• ತಲ್ಹ ಇಸ್ಮಾಯಿಲ್ ಬೆಂಗ್ರೆ

ಪುಸ್ತಕ ವಿಮರ್ಶೆ ( ಕಾದಂಬರಿ )

‘ಕಿಟಕಿಯ ಆಚೆಗೆ ಮತ್ತು ಈಚೆಗೆ’ ಕಾಡಿನ ಬದುಕನ್ನು ಚಿತ್ರಿಸಿರುವ ಕಾದಂಬರಿ ಎಂ. ದಾನಿಶ್’ರವರು ಬರೆದಿರುವ ”ಕಾಡಿಗೊಂದು ಕಿಟಕಿ” ಎಂಬ ಕಾದಂಬರಿಯನ್ನು ಓದಿದೆ. ಆರಂಭದಲ್ಲಿ ಅವರು ಕಾಡಿನ ಬಗ್ಗೆ ಬರೆದಿರಬೇಕೆಂದು ಭಾವಿಸಿದ್ದೆ, ಆದರೆ ಸ್ವಾಭಾವಿಕವಾಗಿ ಬರಹಗಾರರು ಪುಸ್ತಕವನ್ನು ತನ್ನ ಸಂಬಂಧಿಕರಿಗೆ, ಗೆಳೆಯರಿಗೆ ಅಥವಾ ಯುವ ಪೀಳಿಗೆಗೆ ಅರ್ಪಿಸುವ ಸಂಪ್ರದಾಯಕ್ಕೆ ವ್ಯತರಿಕ್ತವಾಗಿ ಎಂದರೆ, ಈ ಕಾದಂಬರಿಯ ಅರ್ಪಣೆಯು ”ಕಿಟಕಿಯ ಆಚೆಗೆ ಮತ್ತು ಈಚೆಗೆ” ಎಂದು ಬರೆದಿದ್ದದ್ದು ಕಂಡು, ಈ ಪುಸ್ತಕದಲ್ಲಿ ಏನಾದರೊಂದು ವಿಶೇಷ ಇರಬಹುದು ಎಂದು ಭಾವಿಸ ತೊಡಗಿದೆ. ನನಗೆ ಈ ಕಾದಂಬರಿಯು ”ಕಾಡಿನ” ವಿಶೇಷ ಪರಿಸ್ಥಿತಿಯನ್ನು ಇಡೀ ವಿಶ್ವಕ್ಕೆ ಪರಿಚಯಿಸುವಂತೆ ಕಂಡಿತು. ಈ ಕಾದಂಬರಿಯಲ್ಲಿರುವ ಪಾತ್ರಗಳು ತನ್ನ ಅಂತರಂಗದಲ್ಲಿ ಯಾವುದೊ ಒಂದು ರೀತಿಯ ನಿಗೂಢತೆಯನ್ನು ಬಚ್ಚಿಟ್ಟುಕೊಂಡಿದ್ದಾರೆ. ಓದಿದರೆ ಮಾತ್ರ ಅದರ ಅನಾವರಣ ಸಾಧ್ಯ. ಹೀಗೆ ಯೋಚಿಸುತ್ತಾ, ಓದಲು ಕುಳಿತ ನನಗೆ, ಕಾದಂಬರಿಯ ಮುಕ್ಕಾಲು ಭಾಗ ಹೇಗೆ ಮುಗಿಯಿತು ಎಂದೇ ತಿಳಿಯಲಿಲ್ಲ. ನಾವು ಜೀವಿಸುತ್ತಿರುವ ಜಗತ್ತಿಗೂ ವಾಸ್ತವ ಜಗತ್ತಿಗೂ ಅಜಗಜಾಂತರ!. ವಿದ್ಯುತ್, ಫ್ಯಾನು, ಲೈಟು, ಸ್ಕೂಲ್, ಕಾಲೇಜು, ಆಸ್ಪತ್ರೆ, ಮತ್ತು ನೆಟ್‌ವರ್ಕ್ ಇಲ್ಲದೆ ಜೀವಿಸಲು ಅತ್ಯಂತ ಕಷ್ಟಕರ ಎಂದು ಕಾಣುವ ನಾವು, ಈ ಯಾವ ಸೌಕರ್ಯವೇ ಇಲ್ಲದೆ ನಿಶ್ಚಿಂತರಾಗಿ ಜೀವಿಸುತ್ತಿರುವ ಆ ಕಾಡಿನ ಜನರು ನಮಗೊಂದು ವಿಚಿತ್ರ ಅನುಭವವನ್ನು ನೀಡುವರು. ನಾನು ಕಾದಂಬರಿಯ ಕಥಾ ಪಾತ್ರದೊಂದಿಗೆ ತನ್ನನ್ನೇ ಗ್ರಹಿಸಿಕೊಂಡು ಆ ಕಾಡಿನುದ್ದಕ್ಕೂ ಸಂಚರಿಸಿದೆ. ಏನೋ ಒಂದು ರೀತಿಯ ವಿಶೇಷ ಅನುಭವ,..! ಈ ಅನುಭವ ಜಗತ್ತು ತಿಳಿಯಲೇಬೇಕಾಗಿರುವಂತಹದ್ದು ಎಂದು ನನಗಣಿಸುತ್ತಿತ್ತು. ಕಾದಂಬರಿಗಾರನು ಆ ಕಾಡಿನ ಜನರ ಜೀವನ…, ಕಷ್ಟ- ಸುಖ:, ಆಚಾರ-ವಿಚಾರ, ಸಂಸ್ಕೃತಿ, ಹಾಗೂ ಅವರಾಡುವ ವಿಶಿಷ್ಟ ಭಾಷೆ…. ಜಗತ್ತಿನ ಎಲ್ಲಿಯೂ ಕಾಣಲು ಸಾಧ್ಯವಾಗದ ಆ ಮುಗ್ದತೆಗೆ ಕನ್ನಡಿಯಾಗಿದೆ.

