ಪುಸ್ತಕ ವಿಮರ್ಶೆ

ರವಿ ನವಲಹಳ್ಳಿ ರಾಯಚೂರು. (ಯುವ ಸಾಹಿತಿ ಕಲಾವಿದ)

ಇಂದು ಗಿರೀಶ್ ಕಾರ್ನಾಡ್ ರವರು ಹುಟ್ಟಿದ ದಿನ

ವಿಜಯನಗರ ಧ್ವಂಸವಾಗಿದೆ, ಜನ ಅಲ್ಲಿಂದ ಓಡಿದ್ದಾರೆ, ಸೈನಿಕರು ಅಟ್ಟಾಡಿಸಿ ಬಂಗಾರ-ಬೊಕ್ಕಸಕ್ಕಾಗಿ ಹುಡುಕುತ್ತಿದ್ದಾರೆ. ಈ ಸನ್ನಿವೇಶದ ಅಡಿಯಲ್ಲಿ ನಾಟಕ ಪ್ರಾರಂಭವಾಗುತ್ತದೆ. ನಾಟಕದ ಬಗ್ಗೆ ಕುತೂಹಲ ಕಾಯ್ದಿಟ್ಟುಕೊಳ್ಳಲು ಇದು ವ್ಯವಸ್ಥಿತವಾದ ಪ್ರಾರಂಭ. ರಚನಕಾರರು ಅಲ್ಲಿ ಯಶಸ್ವಿಯಾಗುತ್ತಾರೆ. ನಂತರದ ದೃಶ್ಯದಲ್ಲೇ ರಾಮರಾಯನ ತಮ್ಮ ತಿರುಮಲ ವಿಜಯನಗರ ಕೇಂದ್ರಕ್ಕೆ ಬಂದು ಎಲ್ಲವೂ ಆಗಿ ಹೋಯಿತು, ಶೀಘ್ರ ಇಲ್ಲಿಂದು ಹೊರಡೋಣ ಎಂದು ಸಿಂಹಾಸನದ ರಾಜ ಸದಾಶಿವರಾಯನನ್ನು ಎಬ್ಬಿಸುವ, ಮಾತೆ-ಅತ್ತಿಗೆ ಎಲ್ಲರಿಗೂ ಆದ ದುರಂತವನ್ನು ವಿವರಿಸುವ ದೃಶ್ಯ. ನಿಜದಲ್ಲಿ ಸದಾಶಿವರಾಯ ವಿಜಯನಗರದ ಅಧಿಪತಿ. ಅವನು ತುಳುವ ವಂಶದವ, ರಾಮರಾಯ; ಕೃಷ್ಣದೇವರಾಯನ ಆಳಿಯ, ನಿಜದಲ್ಲಿ ಸಿಂಹಾಸನಧೀಶ ಅಲ್ಲ! ಆದರೆ ಹಿಡಿತ ಇರುವುದು ಅವನ ಕೈಯಲ್ಲೇ. ಅವನು ಅರವೀಡು ವಂಶಕ್ಕೆ ಸೇರಿದವನು. ಈ ಸೂಕ್ಷ್ಮವು ಬಲವಾಗಿ ಬಿಂಬಿತವಾಗಿದೆ. ಈ ಧರ್ಮ ಸಂಕಟವು ರಾಮರಾಯನ ಕೊನೆಯನ್ನು ನಿರ್ಣಯಿಸಿತು ಎಂಬ ಧ್ವನಿ ನಾಟಕದಲ್ಲಿ ಹೊರಡುತ್ತದೆ. ತಾನೂ ರಾಜವಂಶದವ ಎಂದು ಹೇಳಿಕೊಳ್ಳುವ ಹಂಬಲ ಎದ್ದು ಕಲ್ಯಾಣದ ಚಾಲುಕ್ಯನ ವಂಶಜ ಎಂದು ತನ್ನನ್ನೇ ಸಂತೈಸಿಕೊಂಡು ಆ ಕಲ್ಯಾಣದ ಆಸೆಯಲ್ಲೇ ಅಹಮದ್ ನಗರದ ನಿಝಾಮ್’ಶಹನನ್ನು ಎದುರು ಹಾಕಿಕೊಂಡು ಅದನ್ನು ಬಿಜಾಪುರದ ಸುಲ್ತಾನ ಅಲಿ ಆದಿಲ್ ಶಾನಿಗೆ ಕೊಟ್ಟು, ಕೊನೆಗೆ ರಕ್ಕಸ-ತಂಗಡಿ ಯುದ್ಧದಲ್ಲಿ ನಿಝಾಮಶಹನ ಪಾದದಡಿಯೇ ತಲೆ ಉರುಳಿಸಿಕೊಳ್ಳುವ ರಾಮರಾಯನೇ ಕಥಾ ಎಳೆ. ಇಲ್ಲಿ ಕಾರ್ನಾಡರು ಹೇಳಹೊರಟಿರುವುದು ವಿಜಯನಗರದ ಪತನವನ್ನಲ್ಲ, ರಾಮರಾಯನ ಪತನವನ್ನ. ಚಮತ್ಕಾರಿ ವಾಕ್ಯಗಳ ಮೂಲಕ ಪಾತ್ರವನ್ನು ಸಿಂಗರಿಸುವ ಕಾರ್ನಾಡರ ಪದ್ಧತಿ ಇಲ್ಲೂ ಮುಂದುವರಿದಿದೆ. “ಬದುಕಲಿಕ್ಕೊಂದು ಭ್ರಾಂತಿ ಬೇಕಾಗಿರತದೆ, ಸುಲ್ತಾನರಿಗೂ ಇರತದೆ, ಪ್ರಜೆಗಳಿಗೂ ಇರತದೆ” ಎಂಬ ಬೇಗಮ್ ಪಾತ್ರದ ಮಾತು ಅದಕ್ಕೆ ಸಾಕ್ಷಿ. “ಕರಾರುಗಳನ್ನು ಓದಿ ತೋರಿಸು, ಎಲ್ಲರು ಕೇಳಲಿ, ಕೇಳಲಿಕ್ಕಷ್ಟೇ, ಚರ್ಚೆಗಾಗಿ ಅಲ್ಲ” ಎಂಬ ರಾಮರಾಯನ ಮಾತು ಇನ್ನೊಂದು ಉದಾಹರಣೆ. ನಾಟಕದ ನಿಜವಾದ ರಸಸ್ಥಾನ ಇರುವುದು ದೃಶ್ಯ-೬ ರಲ್ಲಿ, ರಾಮರಾಯ ನಿಝಾಮಶಹನನ್ನು ಮಾತಲ್ಲೇ ಮಂಡಿಯೂರಿಸಿ ಕಲ್ಯಾಣದ ಕೋಟೆಯ ಬೀಗವನ್ನು ಬಿಜಾಪುರಕ್ಕೆ ಹಸ್ತಾತಂತರಿಸುವ ಸನ್ನಿವೇಶ. ನಾಟಕಕಾರ ಕಾರ್ನಾಡ್ ಅಲ್ಲಿ ಗೆದ್ದುಬಿಡುತ್ತಾರೆ. ಈ ದೃಶ್ಯವೇಕೆ ಗಟ್ಟಿಯಾದ ರಸಸ್ಥಾನ ಎಂದರೆ – ಅದೇ ರಾಮರಾಯನ ಅಂತ್ಯಕ್ಕೆ ಮುನ್ನುಡಿ. ನಿಝಾಮಶಹ ಆ ದೃಶ್ಯದಲ್ಲಿ ರಾಮರಾಯ ಕೊಟ್ಟ ತಾಂಬೂಲವನ್ನು ನೆಲಕ್ಕೆ ಉಗಿಯುವುದೇ… ಇವನು ಕೊನೆಯಲ್ಲಿ ಅವನ ತಲೆ ಕತ್ತರಿಸುತ್ತಾನೆ ಎಂದು ತಿಳಿಸಿಬಿಡುತ್ತದೆ. ತಂಗಡಿ ಎಂಬ ದಖ್ಖನಿ ಭಾಷೆಯ ಪದ ಮತ್ತು ರಾಕ್ಷಸ ಎಂಬ ಸಂಸ್ಕೃತ ಶಬ್ಧದ ಸಮಾಗಮ ಇರುವುದರಿಂದ ನಾಟಕದ ಹೆಸರಾಗಿ ಬಳಸಿದೆ ಎಂದು ಕಾರ್ನಾಡರು ಹೇಳಿದ್ದಾರೆ…ಕಾರ್ನಾಡರು ಅದನ್ನು ಹೆಮ್ಮೆಯಿಂದ ಮಾಡಿದ್ದಾರೆ! ಅಲಿ ಆದಿಲ್ ಶಹನ ಬಗ್ಗೆ ಬರೆಯುವಾಗ ಮಾತು ಮಾತಿಗೂ ಸೂಫಿ ಸಂತರ ಸಂಗೀತ-ದೈವತ್ವ ಲೀನದ ಮಾತುಗಳನ್ನು ಆಡಿಸಿ. ಇದು ಹಿಟ್ಲರನು ಸಸ್ಯಾಹಾರಿ-ಪ್ರಾಣಿಪ್ರಿಯ ಎಂದು ತೋರಿಸುವಷ್ಟೇ ಹಾಸ್ಯಾಸ್ಪದ. ಪ್ರತಿ ದೃಶ್ಯದಲ್ಲೂ ಹಿಡಿತ ಬಿಟ್ಟುಕೊಡದೆ ನಿರೂಪಣೆ ಸಾಗಿದೆ,

