ಹಫ್ಸ ಬಾನು ಬೆಂಗಳೂರು

ಅಸ್ಸಲಾಂ ಅಲೈಕುಂ.

ರೋಗ ಅನ್ನೋದು ಯಾರಿಗೂ ಇಷ್ಟವಿಲ್ಲದ್ದು ಬೇಡವಾದ್ದೇ. ಐದು ವಕ್ತ್(ಸಮಯ) ನಮಾಝಿನಲ್ಲೂ ಅಲ್ಲಾಹುವಿನೊಂದಿಗೆ ನಾವೆಲ್ಲಾರು ಬೇಡುತ್ತೇವೆ. ಉತ್ತಮ ಆರೋಗ್ಯ ಹಾಗೂ ಧೀರ್ಘಾಯಸ್ಸನ್ನು. ಹೀಗಿರುವಾಗ ಪ್ರಪಂಚಕ್ಕೇ ವಕ್ಕರಿಸಿದ ಈ ಕೊರೋನ ಎಂಬ ಮಹಾಮಾರಿ ರೋಗವು ನಮ್ಮನ್ನೆಲ್ಲಾ ಭಯ ಭೀತಿಗೊಳಪಡಿಸಿ ಬಿಟ್ಟಿದೆ.

ನಮಗೆ ಇದರಲ್ಲಿ ಬಹಳ ನೋವು ಕೊಟ್ಟ ವಿಷಯವೆಂದರೆ. ಇದರಿಂದಾಗಿ ಮಸೀದಿಯಲ್ಲಿ ಖುತ್ಬಾ ಇಲ್ಲವಾದದ್ದು
ಒಂದೊಂದು ಶುಕ್ರವಾರ ಬರುವಾಗಲೂ ಪ್ರತೀಯೋರ್ವ ಮುಸಲ್ಮಾನರಿಗೂ ಸಹಿಸಲಸಾಧ್ಯವಾದ ನೋವುಂಟಾಗುತ್ತಿದೆ. ಇನ್ನು ಪವಿತ್ರ ಮಕ್ಕಾ-ಮದೀನದಲ್ಲಿನ ವಿಷಯ ಕೇಳುವಾಗಲಂತೂ ಈ ಮಹಾಮಾರಿಯು ಪ್ರಪಂಚದಿಂದಲೇ ಮರೆಯಾಗಿ ಅಳಿಸಿ ಹೋಗಲು ದುವಾ ಬೇಡದ ಒಬ್ಬನೇ ಒಬ್ಬ ಮುಸಲ್ಮಾನ ಇರಲಾರ.

ರಹ್ಮತ್ತೆಂಬ ಅನುಗ್ರಹಗಳನ್ನು ಹೊತ್ತು ತರುವ ರಮಝಾನ್ ತಿಂಗಳೂ ಬಂತು. ಮಸೀದಿಗೆ ಹೋಗಲಿಕ್ಕಿಲ್ಲಾ ಅನ್ನುವ ಬೇಜಾರು ಬಿಟ್ರೆ ಬೇರೆ ವಿಷಯಗಳನ್ನು ಅವಲೋಕಿಸಿದಾಗ ಎಂದಿಗಿಂತಲೂ.. ಈ ಬಾರಿಯ ನಮ್ಮ ಉಪವಾಸ ವೃತಗಳು, ಪುಣ್ಯ ಕಾರ್ಯಗಳು ಅಲ್ಲಾಹುವಿಗೆ ಹೆಚ್ಚು ಇಷ್ಟವಾಗಬಹುದೆಂಬ ಭಾವನೆ ಉಂಟಾಗುತ್ತದೆ. ಮನೆಯವರೆಲ್ಲಾ ಒಟ್ಟಾಗಿ ಪ್ರೀತಿ ಆತ್ಮೀಯತೆಯಿಂದಿದ್ದು ಇಸ್ಲಾಮ್ ಕಲಿಸಿದ ಸನ್ಮಾರ್ಗದ ಹಾದಿಯಲ್ಲೆ ಈಗ ಎಲ್ಲಾರಾ ಜೀವನ ಶೈಲಿಯು ಸಾಗುತ್ತಲಿದೆ.
ಅಲ್ಹಮ್ದುಲಿಲ್ಲಾಹ್ ! ಮೂವತ್ತು ದಿನದ ಉಪವಾಸವೂ, ಈದ್ ಹಬ್ಬವೂ ಇದರಂತೆಯೇ ಚಂದದಲ್ಲಿ ಕಳೆಯಲು ದೇವನು ನಮಗೆ ಅನುಗ್ರಹಿಸಲೀ.

