಿತು?”- ನಾವಿಬ್ಬರು ತತ್ವಜ್ಞಾನಿಗಳ ಹಾಗೆ ಪರಸ್ಪರ ಪ್ರಶ್ನಿಸಿಕೊಂಡೆವು. “ಮೂರಾಗದಂತೆ ಎಷ್ಟೆಲ್ಲ ಜಾಗೃತೆ ವಹಿಸಿಕೊಂಡೆವು. ಆದರೆ, ಏನಾಯಿತು?” ಎಂದು ನಾನು ಹೇಳಿಕೊಂಡರೆ, “ಕಷ್ಟವಾದರೂ ಪರವಾಗಿರಲಿಲ್ಲ. ಅದು ಅದರಷ್ಟಕ್ಕೆ ಬೆಳೆಯುತ್ತಿತ್ತು. ನಾನೆಂಥ ಕೆಲಸ ಮಾಡಿಬಿಟ್ಟೆ” ಎಂದು ನನ್ನಾಕೆ ಕೊರಗತೊಡಗಿದಳು.
ಈ ನೋವು ಮರೆಯಾಗುವ ಮುನ್ನವೇ ನಾವು ಊಹಿಸಿದ ದುರಂತ ಸಂಭವಿಸಿತು. ಮನೆ ಸಮೀಪದ ಕಲ್ಲಿನ ಕೋರೆಯ ಬಳಿ ನಮಗರಿವಿಲ್ಲದಂತೆ ಹೋದ ಮಕ್ಕಳು ನಮ್ಮಿಂದಲೇ ದೂರವಾಗಿಬಿಟ್ಟಿದ್ದರು. ಊರಿಗೇ ಊರೇ ಸೇರಿದ್ದರು. ಎಲ್ಲರೂ ಮಕ್ಕಳನ್ನು ಕೊಂಡಾಡುವವರೆ. ನನ್ನಾಕೆಯಂತೂ ಹುಚ್ಚಿಯಂತಾಗಿದ್ದಳು. ಅಲ್ಲಾಹನ ಸೃಷ್ಟಿಯನ್ನು ಕೊಲ್ಲುವ ಹಕ್ಕು ನಮಗಿಲ್ಲವೇ ಇಲ್ಲ. ನಾವು ಕೈಯಾರೆ ನಮ್ಮ ಮಗುವನ್ನು ಕೊಂದದ್ದಕ್ಕೆ ಪ್ರತಿಯಾಗಿ ನಮಗೀ ಶಿಕ್ಷೆ ನೀಡಿದ ಎಂದಳು. ನಾನು ಅದನ್ನು ಮೌನವಾಗಿ ಒಪ್ಪಿಕೊಂಡೆ. ನಮ್ಮ ದು:ಖ, ರೋಧನದ ನಡುವೆಯೇ ಮಕ್ಕಳಿಬ್ಬರ ಅಂತ್ಯಕ್ರಿಯೆಯೂ ನಡೆಯಿತು. ನಾವು ನಾವಾಗಲು ಮತ್ತೆ ಕೆಲವು ತಿಂಗಳುಗಳು ಬೇಕಾಯಿತು. ನೋವು ಮರೆಸಲು ನಾನಾ ಕಸರತ್ತು ಮಾಡಿದೆವು. ಜನರ ಜತೆ ಬೆರೆತವು, ಕೃತಕ ನಗೆ ಬೀರಿದೆವು. ಭಾಷಣ, ಉಪನ್ಯಾಸದಲ್ಲಿ ನೋವು ಮರೆಯಲು ಮುಂದಾದರೂ ಅದು ಸಾಧ್ಯವಾಗಲಿಲ್ಲ. ಸ್ವತ: ಭ್ರೂಣ ಹತ್ಯೆ ಮಾಡಿಯೂ ಅದರ ವಿರುದ್ಧ ಮಾತನಾಡಲು ಸಿದ್ಧನಾದೆ.
ಹೆಂಡತಿಯ ಆಸೆಯಂತೆ ನಾಲ್ಕನೆ ಮಗುವಿನ ಸಂಕಲ್ಪ ಹಾಕಿಕೊಂಡೆ. ಆದರೆ, ಅದಕ್ಕಿಂತ ಮುಂಚೆಯೇ ಆಕೆ ನನ್ನಿಂದ ದೂರವಾದಳು. ಮೇಲಿಂದ ಮೇಲೆ ಎರಗಿದ ಸಂಕಷ್ಟದಿಂದ ನೊಂದ ನಾನು ನನ್ನೆಲ್ಲಾ ಆಸ್ತಿಯನ್ನು ಅದ್ಯಾವುದೋ ಆಶ್ರಮಕ್ಕೆ ಬರೆದುಕೊಟ್ಟೆ. ಹಾಗೇ ಊರು ಬಿಟ್ಟೆ. ಊರೂರು ಅಲೆದು ಅದ್ಯಾರೋ ಪುಣ್ಯಾತ್ಮನ ಕಣ್ಣಿಗೆ ಬಿದ್ದೆ. ಆತ ಪತ್ರಿಕೆಗಳ ಮೂಲಕ ಸರಕಾರದ ಗಮನಸೆಳೆಯುವ ಪ್ರಯತ್ನ ಮಾಡಿದ. ಸರಕಾರ ನನಗೊಂದು ನಿವೇಶನ ಕೊಡುತ್ತಲೇ “ಮತ್ತೆ ಕುಂಚ ಹಿಡಿ, ಆದರೆ, ತಿರುಗಿ ಬೀಳಬೇಡ’ ಎಂಬರ್ಥದಲ್ಲಿ ಮಾತನಾಡಿತು.

ಹೌದು, ನಾನು ಇನ್ಮೇಲೆ ಕುಂಚ ಹಿಡಿಯೋಲ್ಲ, ಸರಕಾರದ ವಿರುದ್ಧ ತಿರುಗಿ ಬೀಳುವುದಿಲ್ಲ. ಭಾಷಣ, ಉಪನ್ಯಾಸ ಕೂಡ ಮಾಡುವುದಿಲ್ಲ. ಯಾಕೆಂದರೆ, ನಾನೊಬ್ಬ ಹಂತಕ. ನನ್ನ ಕೈಯಾರೆ ನಾನು ನನ್ನ ಮಗುವನ್ನು ಕೊಂದ ನೀಚ!. ಹಾಗಾಗಿ ನನಗೆ ಶಿಕ್ಷೆ ಕೊಡುವವರು ಯಾರು? ನಾನು ನನ್ನಲ್ಲೇ ಪ್ರಶ್ನಿಸಿಕೊಳ್ಳುತ್ತಿದ್ದೇನೆ. ಮನಸ್ಸಿಗೆ ನೆಮ್ಮದಿಯಾಗುವಷ್ಟು ಅತ್ತುಕೊಳ್ಳುತ್ತಿದ್ದೇನೆ.

LEAVE A REPLY

Please enter your comment!
Please enter your name here