‘ದ್ವೇಷ’ಕ್ಕೆ ಸೋಲು ‘ಕೆಲಸ’ಕ್ಕೆ ಜಯ – ದೆಹಲಿ ಚುನಾವಣಾ ವಿಮರ್ಶೆ

  • ಶಾರೂಕ್ ತೀರ್ಥಹಳ್ಳಿ

ಕಾಂಗ್ರೆಸ್, ಬಿಜೆಪಿ ಅಂತಹ ರಾಷ್ಟ್ರೀಯ ಪಕ್ಷಗಳ ಜೊತೆಗೆ ಪ್ರಾದೇಶಿಕ ಪಕ್ಷಗಳು ಇಂದು ಕೇವಲ ಓಟ್ ಬ್ಯಾಂಕ್ ಗಾಗಿ ಮಾತ್ರ ಈ ದೇಶದ ಪ್ರಜೆಗಳನ್ನು ಬಳಸಿಕೊಳ್ಳುತ್ತಿದ್ದು ಇದರಿಂದ ಬೇಸತ್ತು ಹತಾಷರಾದ ಜನರಿಗೆ ಒಂದು ಪರ್ಯಾಯ ಪಕ್ಷದ ಅವಶ್ಯಕತೆ ಖಂಡಿತ ಇತ್ತು. ಇಂತಹ ಸಂದರ್ಭದಲ್ಲೆ ದೆಹಲಿಯಲ್ಲಿ ಅರವಿಂದ್ ಕ್ರೇಜಿವಾಲ್ ರ ಆಮ್ ಆದ್ಮಿ ಪಕ್ಷ ಜಾರಿಗೆ ಬಂದಿತು. ಕಳೆದ ಎರಡು ಬಾರಿ ತನ್ನ ಆಡಳಿತ ನಡೆಸಿದ ಆಮ್ ಆದ್ಮಿ ಪಾರ್ಟಿ ಈಗ ಜನ ಮನಗಳ ಮನೆ ಮಾತಾಗಿದ್ದಾರೆ. ಕ್ರೇಜಿವಾಲ್ ಈಗ ಪ್ರತಿಯೊಬ್ಬರ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ಫೆಬ್ರವರಿ 11 ರಂದು ಬಹುನಿರೀಕ್ಷಿತ ದೆಹಲಿ ವಿಧಾನ ಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಚುನಾವಣೋತ್ತರ ಸಮೀಕ್ಷೆಗಳೆಂತೆಯೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ಆಮ್ ಆದ್ಮಿ ಪಕ್ಷ ಗುಡಿಸಿ ಗುಂಡಾತರ ಮಾಡಿದೆ. ದೆಹಲಿಯ 70 ವಿಧಾನಸಭಾ ಕ್ಷೇತ್ರಗಳ ಪೈಕಿ 62 ಸ್ಥಾನಗಳನ್ನು ತನ್ನದಾಗಿಸಿಕೊಂಡ ಆಮ್ ಆದ್ಮಿ, ಉಳಿದ 8 ಸ್ಥಾನಗಳನ್ನು ಬಿಜೆಪಿ ಪಕ್ಷಕ್ಕೆ ಬಿಟ್ಟುಕೊಟ್ಟಿದೆ. ಕಾಂಗ್ರೆಸ್ ಪಕ್ಷ ಮಾತ್ರ ಒಂದು ಸ್ಥಾನವನ್ನು ಪಡೆಯದೆ ಶೂನ್ಯದ ಕಡೆಗೆ ಮುಂದುವರೆದಿದೆ. ಹೀಗಾಗಿ ಈ ಭಾರಿಯ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ತೀವ್ರ ಹಿನ್ನಡೆಯಾಗಿದ್ದು, ಪ್ರಮುಖವಾಗಿ ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ತೀವ್ರ ಮುಖಭಂಗವಾಗಿದೆ. ಅದರಲ್ಲೂ ಕಳೆದ ಬಾರಿಯ ಚುನಾವಣೆಯಂತೆ ಈ ಭಾರಿಯೂ ಕಾಂಗ್ರೆಸ್ ಪಕ್ಷ ಶೂನ್ಯ ಸಂಪಾದನೆ ಮಾಡಿ ತೀವ್ರ ಮುಜುಗರಕ್ಕೀಡಾಗಿದೆ. ಇನ್ನು