-ಅಶೀರುದ್ದೀನ್ ಆಲಿಯಾ, ಮಂಜನಾಡಿ

 

ಉಪವಾಸವು ಒಂದು ಅವಧಿಯಿಂದ ಮತ್ತೊಂದು ಅವಧಿಯ ವರೆಗೆ ವೃತ ಆಚರಿಸುವುದಾಗಿದೆ. ಇತರ ದಿನಗಳಿಗಿಂತ ಭಿನ್ನವಾದ, ತ್ಯಾಗಮಯವಾದ ಜೀವನ. ಎಲ್ಲವನ್ನೂ ತೊರೆಯಬೇಕು, ಎಲ್ಲದರಿಂದ ಮುಕ್ತವಾಗಬೇಕು. ಆಸೆ-ಅಭಿಲಾಷೆಗಳಿಂದ ದೂರವಿದ್ದು ದೇವ ಪ್ರೀತಿಯನ್ನು ಮೈಗೂಡಿಸಕೊಳ್ಳಬೇಕು. ದೇವನಿಗಾಗಿ ಸಮರ್ಪಿಸುವುದು, ತ್ಯಾಗ ಮಾಡುವುದು ಎಂಬ ಒಳ ಅರ್ಥವು ಉಪವಾಸಕ್ಕಿದೆ. ದೈನಂದಿನ ಬೇಡಿಕೆಗಳಾದ ಅನ್ನ-ಪಾನೀಯ, ಕಾಮ ತೃಷೆಯಿಂದಲೂ ಮುಕ್ತವಾಗಬೇಕು. ಉಪವಾಸ ವೃತವನ್ನು ಎಲ್ಲಾ ಧರ್ಮ ವಿಶ್ವಾಸಿಗಳು ಪಾಲಿಸುತ್ತಾರೆ ಮತ್ತು ವೃತ ಆಚರಿಸುತ್ತಾರೆ.

ಹಬ್ಬಗಳ ಸಂಧರ್ಭಗಳಲ್ಲಿ ಅತ್ಯಂತ ಸಾಮಾನ್ಯ ಮಹಾ ಶಿವರಾತ್ರಿ, ನವರಾತ್ರಿಯ ಒಂಭತ್ತು ದಿನಗಳು ಭಾರತದ ಕೆಲವು ಭಾಗದಲ್ಲಿ ವಿಶೇಷವಾಗಿ ವಿವಾಹಿತ ಸ್ತ್ರೀಯರು ಮಾಡುವ “ಕರ್ವಾಚಾತ್” ಉಪವಾಸ, ಶ್ರಾವಣ ಮಾಸದ ಉಪವಾಸ ಎಲ್ಲಾ ಧರ್ಮದಗಳಲ್ಲಿ ಉಪವಾಸ ವೃತಾಚರಣೆಗೆ ವಿಶೇಷ ಮಹತ್ವವಿದೆ. ನಂಬಿಕಸ್ಥರು, ಧಾರ್ಮಿಕ ಪರಿಜ್ಞಾನವುಳ್ಳವರು ಕಡ್ಡಾಯವಾಗಿ ಆಚರಿಸುತ್ತಾರೆ.

ಉಪವಾಸದಲ್ಲಿ ಆಧ್ಯಾತ್ಮಿಕ ಬೆಳವಣಿಗೆಯ ಜೊತೆಗೆ ಆರೋಗ್ಯಕರವವಾದ ಹಲವಾರು ಉಪಯೋಗಗಳು ಇವೆಯೆಂದು ವೈಜ್ಞಾನಿಕ ಸಂಶೋಧಕರು ತಿಳಿಸಿರುವರು. ಹಲವು ವಿಧದಲ್ಲಿ ಉಪವಾಸಗಳಿವೆ. ಆರೋಗ್ಯ ಕಾಪಾಡಿಕೊಳ್ಳುವ, ಬೊಜ್ಜು ಕರಗಿಸಿಕೊಳ್ಳವ, ಸೌಂಧರ್ಯ ಕಾಪಾಡಿಕೊಳ್ಳುವ ಹೀಗೆ ಹಲವಾರು. ಆದರೆ, ಧಾರ್ಮಿಕ ನಂಬಿಕೆ ಉಪವಾಸ ಆಧ್ಯಾತ್ಮ ಶಕ್ತಿಯ ಬೆಳವಣಿಗೆಗೆ ಮಾತ್ರ.

