• ರಘೋತ್ತಮ ಹೊ.ಬ

1902 ಜುಲೈ 26ರಂದು ಈ ದೇಶದ ಸಂಸ್ಥಾನವೊಂದರ ಅರಸರೋರ್ವರು ಹೊರಡಿಸಿದ್ದ ಆದೇಶ ಈ ರೀತಿ ಇತ್ತು “ಈ ಆದೇಶ ಹೊರಡಿಸಿದಂದಿನಿಂದ ಇನ್ನು ಮುಂದೆ ಖಾಲಿಯಾಗುವ ಹುದ್ದೆಗಳಲ್ಲಿ ಶೇ.50ರಷ್ಟು ಹುದ್ದೆಗಳನ್ನು ಹಿಂದುಳಿದ ವರ್ಗದ ಅಭ್ಯರ್ಥಿಗಳಿಂದ ಭರ್ತಿಮಾಡಲಾಗುವುದು… ಹಾಗೆಯೇ ಈ ಆದೇಶದ ಉದ್ದೇಶಕ್ಕಾಗಿ ಬ್ರಾಹ್ಮಣ, ಪ್ರಭು, ಶೇಣಾವಿ, ಪಾರ್ಸಿ ಮತ್ತು ಇತರ ಮುಂದುವರಿದ ವರ್ಗಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಜಾತಿಗಳನ್ನು ‘ಹಿಂದುಳಿದ ವರ್ಗಗಳು’ ಎಂದು ಅರ್ಥೈಸಲಾಗುವುದು”. ಹೌದು, ಹಿಂದುಳಿದ ವರ್ಗಗಳಿಗೆ (ಓ.ಬಿ.ಸಿ) ಈ ದೇಶದಲ್ಲಿ ಪ್ರಪ್ರಥಮವಾಗಿ ಶೇ.50ರಷ್ಟು ಮೀಸಲಾತಿ ನೀಡಿ ಆಜ್ಞೆ ಹೊರಡಿಸಿ ‘ಮೀಸಲಾತಿಯ ಜನಕ (Father of Reservation) ಎಂದು ಖ್ಯಾತಿಗೊಂಡ ಅರಸ ಬೇರಾರು ಅಲ್ಲ, ಕೊಲ್ಲಾಪುರದ ಛತ್ರಿಪತಿ ಶಾಹು ಮಹಾರಾಜರು. ಸಹಜವಾಗಿ ಹೇಳುವುದಾದರೆ “ಭಾರತದ ಸಾಮಾಜಿಕ ಪ್ರಜಾಪ್ರಭುತ್ವದ ಮೇರುಸ್ತಂಭ” (ಆಧಾರ : Chatrapati Shahu the Pillar Of Social Democracy : Published by Education department, Government of Maharashtra , p.146).

ಶಾಹು ಮಹಾರಾಜರು ಹುಟ್ಟಿದ್ದು 1874 ಜೂನ್ 26 ರಂದು. ತಂದೆ ಜಯಸಿಂಗರಾವ್ ಅಪ್ಪಾಸಾಹೇಬ್ ಘಾಟ್ಗೆ, ತಾಯಿ ರಾಧಾಬಾಯಿ. ಹಾಗೆ ಶಾಹು ಮಹಾರಾಜರ ಮೂಲ ಹೆಸರು ಯಶವಂತ್‍ರಾವ್ ಘಾಟ್ಗೆ. ಮಹಾರಾಜ ಶಾಹುರವರ ಪೂರ್ವಿಕರು ಮೂಲತಃ ಛತ್ರಪತಿ ಶಿವಾಜಿಯ ವಂಶಸ್ಥರು. ಆ ಕಾರಣಕ್ಕಾಗಿ ಶಿವಾಜಿಯವರ ಗೌರವ ಪದವಿಯಾದ ‘ಛತ್ರಪತಿ’ ಬಿರುದು ಮಹಾರಾಜ ಶಾಹುರವರಿಗೆ ಸ್ವಾಭಾವಿಕವಾಗಿ ಸಂದಿತು.

