ಪ್ರವಾಸ ಅನುಭವ : ಅಬೂನಿಹ್ಮ – ವಿಜಯನಗರ.

ದಿನಾಂಕ 19/1/2021 ಮಂಗಳವಾರ.ಮುಂಜಾನೆ ಸುಮಾರು 3 ಗಂಟೆಯ ಸಮಯ. ನಾಟೆಕಲ್ಲು ವಿಜಯನಗರದ ಯುವಕರಲ್ಲಿ ಎಲ್ಲಿಲ್ಲದ ಸಂಭ್ರಮ, ಸಡಗರ. ಇಡೀ ವಿಜಯನಗರವೇ ಅಂದು ಬೆಳಗನ್ನು ಬಹಳ ಬೇಗನೆ ಪಡೆದಂತೆ. ಇನ್ನೇನು ಪ್ರವಾಸ ಆರಂಭಿಸುವ ವೇಳೆ ಸಮೀಪಿಸುತ್ತಿದೆ ಎನ್ನುವಷ್ಟರಲ್ಲಿ ಗೆಳೆಯರಿಂದ ಗೆಳೆಯರಿಗೆ ಫೋನ್ ಕರೆಗಳ ಸರಮಾಲೆ. ನೀನು ರೆಡಿಯಾ ನೀನು ರೆಡಿಯಾ ಎಂದು. ಎಲ್ಲರಲ್ಲೂ ಒಂದೇ ಮಾತು. ಅಂದ ಹಾಗೆ ವಿಷಯವೇನೆಂದು ಹೇಳಲು ಮರೆತೆ.

ಇದು ಇಲ್ಲಿನ ಹಿರಿಯರು, ಯುವಕರು, ಕಿರಿಯರು ಎಲ್ಲರೂ ಒಟ್ಟಾಗಿ ಇಡೀ ವಿಜಯನಗರ ಊರೇ ‘ನಾವೆಲ್ಲ ಒಂದು;ನಾವೆಲ್ಲ ಬಂಧು’ ಎಂಬ ನುಡಿಯನ್ನು ಸಾಕ್ಷಾತ್ಕರಿಸಲೋ ಎಂಬಂತೆ ಮಲೆನಾಡಿಗೆ ಕಾಫಿಯನ್ನು ಪರಿಚಯಿಸಿದ ಸಂತರಾದ ಬಾಬಾ ಬುಡಾನ್ ರವರ ಬೆಟ್ಟದಲ್ಲಿನ ಸನ್ನಿಧಾನ, ಹಾಸನ ಜಿಲ್ಲೆಯಲ್ಲಿರುವ ಬಾಬಾ ಖಲಂದರ್ ಷಾ ಜಾವಗಲ್ ದರ್ಗಾ ಹಾಗೂ ಸೈಯದ್ ಹುಸೈನ್ ಷಾ ವಲಿಯ್ಯ್ ದರ್ಗಾ ಬಾಣಾವರ ಮತ್ತು ಚಿಕ್ಕ ಮಗಳೂರಿನ ಸುತ್ತ ಮುತ್ತಣ ಪ್ರಕೃತಿ ರಮಣೀಯ ತಾಣಗಳನ್ನು ನೋಡಲೆಂದು ಮಿನಿ ಬಸ್ನಲ್ಲಿ ಕೈಗೊಂಡ ಏಕದಿನ ಪ್ರವಾಸ ಕಾರ್ಯಕ್ರಮ.

ಅಂದು ಬೆಳಿಗ್ಗಿನ ಜಾವ 4 ಗಂಟೆಗೆ ಸರಿಯಾಗಿ ಹೊರಡುವ ಪ್ರವಾಸಕ್ಕಾಗಿ ಟೂರ್ ಸಂಚಾಲಕರಾದ ಇಸ್ಮಾಯಿಲ್ ಜಾಸ್ಮಿನ್, ಮುಹಮ್ಮದ್ ಕಮಾಲ್ ಸಾರಥ್ಯದಲ್ಲಿ ಎಲ್ಲ ಸಿದ್ಧತೆಗಳನ್ನೂ ಅಚ್ಚುಕಟ್ಟಾಗಿ ವ್ಯವಸ್ಥೆಗೊಳಿಸಲಾಗಿತ್ತು. ಶುಭಾರಂಭದ ಪ್ರತೀಕವಾಗಿ ಟೂರಿಗೆ ಧಾರ್ಮಿಕ ನೇತೃತ್ವ ನೀಡಲು ನಿಯೋಜಕರಾಗಿದ್ದ ಬಹುಮಾನ್ಯರಾದ ನಝೀರ್ ಸಖಾಫಿ ಉಸ್ತಾದ್ ಪ್ರಾರ್ಥನೆಗೈದರು. ತಂಡದಲ್ಲಿ 70 ರ ಹರೆಯದ ಹಿರಿಯರು,ಮಧ್ಯ ವಯಸ್ಕರು, ಉತ್ಸಾಹಿ ಯುವಕರು ಹಾಗೂ 6 ವಯಸ್ಸಿನ ಕಿರಿಯ ಸದಸ್ಯರೂ ಒಳಗೊಂಡಿದ್ದರು ಎನ್ನುವುದು ಈ ಪ್ರವಾಸದ
ವೈಶಿಷ್ಟ್ಯವಾಗಿತ್ತು. ಬೆಳಿಗ್ಗೆ 6 ಗಂಟೆಯ ವೇಳೆಗೆ ಕಕ್ಕಿಂಜೆ ಪೇಟೆಯಲ್ಲಿನ ಮುಹಿಯುದ್ದೀನ್ ಜುಮಾ ಮಸ್ಜಿದ್ ನಲ್ಲಿ ಸುಬಹಿ ನಮಾಝ್ ಮುಗಿಸಿ ಪ್ರಯಾಣ ಮುಂದುವರಿಸಿದೆವು. ದಾರಿ ಮಧ್ಯೆ ಚಾರ್ಮಾಡಿ ಘಾಟಿನ ರಸ್ತೆ ಇಕ್ಕೆಲಗಳ ಪ್ರಕೃತಿ ರಮಣೀಯ ದೃಶ್ಯವನ್ನು ಮನಸಾರೆ ಸವಿಯುತ್ತಾ ಮುಂದುವರಿದೆವು. ಕೆಲವು ಗೆಳೆಯರಂತೂ