ಇಸ್ಲಾಮ್ ಧರ್ಮವು ಉಪವಾಸಕ್ಕೆ ಮಹತ್ವದ ಸ್ಥಾನ ನೀಡಿದೆ. ಇಸ್ಲಾಮ್ ಧರ್ಮದ ಅಡಿಪಾಯದಲ್ಲಿ ಉಪವಾಸವು ಒಂದು ಪ್ರಬಲ ಸ್ಥಂಬವಾಗಿದೆ.  ವಿಶ್ವಾಸಿಗಳ ಆಧ್ಯಾತ್ಮಕ್ಕೆ ಶಕ್ತಿ ತುಂಬಲು, ಅವರನ್ನು ಉತ್ತಮ ಗೌರವಯುತ, ಸದ್ಗುಣ ದಾಸರನ್ನಾಗಿ ಪರಿವರ್ತಿಸಲು ಉಪವಾಸವು ತರಬೇತು ಗೊಳಿಸಬೇಕಾಗಿರುವ ತಿಂಗಳು.

ಹಿಜರಿ ಕ್ಯಾಲೆಂಡರಿನ ರಮಝಾನ್ ತಿಂಗಳ ಪೂರ್ತಿ ದಿನಗಳಲ್ಲಿ ಮುಸ್ಲಿಮರು ಉಪವಾಸವನ್ನು ಆಚರಿಸುತ್ತಾರೆ. ಉಪವಾಸವೆಂದರೆ ತೊರೆಯುವುದು, ನಿರ್ವಹಿಸುವುದು, ಮುಟ್ಟದಿರುವುದು ಎಂಬ ಅರ್ಥವನ್ನು ನೀಡುತ್ತದೆ. ಮುಂಜಾನೆಯಿಂದ ಮುಸ್ಸಂಜೆಯ ವರೆಗೆ ಶಾರೀರಿಕ ಬೇಡಿಕೆಗಳನ್ನು ನಿಗ್ರಹಿಸುವುದು, ಅನ್ನ-ಪಾನೀಯಗಳನ್ನು ಮುಟ್ಟದಿರುವುದು, ಅಶ್ಲೀಲ, ಅನೈತಿಕ ಕಾರ್ಯಗಳನ್ನು ಉಪೇಕ್ಷಿಸುವುದು ಅಥವಾ ತೊರೆಯುವುದು. ಪ್ರವಾದಿ ಮುಹಮ್ಮದ್(ಸ) ರವರು ಹೇಳಿರುವಂತೆ, “ದೇಹವನ್ನು (ಆಧ್ಯಾತ್ಮಿಕ ಕೊಳಕು ಮತ್ತು ರೋಗಗಳಿಂದ) ಶುದ್ಧಗೊಳಿಸುವ ಸಾಧನ ಉಪವಾಸವಾಗಿದೆ”.

ಹಸಿವು ಒಂದು ರೀತಿಯಲ್ಲಿ ಆತ್ಮ ಶಕ್ತಿಯನ್ನು ನೀಡುತ್ತದೆ ಮತ್ತು ದೇವ ಪ್ರೀತಿಯನ್ನು ಬೆಳೆಸುತ್ತದೆ. ಹಸಿವಿನಿಂದಿರುವುದು ಮಾತ್ರ ಉಪವಾಸದ ಮುಖ್ಯ ಗುರಿಯಲ್ಲ. ಉಪವಾಸದಿಂದ ದೇವನು ಬಯಸುವುದು ಧರ್ಮನಿಷ್ಠೆಯಾಗಿದೆ. ಇತರ ದಿನಗಳಿಗಿಂತ ಭಿನ್ನವಾಗಿ ಉಪವಾಸದಲ್ಲಿ ವೃತ ಆಚರಿಸಿಕೊಂಡು ಧರ್ಮನಿಷ್ಠೆಯುಳ್ಳ ದಾಸನಗುವುದು ಆದ್ಯ ಕರ್ತವ್ಯ.