ಪ್ರಶ್ನೆ ಏನೆಂದರೆ ಮಹಾರಾಜ ಶಾಹುರವರು ತಮ್ಮ ಅರಸೊತ್ತಿಗೆಯನ್ನು ಅಂದಿನ ಇತರೆ ಅರಸರುಗಳಂತೆ ಬರೀ ಮೋಜು, ಮಸ್ತಿಗೆ ಬಳಸಿದರೆ? ಖಂಡಿತ ಹಾಗೆ ಪ್ರಶ್ನೆ ಕೇಳುವುದೇ ಮಹಾಪರಾಧವಾಗುತ್ತದೆ. ದಿಟ ಹೇಳಬೇಕೆಂದರೆ ಶಾಹು ರವರು ಪ್ರಜಾನುರಾಗಿಯಾದರು. ಯಾವ ತಳವರ್ಗಗಳು, ಬ್ರಾಹ್ಮಣೇತರ ಸಮುದಾಯಗಳು ಶತ ಶತಮಾನಗಳಿಂದ ವಿದ್ಯೆ, ಆಸ್ತಿ, ಅಧಿಕಾರಗಳಿಂದ ವಂಚಿತಗೊಂಡಿದ್ದವೋ ಅಂತಹದ್ದನ್ನು ವಾಪಸ್ ಕೊಡಿಸಲು ಸ್ವತಃ ಆ ಸಮುದಾಯಗಳ ಪ್ರತಿನಿಧಿಯಾಗಿ ನೋವನ್ನು ಅನುಭವಿಸಿ ಶ್ರಮಿಸಿದರು.

ಅಂತಹ ನೋವಿನ ಪ್ರಕರಣವೊಂದನ್ನು ಇಲ್ಲಿ ದಾಖಲಿಸುವುದಾದರೆ “1900 ರ ವರ್ಷದ ಒಂದು ದಿನ ಬೆಳಿಗ್ಗೆ ಯುವರಾಜ ಶಾಹು ತಮ್ಮ ತಂದೆ ಅಪ್ಪಾಸಾಹೇಬ್ ಘಾಟ್ಗೆ ಮತ್ತು ಇತರರೊಡನೆ ಪಂಚಗಂಗಾ ನದಿಗೆ ಸ್ನಾನ ಮಾಡಲು ಹೋದರು. ಆಗ ಸಂಪ್ರದಾಯದಂತೆ ಮಹಾರಾಜರು ನದಿಯಲ್ಲಿ ಸ್ನಾನಮಾಡುತ್ತಿದ್ದರೆ ಬ್ರಾಹ್ಮಣ ಪೂಜಾರಿಗಳು ಮಂತ್ರ ಹೇಳಬೇಕಾಗಿತ್ತು. ಅಂತೆಯೇ ಯುವರಾಜ ಶಾಹು ಸ್ನಾನ ಮಾಡುತ್ತಿದ್ದಾಗ ಮಂತ್ರ ಹೇಳಲಾಯಿತು. ಆದರೆ ಆ ಮಂತ್ರ ‘ವೇದ ಪಠಣವಾಗಿರಲಿಲ್ಲ! ಬದಲಿಗೆ ಪುರಾಣದ ಯಾವುದೋ ಒಂದೆರಡು ಶ್ಲೋಕಗಳಾಗಿದ್ದವು. ಅಂದಹಾಗೆ ಇದನ್ನು ಸಹಪಾಠಿಯೋರ್ವರಿಂದ ತಿಳಿದ ಯುವರಾಜ ಶಾಹು ಮಂತ್ರ ಹೇಳಿದ ಪೂಜಾರಿಯನ್ನು ಈ ಬಗ್ಗೆ ಕೇಳಲಾಗಿ ಪೂಜಾರಿ ಹೇಳಿದ್ದೇನೆಂದರೆ ‘ಮಹಾರಾಜರು ಶೂದ್ರ ವರ್ಗಕ್ಕೆ ಸೇರಿದ್ದರಿಂದ ಅವರಿಗೆ ವೇದಗಳ ಮಂತ್ರಗಳನ್ನು ಹೇಳುವ ಹಾಗಿಲ್ಲ’ ಎಂದು! (ಅದೇ ಕೃತಿ, ಪು.114). ಖಂಡಿತ, ಈ ಘಟನೆ ಶಾಹು ಮಹಾರಾಜರಲ್ಲಿ ಆಕ್ರೋಶದ ಅಲೆಯನ್ನೇ ಎಬ್ಬಿಸಿತು. ಯಾಕೆಂದರೆ ಮಹಾರಾಜರಿಂದ ವೇತನ ಪಡೆಯುವ ಪೂಜಾರಿಯೊಬ್ಬ ಅದೇ ಮಹಾರಾಜರಿಗೆ ‘ಅವರು ಶೂದ್ರರು’ ಎಂಬ ಕಾರಣಕ್ಕಾಗಿ ಅವರಿಗೆ ವೇದಗಳನ್ನು ಉಚ್ಛರಿಸುವುದಿಲ್ಲ ಎಂದರೆ?

