ತಲ್ಹಾ ಇಸ್ಮಾಯಿಲ್ ಕೆ.ಪಿ
ಟ್ರಸ್ಟಿ, ಸೆಂಟರ್ ಫಾರ್ ಎಜುಕೇಶನಲ್ ರಿಸರ್ಚ್ ಆ್ಯಂಡ್ ಅನಾಲಿಸೀಸ್

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕೆಲವೇ ಗಂಟೆಗಳಲ್ಲಿ 2018ರ ರಾಜ್ಯ ಬಜೆಟನ್ನು ಮಂಡಿಸಲಿದ್ದಾರೆ. ಇದು ಅವರ 13ನೇ ಬಜೆಟ್ ಆಗಿದ್ದು, ಅವರು ಬಜೆಟ್ ಮಂಡಿಸುವುದರಲ್ಲಿ ಒಬ್ಬ ಪರಿಣಿತ ರಾಜಕಾರಣಿ ಎಂಬುವುದರಲ್ಲಿ ಸಂಶಯವಿಲ್ಲ. ಬಜೆಟ್ ಎನ್ನುವಾಗ ಸಮಾಜದಲ್ಲಿ ಎಲ್ಲಾ ವರ್ಗಗಳು ಬಹಳ ನಿರೀಕ್ಷೆಯಿಂದ ಕಾಯುತ್ತಿರುತ್ತದೆ. ರೈತ ವರ್ಗವಾಗಿರಬಹುದು, ಮಹಿಳಾ ಸಬಲೀಕರಣವಾಗಿರಬಹುದು ಅಥವಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಥವಾ ಅಹಿಂದವಾಗಿರಬಹುದು, ಯುವಕರಾಗಿರಬಹುದು, ಉದ್ಯಮಿಗಳಾಗಿರಬಹುದು…ಹೀಗೇ ಇವರೆಲ್ಲರ ಬಹುನಿರೀಕ್ಷಿತ ಬೇಡಿಕೆಗಳ ಈಡೇರಿಕೆಯು ಕೆಲವೊಮ್ಮೆ ಈ ಬಜೆಟ್‍ನಿಂದ ಸಾಧ್ಯವಾಗುತ್ತದೆ. ಇನ್ನು ಕೆಲವು ವರ್ಗದವರಿಗೆ ಸಮಾಧಾನಕರವಾಗಿ ಪರಿಣಮಿಸುತ್ತದೆ. ಆದರೆ, ಸಾಮಾನ್ಯವಾಗಿ ರಾಜ್ಯದ ವಿದ್ಯಾರ್ಥಿ ಸಮುದಾಯವು ಬಜೆಟಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದೇ ಇಲ್ಲ. ಆದ್ದರಿಂದಾಗಿ ಸರಕಾರಗಳು ಬಜೆಟ್ ಮಂಡಿಸುವಾಗ ಶಿಕ್ಷಣ ರಂಗ ಮತ್ತು ವಿದ್ಯಾರ್ಥಿ ಸಮುದಾಯದ ಪರವಾದ ಬಜೆಟ್ ಮಂಡಿಸುವ ಗೋಜಿಗೆ ಹೋಗುವುದೇ ಇಲ್ಲ. ರಾಜ್ಯದ ವಿದ್ಯಾರ್ಥಿ ಸಮುದಾಯವು ಧ್ವನಿ ಇಲ್ಲದ ಒಂದು ಸಮುದಾಯವಾಗಲು ಕಾರಣ, ರಾಜ್ಯದಲ್ಲಿ ವಿದ್ಯಾರ್ಥಿ ಧ್ವನಿಯಾಗಿ ವಿದ್ಯಾರ್ಥಿ ಸಂಘಗಳ ಅಸ್ತಿತ್ವವೇ ಬಹಳ ವಿರಳ.

