ವೈರಸ್ ಸಿನಿಮಾದಲ್ಲಿ ಗಮನಿಸಬೇಕಾದ ಮಹತ್ವದ ಸಂಗತಿಯೆಂದರೆ ಅಲ್ಲಿನ ಜನರ, ಆಡಳಿತದ, ವಿರೋಧ ಪಕ್ಷದ ಒಗ್ಗಟ್ಟು. ಉಳಿದೆಲ್ಲ ಸಮಯಗಳಲ್ಲಿ ಸರ್ಕಾರ ಮತ್ತು ವಿರೋಧ ಪಕ್ಷದ ನಡುವೆ ಬಹಳಷ್ಟು ಭಿನ್ನಾಭಿಪ್ರಾಯಗಳಿರುತ್ತವೆ. ಆದರೆ ಆರೋಗ್ಯದ ವಿಚಾರಕ್ಕೆ ಬಂದಾಗ ಒಗ್ಗೂಡಿ ಹೋರಾಡುವ ಅವರ ಮನಸ್ಥಿತಿ ನಿಜಕ್ಕೂ ಶ್ಲಾಘನೀಯ.

  • ಶರೀಫ್ ಕಾಡುಮಠ

ಕೊರೊನಾ, ಭಾರತವನ್ನೂ ಒಳಗೊಂಡು ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಮಾರಕ ವೈರಸ್. ಚೀನಾದಿಂದ ಹಬ್ಬಿ ಹಲವು ಪ್ರಮುಖ ರಾಷ್ಟ್ರಗಳಿಗೆ ಹರಡಿರುವ ಈ ವೈರಸ್‍ನ ವಿರುದ್ಧ ಹೋರಾಡುವುದಕ್ಕೆ ವೈದ್ಯಲೋಕ ತನ್ನ ಸಾಧ್ಯತೆಯ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದೆ. ಆದರೆ ಈಗಾಗಲೇ ಜಗತ್ತಿನಾದ್ಯಂತ ಲಕ್ಷಾಂತರ ಜೀವಗಳನ್ನು ಕೊರೊನಾ ಬಲಿತೆಗೆದುಕೊಂಡಾಗಿದೆ. ಕೊರೊನಾ ವೈರಸ್‍ನ ಹರಡುವಿಕೆಯ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಮತ್ತೆ ಸುದ್ದಿಗೆ ಬಂದ ಇಂಗ್ಲಿಷ್ ಸಿನಿಮಾ ‘ಕಂಟೇಜಿಯನ್’. 2011ರಲ್ಲಿ ಬಿಡುಗಡೆಯಾದ ಈ ಸಿನಿಮಾ ಅಂದಿಗಿಂತ ಹೆಚ್ಚು ಈಗ ಪ್ರಸ್ತುತವೆನಿಸಿದೆ. ಅಮೆರಿಕದ ಹೆಸರಾಂತ ನಿರ್ದೇಶಕ ಸ್ಟೀವನ್ ಸದರ್‍ಬರ್ಗ್ ಈ ಚಿತ್ರದ ನಿರ್ದೇಶಕ. ನಥಿಂಗ್ ಸ್ಪ್ರೆಡ್ಸ್ ಲೈಕ್ ಫಿಯರ್(ಭಯದಂತೆ ಯಾವುದೂ ಹರಡುವುದಿಲ್ಲ!). ಇದು ಕಂಟೇಜಿಯನ್ ಸಿನಿಮಾ ಸಾರಿದ ಒಂದು ತುರ್ತು ಮತ್ತು ಪರಿಣಾಮಕಾರಿ ಸಂದೇಶ. ಸಿನಿಮಾದ ಅಡಿಬರಹವಾಗಿರುವ ಈ ಸಾಲು, ಸದ್ಯದ ವಾತಾವರಣದಲ್ಲಿ, ಜನರನ್ನು ಕೊರೊನಾ ಭೀತಿಯಿಂದ ಹೊರತರಲು ಸ್ವಲ್ಪಮಟ್ಟಿಗೆ ಸಹಕಾರಿಯಾಗಬಹುದು. ಈ ವೈರಸ್‍ಗಿಂತ ವೇಗವಾಗಿ ವೈರಸ್ ಕುರಿತ ಭಯವೇ ಹರಡುತ್ತದೆ ಎಂಬ ವಾಸ್ತವ ಸಂಗತಿಯನ್ನು ಈ ಸಾಲು ಥಟ್ಟೆಂದು ಹೇಳಿಬಿಡುತ್ತದೆ. ಕೊರೊನಾ ಹಿನ್ನೆಲೆಯಲ್ಲಿ ಕಂಟೇಜಿಯನ್ ಸಿನಿಮಾ ಕುರಿತ ಚರ್ಚೆಗಳು ರಾಷ್ಟ್ರ, ಅಂತರರಾಷ್ಟ್ರೀಯ ಸುದ್ದಿಮಾಧ್ಯಮಗಳಲ್ಲಿ ನಡೆಯುತ್ತಿವೆ. ಕಂಟೇಜಿಯನ್‍ನಲ್ಲಿ ಎಮ್‍ಇವಿ-1 ಎಂಬ ಸೋಂಕು ಹರಡುವುದನ್ನು ತೋರಿಸಿದರೂ ಇಲ್ಲಿನ ಎಲ್ಲಾ ದೃಶ್ಯ, ಸಂದರ್ಭಗಳೂ ಈಗಿನ ಜಾಗತಿಕ ಚಿತ್ರಣಕ್ಕೆ ಕನ್ನಡಿ ಹಿಡಿದಂತೆ ತೋರುತ್ತಿದೆ. ಚಿತ್ರದ ಕ್ಲೈಮ್ಯಾಕ್ಸ್‍ನಲ್ಲಿ ವೈರಸ್ ತಡೆಯಲು ಬೇಕಾದ ಲಸಿಕೆಯನ್ನು ಉತ್ಪಾದಿಸುವ ದೃಶ್ಯವಿದೆ. ಲಸಿಕೆ ಕಂಡುಹಿಡಿದ ವೈದ್ಯೆ ತನ್ನ ಸಹೋದ್ಯೋಗಿ ಜತೆ ಪ್ರಯೋಗಾಲಯಕ್ಕೆ ಬಂದು ಯಂತ್ರದೊಳಗೆ ಒಂದೇ ಕಟ್ಟಿನಲ್ಲಿ ಜೋಡಿಸಿಟ್ಟಿದ್ದ ಮೂರು ಲಸಿಕೆಗಳ ಪೆಟ್ಟಿಗೆಗಳನ್ನು ಒಂದು ಬಾರಿ ಮೇಲೆತ್ತುತ್ತಾಳೆ. ಸಾರ್ಸ್, ಎಚ್1ಎನ್1 ಹಾಗೂ ಎಮ್‍ಇವಿ-1 ಎಂದು ಕ್ರಮವಾಗಿ ಮೂರು ಪೆಟ್ಟಿಗೆಗಳಲ್ಲಿ ಬರೆದಿರುತ್ತದೆ. ಎಮ್‍ಇವಿ-1 ಎಂಬುದು ಕಾಲ್ಪನಿಕವಾಗಿ ನಿರ್ದೇಶಕ ಬಳಸಿರುವ ಒಂದು ಹೆಸರು ಮಾತ್ರ. ಆದರೆ ಈ ವೈರಸ್‍ನ ಕಲ್ಪನೆ, ಲಕ್ಷಣಗಳು ಕೊರೊನಾ ಸೋಂಕಿನ ಬೆಳವಣಿಗೆಯಂತೆಯೇ ಇರುವುದು ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಈಗ ಆ ದೃಶ್ಯ ಒಂದು ಎಚ್ಚರಿಕೆಯಂತೆಯೇ ಕಾಣಿಸುತ್ತದೆ. ಪ್ರಸ್ತುತ ಲಾಕ್‍ಡೌನ್‍ನ ಅನುಭವವನ್ನು ಕಂಟೇಜಿಯನ್ ಕೂಡಾ ನೀಡುತ್ತದೆ. ವೈರಸ್ ಹರಡುವಿಕೆಯ ಅಪಾಯಕಾರಿ ಸಂದರ್ಭವನ್ನು ಜಗತ್ತು ಹೇಗೆ ಎದುರಿಸಬಹುದು, ಯಾವ ಬಗೆಯಲ್ಲಿ ಪರಿಹಾರಗಳನ್ನು ಕಂಡುಕೊಳ್ಳಬಹುದು ಎನ್ನುವುದಕ್ಕೆ ಪೂರಕವಾಗಿ ಒಂದು ಚಿತ್ರಣವನ್ನು ಈ ಸಿನಿಮಾ ಸಂಪೂರ್ಣವಾಗಿ ಒದಗಿಸುತ್ತದೆ. ಇತ್ತೀಚೆಗೆ ಕರ್ನಾಟಕದಲ್ಲಿ ಲಾಕ್‍ಡೌನ್ ಆರಂಭವಾದ ಸಂದರ್ಭ ಇನ್ನು ಕೆಲವು ದಿನಗಳ ಕಾಲ ಮಾರುಕಟ್ಟೆಗಳಲ್ಲಿ ದಿನಸಿ ಸಾಮಾನುಗಳು, ತರಕಾರಿ, ಮಾಂಸ ಸಿಗುವುದಿಲ್ಲ ಎಂದಾದಾಗ ಜನರು ಮಾರುಕಟ್ಟೆಗಳಿಗೆ ಮುಗಿಬಿದ್ದ ರೀತಿಯನ್ನು ನಾವೆಲ್ಲ ಸುದ್ದಿ ಮಾಧ್ಯಮಗಳ ಮೂಲಕ ಕಂಡಿದ್ದೇವೆ. ಇದೇ ಮಾದರಿಯ ದೃಶ್ಯಗಳನ್ನು ಕಂಟೇಜಿಯನ್ ಹೊಂದಿದೆ. ಮಾಂಸಕ್ಕಾಗಿ, ವೈದ್ಯಕೀಯ ಔಷಧಿಗಳಿಗಾಗಿ ಜನರು ಹೊಡೆದಾಡಿಕೊಳ್ಳುವುದು, ಮುಗಿಬೀಳುವುದು ಅಲ್ಲದೆ ಕ್ವಾರಂಟೈನ್ ಸಂದರ್ಭ ರಸ್ತೆಯಲ್ಲಿ ವಾಹನಗಳನ್ನು ಪೊಲೀಸರು ತಡೆಯುವಾಗ ಜಗಳಕ್ಕಿಳಿಯುವ ಚಾಲಕರು… ಈ ಎಲ್ಲ ಚಿತ್ರಣಗಳು ಜನಸಾಮಾನ್ಯರ ಮಾನಸಿಕ ಸ್ಥಿತಿಯನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಂಡು ನಿರ್ಮಿಸಲಾಗಿದೆ ಎಂಬುದನ್ನು ಸ್ಪಷ್ಟವಾಗಿಸುತ್ತದೆ.

ಸದರ್‍ಬರ್ಗ್ ಒಬ್ಬ ಅಸಾಧಾರಣ ನಿರ್ದೇಶಕ ಎನ್ನುವುದಕ್ಕೆ ಕಂಟೇಜಿಯನ್ ಸಿನಿಮಾ ಒಂದು ಪ್ರಮುಖ ಎನ್ನಬಹುದು. ವಿಜ್ಞಾನದ ವಿಷಯಗಳನ್ನು ಸಿನಿಮಾದಲ್ಲಿ ತೋರಿಸುವಾಗ ಬೇಕಾಗುವ ಕಾಳಜಿಯನ್ನು ಹಾಲಿವುಡ್‍ನಲ್ಲೇ ಕೆಲವು ನಿರ್ದೇಶಕರು ತೋರಿಲ್ಲ. ‘ಔಟ್‍ಬ್ರೇಕ್’ ಎಂಬ ಸಿನಿಮಾ ವಿಜ್ಞಾನದ ಕಥಾವಸ್ತುವನ್ನು ಹೊಂದಿದ್ದರೂ ಕಂಟೇಜಿಯನ್‍ನ ಮುಂದೆ ಅದು ‘ವಿಜ್ಞಾನಕ್ಕೆ ಬಗೆದ ಅಪಚಾರದಂತೆ’ ಎಂಬಂತಹ ಟೀಕೆಗಳೂ ಬಂದಿವೆ. ಆಸ್ಕರ್‍ಗೆ ಅರ್ಹವಾಗಿರುವ ಕಂಟೇಜಿಯನ್ ಸಿನಿಮಾಗೆ ಆಸ್ಕರ್ ಏಕೆ ದಕ್ಕಿಲ್ಲ ಎಂಬ ಪ್ರಶ್ನೆಯೂ ಸಿನಿ ವಿಮರ್ಶಕರ ವಲಯದಲ್ಲಿ ಕೇಳಿಬಂದಿದೆ. ವಾಸ್ತವ ಅಂಶಗಳಿಗೆ ತೀರ ಹತ್ತಿರದ ಕೆಲವು ವಿಚಾರಗಳನ್ನೂ ಈ ಚಿತ್ರ ಮುನ್ನೆಲೆಗೆ ತಂದಿದೆ. ಒಬ್ಬ ಬ್ಲಾಗರ್ ಹರಡುವ ಸುಳ್ಳುಸುದ್ದಿ, ವೈರಸ್ ಸೋಂಕಿತ ವೈದ್ಯೆಗೋಸ್ಕರ ಬಳಸಬೇಕಾಗಿದ್ದ ವಿಶೇಷ ವಿಮಾನವನ್ನು ರಾಜಕಾರಣಿಗೋಸ್ಕರ ಬಳಸುವುದು, ಸೋಂಕಿನ ಭಯದಿಂದ ಇನ್ನೊಬ್ಬರಿಗೆ ಸಹಾಯ ಮಾಡದೆ ಇರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವುದು ಮುಂತಾದವುಗಳನ್ನು ತೀರಾ ಸಹಜ ರೀತಿಯಲ್ಲಿ ಚಿತ್ರಿಸಿದ್ದಾರೆ. ಹಣಕ್ಕೋಸ್ಕರ ಫೋರ್ಸಿತಿಯ ಎಂಬ ನಕಲಿ ಲಸಿಕೆಯನ್ನು ಪ್ರಚಾರ ಮಾಡುವುದರ ಜೊತೆಗೆ ವಿಶ್ವ ಆರೋಗ್ಯ ಸಂಸ್ಥೆ ಫಾರ್ಮಾಸ್ಯುಟಿಕಲ್ ಕಂಪನಿಗಳ ಜತೆ ಒಪ್ಪಂದ ನಡೆಸಿದೆ ಎಂದು ಅಪವಾದ ಹೊರಿಸುವ ಪ್ರಯತ್ನವನ್ನು ಬ್ಲಾಗರ್ ಮಾಡುತ್ತಾನೆ (ಇತ್ತೀಚೆಗೆ ಚೀನಾ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಒಪ್ಪಂದ ಮಾಡಿಕೊಂಡಿವೆ ಎಂದು ಟ್ರಂಪ್ ಹೇಳಿಕೆ ನೀಡಿದ್ದನ್ನು ಇಲ್ಲಿ ನೆನಪಿಸಬಹುದು). ಡಾ.ಚೀವರ್ ಎಂಬ ವೈದ್ಯ ಆ ಬ್ಲಾಗರ್‍ನನ್ನು ‘ನೀನು ಹರಡುತ್ತಿರುವ ಸುಳ್ಳುಸುದ್ದಿ ವೈರಸ್‍ಗಿಂತಲೂ ಅಪಾಯಕಾರಿ’ ಎಂದು ಹೇಳುತ್ತಾನೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ, ಸಾಲು ಸಾಲು ಹೆಣಗಳನ್ನು ಕಣಿವೆಯೊಂದರಲ್ಲಿ ಮಲಗಿಸಿ ದಫನ ಮಾಡುವ ಫೋಟೋವೊಂದು ಚೀನೀ ಭಾಷೆಯ ಅಡಿಬರಹದೊಂದಿಗೆ ಜಗತ್ತಿಡೀ ಹರಡಿತ್ತು. ಎಲ್ಲರೂ ಅವು ಕೊರೊನಾ ವೈರಸ್‍ಗೆ ಬಲಿಯಾದ ರೋಗಿಗಳ ಮೃತದೇಹ ಎಂದುಕೊಂಡು ಆ ಚಿತ್ರವನ್ನು ಹಂಚಿದ್ದರು. ಆದರೆ ಅದು ಕಂಟೇಜಿಯನ್ ಸಿನಿಮಾದ ಟ್ರೇಲರ್‍ನ ದೃಶ್ಯವೊಂದರ ಚಿತ್ರವಾಗಿತ್ತು.