-ಅಶೀರುದ್ದೀನ್ ಆಲಿಯಾ, ಮಂಜನಾಡಿ

ಫೆಲೆಸ್ತೀನ್ ಎಪ್ಪತ್ತು ವರ್ಷ ತುಂಬಿದ ಹೋರಾಟದ ಮರುಭೂಮಿ. ಜನ್ಮಭೂಮಿಗಾಗಿ ಹೋರಾಡಿ ಮಡಿದವರ ರಕ್ತ ಹರಿದ ಪುಣ್ಯಭೂಮಿ. ಅರಬ್ ಜಗತ್ತಿನ ಕತ್ತಲು ಭೂಮಿ. ಹೀಗೆ ಎಷ್ಟು ವಿಶೇಷತೆಕೊಟ್ಟರೂ ಮುಗಿಯದು. ಮಡಿಟರೇನಿಯನ್ ಸಮುದ್ರದ ತಂಗಾಳಿ ಸವಿದು, ನೈಲ್ ನದಿಯ ನೀರು ಕುಡಿದು ಸುಖವಾಗಿ, ಸಮೃದ್ಧರಾಗಿ, ಸ್ವತಂತ್ರರಾಗಿ ಬದುಕಿದ್ದ ಅರಬ್ ಫೆಲೆಸ್ತೀನ್ ಮಣ್ಣಿನಲ್ಲಿ ಅಮೇರಿಕಾ, ಇಂಗ್ಲೆಂಡ್ ನಂತಹ ಜಾಗತಿಕ ವಸಹಾತುಶಾಹಿ ರಾಷ್ಟ್ರಗಳ ಆಭಿಮುಖ್ಯದಲ್ಲಿ 1948ರ ಮೇ 14ರಂದು ವಿಶ್ವದ 66 ರಾಷ್ಟ್ರಗಳಲ್ಲಿ ಚದುರಿ ಹೋಗಿದ್ದ ಯಹೂದಿಯರನ್ನು ಝಯೊನಿಷ್ಟರು ಒಂದುಗೂಡಿಸಿ ವಿಶ್ವಭೂಪಟದಲ್ಲೇ ಇಲ್ಲದ ಯಹೂದಿ ರಾಷ್ಟ್ರ- ‘ಇಸ್ರೇಲ್’ ಎಂಬ ಹೊಸ ರಾಷ್ಟ್ರದ ಉದಯಕ್ಕೆ ಜಾಗ ಮಾಡಿಕೊಟ್ಟಿತು. ಈ ಅಕ್ರಮಕ್ಕೆ ಜಾಗತಿಕ ಮಾನವೀಯತೆಯ ಮುಖ ಹೊಂದಿದ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿದ್ದರೂ ಬಲಾಢ್ಯರ ಮುಂದೆ ಯಾವುದೇ ಪ್ರಭಾವ ಬೀರಲಿಲ್ಲ. 1948ರ ಮೇ 15ರಂದು ಝಯೊನಿಷ್ಟರು ಮೂಲ ನಿವಾಸಿಗಳಾದ 7.5 ಲಕ್ಷ ಪ್ಯಾಲೆಸ್ತೀನರನ್ನು ಅವರ ಜನ್ಮಭೂಮಿಯಿಂದ ಹೊರಕ್ಕಟ್ಟಿ ಗಡಿರೇಖೆಯನ್ನು ನಿರ್ಮಿಸಿದರು. ನಾಲ್ಕಾರು ತುಂಡುಗಳಾಗಿ ಫೆಲೆಸ್ತೀನ್ ಚಿದ್ರವಾಯಿತು. ಇಸ್ರೇಲ್ ರಾಷ್ಟ್ರದ ಉದಯವು ಫೆಲೆಸ್ತೀನ್ ಮತ್ತು ಅರಬ್ ದೇಶದ ಅಶಾಂತಿಗೆ ಮೂಲ ಕಾರಣವಾಯಿತು.