ಈದ್ ಅನ್ನುವಾಗ ನಮಗೆ ಆಗುತ್ತಿದ್ದ ಸಂತೋಷ ಸಂಭ್ರಮಾ ಹಾಗೂ ಹಬ್ಬದ ಆಚರಣೆಗಾಗಿ ನಾವು ನಡೆಸುತ್ತಿದ್ದ ಆ ತಯಾರಿಗಳು ಎಷ್ಟೆಷ್ಟಿಲ್ಲಾ.. ಇಂದಿನ ನಮ್ಮ ಈ ಪರಿಸ್ಥಿತಿಗೆ ನಿಜಕ್ಕೂ ಬೇಸರವಾಗುತ್ತಿದೆ.
ಅದರಲ್ಲೋ ನಮಗೆ ಹೆಂಗಸರಿಗೆ ಬಹಳವೆ ಹೆಚ್ಚಿನ ದು:ಖವಾಗುತ್ತಿದೆ. ವರ್ಷಪೂರ್ತಿ ಮನೆಯೊಳಗೇ ಇರುವಂತಹಾ ಅದೆಷ್ಟೋ ಪಾಪಾದ ಹೆಣ್ಣು ಜೀವಗಳಿರ ಬಹುದು. ಅವರಿಗೆಲ್ಲಾ ಇದು ಎರಡು ಹಬ್ಬಗಳು ಮಾತ್ರಾವೆ ಸಂತಸ ತಂದು ಕೊಡುವಂತದ್ದಾಗಿರುತ್ತದೆ.

ಎಲ್ಲಾರೂ ಜತೆಗೂಡಿ ಪೆರ್ನಾಲಿನಂದು ನಮಾಝ್ ಮಾಡಿ, ಹಬ್ಬದೂಟ ಉಂಡು ಮನೆಗೆ ಬರುವಂತಾ ನೆಂಟರ ಸತ್ಕಾರ ಮಾಡುವುದು ಹಾಗೂ ತಾವೂ ಸಂಬಂಧಿಕರ ಮನೆಗೆ ಹೋಗಿ ಬರುವುದು ಇದರಲ್ಲೆಲ್ಲಾ ಹೆಂಗಸರಿಗೆ ಸಿಗುವ ಆನಂದ ಅಷ್ಟಿಷ್ಟಲ್ಲಾ.

ಇಲ್ಲಿ ನಾನು ಎಲ್ಲಾ ಹೆಂಗಸರಲ್ಲಿ ಪ್ರೀತಿಪೂರ್ವಕ ವಿನಂತಿಸುವುದೇನೆಂದರೇ, ನಾವು ಮೊದಲು ಈ ಕೊರೋನ ರೋಗವು ಪ್ರಪಂಚದಿಂದಲೇ ಅಳಿದು ಹೋಗಲು ದುವಾ ಬೇಡೋಣ. ಹಾಗೂ ಮನೆಯೊಳಗೇ ಇದ್ದುಕೊಂಡು ಕೊರೋನಾವನ್ನು ನಮ್ಮ ಊರಿಂದಲೇ ಅಳಿಸಿ ಬಿಡೋಣ. ಇದೆಲ್ಲಾ ನಮಗೆ ಯಾರೂ ಹೇಳಿ ಕೊಡಬೇಕಾಗಿಲ್ಲ ಅಲ್ಲವೇ..? ನಮ್ಮಿಂದ ಇದು ಸಾಧ್ಯವಿದೆ.

ಕೊರೋನ ಅಳಿದು ಹೋದ ನಂತರ ನಾವೆಲ್ಲಾರೂ ಸೇರಿ ಸಂಭ್ರಮದಿಂದ ಪೆರ್ನಾಲ್ ಆಚರಣೆ ಮಾಡೋಣ.
ಇನ್ಶಾ ಅಲ್ಲಾಹ್ ! ಬಕ್ರೀದ್ ಹಬ್ಬವೂ ದೂರವಿಲ್ಲ ತಾನೇ..
ನಾವು ಅದನ್ನಾದರೂ ಸಂತೋಷದಿಂದ ಬರಮಾಡಿಕೊಂಡು ಸಂಭ್ರಮದಿಂದ ಆಚರಿಸುವಂತಾಗಲು ಅಲ್ಲಾಹನಲ್ಲಿ ದುವಾ ಬೇಡೋಣ.

ನಾನು ಈ ಹಬ್ಬಕ್ಕೆ ಶಾಪಿಂಗ್ ಹೋಗದೇನೇ ನನಗೆ ಈಗ ಅಲ್ಲಾಹು ನೀಡಿರುವಂತಹಾ ರಹ್ಮತ್ ಹಾಗೂ ಬರ್ಕತ್ ಎಂಬ ಅನುಗ್ರಹದೊಂದಿಗೆ ಮನೆಯವರೊಂದಿಗೆ ಸಂತೋಷದಿಂದ ಹಬ್ಬದ ಆಚರಣೆ ಮಾಡಲು ನಿರ್ಧಾರ ಮಾಡಿರುವೆನು. ನನ್ನ ಪ್ರೀತಿಪಾತ್ರರಾದ ಸಹೋದರಿಯರೇ..ನೀವುಗಳೂ ಕೂಡಾ ಈ ರೀತಿಯೇ ಹಬ್ಬದಾಚರಣೆ ಮಾಡುವಿರೆಂದು ನಾನು ವಿಶ್ವಾಸವಿಟ್ಟಿರುವೆನು.

ಹಬ್ಬದ ದಿನ ನೀವು ಕುಶಿಯಾಗಿದ್ದು ನಿಮ್ಮ ಮನೆಯವರೆಲ್ಲಾರೂ ಸಂತೋಷದಲ್ಲಿರುವಂತೆ ಮಾಡಿಯಂತೆ. ಅದಾಗ ನೋಡಿ ಈ ಪೆರ್ನಾಲಿಗೆ ಸದ್ದು ಗದ್ದಲದ ಸಂಭ್ರಮವಿಲ್ಲದಿದ್ದರೂ
ಇನ್ಶಾ ಅಲ್ಲಾಹ್ ! ಸಂತೋಷ ನೆಮ್ಮದಿಯಂತೂ ಇದ್ದೇ ಇರುತ್ತದೆ.
ಜಝಾಕಲ್ಲಾಹು ಖೈರ್ !

