– ಯೋಗೇಶ್ ಮಾಸ್ಟರ್

ನಮ್ಮ ಮಕ್ಕಳನ್ನು ಬೆಳೆಸುವುದರಲ್ಲಿ ನಾವು ಎಡವಿದ್ದೇವೆ ಎಂದು ನಮಗೆ ಅರ್ಥವಾಗುವುದು ಅವರು ದೊಡ್ಡವರಾದ ಮೇಲೆ ಅಥವಾ ಹದಿಹರೆಯವನ್ನು ದಾಟುವಂತಹ ವಯಸ್ಸಿನಲ್ಲಿ. ಅಲ್ಲೂ ಒಂದು ಸಮಸ್ಯೆ ಪೋಷಕರಲ್ಲಿದೆ ಅದೇನೆಂದರೆ ಬೆಳೆದ ಅಥವಾ ಬೆಳೆಯುತ್ತಿರುವ ಮಕ್ಕಳಲ್ಲಿನ ಸಮಸ್ಯೆಯ ಕಾರಣಕ್ಕೆ ತಾವು ಜವಾಬ್ದಾರರಲ್ಲ ಎಂದು ಕೈ ಕೊಡವಿಕೊಂಡು ತಡವಿದಾಗ ಸಿಗುವ ಸ್ನೇಹಿತರ ಮೇಲೋ, ಶಾಲೆಯ ಮೇಲೋ, ಯಾರೋ ತಾವಲ್ಲದ ಬೇರೊಬ್ಬರ ಮೇಲೆ ಎಸೆದುಬಿಡುವುದು. ಕೆಲವೊಮ್ಮೆ ತಾಯಿ ತಂದೆಯ ಮೇಲೆ, ತಂದೆ ತಾಯಿಯ ಮೇಲೆ ಕೂಡಾ ಆರೋಪದ ಕೆಸರಿನ ಎರಚಾಟ ಮಾಡುತ್ತಾರೆ. ಮಕ್ಕಳ ಸಮಗ್ರ ವ್ಯಕ್ತಿತ್ವದ ನಿರ್ಮಾಣದ ವೈಫಲ್ಯಕ್ಕೆ ಕಾರಣ ಮನೆಯಲ್ಲಿ ಶಿಶುಕೇಂದ್ರಿತ ಪೋಷಣೆ ಮತ್ತು ಶಾಲೆಯಲ್ಲಿ ಶಿಶುಕೇಂದ್ರಿತ ಶಿಕ್ಷಣ ವ್ಯವಸ್ಥೆ ಇಲ್ಲದಿರುವುದು.
ಶಿಶು ಕೇಂದ್ರಿತ ಪೋಷಣೆಗೆ ವಿರುದ್ಧವಾದದು ವಯಸ್ಕ ಕೇಂದ್ರಿತ ಪೋಷಣೆ. ಇದರಲ್ಲಿ ಪೋಷಕರು ತಮ್ಮ ನಿರೀಕ್ಷೆ ಅಥವಾ ಆಶಯದಂತೆ ಗೊತ್ತುಗುರಿಗಳನ್ನು ವಿಧಿಸುತ್ತಾರೆ. ಅದರಂತೆ ಮಕ್ಕಳು ಪಾಲಿಸಬೇಕು. ಅದರ ವಿರುದ್ಧವಾದುದು ಶಿಶು ಕೇಂದ್ರಿತ ಪೋಷಣೆ. ಇದರಲ್ಲಿ ಮಕ್ಕಳ ಅಗತ್ಯ ಮತ್ತು ಆಸಕ್ತಿಗಳನ್ನು ಗುರುತಿಸಿ ಅದಕ್ಕೆ ತಕ್ಕಂತೆ ತಾವು ತಮ್ಮ ಗೊತ್ತುಗುರಿಗಳನ್ನು ರೂಪಿಸಿಕೊಳ್ಳುವುದು.