ಸರಕಾರಗಳು ಬಜೆಟಿನಲ್ಲಿ ವಿದ್ಯಾರ್ಥಿಗಳಿಗೆ ಏನು ನೀಡಿದೆ, ಆ ಯೋಜನೆಗಳ ಪೈಕಿ ಎಷ್ಟರ ಮಟ್ಟಿಗೆ ಅದು ಕಾರ್ಯರೂಪಕ್ಕೆ ಬಂದಿದೆ, ಆ ಯೋಜನೆಗಳು ಅನುಷ್ಠಾನದ ಯಾವ ಹಂತದಲ್ಲಿದೆ ಎಂಬುವುದರ ಬಗ್ಗೆ ವಿದ್ಯಾರ್ಥಿ ಸಮುದಾಯವು ಮಾತನಾಡುವುದೇ ಇಲ್ಲ. ಉದಾಹರಣೆಗೆ, ಒಂದು ಬಜೆಟಿನಲ್ಲಿ ಹೆಣ್ಣು ಮಕ್ಕಳ ಸರಕಾರಿ ಶಾಲೆಗಳ ಹಾಜರಾತಿಗೆ ದಿನಂಪ್ರತಿ ಎರಡು ರೂಪಾಯಿಯಂತೆ ಅವರ ಖಾತೆಗೆ ಪ್ರೋತ್ಸಾಹ ಧನವಾಗಿ ನೀಡುವಂತಹ ಯೋಜನೆ. ನಾನು, ಊರಿನ ಶಾಲೆಗಳ ವಿದ್ಯಾರ್ಥಿನಿಯರು ಮತ್ತು ಅವರ ಹೆತ್ತವರೊಂದಿಗೆ ಈ ಕುರಿತು ವಿಚಾರಿಸಿದಾಗ ನಮಗೆ ಇಂತಹ ಯೋಜನೆ ಬಗ್ಗೆ ಏನೂ ತಿಳಿದಿಲ್ಲವೆಂದೂ ಮತ್ತು ನಮಗೆ ಏನೂ ಸಿಗುತ್ತಿಲ್ಲವೆಂದು ಹೇಳಿದ್ದಾರೆ.

ಮದರಸ ಆಧುನೀಕರಣ ಎಂದು ಸುಮಾರು ಐವತ್ತು ಕೋಟಿ ರೂಪಾಯಿ ಸರಕಾರ ನಿಗದಿಪಡಿಸಿತ್ತು. ನಾನು ಕರ್ನಾಟಕದ ಮದರಸಗಳಿಗೆ ಭೇಟಿ ನೀಡಿದಾಗ, ಅಲ್ಲಿನ ವಿದ್ಯಾರ್ಥಿಗಳಿಗೆ ಆಧುನೀಕರಣದ ಬಗ್ಗೆ ಗೊಂದಲವಿತ್ತು. ಆಧುನೀಕರಣವೆಂದರೆ ವಿದ್ಯಾರ್ಥಿಗಳಿಗೆ ಕೇವಲ ಲ್ಯಾಪ್ ಟಾಪ್ ನೀಡುವುದೇ ಅಥವಾ ಉತ್ತಮ ವಸತಿಗಾಗಿ ಶ್ರಮಿಸುವುದೇ? ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯ ಮತ್ತು ಕಾಲೇಜುಗಳಲ್ಲಿ ಆಧುನಿಕ ಶಿಕ್ಷಣಕ್ಕೆ ಅವಕಾಶ ಕಲ್ಪಿಸುವುದೇ? ಇನ್ನು ನಿಮಗೆ ಏನಾದರೂ ದೊರೆತಿದೆಯೇ ಎಂದು ಕೇಳಿದಾಗ, ನಮಗೆ ಅಂತಹ ಯಾವ ವಿಚಾರವೂ ತಿಳಿದಿಲ್ಲ ಆ ಬಗ್ಗೆ ನಾವೂ ಏನನ್ನೂ ಕೇಳಲೂ ಹೋಗಲಿಲ್ಲ ಎಂದಿದ್ದಾರೆ. ಹೀಗೆ ಎಷ್ಟೋ ಯೋಜನೆಗಳು ಸರಕಾರಗಳು ರೂಪಿಸುತ್ತದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದವೋ, ಜನಜಾಗೃತಿಯ ಮೂಡಿಸುವಲ್ಲಿ ಸರಕಾರದ ವೈಫಲ್ಯದಿಂದಾಗಿ ಸರಕಾರದ ಹಲವಾರು ಯೋಜನೆಗಳು ತಳಮಟ್ಟಕ್ಕೆ ಮುಟ್ಟುತ್ತಿಲ್ಲ. ಇದರಿಂದಾಗಿ ಸರಕಾರದ ಕೆಲಸ ಶೂನ್ಯಯೆಂದು ತಿಳಿದು ಬರುತ್ತದೆ.

ಕಳೆದ ಸಾಲಿನ(2017) ಬಜೆಟಿನಲ್ಲಿ- 1)ರಾಯಚೂರು ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು. 2)ರಾಜ್ಯಾದ್ಯಂತ ತಲಾ 4 ಕೋಟಿ ರೂಪಾಯಿಗಳ ವೆಚ್ಚದಲ್ಲಿ 25 ಹೊಸ ಸರಕಾರಿ ಪಾಲಿಟೆಕ್ನಿಕ್ ಸಂಸ್ಥೆಗಳನ್ನು ಪ್ರಾರಂಭಿಸುವುದು ಹಾಗು ವಿದ್ಯಾರ್ಥಿನಿಯರಿಗಾಗಿ 23 ಸರಕಾರಿ ಪಾಲಿಟೆಕ್ನಿಕ್ ಹಾಸ್ಟೆಲ್‍ಗಳ ನಿರ್ಮಾಣ. 3) ಇಂಜಿನಿಯರಿಂಗ್, ವೈದ್ಯಕೀಯ, ಪಾಲಿಟೆಕ್ನಿಕ್ ಕಲಿಯುತ್ತಿರುವ ಪ್ರಥಮ ದರ್ಜೆಯ ಸರಕಾರಿ ಮತ್ತು ಅನುದಾನಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್. ಈ ಎಲ್ಲಾ ಯೋಜನೆಗಳ ಕುರಿತು ಸರಕಾರ ನೀಡಿರುವ ಭರವಸೆ ಪ್ರಾಮಾಣಿಕವಾಗಿ ಈಡೇರಿಸಿದೆಯೇ? ಎಂಬುದನ್ನು ಪರಿಶೀಲಿಸಬೇಕಾದಂತಹ ಸಂದರ್ಭ ಇದಾಗಿದೆ.

ಸರಕಾರವು ಬಜೆಟ್ ಮಂಡಿಸುವಾಗ ಶಿಕ್ಷಣ ರಂಗವೆಂದೇ ಬಜೆಟ್ ಮಂಡಿಸುತ್ತದೆ. ಆದರೆ, ಒಂದು ವೇಳೆ ಶಿಕ್ಷಣರಂಗವನ್ನು ಮುಂದಿಟ್ಟುಕೊಂಡು ಯುನಿವರ್ಸಿಟಿಗಳ, ಕಾಲೇಜುಗಳ ನಿರ್ಮಾಣ, ಹಾಸ್ಟೆಲ್ ಗಳ ನಿರ್ಮಾಣ, ಉಪನ್ಯಾಸಕರ ಮತು ಶಿಕ್ಷಕರ ವೇತನ ಈ ರೀತಿ ವಿಷಯಗಳಿಗೆ ಒಂದು ಪ್ರತ್ಯೇಕವಾಗಿ ಅನುದಾನವನ್ನು ಗೊತ್ತುಪಡಿಸಬೇಕು. ವಿದ್ಯಾರ್ಥಿ ಸಮುದಾಯವನ್ನು ಮುಂದಿಟ್ಟುಕೊಂಡು ಅವರ ಕಲಿಕೆ, ಫೆಲೋಶಿಪ್, ಇಂಟನ್ರ್ಶಿಪ್, ಪ್ಲೇಸ್ ಮೆಂಟ್, ಕೌಶಲ್ಯ ತರಬೇತಿ, ಪ್ರಯಾಣ ದರ, ಲ್ಯಾಪ್ ಟಾಪ್, ಸೈಕಲು, ಹಾಲು, ಬಿಸಿಯೂಟ ಹೀಗೆ ಅವರ ಪ್ರಮುಖ ಅವಶ್ಯಕತೆಗಳನ್ನು ಮುಂದಿಟ್ಟುಕೊಂಡು ಪ್ರತ್ಯೇಕ ಬಜೆಟನ್ನು ತರಬೇಕು. ಆಗ ವಿದ್ಯಾರ್ಥಿಗಳು ಕೂಡ ಬಜೆಟಿನ ಕುರಿತು ಹೆಚ್ಚು ಕುತೂಹಲ ಮತ್ತು ಕಾತರದಿಂದ ನೋಡುವ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಗಳಿವೆ.

