• ಚರಣ್ ಐವರ್ನಾಡು.

ನನ್ನ ಸಮಕಾಲೀನ ಯುವಕರಿಗೆ ಅಖಿಲ ಭಾರತ ಮಟ್ಟದ ನಾಯಕರಷ್ಟು ತಮ್ಮ ನೆಲದ ವೀರರು ಮುಖ್ಯ ಎನಿಸುವುದಿಲ್ಲ. ಶಿವಾಜಿಗೆ ಇರುವ ಖ್ಯಾತಿ ನಮ್ಮವರಿಗೆ ನಮ್ಮ ನೆಲದಲ್ಲಿಯೇ ಇಲ್ಲ! ಎಪ್ರಿಲ್ 05 1837 – ಭಾರತದ ವ್ಯವಸ್ಥಿತ ಸ್ವಾತಂತ್ರ್ಯ ಸಂಗ್ರಾಮವೊಂದರ ವೀರಾಗ್ರಣಿಗಳಾದ ಬಂಗ ಅರಸ ಮೊದಲಾದ ಕ್ರಾಂತಿ ವೀರರ ಬಲಿದಾನದ ಪುಣ್ಯ ದಿನವಾಗಿದೆ. ಅಂದು ನಮ್ಮ ಹಿರಿಯರು ಬಿಕರ್ಣಕಟ್ಟೆಯ ಗಲ್ಲಿಗೆ ಹೆಮ್ಮೆಯಿಂದ ಶಿರವೊಪ್ಪಿಸಿದ ದಿನವಾಗಿದೆ ಅದು.

1837 ನೆ ಇಸವಿ ಎಪ್ರಿಲ್ ತಿಂಗಳಲ್ಲಿ ಕಾರ್ಲ್ ಮಾರ್ಕ್ಸ್ ನ್ಯೂಯಾರ್ಕ್ ಟೈಮ್ಸ್ ಗೆ ಬರೆದ ಲೇಖನವೊOದರಲ್ಲಿ ‘ಸೂರ್ಯ ಮುಳುಗದ ಬ್ರಿಟೀಷ ಸಾಮ್ರಾಜ್ಯಶಾಹಿಯ ಪತನ ಭಾರತದ ಹಳ್ಳಿಯೊಂದರಿಂದ ಆರಂಭವಾಗಿದೆ’ ಎಂದು ಬರೆದಿದ್ದ. ಅವನು ಬರೆದದ್ದು ಇದೇ ಸಂಗ್ರಾಮದ ಬಗ್ಗೆ ಎಂಬ ಕುರಿತು ನಮಗೆ ಅರಿವಿಲ್ಲ.

ಇತಿಹಾಸ ಹೆಚ್ಚು ರಾಜಕೀಯಗೊಂಡಿರುವ ಶಿಸ್ತು. ಒಂದು ಮತೀಯ ಸಂಘಟನೆಗೆ, ಪಕ್ಷಕ್ಕೆ ತನ್ನ ನಿಲುವಿಗೆ ಬೇಕಾದ ಇತಿಹಾಸದ ಅಂಶಗಳನ್ನು ತೆಗೆದುಕೊಂಡು ಪ್ರಚಾರ ಮಾಡುತ್ತದೆ. ಹೆಚ್ಚಿನ ಭಾಗಗಳನ್ನು ತಿರುಚುತ್ತಾರೆ. ಹಾಗಾಗಿ ಕೋಮು ಸಂಘರ್ಷಗಳ ಇತಿಹಾಸ ನಮಗೆ ಮುಖ್ಯವಾಗುವುದು ಹೊರತು ಕಟ್ಟಿದ ಚರಿತ್ರೆ ಅಲ್ಲ.

ತುಳುನಾಡಿನ ಮಂದಿಗೆ ಶಿವಾಜಿ ಮೊದಲಾದವರ ಬಗ್ಗೆ ಗೊತ್ತಿದಷ್ಟು ಕಲ್ಯಾಣಪ್ಪ, ಕೆದಂಬಾಡಿ ರಾಮೇಗೌಡ, ಗುಡ್ಡೆಮನೆ ಅಪ್ಪಯ್ಯ ಗೌಡ, ಕೋಲ್ಚಾರು ಕೂಸ……..ಲಕ್ಷ್ಮಪ್ಪ ಬಂಗರಸ, ಚೌಟರಸ ರುಬೀರಣ್ಣ ಬಂಟ, ಸುಬ್ರಾಯ ಹೆಗ್ಡೆ… ಎಷ್ಟು ಗೊತ್ತಿದೆ. ತಮ್ಮ ಸುತ್ತಲಿನ ಪ್ರದೇಶದ ಇತಿಹಾಸ ಎಷ್ಟು ತಿಳಿದಿದೆ ಎಂಬ ಪ್ರಶ್ನೆ ಹಾಕಿಕೊಳ್ಳಬೇಕು.

