ಮಹಮ್ಮದ್ ಶಾರೂಕ್ ತೀರ್ಥಹಳ್ಳಿ.

ಕನ್ನಡದ ಹೆಸರಾಂತ ಲೇಖಕ, ನಾಟಕಗಾರ, ನಿರ್ದೇಶಕ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಇನ್ನು ಕೇವಲ ನೆನಪಾಗಿಯೇ ಉಳಿದಿದ್ದಾರೆ. ಸದಾ ಜಾತ್ಯಾತೀತ ತತ್ವವನ್ನು ಮೈಗೋಡಿಸಿಕೊಂಡು, ತಾನು ನಂಬಿದ ತತ್ವವನ್ನು ಕೊನೆಯವರೆಗೂ ಪಾಲಿಸಿಕೊಂಡು ಬಂದವರು. ಗಿರೀಶ್ ಕಾರ್ನಾಡ್ ಅಗಲಿಕೆಯಿಂದ ನಮ್ಮ ದೇಶಕ್ಕೆ ಮಾತ್ರವಲ್ಲದೆ ಈಡೀ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದರೆ ತಪ್ಪಾಗಲಾರದು. ಸಾಹಿತ್ಯ, ಚಿತ್ರರಂಗ, ನಟನೆ ಮಾತ್ರವಲ್ಲದೆ ನಿರ್ದೇಶನನದಲ್ಲಿಯು ತನ್ನನ್ನು ತೊಡಗಿಸಿಕೊಂಡಿದ್ದರು. ದೇಶದಲ್ಲಿ ಕೋಮು ಸೌಹಾರ್ದವನ್ನು ಉಳಿಸಿ ಬೆಳಸಿಲಿಕ್ಕಾಗಿ ಹಗಲಿರುಳು ಶ್ರಮಿಸಿದವರು. ಸದಾ ನ್ಯಾಯವನ್ನು ಬೆಂಬಲಿಸಿ ನಿಂತವರು. ಅನ್ಯಾಯಕ್ಕೊಳಗಾದವರ ಪರ ಹೋರಾಟ ನಡೆಸಿದರು. ಅಕ್ಸ್ ಫರ್ಡ್ ಡಿಬೇಟ್ ಕ್ಲಬ್ ಗೆ ಅಧ್ಯಕ್ಷರಾಗಿ ಅಯ್ಕೆಯಾದ ಪ್ರಥಮ ಏಷಿಯನ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಗಿರೀಶ್ ಕಾರ್ನಾಡ್ 1938 ಮೇ 19ರಂದು ಮಹರಾಷ್ಟ್ರದ ಮಥೇರಾನದಲ್ಲಿ ಜನಿಸಿದರು. ಇವರ ತಂದೆ ರಘುನಾಥ ಕಾರ್ನಾಡ್ ಮುಂಬೈಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ತಾಯಿ ಕೃಷ್ಣಬಾಯಿ ಬಾಲ್ಯವಿವಾಹವಾಗಿ ಒಂದು ಮಗುವಾದ ನಂತರ ವಿಧವೆಯಾಗಿದ್ದರು. ರಘುನಾಥರ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಸೇವೇ ಸಲ್ಲಿಸುವಾಗ ಪರಿಚಯವಾದ ಇವರನ್ನು ಆಗಿನ ಸಮಾಜಿಕ ಕಟ್ಟುಪಾಡುಗಳ ವಿರುದ್ಧವಾಗಿ ರಘುನಾಥರು ಕೈ ಹಿಡಿದರು. ನಂತರ ಈ ದಂಪತಿಗಳ ಮೂರನೇ ಮಗನಾಗಿ ಗಿರೀಶ್ ಜನಿಸಿದರು. ಬಾಲ್ಯದಲ್ಲಿ ಕೆಲಕಾಲ ಮರಾಠಿ ಶಿಕ್ಷಣ ಪಡೆದ ನಂತರ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪ್ರಥಮಿಕ ಶಿಕ್ಷಣವನ್ನು ಮುಗಿಸಿ ಧಾರವಾಡದ ಬಾಸೆಲ್ ಮಿಶನ್ ನಲ್ಲಿ ಹೈಸ್ಕೂಲು ಓದಿದ ನಂತರ ಕರ್ನಾಟಕ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಮುಗಿಸಿದರು. ನಂತರ ರ್ಹೋಡ್ಸ್ ಸ್ಕಾಲರ್ ಶಿಪ್ ಪಡೆದುಕೊಂಡು ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ರಾಜಕೀಯಶಾಸ್ತ್ರ, ತತ್ವ ಶಾಸ್ತ್ರ, ಮತ್ತು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಚೆನ್ನೈನಲ್ಲಿ ಆಕ್ಸ್ ಫರ್ಡ್ ಯುನಿವರ್ಸಿಟಿ ಪ್ರೆಸ್ ನಲ್ಲಿ ಸುಮಾರು 7 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ ಅವರು ನಂತರದ ದಿನಗಳಲ್ಲಿ ಅಮೇರಿಕಾದ ಚಿಕಾಗೋ ಯುನಿವರ್ಸಿಟಿಯಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನೆರವೇರಿಸಿದರು. ಇದರ ಜೊತೆ ಜೊತೆಗೆ ಕೆಲಕಾಲ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ ಮತ್ತು ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಸಾಹಿತ್ಯ ಲೋಕದಲ್ಲಿ ಕೃಷಿಯನ್ನು ಮಾಡಿದ್ದ ಅವರು ಇಂಗ್ಲೆಂಡಿಗೆ ತೆರಳುವ ಮೊದಲೇ ಗಿರೀಶ್ ಕಾರ್ನಾಡ್ ರವರ ಸಾಹಿತ್ಯ ಕೃತಿ “ಯಯಾತಿ” ನಾಯಕ ಧಾರವಾಡದ ಮನೋಹರ ಗ್ರಂಥಮಾಲೆಯಲ್ಲಿ ಪ್ರಕಟವಾಯಿತು. ಇಂಗ್ಲೆಂಡಿನಿಂದ ಮರಳಿದ ಬಳಿಕ ತುಘಲಕ್ ಹಾಗೂ ಹಯವದನ ಕೃತಿಗಳು ಪ್ರಕಟವಾದವು.
ಗಿರೀಶ್ ಕಾರ್ನಾಡ್ ರವರ ಪ್ರಮುಖ ನಾಟಕ ಕೃತಿಗಳಲ್ಲಿ, ಮಾ ನಿಷಾದ, ಯಯಾತಿ, ತುಘಲಕ್, ಹಯವದನ, ಅಂಜುಮಲ್ಲಿಗೆ, ಹಿಟ್ಟಿನ ಹುಂಜ ಅಥವಾ ಬಲಿ, ನಾಗಮಂಡಲ, ತಲೆದಂಡ, ಅಗ್ನಿ ಮತ್ತು ಮಳೆ, ಟಿಪ್ಪುವಿನ ಕನಸುಗಳು, ಒಡಕಲು ಬಿಂಬ, ಮದುವೆ ಅಲ್ಬಮ್, ಫ್ಲಾವರ್ಸ, ಬೆಂದ ಕಾಳು ಆನ್ ಟೋಸ್ಟ್ ಇನ್ನೂ ಅನೇಕ ಕೃತಿಗಳನ್ನು ರಚಿಸಿದ್ದಾರೆ ಹೆಚ್ಚಿನೆಲ್ಲ ಕೃತಿಗಳು ನಾಟಕ ರೂಪದಲ್ಲಿ ಈಗಾಗಲೇ ಪ್ರದರ್ಶನಗೊಂಡಿದೆ.