ವೇದೋಕ್ತ ಪ್ರಕರಣ,ಅಂತೆಯೇ ಇದರಿಂದ ಕೆರಳಿದ ಶಾಹು ಮಹಾರಾಜರು 1901 ಅಕ್ಟೋಬರ್ ತಿಂಗಳಲ್ಲಿ ತಮ್ಮ ಆಸ್ಥಾನದ ಮುಖ್ಯ ಪೂಜಾರಿ ರಾಜೋಪಾಧ್ಯೆಯವರಿಗೆ ತಮ್ಮ ಅರಮನೆಯಲ್ಲಿ ಇನ್ನುಮುಂದೆ ವೇದೋಕ್ತಿಗಳನ್ನೇ ಉಚ್ಛರಿಸಬೇಕೆಂದು ರಾಜಾಜ್ಞೆ ವಿಧಿಸಿದರು. ಆದರೆ ಮಹಾರಾಜರ ಇಂತಹ ಆಜ್ಞೆ ಮತ್ತು ಈ ಸಂಬಂಧ ಅವರು ನೀಡಿದ ನೋಟೀಸುಗಳಿಗೆ ಮುಖ್ಯಪೂಜಾರಿ ರಾಜೋಪಾಧ್ಯೆಯವರು ತಲೆಕೆಡಿಸಿಕೊಳ್ಳಲೇ ಇಲ್ಲ! ಕಡೆಗೆ ತಮ್ಮ ಅಧಿಕಾರ ದಂಡ ಪ್ರಯೋಗಿಸಿದ ಶಾಹು ಮಹಾರಾಜರು ಆ ರಾಜೋಪಾಧ್ಯೆಯನ್ನು ಪೂಜಾರಿ ಗಿರಿಯಿಂದ ಕಿತ್ತೆಸೆದರು! ಅವರಿಗೆ ಬಳುವಳಿಯಾಗಿ ನೀಡಿದ್ದ ಇನಾಮು ಗ್ರಾಮ ಮತ್ತು ಭೂಮಿಯನ್ನು ವಾಪಸ್ ಪಡೆದರು. ಅಲ್ಲದೇ ಸದರಿ ರಾಜೋಪಾಧ್ಯೆಯವರಿಗೆ ನೀಡಿದ್ದ ಕೆಲವು ರೆವಿನ್ಯೂ, ಸಿವಿಲ್ ಮತ್ತು ಕ್ರಿಮಿನಲ್ ಅಧಿಕಾರಗಳನ್ನು ಕಿತ್ತುಕೊಂಡು ಮಹಾರಾಜ ಶಾಹು ಅವರನ್ನು ಅರಮನೆಯಿಂದ ಹೊರಹಾಕಿದರು. ಅಂದಹಾಗೆ ಶಾಹು ಮಹಾರಾಜರ ಇಂತಹ ಕ್ರಮಗಳ ವಿರುದ್ಧ ರಾಜೋಪಾಧ್ಯೆ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಿದನಾದರೂ ಎಲ್ಲಾ ನ್ಯಾಯಾಲಯಗಳೂ ಸಂಸ್ಥಾನವೊಂದರ ರಾಜನಾಗಿ ಶಾಹು ಮಹಾರಾಜರ ಈ ಆಜ್ಞೆ ನ್ಯಾಯಸಮ್ಮತ ಎಂದು ಮಹಾರಾಜರ ಕ್ರಮಗಳನ್ನು ಎತ್ತಿಹಿಡಿದವು. ಹಾಗೆಯೇ ಸಂಧಾನಗಳ ಮೂಲಕ ಶಾಹುಮಹಾರಾಜರನ್ನು ಕ್ಷತ್ರಿಯ ಎಂದು ಒಪ್ಪಿಕೊಳ್ಳಲಾಯಿತು. ಅಂತೆಯೇ ಅವರ ಅರಮನೆಯಲ್ಲಿ ವೇದಮಂತ್ರಗಳನ್ನು ಉಚ್ಛರಿಸುವ ಪರಿಪಾಠ ಕೂಡ ಆರಂಭವಾಯಿತು! (ಅದೇ ಕೃತಿ, ಪು.136). ಈ ನಿಟ್ಟಿನಲಿ ಈ ಪ್ರಕರಣ ಭಾರತದ ಇತಿಹಾಸದಲ್ಲಿ ‘ವೇದೋಕ್ತ ಪ್ರಕರಣ’ ಎಂದು ಹೆಸರು ಪಡೆಯಿತಲ್ಲದೆ, ಬ್ರಾಹ್ಮಣ್ಯದ ಕಾನೂನಿನ ಪಾರುಪತ್ಯಕ್ಕೆ ಪ್ರಪ್ರಥಮವಾಗಿ ತಡೆಯೊಡ್ಡಿತ್ತು!