ಐದು ವರ್ಷಗಳ ಹಿಂದೆ ಬರೆದಿದ್ದೆ. ಅದರ ಟಿಪ್ಪಣಿ ಇಲ್ಲಿದೆ…

ಬಿದರೂರಿನ ಧೋಂಡಿಯ ವಾಘ, ಐಗೂರಿನ ವೆಂಕಟಾದ್ರಿ ನಾಯಕ(1802), ಕಿತ್ತೂರಿನ ಚೆನ್ನಮ್ಮಾಜಿ(1824), ಸಂಗೊಳ್ಳಿ ರಾಯಣ್ಣ, ಕೊಡಗಿನ ಅಪರಂಪಾರ(1835) ಕಲ್ಯಾಣಸ್ವಾಮಿ(1837), ಗುಡ್ಡೆಮನೆ ಅಪ್ಪಯ್ಯ, ಕೆದಂಬಾಡಿ ರಾಮಗೌಡ, ಕುಡಿಯ ಸಹೋದರರು………ಹೀಗೆ ಅಖಿಲ ಭಾರತ ಮಟ್ಟದ ಇತಿಹಾಸದ ಪುಟಗಳಲ್ಲಿ ದಾಖಲಾಗದ ಅನೇಕ ವೀರರು 1857ಕ್ಕೂ ಹಿಂದೆಯೇ ರಕ್ತ ತರ್ಪಣ ಗೈದಿದ್ದರು. ಅದರೆ ಅವರ ಬಗೆಗೆ ಅವರದೇ ನೆಲದ ನಮಗೆ ಅರಿವಿಲ್ಲದೇ ಇರುವುದು ದುರಂತ ಸತ್ಯ!

1834ರ ವರೆಗೆ ಅಮರಸುಳ್ಯ ಕೊಡಗಿನ ಹಾಲೇರಿಯ ಲಿಂಗಾಯಿತ ಅರಸರ ಸುಪರ್ದಿಯಲ್ಲಿತ್ತು. ಕೊನೆಯ ಅರಸ ಚಿಕವೀರರಾಜೇಂದ್ರನು ಸ್ತ್ರೀ ಸುಖ ಲೋಲುಪನಾಗಿ ಕೊಡಗಿನ ಜನ ಅವನನ್ನು ದ್ವೇಷಿಸಲಾರಂಬಿಸಿದರು. ಆಡಳಿತ ಹದಗೆಟ್ಟಾಗ ಆಂಗ್ಲರು 1834ರ ಎಪ್ರಿಲ್ ತಿಂಗಳಲ್ಲಿ ಮೈಸೂರಿನ ಕರ್ನಲ್ ಫ್ರೇಸರ್ ನ ನೇತೃತ್ವದಲ್ಲಿ ಕೊಡಗನ್ನು ವಶಪಡಿಸಿಕೊಳ್ಳಲು ಮುಂದಾಗುತ್ತಾರೆ. ಎಪ್ರಿಲ್ 6ಕ್ಕೆ ಕೋಟೆ ಪ್ರೇಸರನ ವಶವಾಗುತ್ತದೆ. ಅರಸ ನಾಲ್ಕುನಾಡಿನ ಅರಮನೆಗೆ ಹೆದರಿ ಪಲಾಯನ ಮಾಡುತ್ತಾನೆ. ದಿವಾನ್ ಲಕ್ಷ್ಮೀನಾರಾಯಣ, ಬೋಪು ಶರಣಾಗತರಾಗುವ ಸಲಹೆ ನೀಡುತ್ತಾರೆ. ಎ.10ಕ್ಕೆ ಮಡಿಕೇರಿಯಲ್ಲಿ ಶರಣಾದ ದೊರೆಯನ್ನು ಪ್ರೇಸರ್ ಎ.24ಕ್ಕೆ ಬೆಂಗಳೂರಿಗೆ ಕಳುಹಿಸಿದ. ಮುಂದೆ ಮಗಳ ಸಹಿತ ವಾರಣಾಸಿ ಅಲ್ಲಿಂದ ಲಂಡನ್ ಗೆ ಕಳಿಸಲಾಗುತ್ತದೆ. 1859 ಸೆ.24 ರಂದು ಖಾಯಿಲೆಯಿಂದಾಗಿ ಲಂಡನ್ ನಲ್ಲೇ ಮರಣ ಹೊಂದುತ್ತಾನೆ.

