ಪುಸ್ತಕ ವಿಮರ್ಶೆ: (ಆತ್ಮಕಥೆ
)
- ರವಿ ನವಲಹಳ್ಳಿ ರಾಯಚೂರು. (ಯುವ ಸಾಹಿತಿ ಕಲಾವಿದ)
ಅರವಿಂದ ಮಾಲಗತ್ತಿಯವರು ತಮ್ಮ ಆತ್ಮ ಕಥೆಯಲ್ಲಿ ದಲಿತ ಜನಾಂಗದ ಸಮಗ್ರ ಚಿತ್ರಣ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ನಮ್ಮೂರಲ್ಲಿ ದಲಿತರು ಅನುಭವಿಸಿದ ಎಲ್ಲ ಅನುಭವಗಳು ನಮ್ಮೂರಲ್ಲಿ ದಲಿತರು ಕಂಡ ಜೀವನ ಕ್ರಮ ಒಂದೇ ಅಂತ ನನಗೆ ಭಾಸವಾಯಿತು.
“ಗೌರ್ಮೆಂಟ್ ಬ್ರಾಹ್ಮಣ”ದಲ್ಲಿ ದಲಿತ ಜನಾಂಗದ ಪಾಡು ಅಷ್ಟಿಷ್ಟಲ್ಲ. ಅವರ ಬಡತನ, ಹಸಿವಿನ ತೀವ್ರತೆ ಸವರ್ಣೀರ್ಯರಿಂದ ತುಳಿತಕ್ಕೆ ಒಳಗಾಗುವ ಸಾಧ್ಯತೆಗಳು ಮನ ಕಲುಕುತ್ತವೆ. ಊರಲ್ಲಿ ಸೇಠ್ ಜೀ, ಮರಾಠಿಗರು ,ವೀರಶೈವರ ಮನೆತನದಲ್ಲಿ ಮದುವೆ, ಮಕ್ಕಳು ಹುಟ್ಟಿದ ದಿನ, ಅವರ ಮನೆಯ ಸಾವುಗಳು ದಲಿತರಿಗೆ ಪಂಚಾಮೃತ ಸವಿದಷ್ಟೇ ಸಂತೋಷವಾಗುತ್ತಿತ್ತು. ಊರಲ್ಲಿ ಮೇಲ್ವರ್ಗದ ಜನರ ಮನೆಯಲ್ಲಿ ಸಾವು ಆದ್ರೆ ಅವತ್ತು ಅವರಿಗೆ ಹಬ್ಬವೇ ಹಬ್ಬ. ಏಕೆಂದರೆ, ಹೆಣದ ಮೆರವಣಿಗೆ ಮಾಡುವಾಗ ತಮ್ಮ ಪ್ರತಿಷ್ಟೆಗಾಗಿ ಹೆಣದ ಮೇಲೆ ಹಣ ಉಗ್ಗುತಿದ್ರು ಆ ಹಣವನ್ನು ದಲಿತರು ಆರಿಸಿಕೊಳ್ಳುತಿದ್ದರು ಅದು ಅವರ ಅಂದಿನ ಸಂಪತ್ತು ಆಗತಿತ್ತು. ಊರಲ್ಲಿ ಮೇಲ್ವರ್ಗದ ಜನರ ಮನೆಯಲ್ಲಿ ಮದುವೆ ಆದ್ರೆ ಎಲ್ಲರೂ ಉಂಡು ಹೋದ ಮೇಲೆ ಕೊನೆಗೆ ಇವರ ಊಟ. ಇವರ ಹಸಿವಿನ ತೀವ್ರತೆ ಎಷ್ಟಿದೆ ಅಂದ್ರೆ ಉಂಡ ಮೇಲೆ ಯಾರಿಗೂ ಗೊತ್ತಾಗದ ಹಾಗೆ ಮೈಸೂರು ಪಾಕು ಲಡ್ಡು ಬಚ್ಚಿಟ್ಟು ಕೊಂಡು ಬರ್ತಾ ಇದ್ರು. ಶೂದ್ರರೂ ಮತ್ತೆ ಮತ್ತೆ ಉಣಾಕ ಬರ್ತಾರೆ ಅಂತ ಬಕೆಟ್ ನಲ್ಲಿ ಬಣ್ಣ ಹಾಕಿ ಊಟ ಮಾಡಿ ಕೈ ಬಕೆಟ್ ನಲ್ಲಿ ಅದ್ದಿ ಹೋಗ್ರಿ ಅಂತ ಹೇಳ್ತಿದ್ರು.