ಎರಡು ಭಿನ್ನ ಜೀವಿಗಳಿಂದಾಗಿ ಇಂತಹ ಅಪಾಯಕಾರಿ ವೈರಸ್‍ಗಳು ಸೃಷ್ಟಿಯಾಗಲು ಸಾಧ್ಯ ಎಂಬುದನ್ನು ನಿರ್ದೇಶಕ ಇಲ್ಲಿ ತೋರಿಸಿದ್ದಾರೆ. ಕೇವಲ ಬಾವಲಿ ಅಥವಾ ಕೇವಲ ಹಂದಿಯಿಂದಲೋ ಅಲ್ಲ, ಇವೆರಡೂ ಜೀವಿಗಳು ಹೇಗೆ ವೈರಸ್ ಸೃಷ್ಟಿಗೆ ಕಾರಣವಾಗುತ್ತದೆ ಎಂಬುದರ ಕುರಿತು ಒಂದು ಸಾಧ್ಯತೆಯನ್ನು ನಿರ್ದೇಶಕ ಮುಂದಿಟ್ಟಿದ್ದಾರೆ. ವೈರಸ್ಕಂಟೇಜಿಯನ್ ಸಿನಿಮಾ ಮಾದರಿಯ, ‘ವೈರಸ್’ ಎಂಬ ಮಲಯಾಳಂ ಸಿನಿಮಾವೊಂದು 2019ರಲ್ಲಿ ಬಿಡುಗಡೆಯಾಗಿದೆ. ಕೇರಳದಲ್ಲಿ ವ್ಯಾಪಕವಾಗಿ ಹರಡಿದ ‘ನಿಫಾ’ ವೈರಸ್ ಮೂಡಿಸಿದ ಕರಾಳ ಛಾಯೆಯನ್ನು ದಟ್ಟವಾಗಿ ಈ ಚಿತ್ರ ಹಿಡಿದಿಟ್ಟಿದೆ. ಅಲ್ಲದೆ ಇನ್ನೂರಕ್ಕೂ ಅಧಿಕ ಜನರನ್ನು ಬಲಿ ತೆಗೆದುಕೊಂಡ ನಿಫಾ ವೈರಸ್‍ಅನ್ನು ತಡೆಗಟ್ಟುವಲ್ಲಿ ಕೇರಳದ ವೈದ್ಯಲೋಕ ಯಶಸ್ವಿಯಾದ ಬಗೆಯನ್ನೂ ಸಿನಿಮಾದಲ್ಲಿ ತೋರಿಸಲಾಗಿದೆ. ಅಂತಹ ಅಪಾಯಕಾರಿ ಸಂದರ್ಭದಲ್ಲಿ ಅಲ್ಲಿನ ಆಡಳಿತ ವ್ಯವಸ್ಥೆ ತೆಗೆದುಕೊಂಡ ದಿಟ್ಟ ನಿರ್ಧಾರಗಳು ನಿಫಾ ತಡೆಗೆ ಸಹಕಾರಿಯಾಗಿದ್ದವು. ಇವೆಲ್ಲ ಅಂಶಗಳನ್ನೂ ಒಳಗೊಂಡು ಈ ಚಿತ್ರ, ಆಶಿಕ್ ಅಬು ಅವರ ನಿರ್ದೇಶನದಲ್ಲಿ ಅಚ್ಚುಕಟ್ಟಾಗಿ ಮೂಡಿಬಂದಿದೆ. ಜಿಲ್ಲಾಧಕಾರಿ ಪಾತ್ರದಲ್ಲಿ ಟೊವಿನೊ ಥೋಮಸ್, ವೈದ್ಯನಾಗಿ ಕುಂಜಕೊ ಬೋಬನ್, ರೆಹಮಾನ್, ನಿಫಾ ಸೋಂಕು ಬಾಧಿತರಾಗಿ ಸೌಬಿನ್ ಶಾಹಿರ್, ಶರಫುದ್ದೀನ್, ಆಸಿಫ್ ಅಲಿ, ಇಂದ್ರಾನ್ಸ್ ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇಂದ್ರಜಿತ್ ಸುಕುಮಾರನ್, ಜೋಜು ಜಾರ್ಜ್, ಪಾರ್ವತಿ ಮೆನನ್, ರೀಮಾ ಕಲ್ಲಿಂಗಳ್ ಮುಂತಾದವರ ಅಭಿನಯವೂ ಮನೋಜ್ಞವಾಗಿವೆ. ನಿಫಾ ಆಗಲಿ, ಕೊರೊನಾ ಆಗಲಿ, ಕೇರಳಿಗರ ದೊಡ್ಡ ಬಲ ಎಂದರೆ ಅಲ್ಲಿನ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ. ಅವರು ಮಲಯಾಳಿಗರ ಪ್ರೀತಿಯ ಶೈಲಜಾ ಟೀಚರ್. ಆರೋಗ್ಯ ಸಚಿವೆಯಾಗಿ ನಿಫಾದಂತಹ ಮಾರಕ ಸೋಂಕಿನ ಹರಡುವಿಕೆಯನ್ನು ಸಮರ್ಥವಾಗಿ ನಿಭಾಯಿಸಿದ ಬಗೆ ನಿಜಕ್ಕೂ ಎಲ್ಲರನ್ನೂ ಬೆರಗುಗೊಳಿಸಿದೆ. ಚಿತ್ರದಲ್ಲಿ ಕೆ.