ಫೆಲೆಸ್ತೀನ್: ವಿಶ್ವದ ಪ್ರಮುಖ ಮೂರು ಧರ್ಮಗಳ ಪುಣ್ಯಸ್ಥಾನ, ಪವಿತ್ರ ಪ್ರದೇಶ. ಬೆತ್ಲೆಹೆಮ್ ಏಸುಕ್ರಿಸ್ತರ ಜನ್ಮಭೂಮಿ, ಜೆರುಸಲೇಮ್ ಪ್ರವಾದಿ ಮೂಸಾ(ಮೊಸೆಸ್)ರ ಹೋರಾಟದ ಭೂಮಿ, ದಾರುಸ್ಸಲಾಂ ಪ್ರವಾದಿ ಮುಹಮ್ಮದ್ ದೇವನ ಸಾಮಿಪ್ಯದ ಯಾತ್ರೆ ಕೈಗೊಂಡ ಪುಣ್ಯ ಪರಿಶುದ್ಧ ಭೂಮಿ. ಮುಸ್ಲಿಮರಿಗೆ ತೀರ್ಥಯಾತ್ರೆ ಕೈಗೊಂಡರೆ ಪ್ರತಿಫಲ ಸಿಗಲಿರುವ ‘ಬೈತುಲ್ ಮುಕದ್ದಿಸ್’ ಮಸೀದಿಯು ಇದೇ ಪ್ರದೇಶದಲ್ಲಿ ನೆಲೆನಿಂತಿದೆ. ಅರಬ್ ಪ್ರದೇಶದಲ್ಲಿ ಬೆಳೆದು ಬಂದ ಪ್ರವಾದಿಗಳು ಫೆಲೆಸ್ತೀನ್ ಮಣ್ಣನ್ನು ಮೆಟ್ಟಿನಡೆದವರು. ಆಧ್ಯಾತ್ಮಿಕ ಶಕ್ತಿ ತರುವ ಮಣ್ಣು. ಪ್ರವಾದಿ ಸುಲೈಮಾನ್(ಸೋಲಮನ್), ಮೂಸಾ(ಮೊಸೆಸ್), ಇಬ್ರಾಹೀಮ್(ಅಬ್ರಹಾಂ), ಈಸಾ(ಏಸು), ದಾವೂದ್(ಡೇವಿಡ್) ಮತ್ತು ಪ್ರವಾದಿ ಮುಹಮ್ಮದರು ಈ ಮಣ್ಣಲ್ಲಿ ಸಂಚರಿಸಿರುವುದಕ್ಕೆ ಇತಿಹಾಸವೇ ಸಾಕ್ಷಿ.

ಭೌಗೋಳಿಕವಾಗಿ ಬಹಳ ಫಲವತ್ತಾದ, ಫಲಭರಿತವಾದುದು ಈ ನಾಡು. ಅತ್ತಿ, ದ್ರಾಕ್ಷೆ, ದಾಳಿಂಬೆ, ಖರ್ಜೂರಗಳ ನಾಡು. ಚಿನ್ನದ ನಾಡು ಎಂದೂ ಕರೆಯಬಹುದು. ಇದು ಅರಬ್ ಜಗತ್ತಿನ ಸಮೃದ್ಧಿ. ಆದರೆ, 1946-48ರ ನಂತರ ಫೆಲೆಸ್ತೀನ್ ಪರಿಹಾರವಿಲ್ಲದ ಜಗತ್ತಿನ ಅತಿದೊಡ್ಡ ರಣರಂಗವಾಗಿ ಮಾರ್ಪಟ್ಟಿತು. ನಿರಂತರ ರಕ್ತಪಾತ, ಕೊಲೆ, ಅತ್ಯಾಚಾರಗಳಿಗೆ ಸಾಕ್ಷಿಯಾಯಿತು. ತಾಯಿನಾಡಿಗಾಗಿ ಹೋರಾಟದ ಕಿಡಿ ಹೊತ್ತಿ ಉರಿಯಿತು.