ಮಾಲಗಿತ್ತಿ ಅವರು ಕಲಿಯುವ ಶಾಲೆಯಲ್ಲಿ ಮೇಷ್ಟ್ರು ಕೊಡುವ ಶಿಕ್ಷೆ ನಗು ಮತ್ತು ವಿಷಾದ ಹುಟ್ಟಿಸುವಂತಹದ್ದು. ಅದೇನಂದರೆ ವಿದ್ಯಾರ್ಥಿಗಳ ಮುಖ ಗೋಡೆ ಕಡೆಗೆ ತಿರುಗಿಸಿ ಕೈ ಮೇಲೆಕ್ಕೆ ಕಟ್ಟಿ ಮೇಷ್ಟ್ರು ಹೊಡೆಯುವಾಗ ‘ಶಾಲೆ ಉಪ್ಪಿಟ್ಟು ತಿಂದು ತಿಂದು ಸೋಳೆ ಮಗನ್ ಕುಂಡಿ ತಬಲ ಆಗ್ಯವ ನೋಡು ಅಭಬಾ ಬಿಜಾಪುರದ ಗೋಲ ಗುಮ್ಮಟ’, ಗೋಲ ಗುಮ್ಮಟದ ನಗಾರಿ ಬಾರಿಸುತಿದ್ದರೆ ಗುಂಡಿ ಇಲ್ಲದ ಚಡ್ಡಿ ಉದುರಿ ಹೋಗಿದ್ದನ್ನು ಉಳಿದ ವಿದ್ಯಾರ್ಥಿಗಳು ಸಿನಿಮಾ ತರ ನೋಡ್ತಿದ್ರಂತೆ, ಕುಂಡೆ ತುಂಬಾ ಬಾಸುಂಡೆ ಅಂತ ವರ್ಣನೆ ಮಾಡ್ತಾ ಶಿಕ್ಷೆ ಕೊಡೋದನ್ನ ನೋಡುತಿದ್ರೆ ಆಗಿನ ಶಿಕ್ಷಣ ಮತ್ತು ಶಿಕ್ಷೆ ಬಗ್ಗೆ ತಿಳಿಯುತ್ತದೆ. ಇವಾಗಿನ ಸಾಲಿ ಮಕ್ಕಳಿಗೆ ಹೀಗೆ ಒಡೆದರೆ ಮೇಷ್ಟ್ರು ಕಥೆ ಅಧೋಗತಿ. ಪ್ರಾಚೀನ ಕಾಲದ ಭಾರತೀಯ ಸಂಸ್ಕೃತಿಯಲ್ಲಿ ಹಸುಗಳಿದ್ದವನೇ ದೊಡ್ಡ ಶ್ರೀಮಂತ. ಇಲ್ಲಿ ಕೋಣಗಳನ್ನು ಹೆಚ್ಚು ಸಾಕಿದವನೇ ಸಾಹುಕಾರ. ವಿರಹ ವೇದನೆಯ ಬೆದೆಗೆ ಬಂದ ಎಮ್ಮೆಗೆ ಕೋಣ ಏರಿಸಲು ದೇಸಾಯಿ ಮತ್ತು ಮಾಲಗಿತ್ತಿ ಯಲ್ಲವ್ವನ ನಡುವಿನ ಸಂಭಾಷಣೆ ನವಿರಾದ ಹಾಸ್ಯ ಬಲು ನಗು ತರಿಸುತ್ತದೆ. ಮತ್ತು ಎಮ್ಮೆ – ಕೋಣಗಳ ನಡುವೆ ಪ್ರೀತಿ ಹಚ್ಚಿ ಪ್ರೀತಿಯ ಗಾಳಿ ಬೀಸುತಿದೆ ಹಟ್ಟಿ ಮೊಹಲ್ಲಾಗಳ ನಡುವೆ ಅಂತ ಎಲ್ಲವ್ವ ಹಾಡಕತ್ತಿದ್ಲು. ಅಂದ್ರೆ ಇಲ್ಲಿ ಯೋಚನಾರಹಿತ ಪ್ರಾಣಿಗಳ ಮೂಲಕ ಯೋಚನೆ ಮಾಡುವ ಮನುಷ್ಯ ಪ್ರಾಣಿಯ ನಡುವೆ ಜಾತಿ, ಮತ, ಧರ್ಮವನ್ನು ಹೊಡೆದೋಡಿಸಿ ಪ್ರೀತಿ ಸ್ನೇಹ ಬೆಸೆಯುವ ಪ್ರಯತ್ನ ಕವಿ ಮಾಡಿದ್ದಾರೆ. ಮಾಲಗಿತ್ತಿ ಅವರು ವಾಸ ಮಾಡುವ ಕೇರಿಯಲ್ಲಿ ಸೂಳೆ ಕೇರಿ ಅವರ ಚಲುವಿನ ವರ್ಣನೆ, ಸೂಳೆಯರು- ಧನಿಕರು ಸಂಗ ಎಲ್ಲವೂ ನೋಡಿದರೆ ದಲಿತರ ಹೆಣ್ಣು ಮಕ್ಕಳ ಶೋಷಣೆ ಅವರ ಅಸಹಾಯಕತೆ ವ್ಯಕ್ತವಾಗುತ್ತದೆ.