………………………….

ಮಿಸ್ರಿಯಾ.ಐ.ಪಜೀರ್

ಸೃಷ್ಟಿಕರ್ತನಾದ ಅಲ್ಲಾಹನ ಕಲಾಂ (ಮಾತುಗಳಾದ)ಖುರ್‌ಆನನ್ನು ಪೈಗಂಬರ್ ಮುಹಮ್ಮದ್ ( ಸ.ಅ)ರಿಗೆ ಅವತೀರ್ಣಗೊಳಿಸಿದ ಪವಿತ್ರ ಮಾಸವಾಗಿದೆ ರಮ್ಝಾನ್.’ಹುದಲ್ಲಿನ್ನಾಸ್’ ಮನುಷ್ಯ ಸಮುದಾಯಕ್ಕೆ ಅನುಗ್ರಹ ಈ ಖುರ್‌ಆನ್.ಪ್ರತಿ ವರುಷವೂ ಈ ಸಮೃದ್ಧ ತಿಂಗಳು ಬರುವಾಗ ಅದಮ್ಯ ಹರುಷವಿರುತ್ತಿತ್ತು.ಇಫ್ತಾರಿಗಾಗಿ ತಿಂಡಿ ತಿನಿಸುಗಳನ್ನು ತಯಾರಿಸುವ ಖುಷಿ, ವ್ರತ ಮುರಿಯಲು ಮನೆಗೆ ಹಿಂದಿರುಗಿ ಬರುವ ಮನೆಯವರನ್ನು ಕಾಯುವ ಕಾತರ, ತರಾವೀಹ್ ನಮಾಜಿಗಾಗಿ ಓಡೋಡಿ ಹೋಗುವ ಗಂಡಸರು, ಉಸ್ತಾದರ ಪ್ರವಚನ…ಈ ಎಲ್ಲಾ ಸಂಭ್ರಮಕ್ಕೂ ಕೊರೋನಾ ಅಡ್ಡಗಾಲಿಟ್ಟಿತು.ಇದೀಗ ಹಲವರಿಗೆ ಈದ್ ಹಬ್ಬಕ್ಕೆ ಹೊಸ ಉಡುಪು ಖರೀದಿಸುವುದು ಹೇಗೆ ಎಂಬುದರ ಚಿಂತೆ ಕಾಡತೊಡಗಿದಂತಿದೆ.ಜಾಗತಿಕವಾಗಿ ರೋಗ ಮತ್ತು ಹಸಿವು ಜನರನ್ನು ನರಳಿಸುತ್ತಿರುವಾಗ ನಾವು ಇಷ್ಟೊಂದು ಸಂಕುಚಿತರಾದರೆ ಹೇಗೆ? ಹೊಸ ಬಟ್ಟೆ ಖರೀದಿಸಿ ಉಟ್ಟರೆ ಮಾತ್ರ ಹಬ್ಬ ಪೂರ್ಣವಾಗುವುದೆಂಬ ಭ್ರಮೆಯಿಂದ ನಾವೆಲ್ಲರೂ ಹೊರಬರಬೇಕಾಗಿದೆ.ಕೊರೋನಾ ಪಿಡುಗನ್ನು ನಮ್ಮ ಸಮುದಾಯದ ಮೇಲೆ ಹೊರಿಸಲಾಯಿತು.ಇದರಿಂದಾಗಿ ನಮ್ಮ ಸಮುದಾಯ ಅನುಭವಿಸಿದ ನೋವನ್ನು ಅಷ್ಟು ಬೇಗ ಮರೆತರೆ ಹೇಗೆ?ಇದೀಗ ಜವಳಿ ಮಳಿಗೆಗಳು ರಮ್ಜಾನ್ ಶಾಪಿಂಗ್‌ಗಾಗಿ ತೆರೆಯಲ್ಪಡುತ್ತಿವೆ.ಅವರ ಉದ್ದೇಶ ವ್ಯಾಪಾರವಾಗಿರಬಹುದು, ಆದರೆ ಆಡಳಿತದ ಚುಕ್ಕಾಣಿ ಹಿಡಿದಿರುವ ಕೇಂದ್ರ ಸರ್ಕಾರಕ್ಕೆ ಇದರಿಂದಾಗಿ ಒಂದೇ ಕಲ್ಲಿಗೆ ಎರಡು ಹಕ್ಕಿಗಳ ಹೊಡೆದಂತಾಗುತ್ತದೆ.ಮೊದಲನೆಯದಾಗಿ ಮೋದಿಯ ಗುಜರಾತಿನ ಟೆಕ್ಸ್‌ಟೈಲ್ ಇಂಡಸ್ಟ್ರಿ ಗೆಳೆಯರಿಗೆ ವ್ಯಾಪಾರಕ್ಕೆ ಅನುವು ಮಾಡಿ ಕೊಡುವುದು. ದೇಶದಲ್ಲಿ ದೊಡ್ಡ ಸಂಖ್ಯೆಯ ಗಾರ್ಮೆಂಟ್ ಕಾರ್ಖಾನೆಗಳಿರುವುದು ಗುಜರಾತಿನಲ್ಲಿ.ಹಾಗಾಗಿ ಅದರ ಮಾಲಕರು ಪ್ರಧಾನಿ ಮತ್ತು ಗೃಹಮಂತ್ರಿಯ ದೋಸ್ತ್‌ಗಳೇ ಎಂಬುವುದರಲ್ಲಿ ಎರಡು ಮಾತಿಲ್ಲ), ಎರಡನೆಯದಾಗಿ ನಮ್ಮ ಸಮುದಾಯವನ್ನು ಸುಲಭವಾಗಿ ಇದರಲ್ಲಿ ಬಲಿಯಾಗಿಸುವುದು.
ಜುಮ್ಮಾ, ತರಾವೀಹ್ ಇಲ್ಲದೆ ಇಷ್ಟು ದಿನಗಳು ಸರಿದು ಹೋದವು.ಹೊಸ ಬಟ್ಟೆ ಬರೆಯಿಲ್ಲದೆ ಈ ಬಾರಿಯ ಹಬ್ಬವನ್ನಾಚರಿಸಲು ನಮ್ಮಿಂದ ಸಾಧ್ಯವಿಲ್ಲವೇ?ಹಾಗಾಗಿ ಇದರ ಹಿಂದಿರುವ ಅಜೆಂಡಾವನ್ನು ನಾವೆಲ್ಲರೂ ಅರ್ಥೈಸಿ ಅವರ ಕುತಂತ್ರಕ್ಕೆ ಬಲಿಯಾಗದಿರೋಣ. ಶೀಘ್ರವೇ ಜಗತ್ತು ಈ ಮಹಾಮಾರಿಯಿಂದ ಚೇತರಿಸಿಕೊಳ್ಳುವಂತೆ ಸರ್ವಶಕ್ತನು ಅನುಗ್ರಹಿಸಲಿ..ಆಮೀನ್..