ತಮ್ಮ ಮೊಬೈಲ್ ಕ್ಯಾಮರಾಗಳಲ್ಲಿ ಬಸ್ಸಿನೊಳಗಿನಿಂದಲೇ ಹೊರಗಣ ಸುಂದರ ದೃಶ್ಯ ಗಳನ್ನು ಸೆರೆ ಹಿಡಿದರು. ಮುಂದೆ ಸಾಗಿದ ಬಸ್ಸು 8 ಗಂಟೆಯ ವೇಳೆಗೆ ಮತ್ತೆ ನಿಂತದ್ದು ಮೂಡಿಗೆರೆ ಪೇಟೆಯಲ್ಲಿ. ಚಹಾ ತಿಂಡಿಯನ್ನು ಅಲ್ಲೇ ಪಕ್ಕದ ಹೋಟೆಲೊಂದರಲ್ಲಿ ಸವಿಯುವುದೆಂದು ನಿರ್ಧರಿಸಿ ಹೋಟೆಲೊಂದಕ್ಕೆ ನುಗ್ಗಿದೆವು. ತಿಂಡಿಯೇನಿದೆಯೆಂದು ಕೇಳಿದಾಗ ಹೋಟೆಲಿನಾತ ನೀರು ದೋಸೆ, ಇಡ್ಲಿ, ಪೂರಿ ಎಂದು ಹೇಳಿದ್ದೇ ತಡ ಇಸ್ಮಾಯಿಲ್ ಜಾಸ್ಮಿನ್, ಅಂಗಡಿ ಇಲ್ಯಾಸ್, ಡ್ರೈವರ್ ಮೋಣಾಕ ಹಾಗೂ ಇತರ ಕೆಲವು ಸ್ನೇಹಿತರೂ ಸೇರಿ ಹೋಟೆಲ್ ನವನ ಸಹಾಯಕ್ಕೆ ನಿಂತರು. ಇವರ ಸಹಾಯ ಹಸ್ತದ ನೆರವಿನಿಂದ ಸುಮಾರು ಒಂದು ಗಂಟೆಯ ಸಮಯ ವ್ಯಯಿಸಬೇಕಾದಲ್ಲಿ ಅರ್ಧ ಗಂಟೆಯ ಸಮಯ ಉಳಿತಾಯವಾಯಿತೆಂದೇ ಹೇಳಬೇಕು. ಸ್ನೇಹಿತರ ಹೋಟೆಲ್ ಸೇವೆ ತಾಜಾ ನುರಿತ ಹೋಟೆಲ್ ಕೆಲಸದವರಂತೆಯೇ ಇತ್ತು ಅನ್ನುವುದು ಟೂರಲ್ಲಿ ಪಾಲ್ಗೊಂಡ ಗೆಳೆಯರ ಅನಿಸಿಕೆ. ತಿಂಡಿ ಚಹಾ ಮುಗಿಸಿದ ಮೇಲೆ ಲೆಕ್ಕ ಮಾಡಲು ಗಣಿತದ ಕೂಡಿಸು ತಜ್ಞ ದಾನಿಶ್ ಹಕೀಮಾಕ ತನ್ನ ಸಕಾಲಿಕ ನೆರವನ್ನು ನೀಡಿದರು. ಇದರ ಮಧ್ಯೆ ಹೋಟೆಲಿನವ ದೋಸೆಗಳ ಲೆಕ್ಕದಲ್ಲಿ double entryಗೆ ಯತ್ನಿಸಿದ್ದು ಬೇರೆ ವಿಷಯ.
ಇದು ಆತ ತಿಳಿದೋ ಅಥವಾ ತಿಳಿಯದೇ ಹಾಗೆ ಮಾಡಿದನೋ ಯಾರಿಗೂ ಗೊತ್ತಾಗಲೇ ಇಲ್ಲ.
ಅಲ್ಲಿನ ತಿಂಡಿಗಳ ರುಚಿಯಂತೂ ಸ್ವಾದಿಷ್ಟವಾಗಿತ್ತು ಎನ್ನುವುದು ತಿಂದ ನಮ್ಮೆಲ್ಲರ ಅಭಿಪ್ರಾಯವೂ ಹೌದು. ಎರಡೆರಡು ಅಥವಾ ಮೂರು ಪ್ಲೇಟು ದೋಸೆ ,ಪೂರಿ ತಿಂದ ಮಹಾತ್ಮರು ನಮ್ಮ ತಂಡದಲ್ಲಿದ್ದರು ಅನ್ನುವುದೇ ನಮ್ಮ ಹೊಟ್ಟೆಬಾಕತನಕ್ಕೆ ಸಾಕ್ಷಿ. ಇದರ ಮಧ್ಯೆ ಇನ್ನೂ ಮೀಸೆ ಚಿಗುರದ ಪ್ರವಾಸದಲ್ಲಿದ್ದ ಕಿರಿಯರು ಪೇಟೆ ಬದಿಯಲ್ಲಿ, ಪ್ರವಾಸಿ ಬಸ್ಸಿನ ಬಳಿ ನಿಂತು ಫೊಟೋ ಕ್ಲಿಕ್ಕಿಸಿ ಕೊಳ್ಳುವ ಕಾರ್ಯ ಬೇರೆಯೇ ನಡೆದಿತ್ತು. ತಿಂಡಿ ಮುಗಿಸಿ ಮತ್ತೆ ಬಸ್ಸು ಹತ್ತಿದ ನಮ್ಮ ತಂಡದ ಕೆಲವು ಸೂಟಿ ಯುವಕರು ತುಂಬಿದ ಹೊಟ್ಟೆಯೊಂದಿಗೆ ಉತ್ತಮ ಹಾಡಿನ ಲಯಕ್ಕೆ ತಕ್ಕ ಹೆಜ್ಜೆಯನ್ನು ಹಾಕುತ್ತಾ ಬಹಳ ಜೋಶ್ ನಿಂದ ಕುಣಿದರು.