ಈ ಬರುವ ಬಜೆಟಿ(2018)ನಲ್ಲಿ ವಿದ್ಯಾರ್ಥಿಗಳಿಗಾಗಿ ಉಚಿತ ಯಾತ್ರಾಭಾಗ್ಯ(ಬಸ್ ಪ್ರಯಾಣ), ಶೈಕ್ಷಣಿಕ ಪ್ರವಾಸಭಾಗ್ಯ, ವಿದ್ಯಾರ್ಥಿನಿಯರ ಸುರಕ್ಷತೆಗಾಗಿ ಪ್ರತ್ಯೇಕ ವ್ಯವಸ್ಥೆ, ವಿದ್ಯಾರ್ಥಿಗಳಿಗೆ ವಿದೇಶಗಳಲ್ಲಿ ನಡೆಯುವ ಅಂತಾರಾಷ್ರೀಯ ಸೆಮಿನಾರ್, ಕಾನ್ಫರೆನ್ಸ್, ಇಂಟನ್ರ್ಶಿಪ್‍ಗಳಲ್ಲಿ ಭಾಗವಹಿಸಲು ಯಾತ್ರ ವೆಚ್ಚವನ್ನು, ಪ್ರತಿಭಾವಂತ ಕ್ರೀಡಾ ವಿದ್ಯಾರ್ಥಿಗಳಿಗೆ ಸಂಪೂರ್ಣ ಪ್ರೋತ್ಸಾಹವನ್ನು ಸರಕಾರ ನೀಡಬೇಕು. ಶಾಲೆಗಳಲ್ಲಿ ಅಧಿಕೃತವಾಗಿ ಸುಸಜ್ಜಿತ ಪ್ರಯೋಗಾಲಯ ಮತ್ತು ಗ್ರಂಥಾಲಯಗಳ ನಿರ್ಮಾಣ ಕೈಗೊಳ್ಳಬೇಕು. ಕಳೆದ ಬಜೆಟಿನಲ್ಲಿ ನೀಡಲಾಗಿದ್ದ ಲಾಪ್‍ಟಾಪ್ ಭಾಗ್ಯವನ್ನು ವಿಸ್ತರಿಸಿ ರಾಜಕೀಯ ಶಾಸ್ತ್ರ, ಸಮಾಜಶಾಸ್ತ್ರ, ಕಾನೂನುಶಾಸ್ತ್ರ, ಅರ್ಥಶಾಸ್ತ್ರ ಮತ್ತು ವಾಣಿಜ್ಯಶಾಸ್ತ್ರಗಳನ್ನು ಅಭ್ಯಸಿಸುತ್ತಿರುವ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ನೀಡಬೇಕು. ಮದರಸಗಳಿಗೆ ನೀಡಿರುವ ಬಜೆಟನ್ನು ಹೆಚ್ಚಿಸುವ ಸಾಧ್ಯತೆ ಇರಬಹುದೆಂದು ವಿದ್ಯಾರ್ಥಿ ಸಮುದಾಯದಲ್ಲಿ ನಿರೀಕ್ಷೆಯಿದೆ.

