ಲೇಖಕರು: ಆರೆಮ್ ಸಿದ್ದೀಕ್, ಉಡುಪಿ.

ಇಸ್ಲಾಮನ್ನು ಕೂಡಾ ಒಂದು ಸಂಕುಚಿತ ಕಲ್ಪನೆಯ ಮತ ಅಥವಾ ಧರ್ಮ (Religion) ಮಾಡಿಕೊಂಡಿರುವುದು ದುರಾದೃಷ್ಟವೇ ಸರಿ. ಕುರ್ ಆನ್ ಹೇಳುವಂತೆ  ಆದಮರಿಂದ ಹಿಡಿದು ಅಂತಿಮ ದೇವ ಸಂದೇಶವಾಹಕ ಮುಹಮ್ಮದರವರೆಗೆ ಯಾವ ಪೈಗಂಬರರೂ ಪುರೋಹಿತರಾಗಿರಲಿಲ್ಲ, ಪ್ರತಿಯೊಬ್ಬರೂ ಸಮಾಜಕ್ಕಾಗಿ ಸದಾ ಜಾಗರೂಕರಾಗಿರುತ್ತಿದ್ದರು, ಮಾನವೀಯತೆಯ ಸೇವೆಯಲ್ಲಿ ಮಗ್ನರಾಗಿರುತ್ತಿದ್ದರು ಮತ್ತು ಯಾವುದೇ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸುತ್ತಿದ್ದರು. ಸಮಾಜದ ನಿರ್ಮಾಣ ಶಾಂತಿಯ ವಾತಾವರಣದಿಂದ ಮಾತ್ರ ಸಾಧ್ಯವೆಂಬ ತತ್ತ್ವ ಅವರೆಲ್ಲದರಾಗಿತ್ತು. ಇಸ್ಲಾಮ್ ಶಬ್ದದ ಅರ್ಥ ಶಾಂತಿಯೆಂಬುದನ್ನೂ ಗಮನಿಸ ಬೇಕು.  ಅವರ ಬಾಹ್ಯ ವೇಶಭೂಷಣಗಳೆಲ್ಲವೂ  ಆಹಾರ, ಭಾಷೆಗಳಂತೆ ಆಯಾ ಪ್ರದೇಶದ ಸಂಸ್ಕೃತಿಗಳಿಗೆ ಸಂಬಂದಿಸುವುದಾಗಿದ್ದುವಲ್ಲದೆ ಇಸ್ಲಾಮಿಗೆ  ಅಲ್ಲ.

ಅರ್ಥವರಿಯದ  ಶಬ್ದಗಳನ್ನು ಮಂತ್ರಿಸುವುದಾಗಲೀ, ಸಮಾಜಕ್ಕಾಗಿ ಶ್ರಮಿಸದೆ,  ಸಮಾಜದೊಂದಿಗೆ ಸಂಪರ್ಕವನ್ನಿಡದೆ ದೇಹವನ್ನು ಬೆಳೆಸಿಕೊಂಡು ಕೆಲ ವ್ಯಕ್ತಿಪೂಜೆಯಂತಹ  ಅಂಧ ಶ್ರದ್ಧೆಯ  ಭಕ್ತರನ್ನು ಕಟ್ಟಿಕೊಂಡು ಢಂಭಾಚಾರ ಪ್ರದರ್ಶನದ ಒಂದಂಶವೂ ಪ್ರವಾದಿಗಳ ಪ್ರಕೃತಿಯಲ್ಲೇ ಇದ್ದಿಲ್ಲ. ಸತ್ಯದ ತತ್ವವೇ ಅವರಿಗೆ ಮುಖ್ಯ. ಪೂಜೆ ಪುರಸ್ಕಾರಗಳು ನಿಜವಾದ ಆರಾಧನೆಯಲ್ಲ; ಪ್ರಮಾಣಿಕ ವ್ಯವಹಾರಗಳೇ ಉಪಾಸನೆಯೆಂದು ಇಸ್ಲಾಮ್ ಸಾರುತ್ತದೆ.

ನಮಾಝ್, ಝಕಾತ್,  ಉಪವಾಸ, ಹಜ್ಜ್ ಗಳು ದೇವನ ಸಾಮೀಪ್ಯಕ್ಕಾಗಿರುವ ಕಡ್ಡಾಯ ಕರ್ಮಗಳು, ಇದರಿಂದ ಸದಾ ದೇವನನ್ನು ಸ್ಮರಿಸಿ  ದೇವ ನಿಷ್ಠೆಗಳಿಸಿ, ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿ ಕೊಳ್ಳುವುದು ಮತ್ತು, ಈ ಹಾದಿಯಲ್ಲ​  ಬರುವ ಅಡೆತಡೆ, ಪರೀಕ್ಷಾಘಟ್ಟದಲ್ಲೂ ದೇವ ಸಹಾಯ ದೊರೆಯುತ್ತಲಿರುವುದು.

ಸಮಾಜ​ ಮತ್ತು ರಾಷ್ಟ್ರದ​ ನಿರ್ಮಾಣಕ್ಕಾಗಿ ಶ್ರಮಿಸುವುದೇ ಧರ್ಮ​:

ದೇವನ ಮೇಲೆ ವಿಶ್ವಾಸ ವಿಟ್ಟವರ ಪರಲೋಕ ಜೀವನದ ಯೆಶಸ್ಶು ಅವರು ಸಮಾಜದಲ್ಲಿ ಶಾಂತಿ ಮತ್ತು ಮಾನವಿಯೆತೆಗಾಗಿ ಹಾಗೂ ರಾಷ್ಟ್ರದ ನಿರ್ಮಾಣದಲ್ಲಿ ಯಾವ ಪಾತ್ರ ವಹಿಸಿದ್ದಾರೆಂಬುದನ್ನು ಅವಲಂಬಿಸಿದೆಯೆಂದು ಕುರಾನ್ ತಿಳಿಸುತ್ತದೆ.