ಡಿಗ್ರಿ ಕ್ಲಾಸಿನ ಹುಡುಗರ ಪ್ರವಾಸ ಕಾರ್ಯಕ್ರಮವನ್ನು ನೆನಪಿಸುವಂತಿತ್ತು ಆ ಕುಣಿತ. ಬಾಬಾ ಬುಡನ್ ಗಿರಿ ತಪ್ಪಲಿನ ಪ್ರಕೃತಿ ರಮಣೀಯ ಸೊಬಗನ್ನು ಕಣ್ಣಾರೆ ಸವಿಯುತ್ತಾ ಸಾಗುವ ಕವಲೊಡೆದ ದಾರಿಯಲ್ಲಿ ನಾವು ಮುಳ್ಳಾಯಂಗಿರಿ ಬೆಟ್ಟಕ್ಕೆ ಸಾಗಬೇಕಾಗಿತ್ತು. ಪ್ರಯಾಣದ ಮಧ್ಯೆ ಮೈಕ್ ಕೈಗೆತ್ತಿಕೊಂಡ ನಾನು ಪ್ರತಿಯೊಬ್ಬರೂ ತಮ್ಮ ಬಾಲ್ಯಕಾಲದ ಸವಿನೆನಪುಗಳನ್ನು ಅಲ್ಪ ಸ್ವಲ್ಪ ವಾಗಿಯಾದರೂ ಕಡ್ಡಾಯವಾಗಿ ಹಂಚಿಕೊಳ್ಳಬೇಕೆಂದು ಕೇಳಿಕೊಂಡೆ. ಪ್ರಥಮವಾಗಿ ನಾನೇ ನನ್ನ ಬಾಲ್ಯ ಕಾಲದ ಶಾಲಾ ಹಾಗೂ ಮದ್ರಸಾ ದಿನಗಳ ಅನಿಸಿಕೆಗಳನ್ನು ಹಂಚಿಕೊಳ್ಳುವ ವೇಳೆ ಅಂದಿನೋದಿನ ಕಷ್ಟದ ದಿನಗಳನ್ನೂ ಜ್ಞಾಪಿಸಿಕೊಂಡೆ. ನಾನೇ ಮೊದಲಿಗನಾಗಿ ಅನಿಸಿಕೆಗಳನ್ನು ಹಂಚಿಕೊಂಡದ್ದು ಇತರರಿಗೂ ಅನಿಸಿಕೆ ಹೇಳಲು ಧೈರ್ಯ ತುಂಬಿತೋ ಏನೋ. ಬಳಿಕ ಇಸ್ಮಾಯಿಲ್ ಜಾಸ್ಮಿನ್, ಅಬ್ದುಲ್ಲ್ ಅಝೀಝ್, ಮುಹಮ್ಮದ್ ಕಮಾಲ್ , ಆರಿಫ್ , ಮೋಣಾಕ- ಹೀಗೆ ಒಬ್ಬೊಬ್ಬರಾಗಿ ತಮ್ಮ ತಮ್ಮ ಸವಿ ಸವಿಯಾದ ಬಾಲ್ಯಕಾಲಾನುಭವಗಳನ್ನು ಹಂಚಿಕೊಂಡರು.

ಮೋಣಾಕರ ಬಾಲ್ಯಕಾಲದ ಅನುಭವಗಳು ಅಂದಿನ ಜಾತಿ ಜಾತಿಗಳ ಮಧ್ಯೆ ಇದ್ದಂತಹ ಅಪ್ಪಟ, ನಿಷ್ಕಳಂಕ ಪ್ರೇಮಮಯಿ ಬದುಕನ್ನು ನೆನಪುಮಾಡಿದಂತಿತ್ತು. ಎಲ್ಲರಿಗೂ ಇದೇ ಅವಧಿಯಲ್ಲಿ ತಮ್ಮ ಅನುಭವಗಳನ್ನು
ಹಂಚಿಕೊಳ್ಳಲು ಸಮಯ ದೊರಕದೇ ಇದ್ದುದರಿಂದ ಆ ಕಾರ್ಯಕ್ರಮವನ್ನು ಸಾಯಂಕಾಲಕ್ಕೆ ಮುಂದೂಡಲಾಯಿತು.ಮಧ್ಯಾಹ್ನ ಹನ್ನೊಂದೂವರೆ ಗಂಟೆ ವೇಳೆಗೆ ಮುಳ್ಳಾಯಂಗಿರಿಗೆ ತಲುಪಿದೆವು. ಬಸ್ಸಿನಿಂದಿಳಿದ ನಾವು ಅಲ್ಲಿನ ಪ್ರಕೃತಿ ಸೊಬಗಿನ ದೃಶ್ಯಗಳನ್ನೊಳಗೊಳ್ಳುವ ಹಾಗೆ ಕೆಲವು ಫೊಟೋಗಳನ್ನು ಸೆರೆ ಹಿಡಿದೆವು.ಎಳೆಯರು ಒಂದೆಡೆ ನಿಂತು,ಅತಿ ಹತ್ತಿರದ ಸ್ನೇಹಿತರು ಇನ್ನೊಂದೆಡೆ,ಮಧ್ಯವಯಸ್ಕರು ಮತ್ತೊಂದೆಡೆ ನಿಂತು ತಮ್ಮ ನೈಜ ಚಹರೆಯನ್ನು ಕ್ಯಾಮರಾದ ಕಣ್ಣಿಗೊಪ್ಪಿಸಿ ಸುಂದರ ಚಹರೆಗಾಗಿ ಹಂಬಲಿಸಿದಂತೆ ಫೊಟೋಕ್ಕೆ ಫೋಸ್ ಕೊಟ್ಟರು.ಪ್ರವಾಸದ ಅವಿಸ್ಮರಣೀಯ ನೆನಪಿಗೆ ನಾಳೆ ಈ ಫೋಟೋಗಳೇ ಸಾಕ್ಷಿಯಾಗಬೇಕಲ್ಲವೇ. .?