………………………

ಹಸೀನಾ ಮಲ್ನಾಡ್

ಅಸ್ಸಲಾಂ ಅಲೈಕುಂ.
ಕೋರೋನ ಕಾಯಿಲೆಯು ಪ್ರಪಂಚವನ್ನೇ ಬುಡಮೇಲು ಮಾಡುತ್ತಾ ಇದೆ. ಅತಿ ಕಡಿಮೆ ಅವಧಿಯಲ್ಲಿಯೇ ಪ್ರಪಂಚದ ಮೂಲೆ ಮೂಲೆಗೂ ಹರಡುತ್ತಿರುವ ಈ ಕಾಯಿಲೆಗೆ ಪ್ರಪಂಚವೇ ಬೆದರಿದೆ . ಇದಕ್ಕೆ ಸದ್ಯಕ್ಕೆ ಇರುವ ಮದ್ದು ಮನೆಯೊಳಗೇ ಇರುವುದು . ಈ ಕಾಯಿಲೆಗೆ ಹೆದರಿ ನಾವೆಲ್ಲರೂ ಮನೆಯೊಳಗೆ ಕೂತಿದ್ದೇವೆ. ಆದರೆ ನಮ್ಮ ಮಕ್ಕಳು ??.

ಹೋದ ತಿಂಗಳು ಕಸದ ರಾಶಿಗೆ ಬೆಂಕಿ ನೀಡಲು ಹೋಗಿ ಒಂದು ಮಗು ಮರಣವನ್ನಪ್ಪಿದೆ. ಹಾಗೆ ಕಾಸರಗೋಡಿನಲ್ಲಿ ನೀರಿಗೆ ಬಿದ್ದು ಮೂರು ಮಕ್ಕಳು ತೀರಿ ಹೋದ ವಿಷಯವೂ ನಮಗೆ ಕೇಳಲು ಸಿಕ್ಕಿದೆ .ತುಂಬಾ ಬೇಸರದ ವಿಷಯ .

ಆದ್ದರಿಂದ ನನ್ನ ಪ್ರೀತಿಯ ತಾಯಂದಿರೇ ನೀವು ಮನೆಯೊಳಗೆ ಕುಳಿತಿರಬಹುದು. ಆದರೆ ನಿಮ್ಮ ಮಕ್ಕಳು ಎಲ್ಲಿಗೆ ಹೋಗಿದ್ದಾರೆ ?ಎಂತಹ ಆಟ ಆಡುತ್ತಿದ್ದಾರೆ ಎಂಬುದು ನಿಮ್ಮ ಗಮನದಲ್ಲಿರಬೇಕು .

