ಕೃತಿ: ಕರಕೀಯ ಕುಡಿ ( ಕಥಾ ಸಂಕಲನ)
ಕತೆಗಾರ – ಡಾ. ಆನಂದ ಋಗ್ವೇದಿ

ಪುಸ್ತಕ ವಿಮರ್ಶೆ

  • ಸಂತೆಬೆನ್ನೂರು ಫೈಜ್ನಟ್ರಾಜ್, ಸಂತೆಬೆನ್ನೂರು

ಪ್ರಕಟ- ರೂಪ ಪ್ರಕಾಶನ,ಮೈಸೂರು
ವರ್ಷ-2020
ಮುಖಪುಟ- ಶ್ರೀಕಂಠಮೂರ್ತಿ
ಬೆಲೆ-110 ರೂ

ಹನ್ನೆರಡು ಕಥೆಗಳ ಸಂಕಲನ ‘ಕರಕೀಯ ಕುಡಿ’ ಓದಿದ ನಂತರ ಬಂದ ಒಂದೇ ಪ್ರತಿಕ್ರಿಯೆ ಈ ಲೇಖನದ ಶೀರ್ಷಿಕೆ!
ಆನಂದನೆಂಬ ಋಗ್ವೇದಿಯ ಬಗ್ಗೆ ಎರಡು ಮಾತು ಹೇಳಿ ಆಮೇಲೆ ಸಂಕಲನದ ಬಗ್ಗೆ ಸಾಗುತ್ತೇನೆ. ದಾವಣಗೆರೆ ಜಿಲ್ಲೆ ಕಂಡ ಉತ್ತಮ ಕವಿ, ಕತೆಗಾರ, ನಾಟಕಕಾರ, ಪ್ರಬಂಧಕಾರ ಮತ್ತು ಅಪ್ಪಟ ಮಾನವೀಯ ಮನದ ಚಿಂತಕ. ಕತೆಗಳ ಬರೆದರೂ ಕವಿಯೆಂದೇ ನಾಡಿನಲ್ಲಿ ಖ್ಯಾತಿ.
ಹತ್ತರ ಸಮೀಪ ಈಗಾಗಲೇ ಕೃತಿ ಸಂಖ್ಯೆ ದಾಟಿವೆ. ಕತೆ, ಕವಿತೆ, ನಾಟಕ, ವಿಮರ್ಶೆ, ಸಂಶೋಧನಾ ಪ್ರಬಂಧ, ಹೀಗೆ ಭಿನ್ನ ಹಾದಿಯ ಬರಹಗಾರ ಋಗ್ವೇದಿ ಹಂಪಿ ವಿ. ವಿ ಯಿಂದ ‘ಸಮಕಾಲೀನ ಕನ್ನಡ ಕತೆಗಳ ಸಾಂಸ್ಕೃತಿಕ ಸ್ವರೂಪಗಳು; ಒಂದು ಅಧ್ಯಯನ’ ಎಂಬ ಸಂಶೋಧನೆಯ ಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಪಾಟೀಲ ಪುಟ್ಟಪ್ಪ ಕಥಾ ಪ್ರಶಸ್ತಿ, ಜೋಳದರಾಶಿ ದೊಡ್ಡನಗೌಡ ನಾಟಕ ಪ್ರಶಸ್ತಿ, ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಇನ್ನು ಹತ್ತು ಹಲವು ಪ್ರಶಸ್ತಿಗಳಿಗೆ ಶ್ರೀಯುತರು ಭಾಜನರಾಗಿದ್ದಾರೆ.
ವೃತ್ತಿಯಲ್ಲಿ ಆರೋಗ್ಯ ಇಲಾಖೆಯ ಸಹಾಯಕ ಆಡಳಿತ ಅಧಿಕಾರಿ. ಇದೀಗ ‘ಕರಕೀಯ ಕುಡಿ’ ಎಂಬ ಅಪ್ಪಟ ಮನುಷ್ಯ ಸಂಬಂಧಗಳ ನಡುವೆ ಜೀಕುವ ಕತೆಗಳ ಕಟ್ಟು ಹಿಡಿದು ನಿಂತಿದ್ದಾರೆ.