ಮುಂದಿನ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು, ಬಿಜೆಪಿ ಪಕ್ಷ ಪಡೆದ 8 ಸ್ಥಾನವನ್ನು ತಮ್ಮದಾಗಿಸಿಕೊಳ್ಳಲು ಇನ್ನೂ ಹೆಚ್ಚಿನ ಶ್ರಮ ಪಡಬೇಕಾಗಿದೆ. ಇದರ ನಡುವೆ ಮೂರನೇ ಬಾರಿಗೆ ಅಧಿಕಾರಕ್ಕೇರ ಬೇಕಿರುವ ಮುಖ್ಯಮಂತ್ರಿ ಅರವಿಂದ್ ಕ್ರೇಜಿವಾಲ್ ಗೆ ದೇಶ ವಿದೇಶಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಪ್ರಧಾನಿ ಮೋದಿಯಿಂದ ಹಿಡಿದು ಸಾಮಾನ್ಯ ನಾಗರೀಕನು ಸಹ ಅರವಿಂದ್ ಕ್ರೇಜಿವಾಲ್ ಗೆ ಶುಭಾಶಯಗಳನ್ನು ತಿಳಿಸುವಲ್ಲಿ ಉತ್ಸಾಹಕನಾಗಿದ್ದಾರೆ. ಅನೇಕ ರಾಜಕೀಯ ನೇತಾರರು ಸಹ ಅರವಿಂದ್ ಕೇಜ್ರಿವಾಲ್ ಫಲಿತಾಂಶವನ್ನು ಕೊಂಡಾಡಿದ್ದಾರೆ. ಫಲಿತಾಂಶಕ್ಕೂ ಮುನ್ನವೇ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ವಿಜಯ ಸೂಚಿಸಲಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದರು. ನಿಜವಾಗಿಯೂ ಅವರ ಅರ್ಥದಲ್ಲಿ ರಾಜಕೀಯ ಎಂದರೆ ಜನರಿಗಾಗಿ ಕೆಲಸ ಮಾಡುವುದಾಗಿದೆ, ಶಿಕ್ಷಣ, ಆಸ್ಪತ್ರೆಗಳ ಅಭಿವೃದ್ದಿಗೆ ಕೆಲಸ ಮಾಡುವುದಾಗಿದೆ. ನಿಜವಾದ ರಾಷ್ಟ್ರಪ್ರೇಮವೆಂದರೆ ಜನರಿಗಾಗಿ ಕೆಲಸ ಮಾಡುವುದು ಮತ್ತು ಒಂದು ಸರಕಾರ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದರೆ ಅದು ಗೆಲ್ಲಬಹುದು ಎಂದು ದಿಲ್ಲಿ ಸಾಬೀತುಪಡಿಸಿದೆ. ಆಮ್ ಆದ್ಮಿ ಪಕ್ಷ ಶಾಲೆ, ಆಸ್ಪತ್ರೆಗಳ ಕುರಿತಂತೆಯೇ ಮಾತನಾಡಿದರೆ ಅತ್ತ ಬಿಜೆಪಿ ಕಡೆಯವರು ಹಿಂದು – ಮುಸ್ಲೀಮ್ ವಿಚಾರವನ್ನೇ ಮಾತನಾಡಿ ವಾತಾವರಣವನ್ನು ಕೆಡಿಸಲು ಯತ್ನಿಸಿದರು ಎಂಬ ಸಿಸೋಡಿಯಾ ರವರ ಮಾತು ಅಕ್ಷರಶ ನಿಜವಾಗಿದೆ. ದೆಹಲಿ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೂಡ ಟ್ವೀಟ್ ಮಾಡಿ ದೇಶ ಜನ್ ಕೀ ಬಾತ್ ಮೂಲಕ ಮುನ್ನಡೆಯಬೇಕೇ ಹೊರತು ಮನ್ ಕೀ ಬಾತ್ ನಿಂದಲ್ಲ ಎಂದು ಹೇಳಿದ್ದರು. 