ಹಸಿವಿನಿಂದಿರುವುದು ಮಾತ್ರ ಉಪವಾಸಿಗನ ಲಕ್ಷಣವಲ್ಲ. ಬದಲಾಗಿ, ಉತ್ತಮ ವ್ಯಕ್ತಿಯಾಗಿ ಬದಲಾಗಬೇಕು. ಪ್ರವಾದಿ ಮುಹಮ್ಮದ್(ಸ) ಹೇಳಿರುವಂತೆ, “ಸುಳ್ಳಾಡುವುದನ್ನು, ಅದರಂತೆ ನಡೆಯುವುದನ್ನು ವರ್ಜಿಸುವುದಿಲ್ಲವೋ ಅಂತಹವರು ಹಸಿವು ಮತ್ತು ಬಾಯಾರಿಕೆಯಿಂದಿರುವುದು ಅಲ್ಲಾಹನಿಗೆ ಬೇಕಾಗಿಲ್ಲ”. (ಬುಖಾರಿ, ಮುಸ್ಲಿಮ್)

ವೈಯಕ್ತಿಕ ಬೇಡಿಕೆಗಳು, ಶಾರೀರಿಕ ಬಯಕೆಗಳು, ಕಾಮ, ಕ್ರೋಧ, ಮದ, ಮತ್ಸರ, ಅಶ್ಲೀಲ, ಅನೈತಿಕ ವಿಚಾರಗಳು ರಮಝಾನಿನ ಉಪವಾಸ ವೃತ ಆಚರಿಸುವುದರೊಂದಿಗೆ ವಿಶ್ವಾಸಿಗಳು ಅವುಗಳಿಂದ ಮುಕ್ತವಾಗಬೇಕು.  “ನಿಮ್ಮಲ್ಲಿ ಉಪವಾಸವಿದ್ದರೆ ಅಶ್ಲೀಲ ಮಾತುಗಳನ್ನಾಡದಿರಲಿ, ಸದ್ದು-ಗದ್ದಲ ಮಾಡದಿರಲಿ” ಎಂದು ಪ್ರವಾದಿ ಮುಹಮ್ಮದ್(ಸ)ರು ತಿಳಿಸಿದ್ದಾರೆ.

ಉಪವಾಸವು ಕೆಡುಗಳಿಂದ ತಡೆಯುವ ಒಂದು ಗುರಾಣಿಯೆಂದು ಕುರ್‍ಆನ್ ಉಪವಾಸಕ್ಕೆ ಮಹತ್ವ ನೀಡಿದೆ. ದಾನ-ಧರ್ಮಗಳು, ಒಳ್ಳೆಯ ನಡತೆಗಳು, ಜನರ ನಡುವೆ ಪ್ರೀತಿ, ವಿಶ್ವಾಸ, ದೇವ ಪ್ರೀತಿ, ಆತ್ಮ ಸ್ಥೈರ್ಯ, ಆಧ್ಯಾತ್ಮ ಶಕ್ತಿಯು ನಿಷ್ಠಾವಂತ ಉಪವಾಸಿಗನಲ್ಲಿ ಉಂಟಾಗುತ್ತದೆ.

ಹಸಿವಿನಿಂದಿರುವುದರೊಂದಿಗೆ ಬಡವ ಅಥವಾ ಹಸಿದವನ ನರಳಿಕೆಯನ್ನು ಅರ್ಥಮಾಡಿಕೊಳ್ಳಲು, ವೈಯಕ್ತಿಕ ಅವಲೋಕನಕ್ಕೂ ಮತ್ತು ದೇವ ಪ್ರೀತಿ ಗಳಿಸಲು, ಅವನ ಆಜ್ಞೆಯನ್ನು ಪಾಲಿಸಿ ನಿಷ್ಠಾವಂತ ದಾಸನಾಗಿ ಧರ್ಮ ನಿಷ್ಠೆಯನ್ನು ಮೈಗೂಡಿಸಿಕೊಳ್ಳಲು ರಮಝಾನಿನ ಉಪವಾಸವು ಸಾಕ್ಷಿಯಾಗಲಿ.

 

 

 

LEAVE A REPLY

Please enter your comment!
Please enter your name here