1833ರಲ್ಲಿ ಮಂಜರಾಬಾದ್ ಬಾಗಗಳಲ್ಲಿ ಸ್ವಾಮಿ ಅಪರಂಪಾರ ಓರ್ವ ಜಂಗಮ ಕಾಣಿಸಿಕೊಳ್ಳುತ್ತಾನೆ. ಕೊಡಗಿನ ಜನ ಇವನನ್ನು ಹಿಂದಿನ ಅರಸ ಲಿಂಗರಾಜೇಂದ್ರನ ಅಣ್ಣ ಅಪ್ಪಾಜಿಯ ಹಿರಿಮಗ ವೀರಪ್ಪನೆಂದು ಭಾವಿಸುತ್ತಾರೆ. ಆದರೆ ಇವನು ತುಮಕೂರಿನ ಮಾಯಸಂದ್ರದ ಕಡಗನೂರಿನವ ಎನ್ನಲಾಗಿದೆ. ನಿರಂಜನರ ಕಾದಂಬರಿ ‘ಸ್ವಾಮಿ ಅಪರಂಪಾರ’ ಇವನ ಬಗ್ಗೆಯೇ.

ಆಂಗ್ಲರು ಹಣದ ಮೂಲಕ ಕಂದಾಯ ಸಲ್ಲಿಸಲು ಆಜ್ಞಾಪಿಸಿದಾಗ ವಸ್ತುರೂಪದಲ್ಲಿ ಕಂದಾಯವನ್ನು ಪಾವತಿಸುತ್ತಿದ್ದ ಕೊಡಗರಿಗೆ ಅಸಮದಾನ ಉಂಟಾಗುತ್ತದೆ. ರಾಜ ಪರದೇಶಿಯಾದ ಮೇಲೆ ಸೂಕ್ತ ನಾಯಕತ್ವ ಇಲ್ಲದ್ದರಿಂದ ಅಪರಂಪಾರನನ್ನೇ ತಮ್ಮ ನಾಯಕನನ್ನಾಗಿ ಸ್ವೀಕರಿಸುತ್ತಾರೆ. ಇವನು ಸೋಮವಾರಪೇಟೆ, ಹಾರಂಗಿ, ಹಾಲೇರಿ, ಹೊಸಕೋಟೆ ಮೊದಲಾದೆಡೆ ಆಂಗ್ಲರ ವಿರುದ್ಧ ಜನ ಸಂಘಟನೆ ನಡೆಸಿ ಸುಬ್ರಹ್ಮಣ್ಯಕ್ಕೆ ಬರುತ್ತಾನೆ. ಇವನನ್ನು ರಾಜವಂಶಸ್ಥನೆಂದು ಕೂಜುಗೋಡಿನ ಅಪ್ಪಯ್ಯ ಗೌಡ ಹಾಗೂ ಮಲ್ಲಪ್ಪ ಗೌಡರು ಸತ್ಕರಿಸಿ ಕೊಡಗಿನಿಂದ ಬ್ರಿಟಿಷರನ್ನು ಓಡಿಸುವ ಯೋಜನೆ ಹಾಕಿಕೊಳ್ಳುತ್ತಾರೆ. ಸುಮಾರು ಸಾವಿರ ಮಂದಿ ಸೇನೆಯೊಡನೆ ಮಡಿಕೇರಿ ಕಡೆಗೆ ನಡೆಯುತ್ತದೆ. ಆದರೆ ಅಪರಂಪಾರ ಗೌಡಳ್ಳಿ ತಲುಪುವ ಮುನ್ನವೇ ಮೋಸದಿಂದ ಸೆರೆಯಾಗುತ್ತಾನೆ. ಕೂಜುಗೋಡು ಸಹೋದರರು ಪಾರಾಗುತ್ತಾರೆ. ಅಪರಂಪಾರನನ್ನು ತಿರುಚಿನಾಪಳ್ಳಿಯ ಜೈಲಿಗೆ ಕಳುಹಿಸಲಾಯಿತು. 1869ರಲ್ಲಿ ಬಿಡುಗಡೆಯಾಗಿ 1870ರಲ್ಲಿ ಶ್ರೀರಂಗಪಟ್ಟಣದಲ್ಲಿ ನಿಧನ ಹೊಂದಿದ.