ಕೇಂದ್ರ ಸರಕಾರವು 2 ಕೋಟಿ ಉದ್ಯೋಗ ಸೃಷ್ಟಿಯ ಭರವಸೆಯನ್ನು ನೀಡಿತು. ಆದರೆ, ಆ ಭರವಸೆಯು ಹುಸಿಯಾಗಿರುವುದರಿಂದ ರಾಜ್ಯದ ಪದವೀಧರರು, ಸ್ನಾತಕೋತ್ತರ ಪದವೀಧರರು, ಡಿಪ್ಲೋಮ ಪೂರ್ತಿ ಮಾಡಿದವರು ಉದ್ಯೋಗಕ್ಕಾಗಿ ಹರಸಾಹಸ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಂತಹ ನಿರುದ್ಯೋಗಿ ಯುವಕರ ದೊಡ್ಡ ಸಂಖ್ಯೆ ರಾಜ್ಯದಲ್ಲಿ ಇದೆ. ಯುವಕರು ಬೀದಿಗಿಳಿದು ಉದ್ಯೋಗಕ್ಕಾಗಿ ನಿರಂತರವಾಗಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಹಾಗಿರುವಾಗ ಈ ಬಜೆಟ್ ಎಷ್ಟರ ಮಟ್ಟಿಗೆ ಉದ್ಯೋಗ ಸೃಷ್ಟಿಯ ಯೋಜನೆಯನ್ನು ತರುತ್ತದೆ? ಇಂತಹ ಹಲವಾರು ವಿಚಾರಗಳು ಬಜೆಟ್ ಸಂದರ್ಭದಲ್ಲಿ ವಿಧಾನಸಭೆಯಲ್ಲಿ, ಸಾಮಾನ್ಯ ಟಿವಿ ಚರ್ಚೆಗಳಲ್ಲಿ, ಪ್ರತ್ರಿಕೆ ಮಾದ್ಯಮಗಳಲ್ಲಿಯೂ ಕಾಣದಿರುವುದು ವಾಸ್ತವ. ಹಾಗದರೆ ಬಜೆಟಿನಲ್ಲಿ ಚರ್ಚೆಯಾಗುವುದಾದರೂ ಏನು? ಅದರ ಉತ್ತರ ಸ್ಪಷ್ಟ. ಅದೇನೆಂದರೆ ಎರಡೂ ಕೂಡ ಸಾಲ. ರೈತರ ಸಾಲ ಮನ್ನಾ ಮಾಡುವುದು ಮತ್ತೊಂದು ಸರಕಾರವೇ ಸಾಲ ಮಾಡಿಕೊಳ್ಳುವುದು. 2017ರಲ್ಲಿ ಸರಕಾರವು ರೈತರ ಸಾಲ ಮನ್ನಾ ಮಾಡಿರಲಿಲ್ಲ. ನಂತರದ ದಿನಗಳಲ್ಲಿ ಸುಮಾರು 50 ಸಾವಿರ ರೂಪಾಯಿ ಸಾಲ ಮನ್ನಾ ಮಾಡಿತು. ಒಬ್ಬ ರೈತನಿಗೆ ಆಗ ಸುಮಾರು 97,200 ರೂಪಾಯಿಯಷ್ಟು ಸಾಲ ಇತ್ತು. ಸುಮಾರು 77%ದಷ್ಟು ರೈತರ ಮೇಲೆ ಸಾಲದ ಹೊರೆಯಿತ್ತು. ಈಗಿನ ಬಜೆಟ್ ಈ ಸಾಲಗಳನ್ನು ಮನ್ನಾ ಮಾಡುವುದೇ ಎಂಬ ಕುತೂಹಲ ರಾಜ್ಯದ ಜನತೆಯಲ್ಲಿದೆ. ನಿಜವಾಗಿ ಯೋಜನಾ ಬದ್ಧವಾಗಿ ಮಾಡಬೇಕಾಗಿದ್ದಂತಹ ಬಜೆಟ್ 2017ನೇ ವರ್ಷದ ಬಜೆಟ್. ಯಾಕೆಂದರೆ 2018 ಚುನಾವಣಾ ವರ್ಷ. ಹಾಗಾಗಿ ಈ ಬಜೆಟ್ ನಾಮ್ ಕಾ ವಾಸ್ತೆ.

