ಉಮರ್ ಫಾರೂಕ್, ಇಳಕಲ್

ಬಾಬಾಸಾಹೇಬ್ ಅಂಬೇಡ್ಕರ್ ಅವರ ಶ್ರೀಮತಿಯವರ ಹೆಸರಿನಲ್ಲಿರುವ ಮುಂಬೈ ಮಹಾನಗರದ ಈ ರಮಾಬಾಯಿ ಕಾಲೋನಿಯಲ್ಲಿ 1997, ಜುಲೈ 11 ರಂದು ಮಹಾರಾಷ್ಟ್ರ ಮೀಸಲು ಪಡೆಯ ಪೊಲೀಸರು, ಸಂವಿಧಾನಾತ್ಮಕವಾಗಿ ಪ್ರತಿಭಟಿಸುತ್ತಿದ್ದ ದಲಿತರ ಮೇಲೆ ಗುಂಡಿನ ದಾಳಿ ನಡೆಸಿದ ದುರ್ಘಟನೆಯೇ ರಮಾಬಾಯಿ ಕಾಲೋನಿ ಹತ್ಯಾಕಾಂಡ.

1997, ಜುಲೈ 11 ರ ಬೆಳಗಿನ ಜಾವವದು. ಮುಂಬೈ ನಗರವೇ ಇನ್ನೂ ನಿದ್ರಾವಸ್ಥೆಯಲ್ಲಿತ್ತು. ಡಾ. ಬಿ ಆರ್ ಅಂಬೇಡ್ಕರ್ ಅವರನ್ನು, ಅವರು ಬರೆದ ಸಂವಿಧಾನವನ್ನು ಸಹಿಸದ ಕೆಲವು ಪುಂಡರು ರಾತ್ರೋ ರಾತ್ರಿ ರಮಾಬಾಯಿ ಕಾಲೋನಿಯಲ್ಲಿ ದೊಡ್ಡದಾಗಿರುವ ಅಂಬೇಡ್ಕರ್ ಪ್ರತಿಮೆಗೆ ಚಪ್ಪಲಿ ಹಾರ ಹಾಕಿ ಅವಮಾನಿಸಿದ್ದರು. ಕಾಲೋನಿಯ ಜನರೆಲ್ಲಾ ನಿದ್ದೆಯಿಂದ ಎದ್ದಾಗ ಅಂಬೇಡ್ಕರ್ ಪ್ರತಿಮೆಗೆ ಅವಮಾನಿಸಿರುವ ಸುದ್ದಿ ತಿಳಿಯುತ್ತಿದ್ದಂತೆ ರಮಾಬಾಯಿ ಕಾಲೋನಿಯ ದಲಿತರು, ಪ್ರತಿಮೆಯಿಂದ ಕೇವಲ 10-15 ಅಡಿ ದೂರದಲ್ಲಿದ್ದ ಪಾಟ್ನಗಾರ್ ಪೊಲೀಸ್ ಸ್ಟೇಷನ್ ಗೆ ಹೋಗಿ ದೂರು ನೀಡಲು ಮುಂದಾದರು. ಆದರೆ ಆ ಪೊಲೀಸ್ ಸ್ಟೇಷನ್ ನಲ್ಲಿದ್ದ ಅಹಂಕಾರಿ ಪೊಲೀಸರು ನಕಾರಾತ್ಮಕವಾಗಿ ಪ್ರತಿಕ್ರಿಯಿಸಿ ಬೇರೊಂದು ಪೊಲೀಸ್ ಸ್ಟೇಷನ್ ಗೆ ಹೋಗುವಂತೆ ಸೂಚಿಸಿದರು.

ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ ಪೋಲಿಸರ ಮೇಲೆ ಅಸಮಾಧಾನಗೊಂಡ ದಲಿತರು ಪ್ರತಿಭಟನೆಗೆ ಮುಂದಾದರು. ಪೊಲೀಸ್ ಸ್ಟೇಷನ್ ಪಕ್ಕದಲ್ಲಿದ್ದ ರಾಷ್ಟ್ರೀಯ ಹೆದ್ದಾರಿಯನ್ನು ತಡೆಗೊಳಿಸಿ, ಅಂಬೇಡ್ಕರ್ ಪ್ರತಿಮೆಗೆ ಅವಮಾನಿಸಿದವರನ್ನು ಬಂಧಿಸುವಂತೆ ಒತ್ತಾಯಿಸತೊಡಗಿದರು. ಆಗ ಮನೋಹರ್ ಕದಂ ಎಂಬುವವನ ನೇತೃತ್ವದಲ್ಲಿ ರಾಜ್ಯ ಮೀಸಲು ಪಡೆಯ ಹಂತಕ ಪೋಲಿಸ್ ತುಕಡಿಯೊಂದು ಬಂದಿತು. ಅವನು ಬಂದ ತಕ್ಷಣ ಪ್ರತಿಭಟಿಸುತ್ತಿದ್ದ ದಲಿತರ ಮನವೊಲಿಕೆಗೆ ಮುಂದಾಗಲಿಲ್ಲ, ವಾರ್ನಿಂಗ್ ಕೊಡಲಿಲ್ಲ, ಲಾಠಿ ಚಾರ್ಜ್ ಮಾಡುವುದಿಲ್ಲ, ಪ್ರತಿಭಟನಾಕಾರರನ್ನು ಚದುರಿಸಲು ಟೀಯರ್ ಗ್ಯಾಸ್ ಉಪಯೋಗಿಸಲಿಲ್ಲ. ಏಕಾಏಕಿ ಬಂದವನೇ ಗೋಲಿಬಾರ್ ಆದೇಶ ಕೊಡುತ್ತಾನೆ. ಆಗ ಪ್ರತಿಭಟನಕಾರರ ಮೇಲೆ ಗುಂಡಿನ ಮಳೆಗೆರೆದ ಪೊಲೀಸರು ಒಟ್ಟು 10 ಜನ ದಲಿತರ ಜೀವಗಳನ್ನು ಬಲಿ ಪಡೆದರು. 27 ಜನ ಪೋಲಿಸರ ಗುಂಡೇಟು ತಿಂದು ಗಾಯಾಳುಗಳಾದರು.

ಈ ವಿಷಯ ತಿಳಿಯುತ್ತಿದ್ದಂತೆ ಮುಂಬೈ ಮಹಾನಗರದ ದಲಿತ ಸಂಘಟನೆಗಳೆಲ್ಲ ಒಟ್ಟುಗೂಡಿ ಪೊಲೀಸರ ವಿರುದ್ಧ ಉಗ್ರ ಪ್ರತಿಭಟನೆಗೆ ಮುಂದಾದರು. ಮತ್ತದೇ ರಾಷ್ಟ್ರೀಯ ಹೆದ್ದಾರಿ ತಡೆಹಿಡಿದರು. ಆಗ ಬಂದ ಮತ್ತದೇ ಪೋಲಿಸ್ ಪಡೆ ಪ್ರತಿಭಟಿಸುತ್ತಿದ್ದ ದಲಿತ ಸಂಘಟನೆಗಳ ನಾಯಕರಿಗೆ ಹಿಡಿದು ಮನಸೋ ಇಚ್ಛೆ ಥಳಿಸಿದರು. ರಮಾಬಾಯಿ ಕಾಲೋನಿಯ ಒಳಗೆ ನುಗ್ಗಿ ಮಹಿಳೆಯರು, ಮಕ್ಕಳು ಎನ್ನದೇ ಕೈಗೆ ಸಿಕ್ಕವರನ್ನೆಲ್ಲ ಲಾಠಿಯಿಂದ ಹೊಡೆಯತೊಡಗಿದರು. ದಲಿತರ ಮೂಳೆ ಮುರಿದರು. ಅವರ ತಲೆ ಒಡೆದರು. ಕೈಕಾಲು ಮುರಿದು ಊನವಾಗಿಸಿದರು. ದಲಿತರ ಮತ್ತು ಪೊಲೀಸರ ನಡುವೆ ದೊಡ್ದ ಮಟ್ಟದ ಸಂಘರ್ಷವೇ ರಮಾಬಾಯಿ ಕಾಲೋನಿಯಲ್ಲಿ ನಡೆದು ಹೋಯಿತು.

LEAVE A REPLY

Please enter your comment!
Please enter your name here