ವಿಶ್ವ ಬ್ಯಾಂಕ್ ವರದಿ, ನೈ ಜ ಸವಾಲುಗಳು ಮತ್ತು ಪೋ ಷಕರ ಮುಂದಿರುವ ದಾರಿ.
ಬಸ್ಸು ಹೋಟೆಲ್, ಮದುವೆ ಮನೆ ಅಥವಾ ನಮ್ಮ ಮನೆಯ ಹಜಾರ-ಸ್ಥಳ ಯಾವುದಾದರೂ ಇರಲಿ, ದೃಶ್ಯ ಮಾತ್ರ ಒಂದೇ. ಮಗು ಅಳಲು ಶುರು ಮಾಡಿದ ತಕ್ಷಣ, ಅಥವಾ ಊಟಕ್ಕೆ ಹಟ ಹಿಡಿದ ತಕ್ಷಣ ಪೋಷಕರ ಕೈ ಅಪ್ರಯತ್ನವಾಗಿ ಜೇಬಿಗೆ ಹೋಗುತ್ತದೆ. ಮರುಕ್ಷಣವೇ ಸ್ಮಾರ್ಟ್ ಫೋನ್ ಪರದೆಯ ಮೇಲೆ ಬಣ್ಣ ಬಣ್ಣದ ಕಾರ್ಟೂನ್‌ಗಳು ಕುಣಿಯುತ್ತವೆ. ಮಗುವಿನ ಅಳು ನಿಲ್ಲುತ್ತದೆ; ಅನ್ನದ ತುತ್ತು ಯಾಂತ್ರಿಕವಾಗಿ ಹೊಟ್ಟೆ ಸೇರುತ್ತದೆ.
“ಅಪ್ಪಾ… ನೆಮ್ಮದಿ ಸಿಕ್ಕು’ ಎಂದು ಪೋಷಕರು ನಿಟ್ಟುಸಿರು ಬಿಡಬಹುದು.
ಒಂದು ಕಾಲದಲ್ಲಿ ಅಜ್ಜಿ ಕಥೆ ಹೇಳಿ ಊಟ ಮಾಡಿಸುತ್ತಿದ್ದಳು, ತಾಯಿ ಲಾಲಿ ಹಾಡಿ ಮಲಗಿಸುತ್ತಿದ್ದಳು. ಆ ಜಾಗವನ್ನು ಇಂದು ‘ಯೂಟ್ಯೂಬ್’ ‘ರೀಲ್ಸ್ ಮತ್ತು ಕಾರ್ಟೂನ್‌ಗಳು ಆಕ್ರಮಿಸಿಕೊಂಡಿವೆ. ಮೊಬೈಲ್ ಇಂದು ಮಕ್ಕಳ ಪಾಲಿಗೆ ‘ಡಿಜಿಟಲ್ ಜೋಗುಳ’ (Digital Pacifier) ಆಗಿ ಮಾರ್ಪಟ್ಟಿದೆ.
ಆ ಕ್ಷಣದ ನೆಮ್ಮದಿ ದೀರ್ಘಾವಧಿಯಲ್ಲಿ ಮಗುವಿನ ಬೆಳವಣಿಗೆಯನ್ನು ಕುಗ್ಗಿಸುತ್ತಿದೆ ಎಂಬ ಆತಂಕಕಾರಿ ಪ್ರಶ್ನೆಯನ್ನು ನಾವು ಕೇಳಿಕೊಳ್ಳುತ್ತಿದ್ದೇವೆಯೇ?