ಮುಳ್ಳಾಯಂಗಿರಿಯಲ್ಲೊಂದು ಎತ್ತರದ ಬೆಟ್ಟ.
ಸಾಹಸೀ ಯೋಧರನ್ನೂ ನಾಚಿಸುವಂತೆ ನಮ್ಮ ತಂಡದ ಹಿರಿಯರು ಆ ಬೆಟ್ಟವನ್ನು ಸಲೀಸಾಗಿ ಏರಿದುದು ನಿಜಕ್ಕೂ ಅದ್ಭುತ ಸಾಹಸವೇ ಸರಿ. ಮತ್ತೆ ಅದರ ತುತ್ತ ತುದಿಯಲ್ಲಿ ಹಿರಿಯರು ಕಿರಿಯರು ಅನ್ನದೆ ವಿವಿಧ ಭಂಗಿಗಳಲ್ಲಿ ಫೊಟೋ. ಅಂತೂ ನಾವು ಆ ಬೆಟ್ಟದ ತುದಿಯೇರಿ ನಿಂತಾಗ ಎವರೆಷ್ಟ್ ಪರ್ವತವನ್ನೇ ನಾವೇರಿದ್ದೇವೆಂಬ ಜಂಭ ಅದೇಕೋ ನಮ್ಮದಾಗಿತ್ತು. ಈ ಮಧ್ಯೆ ಅಯಾಝ್ ದೂರ ಹೋಗಿ ಪೊದರೊಂದರ
ಪಕ್ಕದಲ್ಲಿ ಕುಳಿತದ್ದನ್ನು ಗಮನಿಸಿದೆವು. ಕಾಲ್ನೋವಿನಿಂದ ಬೆಟ್ಟಕ್ಕೇರಲು ಅಸಾಧ್ಯವಾಗಿದ್ದ ನಿಯಾಝಿನ ನಿರಾಸೆ ನಮಗೆಲ್ಲ ಅರ್ಥವಾಗಿತ್ತು. ಕಾದ್ರಾಕ ಇನೊಳಿ ಬೆಟ್ಟ ಹತ್ತುವ ದುಸ್ಸಾಹಸಕ್ಕೆ ಮುಂದಾಗಲಿಲ್ಲ. ಫೊಟೋಗ್ರಾಫಿಯಲ್ಲಿ ಆಸಕ್ತಿ ಹೊಂದಿದ್ದ ನಿಯಾಝ್ ನಿಗೆ ಫೊಟೋ ಕ್ಲಿಕ್ಕಿಸುವ ಅವಕಾಶಗಳು ಇಲ್ಲಿ ಹೆಚ್ಚಾಗಿ ದೊರೆತುವು. ಸುಮಾರು ಮಧ್ಯಾಹ್ನ ಹನ್ನೆರಡು ಗಂಟೆ ವೇಳೆಗೆ ಅಲ್ಲಿಂದ ಮರಳಿದ ನಾವು ಬಾಬಾ ಬುಡನ್ ಗಿರಿ ಹಾದಿಯಲ್ಲಿ ಸಾಗುವಾಗ
ಸಾರಿಗೆ ಇಲಾಖೆಯ ತಪಾಸಕರ ಕಾಟವೆಂಬ ಬೆಂಬೂತ ನಮ್ಮನ್ನು ಕಾಡದೆ ಬಿಡಲಿಲ್ಲ.ಅವರ ಕೈಯಿಂದ ಪಾರಾಗಲು ಮಾಮೂಲಿ ದರವನ್ನು ಅವರ ಕಿಸೆಗೆ ಸೇರಿಸಲೇ ಬೇಕಾಯಿತು.ಇದು ನಮ್ಮ ದೌರ್ಬಾಗ್ಯವೋ ಅಥವಾ ಅವರ ಸೌಭಾಗ್ಯವೋ ಒಂದೂ ತಿಳಿಯದಂತಾಯಿತು.ಇದು ಸರ್ವವ್ಯಾಪಿ ಎನ್ನುವುದು ನಮ್ಮ ತಂಡದ ಎಳೆಯರಿಗೂ ಆಗಲೇ ತಿಳಿದಂತಿತ್ತು. ಕಡಿದಾದ ತಿರುವಿನಿಂದ ಕೂಡಿದ ದಾರಿಯಲ್ಲಿ ಮುಂದೆ ಸಾಗಿದ ನಮ್ಮ ಬಸ್ಸು ಅಪರಾಹ್ನ ಸುಮಾರು 12.30 ಕ್ಕೆ ಬಾಬಾಬುಡನ್ ಗಿರಿ ಸನ್ನಿಧಾನವನ್ನು ತಲುಪಿತು.ಹದವಾದ ಬಿಸಿ,ತಂಪಿನಿಂದ ಕೂಡಿದ ಆ ಹವೆಯಲ್ಲಿ ಬಾಬಾರ ದರ್ಗಾವನ್ನು ಸಂದರ್ಶಿಸಬೇಕೆನ್ನುವ ತವಕ ಎಲ್ಲರದಾಗಿತ್ತು. ಹಯಾತುಲ್ ಅವುಲಿಯಾರ ಗುಹಾ ಸಮಾಧಿಯನ್ನು ಕಡಿದಾದ ಸುರಂಗ ಮಾರ್ಗದಲ್ಲಿ ಮೈ ಬಗ್ಗಿಸಿ ತಲೆ ತಗ್ಗಿಸಿ ನಡೆಯುತ್ತಾ ಸಂದರ್ಶಿಸಬೇಕಾಯಿತು.. ನಝೀರ್ ಸಖಾಫಿ ಉಸ್ತಾದ್ ಜನದಟ್ಟಣೆಯಿರಬಾರದೆಂಬ ನಿಯಮಾನುಸಾರ ಇಲ್ಲಿ ಹೃಸ್ವವಾದ ಝಿಯಾರತ್ ಗೈದರು.