ಪ್ರವಾದಿ ಮುಹಮ್ಮದರ ಜೀವನದ ಪ್ರತಿಯೊಂದು ಘಟನೆಯೂ ಸುರಕ್ಶಿತ ದಾಖಲೆಗಗಳಲ್ಲಿವೆ.  ಸತ್ಯ ಸಂಧತೆ  ಮತ್ತು ಆದರ್ಶದ ನೆಲೆಯಲ್ಲೇ ನಿಂತಿರುವ ಇಸ್ಲಾಮ್ ವಿಚಾರಧಾರೆಯು ಅದರ ವಿವರಣೆಗಾಗಿಯೂ  ಸುಳ್ಳು ಮತ್ತು ಕಪೋಲಕಲ್ಪಿತ ಕಥೆಗಳ ಆಧಾರದ ಅಗತ್ಯವಿಲ್ಲವೆನ್ನುತ್ತಿದೆ. ತುಸುವೂ ಸಂಶಯವಿದ್ದ ಲಕ್ಷೋಪಲಕ್ಹ ವಿಷಯಗಳನ್ನು ಕೈ ಬಿಟ್ಟು  ಹದೀಸ್ ಗ್ರಂಥಗಳನ್ನು ಪರಿಷ್ಕರಿಸಿರುದ್ದಾಗಿರುತ್ತದೆ

ಅಖಂಡ ಭೂಮಂಡಲದ ಸೃಷ್ಟಿಕರ್ತನು, ಜನರ ಉಪಯೋಗಕ್ಕಾಗಿ  ಚರಾಚರ ಎಲ್ಲಾ ವಸ್ತುಗಳನ್ನು ಸೃಷ್ಟಿಸಿ  ಜೀವಿತದ ಮತ್ತಿತರ ವ್ಯವಸ್ಥೆಯನ್ನೂ ಮಾಡಿದ ನಂತರ ಜನರು ಭೂಮಿಯಲ್ಲಿ ಯಶಸ್ವೀ ಜೀವನ ಹೇಗೆ ಸವೆಯ​ಬೇಕೆಂದೂ  ಪ್ರವಾದಿಗಳನ್ನು ಮಾರ್ಗದರ್ಶನ ದೊಂದಿಗೆ   ಕಳಿಸುತ್ತಿದ್ದ.   ಆದಿ ಮಾನವ ಆದಮರೂ  ಪೈಗಂಬರ್ ಆಗಿದ್ಫರು.  ಭೂಮಿಯಲ್ಲಿ ಅನ್ಯಾಯ ಅಕ್ರಮಗಳು ವೃದ್ಧಿಸಿದಾಗಲೆಲ್ಲಾ   ದೇವನು ಪ್ರವಾದಿಗಳನ್ನು ಕಳಿಸುತ್ತಿರುತ್ತಿದ್ದ. ಧರ್ಮದ ಹೆಸರಿನಲ್ಲಿ ಮತ್ತು ಸರ್ವಾಧಿಕಾರಿ ಆಡಳಿತಗಾರರ ಶೋಷಣೆಯಿಂದಲೂ ವಿಮೋಚಿಸುವುದು ಪ್ರವಾದಿಗಳ  ಮಿಷನ್ ಆಗಿರುತ್ತಿತ್ತು

ಹೊರೆಯನ್ನು ಇಳಿಸುವ ಮತ್ತು ಸರಪಳಿಗಳನ್ನು ಬಿಚ್ಚುವ​ ಪ್ರವಾದಿ ಬರುವವನಿದ್ದಾನೆಂದು ಮುಹಮ್ಮದರ ಬಗ್ಗೆ ಹಿಂದಿನ ಗ್ರಂಥಗಳಲ್ಲಿ ಹೇಳಲಾಗಿತ್ತು

ಜೀವನದ ಸಮಗ್ರ ಸುಧಾರಣೆಯಲ್ಲಿ ಮುಹಮ್ಮದ್  ಪೈಗಂಬರರಿಗಿಂತ  ಬೇರೆ ಉದಾಹರಣೆ ಮಾನವ ಇತಿಹಾಸದಲ್ಲಿ ಸಿಗದು. ಮಾನವೀಯತೆಯೇ ಮೂಲ ವಿಷಯವಾಗಿ  ಸೋದರತೆ, ಸಮಾನತೆಗಳು  ಪ್ರಮುಖ  ವಿಷಯಗಳಾಗಿದ್ದುವು.

ಪೈಗಂಬರರು ಜ್ಞಾನಕ್ಕೆ ಕೊಟ್ಟ​ ಮಹತ್ವ​:

ಪ್ರವಾದಿತ್ವಕ್ಕಿಂತ ಮುಂಚೆ ಅರಬ್ ಪ್ರದೇಶದಲ್ಲಿ ಅಜ್ಙಾನವು ಪರಾಕಾಷ್ಟೆಯಲ್ಲಿತ್ತು.  ಪ್ರಪ್ರಥಮ ದೇವವಾಣಿಯೇ  ‘ಇಕ್ರ’ = ಓದು ಮತ್ತು ‘ಇಲ್ಮ್’ =  ಜ್ಙಾನ   ಹಾಗೂ  ‘ಕಲಮ್’ = ಲೇಖನಿ ಯೆಂಬ ಅಕ್ಶರಗಳಿಂದ ಆರಂಭಿಸಿರುವುದು, ಅದರ ವ್ಯಾಖ್ಯಾನವಾಗಿ ಪ್ರವಾದಿಯವರು ವಿದ್ಯಾರ್ಜನೆಯು ಪ್ರತಿಯೊಬ್ಬರ ಮೇಲೆ ಕಡ್ಡಾಯವೆಂದು ಅದೇಶಿಸಿರುವುದು,   ವೈರಿ ಕೈದಿಗಳನ್ನು ಸಾಮಾನ್ಯ ಪ್ರಜೆಗಳಿಗೆ ವಿದ್ಯೆಕಲಿಸ ಬೇಕೆಂಬ ಶರ್ತದ ಮೇಲೆ ವಿಮೋಚನೆಗಳಿಸುವಂತಹ  ಉದಾಹರಣೆಗಳಿಂದ  ಪ್ರವಾದಿ ಮುಹಮ್ಮದರು ವಿದ್ಯೆಗೆ ಎಷ್ಟು ಪ್ರಾಮುಖ್ಯತೆ ನೀಡಿದ್ದರೆಂದು ತಿಳಿಯಬಹುದು.

