ಆರಿಫ್ ಪಡುಬಿದ್ರೆ

1998ರ ಜನವರಿ ಮೊದಲ ವಾರ ಇರಬೇಕು. ಅಂದು ನಾನು ಮುಂಜಾನೆ ಐದು‌ ಗಂಟೆಯ ಹೊತ್ತಿಗೆ ಉಡುಪಿ ಜಾಮಿಯಾ ಮಸೀದಿಯಲ್ಲಿ‌ ಫಜರ್ ನಮಾಝ್ ಮುಗಿಸಿ, ಎಂದಿನಂತೆ ಪಕ್ಕದಲ್ಲೇ ಇರುವ ಶ್ರೀ ಕೃಷ್ಣ ಮಠ, ರಥಬೀದಿ ಕಡೆಗೆ ನಡೆದುಕೊಂಡು ಹೋಗುತ್ತಿದ್ದೆ.‌ಅಂದು ಮಾತ್ರ ರಥಬೀದಿಗೆ ಹೋಗುವ ಎಲ್ಲ ರಸ್ತೆಗಳಲ್ಲೂ ಪೊಲೀಸ್ ಸರ್ಪಗಾವಲು.‌ ನಾನಾಗ ಕನ್ನಡ ಜನಾಂತರಂಗ- ಕರಾವಳಿ ಪತ್ರಿಕೆಯ ವರದಿಗಾರ. ಈ ಪೊಲೀಸ್ ಬಂದೋಬಸ್ತ್ ನೋಡಿ ಕುತೂಹಲದಿಂದ ಮುಂದೆ ಹೆಜ್ಜೆ ಹಾಕತೊಡಗಿದೆ.ರಥಬೀದಿಯ ಒಂದು ಮೂಲೆಯಲ್ಲಿರುವ ಪೇಜಾವರ ಮಠದ ಎದುರು ಸುಮಾರು 8-10 ಗೂಟದ ಕಾರುಗಳು. ‌ಅದರಷ್ಟೇ ಬೆಂಗಾವಲು ಜೀಪುಗಳು. ಒಂದೆರಡು ಹೋಟೆಲ್, ಪತ್ರಿಕೆ ಮಾರುವವರು ಬಿಟ್ಟರೆ ಯಾವುದೇ ಅಂಗಡಿ ತೆರೆದಿರಲಿಲ್ಲ ಕುತೂಹಲ ಇನ್ನಷ್ಟು ಹೆಚ್ಚಾಯಿತು. ಪೇಜಾವರ ಸ್ವಾಮೀಜಿಗೆ ಏನಾದರೂ ಸಮಸ್ಯೆ‌ ಆಗಿದೆಯಾ? ಏನಾದರೂ ರೈಡ್ ಆಗಿದೆಯಾ? ಅಲ್ಲ, ಪ್ರಧಾನಿಯಂಥ ಗಣ್ಯ ವ್ಯಕ್ತಿಗಳು ಬಂದಿದ್ದಾರಾ? ನನ್ನಷ್ಟಕ್ಕೆ ಯೋಚನೆ ಮಾಡುತ್ತಾ ಮಠದ ಒಳಗೆ ಪ್ರವೇಶ ಮಾಡಿದೆ.ಅಲ್ಲಿದ್ದ ಒಬ್ಬರಲ್ಲಿ ವಿಷಯ ಏನೆಂದು ವಿಚಾರಿಸಿದೆ. ಅವರು ನೇರವಾಗಿ ವಿಷಯ ಹೇಳಿ ಬಿಟ್ಟರು.ಅದೇನೆಂದರೆ….ವಾರದ ಹಿಂದೆ ಸುರತ್ಕಲ್‌ನ ಕಾಲೇಜೊಂದರ ಮುಸ್ಲಿಂ ವಿದ್ಯಾರ್ಥಿಯೊಬ್ಬ ತನ್ನ ತರಗತಿಯ ಹಿಂದು ವಿದ್ಯಾರ್ಥಿನಿ ಜೊತೆ ಮಾತನಾಡಿದ್ದ ಎಂಬ ಕಾರಣಕ್ಕೆ ಆರಂಭಗೊಂಡಿದ್ದ ವಿದ್ಯಾರ್ಥಿಗಳ ನಡುವಿನ ಜಗಳವು ತಾರಕಕ್ಕೆ ಹೋಗಿತ್ತು. ಈ ವಿಷಯದಲ್ಲಿ ಪೇಟೆಯಲ್ಲಿ ನಡೆದಿದ್ದ ಉದ್ರೇಕಕಾರಿ ಭಾಷಣಗಳು, ಅಂದಿನ ರಾಜಕಾರಣಿಗಳು ತುಪ್ಪ ಸುರಿದ ಪರಿಣಾಮವಾಗಿ ಇಡೀ ಸುರತ್ಕಲ್ ಹೊತ್ತಿ ಉರಿದಿತ್ತು. ಹಿಂದು- ಮುಸ್ಲಿಂ ಕೋಮು ಗಲಭೆಯಾಗಿ ಪರಿವರ್ತನೆಯಾಗಿತ್ತು.