ಹಾಗೆಯೇ ಇದೀಗ ಉಪವಾಸ ತಿಂಗಳಾದ್ದರಿಂದ ನಿಮ್ಮ ಮಕ್ಕಳಿಗೆ ಆರೋಗ್ಯವಿದ್ದರೆ ಮತ್ತು ಅವರಿಗೆ ಸಾಧ್ಯವಾಗುವುದಾದರೆ ಮಾತ್ರ ಅವರನ್ನು ಉಪವಾಸ ಹಿಡಿಯಲು ಬಿಡಿ . ಅವರು ಹಿಡಿಯದಿದ್ದರೆ ಹಿಡಿಯಲೇಬೇಕೆಂಬ ಹಠ ಬೇಡ .ಇನ್ನು ಹಬ್ಬಕ್ಕೆ ಈಗಾಗಲೇ ಹೊಸಬಟ್ಟೆ ಖರೀದಿಗೆ ಹೋಗಬಾರದೆಂಬ ಸಂದೇಶ ಎಲ್ಲ ಕಡೆಯಲ್ಲಿ ಕೇಳಿಬರುತ್ತಿರುವಾಗ ತಾಯಂದಿರಾದ ನಾವು ಈ ಸಮಯದಿ ಮಕ್ಕಳಿಗೆ ಇದರ ಬಗ್ಗೆ ಅರಿವು ಮೂಡಿಸುವ. ಸರಳ ಹಬ್ಬ ಆಚರಿಸುವ.

ಅಲ್ಲಾಹುವಿನ ಅನುಗ್ರಹ ನಮ್ಮೆಲ್ಲರ ಮೇಲಿರಲಿ. ಆಮೀನ್.

………………

ಆಸಿಫಾ ಇಮ್ರಾನ್( ಉಮ್ಮು ಅಲೀನಾ )

ಅಸ್ಸಲಾಮು ಅಲೈಕುಮ್..

ನಾವು ಈ ಬಾರಿ ಮಸೀದಿಯಲ್ಲಿ ಪ್ರಾರ್ಥನೆ, ವೃತ ಬಿಡುವ ಕಾರ್ಯಕ್ರಮ(ಇಫ್ತಾರ್) ಇಲ್ಲದೆ ಉಪವಾಸ ನಿರ್ವಹಿಸಿದೆವು!!ಯಾತಕ್ಕಾಗಿ!!? ಜಗತ್ ವ್ಯಾಪ್ತಿ ಹರಡಿರುವ ಕೊರೋನ ನಮಗೂ,ನಮ್ಮ ಊರಿನವರಿಗೆ ಬರದಿರಲಿ ಎಂದಲ್ಲವೇ…??

ಅದೇ ರೀತಿ ನಮಗೂ ನಮ್ಮ ಊರಿನವರಿಗೂ ಕೊರೋನ ಬರದಿರಲೆಂದು ಹಬ್ಬದ (ಈದ್) ಶಾಪಿಂಗ್ ಕೂಡ ಮಾಡದಿರೋಣ….
ದಯವಿಟ್ಟು ಎಲ್ಲರೂ ಇದರ ಬಗ್ಗೆ ಎಚ್ಚರವಹಿಸಿ ಮತ್ತು ಸಹಕರಿಸಿ…

ಜಗತ್ತಿನಾದ್ಯಂತ ಪ್ರತೀದಿನ ೧,೫೦,೦೦೦ + ಜನರು ತಿನ್ನಲು ಆಹಾರವಿಲ್ಲದೆ ಹಸಿವಿನಿಂದ ಮರಣ ಹೊಂದುತ್ತಿರುವಾಗ ನಾವು ಯಾವ ಖುಷಿಯಿಂದ ಈದ್ ಶಾಪಿಂಗ್ ಮಾಡುವುದು ??

ರಮ್ಜಾನಿನಲ್ಲಿ ನಾವು ಉಪವಾಸ ಇರಿಸುವ ನೈಜ್ಯ ಉದ್ದೇಶ ಬಡವರ ಹಸಿವಿನ ಸಾರವನ್ನು ಅರಿಯುವುದೂ ಕೂಡ ಆಗಿದೆ ಅದನ್ನು ಈ ಬಾರಿಯಾದರೂ ಪೂರ್ತಿಗೊಳಿಸಲು ಪ್ರಯತ್ನಿಸೋಣ..ನಮ್ಮ ಈದ್ ಶಾಪಿಂಗಿನ ಹಣವನ್ನ ಬಡವರ ಹಸಿವು ತಣಿಸಲು ವ್ಯಯಿಸೋಣ ಇಂಶಾ ಅಲ್ಲಾಹ್…

……………..

ನಸೀಬಾ ಗಡಿಯಾರ್

ಈ ಈದ್ ಹಬ್ಬ ಈ ಜಗತ್ತಿಗೆ ಬಂದೊದಗಿದ ಮಾರಕವಾದ ಸೋಂಕಿನಿಂದ ಜನರು ಮನೆಯೊಳಗಿದ್ದು ಹಲವು ರೀತಿಯ ಕಷ್ಟ ಹಾಗೂ ಹಸಿವನ್ನು ಎದುರಿಸಬೇಕಾಯಿತು. ಜುಮಾ ಇರದ ಶುಕ್ರವಾರ ವನ್ನು ಕಂಡು ಜಗವು ದಿಗ್ಭ್ರಮೆಯಾಯಿತು. ಸಂತಸದಿಂದ ತುಂಬಿದ ರಂಜಾನ್ ಉಪವಾಸವು ಇಂದು ಖುಷಿಯು ಮೌನವಾಯಿತು. ಕುಟುಂಬಸ್ಥರೆಲ್ಲಾ ಸೇರಿ ಮಾಡುವ ಇಫ್ತಾರ್ ಕಾರ್ಯವು ಮರೆಯಾಯಿತು. ಇನ್ನು ಯಾಕೆ ಈ ದೇಹಕೆ ಹೊಸ ಬಟ್ಟೆಯ ಅಲಂಕಾರ.ಈ ಕೈಗಳಿಗೂ ಬೇಡ ಮದರಂಗಿಯ ಚಿತ್ತಾರ. ಎಲ್ಲರನ್ನೂ ಸರ್ವಶಕ್ತನಾದ ಅಲ್ಲಾಹನು ಕಾಪಾಡಿ ರಕ್ಷಿಸಲಿ