ಪ್ರೀತಿ ಮತ್ತು ಮೋಹಕ್ಕಿದೆ ವ್ಯತ್ಯಾಸ

ಶಿಶುಕೇಂದ್ರಿತ ಪಾಲನೆ ಮಾಡುವ ಪೋಷಕರು ಕೊಂಚ ಎಚ್ಚರ ತಪ್ಪಿದರೆ ಮಕ್ಕಳು ನಾರ್ಸಿಸ್ಟಿಕ್ ಅಥವಾ ಆತ್ಮರತಿಯ ಮಕ್ಕಳಾಗಿ ಬಿಡುವ ಸಾಧ್ಯತೆಗಳೂ ಉಂಟು. ಪ್ರೀತಿಯಿಂದ ನೋಡಿಕೊಳ್ಳುವುದಕ್ಕೂ, ಇಚ್ಛೆಗಳನ್ನೆಲ್ಲಾ ಪೂರೈಸುವ ಮುದ್ದು ಮಾಡುವಿಕೆಗೂ ವ್ಯತ್ಯಾಸವಿದೆ. ಶಿಶು ಕೇಂದ್ರಿತ ಪೋಷಣೆಯಲ್ಲಿ ಪ್ರೀತಿಯ ಲೇಪನವಿರಲಿ. ಆದರೆ ಮುದ್ದಿನ ಅತಿರೇತವಲ್ಲ. ಅದು ಶಿಶುಕೇಂದ್ರಿತ ಪೋಷಣೆಯಲ್ಲ. ತನ್ನ ಶಿಶುವಿನ ಮೇಲೆ ಹೊಂದಿರುವ ಕಡುಮೋಹ. ಶಿಶುಕೇಂದ್ರಿತ ಪೋಷಣೆ ಮಾಡುವವರು ಕೂಡಾ ಶಿಸ್ತನ್ನು ರೂಢಿಸಲೇ ಬೇಕಾದುದು ಅಗತ್ಯ. ಶಿಶು ಕೇಂದ್ರಿತವೆಂದರೆ ಮಕ್ಕಳು ಮಾಡುವುದನ್ನೆಲ್ಲಾ ಅಥವಾ ನಿರಾಕರಿಸುವುದನ್ನೆಲ್ಲಾ ಒಪ್ಪಲೇ ಬೇಕು ಎಂಬುದಲ್ಲ. ಮಗಳಿಗೆ ಒಗೆದು ಹಾಕಿದ ಅವಳ ಬಟ್ಟೆಗಳನ್ನೆಲ್ಲಾ ಮಡಿಸಿಟ್ಟುಕೊಳ್ಳಲು ಹೇಳುತ್ತೀರಿ. ಅವಳು ಆಮೇಲೆ ಮಾಡುತ್ತೇನೆ ಎಂದು ಮುಂದೂಡುತ್ತಾಳೆ. ಸ್ವಲ್ಪ ಹೊತ್ತಿನ ನಂತರ ಮತ್ತೆ ಹೇಳುತ್ತೀರಿ. ಅವಳು ಹಾಗೇ ಮಾಡುತ್ತಾಳೆ. ಬಹಳ ಹೊತ್ತಾದ ಮೇಲೆ ನೀವು ನೋಡಿದರೆ ಬಟ್ಟೆ ಗುಪ್ಪೆಯಾಗಿ ಅಲ್ಲೇ ಬಿದ್ದಿದೆ. ನಿಮಗೆ ಪಿತ್ತ ನೆತ್ತಿಗೇರುತ್ತದೆ. “ಆಗಲಿಂದ ಹೇಳ್ತಿದ್ದೀನಿ ನೀನು ನಿನ್ನ ಬಟ್ಟೆಗಳನ್ನೇ ಎತ್ತಿಟ್ಟುಕೊಂಡಿಲ್ಲ. ನಮ್ಮದಲ್ಲ. ಅದು ನಿನ್ನದು. ನಿನ್ನದನ್ನು ನೀನೇ ಕೇರ್ ತೆಗೆದುಕೊಳ್ಳಲಿಲ್ಲಾಂದ್ರೆ ಹೇಗೆ” ಎಂದು ಜೋರಾಗಿ ಬೈಯುತ್ತೀರಿ. “ಅದು ನನ್ನದು ತಾನೇ. ನನಗೆ ಹೆಂಗೆ ಬೇಕೋ ಹಾಗೆ ಇಟ್ಟುಕೊಳ್ತೀನಿ. ಯಾವಾಗ ಬೇಕೋ ಅವಾಗ ಇಟ್ಟುಕೊಳ್ತೀನಿ. ನಿನ್ನ ಪಾಡಿಗೆ ನೀನು ಹೋಗು” ಅಂತಾಳೆ ಮಗಳು. ಸಂಘರ್ಷ ಪ್ರಾರಂಭವಾಗುತ್ತದೆ. ಇದು ಬೆಂಕಿ ಬಿರುಗಾಳಿಯಾಗಬಹುದು ಅಥವಾ ಶೀತಲ ಸಮರವಾಗಿ ಜಾರಿಯಲ್ಲಿರಬಹುದು. ಒಟ್ಟಾರೆ ಮೋಡ ಮುಸುಕಿದ ವಾತಾವರಣ. ಇದಕ್ಕೆ ಕಾರಣ ಸ್ವಯಂಶಿಸ್ತನ್ನು ರೂಢಿಸುವುದರಲ್ಲಿ ಪೋಷಕರು ವಿಫಲವಾಗುವುದು. ಯಾವುದೇ ಕೆಲಸವನ್ನು ಮುಂದೆ ಮಾಡುತ್ತಾರೆ. ಮುಂದೆ ಕಲಿಯುತ್ತಾರೆ. ಮುಂದೆ ಸರಿ ಹೋಗುತ್ತಾರೆ ಎನ್ನುತ್ತಾ ಭರವಸೆಯಿಂದ ಈಗ ಅವರಿದ್ದಂತೆ ಬಿಟ್ಟುಬಿಡುವುದು ಶಿಶುಕೇಂದ್ರಿತ ಪೋಷಣೆ ಅಲ್ಲ. ಮೋಹದಿಂದ ಕುರುಡಾಗಿರುವ ಅಜ್ಞಾನದ ಪ್ರಕಟಣೆ ಅಷ್ಟೇ.

ಮಕ್ಕಳ ಮೇಲೆ ಅತಿ ನಂಬಿಕೆ ಮತ್ತು ಅವರ ಭವಿಷ್ಯದ ಮೇಲೆ ಅತಿಯಾದ ನಿರೀಕ್ಷೆಯನ್ನು ಇಟ್ಟುಕೊಂಡು ಅವರಿಗೆ ತಮ್ಮ ಒಲವನ್ನು ಧಾರೆ ಎರೆಯುವ ಕುಟುಂಬಗಳೂ ಸಂಘರ್ಷಗಳನ್ನು ಎದುರಿಸಬೇಕಾಗುತ್ತದೆ. ನಾಳೆ ನಮ್ಮ ಮಕ್ಕಳು ದೊಡ್ಡ ಮನುಷ್ಯರಾಗಬೇಕು, ದೊಡ್ಡ ಪದವೀದರರಾಗಬೇಕು, ದೊಡ್ಡ ದೊಡ್ಡ ಹುದ್ದೆಯನ್ನು ಅಲಂಕರಿಸಬೇಕು ಎಂಬ ನಿರೀಕ್ಷೆಗಳಲ್ಲಿ ಅವರನ್ನು ಪೋಷಿಸುವುದು, ಅವರ ಎಲ್ಲಾ ಆಸೆಗಳನ್ನೂ ಪೂರೈಸುತ್ತಾ ಹೋಗುವುದು ಕೂಡಾ ಸಂಘರ್ಷಗಳನ್ನು ಎದುರಿಸುವ ಸಾಧ್ಯತೆಗಳಿರುತ್ತದೆ.