ತಂದೆತಾಯಿಯರು ತಮ್ಮ ಮಕ್ಕಳಿಗೆ ನೀಡುವ ಅತ್ಯುತ್ತಮ ಕೊಡುಗೆ  ಶಿಕ್ಷಣ ಮತ್ತು  ತರಬೇತಿಯಾಗಿದೆ,

ಮಡಿಲಿಂದ ಗೋರಿಯ ತನಕವೂ ವಿದ್ಯೆಯನ್ನರಿಸಿರಿ ಎಂದೂ ಅವರ ಹದೀಸ್ ಗಳಲ್ಲಿದೆ..

ನಕಾರಾತ್ಮತೆಗೆ ಸಕಾರಾತ್ಮವೇ ಪರಿಹಾರ​:

ಪೈಗಂಬರರುಗಳ  ಕ್ರಮ ಸೇಡುತೀರಿಸುವುದರ ಬದಲು, ಕೇಡು ಬಗೆಯುವವರನ್ನು ಸುಧಾರಿಸುವುದಾಗಿದೆ.   ಎಂತಹ ಪರಿಸ್ಥಿತಿಯಲ್ಲೂ ಸಂಘರ್ಷದ  ಬದಲಿಗೆ ಗುಣಾತ್ಮಕ ಮತ್ತು ರಚನಾತ್ಮಕ  ಹಾದಿ  ಮಾತ್ರವೇ ಅವರದ್ದಾಗಿತ್ತು.  ಪ್ರೀತಿ ಮೂಲಕವೇ ಸಮಾಜವನ್ನು ತಿದ್ದಲು ಸಾಧ್ಯ; ದ್ವೇಶದಿಂದ ಇನ್ನೂ ಕ್ಲಿಷ್ಟಕರವಾಗುವುದೆಂಬುದು ಪೈಗಂಬರರ ಶಿಕ್ಷಣವಾಗಿದೆ.

ಬೆಂಕಿಯನ್ನು ಬೆಂಕಿಯಿಂದ ನಂದಿಸಲು ಸಾಧ್ಯವಿಲ್ಲ;  ರಕ್ತವನ್ನು ರಕ್ತದಿಂದ ತೊಳೆಯುವುದೂ ಅಲ್ಲ, ಹಾಗೆ ಮಾಡಿದರೆ ಅದು ಇನ್ನೂ ವೃದ್ಧಿಸುವುದು. ನೀರಿನಿಂದಲೇ ಅಳಿಸಬೇಕಿದೆ,  ಕೆಡಿಸುವುದು ಮತ್ತು  ವಿನಾಶ  ಸುಲಭ, ಅದು ಸಾಧನೆಯೂ ಆಲ್ಲ, ನಿರ್ಮಾಣದಲ್ಲಿ ಗುರುತಿಸುವುದು ಸಾಧನೆಯಾಗಿದೆ.

ಅಜ್ಙಾನದ  ಅಂಧಕಾರದಲ್ಲಿ ಮುಳುಗಿದ್ದ ತಾಯಿಫ್  ನಗರದ ಜನರಿಗೆ ಜ್ಙಾನದ ಪ್ರಕಾಶದ ಮೂಲಕ ಸಹಾಯ ಮಾಡಲು ಹೋದಾಗ, ಬೀದಿ ಪುಂಡರನ್ನು  ಪ್ರವಾದಿಯವರ ಹಿಂದೆ ಛೂ ಬಿಡಲಾಗುತ್ತದೆ. ಆ ಪುಂಡರು ಅವರನ್ನು  ಚೂಪಾದ ಕಲ್ಲುಗಳಿಂದ  ಮಾರಣಾಂತಿಕವಾಗಿ ಹಲ್ಲೆನಡೆಸಿ, ದೇಹವಿಡೀ ರಕ್ತಸಿಕ್ತಗೊಳಿಸುತ್ತಾರೆ,  ಪ್ರಜ್ನೆ ತಪ್ಪಿ ಬೀಳುತ್ತಾರೆ.  ಪ್ರಜ್ಞೆ ಬಂದ ಮೇಲೆ ಅವರ ಸಂಗಡಿಗರು ಅವರಿಗೆ ಶಾಪಕ್ಕಾಗಿ ದೇವನಲ್ಲಿ ಪ್ರಾರ್ಥಿಸಿರಿಯೆಂದು ಹೇಳಿದಾಗ,  ನಾನು ಒಳಿತಿನ  ಪ್ರಾರ್ಥನೆಗಾಗಿ  ಬಂದವನೆನ್ನುತ್ತಾರೆ.  ದೇವದೂತ ಪ್ರತ್ಯಕ್ಶನಾಗಿ ನಿಮ್ಮ ಅನುಮತಿಯಿದ್ದರೆ ಈ ಜನರನ್ನು ನಾಶ ಮಾಡೆಂಬ ಆಜ್ಙೆ ಇದೆಯೆನ್ನುತ್ತಾರೆ, ಬೇಡ ಬೇಡ, ಇವರಿಗೆ ತಿಳಿದಿಲ್ಲ, ಇವರ ಸಂತತಿ ಸರಿ ಹಾದಿಗೆ ಬಂದಾರೆಂದು ಮರ್ದಕರನ್ನು ಕ್ಷಮಿಸುವಂತೆ ದೇವನಲ್ಲಿ ಪ್ರಾರ್ಥಿಸುತ್ತಾರೆ.

