ಭಾಗ – ೧

  • ಶಿಕ್ರಾನ್ ಶರ್ಫುದ್ದೀನ್ ಎಂ.
    ಪಾಂಡೇಶ್ವರ, ಮಂಗಳೂರು
    +91 8197789965


1.
ಉತ್ಸುಕತೆ ಪುನಃ ಉದಯಿಸುವುದು, ಮತ್ತೇ ಭೇಟಿಯಾದರೆ ನೀನು!
ಸಮಯವು ಪುನಃ ಬದಲಾಗುವುದು, ಮತ್ತೇ ಭೇಟಿಯಾದರೆ ನೀನು!

ಖೇದವಿದೆ ಸಾಧಿಸಲಾಗಲಿಲ್ಲ ನನಗೆ, ದೊರೆತ ಈ ಪ್ರಾಪಂಚಿಕ ಬದುಕಿನಲ್ಲಿ
ಆ ಖೇದದ ಅಗ್ನಿಯೂ ನಂದಿಸಲಾಗುವುದು, ಮತ್ತೇ ಭೇಟಿಯಾದರೆ ನೀನು!

ಈ ಲೌಕಿಕ ಒತ್ತಡಗಳು, ಖಿನ್ನತೆ-ತಳಮಳಗಳು, ಭವಿತವ್ಯದ ಆತಂಕಗಳು…
ಎಲ್ಲವನು ನಗುನಗುತಾ ಎದುರಿಸಲಾಗುವುದು, ಮತ್ತೇ ಭೇಟಿಯಾದರೆ ನೀನು!

ಬರಿದು ಹೋಯಿತು ವಸಂತಗಳು, ಮನಸ್ಸಿನಂಗಳದಿಂದ ನಿರ್ದಯವಾಗಿ
ಪುಷ್ಪಗಳು ಚಿಗುರುವ ಋತು ಮರಳುವುದು, ಮತ್ತೇ ಭೇಟಿಯಾದರೆ ನೀನು!


2.
ಅರಳಿದ ಕುಸುಮದಂತೆ ನಸುನಗಲು ಕಲಿ ಇನ್ನಾದರೂ!
ವಿಶಾಲ ಗಗನದಂತೆ ಶಾಂತನಾಗಲು ಕಲಿ ಇನ್ನಾದರೂ!

ಬಡಿತಗಳಿಗೆ ಬೆಲೆಯಿಲ್ಲ ನಿಷ್ಕರುಣಿಯರ ಮಾರುಕಟ್ಟೆಯಲಿ!
ಭಾವವಶ್ಯನಾಗದೆ ಎಲ್ಲವನು ಎದುರಿಸಲು ಕಲಿ ಇನ್ನಾದರೂ!

ಚಡಪಡಿಸುವುದೇ ನಿನ್ನ ಹಳೆಯ ಚಟವೆಂದು ತಿಳಿದಿದೆ!
ಆದರೆ, ತನ್ನನ್ನು ತಾನು ಸಂತೈಸಲು ಕಲಿ ಇನ್ನಾದರೂ!

ಅದೃಷ್ಟವನು ಚುಡಾಯಿಸುವುದೇ ಹಸ್ತರೇಖೆಗಳ ಚಾಳಿ,
ಓ ಮನಸೇ, ಹಣೆಬರಹವ ಸ್ವೀಕರಿಸಲು ಕಲಿ ಇನ್ನಾದರೂ!


3.
ಪ್ರಸ್ತುತ ಸ್ಥಿತಿ ಅರಿತರೂ, ಹಣೆಬರಹ ವಿಮರ್ಶಿಸಿದರೂ ಅಳುವೇ ಬರುವುದು!
ತಿರುಗಿ ಭೂತ ನೋಡಿದರೂ, ಭವಿಷ್ಯತ್ ಚಿಂತಿಸಿದರೂ ಅಳುವೇ ಬರುವುದು!

ಹೇಳಿದ್ದನ್ನೆಲ್ಲಾ ಜ್ಞಾಪಿಸಿಕೊಳ್ಳುವುದು ಒಮ್ಮೆ ಬಹಳ ಕಷ್ಟಕರವಾಗಿತ್ತು;
ಅನುಭವಿಸಿದ್ದನ್ನೆಲ್ಲಾ ಇಂದು ಜ್ಞಾಪಿಸಿಕೊಂಡರೆ ಅಳುವೇ ಬರುವುದು!

ಮುಗುಳ್ನಗೆಯ ಮುಖವಾಡ ಧರಿಸಿ ಹೋದರೂ, ಜನನಿಬೀಡ ಮಾರುಕಟ್ಟೆಗೆ,
ಆ ಚೆಲುವಾದ ಮುಗ್ಧ- ರಮಣೀಯ ಚಹರೆ ಕಾಣಸಿಕ್ಕರೆ ಅಳುವೇ ಬರುವುದು!

ಪ್ರತಿ ಕತ್ತಲಿನ ಇರುಳಲ್ಲಿ ವರ್ಷಿಸುವುದು ಅದೇ ಚಿರಪರಿಚಿತ ತಂಪಾದ ಹನಿಗಳು;
ಆದರೆ, ಇಂದು ಸುರಿಯುವ ಮಳೆಯ ಕುರಿತು ಚಿಂತಿಸಿದರೆ ಅಳುವೇ ಬರುವುದು!

ದೇವನನು ದೂಷಿಸುವುದೋ? ತನ್ನನ್ನು ತಾನು ಜರೆಯುವುದೋ? ತಿಳಿಯದು;
ಔಚಿತ್ಯ ಪ್ರಜ್ಞೆ ಇದ್ದರೂ ಕಲ್ಪನಾಮಯದಲ್ಲಿ ಜಾರಿದರೆ ಅಳುವೇ ಬರುವುದು!