ಅಮೇರಿಕಾ, ಇಂಗ್ಲೇಂಡ್ ನಂತಹ ಬಲಾಢ್ಯ ರಾಷ್ಟ್ರಗಳ ಬೆಂಬಲ ಸಹಕಾರದಿಂದ ಇಸ್ರೇಲ್ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಬೆಳೆಯಿತು ಮತ್ತು ವೈಜ್ಞಾನಿಕವಾಗಿ ಮುಂದುವರೆಯಿತು. ಬದ್ಧತೆಯಲ್ಲಿ ಮುಂಚೂಣಿ ತಲುಪಿತು. ಅರಬ್ ಶಕ್ತಿ ರಾಷ್ಟ್ರಗಳ ಕಡೆಗಣನೆ, ನಿರ್ಲಕ್ಷ, ಸ್ವಾರ್ಥ ಹಿತದಿಂದ ಫೆಲೆಸ್ತೀನ್ ದುರ್ಬಲವಾಯಿತು. ಅನಕ್ಷರತೆ, ಅಂಗವೈಕಲ್ಯತೆ, ಬಡತನ, ದಾರಿದ್ಯ ನಿರುದ್ಯೋಗದಿಂದ ಫೆಲೆಸ್ತೀನ್ ಕ್ಷೀಣವಾಯಿತು. ಇಸ್ರೇಲ್, ಅಮೇರಿಕಾದ ಬಲದಿಂದ ಸೈನಿಕವಾಗಿ ಶಕ್ತಿ ಹೊಂದಿ ಫೆಲೆಸ್ತೀನ್ ನಿರ್ಮೂಲನೆಗೆ ನಾಂದಿಹಾಕಿತು. ಮನರಂಜನೆಯೆಂಬತೆ ತಮ್ಮ ಹಿತದಲ್ಲಿ ಗಝಾ, ವೆಸ್ಟ್‍ಬ್ಯಾಂಕ್ ಫೆಲೆಸ್ತೀನ್ ಪ್ರದೇಶಗಳ ಮೇಲೆ ಗುಂಡಿನ ಮಳೆಗೈದು ಹಲವಾರು ಜೀವಗಳನ್ನು ರಕ್ತದಲ್ಲಿ ಬೀಳಿಸಿತು. ಫೆಲೆಸ್ತೀನ್ ಶಸ್ತ್ರಾಸ್ತ್ರಗಳಿಲ್ಲದೆ ದುರ್ಬಲರಾಗಿ ಜೀವನದ ಹಂಗು ತೊರೆದು, ಆಹುತಿಯಾದ ಕಟ್ಟಡದ ಕಲ್ಲುಗಳನ್ನೇ ಆಯುಧವಾಗಿಸಿ ಇಸ್ರೇಲ್ ಸೇನೆಯ ಎದುರು ಪ್ರಯೋಗಿಸಿ ಹೋರಾಟಕ್ಕೆ ಹೊಸರೂಪಕೊಟ್ಟರು.

ತುಂಡು-ತುಂಡಾದ ಫೆಲೆಸ್ತೀನ್ ಮಣ್ಣಿನ ಹೆಚ್ಚು ಸಂಕಷ್ಟಕ್ಕೀಡಾದ ಮತ್ತು ಒಬ್ಬಂಟಿ ಪ್ರದೇಶವಾಗಿದೆ ಗಾಝ. ಮೆಡಿಟರೇನಿಯ ಸಮುದ್ರದ ಪೂರ್ವ ಕರಾವಳಿಯಲ್ಲಿ ಸ್ಥಿರವಾದ ಪ್ರದೇಶ ನೈರುತ್ಯಕ್ಕೆ ಈಜಿಪ್ಟ್. ಉತ್ತರ ಮತ್ತು ಪೂರ್ವಕ್ಕೆ ಇಸ್ರೇಲ್ ಇದೆ. ಯಾರ ಅಧೀನಕ್ಕೂ ಒಳಪಡದ ಈ ಪ್ರದೇಶವು 2007ರಿಂದ ಹಮಾಸ್ ಆಡಳಿತ ನಡೆಸುತ್ತಿದೆ. ಫೆಲೆಸ್ತೀನ್ ರಾಷ್ಟ್ರೀಯ ಪ್ರಾಧಿಕಾರವು ಫೆಲೆಸ್ತೀನ್ ಪ್ರದೇಶದ ಭಾಗವೆಂದು ಸಾರಿದೆ. ಆದರೂ ಇಸ್ರೇಲ್ ಗಝಾದ ಸುತ್ತು ತನ್ನ ಬಲೆಯನು ಬೀಸಿ ಗಝಾವನ್ನು ಏಕಾಂತಗಳಾಚೆ ಈಜಿಪ್ಟ್‍ನೊಂದಿಗೆ ಒಪ್ಪಂದ ಮಾಡಿಕೊಂಡು ಮೆಡಿಟರೇನಿಯನ್ ಸಮುದ್ರದಲ್ಲಿ ಗಾಝಕ್ಕೆ ಕೇವಲ 7 ಕಿ.ಮೀ ಮಾತ್ರ ಸಂಚಾರ ಅವಕಾಶವನ್ನು ಮಾಡಿಕೊಟ್ಟಿದೆ.