ನಾವೆಲ್ಲರೂ ಆಮೀನ್ ಎಂದು ಧ್ವನಿಗೂಡಿಸಿದೆವು. ಇದಾದ ಬಳಿಕ ಮತ್ತೆ ಬಸ್ಸು ಹತ್ತಿ ಜಾವಗಲ್ ಗೆ ತೆರಳುವ ದಾರಿಯಲ್ಲಿ ಅದಾಗಲೇ ಹೋಗುವ ದಾರಿಯಲ್ಲಿ ಮಧ್ಯಾಹ್ನದೂಟ ಮುಂಗಡವಾಗಿ ಕಾದಿರಿಸಲಾದ ಹೋಟೆಲಿನಲ್ಲಿ ಸ್ವಾದಿಷ್ಟವಾದ ಮಟನ್ ಬಿರಿಯಾಣಿ,ಚಿಕನ್
ಬಿರಿಯಾಣಿ ಊಟ ಮುಗಿಸಿದೆವು. ಇಲ್ಲಿಯೂ ಟೂರ್ ಸಂಚಾಲಕರ ಇಸ್ಮಾಯಿಲರ ಸೇವಾ ಚತುರತೆ ಮತ್ತೊಮ್ಮೆ ಎಲ್ಲರ ಗಮನ ಸೆಳೆಯಿತು. ಅದು ಬಹಳ ಅದ್ದೂರಿಯಾದ ಊಟವಾಗಿತ್ತಾದರೂ ಖಾರದ ಅನುಭವ
ವಾದದ್ದು ನಮ್ಮ ತಂಡದ ಹಿರಿಯ ಸದಸ್ಯರಿಗೆ ಮಾತ್ರ. ಅಲ್ಲಿನ ಊಟದ ಬಳಿಕ ಸವಿದ ಚಹಾವೂ ಅಷ್ಟೇ ಸ್ವಾದಿಷ್ಟವಾಗಿತ್ತು. ಊಟ ಮುಗಿಸಿದ ಬಳಿಕ ನಮ್ಮ ಬಸ್ಸು ಹಾಸನ ಜಿಲ್ಲೆಯ ಜಾವಗಲ್ ನತ್ತ ಪಯಣ ಬೆಳೆಸಿತು. ಕೆಲವರು ನಿದ್ದೆಗೆ ಜಾರಿದರೆ ಇನ್ನು ಕೆಲವರು ಜೋಕ್ಸ್ ಗಳನ್ನು ಹೇಳುತ್ತಾ ಮತ್ತೆ ಕೆಲವರು ಹೊರಗಿನ ದೃಶ್ಯಾವಳಿಗಳನ್ನು ವೀಕ್ಷಿಸುತ್ತಿದ್ದರು. ಸಂಜೆ ನಾಲ್ಕರ ವೇಳೆಗೆ ಜಾವಗಲ್ ದರ್ಗಾ ಮಾರ್ಗವಾಗಿ ಬಾಣಾವರದ ಕಲ್ಲು ಬಂಡೆಯೊಳಗಿನ ಪ್ರಸಿದ್ಧ ದರ್ಗಾವನ್ನು ನೋಡಲು ಹೋದೆವು. ಅಲ್ಲಿಂದ ಹಿಂದಿರುಗಿ ಪುನ: ಜಾವಗಲ್ ಬಾಬಾ ದರ್ಗಾವನ್ನು ನಾವು ಸಂದರ್ಶಿಸಬೇಕಾಗಿತ್ತು. ಸಾಯಂಕಾಲ ಆರು ಗಂಟೆಗೆ ಜಾವಗಲ್ ಬಾಬಾ ದರ್ಗಾವು ಮುಚ್ಚಲ್ಪಡುವುದರಿಂದ ಬಾಣಾವರದ ಕಾರ್ಯಕ್ರಮವನ್ನು ಬೇಗನೆ ಮುಗಿಸಿದೆವು. ಬಾಣಾವರದ ಸೈಯದ್ ಹುಸೇನ್ ಷಾ ಅವುಲಿಯಾರ ತಾಣವು ನೋಡಲು ಅದ್ಭುತವಾಗಿತ್ತು.ಬೃಹತ್ತಾದ ಒಂದೇ ಬಂಡೆಯೊಳಗಿರುವ ಸಮಾಧಿಯ ವಿಹಂಗಮ ನೋಟವು ನೋಡುಗರನ್ನು ಬೆರಗುಗೊಳಿಸುವಂತಿದೆ. ಆ ಸನ್ನಿಧಾನದಲ್ಲೂ
ಚುಟುಕಾದ ಝಿಯಾರತ್ ನಡೆಸಿದ ಬಳಿಕ ಅಲ್ಲೇ ದರ್ಗಾದ ಎದುರು ಭಾಗದ ಮೆಟ್ಟಿಲುಗಳಲ್ಲಿ ಕೆಲವರು ಕುಳಿತು, ಇನ್ನು ಕೆಲವರು ನಿಂತು ಗುಂಪು ಫೊಟೋವೊಂದನ್ನು ತೆಗೆಸಿಕೊಂಡೆವು.