ಅಸ್ಪೃಶ್ಯತೆ ವಿರುದ್ಧ ಸಮರ : ಶಾಹು ಮಹಾರಾಜರು ಹಿಂದುಳಿದ ವರ್ಗ (ಓ.ಬಿ.ಸಿ)ಗಳಿಗೆ ತಮ್ಮ ಸಂಸ್ಥಾನದಲ್ಲಿ ಶೇ.50ರಷ್ಟು ಮೀಸಲಾತಿ ಜಾರಿಗೊಳಿಸಿದ್ದನ್ನು ತಿಳಿದಿರಿ. ಆದರೆ ಆಗ ಅವರು ಎದುರಿಸಿದ ಟೀಕೆ? ಇಂತಹ ಮೀಸಲಾತಿ ಟೀಕೆಗೆ ಶಾಹುರವರು ಉತ್ತರಿಸಿರುವ ಪರಿ ನೋಡಿ “ಹಿಂದುಳಿದ ವರ್ಗಗಳ ಏಳ್ಗೆಗಾಗಿ ನನ್ನ ರಾಜ್ಯದಲ್ಲಿ ವಿಶೇಷ ಪ್ರಯತ್ನ ನಡೆಯುತ್ತಿರುವುದನ್ನು ಕೆಲವು ಸುಶಿಕ್ಷಿತ ಮೇಲ್ವರ್ಗದ ಜನ ಅಪಮಾನಕಾರಿ ನಡೆ ಎಂದು ಭಾವಿಸುತ್ತಿದ್ದಾರೆ. ಆದರೆ ಖಾಯಿಲೆ ಪೀಡಿತ ದುರ್ಬಲ ಮಗುವೊಂದನ್ನು ವೈದ್ಯರು ವಿಶೇಷವಾಗಿ ಮಹಿಳಾ ವೈದ್ಯರು ಹೇಗೆ ನೋಡಿಕೊಳ್ಳುತ್ತಾರೆ? ಈ ನಿಟ್ಟಿನಲಿ ಆ ಕ್ರಮವನ್ನೇ ಉಲ್ಲೇಖಿಸುವುದಾದರೆ ವೈದ್ಯರು ಅಂತಹ ದುರ್ಬಲ ಮಗು ಇತರರಂತೆ ದಷ್ಟಪುಷ್ಟವಾಗಲು ವಿಶೇಷ ಆಹಾರಗಳನ್ನು ನೀಡುತ್ತಾರೆ ಮತ್ತು ಇದನ್ನು ಎಲ್ಲರೂ ಒಪ್ಪುತ್ತಾರೆ. ದುರಂತವೆಂದರೆ ನಾನು ಇದೇ ಸಿದ್ಧಾಂತವನ್ನು (ದುರ್ಬಲ ಮಗುವಿನ) ಅಸ್ಪೃಶ್ಯರಿಗೆ ಅಪ್ಲೈ ಮಾಡಿದರೆ ನನ್ನನ್ನು ಯಾಕೆ ಟೀಕಿಸುತ್ತಾರೆ ಎಂಬುದೇ ಅರ್ಥವಾಗುತ್ತಿಲ್ಲ!” (ಅದೇ ಕೃತಿ, ಪು.35). ‘ಮೀಸಲಾತಿಯ ಜನಕ’ ಮೀಸಲಾತಿಯನ್ನು ಅದ್ಭುತವಾಗಿ ಸಮರ್ಥಿಸಿದ ಪರಿ ಇದು! ಕಾಕತಾಳೀಯವೆಂದರೆ ಇದೇ ಮೀಸಲಾತಿಯ ಜನಕ ಅರ್ಥಾತ್ ಶಾಹು ಮಹಾರಾಜರು ಅದೇ ಮೀಸಲಾತಿಯ ಆಧುನಿಕ ಪ್ರವರ್ತಕ ಬಾಬಾಸಾಹೇಬ್ ಅಂಬೇಡ್ಕರರನ್ನು ಈ ದೇಶಕ್ಕೆ ವಿಶೇಷವಾಗಿ ಅಸ್ಪೃಶ್ಯರ ಮುಂದೆ 1922 ಫೆಬ್ರವರಿ 22 ರಂದು ದೆಹಲಿಯಲ್ಲಿ ನಡೆದ ‘ಅಖಿಲ ಭಾರತ ಶೋಷಿತ ವರ್ಗಗಳ ಸಮ್ಮೇಳನ’ದಲ್ಲಿ ಪರಿಚಯಿಸುತ್ತಾ ‘You should all keep before you Mr.Bhimrao Ambedkar, Your great leader as your ideal and try to follow him, to be like him’
ಎಂದರು! ಅಂದರೆ ‘ನಿಮ್ಮ ಶ್ರೇಷ್ಠ ನಾಯಕ ಶ್ರೀ ಭೀಮರಾವ್ ಅಂಬೇಡ್ಕರರಂತೆ ನೀವಾಗಬೇಕು, ಅವರನ್ನು ನೀವು (ಶೋಷಿತ ವರ್ಗಗಳು) ನಿಮ್ಮ ಆದರ್ಶವಾಗಿ ಸ್ವೀಕರಿಸಬೇಕು, ಮುಂದಿಟ್ಟುಕೊಳ್ಳಬೇಕು’ ಎಂದರ್ಥ! (ಅದೇ ಕೃತಿ, ಪು.38). ಖಂಡಿತ, ಶಾಹುರವರು ಅಂಬೇಡ್ಕರರನ್ನು ಅಸ್ಪೃಶ್ಯರಿಗೆ ಬರೀ ಪರಿಚಯಿಸಿದ್ದಷ್ಟೇ ಅಲ್ಲ ಅವರ ಹೋರಾಟಕ್ಕೆ, ಅವರ ಬದುಕಿಗೆ ತಮ್ಮ ಬೆಂಬಲದ ನೆರವನ್ನೂ ನೀಡಿದ್ದಾರೆ. ಯಾವ ಪರಿ ಎಂದರೆ ಅಂಬೇಡ್ಕರರು 1921ರಲ್ಲಿ ಇಂಗ್ಲೆಂಡಿಗೆ ಎಂಎಸ್ಸಿ, ಡಿಎಸ್ಸಿ ಪದವಿ ಪಡೆಯಲು ತೆರಳಿ ತಮ್ಮ ಶಿಕ್ಷಣಕ್ಕೆ ‘200 ಪೌಂಡ್ ನೆರವು ಬೇಕೆಂದು’ ಶಾಹು ಮಹಾರಾಜರಿಗೆ ಪತ್ರ ಬರೆದಾಗ ಮಹಾರಾಜರು ತಡ ಮಾಡದೆ ಅಂಬೇಡ್ಕರರಿಗೆ ಲಂಡನ್ನಿನ ಅವರ ವಿಳಾಸಕ್ಕೆ ಅಂದಿನ ಭಾರತೀಯ ಕರೆನ್ಸಿಯಲ್ಲಿ 1500ರೂಗಳನ್ನು ಕಳುಹಿಸುತ್ತಾರೆ. ಅಲ್ಲದೆ ಅಂಬೇಡ್ಕರರು ವಿದೇಶದಲ್ಲಿದ್ದುದರಿಂದ ಅವರ ಶ್ರೀಮತಿ ಮಾತೆ ರಮಾಬಾಯಿಯವರಿಗೆ ನೆರವಾಗಲೆಂದು ಅವರಿಗೂ ಕೂಡ ಶಾಹು ಮಹಾರಾಜರು 750 ರೂಗಳ ಸಹಾಯಧನ ಮಂಜೂರು ಮಾಡುತ್ತಾರೆ. ಹಾಗೆಯೇ ಇದೇ ಸಂದರ್ಭದಲ್ಲಿ ಅಂಬೇಡ್ಕರರು ಈ ದೇಶದ ಶೋಷಿತರ ಪ್ರಥಮ ಪತ್ರಿಕೆ ‘ಮೂಕ ನಾಯಕ’ವನ್ನು ಆರಂಭಿಸಿದಾಗ ಶಾಹುಮಹಾರಾಜರು ಅದಕ್ಕೂ ಕೂಡ 2500ರೂಗಳ ಅನುದಾನ ನೀಡುತ್ತಾರೆ. ಹಾಗೆ ಅಂಬೇಡ್ಕರರ ಹೋರಾಟಕ್ಕೆ ಹೀಗೆ ಅನುದಾನ ನೀಡಿದ್ದಷ್ಟೇ ಅಲ್ಲ, ಶಾಹು ಮಹಾರಾಜರು 1920ರಲ್ಲಿ ಅಂಬೇಡ್ಕರರ ಶಿಫಾರಸ್ಸಿನ ಮೇರೆಗೆ ಆರ್.ಕೆ.ಕದಂ ಎಂಬ ಅಸ್ಪೃಶ್ಯರನ್ನು ನಾಮ ನಿರ್ದೇಶನದ ಮೂಲಕ ತಮ್ಮ ಸಂಸ್ಥಾನದ ಆಡಳಿತ ಪರಿಷತ್ತಿಗೂ ಕೂಡ ಸದಸ್ಯರನ್ನಾಗಿ ನೇಮಿಸಿಕೊಳ್ಳುತ್ತಾರೆ. ಅಲ್ಲದೆ ಅಸ್ಪೃಶ್ಯತೆ ವಿರುದ್ಧ ರಾಜಾಜ್ಞೆ ವಿಧಿಸುವ ಅವರು “ಯಾವುದೇ ಮನುಷ್ಯರಿಗೆ ಸಾರ್ವಜನಿಕ ಸ್ಥಳ, ಧರ್ಮಛತ್ರ, ಸರ್ಕಾರಿ ಕಚೇರಿ, ಸಾರ್ವಜನಿಕ ಹೋಟೆಲ್ಲು, ಕೆರೆ, ಬಾವಿ ಇತ್ಯಾದಿಗಳಿಗೆ ಯಾವುದೇ ಕಾರಣಕ್ಕೂ ಪ್ರವೇಶ ನಿರಾಕರಿಸುವಂತಿಲ್ಲ” (ಅದೇ ಕೃತಿ, ಪು.199) ಎನ್ನುತ್ತಾರೆ. ಆ ಮೂಲಕ ಅಸ್ಪೃಶ್ಯತೆ ವಿರುದ್ಧ ಶಾಹು ಮಹಾರಾಜರು ಸಮರ ಸಾರುತ್ತಾರೆ.