ಫೆಲೆಸ್ತೀನ್, ಇಸ್ರೇಲ್ ಮತ್ತು ಜಾಗತಿಕ ಬಲಾಢ್ಯ ರಾಷ್ಟ್ರಗಳು ತನ್ನ ಮೇಲೆ ನಡೆಸಿದ ಅಕ್ರಮವನ್ನು ಮರೆತಿಲ್ಲ. ಇಸ್ರೇಲ್‍ನ ನರಹಂತಕ ಝಯೊನಿಷ್ಟರು ತಮ್ಮ ತಾಯಿನಾಡಿನಿಂದ ಹೊರಕಟ್ಟಿದ ನೆನಪಿಗಾಗಿ ಪ್ರತಿವರ್ಷ ಮಾಚ್30 ರಿಂದ ಮೇ15 ರ ತನಕ ‘ನಕ್‍ಬ’ ಮಹಾದುರಂತದ ದಿನ ಆಚರಿಸಲಾಗುವುದು. ಇಸ್ರೇಲ್ ಕಬಳಿಸಿದ ತಮ್ಮ ಮನೆ ಮತ್ತು ಪ್ರದೇಶಗಳು ಹಿಂತೆಗೆದುಕೊಳ್ಳಲ್ಪಡುವು. ಪ್ರತಿವರ್ಷವು “ಗ್ರೇಟ್ ಮಾರ್ಚ್ ಆಫ್ ರಿಟರ್ನ್” ಎಂಬ ಪ್ರತಿಭಟನೆ ಹಮ್ಮಿಕೊಂಡು ತಮ್ಮ ಹೋರಾಟವನ್ನು ಪ್ರದರ್ಶಿಸುತ್ತಿದ್ದರು. ಪ್ರತಿವರ್ಷವು ಇಸ್ರೇಲ್ ತನ್ನ ಕ್ರೌರ್ಯವನ್ನು ತೋರಿಸಿ ಹಲವು ಜೀವಗಳನ್ನು ಬಲಿತೆಗೆಯುತ್ತಿದೆ. ಈ ಪ್ರತಿಭಟನೆಯು ಮೇ 15 ಕೊನೆಗೊಳ್ಳುವುದರಲ್ಲಿತ್ತು. ಆದರೆ, ಮೇ14ಕ್ಕೆ ಅಮೇರಿಕಾ ರಾಯಭಾರಿ ಕಚೇರಿಯನ್ನು ಜೆರುಸಲೇಂಗೆ ಸ್ಥಳಾಂತರಿಸುವುದರ ಭಾಗವಾಗಿ ಪ್ರತಿಭಟನೆಗಳು ಪ್ರಕ್ಷುಬ್ಧಗೊಂಡವು. ಇಸ್ರೇಲ್, ಪ್ರತಿಭಟನೆಕಾರರ ವಿರುದ್ಧ ಗುಂಡಿನ ಮಳೆಗೈಯಿತು. ಮಕ್ಕಳು, ವಿದ್ಯಾರ್ಥಿಗಳು, ಪತ್ರಕರ್ತರು, ಶುಶ್ರೂಷ್ರೆ ಸೇವಕರು, ಮಾಧ್ಯಮದವರನ್ನು ಸೇರಿ ಸುಮಾರು ನೂರಕ್ಕೂ ಹೆಚ್ಚು ಜೀವಗಳ ಬಲಿ ತೆಗೆಯಿತು. ರಝನ್ ಅಲ್ ನಜ್ಜಾರಳ ಕೊಲೆಯು ಮಾನವೀಯತೆಯನ್ನು ತಲೆ ತಗ್ಗಿಸುವಂತೆ ಮಾಡಿದೆ. ಆದರೆ, ಇಸ್ಲಾಮನ್ನು ಪ್ರತಿನಿಧಿಸುವ ರಾಷ್ಟ್ರಗಳಾಗಲಿ, ಶಾಂತಿ ಮಂತ್ರ ಹೇಳುವ ವಿಶ್ವಸಂಸ್ಥೆಯಾಗಲಿ ಫೆಲೆಸ್ತೀನಿಯರ ಪರ ನಿಲ್ಲಲು ಹಿಂದೇಟು ಹಾಕುತ್ತಾರೆಂಬುವುದು ಬಹಳ ಖೇದಕರ.

 

 

LEAVE A REPLY

Please enter your comment!
Please enter your name here