ವಿಜಯನಗರ ಸಾಮ್ರಾಜ್ಯ ಪತನ ಕನ್ನಡ ದೇಶದ ಪತನವೂ ಹೌದು ಎಂಬ ಸೂಕ್ಷ್ಮ ದೃಷ್ಟಿಯನ್ನು ಅವರು ಹೊರಡಿಸಿದ್ದು ನಿಜಕ್ಕೂ ಮೆಚ್ಚಬೇಕಾದ್ದೆ! “ಅಮ್ಮಾ, ಮೂರು ಮಂದಿ ಸುಲ್ತಾನರು ಒಂದಾಗಿ ಕರ್ನಾಟಕ ದೇಶದ ಮೇಲೆ ಏರಿ ಬರತಾ ಇದ್ದಾರೆ” ಎಂದು ರಾಮರಾಯನ ಬಾಯಲ್ಲಿ ಆಡಿಸಿದ್ದು ಗಮನೀಯ. ನಿಜವಾಗಿಯೂ ಅವನು ಹಾಗೆ ಹೇಳಿದ್ದನೋ ಇಲ್ಲವೋ ರಚನಕಾರರಿಗೆ ಆ ದೃಷ್ಟಿ ಸಿಕ್ಕಿರುವುದು ಒಳ್ಳೆಯ ವಿಚಾರ. ವಿಜಯನಗರದ ಧೈರ್ಯ ಎಷ್ಟಿತ್ತೆಂದರೆ ಯುದ್ಧದ ಸಮಯದಲ್ಲಿ ಹಂಪಿಗೆ ಕಾವಲೇ ಇರಲಿಲ್ಲ. ಶತಮಾನದಿಂದ ಯಾರೂ ಅದನ್ನು ಮುಟ್ಟುವ ಧೈರ್ಯ ಮಾಡಿರಲಿಲ್ಲ. ಈ ಅತಿಯಾದ ಆತ್ಮ ವಿಶ್ವಾಸವೇ ಪತನಕ್ಕೆ ಕಾರಣ ಎಂಬುದನ್ನೂ ನಾಟಕ ಹೇಳಿದೆ. ಅದು ಇತಿಹಾಸಕ್ಕೆ ಬದ್ಧವಾಗಿಯೇ ಇದೆ. ಯುದ್ಧಕ್ಕೆ ಹೊರಟಾಗ ರಾಮರಾಯನ ವಯಸ್ಸು ಕೆಲವೆಡೆ ೯೨ ಎಂದಿದೆ, ಕೆಲವೆಡೆ ೭೬ ಎಂದಿದೆ, ೮೨ ಎಂಬ ಬಹು ಪಂಡಿತರ ಅಭಿಪ್ರಾಯವನ್ನು ಕಾರ್ನಾಡರು ಬಳಸಿದ್ದಾರೆ.

ನಾನು ಹಿಂದೆ ಓದಿದ ತುಘಲಕ್ ನಾಟಕದ ಜೊತೆಗೆ ತುಲನೆ ಮಾಡುವಷ್ಟು ನಾಟಕ ಪ್ರಬುದ್ಧವಾಗಿದೆ. ರಾಮರಾಯನ ತಲೆಯನ್ನು ಭರ್ಜಿಗೆ ಸಿಕ್ಕಿಸಿ ವಿಜಯನಗರ ಸಾಮ್ರಾಜ್ಯದ ಪತನವನ್ನು ಸಾಂಕೇತಿಕವಾಗಿ ತೋರುವ ಅಂತ್ಯ ದೃಶ್ಯ ನಾಟಕದ ಹಿಡಿತವನ್ನು ತಪ್ಪಿಸಿದೆ… ಥಟಕ್ಕನೇ ಓದು ನಿಂತಂತೆ ಆಗುತ್ತದೆ.

ಒಮ್ಮೆ ನೀವು ಓದಿ ನೋಡಿ.

LEAVE A REPLY

Please enter your comment!
Please enter your name here