ಯಾವಾಗ ಪೋಷಕರು ತಮ್ಮ ಬಹು ನಿರೀಕ್ಷಿತ ಗುರಿಗಳನ್ನು ಮಕ್ಕಳ ಮೇಲೆ ಹೊರಿಸುವರೋ ಅಥವಾ ತಾವೇ ಕನಸುಗಳನ್ನು ಕಟ್ಟಿಕೊಳ್ಳುವರೋ ಅದು ಮಗುವು ವಯಸ್ಕ ಮಟ್ಟಕ್ಕೆ ಬಂದಾಗ ಅದನ್ನು ಪೂರೈಸುವ ಸಾಮರ್ಥ್ಯ ಇಲ್ಲದೇ ಹೋಗಬಹುದು. ಕೆಲವೊಮ್ಮೆ ಅವರಿಗೆ ಭಿನ್ನ ಅಭಿರುಚಿ ಮತ್ತು ಆಸಕ್ತಿಗಳಿದ್ದು ಅದನ್ನು ಪೂರೈಸಿಕೊಳ್ಳಲು ಅವರು ತಮ್ಮ ಗುರಿಯ ದಾರಿಯನ್ನು ತಾವು ಹಿಡಿಯಬಹುದು. ನಮ್ಮ ಕನಸನ್ನು ಅವರಿಗೆ ನನಸಾಗಲು ಒಪ್ಪಿಸಿದರೆ ಸಾಧಾರಣವಾಗಿ ನಿರಾಸೆಯೇ ಆಗುವುದು. ಕನಸು ಮಕ್ಕಳದಾಗಿರಬೇಕು. ನಮ್ಮ ಕನಸನ್ನು ಅವರದನ್ನಾಗಿಸಲು ಹೋದರೆ ಕೊಟ್ಟು ಕೊಳುವ ವ್ಯವಹಾರದಂತಾಗುತ್ತದೆ. ನಾನು ನಿನ್ನ ಹೆತ್ತಿದ್ದೇನೆ, ಹೊತ್ತಿದ್ದೇನೆ, ಸಾಕಿದ್ದೇನೆ, ಸಲವಿದ್ದೇನೆ; ನನಗಾಗಿ ನೀನು ಇದನ್ನು ಮಾಡಲೇ ಬೇಕು – ಈ ನಿರ್ಬಂಧ ಮಕ್ಕಳನ್ನು ಗುಣಮಟ್ಟದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಅಥವಾ ವೃತ್ತಿಪರತೆಯನ್ನು ಮೈಗೂಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಯಶಸ್ವಿಯಾದರೆ, ಅದೊಂದು ಯಾಂತ್ರಿಕ ತರಬೇತಿಯಾಗಿ ಒಂದು ಕನಿಷ್ಟ ಮಟ್ಟದ ಉತ್ಪಾದನೆಗಳನ್ನು ನೀಡುವ ಮಟ್ಟಿಗೆ ಇರುತ್ತಾರೆ. ಅದು ಯಶಸ್ಸಲ್ಲ.

ಅವರ ಗುರಿ ಅವರಿಗಿರಲಿ

ಮಕ್ಕಳು ತಮ್ಮ ಗುರಿಯನ್ನು ತಾವೇ ಕಂಡುಕೊಳ್ಳಬೇಕು. ಹಾಗೆ ನೆರವಾಗುವುದೇ ಶಿಶು ಕೇಂದ್ರಿತ ಪೋಷಣೆ. ತಮ್ಮ ಸೃಜನಶೀಲತೆ ಮತ್ತು ಕ್ರಿಯಾಶೀಲತೆಯನ್ನು ಕಂಡುಕೊಂಡು ತಮ್ಮ ಗುರಿಯನ್ನು ಸ್ಪಷ್ಟವಾಗಿ ರೂಪಿಸಿಕೊಳ್ಳುತ್ತಾ ಹೋದಂತೆ ತಮ್ಮ ದಾರಿಯಲ್ಲಿ ಸದೃಢವಾಗಿ ಸಾಗಲು ಅಗತ್ಯವಾದ ಬಲವನ್ನು ತುಂಬಬೇಕು.
ಪೋಷಕರ ಮತ್ತು ಶಿಕ್ಷಕರ ಅತಿಯಾದ ನಿರ್ದೇಶನಗಳು ಮತ್ತು ಬೋಧನೆಗಳು ಮಕ್ಕಳಿಗೆ ಯಾವ ರೀತಿಯಲ್ಲಿಯೂ ಪ್ರಯೋಜನಕ್ಕೆ ಬರುವುದಿಲ್ಲ. ಅವರ ಸ್ವಯಂಪ್ರೇರಿತ ಚಟುವಟಿಕೆಗಳನ್ನು ಮಾಡುವ ಚೈತನ್ಯಕ್ಕೆ ಅವು ತಡೆಗೋಡೆಯಾಗುತ್ತವೆ. ಅವರು ಮಾಡುವುದನ್ನು ಕ್ರಮಗೊಳಿಸುವುದು ಮುಖ್ಯವೇ ಹೊರತು, ನಮಗೆ ಮುಖ್ಯವೆನಿಸುವುದನ್ನು ಅವರು ಕ್ರಮವಾಗಿ ಮಾಡುವುದು ಶಿಶುಕೇಂದ್ರಿತ ಪೋಷಣೆ ಅಲ್ಲ.
ಮಕ್ಕಳನ್ನು ಪ್ರೇರೇಪಿಸುವುದೆಂದರೆ ತಾವು ಯಾವಾಗಲೂ ಅವರ ಬಗ್ಗೆ ಒಳ್ಳೆಯದನ್ನೇ ಹೇಳಿಕೊಂಡು ಅವರು ಮಾಡಿದ್ದನ್ನೆಲ್ಲಾ ಭೇಷ್ ಭೇಷ್ ಎಂದುಕೊಂಡು ಇರುವುದಲ್ಲ. ಅಥವಾ ಒಂದೇ ಹೊಡೆತಕ್ಕೆ ತೆಗೆದುಹಾಕುವುದೂ ತರವಲ್ಲ. ಮಾಡಿರುವ ಪ್ರಯತ್ನಕ್ಕೆ ಶ್ಲಾಘನೆಯೂ ಮತ್ತು ಅಗತ್ಯವಿರುವ ವಿಮರ್ಶೆಯೂ ಇರಬೇಕು.
ಮಗುವೊಂದು ಚಿತ್ರ ಬರೆಯಿತು. ಅದನ್ನು ತಂದು ತೋರಿಸಿತು. “ವಾವ್, ತುಂಬಾ ಸುಂದರವಾಗಿದೆ. ಅದ್ಭುತವಾಗಿದೆ” ಎಂದು ಹಿಂದೆಂದೂ ಕಂಡಿರಲಿಲ್ಲ ಮುಂದೆಂದೂ ಕಾಣೋದಿಲ್ಲ ಎನ್ನುವಂತೆ ಹೊಗಳುವುದು ಎಷ್ಟು ತಪ್ಪೋ, ಏನೂ ಚೆನ್ನಾಗಿಲ್ಲ ಎಂದು ನಿರಾಕರಿಸುವುದೂ ಅಷ್ಟೇ ತಪ್ಪು.
ಚಿತ್ರ ಬಿಡಿಸಿದ ಮಗುವಿಗೆ – ಅದು ಚಿತ್ರ ಬಿಡಿಸುವ ಕೆಲಸವನ್ನು ಆಯ್ದುಕೊಂಡಿದ್ದನ್ನು ಪ್ರಶಂಸಿಸಬೇಕು. ನಂತರ ನೋಡಿದ ತಕ್ಷಣ ಏನೋ ಒಂದು ತಕ್ಷಣದ ಪ್ರತಿಕ್ರಿಯೆ ಕೊಡದೇ ಗಮನಿಸಿ ನೋಡಬೇಕು. ಅದರಲ್ಲಿರುವ ಒಳ್ಳೆಯ ಅಂಶಗಳನ್ನು ಗುರುತಿಸಬೇಕು. ಅದನ್ನು ಹೇಳಿ ಶ್ಲಾಘಿಸಬೇಕು. ನಂತರ ಅದರಲ್ಲಿ ತಪ್ಪಾಗಿರುವಂತದ್ದನ್ನು ಅಥವಾ ತಮ್ಮ ಗಮನಕ್ಕೆ ಬಂದಿರುವ ನ್ಯೂನ್ಯತೆನ್ನು ಗುರುತಿಸಲು ಸಹಾಯ ಮಾಡಬೇಕು ಅಥವಾ ಸಲಹೆಯನ್ನು ನೀಡಬೇಕು. ಹಾಗಾದಾಗ ಮಗುವಿನ ಬೆಳವಣಿಗೆಗೆ ಮತ್ತು ತಪ್ಪುಗಳನ್ನು ತಿದ್ದಿಕೊಂಡು ಪ್ರಗತಿ ಹೊಂದಲು ಸಾಧ್ಯವಾಗುತ್ತದೆ. ಹಾಗೆಯೇ ಇದನ್ನು ಯಾಕೆ ಬರೆದೆ, ಅದನ್ನು ಬರೆಯಬೇಕಾಗಿತ್ತು ಎಂದು ಹೇಳುವುದು ಎಂದಿಗೂ ಕೂಡದು. ನಮಗೆ ಅದರ ಆಯ್ಕೆಯ ವಿಷಯಗಳಲ್ಲಿ ಕ್ರಮಗೊಳಿಸುವ ಜವಾಬ್ದಾರಿ ಇರುವುದೇ ಹೊರತು ಅದಕ್ಕೆ ವಿಷಯಗಳನ್ನು ನೀಡುವ ಅಧಿಕಾರ ಇಲ್ಲ.
