ನಾಯಕತ್ವದ ಗುಣಗಳು – ಭಾಗ 4.

  • ಅಬೂಕುತುಬ್

ಯಾರಿಗೂ ಅವರ ತಪ್ಪನ್ನು ನೇರವಾಗಿ ಹೇಳಿದರೆ ಇಷ್ಟ ಆಗಲ್ಲ. ಅದೂ ಸಂಘಟನೆಗಳಲ್ಲಿ ಇರುವಾಗ ನಾಲ್ಕು ಮಂದಿಯ ಮುಂದೆ ಅವರ ತಪ್ಪನ್ನು ಹೇಳಿದರೆ ಮೌನವಾಗಿ ಅನುಸರಿಸಿದರೂ ಅಥವಾ ಅದನ್ನು ಕೇಳಿದರೂ ಮನಸ್ಸಿನ ಒಳಗೆ ಸಣ್ಣ ಅಸಹನೆ ಇರುತ್ತದೆ. ಕೆಲವೊಮ್ಮೆ ನಾಯಕನಿಗೆ ತಪ್ಪಾಗಿ ಕಂಡದ್ದು ಅನುಯಾಯಿಗಳ ಪಾಲಿಗೆ ಸರಿಯಾಗಿ ಕಾಣಲು ಸಾಧ್ಯವಿದೆ. ಎಲ್ಲಾ ವಿಷಯಗಳಲ್ಲಿ ಎರಡು ದೃಷ್ಟಿಕೋನ ಇದ್ದೇ ಇರುತ್ತದೆ. ಮನುಷ್ಯರ ಸಂಘಟನೆ ಎಂದ ಮೇಲೆ ಅದು ಇರಲೇ ಬೇಕು.

ಒಂದು ವಿಷಯವನ್ನು ನಾಯಕ ನೋಡುವಾಗ ಅದು 6 ಎಂದು ಕಂಡರೆ ಮುಂದೆ ನಿಂತ ಅನುಯಾಯಿಗಳಿಗೆ ಅದೇ 9 ಆಗಿ ಕಾಣಲು ಸಾಧ್ಯವಿದೆ. ಯಾಕೆಂದರೆ ಇಬ್ಬರು ನಿಂತಿರುವ ಸ್ಥಾನ ಹಾಗೆ ಆಗುವಂತೆ ಮಾಡುತ್ತದೆ. ಪ್ರತಿಯೊಬ್ಬ ನಾಯಕ ತನ್ನ ಅನುಯಾಯಿಗಳು ನಿಂತಿರುವ ಜಾಗದಲ್ಲಿ ನೋಡಿ ಅವರನ್ನು ಮಾರ್ಗದರ್ಶನ ಮಾಡಬೇಕಾಗುತ್ತದೆ.

ಯಾವುದೇ ಕೆಲಸ ಅಥವಾ ಆದೇಶ ನೀಡಿ ಅವರಲ್ಲಿ ಏನಾದರೂ ಪ್ರಮಾದ ಆಗಿ ಬಿಟ್ಟರೆ ಅವರ ತಪ್ಪನ್ನು ಎತ್ತಿ ತೋರಿಸುವುದಕ್ಕಿಂತ ಅವರ ಹಿನ್ನೆಲೆ, ವಾತಾವರಣವನ್ನು ನೋಡಿ ಚರ್ಚಿಸಿ ಅವರ ಸುಖ ದುಃಖಗಳ ಬಗ್ಗೆ ಸಂಪೂರ್ಣ ವಿವರ ಪಡೆದ ಬಳಿಕ ಅವರಿಗೆ ಮಾರ್ಗದರ್ಶನ ಮಾಡಬೇಕಾಗುತ್ತದೆ. ಹಾಗೆ ಮಾಡಿದಾಗ ನಾಯಕ ಅನುಯಾಯಿಗಳ ಹೃದಯದಲ್ಲಿ ಇನ್ನಷ್ಟು ದೊಡ್ಡ ಸ್ಥಾನ ಗಳಿಸುತ್ತಾನೆ‌. ಬಳಿಕ ಆ ನಾಯಕ ನೀಡುವ ಯಾವುದೇ ಆದೇಶವನ್ನು ಅವರು ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತಾರೆ.

ನಾಯಕನಾದವನು ಎಲ್ಲಾ ದೈನಂದಿನ ಸಣ್ಣ ಪುಟ್ಟ ಕೆಲಸಗಳಿಗೆ ಬದ್ರ್ ಯುದ್ಧ, ಉಹುದ್ ಯುದ್ಧದ ನಿರ್ಣಾಯಕ ಅನುಸರಣೆಯ ಉದಾಹರಣೆ ಕೊಡುವುದನ್ನು ನಿಲ್ಲಿಸಬೇಕು. ಅದು ನಿರ್ಣಾಯಕ ಪರಿಸ್ಥಿತಿಯಲ್ಲಿ ಬರುತ್ತದೆಯೇ ಹೊರತು ದೈನಂದಿನ ಜೀವನದಲ್ಲಿ ದಿನಾ ಬರುವುದಿಲ್ಲ. ದೈನಂದಿನ ಜೀವನದಲ್ಲಿ ಜನರ ಪರಿಸ್ಥಿತಿ, ವ್ಯಾಪಾರ, ಕುಟುಂಬ ಹೀಗೆ ಹತ್ತು ಹಲವು ಸಮಸ್ಯೆಗಳು ಇರುತ್ತವೆ. ಅವೆಲ್ಲೆದರ ಜೊತೆಗೆ ಸಂಘಟನೆ, ಉದ್ದೇಶಕ್ಕಾಗಿ ಸಮಯ ಕೊಡುವಾಗ ಆ ಸಮಯವನ್ನು ಯಾವ ರೀತಿ ಬಳಸಬೇಕು ಎಂಬುದನ್ನು ಉತ್ತಮ ನಾಯಕ ಚೆನ್ನಾಗಿ ಅರಿತಿರುತ್ತಾನೆ. “ನೀನು ಮಾಡು, ತಪ್ಪಾದರೆ ನಾನಿದ್ದೇನೆ, ಭಯ ಪಡಬೇಡ” ಎಂದು ಧೈರ್ಯ ತುಂಬುವುದು ನಾಯಕನ ಪ್ರತಿಭೆ ಆಗಿರಬೇಕು. ಯಾರಿಂದ ಯಾವ ಕೆಲಸ ಹೇಗೆ ಯಾವ ಸಂದರ್ಭದಲ್ಲಿ ಮಾಡಿಸಬೇಕು ಮತ್ತು ಆ ಕೆಲಸಕ್ಕೆ ಹೇಗೆ ಅವರನ್ನು ತಯಾರು ಗೊಳಿಸಬೇಕು ಎಂಬುದನ್ನು ಉತ್ತಮ ನಾಯಕ ತಿಳಿದಿರುತ್ತಾನೆ. ಯಾಕೆಂದರೆ ಆ ನಾಯಕ ಮತ್ತು ಅನುಯಾಯಿಗಳ ಸಂಬಂಧ ಸಂಘಟನೆಗಿಂತ ಕುಟುಂಬಕ್ಕಿಂತ ಅದೆಷ್ಟೋ ಪಟ್ಟು ಹೆಚ್ಚು ಹತ್ತಿರ ಆಗಿರುತ್ತದೆ.

ಮುಂದುವರಿಯುವುದು…..

LEAVE A REPLY

Please enter your comment!
Please enter your name here