2013-14ರ ಜುಲೈಯಲ್ಲಿ ಸಿ.ಎಂ. ಸಿದ್ಧರಾಮಯ್ಯನವರು ಮಂಡಿಸಿದ್ದ ಬಜೆಟ್‍ನ ಒಟ್ಟು ಗಾತ್ರವು 121611 ಕೋಟಿ. ಅದು 2017ರಲ್ಲಿ 64950 ಕೋಟಿ ಏರಿಕೆಯಾಯಿತು. ಅಂದರೆ, 186567 ಕೋಟಿ ರೂಪಾಯಿಗಳು. ಈ ಭಾರಿ ಬಜೆಟ್‍ನ ಗಾತ್ರವು 2.10 ಅಥವಾ 2.20 ಲಕ್ಷ ಕೋಟಿ ಮೀರುವ ಸಾಧ್ಯತೆ ಇದೆ. ಅಂದರೆ 2013-14ರಲ್ಲಿ ಸರಕಾರದ ಮೇಲಿನ ಸಾಲದ ಪ್ರಮಾಣವು 117501 ಕೋಟಿ ಇತ್ತು. ಅದು 2017ಕ್ಕೆ 247420 ಕೋಟಿಗೆ ಏರಿಕೆಯಾಯಿತು. ಹಾಗಾದರೆ, 2018ರಲ್ಲಿ ರಾಜ್ಯದ ಸಾಲದ ಹೊರೆ ಎಷ್ಟು ಹೆಚ್ಚಾಗಬಹುದೆಂದು ಊಹಿಸಬಹುದಾಗಿದೆ. ಸಿದ್ಧರಾಮಯ್ಯ ಸರಕಾರವು ಪಾಪ್ಯುಲರ್ ಸ್ಕೀಮ್‍ಗಳ ಕಡೆಗ ಗಮನಕೊಟ್ಟು ಪಂಚಾಯತ್‍ಗಳನ್ನು ಕಡೆಗಣಿಸಿರುವುದರಿಂದ ಅಲ್ಲಿ ಮೂಲಸೌಕರ್ಯಗಳ ಕೊರತೆಯುಂಟಾಗಿ ಬರಬೇಕಾಗಿದ್ದಂತಹ ಕಂದಾಯವು ಕಡಿಮೆಯಾಗಿದೆ.

ಕನ್ನಡಪರ ಹೋರಾಟದಿಂದ ರಾಜಕೀಯಕ್ಕೆ ಬಂದಿರುವಂತಹ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿರುವಾಗಲೇ ಸಾವಿರಾರು ಕನ್ನಡ ಶಾಲೆಗಳು ಮುಚ್ಚಿ ಹೋಗಿರುವುದು ದುರದೃಷ್ಟಕರ. ಎಷ್ಟೋ ಶಾಲೆಗಳು ಮೂಲಭೂತ ಸೌಕರ್ಯಗಳಿಲ್ಲದೆ, ಶಿಕ್ಷಕರಿಲ್ಲದೆ ಮುಚ್ಚುವ ಸ್ಥಿತಿಗೆ ತಲುಪಿರುವಾಗ ಸರಕಾರವು ಬಜೆಟಿನ ದೊಡ್ಡ ಪಾಲನ್ನು ಖಾಸಗಿ ಶಾಲೆಗಳ ಆಡಳಿತ ಮಂಡಳಿಗೆ ನೀಡುತ್ತಿದೆ. ಪ್ರತಿ ಆರ್.ಟಿ.ಇ ಸೀಟಿಗೆ ಸುಮಾರು 16,000ರೂ. ಗಳನ್ನು ನೀಡುತ್ತಿರುವಾಗ ಹೇಗೆ ತಾನೆ ಸರಕಾರಿ ಶಾಲೆಗಳ ಬಗ್ಗೆ ಚಿಂತಿಸಲು ಸಾಧ್ಯ? ದಿಲ್ಲಿ ಸರಕಾರವು ದೇಶದಲ್ಲಿಯೇ ಶಿಕ್ಷಣ ರಂಗಕ್ಕೆಂದು ಅತೀ ಹೆಚ್ಚು ಬಜೆಟನ್ನು(ಒಟ್ಟು ಬಜೆಟಿನ 24%) ನೀಡಿತು. ನಮ್ಮ ಸರಕಾರವು ಬಹಳ ಕಡಿಮೆ ಹಣವು ನೀಡುತ್ತಿದೆ ಎಂಬುವುದು ವಾಸ್ತವ. ಬರುವ ದಿನಗಳಲ್ಲಿ ಇದರಲ್ಲಿ ಬದಲಾವಣೆಯನ್ನು ನಿರೀಕ್ಷಿಸುತ್ತೇವೆ.

 

 

LEAVE A REPLY

Please enter your comment!
Please enter your name here