ಒಂದು ವರ್ಗದ ಜನರನ್ನು ಸಿಕ್ಕ ಸಿಕ್ಕಲ್ಲಿ ಕತ್ತಿ, ತಲವಾರುಗಳಿಂದ ಕತ್ತರಿಸಿ ಹಾಕಲಾಗುತ್ತಿತ್ತು. ಗಲಭೆ ಮಂಗಳೂರಿಗೂ‌ ಹಬ್ಬಿ, ಗೋಲಿಬಾರ್ ನಡೆದು, ಅಲ್ಲೂ ಒಬ್ಬರ ಸಾವು‌ ಸೇರಿದಂತೆ ಒಂಬತ್ತು ಮಂದಿ ಬಲಿಯಾಗಿದ್ದರು.‌ ಎಷ್ಟೋ ಮಂದಿ ಶಾಶ್ವತ ಅಂಗವಿಕಲರಾಗಿದ್ದರು. ಎಷ್ಟೋ ಅಂಗಡಿಗಳು, ಮನೆಗಳು, ವಾಹನಗಳು ಬೆಂಕಿಗಾಹುತಿಯಾಗಿದ್ದವು. ಮನೆಯೊಳಗಿರಲೂ ಆತಂಕದ ಪರಿಸ್ಥಿತಿ. ರಾತ್ರಿ ನಿದ್ದೆ ಇಲ್ಲದ ದಿನಗಳು. ದಿನಗಟ್ಟಲೆ ಕರ್ಫ್ಯೂನಿಂದ ಜನಜೀವನ ಅಸ್ತವ್ಯಸ್ತವಾಗಿತ್ತು.‌ ತಿನ್ನಲು, ಕುಡಿಯಲು ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು.ಶಾಂತಿ ನೆಲೆಸುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ಪ್ರಯತ್ನಗಳೆಲ್ಲಾ ವಿಫಲಗೊಂಡಾಗ, ಅಧಿಕಾರಿಗಳಿಗೆ ನೆನಪಾದದ್ದು ಪೇಜಾವರ ಸ್ವಾಮೀಜಿ!ಹಾಗೆ, ಪೇಜಾವರ ಮಠಕ್ಕೆ ಬಂದಿದ್ದ ಡಿಐಜಿ, ಎರಡೂ ಜಿಲ್ಲೆಗಳ ಎಸ್ಪಿ, ಡಿಸಿಗಳು, ಎಎಸ್ಪಿ, ಡಿವೈಎಸ್ಪಿಗಳ ತಂಡವು, ಸ್ವಾಮೀಜಿ ಮೂಲಕ ಶಾಂತಿಗೆ ಕರೆ ನೀಡಲು ಮನವಿ ಮಾಡಿತ್ತು.  ನನಗೆ ಅಂದು ಸಂಜೆಯ ಕರಾವಳಿ ಅಲೆಗೆ ಅದು ಲೀಡ್ ನ್ಯೂಸ್ ಆಗಿತ್ತು.ಅಧಿಕಾರಿಗಳು ಮತ್ತು ಪೇಜಾವರ ಸ್ವಾಮೀಜಿ ನಡುವೆ ನಡೆದ ದೀರ್ಘ ಮಾತುಕತೆಯಂತೆ ಮರುದಿನದ ಪತ್ರಿಕೆಗಳಲ್ಲಿ “ಶಾಂತಿ ಕಾಪಾಡಲು ಪೇಜಾವರ ಶ್ರೀ ಮನವಿ” ಎಂಬ ಸುದ್ದಿ ಪ್ರಕಟವಾಯಿತು.