ಪೈಗಂಬರರ  ನಿತ್ಯದ ಹಾದಿಯಲ್ಲಿ ಓರ್ವ ಸ್ತ್ರೀ ತನ್ನ ಮನೆಯ ಮೇಲ್ಚಾವಣಿಯಿಂದ  ಅವರ ಮೇಲೆ ಕಸ ಕಡ್ಡಿಗಳನ್ನು ಎಸೆಯುತ್ತಿದ್ದಳು. ಈ ನಿತ್ಯದಿನಚರಿ ಒಂದೆರಡು ದಿನ ನಡೆಯದೆ ಇದ್ದಾಗ, ಪ್ರವಾದಿಯವರು ಆಕೆ  ಅಸೌಖ್ಯಳಾಗಿರಬಹುದೋ ಎಂದು ವ್ಯಾಕುಲಗೊಂಡರು  ಮತ್ತು  ಕೂಡಲೇ ಆಕೆಯ ಮನೆಗೆ ತೆರಳಿದರು. ಪ್ರವಾದಿಯವರನ್ನು ಕಂಡ ಆ  ಸ್ತ್ರೀ  ಹೆದರಿ ಕೊಳ್ಳುತ್ತಾಳೆ.   ಪೈಗಂಬರರು ಆಕೆಯ ಆರೋಗ್ಯ  ವಿಚಾರಿಸಿ  ಸಾಂತ್ವನ  ನೀಡಿ ಮರಳಿದರು. ಆಂದಿನಿಂದ ಎಂದೂ ಪ್ರವಾದಿಯವರ ಮೇಲೆ ಅಲ್ಲಿಂದ ಕಸ ಬೀಳಲಿಲ್ಲ.

ಮಹಿಳೆಗೆ ಉನ್ನತ​ ಸ್ಥಾನ​ ನೀಡಿದ​ ಪ್ರವಾದಿ:

ಸಮಾಜ​ ನಿರ್ಮಾಣದ ಪ್ರಮುಖ​ ಭಾಗವಾಗಿ  ಸ್ತ್ರೀಯರಿಗೆ ಉನ್ನತ ಸ್ಥಾನ ಕೊಡಿಸಿದುದು ಪೈಗಂಬರರ ಮಹತ್ಸಾಧನೆಗಳಲ್ಲೊಂದು.

ಪ್ರವಾದಿತ್ವಕ್ಕೆ ಪೂರ್ವ ಆ ಪ್ರದೇಶದಲ್ಲಿ ಹುಡುಗಿಯರನ್ನು ಹೂಳುತ್ತಿದ್ದರು,  ಅದರ ಆದುನಿಕ ರೂಪ ವೇ ಭ್ರೂಣ ಹತ್ಯೆ. ಯಾವ ಪಾಪಕ್ಕಾಗಿ ನಮ್ಮನ್ನು ಕೊಲ್ಲಲ್ಲಾಗಿತ್ತೆಂದು ನಿರ್ಣಾಯಕ ದಿನದಂದು  ದೇವನ ಮುಂದೆ ಆ ಹೆಣ್ಮಕ್ಕಳು ಕೇಳುವರೆಂದು’ ಕುರಾನ್ ಎಚ್ಚರಿಸಿತು, ಮತ್ತು ಪ್ರವಾದಿಯವರ ಸುಧಾರಣೆಯ ಮೂಲಕ ಆ ಸಾಮಾಜಿಕ ಪಿಡುಗಿನ ನಿರ್ಮೂಲನೆ ಆಯ್ತು.

ಅನಾಧೆ, ವಿಚ್ಛೇದಿತೆ ಹಾಗೂ ವಿಧವೆಯರ ವಿವಾಹಗಳನ್ನು  ಪ್ರೋತ್ಸಾಹಿಸಿದರು. ಹೆಣ್ಮಕ್ಕಳಣ್ಣು  ಪೋಷಿಸಿ, ಕಲಿಸಿ, ವಿವಾಹ ಮಾಡಿ ಕೊಡುವ ತಂದೆಯಂದಿರಿಗೆ ಸ್ವರ್ಗದ ಸುವಾರ್ತೆ ನೀಡಿದರು. ತಾಯಿಯ ಪಾದದಡಿ ಸ್ವರ್ಗವೆಂದೂ ಮಹಿಳೆಯ ಸ್ಥಾನವನ್ನು ಉನ್ನತಿಗೇರಿಸಿದರು.

ಅನಿಯಂತ್ರಿತ ಮತ್ತು ಅಮಿತ ವಿವಾಹ ಹಾಗೂ ವಿಚ್ಚೇದನಗಳನ್ನು ನಿಯಂತ್ರಿಸಿದರು. ಭಾರಿ ಮೊತ್ತದ ವಧು ದಕ್ಷಿಣೆ ಮತ್ತಿತ್ತರ ನಿಯಮಗಳಿಂದ ವಿಚ್ಚೇದನವನ್ನು ಕ್ಲಿಷ್ಟಕರಗೊಳಿಸಿದರು. ಒಂದು ವೇಳೆ ವಿಚ್ಛೇಧನದ  ಅನಿವಾರ್ಯತೆ ಒದಗಿದರೂ ಅವರಿಗೆ ಬೆಟ್ಟದಷ್ಟು ಚಿನ್ನ ಕೊಟ್ಟಿದ್ದರೂ ಹಿಂಪಡೆಯುವುದಂತು ಇರಲಿ,  ಆಕೆಯ ಮುಂದಿನ  ಜೀವನಕ್ಕಾಗಿ ಎಷ್ಟು ಸಾದ್ಯವೋ ಅದನ್ನೆಲ್ಲವನ್ನೂ ಮಾಡುವಂತೆ ಗಂಡಿಗೆ ವಿಧಿಸಿದರು.