ಪ್ರಯಾಣದ ಕಾರಣಕ್ಕಾಗಿ ಲುಹ್ರ್ ಹಾಗೂ ಅಸರ್ ನಮಾಝನ್ನು ಜಮ್ಹ್ ಕಸ್ರಾಗಿ ಬಾಣಾವರದಲ್ಲಿ ನಿರ್ವಹಿಸಲಾಗಿ ಕೂಡಲೇ ಅಲ್ಲಿಂದ ನಾವು ಬಾಬಾ ಖಲಂದರ್ ಷಾ ಜಾವಗಲ್ ರ ದರ್ಗಾ ಸಂದರ್ಶನಕ್ಕಾಗಿ ಧಾವಿಸಿದೆವು. ಇನ್ನೇನು ಅಲ್ಲಿ ಅಂದಿನ ಸಂದರ್ಶಕರ ಭೇಟಿ ಕೊನೆಗೊಳ್ಫಲು ಕೆಲವೇ ಕೆಲವು ಘಳಿಗೆಗಳು ಮಾತ್ರ ಬಾಕಿಯಿದ್ದುವು. ಅಲ್ಲೂ ಲಗುಬಗೆಯ ಸಂದರ್ಶನ. ಈ ಮಧ್ಯೆ ಅಲ್ಲೊಂದು ಮೋಜಿನ ಪ್ರಸಂಗ ನಡೆಯಿತು. ಅಲ್ಲೇ ರಸ್ತೆ ಬದಿಯ ಕೈಗಾಡಿಯೊಂದರಲ್ಲಿ ದಂಪತಿಗಳು ಚೂರು ಚೂರು ಮಾಡಿದ ಹಣ್ಣುಗಳ ಮಿಶ್ರಣವನ್ನು ಮಾರುತ್ತಿದ್ದುದು ನಮ್ಮ ಮಿತ್ರ ಬಳಗದ ಕಣ್ಣಿಗೆ ಬಿತ್ತು. ಮಿತ್ರರನೇಕರು ಕೆಲವು ಪ್ಲೇಟುಗಳಲ್ಲಿ ಹಣ್ಣನ್ನು ಸ್ವೀಕರಿಸಿ ತಿಂದು ಮುಗಿಸಿ ಹಣಕೊಡಲು ಮುಂದಾದಾಗ ಹೆಚ್ಚುವರಿ ವಸೂಲಿಗೆ ಅಂಗಡಿಯಾಕೆ ಮುಂದಾಗುತ್ತಾಳೆ. ಆಗ ಎಷ್ಟೇ ನಿಖರವಾದ ಲೆಕ್ಕ ಹೇಳಿದರೂ ಒಪ್ಪದ ಆಕೆಯನ್ನು ಮನದಟ್ಟು ಮಾಡಲು ನಮ್ಮ ಕಾರ್ಯಕ್ರಮ ಸಂಘಟಕರಲ್ಲೋರ್ವರಾದ ಇಸ್ಮಾಯಿಲ್ ನೆರವಾದರು. ಸಂಜೆ 6.30 ಕ್ಕೆ ಜಾವಗಲ್ ನಿಂದ ಮರಳಿ ಊರ ಕಡೆಗೆ ಹೊರಟ ನಮ್ಮ ಪ್ರಯಾಣದಲ್ಲಿ ಹೆಚ್ಚಿನವರಿಗೆ ಆಯಾಸ, ನಿದ್ದೆ ,ಚಳಿ,ಜ್ಜರದ ಅನುಭವಗಳು
ಒಂದೊಂದಾಗಿಯೇ ಆಗ ತೊಡಗಿದುವು. ಆಗ ದಿಢೀರನೆ ಸಖಾಫಿ ಉಸ್ತಾದರು ನಾವೆಲ್ಲ ಒಂದಷ್ಟು ಸ್ವಲಾತ್, ಮೌಲೀದ್, ಹದ್ದಾದ್ ಮುಂತಾದವುಗಳನ್ನು ಮಾಡೋಣ ಎಂದು ಹೇಳಿದರು. ಅದರಂತೆ ಅವುಗಳೂ ನಮ್ಮ ಪ್ರವಾಸದ ಭಾಗವಾದುವು.ಅಲಹಮ್ದುಲಿಲ್ಲಾ ದೈನಂದಿನ ಇಬಾದತ್ ಕಾರ್ಯಗಳನ್ನು ಯಥಾವತ್ತಾಗಿ ನಿರ್ವಹಿಸಲು ಪ್ರವಾಸ ಕಾರ್ಯಕ್ರಮ ಅಡ್ಡಿಯಾಗಲಿಲ್ಲ.

ಚಾರ್ಮಾಡಿ ಘಾಟಿ ಇಳಿದು ಉಜಿರೆ ತಲುಪಿದಾಗ ಅಲ್ಲಿನ ಮಸೀದಿಯೊಂದರಲ್ಲಿ ಮಗ್ರಿಬ್,ಇಶಾ
ನಮಾಝ್ಗಳನ್ನು ಅದಾಗಲೇ ಮಾಡಿದ ಜಮ್ಹ್ ಕಸ್ರ್ ನಿಯ್ಯತ್ತ್ ಪ್ರಕಾರ ನಿರ್ವಹಿಸಿದೆವು.ಸಮಯ ರಾತ್ರಿ 10 ಗಂಟೆ.ಆಗಲೇ ಹೊಟ್ಟೆ ಹಸಿವು ತೊಡಗಿದ್ದರಿಂದ ಉಜಿರೆ ಪಟ್ಟಣದಲ್ಲಿನ ಪ್ರತಿಷ್ಠಿತ ಮಾಂಸಾಹಾರಿ ಹೋಟೆಲೊಂದರಲ್ಲಿ ರಾತ್ರಿ ನಾಷ್ಟವನ್ನು ಮುಗಿಸಿದೆವು. ನಮ್ಮ ತಂಡದ ಸದಸ್ಯರಾದ ನಾಝಿಮ್ ಸಹೋದರರ ಸಂಬಂಧಿ ಹುಡುಗ ಆ ಹೋಟಿಲಿನಲ್ಲಿ ಕೆಲಸಕ್ಕಿದ್ದುದು ಆ ರಾತ್ರಿಯಲ್ಲೂ ನಮಗೆ ಒಳ್ಳೆಯ ಆಹಾರ ಅಲ್ಲಿ ದೊರಕಲು ಸಹಾಯವಾಯಿತೆಂದೇ ಹೇಳಬೇಕು.ನಾಷ್ಟ ಉತ್ತಮವಾಗಿತ್ತು ಮತ್ತು ಶುಚಿ ರುಚಿಯಾಗಿತ್ತು..