ಶಾಹು ಸತ್ಯಶೋಧಕ ಸಮಾಜ: ಒಂದು ವಿಷಯವನ್ನಿಲ್ಲಿ ಪ್ರಸ್ತಾಪಿಸಲೇಬೇಕಿದೆ. ಅದು ಮಹಾತ್ಮ ಜ್ಯೋತಿಬಾಫುಲೆಯವರಿಗೆ ಸಂಬಂಧಪಟ್ಟಿದ್ದು. ಹಿಂದುಳಿದ ಫೂಲ್ ಮಾಲಿ(ಹೂವಾಡಿಗ) ಜಾತಿಗೆ ಸೇರಿದ ಜ್ಯೋತಿಬಾ ಫುಲೆಯವರು ತಮ್ಮ ಧರ್ಮಪತ್ನಿ ಮಾತೆ ಸಾವಿತ್ರಿಬಾಯಿ ಫುಲೆಯವರೊಡಗೂಡಿ ಮಹಾರಾಷ್ಟ್ರದಲ್ಲಿ ತಮ್ಮ ಸತ್ಯಶೋಧಕ ಸಮಾಜ ಚಳುವಳಿಯ ಮೂಲಕ(1873) ಸಾಮಾಜಿಕ ಕ್ರಾಂತಿಯ ಕಿಡಿ ಹಚ್ಚಿದ್ದು ಎಲ್ಲರಿಗೂ ತಿಳಿದಿದೆ (1873). ಅಂದಹಾಗೆ ಫುಲೆಯವರ ಈ ಚಳುವಳಿಯನ್ನು ‘ಶಾಹು ಸತ್ಯಶೋಧಕ ಸಮಾಜ’ ಹೆಸರಿನಲ್ಲಿ ಸಮರ್ಥವಾಗಿ ಮುಂದುವರಿಸಿದ ಶಾಹು ಮಹಾರಾಜರು ಸಾಮಾಜಿಕ ಪರಿವರ್ತನೆಯ ನೂತನ ಶಕೆಯ ಈ ನಿಟ್ಟಿನಲ್ಲಿ ಭಾರತದಲ್ಲಿ ಫುಲೆಯವರ ಸಶಕ್ತ ಉತ್ತರಾಧಿಕಾರಿಯಾಗುತ್ತಾರೆ. ಈ ದಿಸೆಯಲ್ಲಿ ಶಾಹುರವರ ಈ ಎಲ್ಲಾ ಸಾಮಾಜಿಕ ಪರಿವರ್ತನೆಯ ಕೈಂಕರ್ಯಗಳಲ್ಲಿ ಫುಲೆಯವರ ನೆರಳನ್ನು ನಾವು ಸ್ಪಷ್ಟವಾಗಿ ಗುರುತಿಸಬಹುದು.

ಕಡೆಯದಾಗಿ ಶಾಹು ಮಹಾರಾಜರ ಪ್ರಾಯೋಗಿಕ ಸಾಮಾಜಿಕತೆಯನ್ನಿಲ್ಲಿ ಒಂದು ಉದಾಹರಣೆಯನ್ನಾಗಿ ನೋಡೋಣ. ಅದೆಂದರೆ ‘ತಮ್ಮ ರಾಜ್ಯದ ರಾಜಧಾನಿ ಕೊಲ್ಲಾಪುರ ನಗರದ ಮುಖ್ಯರಸ್ತೆಯೊಂದರಲ್ಲಿ ಮಹಾರಾಜ ಶಾಹುರವರು ಉದ್ದೇಶಪೂರ್ವಕವಾಗಿಯೇ ಗಂಗಾರಾಂ ಕಾಂಬ್ಳೆ ಎಂಬ ಅಸ್ಪೃಶ್ಯನಿಗೆ ಹಣಕಾಸು ನೆರವು ನೀಡಿ ಹೊಟೆಲ್ಲೊಂದನ್ನು ತೆರೆಸಿದ್ದರು. ಹಾಗೆಯೇ ಆ ಹೊಟೆಲ್ಲಿಗೆ ‘ಶಾಹು ಟೀ ಷಾಪ್’ ಎಂದು ಹೆಸರಿಡಿಸಿದ್ದ ಮಹಾರಾಜರು ಪ್ರತಿದಿನ ತಮ್ಮ ಆಸ್ಥಾನದ ಇತರರೊಡನೆ ಆ ಹೊಟೆಲ್ಲಿಗೆ ಹೋಗಿ ಟೀ ಕುಡಿಯುತ್ತಿದ್ದರು. ಆ ಮೂಲಕ ಜಾತಿ ಆಧಾರದ ಉದ್ಯೋಗ ತೊಲಗಿಸುವುದರ ಜೊತೆಗೆ, ಅಸ್ಪೃಶ್ಯತೆ ಆಚರಣೆ ತಮ್ಮ ರಾಜ್ಯದಲ್ಲಿ ಸಲ್ಲದ್ದೆಂದು ಬಹಿರಂಗವಾಗಿ ಶಾಹು ಮಹಾರಾಜರು ಇಡೀ ಜಗತ್ತಿಗೆ ಪ್ರತಿನಿತ್ಯ ಪ್ರಾಯೋಗಿಕವಾಗಿ ತೋರಿಸಿಕೊಡುತ್ತಿದ್ದರು. ದುರಂತವೆಂದರೆ ಇಂತಹ ಸಾಮಾಜಿಕ ಪ್ರಯೋಗದ ಶ್ರೇಷ್ಠ ಅರಸು ಡಯಾಬಿಟಿಸ್‍ಗೆ ತುತ್ತಾಗಿ 48ರ ಸಣ್ಣ ಹರೆಯದಲ್ಲೇ ಅಂದರೆ 1922 ಮೇ 6 ರಂದು ನಿಧನರಾದರು.