ಕನ್ಯಾದಾನ  ಅಥವಾ ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆಯೆಂಬ  ಕಲ್ಪನೆ ಪ್ರವಾದಿಗಳ ಶಿಕ್ಷಣದಲ್ಲಿಲ್ಲ. ಮರಳಿ ಬಂದರೆ  ತಂದೆ ಅಥವಾ ಸಹೋದರರು ಮೊದಲಿಗಿಂತಲೂ ಹೆಚ್ಚಿನ​ ಗೌರ ಕೊಟ್ಟು ನೋಡಿಕೊಳ್ಳಬೇಕು ಮತ್ತು ಪುನರ್ವಿವಾಹ​  ಮಾಡಿಸ ಬೇಕೆನ್ನುತ್ತದೆ.  ಓರ್ವ  ದಾಸಿಯಿರುವಾತನು ಆಕೆಗೆ ವಿದ್ಯೆ ಕಲಿಸಿ, ಉತ್ತಮವಾಗಿ ಪೋಷಿಸಿ ಮದುವೆಮಾಡಿ ಕೊಟ್ಟವರಿಗೆ  ಸ್ವರ್ಗದ ಸುವಾರ್ತೆ ನೀಡಿದರು

ಸ್ವತ್ತಿನಲ್ಲಿ ಹಕ್ಕನ್ನು ಮಹಿಳೆಗೆ ಮೊತ್ತ​ ಮೊದಲು ಕೊಡಿಸಿದ​ ಕೀರ್ತಿಯೂ ಮುಹಮ್ಮದರಿಗೆ ಸಲ್ಲುತ್ತದೆ. ಕುರಾನ್ ಮಹಿಳೆಗೆ  ನೀಡಿರುವ​ ಸ್ಥಾನ, ಘನತೆ​ ಗೌರವಗಳನ್ನು ಕಂಡು ಮಹಾಕವಿ ಇಕ್ಬಾಲರು ಈ ರೀತಿಯಾಗಿ ಉದ್ಗರಿಸುತ್ತಾರೆ.   ‘ಕುರಾನ್ ದೇವನ​ ಗ್ರಂಥವೆಂಬ​ ವಿಶ್ವಾಸದ​ ಭಾಗ​ ನನ್ನದಲ್ಲವಾಗಿರುತ್ತಿದ್ದರೆ, ಇದು ಮಹಿಳೆಯಿಂದ​ ರಚಿತ​ ಗ್ರಂಥವೋ ಎನ್ನುತ್ತಿದ್ದೆ’

ಮರ್ದಿತರ​ ದೀನ ಬಂಧು

ಪ್ರವಾದಿಗಳು ಕರ್ಮಯೋಗಿಗಳಾಗಿದ್ದರು. ನುಡಿದಂತೆ ತಪ್ಪದೆ ನಡೆಯುವ, ಅವರ ಶಿಸ್ತಿನ ಭಾಗವಾಗಿತ್ತು. ಸಮಯವನ್ನು ಸರಿಯಾಗಿ ಉಪಯೋಗಿಸುವುದು ಅವರ ವಿಶೇಷತೆಗಳಲ್ಲಿ ಪಟ್ಟಿತ್ತು.   ಕ್ಶಮೆ ಮತ್ತು ಸಂಯಮ ಅವರ ಜೀವನದ ಅತಿ ವಿಶೇಶ ಗುಣಗಳು. ನಡೆದಂತೆ ನಡೆದ ಉದಾಹರಣೆಗಳನ್ನು ಉಲ್ಲೇಖಿಸಿದರೆ ದೊಡ್ಡ ಗ್ರಂಥವೇ ಆದೀತು.

ಬಡವರು, ದುರ್ಬಲರು, ಅಸಹಾಯಕರು,ಅನಾಥರು, ಕೈದಿಗಳಿಗೆ ಉಣಬಡಿಸುವವನೇ ನೈಜ ದೇವದಾಸ ಎಂಬ ದಿವ್ಯ ಪಾಠವನ್ನು  ಜನರಿಗೆ ನೀಡಿದರು.  ಯಾರಾದರೂ ಹಸಿದಿರುವುದು ಗಮನಕ್ಕೆ ಬಂದರೆ ಹಸಿವು ನೀಗಿಸುವ ಹೊಣೆಯನ್ನು ಪ್ರವಾದಿಯವರು ವಹಿಸಿ ಕೊಳ್ಳುತ್ತಿದ್ದರು.

ಜೀತ ಮುಕ್ತಗೊಳಿಸಿದುದು ಸಮಾಜಕ್ಕೆ ನೀಡಿದ ಇನ್ನೊಂದು ಕೊಡುಗೆ. ತನ್ನ ರಾಜ್ಯದಲ್ಲಿ  ಯಾರಾದರೂ ತಪ್ಪು ಮಾಡಿದರೆ ಪ್ರಾಯಶ್ಚಿತ್ತವಾಗಿ ಗುಲಾಮರನ್ನು ಖರೀದಿಸಿ ಸ್ವತಂತ್ರ ಗೊಳಿಸುವ ಶಿಕ್ಷೆಯನ್ನು ನೀಡುತ್ತಿದ್ದರು.   ಸ್ಥಿತಿವಂತರು ಗುಲಾಮರನ್ನು ಖರೀದಿಸಿ ಸ್ವತಂತ್ರಗೊಳಿಸುವಂತೆ ವಿಧವಿಧವಾಗಿ ಪ್ರೋತ್ಸಾಹಿಸುತ್ತಿದ್ದರು.