ಅದೇ ಬದುಕು, ಬವಣೆ, ಕಾಮ, ನಿಷ್ಕಾಮ, ಪ್ರೇಮ, ಸ್ನೇಹಗಳ ಸುತ್ತ ಗಿರಕಿ ಹೊಡೆಯುತ್ತವೆ ಅನ್ನುವ ಒಂದು ಸಾಲಿನ ಮಾತು ಈ ಸಂಕಲನದ ಬಗ್ಗೆ ಕತೆಗಾರರೇ ಹೇಳುತ್ತಾರೆ. ನಾ ಈ ಪುಸ್ತಕ ಓದಿದ ಮೇಲೆ ಅನ್ನಿಸಿದ್ದು ಯಾಕೆ ಈ ಕತೆಗಳು ಅಷ್ಟು ಬೆಳಕಿಗೆ ಬರಲಿಲ್ಲ!? ಅಥವಾ ಚರ್ಚೆಗೆ ಒಳಪಡಲಿಲ್ಲ!? ಅಥವಾ ಸಾಹಿತ್ಯ ವಲಯದ ಬಿಂಕ ಬಿನ್ನಾಣದ ಗಾಳಿ ಋಗ್ವೇದಿ ಎಂಬ ಆನಂದನಿಗೂ ಕಾಡಿತೇ!? ಅಥವಾ ವಶೀಲಿ ಮಾಡದೇ ಮತ್ತೇನೂ ದಕ್ಕದೆಂಬ ಪೂರ್ವ ನಿಯೋಜಿತ ಮಾತುಗಳನ್ನೇ ಮತ್ತೆ ಮತ್ತೆ ಮೆಲಕು ಹಾಕಬೇಕೆ? ಅನ್ನುವ ಹಳಹಳಿಕೆ ಒಮ್ಮೆ ನನ್ನ ಕಾಡಿತು!

ಬಿಡಿ, ಕೆಲವು ಕ್ಷೇತ್ರಗಳು ಹಾಗೆಯೇ ಕೆಲವರಿಂದಾಗಿ ಪ್ರಚಾರ, ಕೆಲವರಿಂದಾಗಿಯೇ ಮಣ್ಣುಪಾಲು ಜಾನೆ ದೋ!
‘ಕರಕೀಯ ಕುಡಿ’ ಕಥೆಗಳು ಗ್ರಾಮೀಣ ಸೊಗಡಿನ ಸುತ್ತ ಸುತ್ತುವ ಮನೋಜ್ಞ ಕತೆಗಳು.
ಚರ್ಮ ಅನ್ನೋದು ಜೀವನದ ಮತ್ತು ಜೀವದ ಅವಿಭಾಜ್ಯ ಅಂಗ. ಆ ಚರ್ಮಕ್ಕೇನಾದರೂ ಆದರೆ ಮನುಷ್ಯನ ತಳಮಳ ಹೇಳತೀರದು. ಹಾಗೆ ತೊನ್ನು ಹತ್ತಿದ ಹೊನ್ನಿಯ ಬಾಳಲ್ಲಿ ದೇವದಾಸಿಯ ವೃತ್ತಿಯೂ ಆಟವಾಡಿ ಹೊಟ್ಟೆಗಾಗಿ ವಾರಗೆಯಲ್ಲಿ ದೊಡ್ಡಮ್ಮನ ಮಗನನ್ನೆ ವರಿಸಿ ಬಾಳಿನ ದಿಕ್ಕಿಗೆ ಆಸರೆಯ ಕನಸು ಕಾಣುತ್ತಾ ಸಾಗೋ ಹೆಣ್ಣೆಗೆ ಮುಂದಾಗುವ ಒಂದೊಂದು ಘಟನೆಗಳು ಮರ್ಮಾಘಾತಗಳೆ! ಹಣ, ಹೆಣ್ಣು,ಕಾಮ ಮತ್ತು ಹಸಿವು ಯಾವ ಮಟ್ಟಕ್ಕೆ ಮನುಜನನ್ನು ಅಧೋಗತಿಗಿಳಿಸುತ್ತದೆ ಎಂಬುದು ಕರಕೀಯ ಕುಡಿ ಕತೆ ವಿಷಾದದ ನೆಲೆಗಟ್ಟಿನಲ್ಲಿ ಸಾದರ ಪಡಿಸುತ್ತದೆ.