ಇತ್ತೀಚಿಗೆ ವಿಶ್ವ ಬ್ಯಾಂಕ್ ಪ್ರಕಟಿಸಿದ “Screen Time in Early Childhood Education: Balancing the Digital Scales” (2025) ವರದಿ ಜಾಗತಿಕ ಮಟ್ಟದಲ್ಲಿ ಗಂಭೀರ ಎಚ್ಚರಿಕೆ ನೀಡುತ್ತದೆ. ವರದಿಯ ಕೇಂದ್ರ ಅಂಶವೇ “ಮೊದಲ 1000 ದಿನಗಳ ಮಹತ್ವ”. ಮಗು ಹುಟ್ಟಿದ ಮೊದಲ ಮೂರು ವರ್ಷಗಳಲ್ಲಿ ಅದರ ಮೆದುಳು ಅತ್ಯಂತ ವೇಗವಾಗಿ ಬೆಳೆಯುತ್ತದೆ. ಈ ಬೆಳವಣಿಗೆಯ ಆಧಾರವೇ ಪಂಚೇಂದ್ರಿಯಗಳ ಅನುಭವ-ಅಮ್ಮನ ಸ್ಪರ್ಶ, ಅಪ್ಪನ ಧ್ವನಿ, ನೈಜ ಆಟ, ನೈಜ ಸಂಭಾಷಣೆ.
ಆದರೆ ವರದಿ ಸೂಚಿಸುವಂತೆ, ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಕ್ಕಳು ಈ ಅಮೂಲ್ಯ ಸಮಯವನ್ನು ಹೆಚ್ಚಾಗಿ ಆರು ಇಂಚಿನ ಪರದೆಯ ಮುಂದೆ ಕಳೆಯುತ್ತಿದ್ದಾರೆ. ಇದರ ಪರಿಣಾಮವಾಗಿ ಮಕ್ಕಳ “ಬೌದ್ಧಿಕ ಬಂಡವಾಳ” (Cognitive Capital) ಕುಸಿಯುತ್ತಿದೆ. ಅಂದರೆ, ಮಕ್ಕಳು ಮಾಹಿತಿಯನ್ನು ನೆನಪಿಡಬಹುದು; ಆದರೆ ಆಲೋಚಿಸುವ, ವಿಶ್ಲೇಷಿಸುವ ಮತ್ತು ಭಾವನಾತ್ಮಕವಾಗಿ ನಿರ್ವಹಿಸುವ ಶಕ್ತಿ ದುರ್ಬಲವಾಗುತ್ತಿದೆ.
ಭಾರತೀಯ ಪೋಷಕರ ಸ್ಥಿತಿ ಪಾಶ್ಚಾತ್ಯ ದೇಶಗಳಿಗಿಂತ ಹೆಚ್ಚು ಸಂಕೀರ್ಣ. ಹಿಂದೆ ಅವಿಭಕ್ತ ಕುಟುಂಬಗಳಲ್ಲಿ ಮಗುವನ್ನು ಆಡಿಸಲು ಹಲವರು ಇರುತ್ತಿದ್ದರು. ಇಂದು ಬಹುತೇಕ ಮನೆಗಳು ‘ನ್ಯೂಕ್ಲಿಯರ್ ಫ್ಯಾಮಿಲಿ’ ಗಂಡ-ಹೆಂಡತಿ ಇಬ್ಬರೂ ಉದ್ಯೋಗದಲ್ಲಿರುತ್ತಾರೆ. ಮನೆ ಕೆಲಸ, ಉದ್ಯೋಗದ ಒತ್ತಡದ ನಡುವೆ ಮಗುವನ್ನು ನೋಡಿಕೊಳ್ಳಲು ಮೊಬೈಲ್ ಒಂದು ಸುಲಭ ಪರಿಹಾರವಾಗಿ ಕಾಣುತ್ತದೆ. ಹೀಗಾಗಿ ಮೊಬೈಲ್ ಅನೇಕ ಮನೆಗಳಲ್ಲಿ “ಎಲೆಕ್ಟ್ರಾನಿಕ್ ನ್ಯಾನಿ” ಆಗಿದೆ. ಆದರೆ ಈ ಸುಲಭ ಪರಿಹಾರವೇ ದೀರ್ಘಕಾಲದಲ್ಲಿ ದೊಡ್ಡ ನಷ್ಟಕ್ಕೆ ಕಾರಣವಾಗುತ್ತಿದೆ.