ಕ್ಷುಲ್ಲಕ ವಿಷಯವನ್ನು ಪ್ರತಿಷ್ಠೆ  ಮಾಡಿಕೊಂಡು, ವರ್ಷಗಟ್ಟಳೆ ಯುದ್ದಗಳಲ್ಲಿ ತೊಡಗಿ ಸಾವಿರಾರು ಜನರನ್ನು ಸಾವಿಗೆ ಕಾರಣವಾಗುತ್ತಿದ್ದ  ಉಭಯ ಗೋತ್ರಗಳನ್ನು ಒಂದಾಗಿಸಿದರು

ನೆರೆಕರೆಯವರ ಹಕ್ಕುಗಳ ಬಗ್ಗೆ ದೇವದೂತನ ಮೂಲಕ ದೇವನಿಂದ ಬರುತ್ತಿರುವ   ಪ್ರಾಮುಖ್ಯತೆಗಳನ್ನು ಅರಿಯುತ್ತಿದ್ದಾಗ , ಮುಂದೆ ಆಸ್ತಿಯಲ್ಲೂ ಪಾಲು ನೀಡಬೇಕೆನ್ನಬಹುದೋ ಎಂದೆಣಿಸುತ್ತದೆ ಎಂದು ದೇವ ಸಂದೇಶಕವಾಹಕರು ಹೇಳುತ್ತಿದ್ದರು

ಯುದ್ದ ಸಮಯದಲ್ಲೂ ಸ್ತ್ರೀಯರು, ಮಕ್ಕಳು, ಅಸಹಾಯಕರು, ವ್ರದ್ದರು, ಪ್ರಾಣಿಪಕ್ಷಿಗಳು, ಮರ ಗಿಡಗಳಿಗಳಿಗೂ  ಹಾನಿ ಮಾಡಬಾರದೆಂದು ವಿದಿಸಿದರು.

ಅನಾಥ ಮಕ್ಕಳೊಂದಿಗೆ  ಮಕ್ಕಳು ಆಟವಾಡುತ್ತಿದ್ದರೆ, ತಮ್ಮ ಮಕ್ಕಳನ್ನು ಮಗನೇ  ಎಂದು ಕರೆಯಬಾರದೆಂದೂ ತನ್ನ ಸಂಗಡಿಗರಿಗೆ ಸೂಚಿಸಿದ್ದರು.

ಪೈಗಂಬರರ ಕೈಗೆ ಏನಾದರೂ  ಆಹಾರ ಪದಾರ್ಥ ಬಂತೆಂದಾದರೆ, ಬಡವರ ಮನೆಮನೆಗೆ ಹೋಗಿ ಹಂಚುತ್ತಿದ್ದರು. ಅನಾಥ ಮಕ್ಕಳಿಗೂ ಪ್ರ ತ್ಯೇಕವಾಗಿ ಕೊಡುತ್ತಿದ್ದರಲ್ಲದೆ, ಮುದ್ದಿಸಿ, ಪ್ರೀತಿ ವಾತ್ಶಲ್ದದಿಂದ ತಲೆಯನ್ನು ಸವತ್ತಿದ್ದರು.

ವ್ಯಾಪಾರದಲ್ಲಿ ಸತ್ಯಸಂಧತೆ ಆರಾಧನೆಯಾಗಿದೆ:

ಯಹೂದಿಯರು ಆಕ್ರಮಿಸಿ ಕೊಂಡಿದ್ದ  ಬಡ್ಡಿ,  ವಂಚನೆ,  ಕಾಳಸಂತೆ, ಕಳ್ಳಸಾಗಾಣಿಕೆ, ಅಕ್ರಮ ದಾಸ್ತಾನುಗಳಂತಹ ಶೋಷಣೆಗಳಿಂದ  ಜನರನ್ನು ರಕ್ಷಿಸಲು  ಏಕಸ್ವಾಮ್ಯವಿಲ್ಲದ ಶಿಸ್ತುಬದ್ಧ ಒಂದು ಮಾದರೀಯೋಗ್ಯ ಮೌಲ್ಯಾಧಾರಿತ  ವಾಣಿಜ್ಯ ಮಾರುಕಟ್ಟೆಯನ್ನು ಮುಹಮ್ಮದ್ ಪೈಗಂಬರರು ಮದೀನಾದಲ್ಲಿ ಸ್ಥಾಪಿಸಿದರು.

ಸತ್ಯಸಂಧ  ವ್ಯಾಪಾರಿಯು ಪರಲೋಕದಲ್ಲಿ  ಪ್ರವಾದಿಗಳು  ಮತ್ತು, ಹುತಾತ್ಮರೊಂದಿಗೆ  ಹಾಗೂ ದೇವನ  ವಿಶೇಷ  ನೆರಳಿನಲ್ಲಿರುವರುಯೆಂಬ ಶುಭವಾರ್ತೆಯನ್ನೂ ನೀಡಿದರು.

ಒಮ್ಮೆ ಪೈಗಂಬರರು ಪೇಟೆಯಿಂದ  ಹಾದುವಾಗ ಅಲ್ಲಿದ್ದ ಧಾನ್ಯ ರಾಶಿಯೊಳಗೆ ಕೈ ಹಾಕಿದಾಗ ಧಾನ್ಯ ಒದ್ದೆಯಾಗಿರುವುದನ್ನು ಕಂಡು  ಇದೇನೆಂದು ವಿಚಾರಿಸಿದರು. ರಾತ್ರಿ ಮಳೆ  ಬಂದಿದ್ದರಿಂದ  ಒದ್ದೆಯಾಯಿತೆಂದು ಹೇಳಲಾಗುತ್ತದೆ.   ಪೈಗಂಬರರು ‘ ಅದನ್ನು ಮೇಲ್ಬಾಗದಲ್ಲಿ ಏಕೆ ಹಾಕಲಿಲ್ಲವೆಂದು ಕೇಳಿದರು.’   ತರುವಾಯ  ‘ವಂಚಿಸುವವರು ನಮ್ಮವರಲ್ಲ’ ವೆಂದು ಎಚ್ಚರಿಸಿದರು

ಸಾಮಾಜಿಕ​ ಕಳಕಳಿ:

ಯೆಹೂದಿಯರು ಸಾರ್ವಜನಿಕರನ್ನು ಬಾವಿಯ ನೀರನ್ನು ಉಪಯೋಗಿಸುವುದರಿಂದ ತಡೆದಾಗ,  ಉಸ್ಮಾನ್ ಯೆಂಬ ತನ್ನ  ಸಂಗಾತಿಯಿಂದ   ಬಾವಿಯನ್ನು ಖರೀದಿಸುವಂತೆ ಮಾಡಿ, ಸಾರ್ವಜನಿಕರಿಗಾಗಿ ಅರ್ಪಿಸಿದರು.