ಕೆ.ಶೈಲಜಾ ಅವರ ಪಾತ್ರವನ್ನು ನಟಿ ರೇವತಿ ನಿಭಾಯಿಸಿದ್ದಾರೆ. ಈಗಲಾದರೂ ಕೊರೊನಾ ಸಂದರ್ಭದಲ್ಲಿ ಅತ್ಯಂತ ಯಶಸ್ವಿಯಾಗಿ ಚಿಕಿತ್ಸೆ, ನಿಯಂತ್ರಣದಲ್ಲಿ ತೊಡಗಿರುವ ರಾಜ್ಯ ಎಂದರೆ ಅದು ಕೇರಳ. ಈ ಕಾರಣಕ್ಕಾಗಿಯೇ ಅದು ವಿಶ್ವಮಟ್ಟದಲ್ಲಿ ಸುದ್ದಿಯಾಗಿದೆ. ಅಮೆರಿಕದ ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ತನ್ನ ಮುಖಪುಟದಲ್ಲಿ ಕೇರಳ ಸರ್ಕಾರದ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರ ಕಾರ್ಯವೈಖರಿಗೆ ಕೊಂಡಾಡಿದೆ. ಕಾಸರಗೋಡು-ಮಂಗಳೂರು ಗಡಿ ಬಂದ್ ಮಾಡಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೈಗೊಂಡ ನಿರ್ಧಾರ ಕೇರಳಿಗರನ್ನು ಕೆರಳಿಸಿತ್ತಾದರೂ ಕಾಸರಗೋಡಿನ ಜನತೆಗೆ ಅದೇ ಈಗ ವರವಾದಂತಿದೆ. ಈಗ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಕಂಡರೆ ಕೇರಳದಲ್ಲಿ ಇಳಿಮುಖವಾಗುತ್ತಿದೆ. ಸದ್ಯ ವೈರಸ್ ಸಿನಿಮಾವನ್ನು ಕೊರೊನಾ ಕಾಳಜಿಯ ಹಿನ್ನೆಲೆಯಲ್ಲಿ ನೋಡಬೇಕಾದ ಅಗತ್ಯವಿದೆ. ಸಿನಿಮಾದಲ್ಲಿ ಕಾಣಿಸಿಕೊಂಡ ಹೆಚ್ಚಿನ ಪಾತ್ರಗಳ ಹಿಂದೆ ನಿಫಾ ನಿಯಂತ್ರಣದಲ್ಲಿ ಕೈಜೋಡಿಸಿದ ನಿಜವಾದ ಮುಖಗಳಿವೆ. ಜಿಲ್ಲಾಧಿಕಾರಿ ವಿ.ಯು.ಪೌಲ್‍ನ(ಟೊವಿನೊ ಥೋಮಸ್), ಕೇರಳದಲ್ಲಿ ನಿಫಾ ವೈರಸ್‍ನ ಮೊದಲ ಸೋಂಕಿತ ಆರೈಕೆಯಲ್ಲಿ ತೊಡಗಿ ಅದೇ ಸೋಕಿಗೆ ಬಲಿಯಾದ ನರ್ಸ್ ಲಿನಿ(ರೀಮಾ ಕಲ್ಲಿಂಗಳ್), ನಿಫಾಗೆ ಬಲಿಯಾದವರ ಅಂತ್ಯಸಂಸ್ಕಾರಕ್ಕೆ ಮೊದಲು ಮುಂದೆ ಬಂದ ಕೋಯಿಕ್ಕೋಡ್ ಮೂಲದ ವೈದ್ಯ ಡಾ.ಆರ್.ಎಸ್.ಗೋಪಕುಮಾರ್(ಇಂದ್ರಜಿತ್ ಸುಕುಮಾರನ್), ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿಯಾಗಿ ನಿಫಾ ಸೋಂಕಿತರ ಬಗ್ಗೆ ಕುತೂಹಲದಿಂದ ಅಧ್ಯಯನ ನಡೆಸಿ ಆರೋಗ್ಯ ಅಧಿಕಾರಿಗಳಿಂದ ಮೆಚ್ಚುಗೆ ಗಳಿಸಿಕೊಂಡ ಡಾ.ಸೀತು ಪೊನ್ನುತಂಬಿ(ಪಾರ್ವತಿ), ಹರಡಿರುವ ಸೋಂಕು ‘ನಿಫಾ’ ಎಂಬುದನ್ನು ಕಂಡುಹಿಡಿದ ಪ್ರಖ್ಯಾತ ವೈದ್ಯ ಮಣಿಪಾಲ್ ವೈರಸ್ ಸಂಶೋಧನಾ ಕೇಂದ್ರದ ಡಾ.ಗೋವಿಂದಕರ್ನವರ್ ಆರುಣ್‍ಕುಮಾರ್(ಕುಂಜಕೊ ಬೋಬನ್), ಆರೋಗ್ಯ ಸೇವಾ ನಿರ್ದೇಶಕಿ ಆರ್.ಎಲ್.ಸರಿತಾ(ಪೂರ್ಣಿಮಾ ಇಂದ್ರಜಿತ್), ಸೋಂಕಿಗೆ ಬಲಿಯಾದವರ ದೇಹಗಳನ್ನು ಸಾಗಿಸುವ ಕೆಲಸ ಮಾಡಲು ಒಪ್ಪಿಕೊಂಡು ಮುಂದೆ ಬರುವ ಬಿ.ಪಿ.ಎಂ.ರಜೀಶ್(ಜೋಜು ಜಾರ್ಜ್) ಹೀಗೆ ಇವೆಲ್ಲ ನಿಜವಾದ ಪಾತ್ರಗಳು. ಈ ಸಿನಿಮಾದಲ್ಲಿ(ಮತ್ತು ಕೇರಳದಲ್ಲಿ) ಗಮನಿಸಬೇಕಾದ ಮಹತ್ವದ ಸಂಗತಿಯೆಂದರೆ ಅಲ್ಲಿನ ಜನರ, ಆಡಳಿತದ, ವಿರೋಧ ಪಕ್ಷದ ಒಗ್ಗಟ್ಟು. ಉಳಿದೆಲ್ಲ ಸಮಯಗಳಲ್ಲಿ ಸರ್ಕಾರ ಮತ್ತು ವಿರೋಧ ಪಕ್ಷದ ನಡುವೆಯಾಗಲಿ, ಜನರ ನಡುವೆಯಾಗಲಿ ಬಹಳಷ್ಟು ಭಿನ್ನಾಭಿಪ್ರಾಯಗಳಿರುತ್ತವೆ. ಆದರೆ ಆರೋಗ್ಯದ ವಿಚಾರಕ್ಕೆ ಬಂದಾಗ ಒಗ್ಗೂಡಿ ಹೋರಾಡುವ ಅವರ ಮನಸ್ಥಿತಿ ನಿಜಕ್ಕೂ ಶ್ಲಾಘನೀಯ. ಚಿತ್ರದ ಆರಂಭದಲ್ಲಿಯೇ ವೈದ್ಯಕೀಯ ತ್ಯಾಜ್ಯದ ರಾಶೀಯ ದೃಶ್ಯ ಬರುತ್ತದೆ. ಈ ತ್ಯಾಜ್ಯದಿಂದಲೇ ವೈರಸ್ ಹಬ್ಬಿರಬೇಕು ಎಂದು ವೀಕ್ಷಕ ತಕ್ಷಣ ಭಾವಿಸಬಹುದಾದರೂ, ಪರೋಕ್ಷವಾಗಿ ಆ ದೃಶ್ಯ ಅಲ್ಲಿನ ಸ್ವಚ್ಛತಾ ಕಾರ್ಯ ಕೈಗೊಳ್ಳುವವರು ಮಾಡಿರುವ ಕೆಲಸದ ಮಟ್ಟವನ್ನು ಆ ತ್ಯಾಜ್ಯದ ರಾಶಿ ಪ್ರತಿನಿಧಿಸುತ್ತದೆ ಎಂಬುದು ಮನವರಿಕೆಯಾಗುತ್ತದೆ. ಒಗ್ಗಟ್ಟಾಗಿ ನಿಲ್ಲುವುದೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ಕೈಜೋಡಿಸುವುದಲ್ಲ ಎನ್ನುವುದನ್ನು ಈ ಚಿತ್ರ ನಮಗೆ ಕಲಿಸಿಕೊಡುತ್ತದೆ. ಮೇಲಿನ ಎಲ್ಲಾ ಪಾತ್ರಗಳನ್ನು ಗಮನಿಸುವಾಗ ಅಲ್ಲಿನ ಒಗ್ಗಟ್ಟಿನ ಪ್ರತಿಫಲವನ್ನು ನಾವು ಊಹಿಸಲು ಸಾಧ್ಯ. ಜಿಲ್ಲಾಧಿಕಾರಿ- ಆರೋಗ್ಯ ಸಚಿವೆ-ವೈದ್ಯರು-ನರ್ಸ್‍ಗಳು-ಸಂಶೋಧಕ- ಸಂಶೋಧನಾ ವಿದ್ಯಾರ್ಥಿನಿ- ಅಂತ್ಯಸಂಸ್ಕಾರ ಮಾಡುವ ವೈದ್ಯ- ಸ್ವಚ್ಛತಾ ಕಾರ್ಯ ನಿರ್ವಹಿಸುವವ… ಇದೊಂದು ಸರಪಳಿ. ಸೂಕ್ತ ವ್ಯಕ್ತಿಗಳು ಜವಾಬ್ದಾರಿ ಹೊತ್ತು ಮಾಡುವ ಕೆಲಸ. ಕೇಂದ್ರದಿಂದ ಪರಿಶೀಲನೆಗೆ ಬರುವ ತಂಡ, ಕೇರಳದ ಮೊದಲ ನಿಫಾ ರೋಗಿಯ ಬಗ್ಗೆ (ಡಾ.ಪೊನ್ನುತಂಬಿ ಸಹಾಯದಿಂದ) ಕಲೆಹಾಕಿದ ಮಾಹಿತಿಯನ್ನು ಕಂಡು ಬೆರಗಾಗುವ ಜಿಲ್ಲಾಧಿಕಾರಿ, ‘ನಿಮಗೆ ಇಷ್ಟೊಂದು ಮಾಹಿತಿ ಎಲ್ಲಿಂದ ಸಿಕ್ಕಿದವು?’ ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಮೇಲ್ವಿಚಾರಣಾಧಿಕಾರಿ, ‘ನಮಗೆ ಮಾಹಿತಿ ಎಲ್ಲಿಂದ ಸಿಕ್ಕಿದವು ಎನ್ನುವುದಕ್ಕಿಂತ, ನಿಮಗೆ ಏಕೆ ಈ ಮಾಹಿತಿಗಳು ಸಿಕ್ಕಿಲ್ಲ ಎಂಬುದನ್ನು ಇಲ್ಲಿ ಯೋಚಿಸಬೇಕಿದೆ’ ಎಂದು ಅಧಿಕಾರದ ನೆಲೆಯ ಕಾಳಜಿಯಲ್ಲಿ ಶ್ರದ್ಧೆಯ ಕೊರತೆಯನ್ನು ಟೀಕಿಸುತ್ತಾನೆ. ಡಾ.ಸೀತು ಪೊನ್ನುತಂಬಿ ಎಂಬ ಸಂಶೋಧನಾ ವಿದ್ಯಾರ್ಥಿಗೆ, ‘ನನಗೇಕೆ ಈ ಉಸಾಬರಿ’ ಎಂದು ಹಿಂಜರಿಯಬಹುದಿತ್ತು. ಆದರೆ ಆಕೆ ಹಾಗೆ ಮಾಡಿಲ್ಲ. ಅದರಿಂದಲೇ ಆಕೆ ಕೈಗೊಂಡ ಕೆಲಸ ಅತ್ಯಂತ ಮುಖ್ಯ ಎನಿಸಿದೆ. ಚಿತ್ರದಲ್ಲಿ ತೋರಿಸಿದಂತೆ ಕೆಲವು ಸೇವೆಗಳಿಗಾಗಿ ಕೇರಳದಲ್ಲಿ ಅಲ್ಲಿನ ಸಾಮಾನ್ಯ ಜನರನ್ನು ಬಳಸಲಾಗಿತ್ತು. ಜನರಲ್ಲಿ ಮೂಡಿರುವ ಭಯ, ಆತಂಕದ ವಾತಾವರಣವನ್ನು ಹೋಗಲಾಡಿಸಿ ಅವರ ಮನಗೆಲ್ಲುವ ರೀತಿಯೂ ಒಂದು ಮಾದರಿ. ಧಾರ್ಮಿಕ ಸಂಪ್ರದಾಯದಂತೆ ನಡೆಸಬೇಕಾದ ಸೋಂಕಿಗೆ ಬಲಿಯಾದವರ ಅಂತ್ಯಸಂಸ್ಕಾರದ ವಿಚಾರವನ್ನು ಬಹಳ ನಾಜೂಕು ಮತ್ತು ಸೂಕ್ಷ್ಮವಾಗಿ ಅಲ್ಲಿನ ಅಧಿಕಾರಿಗಳು ನಿರ್ವಹಿಸಿದ ರೀತಿ ಬಹಳ ಮುಖ್ಯವಾಗುತ್ತದೆ. ‘ಇದೊಂದು ಸಣ್ಣ ವಿಷಯ ಎಂದು ನಾನು ಭಾವಿಸುವುದಿಲ್ಲ’ ಎಂದು ಅಲ್ಲಿನ ಪಂಚಾಯಿತಿ ಅಧ್ಯಕ್ಷ ಹೇಳುವ ಮಾತು ಸಮಾಜವೊಂದರ ಮಾತೂ ಹೌದು. ಅಲ್ಲದೆ ಅಂತ್ಯಸಂಸ್ಕಾರ ಸಂಪ್ರದಾಯದಂತೆಯೇ ನಡೆದಿಯುವಂತೆ ಅವುಗಳಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಮಾಡಲಾಗಿತ್ತು. ಇಡೀ ಚಿತ್ರದಲ್ಲಿ, ಮೊದಲ ನಿಫಾ ಸೋಂಕಿತ ಝಕರಿಯಾನ ತಾಯಿ ಹೇಳುವ ಮಾತೊಂದು ಪ್ರೇಕ್ಷಕನ ಮನಕಲಕುತ್ತದೆ. ‘ಎಂಡೆ ಕುಟ್ಟಿಯಾನಲ್ಲೆ…ಎಲ್ಲಾರ್ಕುಂ ಕೊಡುತ್ತದ್…’(ನನ್ನ ಮಗನಲ್ಲವೇ…ಎಲ್ಲರಿಗೂ ಹರಡಿದ್ದು…) ಎಂಬ ಆ ತಾಯಿಯ ಮಾತಿನಲ್ಲಿ ಸಮಾಜದ ಕುರಿತ ಕಾಳಜಿ, ವ್ಯಾಕುಲತೆ, ಮಗನನ್ನು ಕಳೆದುಕೊಂಡ, ಈ ಕಾರಣಕ್ಕೆ ಮಗನ ಮೇಲೆ ಎಲ್ಲರಿಗೂ ಸಿಟ್ಟು ಇರಬಹುದೆಂಬ ನೋವು ಎಲ್ಲವೂ ಮಿಳಿತಾವಗಿದೆ. ವೈರಸ್ ಚಿತ್ರತಂಡ ಈ ಚಿತ್ರದ ಹಿನ್ನೆಲೆಯಾಗಿ ನಡೆಸಿದ ಅಚ್ಚುಕಟ್ಟಾದ ಅಧ್ಯಯನ ಚಿತ್ರದ ಕೊನೆವರೆಗೂ ಕಾಣಸಿಗುತ್ತದೆ. ಬೇರೆ ಬೇರೆ ಆಯಾಮಗಳಲ್ಲಿ, ವೈಜ್ಞಾನಿಕ ಸಂಗತಿ, ಸಾಮಾಜಿಕ ಮನಸ್ಥಿತಿ, ವಾಸ್ತವತೆ ಎಲ್ಲವನ್ನೂ ಸಮದೂಗಿಸಿ ಕಟ್ಟಿದ ಚಿತ್ರವಿದು. ಅಧ್ಯಯನದ ಹೊರತಾಗಿ ಇಷ್ಟೊಂದು ಮನೋಜ್ಞ ಚಿತ್ರವನ್ನು ಊಹಿಸುವುದೂ ಸಾಧ್ಯವಲ್ಲ. ಈ ಚಿತ್ರದ ಚಿತ್ರೀಕರಣದ ಹಂತದಲ್ಲಿ ಕೇರಳ ರಾಜ್ಯ ಪ್ರವಾಹದಿಂದ ತತ್ತರಿಸಿ ಹೋಗಿತ್ತು. ಚಿತ್ರತಂಡ ಆ ಹೊತ್ತಿನಲ್ಲಿ ನಡೆಸಿದ ಸಾಮಾಜಿಕ ಹೊಣೆಗಾರಿಕೆಯ ಕೆಲಸಗಳನ್ನೂ ಇಲ್ಲಿ ನೆನಪಿಸಬೇಕಿದೆ. ಹೀಗೆ ಎಲ್ಲಾ ಕಾರಣಗಳಿಗೂ ನಿರ್ದೇಶಕ ಆಶಿಕ್ ಅಬು, ನಿರ್ಮಾಪಕಿ ರೀಮಾ ಕಲ್ಲಿಂಗಳ್ ಹಾಗೂ ಇಡೀ ಚಿತ್ರತಂಡವನ್ನು ಗೌರವಿಸಬೇಕು. ಮಾಧ್ಯಮಗಳು ಅನಗತ್ಯವಾಗಿ ನಡೆಸುವ ವಾದ ವಿವಾದವನ್ನೂ ಇಲ್ಲಿನ ಒಂದು ದೃಶ್ಯದಲ್ಲಿ ತೋರಿಸಲಾಗಿದೆ. ಇದು ಅನಗತ್ಯ ವಾದ ನಡೆಸುವ ಸಮಯವಲ್ಲ ಎಂದು ಚರ್ಚೆಯಲ್ಲಿ ಭಾಗವಹಿಸಿದ ವೈದ್ಯೆ ಸೂಚಿಸುವುದು ಕೂಡಾ ಸಾಮಾಜಿಕ ಸ್ವಾಸ್ಥ್ಯದ ನೆಲೆಯಲ್ಲಿ ಗಮನಾರ್ಹ. ಚಿತ್ರದ ಕೊನೆಯಲ್ಲಿ ಯಶಸ್ಸಿನ ಭಾವುಕ ಕ್ಷಣಗಳು ಮನಗೆಲ್ಲುತ್ತವೆ. ಬ್ರೆಝಿಲ್‍ನ ‘ಅವೆಂಚರಸ್ ನ ಹಿಸ್ಟರಿಯ’ ಎಂಬ ವೆಬ್‍ತಾಣ ಇತ್ತೀಚೆಗೆ ಕೊರೊನಾ ಹಿನ್ನೆಲೆಯಲ್ಲಿ ವೀಕ್ಷಿಸಬಹುದಾದ ಚಿತ್ರಗಳಲ್ಲಿ ಪ್ರಧಾನವಾಗಿ ಮಲಯಾಳಂನ ವೈರಸ್ ಚಿತ್ರವನ್ನು ಸೂಚಿಸಿದೆ. ಸದ್ಯ ಕಂಟೇಜಿಯನ್ ಚಿತ್ರದ ಜೊತೆ ಜೊತೆಗೇ ವೈರಸ್ ಸಿನಿಮಾ ಕೂಡಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೊಳಗಾಗುತ್ತಿದೆ. ವೈರಸ್ ಹಾಗೂ ಕಂಟೇಜಿಯನ್ ಚಿತ್ರಗಳ ಕ್ಲೈಮ್ಯಾಕ್ಸ್ ಸ್ವಲ್ಪಮಟ್ಟಿಗೆ ಒಂದೇ ರೀತಿಯಿದೆ. ನಿಫಾ ಬಾವಲಿಯಿಂದ ಬಂದಿದೆ ಎಂಬುದನ್ನು ವೈರಸ್‍ನ ಕ್ಲೈಮ್ಯಾಕ್ಸ್ ಸೂಚಿಸಿದರೆ, ಕಂಟೇಜಿಯನ್ ಹಂದಿ ಮತ್ತು ಬಾವಲಿ ಎರಡನ್ನೂ ಸೂಚಿಸುತ್ತದೆ. ಸದ್ಯದ ಪರಿಸ್ಥಿಯಲ್ಲಿ ಇವೆರಡೂ ಚಿತ್ರಗಳು ಹಲವಾರು ವಿಚಾರಗಳನ್ನು ಅರಿತುಕೊಳ್ಳಲು ಸಹಕಾರಿಯಾಗುವುದರಲ್ಲಿ ಅನುಮಾನವಿಲ್ಲ. ಈ ಎರಡೂ ಚಿತ್ರಗಳು ಟೆಲಿಗ್ರಾಂನಲ್ಲಿ ಲಭ್ಯವಿದೆ.

LEAVE A REPLY

Please enter your comment!
Please enter your name here