ಅಪರಂಪಾರನ ಆಪ್ತರಲ್ಲಿ ಓರ್ವನಾದ ಕಲ್ಯಾಣ ಬಸವ-ಕಲ್ಯಾಣಪ್ಪ ತನ್ನನ್ನು ಅಪ್ಪಾಜಿಯ ದ್ವಿತೀಯ ಪುತ್ರನೆಂದು ಕರೆಸಿಕೊಂಡು ಕಲ್ಯಾಣಸ್ವಾಮಿ ಎಂದು ಕರೆಸಿಕೊಂಡು ಹಾಲೇರಿಯ ಗದ್ದುಗೆ ಏರಲು ಜನ ಬೆಂಬಲ ಪಡೆಯುತ್ತಾನೆ. ಆದರೆ ದಿವಾನ ಚೆಪ್ಪುಡಿರ ಪೊನ್ನಪ್ಪ ಮಡಿಕೇರಿಯಲ್ಲಿ ಆಂಗ್ಲ ಅಧಿಕಾರಿ ಕ್ಯಾಪ್ಟನ್ ಲೀಹಾರ್ಡಿಯ ಮುಂದೆ ಕಲ್ಯಾಣಪ್ಪನನ್ನು ಹಾಲೇರಿ ರಾಜವಂಶಸ್ಥನಲ್ಲ ಎಂದು ಸಾಬೀತುಪಡಿಸಿದ. ಆದರೂ ಜನ ಬೆಂಬಲ ಕಲ್ಯಾಣಪ್ಪನಿಗೆ ಕಡಿಮೆಯಾಗಲಿಲ್ಲ. ಏಳುಸಾವಿರ ಸೀಮೆಯ ಹುಲಿ ಕಡಿದ ನಂಜಯ್ಯ, ಗುಡ್ಡೆಮನೆ ಅಪ್ಪಯ್ಯ ಗೌಡ ಇವನಿಗೆ ಬೆಂಗಾವಲಿಗೆ ನಿಂತರು. ಸುಳ್ಯ ಕೆದಂಬಾಡಿ ರಾಮ ಗೌಡ, ಕೂಜುಗೋಡು ಸಹೋದರರು, ಪೆರಾಜೆ ಊಕಣ್ಣ ಬಂಟ, ಕುಂಬ್ಳೆಯ ಅರಸ ಸುಬ್ರಾಯ ಹೆಗ್ಡೆ, ಧರ್ಮಸ್ಥಳದ ಹೆಗ್ಡೆ ಮೊದಲಾದವರು ಬೆಂಬಲ ಸೂಚಿಸಿದರು.

ತನ್ನ ಕಾರ್ಯವನ್ನು ಕಲ್ಯಾಣಸ್ವಾಮಿ ದಕ್ಷಿಣ ಕನ್ನಡಕ್ಕೆ ವಿಸ್ತರಿಸಲು ತೀರ್ಮಾನಿಸಿದರೂ ಅವನನ್ನು ಸೆರೆ ಹಿಡಿಯುವ ಆಂಗ್ಲರ ಯೋಜನೆಯನ್ನು ಅರಿತು ಕೊಡ್ಲಿಪೇಟೆಯ ಮೂಲಕ ವೈನಾಡಿನ ಕಡೆ ಪ್ರಯಾಣ ಬೆಳೆಸುತ್ತಾನೆ. ಆದರೆ ಲೀಹಾರ್ಡಿ ಮಲಬಾರಿನ ಸೈನಿಕರ ನೆರವಿನಿಂದ ಇವನನ್ನು 1837ರಲ್ಲಿ ಸೆರೆ ಹಿಡಿದು ಮೈಸೂರಿನ ಸೆರೆಮನೆಗೆ ತಳ್ಳುತ್ತಾನೆ. ಕ್ರಾಂತಿಯ ಕಿಡಿಯೊಂದು ಆರುತ್ತದೆ…..!