ಮತ್ತೆ ಊರಿನತ್ತ ಮುಖಮಾಡಿದ ಬಸ್ಸನ್ನು ಹತ್ತಿದ ನಮ್ಮ ತಂಡದ ‘ಚಿರಿಕಲಿ’ಮುಗಿಲು ಮುಟ್ಟುವಂತಿತ್ತು.

ಬಾಲ್ಯಾನುಭವಗಳನ್ನು ಹೇಳಲು ಬಾಕಿ ಇರಿಸಿದ ಸ್ನೇಹಿತರು ಮತ್ತೆ ಒಬ್ಬೊಬ್ಬರಾಗಿ ತಮ್ಮ ತಮ್ಮ ಅನಿಸಿಕೆ ವ್ಯಕ್ತಪಡಿಸಲು ಮುಂದಾದರು. ಮಧ್ಯೆ ಮಧ್ಯೆ ಗೆಳೆಯರ ಅಡ್ಡಸವಾಲುಗಳಿಗೆ ಕೆಲವು ಸ್ನೇಹಿತರು ಕಕ್ಕಾಬಿಕ್ಕಿಯಾದ ಪ್ರಸಂಗವೂ ನಡೆಯಿತು. ಬಾಲ್ಯ ಕಾಲದ ಮುಗ್ಧ ಪ್ರೇಮದ ಕತೆ ಚರ್ಚೆಯ ಮುಖ್ಯ ವಿಷಯವಾಗಿ ಮಾರ್ಪಟ್ಟದ್ದು ವಿಪರ್ಯಾಸವೇ ಸರಿ. ಅನಿಸಿಕೆಗಳನ್ನು ಹಂಚಿಕೊಳ್ಳುವ ಕಾರ್ಯಕ್ರಮವು ವಿಜಯನಗರದ ಸ್ನೇಹಿತರಾದ ನಮ್ಮೊಳಗಣ ಅಂತರ್ಸಂಬಂಧವನ್ನು,ಪ್ರೀತಿಯನ್ನು, ಒಗ್ಗಟ್ಟನ್ನು ಬಲಿಷ್ಠವನ್ನಾಗಿಸಿದೆ ಎನ್ನುವುದು ಅತಿಶಯೋಕ್ತಿಯೇನಲ್ಲ. ನಮ್ಮೂರಿನ ನಮ್ಮವರನ್ನು ಪರಸ್ಪರ ತಿಳಿಯಲು ಈ ಪ್ರವಾಸ ಕಾರ್ಯಕ್ರಮವು ಹೆಚ್ಚು ಫಲಪ್ರದವಾದುದು ನಮಗೆ ದೊರಕಿದ ದೊಡ್ಡ ಲಾಭವೂ ಹೌದು. ಊಟ ಮುಗಿಸಿದ ಅಲ್ಪಾವಧಿಯಲ್ಲೇ ಸಂಘಟಕರಲ್ಲೋರ್ವರಾದ ಕಮಾಲ್ ಪ್ರವಾಸದ ಆಯ ವ್ಯಯಗಳನ್ನು ಓದಿ ಹೇಳಿ ಒಟ್ಟು ರೂ.900/-ಉಳಿಕೆಯನ್ನು ಘೋಷಿಸಿದರು. ಎಲ್ಲರ ಒಪ್ಪಿಗೆಯಂತೆ ಆ ಮೊತ್ತವನ್ನು ಮಸೀದಿಗೆ ಸಂಭಾವನೆಯಾಗಿ ನೀಡುವುದೆಂದು ತೀರ್ಮಾನಿಸಲಾಯಿತು. ಸರಿ ಸುಮಾರು ಮಧ್ಯರಾತ್ರಿ 12.15 ಕ್ಕೆ ಬಸವಳಿದು ಬಳಲಿದ್ದ ಗೆಳೆಯ ಮನಸ್ಸುಗಳು ಒಲ್ಲದ ಮನಸ್ಸಿನಿಂದ ತಮ್ಮ ತಮ್ಮ ಮನೆಗಳತ್ತ ನಿದ್ದೆಗಣ್ಣುಗಳೊಂದಿಗೆ ನಿಧಾನಕ್ಕೆ ಹೆಜ್ಜೆ ಹಾಕತೊಡಗಿದುವು. ಮತ್ತೆ ಮತ್ತೆ ಎಲ್ಲರ ಕಿವಿಯಲ್ಲೂ ಅದೇ ನುಡಿ’ ಏ ಕಮಾಲ್’ ‘ಏ ಇಬಾಝ್’ ಧ್ವನಿ ಗುಯಿಂಗುಡುತ್ತಿದ್ದವು. ನಮ್ಮ ಮಹಲ್ಲ್ ಮಸೀದಿ ಅಧ್ಯಕ್ಷರಾದ ಇಸ್ಮಾಯಿಲ್ ಎನ್. ಪ್ರವಾಸದ ಪ್ರತಿಯೊಂದು ಹಂತದಲ್ಲೂ ಎಲ್ಲವುಗಳಲ್ಲಿ ಎಲ್ಲವೂ ಆಗಿ ಕಾರ್ಯ ನಿರ್ವಹಿಸಿ ಮೆಚ್ಚುಗೆಗೆ ಪಾತ್ರವಾದ ಬಗೆ, ಕಮಾಲ್ ಬಾಯ್ ನಮ್ಮೂರಿನ ಉತ್ಸಾಹೀ ಯುವಕರನ್ನು ಸಂಘಟಿಸಿ ಉತ್ತಮ ಪ್ರವಾಸ ಕಾರ್ಯಕ್ರಮವನ್ನು ಸಂಯೋಜನೆ ಮಾಡಿದುದು, ಇಲ್ಯಾಸ್ ಹಾಗೂ ಮೋಣಾಕರ ಸೇವಾನಿಷ್ಠೆ, ನನ್ನ ಹಾಗೂ ಅಝೀಝ್ ಸರ್ ರ ಸಮಯೋಚಿತ ಸಲಹೆ ಸೂಚನೆಗಳು,ನಝೀರ್ ಸಖಾಫಿಯವರ ಧಾರ್ಮಿಕ ಉಪದೇಶ;ಕೂಡಿ ಬಾಳುವ ಗುಣ ಹಾಗೂ ತಾಳ್ಮೆಭರಿತ ನಗು,ಹಕೀಮಾಕರ ಮಂದಸ್ಮಿತ ಮೌನ,ಇನೊಳಿ ಕಾದ್ರಾಕರ ದಣಿವಿಲ್ಲದ ಉತ್ಸಾಹೀ ಪಾಲ್ಗೊಳ್ಳವಿಕೆ, ಹಸನಬ್ಬ ಹಾಜಿಯವರ ಪ್ರವಾಸಕ್ಕಾಗಿದ್ದ ತುಡಿತ,ಆರಿಫಿನ ಜೋಕ್ಸ್ ಭರಿತ ಮಾತುಗಳು,