ಜೀವಶಾಸ್ತ್ರ ಮತ್ತು ಬೆಳವಣಿಗೆ: ನಿಜವಾದ ಸಮಸ್ಯೆ
“ಮೊಬೈಲ್ ಕೊಟ್ಟರೆ ಮಗು ಸುಮ್ಮನಿರುತ್ತೆ, ಅದರಲ್ಲಿ ತಪ್ಪೇನು?” ಎಂದು ಕೇಳುವ ಮುನ್ನ ಅದು ಮಗುವಿನ ಮೆದುಳು ಮತ್ತು ಮನಸ್ಸಿನ ಮೇಲೆ ಏನು ಮಾಡುತ್ತಿದೆ ಎಂಬುದನ್ನು ತಿಳಿಯಬೇಕು.
ಮೆದುಳಿನ ಮುಂಭಾಗದ ಭಾಗ (Frontal Lobe): ದೀರ್ಘಕಾಲ ಸ್ಕ್ರೀನ್ ನೋಡುವುದರಿಂದ, ಆಲೋಚನೆ, ತಾಳ್ಮೆ ಮತ್ತು ಸಾಮಾಜಿಕ ವರ್ತನೆಗೆ ಮುಖ್ಯವಾದ ಈ ಭಾಗ ಸಮರ್ಪಕವಾಗಿ ಸಕ್ರಿಯವಾಗುವುದಿಲ್ಲ ಎಂದು ಅಧ್ಯಯನಗಳು ಸೂಚಿಸುತ್ತವೆ. ವೇಗವಾಗಿ ಬದಲಾಗುವ ದೃಶ್ಯಗಳು ಮಗುವಿಗೆ ನೈಜ ಜಗತ್ತಿನ ನಿಧಾನಗತಿಯನ್ನು ಸಹಿಸುವ ಶಕ್ತಿಯನ್ನು ಕಡಿಮೆ ಮಾಡುತ್ತವೆ.
ಡೋಪಮೈನ್ ಅಭ್ಯಾಸ: ಸ್ಕ್ರೀನ್ ಡುವಾಗ ಮೆದುಳಿನಲ್ಲಿ ತಾತ್ಕಾಲಿಕ ಖುಷಿ ನೀಡುವ ರಾಸಾಯನಿಕಗಳು ಬಿಡುಗಡೆಯಾಗುತ್ತವೆ. ಅದಕ್ಕೇ ಫೋನ್ ಕಿತ್ತುಕೊಂಡಾಗ ಮಗು ತೀವ್ರವಾಗಿ ಹಟ ಮಾಡುತ್ತದೆ. ತಜ್ಞರು ಇದನ್ನು ಒಂದು ಅಡಿಕ್ಟಿವ್ ಪ್ಯಾಟರ್ನ್ ಎಂದು ಗುರುತಿಸುತ್ತಿದ್ದಾರೆ.
ಮಾತು ತಡವಾಗುವ ಸಮಸ್ಯೆ (Speech Delay): ಮಕ್ಕಳು ಭಾಷೆ ಕಲಿಯುವುದು ಮನುಷ್ಯರ ಮುಖ ನೋಡಿ, ತುಟಿ ಚಲನೆಯನ್ನು ಗಮನಿಸಿ ಮತ್ತು ಪ್ರತಿಕ್ರಿಯೆಯಿಂದ. ಕಾರ್ಟೂನ್ ಪಾತ್ರಗಳ ಯಾಂತ್ರಿಕ ಧ್ವನಿ ಇದಕ್ಕೆ ಪರ್ಯಾಯವಲ್ಲ. ಈ ಕಾರಣದಿಂದ ಮಕ್ಕಳಲ್ಲಿ ಮಾತು ತಡವಾಗುವ ಸಮಸ್ಯೆಗಳು ಹೆಚ್ಚುತ್ತಿರುವುದನ್ನು ವೈದ್ಯರು ಗಮನಿಸುತ್ತಿದ್ದಾರೆ.