ಬಂದನದ ವಿಚಾರ ಹುಲಿಕಡಿದ ನಂಜಯ್ಯನಿಗೆ ಮಾತ್ರ ಗೊತ್ತಿತ್ತು. ಸಂಘಟನೆ ಉಳಿಸಿಕೊಳ್ಳುವುದಕ್ಕಾಗಿ ಇದನ್ನು ಗುಪ್ತವಾಗಿಡಲಾಗುತ್ತದೆ. ಕೆದಂಬಾಡಿ ರಾಮಗೌಡನೊಂದಿಗೆ ಚರ್ಚಿಸಿ ಅಪರಂಪಾರನ ಸಹಾಯಕ ಹಾಗೂ ಕಲ್ಯಾಣ ಸ್ವಾಮಿಯ ಆಪ್ತ ಪುಟ್ಟ ಬಸವನನ್ನು ಕಲ್ಯಾಣಪ್ಪನೆಂದು ಬಿಂಬಿಸಲಾಯ್ತು. ಇವನಿಗೆ ಕೊಡಗಿನ ಪಟ್ಟವನ್ನು ಕಟ್ಟಲು ಜನರು ಹಂಬಲಿಸಿದ್ದರು. ಜನರು ಬಸವನನ್ನೇ ಕಲ್ಯಾಣಪ್ಪ ಎಂದು ನಂಬಿದ್ದರು!

ಅಮರಸುಳ್ಯವನ್ನು ಕೊಡಗಿನಿಂದ ಬೇರ್ಪಡಿಸಿ ನಗದು ರೂಪದ ಕಂದಾಯವನ್ನು ಹೇರಿದ್ದರಿಂದ ಸುಳ್ಯ ಮಾಗಣೆಯವರಿಗೆ ಆಂಗ್ಲರ ಮೇಲೆ ಅಸಾಧ್ಯ ಕೋಪವಿತ್ತು. ಇದರಿಂದ ನಂಜಯ್ಯ ಹಾಗೂ ಕೆದಂಬಾಡಿ ರಾಮ ಗೌಡ 1837 ಎ.6 ರಂದು ಇಲ್ಲಿಂದಲೇ ದಂಗೆ ಆರಂಭಿಸಲು ತೀರ್ಮಾನಿಸುತ್ತಾರೆ. ಆದರೆ ಕೊಡಗಿನ ದಿವಾನ ಲಕ್ಷ್ಮೀನಾರಾಯಣನ ಸೋದರ ಅಟ್ಲೂರು ರಾಮಪ್ಪಯ್ಯನ ಕುತಂತ್ರ ಅರಿತು ಮುಂಚೆಯೇ ದಂಗೆ ಅರಂಭಿಸಲಾಯ್ತು. ಇವನು ಅಮರಸುಳ್ಯದ ಅಮಲ್ದಾರನಾಗಿದ್ದು ಆಂಗ್ಲರ ಪರವಾಗಿ ಅನಾಚಾರಗಳನ್ನು ನಡೆಸುತ್ತಿದ್ದ. ಒಂದು ಬಾರಿ ಕೆದಂಬಾಡಿ ರಾಮಗೌಡನನ್ನು ಅವಮಾನಿಸಿದ್ದರಿಂದ ಗೌಡನ ಕಡೆಯವರು ಕಾಂತಮಂಗಲದಲ್ಲಿ ಅಡ್ಡಗಟ್ಟಿ ಕತ್ತಿಯಿಂದ ಕಡಿದರು. ಆದರೆ ಅವನ ಕುದುರೆಯ ವೇಗದ ಓಟ ಅವನನ್ನು ಉಳಿಸಿತ್ತು. ಆದರೆ ಮದುವೆ ಗದ್ದೆಗೆ ಬಂದಾಗ ಅವನನ್ನು ಕೊಚ್ಚಿ ಕೊಲ್ಲುವುದರೊಂದಿಗೆ ಕ್ರಾಂತಿಯ ಕಹಳೆ ಊದಲಾಯಿತು.