ಮೋದಿ ವಿರುದ್ದ ಕಳೆದೊಂದು ವರ್ಷದಿಂದ ಟೀಕೆಗೆ ಇಳಿಯದೇ ಮೌನಕ್ಕೆ ಶರಣಾದ ಅರವಿಂದ್ ಕೇಜ್ರೀವಾಲ್, ಮತದಾರರನ್ನು ಸೆಳೆಯಲು ತಮ್ಮದೇ ಆದ ತಂತ್ರ ಅನುಸರಿಸಿದ್ದರು. ಸತತವಾಗಿ ಜನಪರ ಯೋಜನೆಗಳ ಫೋಷಣೆ ಮಾಡಿದರು. ಶಿಕ್ಷಣ, ನೀರು, ವಿದ್ಯುತ್, ಮಹಿಳೆಯರಿಗೆ ಫ್ರೀ ಪಯಣ ಹೀಗೆ ಎಲ್ಲ ಬಗೆಯ ಯೋಜನೆಗಳನ್ನ ಸದ್ದಿಲ್ಲದೇ ಜಾರಿಗೆ ತಂದರು.ಸರ್ಕಾರ ರಚಿಸಿದ ಆರಂಭದಲ್ಲಿ ತಮ್ಮ ಪ್ರತಿಭಟನೆ ಮಾಡಿ ಸದ್ದು ಮಾಡುತ್ತಿದ್ದ ಅವರು, ಬಳಿಕ ಎಚ್ಚೆತ್ತುಕೊಂಡರು. ಜನಪರ ಕಾಳಜಿಯತ್ತ ಗಮನ ಹರಿಸಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವಲ್ಲಿ ಯಶಸ್ವಿಯಾದರು.ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನೇ ಅಸ್ತ್ರವಾಗಿ ಬಳಸಿಕೊಂಡಿದ್ದು ಬಹುತೇಕ ಫಲ ನೀಡಿದೆ. ಇದರ ಮಧ್ಯೆ ಶಾಹಿನ್ ಬಾಗ್ ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಲಾಗುತ್ತಿದ್ದು, ಆಪ್ ಸರ್ಕಾರಕ್ಕೆ ಇದು ಪ್ಲಸ್ ಪಾಯಿಂಟ್ ಎಂದು ವಿಶ್ಲೇಷಿಸಬಹುದಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ ರಾಷ್ಟ್ರಕ್ಕಾದರೆ, ದೆಹಲಿಯಲ್ಲಿ ಅಂತಹುದೇ ಯಾವುದೇ ನಾಯಕರು ಬಿಜೆಪಿಯಲಿಲ್ಲ. ಕೇಜ್ರಿವಾಲ್ ಸಮಾನವಾಗಿ ನಿಲ್ಲುವ ಮತ್ತೊಬ್ಬ ನಾಯಕ ದಿಲ್ಲಿ ಬಿಜೆಪಿಯಲ್ಲಿ ಇರದಿರುವುದು ಪಕ್ಷಕ್ಕೆ ದೊಡ್ಡ ನಷ್ಟವನ್ನೇ ಉಂಟು ಮಾಡಿತು. ಮನೋಜ್ ತಿವಾರಿ, ಕೇಂದ್ರ ಸಚಿವ ಹರ್ಷವರ್ಧನ್ ಕ್ರೇಜ್ರಿ ವಿರುದ್ಧ ಜನರ ಮನಸ್ಸಿನಲ್ಲಿ ಕಮಾಲ್ ಮಾಡುವಲ್ಲಿ ವಿಫಲರಾಗಿದ್ದಾರೆ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಆಟಕ್ಕುಂಟು ಲೆಕ್ಕಕ್ಕಿಲ್ಲದ ಹಾಗೆ ಇನ್ನು ಕ್ರೇಜಿವಾಲ್ ಘೋಷಿಸಿದ ಜನಪ್ರೀಯ ಯೋಜನೆಗಳ ಮುಂದೆ ಕಮಲ ಪಾಳಯ ಏನೂ ಮಾಡದಂತಹ ಪರಿಸ್ಥಿತಿ ತಂದೊಡ್ಡಿತು. ಇನ್ನು ಕಾಂಗ್ರೆಸ್ ದೆಹಲಿ ಚುನಾವಣೆಯಲ್ಲಿ ಅಖಾಡದಲ್ಲೆ ಉಳಿದಂತಾಯಿತು. ಕಾಂಗ್ರೆಸ್ ಆಟದಲ್ಲೇ ಇರದಿರುವುದು ಆಮ್ ಆದ್ಮಿ ಪಕ್ಷಕ್ಕೆ ದೊಡ್ಡ ವರವಾಗಿ ಪರಿಣಮಿಸಿದ್ದಂತೂ ಸುಳ್ಳಲ್ಲ.