ಉಜಿರೆಯ ಬಂಗಾರು ಮಳೆ ಎನ್ನುವ ಒಂದು ”ಪ್ರೈವೆಟ್ ಕಾಡಿ”ನಲ್ಲಿ ವಾಸಿಸುತ್ತಿರುವ ಸುಮಾರು ಎಂಬತ್ತು-ಎಪ್ಪತ್ತು ಮನೆಗಳಲ್ಲಿನ ಜನರ ಕುರಿತು, ಅವರೊದಿಗೆ ನೆಲೆಸಿರುವ ಆ ಕಾಡಿನ ಒಬ್ಬ ಸದಸ್ಯನಂತೆ, ಅವರ ಜೀವನದ ಸಮಸ್ಯೆಗಳನ್ನು ಪರಿ ಪರಿಯಾಗಿ ವಿವರಿಸುವ ಕಾದಂಬರಿಕಾರನ ಶೈಲಿಯು ನಿಜಕ್ಕೂ ಮೆಚ್ಚಲೇಬೇಕಾಗಿರುವಂತಹದ್ದು. ಇನ್ನು ಅವರು ಕಾದಂಬರಿಯಲ್ಲಿ ಕಾಡಿನ ಮಕ್ಕಳು ಓದುತ್ತಿರುವ ಕಾಲೇಜಿನ ವಿದ್ಯಾರ್ಥಿನಿಯೊಂದಿಗೆ ಅನಾಹುತ ಸಂಭವಿಸಿದೆ ಎಂದು ತಿಳಿದ ಕೂಡಲೇ ಲಟಾರಿ ಜೀಪು ಹತ್ತಿ ಮಕ್ಕಳನ್ನು ಮನೆಗೆ ಕರೆತರುವ ತವಕ…., ಅದಕ್ಕಾಗಿಯೇ ಅವರ ನಡೆದ ಸಮಾಲೋಚನಾ ಸಭೆ…., ಹೆರಿಗೆಗೆಂದು ಊರಿನ ಹೆಣ್ಣು ಮಗಳೊಬ್ಬಳನ್ನು ಹೆಗಲ ಮೇಲೆ ಹೊರಬೇಕಾಗಿ ಬಂದ ಆ ಪರಿಸ್ಥಿತಿ…., ಊರಿಗೆ ಪ್ರಥಮಬಾರಿಗೆ ಬಂದ ಜಿಲ್ಲಾಧಿಕಾರಿಯವರ ಸ್ವಾಗತ,… ಇತ್ಯಾದಿ… ಇತ್ಯಾದಿ…..

ಒಟ್ಟಿನಲ್ಲಿ ಹೇಳಬೇಕೆಂದರೆ… 155 ಪುಟಗಳ, ಕೇವಲ 90 ರೂಪಾಯಿಯ ಮುಖ ಬೆಲೆ ಇರುವ ಈ ಕಾಂದಂಬರಿಯು, ಎಂ. ದಾನಿಶ್’ರವರು ಅರ್ಪಿಸಿರುವ ಕಿಟಕಿಯ ( ಕಾಡಿನ) ಆಚೆ ಬದಿಯ ಮತ್ತು ಈಚೆ ಬದಿಯ ಜನರಿಗೆ ಕಾಡಿನ ಜೀವನವನ್ನು ಪರಿಚಯಿಸುವ ಒಂದು ಉತ್ತಮ ಪ್ರಯತ್ನ ಎನ್ನಬಹುದು.

LEAVE A REPLY

Please enter your comment!
Please enter your name here