ಕಲ್ಯಾಣಸ್ವಾಮಿಯೊಂದಿಗೆ ನಂಜಯ್ಯ, ಕೆದಂಬಾಡಿ ರಾಮ ಗೌಡ, ಚೆಟ್ಟಿ-ಕುರ್ತು ಕುಡಿಯರು, ಕರಡಿಮಲೆ ಅಣ್ಣಿಗೌಡ, ಪೆರಾಜೆ ಊಕಣ್ಣ ಬಂಟ, ಕರಣಿಕ ಕೃಷ್ಣಯ್ಯ, ಕರಣಿಕ ಸುಬ್ಬಯ್ಯ, ಕೋಲ್ಚಾರು ಕೂಸಪ್ಪ ಗೌಡ ಮೊದಲಾದವರ ಪಡೆ 1837ರ ಮಾರ್ಚ್ ನಲ್ಲಿ ಬೆಳ್ಳಾರೆಗೆ ಲಗ್ಗೆ ಇಟ್ಟಿತು. ಇಲ್ಲಿಂದ ಕಲ್ಯಾಣಪ್ಪ(ಪುಟ್ಟ ಬಸವ) ಮಾರ್ಚ್ 30ರಂದು ಕೊಡಗಿಗೆ ನಿರೂಪವೊಂದನ್ನು ಕಳುಹಿಸುತ್ತಾನೆ. ಇಲ್ಲೇ ಪ್ರಸಿದ್ಧ ಇಸ್ತಿಹಾರ್ ಪ್ರಕಟಿಸಿದ. ಅಮರ ಸುಳ್ಯ ಪುನಃ ಕೊಡಗಿನ ಸಂಸ್ಥಾನಕ್ಕೆ ಸೇರಿಸುವುದು; ಕಂದಾಯ ಮನ್ನಾ; ತಂಬಾಕು, ಉಪ್ಪಿನ ಮೇಲಿನ ತೆರಿಗೆ ರದ್ದು. ಇದರಿಂದ ಪಂಜ, ಪುತ್ತೂರು, ಕಡಬ, ವಿಟ್ಲ ಸುಲಭದಲ್ಲಿ ಕೈವಶವಾದರೆ ವಿಟ್ಲದ ಅರಸು, ನಂದಾವರದ ಲಕ್ಷ್ಮಪ್ಪ ಬಂಗರಸ ಮೊದಲಾದವರು ಕಲ್ಯಾಣಪ್ಪನ ಪಡೆಯನ್ನು ಸೇರಿಕೊಂಡರು. ಧರ್ಮಸ್ಥಳದ ಹೆಗ್ಡೆ ಪಿರಂಗಿಗಳನ್ನು ಕಳುಹಿಸಿದರು. ಪಡೆ ಯಾವುದೇ ಸಮಸ್ಯೆ ಇಲ್ಲದೆ ಮಂಗಳೂರು ಸೇರಿ ಬಾವುಟಗುಡ್ಡೆಯನ್ನು, ಖಜಾನೆ, ಜೈಲು, ಶಸ್ತ್ರಗಳನ್ನು ವಶಮಾಡಿಕೊಂಡು ಕ್ರಾಂತಿಯ ಬಾವುಟವನ್ನು ಹಾರಿಸಿದರು. ಹೆದರಿ ಪಲಾಯನ ಮಾಡುತ್ತಿದ್ದ ಬ್ರಿಟೀಷರ ಕೈಗೆ ದುರ್ದೈವದಿಂದ ಸಿಕ್ಕಿದ ಕುಂಬಳೆ ಸುಬ್ರಾಯ ಹೆಗ್ಗಡೆ ಹಾಗೂ ಪಡೆಯನ್ನು ನೇತ್ರಾವತಿ ನದಿಯಲ್ಲಿ ಪಿರಂಗಿ ಹಾರಿಸಿ ಸಾಯಿಸಲಾಯಿತು.