ಅದರ ಮರುದಿನ‌ ಕರ್ಫ್ಯೂ ಸಡಿಲುಗೊಂಡಾಗ ಪೇಜಾವರ ಸ್ವಾಮೀಜಿ ಭಾರಿ ಬಂದೋಬಸ್ತ್‌ನೊಂದಿಗೆ ಸುರತ್ಕಲ್‌ಗೆ ಭೇಟಿ ನೀಡಿ, ಪಾದಯಾತ್ರೆ ಮಾಡಿ, ಸಂತ್ರಸ್ತರಿಗೆ ಅಕ್ಕಿ ವಿತರಿಸಿದರು.ಅಂದು ಪೇಜಾವರ ಸ್ವಾಮೀಜಿ ಕೈಯಿಂದ ಬುರ್ಖಾಧಾರಿ ಮಹಿಳೆಯೊಬ್ಬರು ಅಕ್ಕಿಯ ಚೀಲಕ್ಕೆ ಕೈ ಚಾಚುವ ಸನ್ನಿವೇಶ ಮನ ಕಲಕುವಂಥದ್ದು. ಮರುದಿನ‌ದ ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ ಅದೇ ಫೋಟೊ ಪ್ರಕಟವಾಗಿತ್ತು.ಜನರ ಮನ ಕರಗಲು ಈ ಒಂದು ಫೋಟೊ ಸಾಕಿತ್ತು.ಮುಂದೆ ಅಲ್ಲಲ್ಲಿ ಶಾಂತಿ‌ ಸಭೆ, ಮಾನವ ಸರಪಳಿ ನಡೆಯಿತು. ಕೊಳ್ಳಿ ಇಡುವ, ಕಲ್ಲು ತೂರಾಟ ನಡೆಸುವ, ಕತ್ತಿ,‌ ತಲವಾರು, ದೊಣ್ಣೆಯಿಂದ ಹೊಡೆಯುವ ದುಷ್ಕೃತ್ಯಗಳಿಗೆ ಬ್ರೇಕ್ ಬಿತ್ತು.ಕರ್ಫ್ಯೂ ತೆರವಾಯಿತು. ಸುಮಾರು 15  ದಿನಗಳ ನಂತರ ಮೆಲ್ಲನೆ‌ ಬಸ್‌ಗಳ ಸಂಚಾರ ಆರಂಭಗೊಂಡಿತು. ಅಂಗಡಿಗಳು ತೆರೆಯಲಾರಂಭಿಸಿದವು. ಈ ಕರಾಳ ಘಟನೆ ನಡೆದು, ಎರಡು ದಶಕ ಕಳೆದಿದೆ. ಅಂದಿನ ಗಾಯ ಇನ್ನೂ ಮಾಸಿಲ್ಲ.ಮೊನ್ನೆಯಷ್ಟೇ ಮಂಗಳೂರಿನಲ್ಲಿ ನಡೆಯಬಾರದ ಘಟನೆ ನಡೆದು ಹೋಯಿತು. ಎರಡು ಜೀವಗಳು ಬಲಿಯಾದವು.ಅತ್ತ ಪೇಜಾವರ ಶ್ರೀಗಳ ಆರೋಗ್ಯದ ಸ್ಥಿತಿ ಗಂಭೀರವಾಗಿದೆ..‌ ಇಂಥ ಪರಿಸ್ಥಿತಿಯಲ್ಲಿ ಹಳೆಯ ಘಟನೆಯೊಂದು ನೆನಪಾಯಿತು

.-Arif Padubidri Facebook wall ನಿಂದ ಸ್ವೀಕರಿಸಲಾಗಿದೆ

LEAVE A REPLY

Please enter your comment!
Please enter your name here