4.
ದೀವಿಗೆಗಳು ಬೆಳಕು ಬೀರುತ್ತಿದ್ದಂತೆ ಕೆಲವು ನೆನಪುಗಳು ತಾಜಗೊಂಡವು!
ವೀಣೆಯ ತಂತಿಗಳು ಹಾಡುತ್ತಿದ್ದಂತ ಕೆಲವು ನೆನಪುಗಳು ತಾಜಗೊಂಡವು!

ಪ್ರತಿ ನುಸುಕು ಕೇಳಿ ಬರುವುದು ಚಿರಪರಿಚಿತ ಇಂಪಾದ ಗಾನ. ಆದರಿಂದು,
ಕೋಗಿಲೆಗಳ ಗಾನ ಕೇಳುತ್ತಿದ್ದಂತೆ ಕೆಲವು ನೆನಪುಗಳು ತಾಜಗೊಂಡವು!

ರಾತ್ರಿಗಳು ಕಳೆದು ಹೋದವು ಕಿಟಕಿಯ ಮುಂದೆ ನಿರೀಕ್ಷೆಯಲ್ಲಿ ನಿಲ್ಲುತ್ತ,
ನಿರೀಕ್ಷೆಗಳು ಮಿತಿ-ಮೀರುತ್ತಿದ್ದಂತೆ ಕೆಲವು ನೆನಪುಗಳು ತಾಜಗೊಂಡವು!

ಉದ್ಯಾನಗಳಲ್ಲಿ ಪುಷ್ಪಗಳು ಅರಳುವುದರಲ್ಲಿ ಅಸಹಜವೆನಿರಲಿಲ್ಲ. ಆದರೆ,
ಕುಸುಮದಂತ ಮುಗುಳ್ನಗೆ ಅರಳುತ್ತಿದ್ದಂತೆ ನೆನಪುಗಳು ತಾಜಗೊಂಡವು!

ಮನಸ್ಸಿನ ಗಾಯಗಳಿಗೆ ಎಂದೂ ಔಷಧಿ ಸಿಗುವುದಿಲ್ಲ ಎಂದೂ ತಿಳಿದಿದೆ!
ಆದರೂ, ಹೃದಯ ಬಡಿಯುತ್ತಿದ್ದಂತೆ ಕೆಲವು ನೆನಪುಗಳು ತಾಜಗೊಂಡವು!


5.
ಮುಸ್ಸಂಜೆಯಂತ ತೇವ ನಯನಗಳು
ಭಾರಿಗೊಂಡವು ತುಳುಕುತ್ತಿರುವ ಹನಿಗಳಿಂದ…
ಆ ಹನಿಗಳೇ ಭಾವನೆಯ ಲೇಖನಿಯಿಂದ ಹೊರಬಂದವು…
ಗಜಲ್ ಗಳು ರೂಪುಗೊಂಡವು!!!

ಪುಷ್ಪಗಳು ಸುಗಂಧವನು ಬೀರುತ್ತಿದ್ದಂತೆ ಕಣ್ಣುಗಳು ತುಂಬಿ ಬಂದವು!
ಮೇಘಗಳು ಇಬ್ಬನಿಯನು ವರ್ಷಿಸುತ್ತಿದ್ದಂತೆ ಕಣ್ಣುಗಳು ತುಂಬಿ ಬಂದವು!

ಕಟ್ಟಿದ ಪಣ ಜಯಿಸಲು ಹೋಗಿ ಕುಂತೆ ಚದುರಂಗವನು ಆಡಲು. ಆದರೆ,
ಬದುಕಿನ ಚದುರಂಗದಲ್ಲಿ ಸೋಲುತ್ತಿದ್ದಂತೆ ಕಣ್ಣುಗಳು ತುಂಬಿ ಬಂದವು!

ಮುಸ್ಸಂಜೆಯೂ ಕಳೆದು ಹೋಯಿತು…
ಕ್ಷೀತಿಜದಿಂದ ಬರುವ ದಾರಿಯನು ದುರುಗುಟ್ಟುತ್ತಿರುವುದರಲ್ಲಿ!
ಸೂರ್ಯಾಸ್ತದ ಕೇಸರಿ ಅಲೆಗಳು ನಯನಗಳಲ್ಲಿ ಪ್ರತಿಬಿಂಬಿಸುತ್ತಿತ್ತು!
ಕಣ್ಣುಗಳು ತುಂಬಿ ಬರುತ್ತಿತ್ತು!!!

ಇರುಳುಗಳು ಕಳೆದುಹೋದವು ಎಣ್ಣೆಯ ಲಾಂದ್ರಿಯ ಮುಂದೆ ಕೂರುವುದರಲ್ಲಿ…
ಸ್ರವಿಸುತ್ತಿದ್ದ ಸಾಲುಗಳಿಗೆ ಪ್ರಾಸ ದೊರೆಯದಿರುವುದರಿಂದ ಕಣ್ಣುಗಳು ತುಂಬಿ ಬಂದವು!

ದಿನಗಳು, ವಾರಗಳು, ತಿಂಗಳುಗಳು ಉರುಳಿದವು… ಉರುಳಿ ಹೋದವು ವರುಷಗಳು…
ನಿರೀಕ್ಷಿಸುತ್ತಿದ್ದ ಹೊತ್ತು ಕಳೆದು ಹೋಗುತ್ತಿದ್ದಂತೆ ಕಣ್ಣುಗಳು ತುಂಬಿ ಬಂದವು!


LEAVE A REPLY

Please enter your comment!
Please enter your name here