ಮತ್ತೆ ಕೆಲವು ಪೋಷಕರು ತಮ್ಮ ಮಕ್ಕಳನ್ನು ತಮ್ಮ ಸಮಕ್ಕೇ ನೋಡುತ್ತಾರೆ. ಒಂದು ರೀತಿಯಲ್ಲಿ ಚಿಕ್ಕ ಯಜಮಾನರಂತೆ. ಹೆಚ್ಚೂ ಕಡಿಮೆ ಅವರು ಎಲ್ಲಾ ಹಕ್ಕು ಅಧಿಕಾರಗಳನ್ನೂ ಹೊಂದಿರುತ್ತಾರೆ. ಇದರಿಂದಲೂ ಆ ಮಕ್ಕಳ ಮಗುತನ ನಾಶವಾಗುತ್ತಾ ಬರುತ್ತದೆ. ಮಕ್ಕಳ ವಯಸ್ಸು ಮತ್ತು ಮನಸ್ಸು ನಾವು ಕೊಡುವ ಅಧಿಕಾರ ಮತ್ತು ಹಕ್ಕುಗಳಿಗೆ ಸಮರ್ಥವಾಗಿರುತ್ತದೆ ಎಂದು ನಂಬಲಾಗುವುದಿಲ್ಲ. ಹಾಗೆ ನಿರೀಕ್ಷಿಸುವುದೂ ತಪ್ಪು. ಅವರೂ ದೊಡ್ಡವರಂತೆಯೇ ಆಡುತ್ತಾ ತಮ್ಮ ಮಗುತನವನ್ನು ತಾವೇ ಕಂಡುಕೊಳ್ಳದೇ, ಅದನ್ನು ಶೋಧಿಸಿಕೊಳ್ಳದೇ ಹೋಗಿಬಿಡುತ್ತಾರೆ. ಇದರಿಂದ ಅವರ ಮೂಲ ಸತ್ವ ಅದೇನಿರುವುದೋ ಅದರ ವಿಕಾಸ ಆಗುವುದೇ ಇಲ್ಲ. ಏಕೆಂದರೆ ದೊಡ್ಡವರನ್ನು ಅನುಸರಿಸುತ್ತಾ, ಅನುಕರಿಸುತ್ತಾ ತಮ್ಮ ಶಿಶುತನದ ಸಹಜತೆಗಳನ್ನು ಅನುಭವಿಸುವುದೇ ಇಲ್ಲವಲ್ಲ.

ಹಿರಿತನದ ಅನುಕರಣೆ ಮಗುತನದ ನಾಶ

ನಮ್ಮ ಸಮಾಜದಲ್ಲಿ ಪೋಷಕರ ಮತ್ತು ಶಿಕ್ಷಕರ ಆಶಯಗಳು ಅದೆಷ್ಟೇ ಒಳ್ಳೆವಾಗಿದ್ದರೂ ಅವು ವಿಫಲವಾಗುವುದಕ್ಕೆ ಕಾರಣವೆಂದರೆ ಅವರಿಗೆ ಶಿಶುಕೇಂದ್ರಿತ ವ್ಯವಸ್ಥೆಯಲ್ಲಿ ಚಟುವಟಿಕೆಗಳನ್ನು, ಕಾರ್ಯಕ್ರಮಗಳನ್ನು ರೂಪಿಸುವುದಕ್ಕೆ ಬಾರದಿರುವುದು.