ಏನೇ ಆಗಲಿ ದೇಶದ ಪ್ರಸ್ತುತ ರಾಜಕೀಯ ಮತ್ತು ಸಂವಿಧಾನ ವಿರೋಧಿ ಕಾಯ್ದೆ ಕಾನೂಗಳನ್ನು ಇಲ್ಲಿನ ಪ್ರಜೆಗಳ ಮೇಲೆ ಹೇರಲು ಪ್ರಯತ್ನಿಸುತ್ತಿದೆ. ರಾಜಕೀಯ ನೇತಾರರೇ ಪ್ರತಿಭಟನಾ ನಿರತ ಪ್ರತಿಭಟನಾಗಾರರ ಮೇಲೆ ಗುಂಡು ಹಾರಿಸಿ ಎಂದು ಯಾವುದೇ ನಾಚಿಕೆ, ಭಯವಿಲ್ಲದೆ ಧೈರ್ಯವಾಗಿ ಹೇಳುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಜನರಿಗೆ ಮಂದಿರ, ಮಸೀದಿ, ಪಾಕಿಸ್ತಾನ್, ಕಾಶ್ಮೀರ್, ಹಿಂದು ಮುಸ್ಲಿಂ ಇಂತಹ ವಿಷಯಗಳು ಕೇಳಿ ಕೇಳಿ ಸಾಕಾಗಿ ಹೋಗಿದೆ. ಇಲ್ಲಿನ ಜನರಿಗೆ ಬೇಕಾಗಿರುವುದು ಶಾಂತಿ, ಪ್ರೀತಿ, ವಿಶ್ವಾಸ, ದೇಶದ ಕಟ್ಟ ಕಡೆಯ ಪ್ರಜೆಗೂ ಬದುಕುವ ಹಕ್ಕು ಮತ್ತು ಆ ಹಕ್ಕನ್ನು ಚಲಾಯಿಸಲು ಯಾವುದೇ ಅಡೆ ತಡೆಯಿಲ್ಲದೆ ಪ್ರತಿಯೊಬ್ಬ ಪ್ರಜೆಯ ಕೈ ಹಿಡಿದು ಮುಂದೆ ಸಾಗಿಸುವುದು ಆಡಳಿತ ಪಕ್ಷದ ಜವಬ್ದಾರಿಯಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ದೇಶದ ಜನರ ಶಾಂತಿ ನೆಮ್ಮದಿ ಮತ್ತು ಪ್ರಗತಿಗಾಗಿ ಕೆಲಸ ಮಾಡಿದರೆ ಖಂಡಿತ ಈ ದೇಶ ಉಜ್ವಲಿಸುವುದಕ್ಕೆ ಸಾಧ್ಯವಾಗುತ್ತದೆ ಹೊರತು ಮಂದಿರ ಮಸೀದಿ ಹೆಸರಿನಲ್ಲಿ ಹಿಂದು ಮುಸ್ಲೀಮರ ನಡುವ ವಿಷ ಬೀಜ ಬಿತ್ತಿ ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಲು ತೊಡಗಿರುವಂತಹ ರಾಜಕೀಯ ಪಕ್ಷಗಳಿಂದ ಈ ದೇಶ ಕುಟಿಂತವಾಗುತ್ತದೆ. ಅಂತಹ ಪಕ್ಷಗಳಿಂದ ನಾವು ಯಾವುದೇ ನಿರೀಕ್ಷೆ ಇಟ್ಟುಕೊಟ್ಟುವುದು ತಪ್ಪು. ದೆಹಲಿಯ ಗೆಲುವು ಈ ದೇಶದ ಗೆಲುವು ಎಂದು ಎಲ್ಲರೂ ಸಂತೋಷ ಪಡಬೇಕು ಮತ್ತು ನಮ್ಮ ರಾಜ್ಯದಲ್ಲು ಇಂತಹ ಪರ್ಯಾಯ ರಾಜಕೀಯ ಪಕ್ಷ ಅಧಿಕಾರಕ್ಕೆ ಬರಬೇಕು ಅದರಿಂದ ನೆಮ್ಮದಿ ಸಿಗಬಹುದೇ ಹೊರತು ಈಗಿರುವ ರಾಜಕೀಯ ಪಕ್ಷಗಳಿಂದ ನಿರೀಕ್ಷಿಸಿ ಫಲವಿಲ್ಲ.

LEAVE A REPLY

Please enter your comment!
Please enter your name here