‘ಪುನರುಜ್ಜೀವನ’ ಎಂಬ ಕತೆ ಸದ್ಯ ಸಾಮಾಜಿಕವಾಗಿ ಇಡೀ ಪ್ರಪಂಚ ಬದಲಾಯಿಸುತ್ತೇನೆಂದು ಬೀದಿ ಬೀದಿಗಳಲ್ಲಿ ಹೋರಾಟದ ಕೆಚ್ಚು ಹಚ್ಚಿಕೊಂಡ ಕೆಲವು ವಿದ್ಯಾವಂತರು ಓದಬೇಕು. ಮಲಗುವಾಗಿನ ಮತ್ತು ಎಚ್ಚರದಲ್ಲಿನ ಭಿನ್ನತೆ ಎತ್ತಿ ತೋರಿಸುವ ಕತೆ. ಆಂದೋಲನ, ಪರಿವರ್ತನೆ,ಜಾತಿ ನಿರ್ಮೂಲನೆಯ ಭಾಷಣ ಶೂರರು ಕತ್ತಲಾದ ಮೇಲೆ ಮಡದಿಯೊಂದಿಗಿನ ವ್ಯವಹಾರ ಮತ್ತು ಸಾಮಾಜಿಕ ದೃಷ್ಟಿಕೋನ ಬಿಂಬಿಸುವ ಕೆಂಡದ ಕತೆ!

‘ತೇರು’ ಅನ್ನುವ ಕತೆ ಹಳೆಯ ಗೆಳೆಯ ಒಂದೆಡೆ ಸೇರಿಸುವುದರ ಜೊತೆಯಲ್ಲಿ ಪುರಾತನ ಪ್ರೇಮ ಕಥನಗಳಿಗೆ ಮರುಹುಟ್ಟು ಕೊಡುವ ಗೋಜಿನ ಜೊತೆಗೆ ಅದಾಗದಿದ್ದರೆ ಕಡೆಗೆ ಕೂಡುವ ಸಂಚಿನ ಕಾಮದಳ್ಳುರಿಯ ಕಿಡಿ ಹೊತ್ತಿ ಹಾಗೆಯೇ ಆರುವ ಕತೆ. ಹೆಣ್ಣು ಅಂದರೆ ಹೊತ್ತಿಸಿ ಆರಿಸುವ ಬೆಡ್ ಲ್ಯಾಂಪೆಂದುಕೊಂಡ ನಮ್ಮ ನಡುವಿನ ಒಂದಿಷ್ಟು ಸಾಹಿತ್ಯದ ಜನ ಓದಲೇಬೇಕಾದ ಕತೆ.
ಋಗ್ವೇದಿ ಕತೆ ಕಟ್ಟುವುದರಲ್ಲಿ ನಿಸ್ಸೀಮರೆನ್ನುವುದರಲ್ಲಿ ಎರಡು ಮಾತಿಲ್ಲ. ಪ್ರತಿ ಕತೆಯೂ ಭಿನ್ನ ವಸ್ತು, ಭಿನ್ನ ಪಾದೇಶಿಕ ಪರಿಸರದ ಆಯ್ಕೆ ಮತ್ತು ಕಂಡೂ ಕಾಣದಂತೆ ಸಮಾಜಕ್ಕೆ ನೀಡುವ ಅಂತರ್ಗತ ಸಂದೇಶ ಓದುಗ ಸೂಕ್ಷ್ಮವಾಗಿ ಅರಿಯಬಹುದು.