ದೊಡ್ಡವರನ್ನು ಸಮರ್ಥವಾಗಿ ನಕಲು ಮಾಡುವ ಮಕ್ಕಳನ್ನು ಕಂಡು ಖುಷಿ ಪಡುವ ಹಿರಿಯರು ತಾವು ಮಗುತನವನ್ನು ಕೊಲ್ಲುತ್ತಿದ್ದೇವೆ ಎಂಬ ಅರಿವೇ ಇರುವುದಿಲ್ಲ. ಎಷ್ಟೆಷ್ಟೋ ವಿಡಿಯೋಗಳನ್ನು ಕಂಡಿದ್ದೇನೆ. ಭಾರತದ ಸನಾತನ ಸಂಸ್ಕೃತಿಯು ಅದೆಷ್ಟು ಮಹತ್ವದ್ದು ಎಂದು ನಿರರ್ಗಳವಾಗಿ ಮಾತಾಡುವ ಮಕ್ಕಳು, ಭ್ರಷ್ಟಾಚಾರದ ನಿರ್ಮೂಲನೆಗಾಗಿ ಯಾಕೆ ಹೋರಾಡುತ್ತಿಲ್ಲ ಎಂದು ಗರ್ಜಿಸುವ ಮಕ್ಕಳು, ಜಾತಿ ಧರ್ಮಗಳನ್ನು ಆಚರಿಸಬೇಡಿ ಎಂದು ಹಿರಿಯರಿಗೆ ಜಾತ್ಯಾತೀತತೆಯ ಪಾಠ ಮಾಡುವ ಮಕ್ಕಳು, ಧರ್ಮವನ್ನು ಕಾಪಾಡಿದರೆ ಧರ್ಮವು ನಮ್ಮನ್ನು ಕಾಪಾಡುತ್ತದೆ ಎಂದು ಸಂಸ್ಕೃತದ ಶ್ಲೋಕಗಳನ್ನು ಹೇಳಿ ಆಕರ್ಷಿಸುವ ಮಕ್ಕಳೆಲ್ಲರೂ ಮಾತಾಡುವ ಗಿಣಿಗಳೇ. ಅವರು ತಮ್ಮ ಮಗುತನದ ಮಾತುಗಳನ್ನಾಡದೇ ದೊಡ್ಡವರು ತಾವು ಶ್ರೇಷ್ಟವೆಂದೋ, ಮಹತ್ವವೆಂದೋ ಎಂದು ಭಾವಿಸಿರುವುದನ್ನು ಅಥವಾ ಭ್ರಮಿಸಿರುವುದನ್ನು ಪ್ರದರ್ಶಿಸುವ ಮಕ್ಕಳು ಭೇಷ್ ಗಿರಿ ಪಡೆಯುತ್ತಾರೆ. ಆದರೆ ಅದು ಅವರ ಮಗುತನಕ್ಕೆ ಮಾರಕ. ಮಗುತನದಲ್ಲಿ ಭ್ರಷ್ಟಾಚಾರವಿಲ್ಲ, ಜಾತಿ ಧರ್ಮದ ಅಮಲಿಲ್ಲ, ಸಂಸ್ಕೃತಿಯ ಹಿರಿಮೆ ಇಲ್ಲ, ಸಮಾನತೆ ಸೌಹಾರ್ದತೆಯ ಭಾಷಣಗಳಿಲ್ಲ. ಮತ್ತೇನಿದೆ? ಮತ್ತೇನನ್ನು ಮಾತಾಡಬೇಕು? ನಮಗೂ ಗೊತ್ತಿಲ್ಲ. ಒಂದೊಂದು ಮಗುವು ಒಂದೊಂದನ್ನು ಗಮನಿಸುತ್ತದೆ. ಅದು ಗಮನಿಸಿ ನಮ್ಮ ಗಮನಕ್ಕೆ ತರುವುದನ್ನು ನಾವು ದೃಷ್ಟಿಸಬೇಕು. ಅದನ್ನು ಅವರು ಶೋಧಿಸಲು