ಲೇಖಕರ ಓದಿನ ತಾಣ ಪದ್ಮಾವತಿ ಗುಡ್ಡ ಅವರ ಓದನ್ನು ಅಣಕಿಸಿ ಲೇವಡಿ ಮಾಡುತ್ತಿದ್ದವರು ಕೊನೆಗೆ ಅವರ ಹಾದಿಯೇ ತುಳಿದರು. ಊರಲ್ಲಿ ಕೆಲವು ಜನ ಎಷ್ಟು ಕೆಟ್ಟವರು ಇರ್ತಾರೆ ಅಂದ್ರೆ ಬಾಲಕ ಲೇಖಕರು ರಾತ್ರಿ ಬೀದಿ ದೀಪದ ಬೆಳಕಿನಲ್ಲಿ ಓದುತ್ತಿದ್ದರೆ ಶ್ರೀಮಂತರು ದಲಿತ ಹುಡುಗನ ಓದನ್ನು ಸಹಿಸದೆ ಬೀದಿ ಲೈಟ್ ನ್ನು ಕೆಡಿಸಿ ಆರಿಸಿ ಓಡುತ್ತಿದ್ದರು.
ಸಂಪ್ರದಾಯದ ಹೆಸರಿನಲ್ಲಿ ದಲಿತ ಕೇರಿಯ ಕೆಲ ಹೆಂಗಸರ ಬಿದಿರು ಕುಂದಿ ಓಕುಳಿ ಅಂದರೆ ದಲಿತೇತರ ಮತ್ತು ಬ್ರಾಹ್ಮಣೇತರ ಗಂಡಸರು ದಲಿತ ಹೆಂಗಸರ ಮೇಲೆ ನೀರು ಎರಚುವುದು ಆಗ ಸೊಂಟದ ಕೆಳಕ್ಕೆ ಮಾತ್ರ ಸೀರೆಯುಟ್ಟ ಹೆಂಗಸರು ಸೆರಗನ್ನು ತಲೆ ಮೇಲೆ ಹಾಕಿಕೊಂಡಾಗ ನೀರಿನ ಏಟಿಗೆ ಸೆರಗು ಜಾರಿ ಕೆಳಕ್ಕೆ ಬಿದ್ದಾಗ ನೋಡುವ ಪ್ರೇಕ್ಷಕರು ಉಗುಳು ನುಂಗಿಕೊಂಡು ಪುಕ್ಕಟೆ ಮನರಂಜನೆ ದೃಶ್ಯವನ್ನು ಸವಿಯುತಿದ್ದರು.
ಪ್ರತಿ ವರ್ಷ ಈ ಕ್ರೀಡೆ ನಡೆಯಲೇಬೇಕು ನಡೆಯದಿದ್ದರೆ ಊರಿಗೆ ಮಳೆ ಬರುವುದಿಲ್ಲ, ಬೆಳೆಗೆ ರೋಗ ಬೀಳುತ್ತದೆ, ಊರಿಗೆ ಮಾರಿ ರೋಗ ಬರುತ್ತದೆ, ಶನಿಯ ಕಾಟ ಹೆಚ್ಚುತ್ತದೆ ಎನ್ನುವ ಅಂಧಕಾರದ ನಂಬಿಕೆಗಳನ್ನು ಜನರು ನಂಬುವಂತೆ ಮಾಡಿದ್ದರು ಮೇಲ್ವರ್ಗದ ಶ್ರೀಮಂತರು. ಇದನ್ನು ನಂಬಿದ ದಲಿತ ಮಹಿಳೆಯರು ಮನರಂಜನೆಯ ವಸ್ತುವಾಗಿ ಬಿಡುತ್ತಾರೆ. ತಮ್ಮ ಹೆಂಡಿರಂತೆ ಇವರು ಕೂಡ ಮರ್ಯಾದೆಯುಳ್ಳ ಹೆಣ್ಣು ಮಕ್ಕಳು ಅಂತ ಅವರು ತಿಳಿಯೋದು ಯಾವಾಗ.? ಅಂತ ಲೇಖಕರು ಕೇಳಿದ್ದಾರೆ.
ದಲಿತ ಸಮುದಾಯ ಅನುಭವಿಸಿದ ವಾಸವಿಕಾಂಶಗಳನ್ನು ಈ ಪುಸ್ತಕ ಮನ ಮುಟ್ಟುವಂತೆ ವಿವರಿಸುತ್ತದೆ
ಎಲ್ಲರು ಓದಲೇ ಬೇಕಾದ ಪುಸ್ತಕ