………………

  • ಇಶ್ರತ್ ಮಂಚಿಲ

ಈ ಬಾರಿಯ ಉಪವಾಸ ಖುಷಿ ತಂದಿದೆ. ಲಾಕ್ ಡೌನ್ ನಿಂದ ಮಸೀದಿಗಳು ಮುಚ್ಚಲ್ಪಟ್ಟಿರುವುದು ವಿಷಾದನೀಯ.ಆದರೆ ರೋಗ ಹರಡದಂತೆ ಸುರಕ್ಷತೆಯನ್ನು ಪಾಲಿಸದೆ ಬೇರೆ ದಾರಿಯಿಲ್ಲ.ಪತಿ ಮನೆಯಲ್ಲೇ ಇರುವುದರಿಂದ ಆತ್ಮೀಯತೆ ಹೆಚ್ಚಿದೆ..ಪತಿಯೊಂದಿಗೆ ಜಮಾತಿನಲ್ಲಿ ಸಮಯಕ್ಕೆ ಸರಿಯಾಗಿ ನಮಾಝ್ ನಿರ್ವಹಿಸುವ ಅದೃಷ್ಟ ದೊರೆತಿದೆ.ಈ ಬಾರಿಯ ಹಬ್ಬಕ್ಕೆ ಇರುವ ಉಡುಪನ್ನು ತೊಟ್ಟು ಸಂಭ್ರಮಿಸುತ್ತೇವೆ.ದುಡ್ಡು ಕೊಟ್ಟು ರೋಗವನ್ನು ಬರಮಾಡಿಕೊಳ್ಳುವುದು ಬೇಡ.ಅಲ್ಲವೇ???

……………….

  • ಉಮೈರಾಶಿಫ್ ಹಲ್ಯಾರ, ಆತೂರು

ಮೊದಲನೆಯದಾಗಿ ಸ್ರಷ್ಟಿಕರ್ತನಾದ ಅಲ್ಲಾಹನು ಪವಿತ್ರ ರಂಝಾನ್ ಮಾಸದ ಬರ್ಕತ್ತಿನಿಂದ ಜಗತ್ತಿಗೆ ಅಂಟಿದ ಕೊರೋನ ಮಹಾಮಾರಿಯನ್ನು ದೂರೀಕರಿಸಲಿ.. ಆಮೀನ್
ಯಾರು ಎಷ್ಟು ನೊ ಈದ್ ಶೋಪಿಂಗ್ ಅಂದರೂ ಕೂಡ ಸುರಕ್ಷತೆಗೆ ಬೇಕಾಗಿ ಹೊಸ ಉಡುಪುಗಳ ಖರೀದಿಯನ್ನು ಬಹಿಷ್ಕರಿಸಿದರೂ ಅದೊಂದು ಬೇಸರದ ಸಂಗತಿಯೇ.. ಇಫ್ತಾರ್ ಕೂಟ ದಿನ ಅದೆಲ್ಲರೂ ಸೇರುವುದೇ ಪೆರ್ನಾಳಿನ ಅರ್ಧ ಸಂಭ್ರಮ ..ಈ ಲಾಕ್ಡೌನ್ ಕಾರಣ ಅದಿಲ್ಲ ಎಂಬುದು ಬಹಳ ಖೇದಕರ ವಿಷಯವಾದರೂ ಇಫ್ತಾರ್ ಮಾಡಿಸಿದ ಫ್ರತಿಪಲ ಎಲ್ಲರೂ ಸೇರದೆಯು ಕೂಡ ಪಡೆಯಲು ಸಾಧ್ಯವಿಲ್ಲವೆಂದಿಲ್ಲ…
ಅದೆಲ್ಲಕ್ಕಿಂತಲೂ ಈ ಸಲ ಇಫ್ತಾರಿಗೆ ಯಾವುದಕ್ಕೂ ಬೇಡಿಕೆಯಿಡದೆ ಮಾಡಿದ್ದು ತಿಂದು ಸ್ಟೇ ಹೋಮ್ ಸ್ಟೇ ಸೇಫ್ ಅಂತ ಮನೆಯಲ್ಲೇ ಕೂರುವ ಹಬ್ಬಿಯ ಆ ಪಾಪದ ಮನಸ್ಸನ್ನು ಕಾಣುವಾಗ ತುಂಬಾ ಬೇಜಾರು ಅನ್ನಿಸಿದ್ದಲ್ಲ😊