ಸುಲ್ತಾನನ ತಂಡಸ್ಪೂರ್ತಿ ಹಾಗೂ ನಗುಮೊಗದ ಮಾತುಗಳು,ಚಪ್ಪಿಯ ಮೌನದಲ್ಲೂ ಅರಳುತ್ತಿದ್ದ ಸುಂದರ ನಗು,ನಿಯಾಝಿನ ಫೊಟೋ ಕ್ಲಿಕ್ಕಿಂಗ್ ಸ್ಕಿಲ್ ಹಾಗೂ ಬೇಕಾಗುವಷ್ಟೇ ಮಿದುಮಾತಿನ ನಗು,ನಾಝಿಮಿನ ಎಷ್ಟು ಬೇಕೋ ಅಷ್ಟೇ ಮಿತಿಯ ಮಾತು ಹಾಗೂ ಜೀವಕ್ಕೆ ಜೀವಕೊಡುವ ಗುಣ, ನಯೀಮಿನ ಇನ್ನೂ ಅಪಕ್ವವಾದ ಮುಗ್ಧ ಪ್ರೀತಿ ಹಾಗೂ ಗೆಳೆಯರಂದುದನ್ನು ಅಷ್ಟೇ ಸತ್ಯವೆಂದು ನಂಬುವ ಮುಗ್ಧತೆ, ಇಫಾಝಿನ ಪರಸ್ಪರ ಸಹಕಾರ ನೀಡುವ ಗುಣ, ಅಯಾಝ್ ನ ಮಕ್ಕಳಾಟಿಕೆಯಲ್ಲೂ ಅಡಗಿರುವ ಸ್ನೇಹ ಪರತೆ,ಇಬಾಝ್ನ ಮುಗುಳ್ನಗು, ಡಾನಿಷ್ನ ನಗುಮುಖದ ಅಷ್ಟೇ ಗಟ್ಟಿಯಾದ ಮೌನ, ಸಾಬಿತ್ ನ ಗಟ್ಟಿಸ್ವರದ ಕಮಾಂಡಿಂಗ್ ಮಾತಿನ ವೈಖರಿ,
ಮುಹಾಝಿನ ಕಡಿಬಾಯಿಯಿಂದ ಹೊರಡುವ ನಗು -ಈ ಎಲ್ಲವುಗಳು ನಮ್ಮೀ ಪ್ರವಾಸಕ್ಕೆಂದೇ ಹೇಳಿಮಾಡಿಸಿದ ಗುಣಗಳೇನೋ ಎಂಬಂತೆ ಕಾಣಲು ಸಾಧ್ಯವಾಯಿತು.ಎಲ್ಲಕ್ಕಿಂತ ಹೆಚ್ಚಾಗಿ ನಮ್ಮನ್ನು ಹೊತ್ತೊಯ್ದ ಬಸ್ಸಿನ ಡ್ರೈವರ್ ನಿಝಾಮ್ ನ ತಾಳ್ಮೆ,ಸಂಯಮ,ಸಹಕಾರ ಹಾಗೂ ಸಮಯ ಪಾಲನೆಯು ಪ್ರವಾಸದ ಯಶಸ್ಸಿನಾಂಶಗಳಲ್ಲಿ ಬಹು ಮುಖ್ಯವಾದುದು. ಮುಂದೊಂದು ಪ್ರವಾಸ ಕಾರ್ಯಕ್ರಮದ ಆಯೋಜನೆಯ ಕನಸಿನೊಂದಿಗೆ ಎಂದೂ ಮರೆಯಲಾಗದ ಅವಿಸ್ಮರಣೀಯ ಏಕದಿನ ಪ್ರವಾಸ ಕಾರ್ಯಕ್ರಮಕ್ಕೆ ಒಲ್ಲದ ಮನಸ್ಸಿನ ವಿದಾಯವನ್ನಂತೂ ಹೇಳಲೇ ಬೇಕಾಯಿತು. ‘ದೇಶ ಸುತ್ತು;ಕೋಶ ಓದು’ ನುಡಿಯಂತೆ ಜನಮಾನಸದಲ್ಲಿ ಕುತೂಹಲ, ಅರಿವಿನ ಬಯಕೆ ಹಾಗೂ ಸಂಶೋಧನಾತ್ಮಕ ಒಲವು ಮೂಡಿಸು
ವಂತಾದರೆ ಪ್ರವಾಸಕ್ಕೊಂದು ನೆಲೆ,ಬೆಲೆ.
ನಾವೆಲ್ಲ ಒಂದಾಗಿರೋಣ.ಇರುವಷ್ಟು ದಿನಗಳ
ಕಾಲ ಅವಿಭಕ್ತ ಸಂಬಂಧಿಗಳೂ ಆಗಿರೋಣ
ಅಲ್ಲವೇ..? ಇವಲ್ಲದೆ ಮನುಷ್ಯನಿಗೆ ಇನ್ನೇನು..?

‌‌‌

LEAVE A REPLY

Please enter your comment!
Please enter your name here