ಕಣ್ಣಾನೂರಿನಿಂದ ಆಂಗ್ಲರ ಪಿರಂಗಿ ಶಸ್ತ್ರ ಸಜ್ಜಿತ ಪಡೆ ಮಂಗಳೂರಿಗೆ ಮೂರು ಹಡಗುಗಳಲ್ಲಿ ಬಂದು ರಾತ್ರೋರಾತ್ರೆ ಧಾಳಿ ಇಟ್ಟಿತು. ಕೆಲವರು ಸೆರೆ ಸಿಕ್ಕರೆ ಅಪ್ಪಯ್ಯ ಗೌಡ, ಬಂಗರಸ, ರಾಮಗೌಡ, ಕುಕ್ಕನೂರು ಚೆನ್ನಯ್ಯ, ಕಲ್ಯಾಣಪ್ಪ, ಕುಡಿಯರು, ನಾಲ್ಕು ನಾಡಿನ ಉತ್ತ ಇತರರು ತಪ್ಪಿಸಿಕೊಂಡರು. ಕಲ್ಯಾಣಪ್ಪನಾಗಿದ್ದ ಪುಟ್ಟ ಬಸವನ ತಲೆಗೆ ಆಗಲೇ ಹತ್ತು ಸಾವಿರ ರುಪಾಯಿಗಳ ಬೆಲೆ ಕಟ್ಟಲಾಗಿತ್ತು. ಕೊಡ್ಲಿಪೇಟೆಗೆ ಬಂದಾಗ ಇವನ ಮಾವನೇ ಕರಿ ಬಸವಯ್ಯ ದುಡ್ಡಿನ ಆಸೆಗೆ ಸುಬೇದಾರ ಮಾದಯ್ಯನಿಗೆ ಹಿಡಿದುಕೊಟ್ಟ. 1837 ಮೇ 15ರಂದು ಕ್ಯಾ.ಲೀಹಾರ್ಡಿ ಮಡಿಕೇರಿಯಲ್ಲಿ ಬಸವನನ್ನು ವಿಚಾರಿಸಿ ಗಲ್ಲಿಗೇರಿಸಿದ!

ಲಕ್ಷ್ಮಪ್ಪ ಬಂಗರಸ, ವಿಟ್ಲದ ಅರಸ ಮೊದಲಾದವರನ್ನು ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಬಹಿರಂಗವಾಗಿ ಗಲ್ಲಿಗೇರಿಸಲಾಯ್ತು. ಕುಡಿಯರು, ಪೆರಾಜೆ ಕೃಷ್ಣಯ್ಯ ಮೊದಲಾದವರನ್ನು ಸಿಂಗಾಪುರಕ್ಕೆ ಕಳುಹಿಸಲಾಯ್ತು. ನಾಯಕ ಗುಡ್ಡೆ ಮನೆ ಅಪ್ಪಯ್ಯನನ್ನು 1837 ಅಕ್ಟೋಬರ್ 31 ರಂದು ಮಡಿಕೇರಿಯ ಕೋಟೆಯ ಎದುರು ಬಹಿರಂಗವಾಗಿ ಗಲ್ಲಿಗೇರಿಸಲಾಯ್ತು.

ಇದೊಂದು ವಿಫಲ ದಂಗೆ ಎನಿಸಬಹುದು. ಆದರೆ ಎಂದೂ ವಿಪಲವಾಗಲಿಲ್ಲ! ಅನೇಕ ಮಂದಿ ಆಂಗ್ಲರ ಪರವಾಗಿ ನಿಂತು ರಾಜದ್ರೋಹಿ ಕಾರ್ಯವೆಸಗಿದ್ದರು. ಬೋಪು ದಿವಾನ, ಅಟ್ಲೂರು ರಾಮಪ್ಪಯ್ಯನಂತಹ ಅನೇಕ ದ್ರೋಹಿಗಳು ದಂಗೆ ವ್ಯವಸ್ಥೆಯನ್ನು ಕೆಡಿಸಿದ್ದರು. ಕೊಡವರೂ ದಂಗೆಯ ಸಂದರ್ಭದಲ್ಲಿ ಸುಮ್ಮನೆ ಕುಳಿತರು, ಆಂಗ್ಲರಿಗೆ ದಂಗೆಯನ್ನು ಅಡಗಿಸುವಲ್ಲಿ ನೆರವಾದರು. ದಂಗೆಯನ್ನು ದರೋಡೆ ಎಂಬುದಾಗಿ ಬಿಂಬಿಸಿ ಕಲ್ಯಾಣಪ್ಪನ ಕಾಟಕಾಯಿ-ಸುಲಿಗೆ ಎಂದರು. ಆದರೆ ಇದನ್ನು ಖ್ಯಾತ ಕಾದಂಬರಿಕಾರ ನಿರಂಜನರು (ಕುಳ್ಕುಂದ ಶಿವರಾಯ)ರು ಸಕಾರಣವಾಗಿಯೆ ನಿರಾಕರಿಸಿದರು.