ಬಿಟ್ಟು ನಾವೂ ಹೊಸ ಶೋಧಗಳನ್ನು ಕಂಡುಕೊಳ್ಳಬೇಕು. ಹಾಗೆ ಮಾಡುವಾಗ ಮಕ್ಕಳ ಸೃಜನಶೀಲತೆ, ಸ್ವತಂತ್ರ ಚಿಂತನೆ ಮತ್ತು ಸಾಚಾ ಹಾಗೂ ತಾಜಾ ಕ್ರಿಯಾಶೀಲತೆ ಉಂಟಾಗುತ್ತದೆ. ಅದರಲ್ಲಿ ನಮಗೆ ಅಚ್ಚರಿಗಳು ಕಾದಿರುತ್ತವೆ. ಅಚ್ಚರಿಗಳನ್ನು ನಾವು ಆಘಾತ ಎಂದುಕೊಂಡರೆ ಅದು ಅವರ ತಪ್ಪಲ್ಲ.
ಅವರನ್ನು ಕ್ರಮಗೊಳಿಸುವ ಮತ್ತು ಅವರ ದಾರಿಯನ್ನು ಅಚ್ಚುಕಟ್ಟು ಮಾಡುವ ಕಾಯಕ ಹಿರಿಯದಾಗಿರುತ್ತದೆ ನಿಜ, ಆದರೆ ಗುರಿಯನ್ನು ಕಟ್ಟಿಕೊಡುವುದು ಹಿರಿಯರ ಕೆಲಸವಲ್ಲ. ಯಾವಾಗಲೂ ಸ್ಪರ್ಧೆಗಳಲ್ಲಿ ನೀನು ಮೊದಲಿಗನಾಗು ಎಂದು ಹುರಿದುಂಬಿಸುವುದರಲ್ಲಿ ತಾತ್ವಿಕತೆ ಇಲ್ಲ. ವಿಫಲವಾದಾಗ ಹುರಿದುಂಬಿಸಿ ನೀನು ನಿನಗಾಗಿ ಕೆಲಸ ಮಾಡಬೇಕು ಎಂದು ಚೈತನ್ಯ ಹೊಂದುವುದಕ್ಕೆ ನೆರವಾಗುವುದರಲ್ಲಿ ದೊಡ್ಡವರ ದೊಡ್ಡತನವಿರುತ್ತದೆ.
ಮಕ್ಕಳನ್ನು ಗೌರವಿಸ ಬೇಕೆಂಬುದು ನಿಜ, ಆದರೆ ಅವರೆಂದಿಗೂ ದೊಡ್ಡವರ ಸಮಾನವಾಗಿದ್ದಾರೆ ಎಂಬ ಭಾವನೆಯನ್ನು ಅವರಲ್ಲಿ ತುಂಬಬಾರದು. ಅವರು ದೊಡ್ಡವರನ್ನು ಅನುಕರಿಸಲು ಯತ್ನಿಸಿದರೆ ಅವರ ಮಗುತನ ನಾಶವಾಗುತ್ತದೆ. ಮಗುವಿನ ಹಕ್ಕುಗಳನ್ನು ಅವರು ಪೂರೈಸಿಕೊಳ್ಳುವುದಕ್ಕೆ ಅವಕಾಶವನ್ನು ಮಾಡಿಕೊಡುತ್ತಲೇ ಪೋಷಕರ ಸಾತ್ವಿಕ ಅಧಿಕಾರವನ್ನೂ ಬಳಸಿಕೊಳ್ಳುವ ಹಕ್ಕು ಪೋಷಕರಿಗಿದೆ. ಇದು ಹದದಲ್ಲಿರದಿರುವುದೇ ಸಮಸ್ಯೆ.

LEAVE A REPLY

Please enter your comment!
Please enter your name here