ಕೊರೋನ ಇಂಪ್ಯಾಕ್ಟ್, ವ್ಯವಹಾರದ ನಷ್ಟ ಬಹಳ ಪರಿಣಾಮ ಬೀರಿದರೂ ಕೂಡ ಅವೆಲ್ಲವೂ ಇಹಲೋಕಕ್ಕೆ ಸೀಮಿತವಲ್ಲವೇ..? ದಿನನಿತ್ಯದ ಕೆಲಸಕಾರ್ಯದಲ್ಲಿ ಬ್ಯುಸಿಯಾಗಿ ಇಬಾದತ್ಗಾಗಿ ಸಮಯವಿಲ್ಲದೆ ದುಃಖಿತರಾಗುವ ಅಲ್ಲಾಹನ ಇಷ್ಟದಾತರಿಗೆ ಈ ಲಾಕ್ಡೌನ್ ಕಾರಣವಾಗಿ ಬೇಕಾದಷ್ಟು ಇಬಾದತ್ತ್ ಕರ್ಮಗಳನ್ನು ನಿರ್ವಹಿಸಿ ಅಲ್ಲಾಹನನ್ನು ಸಮೀಪಿಸಲು ಸಮಯವಕಾಶ ಸಿಕ್ಕಿದ್ದು ಅತ್ಯಂತ ಸಂತೋಷದ ವಿಷಯ..
ಎಲ್ಲಾ ಪೆರ್ನಾಳ್ ಹಬ್ಬದಂತೆ ಗೌಜಿ ಗದ್ದಲವಿಲ್ಲದೆ ರಸನಿಮಿಷಗಳ ಕೊರತೆಯಿದ್ದರೂ ಕೂಡ ಇದ್ದದ್ದರಲ್ಲೆ ತೃಪ್ತಿಯಾಗಿ ಈದ್ ಆಚರಿಸಿ ಹ್ಯಾಪಿಯಾಗಿರೋಣ. ನಮ್ಮ ಭಾವೈಕ್ಯತೆಗೆ ಯಾವುಡೇ ರೀತಿಯ ಅಡ್ಡಿ ಬರದಿರಲಿ ಮತ್ತು ಕೋರೊನದಿಂದ ಜಗತ್ತಿಗೆ ಅಲ್ಲಾಹನು ಆದಷ್ಟು ಬೇಗ ಮುಕ್ತಿ ಕೊಡಲಿ ಎಂದು ಆಶಿಸುತ್ತಾ….

………………….

  • ನುಸ್ರಿಯಾ ಅಲ್ತಾಫ್

ಕರೋನಾದಿಂದ ಲಾಕ್‌ಡೌನ್ ಆದ ವಿಷಯದಲ್ಲಿ ಎಲ್ಲರಿಗೂ ಬೇಜಾರಿದೆ… ಉದ್ಯೋಗ ಮತ್ತು ಕೈಯಲ್ಲಿ ಹಣವಿಲ್ಲದೇ ಕಷ್ಟದ ಜೀವನ ಇಂದಿನ ಜನರದ್ದಾಗಿದೆ…

ರಹ್ಮತಿನ ಮತ್ತು ಬರಕತಿನ ಮಾಸವಾದ ರಂಝಾನ್ ಮಾಸವು ಈ ಲಾಕ್ಡೌನ್ ನಡುವೆ ಬಂದಿದೆ… ಉಪವಾಸದ ಖರ್ಚು ಎಲ್ಲರಿಗೂ ತುಸು ಜಾಸ್ತಿನೇ ಎನ್ನಬಹುದು.. ಆದರೂ ಪರಮ ದಯಾಮಯನಾದ ಅಲ್ಲಾಹನು ಬರಕತಿನ ಮಾಸವಾದ ರಮಳಾನಿನಲ್ಲಿ ಕೈ ಬಿಡಲಾರನು ಎನ್ನುವ ವಿಶ್ವಾಸವಿದೆ…
ಒಂದು ರೀತಿಯಲ್ಲಿ ಈ ಲಾಕ್ಡೌನ್ ಒಳ್ಳೆಯದೇ ಎನ್ನಬಹುದು. ಈ ಉಪವಾಸದ ತಿಂಗಳಲ್ಲಿ ಮಸೀದಿಗೆ ಹೋಗಲು ಸಾಧ್ಯವಿಲ್ಲವೆಂಬ ಬೇಸರ ಬಿಟ್ಟರೆ ಉಳಿದೆಲ್ಲಾ
ಪುಣ್ಯ ಕೆಲಸಗಳಿಗೆ ಧಾರಾಳ ಸಮಯವಿದೆ….
ಈ ಸಲದ ಉಪವಾಸವು ತುಂಬಾ ಜನರಿಗೆ ಕಷ್ಟವೆನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ.. ಆದ್ದರಿಂದ ಕೈಯಲ್ಲಿರುವ ಹಣವನ್ನು ಹಾಳು ಮಾಡದೇ ಅದೇ ಹಣದಿಂದ ಒಂದು ಬಡ ಕುಟುಂಬವನ್ನು ಪೋಷಿಸಿದರೆ ಅದರಿಂದ ಸಿಗುವ ಅವರ ಪ್ರಾರ್ಥನೆಗೆ ಸಂತೋಷಕ್ಕೆ ಬೆಲೆ ಕಟ್ಟಲು ಸಾಧ್ಯ ಇಲ್ಲ ಅಲ್ವಾ….