ಶುಚಿತ್ವವು, ಅಲ್ಲಾಹನ ಮೇಲಿನ ವಿಶ್ವಾಸದ ಅರ್ಧ್ತ ಭಾಗವಾಗಿದೆ ಯೆಂದಿರುವರು.

ಆಹಾರವನ್ನು ಜಿಗಿದು ತಿನ್ನುವುದು ಮಾತ್ರವಲ್ಲ, ಹೊಟ್ಟೆ ತುಂಬಾ ತಿನ್ನಬಾರದೆಂದೂ ವಿಧಿಸಿರುತ್ತಾರೆ.

ಪೃಕೃತಿ ಸಂರಕ್ಷಣೆಗೂ ಅತಿ ಮಹತ್ವವನ್ನು ಕೊಟ್ಟಿರುವುದು ಗಮನಿಸ ಬಹುದಾಗಿದೆ. ಮರಗಳನ್ನು ನೆಡುವುದು, ಅದಕ್ಕೆ ನೀರೆರೆಯುವುದೂ, ಅಂತ್ಯ ದಿನದಲ್ಲಿ  ಕಹಳೆ ಊದುವ ಶಬ್ದ ಕೇಳಿದರೂ ಕೈಯಲ್ಲಿರುವ ಸಸಿಯನ್ನು ನೆಟ್ಟುಬಿಡು ಎಂದೂ ಪ್ರವಾದಿ  ಹೇಳಿದ್ದಾರೆ.

ನಿಂತ ನೀರನ್ನು ಕೊಳಕಾಗಿಸಬಾದೆಂದೂ, ಮರಗಳ  ಬುಡವನ್ನು ಮಾಲಿನ್ಯ ವಿಸರ್ಜನೆಯ ಸ್ಥಳವಾಗಿಸಬಾರದೆಂದೂ ತಾಕೀತು ಮಾಡಿದ್ದರು.

ಮಾನವೀಯ ಹಕ್ಕು:

ಓರ್ವ ವ್ಯಕ್ತಿಯನ್ನು ವಿನಾಕಾರಣ  ಕೊಂದರೆ ಇಡೀ ಜನಾಂಗವನ್ನು ಕೊಂದಂತೆಯೂ ಓರ್ವನ ಪ್ರಾಣವನ್ನು ಉಳಿಸಿದರೆ ಇಡೀ ಜನಾಂಗವನ್ನೇ ಉಳಿಸಿದಂತೆಯೆನ್ನುವ  ಕುರಾನ್ ವಾಕ್ಯ ಮಾನವ ಪ್ರಾಣದ ಘನತೆಯನ್ನು ತಿಳಿಸಿದೆ.

.ಕಾರ್ಮಿಕರಿಗೆ ರಕ್ಷಣೆ, ಖಾಸಗಿ ಜೀವನ ಪಾವನ, ಕುಟುಂಬ ವ್ಯವಸ್ಠೆಯನ್ನು ಸುಭದ್ರಗೊಳಿಸಿದರು. ತಪ್ಪು ಹಾದಿಯಲ್ಲಿರುವವರ ಬಗ್ಗೆ ಸದಾ ಚಿಂತಾಕ್ರಾಂತರಾಗಿರುತ್ತಿದ್ದರು. ತನ್ನನ್ನು ಸತಾಯಿಸಿದವರ ಆಂತ್ಯದ ಬಗ್ಗೆ ವ್ಯಾಕುಲಗ್ರಸ್ತರಾಗಿರುತ್ತಿದ್ದರು.

ಮದ್ಯಪಾನ, ಜೂಜಾಟಾದಿ ಚಟ​ಗಳಲ್ಲಿ ಮುಳುಗಿದ್ದ  ಒಂದು  ಸಮಾಜವನ್ನು ಕೇವಲ 23 ವರ್ಷಗಳಲ್ಲೇ  ಹಂತ ಹಂತವಾಗಿ ಕ್ರಾಂತಿಕಾರೀ  ರೀತಿಯಲ್ಲಿ  ಸುಸಂಸ್ಕೃತ  ನಾಗರಿಕರನ್ನಾಗಿಸಿ ಬಿಟ್ಟರು.  ಅನೈತಿಕತೆ, ಆರ್ಥಿಕ ಶೋಷಣೆ, ಅಸಮಾನತೆ ಮತ್ತು ಎಲ್ಲಾ ಬಗೆಯ ಮೂಢ ನಂಬಿಕೆಳನ್ನು ಹೋಗಲಾಡಿಸಿದರು.