ಒಂದು ವಾಸ್ತಾವಾಂಶವನ್ನಿಲ್ಲಿ ಪ್ರಸ್ತಾಪಿಸಬೇಕು ಅದೆಂದರೆ ‘ಲೋಕಮಾನ್ಯ’ ಎಂಬ ಹೆಸರಿನ ಸೋಕಾಲ್ಡ್ ಬಾಲಗಂಗಾಧರ ತಿಲಕರು ಶಾಹು ಮಹಾರಾಜರ ಉಗ್ರ ಟೀಕಾಕಾರರಾಗಿದ್ದರು. ಹಾಗೆಯೇ ತಿಲಕರ ಸಂಪಾದಕತ್ವದ ‘ಕೇಸರಿ’ ಪತ್ರಿಕೆ ಶಾಹು ಮಹಾರಾಜರ ಇಂತಹ ಸಾಮಾಜಿಕ ಕಲ್ಯಾಣ ಕಾರ್ಯ ಕಂಡು ಅವರನ್ನು ಸ್ವರಾಜ್ಯ ದ್ರೋಹಿ ಎಂದಿತ್ತು! ಆದರೆ ಶಾಹು ಮಹಾರಾಜರು ಮನುವಾದಿಗಳ ಇಂತಹ ಟೀಕೆಗಳಿಗೆಲ್ಲ ಖಂಡಿತ ಜಗ್ಗಲಿಲ್ಲ. ಬದಲಿಗೆ “ನನ್ನನ್ನು ಕೊಲ್ಲಾಪುರದ ಈ ಸಿಂಹಾಸನದಿಂದ ಕಿತ್ತೊಗೆದರೂ ಸರೀ ನಾನು ಈ ದೇಶದ ಶೋಷಿತ ವರ್ಗಗಳು ಮತ್ತು ಹಿಂದುಳಿದ ವರ್ಗಗಳ ಸೇವೆಯನ್ನು ನಿರಂತರ ಮುಂದುವರಿಸುವುದಾಗಿ” ಗುಡುಗಿದರು.

ಒಂದಂತು ನಿಜ, ಭಾರತದ ಸಾಮಾಜಿಕ ಪರಿವರ್ತನೆಯ ಚಳುವಳಿಯ ಇತಿಹಾಸದಲ್ಲಿ ಛತ್ರಪತಿ ಶಾಹು ಮಹಾರಾಜರ ಹೆಸರು ಅಚ್ಚಳಿಯದೇ ಶ್ರೇಷ್ಠತಮವಾಗಿ ದಾಖಲಾಗಿದೆ. ಮಹಾತ್ಮ ಜ್ಯೋತಿಬಾಫುಲೆ, ಶ್ರೀ ನಾರಾಯಣಗುರು, ಪೆರಿಯಾರ್ ರಾಮಸ್ವಾಮಿ ನಾಯ್ಕರ್, ಬಾಬಾಸಾಹೇಬ್ ಅಂಬೇಡ್ಕರ್ ಹೀಗೆ ಧೀಮಂತ ಸಾಮಾಜಿಕ ಪರಿವರ್ತನ ಚಿಂತಕರ ಜೊತೆ ಶಾಹು ಮಹಾರಾಜರ ಹೆಸರು ‘ಸಾಮಾಜಿಕ ಪ್ರಜಾಪ್ರಭುತ್ವದ ಮೇರುಸ್ತಂಭ’ವೆಂದು ಅನ್ವರ್ಥವಾಗಿದೆ. ಈ ನಿಟ್ಟಿನಲ್ಲಿ ಅಂತಹ ಸಾಮಾಜಿಕ ಕೈಂಕರ್ಯದ ಅರಸನ ಕ್ರಾಂತಿಯ ಪಥದಲ್ಲಿ ಈ ದೇಶ, ಈ ಸಮಾಜ ನಿರಂತರ ಸಾಗಬೇಕಷ್ಟೆ.


LEAVE A REPLY

Please enter your comment!
Please enter your name here