ಇಷ್ಟೆಲ್ಲ ಸಾಹಿತ್ಯ ಲೋಕಕ್ಕೆ ಕೊಡಗೆಯನ್ನು ನೀಡಿದ ಗಿರೀಶ್ ಕಾರ್ನಾಡ್ ಅಲ್ಪಕಾಲದ ಅನಾರೋಗ್ಯದಿಂದ ಜೂನ್ 10ರಂದು ನಿಧನರಾದರು, ಮರಣಕ್ಕಿಂತ ಮುಂಚೆ ತನ್ನ ಕೊನೆಯಾಸೆಯನ್ನು ಸಹ ಮಗನಿಗೆ ತಿಳಿಸಿದ್ದರು. ಯಾವುದೇ ಸರಕಾರಿ ಗೌರವವಿಲ್ಲದೆ, ಧಾರ್ಮಿಕ ವಿಧಿ ವಿಧಾನಳಿಲ್ಲದೆ, ದೇಹದ ಮೇಲೆ ಹೂಗುಚ್ಚೆ ಇಡುವುದಕ್ಕೂ ಆಕ್ಷೇಪಿಸಿದ್ದರು. ಗಿರೀಶ್ ಕಾರ್ನಾಡ್ ನಿಧನಕ್ಕೆ ಪ್ರಧಾನಿ ಮೋದಿ, ಮುಖ್ಯ ಮಂತ್ರಿ ಕುಮಾರಸ್ವಾಮಿ, ರಾಜಕೀಯ ಗಣ್ಯರು, ಸಾಹಿತಿಗಳು, ಬಹಳ ದೊಡ್ಡ ಮಂದಿ ಓದುಗ ಬಳಗದವರು ಕಂಬನಿ ಮಿಡಿದ್ದಿದ್ದಾರೆ. ಗಿರೀಶ್ ಕಾರ್ನಾಡ್ ನಮ್ಮನ್ನು ಅಗಲಿ ಹೋಗಿದ್ದರು ಅವರು ಈ ದೇಶಕ್ಕೆ ನೀಡಿದ ಕೊಡುಗೆಗಳು ಮಾತ್ರ ಶಾಶ್ವತವಾಗಿ ಉಳಿಯುವಂತಹದು.

 

LEAVE A REPLY

Please enter your comment!
Please enter your name here