ಒಟ್ಟಿನಲ್ಲಿ ಮತ​ ಧರ್ಮಗಳನ್ನು ಆಧಾರ​ ಮಾಡಿಕೊಂಡು ಮನುಷ್ಯ ಕೆಲ ಅನುಕೂಲ​ ಆಚಾರಗಳಿಂದ ಸ್ವಂತದ​ ಅಥವ​ ವೈಯಕ್ತಿಕ ಸಂತೃಪ್ತಿಯನ್ನಷ್ಟೇ ಮಾಡಿಕೊಂಡರೆ, ಮುಹಮ್ಮದರು ಪ್ರತಿಪಾದಿಸುವ​ ದೀನ್(ಜೀವನದ​ ಸಮಗ್ರ​ ಪದ್ಧತಿ) ಮದೀನದಿಂದ ಆರಂಭಿಸಿ ಒಂದು ಯಶಸ್ವೀ  ನ್ಯಾಯಾಧಿಷ್ಟಿತ​, ಮಾನವೀಯ​, ಶಾಂತಿಯ​  ಸಮೃದ್ಧ ಸಾಮ್ರಜ್ಯ​ವನ್ನು ಸ್ಥಾಪಿಸಿ ತೋರಿಸಿದರು. ನಂತರ​ ಅವರ​ ಸಂಗಡಿಗರೂ ಅದನ್ನು ಪ್ರಾಯೋಗಿಕ ಹಾಗೂ ಮಾದರೀಯ ಗೊಳಿಸಿದರು.  ಮಾನವನ​ ದಾಸ್ಯದಿಂದ ಮತ್ತು ಮಾನವ ಕೃತ​ ಸಿದ್ಧಾಂತಗಳಿಂದ​ ವಿಮೋಚಿಸಿ ನ್ಯೂನತೆಗಳಿಂದ ಅತೀತ ಎಲ್ಲರ ಎಲ್ಲದರ ಸೃಷ್ಟಿಸಿದಾತ  ಒದಗಿಸಿದ ​ ಪರಿಪೂರ್ಣ​ ಜೀವನ​ ಪದ್ಧತಿಯಿಂದ​ ಜನರನ್ನು ಯಶಸ್ವಿ ಗೊಳಿಸಿದರು. ಅನ್ಯಾಯದ​, ಅಸಮಾನತೆಯ​, ದ್ವೇಶದ​, ಕ್ರೂರ​ ಆಡಳಿತ​ ವ್ಯವಸ್ಥೆಗೆ ನೆಮ್ಮದಿಯ​​ ಪರ್ಯಾಯ​ ನೀಡಿದರು.

ಕ್ರಮೇಣ​  ಪೈಗಂಬರರ ದೌತ್ಯವನ್ನು ನಿರ್ವಹಿಸ​ ಬೇಕಾದ​ ಸುಮಧ್ಯ​ ಸಮುದಾಯವು ಒಳಿತನ್ನು ಸ್ಥಾಪಿಸುವ ತಮ್ಮ​ ಹೊಣೆಗಾರಿಕೆಯನ್ನು ನಿರ್ಲಕ್ಷಿಸಿದ​ ಕಾರಣವಾಗಿ ಜನರಲ್ಲಿ ಕೇಡು ಬರುತ್ತಿದ್ದಂತೆ ಆಡಳಿತದಲ್ಲೂ ರಾಜಾಳ್ವಿಕೆ ಮತ್ತು ಸರ್ವಾಧಿಕಾರ​ ಬರ​ ತೊಡಗಿತು. ಆದರೂ ಪೈಗಂಬರರು ಲೋಕಕ್ಕೆ ನೀಡಿದ​ ಮೌಲ್ಯಗಳ​ ಎಷ್ಟಂಷಗಳನ್ನು ಎಲ್ಲೆಲ್ಲಿ ಅನುಷ್ಠಾನಿಸಲಾಗಿದೆಯೋ ಅಲ್ಲಲ್ಲಿ ಅದರ ಫಲಿತಾಂಷಗಳನ್ನೂ ಗಮನಿಸ​ ಬಹುದಾಗಿದೆ.

ಸರ್ವ ಜನರಿಗೆ ಮತ್ತು  ಎಲ್ಲಾ ಕಾಲಕ್ಕೆ ಹೊಂದುವ ಶಿಕ್ಷಣ ಅವರದ್ದಾಗಿದೆ.  ಆರ್ಥಿಕತೆ, ರಾಜಕೀಯಾದಿಗಳಲ್ಲಿ  ಪೈಗಂಬರರ ಏನೆಲ್ಲಾ  ಸೈಧ್ದಾಂತಿಕ ಮತ್ತು ವೈಚಾರಿಕ   ಶಿಕ್ಷಣಗಳು ದೊರೆಯುತ್ತದೆಯೆಂದು ಅರಿಯುವುದು ಸಮಯೋಚಿತವಾಗಿದೆ.

ನಮ್ಮ ದೇಶಕ್ಕೆ ಶಾಪದಂತೆ ಬಾದಿಸಿರುವ  ಭ್ರಷ್ಟಾಚಾರ,  ಹೆಣ್ಣು ಮಕ್ಕಳ ಬಗೆಗಿನ​ ​ಖೇದಕರ​  ವರ್ತನೆ, ಆರ್ಥಿಕ​ ಶೋಷಣೆ, ಕೋಮುವಾದದಂತಹ  ಪಿಡುಗಿಗೂ ಪೈಗಂಬರರ ಶಿಕ್ಷಣಗಳಲ್ಲಿ ಪರಿಹಾರ ಕಂಡುಕೊಳ್ಳ ಬಹುದು.

‘ಲೋಕಾನುಗ್ರಹಿ’ ಯೆಂದು ಕುರಾನ್  ಕರೆದಿರುವ  ಸಂದೇಶವಾಹಕರಲ್ಲಿ  ಶಾಂತಿ, ಮಾನವೀಯ​ ಮತ್ತು  ನ್ಯಾಯದ  ಮೂಲಕ  ಸಮಾಜ  ಹಾಗೂ  ರಾಷ್ಟ್ರ ನಿರ್ಮಾಣದ  ಸಂದೇಶ  ನಿಸ್ಸಂದೇಹವಾಗಿಯೂ  ಇದೆ.

 

LEAVE A REPLY

Please enter your comment!
Please enter your name here