……………

ಡಾ.ಜುವೈರಿಯಾ ಮುಫೀದ

ಈ ಬಾರಿಯ ನನ್ನ ರಂಝಾನ್

ನನಗಂತೂ ಈ ಬಾರಿಯ ಉಪವಾಸ ಬಹಳ ಖುಷಿ ನೀಡಿದೆ.
ಇಷ್ಟು ವರ್ಷ ಕಾಲೇಜು ಅಂತ ಮನೆಯಲ್ಲಿ ಇದ್ದದ್ದೇ ಕಮ್ಮಿ.ಈ ರಮಳಾನ್ ನಲ್ಲಿ ತಾಯಿಗೆ ಸಹಕಾರ ನೀಡಲು ಸಾಧ್ಯವಾಯಿತು.ಮತ್ತು ಸಾಧ್ಯವಾದಷ್ಟು ಕುರ್-ಆನ್ ಪಾರಾಯಣ ಸಮಯಕ್ಕೆ ಸರಿಯಾಗಿ ನಮಸ್ಕಾರ ತಂದೆಯೊಂದಿಗೆ ತರಾವಿಹ್ ಇದೆಲ್ಲವೂ ಈ ಸಮಯದಲ್ಲಿ ಸಾಧ್ಯವಾಯಿತು.
ಅಲ್-ಹಂದುಲಿಲ್ಲಾಹ್ ಮನಸ್ಸಿಗೆ ಬಹಳ ಸಂತೋಷವಾಗುತ್ತಿದೆ.ಈ ವರ್ಷದ ಈದ್ ಹಬ್ಬಕ್ಕೆ ಹೊಸ ಬಟ್ಟೆ ಖರೀದಿಸಲು ಇಲ್ಲವಾದರು ಇರುವುದರಲ್ಲಿ ಒಳ್ಳೆಯ ಬಟ್ಟೆ ಹಾಕಿ ಖುಷಿ ಪಡುವೆ.

ಬೇಸರವಿದೆ ಕೆಲವು ವಿಷಯಗಳಲ್ಲಿ ಮಸೀದಿಯಲ್ಲಿ ಜುಮ್ಮಾ ನಮಸ್ಕಾರಗಲಿಲ್ಲ.ರಮಳಾನ್ ವೇಳೆಯಲ್ಲಿ ಬೆಳಿಗ್ಗೆ ಹೊತ್ತಿನಲ್ಲಿ ಕೇಳುತ್ತಿದ್ದ ಔರಾದುಗಳು ಕೇಳುತ್ತಿಲ್ಲ. ಈದ್ ನಮಾಜ್ ಗಲಿಲ್ಲ.ಇದೆಲ್ಲವೂ ದುಃಖ ಭರಿಸುತ್ತಿದೆ.ಮನೆಯಿಂದ ತಂದೆ ಮಸೀದಿಯತ್ತ ಹೆಜ್ಜೆ ಹಾಕುವುದೇ ಒಂದು ಪೆರ್ನಾಲ್ ಆಗಿತ್ತು. ತರಾವಿಹ್ ನಾವು ಮನೆಯಲ್ಲೇ ನಿರ್ವಹಿಸಿದರೆ ತಂದೆಯ ತರಾವಿಹ್ ಮಸ್ಜಿದ್ ನಲ್ಲಿ.
ಕೆಲವರಿಗೆ ಈ ಸಮಯದಲ್ಲೂ ಸಂಭ್ರಮದಿಂದ ಈದ್ ಆಚರಿಸಬೇಕಂತೆ. ಬಟ್ಟೆ ಖರೀದಿಸಬೇಕಂತೆ.

ಪ್ರೀತಿಯ ಸ್ನೇಹಿತರೇ ಅಲ್ಲಾಹನ ಪುಣ್ಯ ಭವನ ಬಾಗಿಲು ಮುಚ್ಚಿದೆ ನೆನಪಿಡಿ ಪವಿತ್ರವಾದ ಈ ತಿಂಗಳಿನಲ್ಲಿ ಮಸೀದಿಗೆ ತೆರಳಲು ಸಾಧ್ಯವಾಗದೇ ಮನೆಯಲ್ಲೇ ನಮಾಜ್ ನಿರತರಾಗಿದ್ದಾರೆ.
ಇಂತಹ ಸಮಯದಲ್ಲಿ ಒಂದು ಬಟ್ಟೆ ಖರೀದಿ ನಮಗೆ ಬೇಕೇ.
ಇದ್ದುದರಲ್ಲಿ ಸಂತೋಷ ಪಡೋಣ.
ಆ ಹೊಸ ಉಡುಪು ಪಡೆಯುವ ಹಣದಿಂದ ಒಂದು ಬಡ ಕುಟುಂಬಕ್ಕೆ ದಾನ ನೀಡುವ ಅಲ್ಲಾಹು ನಮಗೆ ಕೈರ್ ನೀಡಲಿ.

ಈ ಮಹಾಮಾರಿ ಕೊರೊನಾ ಆದಷ್ಟು ಬೇಗ ನಮ್ಮ ಊರಿಂದ ಈ ಲೋಕದಿಂದಲೇ ದೂರವಾಗಲಿ.
ಮತ್ತೆ ಜನ ಜೀವನ ಸರಿ ಹೊಂದಲಿ.
ಅಲ್ಲಾಹನ ಭವನ ಆದಷ್ಟು ಬೇಗ ಬಾಗಿಲು ತೆರೆಯಲಿ.
ಅಲ್ಲಾಹನು ನಮ್ಮೆಲ್ಲರನ್ನು ರಕ್ಷಿಸಲಿ(ಆಮೀನ್)

LEAVE A REPLY

Please enter your comment!
Please enter your name here