ಉಳುವಾರು ರಾಮಯ್ಯ ಗೌಡ, ಕುಡೆಕಲ್ಲು ಗುಡ್ಡಜ್ಜ, ತಿಮ್ಮಯ್ಯ, ಸುಳ್ಯಕೋಡಿ ಕೃಷ್ಣಪ್ಪ, ಕಳಗಿ ಅಣ್ಣು, ಕುಕ್ಕೆಟ್ಟಿ ಚೆನ್ನ,,,,, ಮುಂತಾದ ಗೌಡರು ದಂಗೆಯಲ್ಲಿದ್ದರಿಂದ ಕೆನರ ಜಿಲ್ಲೆಯ ಕಲೆಕ್ಟರ್ ಎಂ.ಲೆವಿನ್, ಮೇಜರ್ ಜನರಲ್ ವಿಗೋರ್(Vigourheux) ಹಾಗೂ ಚಾರ್ಲ್ಸ್ ರಾಬರ್ಟ್ ಕಾಟನ್ ಅವರಿಗೆ ಒಪ್ಪಿಸಿದ ವರದಿ ಹಾಗೂ ಜಿ.ರಿಕ್ಟರ್ ಕೊಡಗು ಗಜೇಟಿಯರ್ ನಲ್ಲಿ” ಕೊಡಗು ಬಂಡಾಯವೆಂದು ಕರೆಯಲ್ಪಡುವುದು, ನಿಜವಾಗಿಯೂ ಹೇಳುವುದಾದರೆ ಗೌಡರ ಮೇಲ್ಬೀಳುವಿಕೆ” ಎಂದಿದೆ.(ಎನ್.ಎಸ್.ದೇವಿಪ್ರಸಾದ್ ಸಂಪಾಜೆ:ಅಮರ ಸುಳ್ಯದ ದಂಗೆ) ಇಲ್ಲಿ ಪೆರಾಜೆಯ ಬೀರಣ್ಣ ರೈ, ಮುಳ್ಯ ಈಶ್ವರ ಸೋಮಾಯಾಜಿ, ಚೆಟ್ಟಿ-ಕುರ್ತು ಕುಡಿಯರಂತಹ ಅನೇಕ ಭಿನ್ನ ಸಮುದಾಯದವರು ಹೋರಾಡಿದ್ದಾರೆ.
ದಂಗೆಯಲ್ಲಿ ಆಂಗ್ಲರಿಗೆ ನೆರವಾದವರಿಗೆ ಕೋವಿ, ಕುದುರೆ, ಬಂಗಾರದ ಪದಕಗಳನ್ನು ನೀಡಲಾಗಿತ್ತು.

ಈ ಪದಕದ ಒಂದು ಬದಿಯಲ್ಲಿ FOR DISTINGUISHED CONDUCT AND LOYALTY OF THE BRITISH GOVERNMENT,Coorg 1837

ಇನ್ನೊಂದು ಬದಿಯಲ್ಲಿ “ಸಂನ್ 1837ನೇ ಯೆಪ್ರಿಲ್ ಮೇ ತಿಂಗಳಲ್ಲಿ (ಶರಾರದ್ರುದ !?!?) ಬಯಸುವ ವಿಚಾರದಲ್ಲು ಕುಂಪಣಿ ಸರಕಾರಕ್ಕೆ ನಂಮ(ತಪೂಲಾಲ್?!?!) ಮಾಡಿದ ಯಾದಿಗಾಗಿ ನಿಶಾನಿಗೋಸ್ಕರ”

ಎಂದಿದೆ. ಇದು ಹೋರಾಟ ಹೇಗೆ ಆಂಗ್ಲರ ಬೆವರಿಳಿಸಿತ್ತು ಎಂಬುದನ್ನು ಸಾರುತ್ತದೆ
ನಾವು ನಿತ್ಯ ನಡೆದಾಡುವ ನೆಲದಲ್ಲಿ ವೀರ ಶೂರರು ನೂರಾರು ಕ್ರಾಂತಿ ವೀರರು ಇತಿಹಾಸದ ಪುಟಗಳಿಂದ ಮರೆಯಾಗಿದ್ದಾರೆ. ಅಬ್ಬರದ ಭಾಷಣ, ತೋರಿಕೆಯ ಪೊಳ್ಳು ಸಿದ್ದಾಂತದ ನಡುವೆ ಇವರು ಕಾಣದಾಗುವುದು ನಮ್ಮ ದುರ್ದೈವ !

LEAVE A REPLY

Please enter your comment!
Please enter your name here