‘ಭೂಪೋತ್ತಮನಂ’ ಎಂಬ ಕತೆ ಜೀರ್ಣಿಸಿಕೊಳ್ಳಲು ಎರಡು ಗುಂಡಿಗೆ ಬೇಕು. ಇತ್ತೀಚಿಗೆ ಈ ಪ್ರನಾಳ ಶಿಶು ಪ್ರಯೋಗ ಜಾರಿಯಿದ್ದರೂ ಸಂಪ್ರದಾಯಿಕ ಮನಸುಗಳ ತಲ್ಲಣ ಸದಾ ಒಳಗಿನ ಲಾವಾರಸವೇ! ಯಾರದೋ ಹೆಸರಿನ ಮಗು, ಯಾರಿಗೋ ಲಭ್ಯ ಕೊನೆಯವರೆಗೂ ಕಾಣದ ಕೈಯ ನಡವಳಿಕೆ ಕತೆಯನ್ನು ಹಿಡಿದಿಟ್ಟು ಸಾಗುತ್ತದೆ.
‘ಸುಲಗ್ನಾ ಸಾವಧಾನ’ ಅನ್ನುವ ಮತ್ತೊಂದು ಕಥೆ ಸಾಂಸಾರಿಕ ಮತ್ತು ಸಾಮಾಜಿಕ ತಲ್ಲಣಗಳ ಮಿಶ್ರಣ!ಮದುವೆ ನಾಮಕಾವಾಸ್ಥೆ ಉಳಿದದ್ದು ದಿಲ್ ಕೆ ವಾಸ್ಥೆ ಅನ್ನುವಂತೆ ಹೆಣ್ಣು ಇದ್ದರೆ ಗಂಡನಾದವನು ಮಾಡುವುದಾದರೂ ಏನು? ತಲೆ ತಗ್ಗಿಸಿ ಸಾಗುವುದು ಅಥವಾ ಬಿಟ್ಹಾಕಿ ಪರ್ಯಾಯ ದಾರಿ ಹುಡುಕುವುದು .ಮದುವೆ ಎಂಬ ಕಾನ್ಸೆಪ್ಟ್ ಮದುವೆಯಾಗಿ ಇಪ್ಪತ್ತೈದು ವರ್ಷ ಕಳೆದರೂ ಅರ್ಥವಾಗದೇ ಒದ್ದಾಡುವ ಕಥಾನಾಯಕ, ಮದುವೆ ಅಂದರೆ ಅಷ್ಟೆ ಅನ್ನುವ ನಿರ್ಲಿಪ್ತ ಕಥಾ ನಾಯಕಿ. ಇವರ ಬೆನ್ನ ಹಿಂದಿನ ತವಕ ತಲ್ಲಣ ಹಾಗೂ ಹೀಗೂ ಅಲ್ಲಲ್ಲಿ ಹಾದು ಹೋಗುವ ಮರೀಚಿಕೆಗಳು!
ಒಂದೊಂದು ಕತೆಯೂ ಒಂದೊಂದು ಸಮಸ್ಯೆಯನ್ನು ಓದುಗನ ಎದುರು ನಿಲ್ಲಿಸುತ್ತದೆ. ಪಾತ್ರಗಳು ಆ ಕಡೆ ಬೀದಿಯಲ್ಲೋ ಈ ಕಡೆ ಬೀದಿಯಲ್ಲೋ ಅಥವಾ ಇನ್ನೆಲ್ಲೋ ನೋಡಿದಂತೆ, ಮಾತಾಡಿಸಿದಂತೆ, ಕಂಡಂತೆ ಓದುಗರಿಗೆ ಕಾಡುವುದು ಸಹಜ. ಋಗ್ವೇದಿ ಯಾವುದೇ ಇಸಂ ಇಟ್ಟುಕೊಳ್ಳದ ಮನುಷ್ಯ ಪ್ರೀತಿಯ ಕತೆಗಾರ. ಕತೆಗಳಲ್ಲೂ ಪಾತ್ರಗಳಿಗೆ ನೋಯಿಸದ ಸಹೃದಯಿ.
“ಕರಕೀಯ ಕುಡಿ” ಸಂಕಲನದ ಕತೆಗಳು ಕಡೆ ಪಕ್ಷ ದಾವಣಗೆರೆ ವಲಯದಲ್ಲಾದರೂ ಚರ್ಚೆಗೆ ಬರಲಿ. ಸಾವಿರಾರು ಓದುಗ ವಲಯ ಇಟ್ಟುಕೊಂಡ ಬೆಣ್ಣೆ ನಗರಿ ಇಂತಹ ಹಲವಾರು ಬರಹಗಾರರನ್ನು ತನ್ನೊಳಗೆ ಹುದುಗಿಸಿಕೊಂಡಿದೆ. ಮುಂದಿನ ಪೀಳಿಗೆಗಾದರೂ ಈ ಕಾವ್ಯ,ಕತೆ,ನಾಟಕ,ವಿಮರ್ಶೆಗಳನ್ನು ಚರ್ಚಿಸುವ, ಮೆಲುಕು ಹಾಕುವ ಸಾಮಾಜಿಕ, ಸಾಹಿತ್ಯಿಕ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ. “ಕರಕೀಯ ಕುಡಿ” ಸಂಕಲನ ಓದಿ ಒಂದು ನಿರಾಳ ಭಾವ ಮೂಡಿತೆಂದರೆ ಅತಿಶಯೋಕ್ತಿ ನಿಜಕ್ಕೂ ಅಲ್ಲ ಅಂತಲೇ ನನ್ನ ಭಾವನೆ. ನಮಸ್ಕಾರ!

LEAVE A REPLY

Please enter your comment!
Please enter your name here