• ಚರಣ್ ಐವರ್ನಾಡು

ಪೊಗರು ಚಿತ್ರದ ಹಾಡೊಂದನ್ನು ನೋಡಿ ಈ ಚಿತ್ರವನ್ನು ನೋಡಬಾರದು ಅನ್ನಿಸಿದ್ದು ಅದರಲ್ಲಿ toxic masculinity ಯನ್ನೇ ಹೀರೋಯಿಸಂ ಎಂದು ಬಿಂಬಿಸಿದ ರೀತಿಗೆ. ಈ ಚಿತ್ರದಲ್ಲಿ ಜಾತಿ ನಿಂದನೆ ಆಗಿದೆ ಎಂದು ಬೊಬ್ಬೆ ಹೊಡೆಯುವ ಜನಕ್ಕೆ ಅದರಲ್ಲಿ ಹೆಣ್ಣಿನ ಮೇಲೆ ದೌರ್ಜನ್ಯ ಮಾಡುವ ನಾಯಕನ ವಿರುದ್ಧ ಮಾತಾಡಬೇಕು ಎನ್ನಿಸಿಲ್ಲ!

ಇವರ ಹೋರಾಟ ಜಾತಿ ನಿಂದನೆಯ ವಿರುದ್ಧ, ಹೆಣ್ಣನ್ನು ಚಿತ್ರಿಸಿದ ವಿಕೃತಿಯ ವಿರುದ್ಧ ಅಲ್ಲವೇ ಅಲ್ಲ! ಯಾಕೆಂದರೆ ಜಾತಿಯ ಒಳಗೆ ಹೆಣ್ಣನ್ನು ನೋಡುವ ಬಗೆಯೇ ವಿಕೃತ ಆಗಿರುವಾಗ ಅದು ಗೌಣವಾಗುತ್ತದೆ! ಕಡೆಗೆ ಬಿಜೆಪಿ ಪಡೆಗೆ ಇದು ಹಿಂದುತ್ವದ ಮೇಲಿನ ಅವಮಾನವಾಗಿ ಕಾಣುತ್ತದೆ.

ಇದನ್ನು ಹೀರೋಯಿಸಂ ಎಂದು ಸಂಭ್ರಮಿಸುವ ಗಂಡಸರ ನಡುವೆ ಜುಟ್ಟು ಹಿಡಿದು ಬೆದರಿಸಿ ಪ್ರೀತಿಸುವ ವಿಕೃತಿ ಮಹಿಳೆಯರಿಗೂ ಪ್ರತಿಭಟಿಸುವ ವಿಚಾರ ಎಂದು ಅನಿಸುತ್ತಲೇ ಇಲ್ಲ! ಅರ್ಜುನ್ ರೆಡ್ಡಿ ಚಿತ್ರದಲ್ಲೂ ಇದೇ ಭಾವನೆ ಇತ್ತು!

ಇದರಲ್ಲಿ ನಾಯಕಿಯಾಗಿ ಅಭಿನಯಿಸಿರುವ ನಟಿಯ ಬಗ್ಗೆ ಕರುಣೆಯಾಗುತ್ತದೆ. ಈಕೆಗೆ ಸ್ವಾಭಿಮಾನ ಮತ್ತು ಕಲಾವಿದೆಯ ಇರಬೇಕಾದ ಸಂವೇದನೆಯೇ ಇಲ್ಲವೇ? ಪಾರ್ವತಿ ಮೆನನ್ ನಂತಹ ನಟಿಯರ ಕಾಲಡಿಗೆ ಈಕೆಯನ್ನು ಮೂರು ಬಾರಿ ನುಗ್ಗಿಸಬೇಕು!

ಹೆಣ್ಣಿನ ಬಳಿ ಈ ನಮೂನೆ ಪ್ರೀತಿ ನಿವೇದನೆ ಮಾಡುವ ನಾಯಕನನ್ನು “ಗಟ್ಟಿಗ ಗಂಡಸು” ಎಂದು ಭಾವಿಸಿದರೆ ಅದು ವಿಕೃತಿ ಮತ್ತು ಹುಚ್ಚಿನ ಅತಿರೇಕ!

ಸಂವೇದನೆ ಇಲ್ಲದ ಇಂತಹ ನಾಯಕ – ನಾಯಕಿ, ನಟ- ನಟಿಯರು, ನಿರ್ದೇಶಕರು ತಮ್ಮನ್ನು ತಾವು ಕಲಾವಿದರು ಎಂದು ಕರೆದುಕೊಳ್ಳುವ ಬಗ್ಗೆ ಅನುಕಂಪ ಇದೆ. ಕಲಾವಿದನಿಗೆ ಇರಬೇಕಾದ ಸಾಮಾಜಿಕ ಬದ್ಧತೆ ಇಲ್ಲದ ಇವರು ಇಂತಹ ಸ್ಕ್ರ್ಯಾಪ್ ಚಲನಚಿತ್ರಗಳನ್ನು ಕೊಡಲು ಸಾಧ್ಯ! ಇವರು ಮಲಯಾಳ ಚಲನಚಿತ್ರಗಳ ಕಲಾವಿದರಿಂದ ಕಲಿಯುವುದು ತುಂಬಾ ಇದೆ.

ಖರಾಬು…..ಹಾಡು ನೋಡಿದ ಮೇಲೆ ಇಡೀ ಚಿತ್ರವೇ ಖರಾಬು ಅನ್ನಿಸಿತ್ತು! ಇದು ಮನುಷ್ಯರು ನೋಡುವ ಚಲನಚಿತ್ರವಲ್ಲ!

LEAVE A REPLY

Please enter your comment!
Please enter your name here