‘ಸ್ಮಾರ್ಟ್’ ಮಗು ಎಂಬ ಭ್ರಮೆ
“ನನ್ನ ಮಗು ಮೊಬೈಲ್‌ನಲ್ಲಿ ಇಂಗ್ಲಿಷ್ ರೈಮ್ಸ್ ಹೇಳ್ತಾನೆ, ಕಲರ್ಸ್ ಗುರುತಿಸ್ತಾನೆ” ಎಂದು ಹೆಮ್ಮೆಪಡುವ ಪೋಷಕರು ಎಚ್ಚರವಾಗಬೇಕು. ಮಗು ಸ್ಕ್ರೀನ್ ನೋಡಿ ಎಬಿಸಿಡಿ ಹೇಳುವುದು ಕೇವಲ ಅನುಕರಣೆ (Mimicking). ಅದು ನಿಜವಾದ ಕಲಿಕೆ ಅಲ್ಲ. ವಿಡಿಯೋದಲ್ಲಿ ಸೇಬು ತೋರಿಸಿದಾಗ ಗುರುತಿಸುವ ಮಗು, ಕೈಯಲ್ಲಿ ನಿಜವಾದ ಸೇಬು ಕೊಟ್ಟರೆ ಅದರ ವಾಸನೆ, ರುಚಿಯನ್ನು ಅರ್ಥಮಾಡಿಕೊಳ್ಳಲಾರದು.
ಟಿವಿ ನೋಡುವುದು ಪ್ಯಾಸಿವ್ ಲರ್ನಿಂಗ್ (Passive Learning)-ಏಕಮುಖ ಸಂವಹನ. ನಿಜವಾದ ಶಿಕ್ಷಣ ಎಂದರೆ ಸಂವಾದ, ಸ್ಪರ್ಶ ಮತ್ತು ಕುತೂಹಲ. ಯಂತ್ರಗಳು ಮಾಹಿತಿ ಕೊಡಬಲ್ಲವು; ಸಂಸ್ಕಾರವಲ್ಲ.
ಮುಂದಿನ ದಾರಿ: ಏನು ಮಾಡಬೇಕು?
ತಂತ್ರಜ್ಞಾನವನ್ನು ಸಂಪೂರ್ಣವಾಗಿ ತಳ್ಳಿಹಾಕಲಾಗುವುದಿಲ್ಲ. ಆದರೆ ಅದು ಮಕ್ಕಳ ಬಾಲ್ಯವನ್ನು ಕಬಳಿಸಬಾರದು.
- ಮನೆಯಲ್ಲಿ ಡಿಜಿಟಲ್ ಶಿಸ್ತು: ಊಟದ ಸಮಯ ಮತ್ತು ಮಲಗುವ ಕೋಣೆಯಲ್ಲಿ ಮೊಬೈಲ್ ನಿಷೇಧ. ಪೋಷಕರು ಮೊದಲು ಮಾದರಿಯಾಗಬೇಕು.
- ಶಾಲೆಗಳ ಜವಾಬ್ದಾರಿ: 6 ವರ್ಷದೊಳಗಿನ ಮಕ್ಕಳಿಗೆ ‘ಸ್ಮಾರ್ಟ್ ಕ್ಲಾಸ್’ ಹೆಸರಿನಲ್ಲಿ ಪರದೆ ತೋರಿಸುವುದನ್ನು ಕಡಿಮೆ ಮಾಡಬೇಕು. ಆ್ಯಪ್ ಆಧಾರಿತ ಹೋಮ್‌ವರ್ಕ್ ನಿಲ್ಲಬೇಕು.
3.ಸಮಾಜದ ಪಾತ್ರ: ಸಾರ್ವಜನಿಕ ಸ್ಥಳಗಳಲ್ಲಿ ಮಗು ಅಳುವಾಗ ಪೋಷಕರನ್ನು ದೂಷಿಸಬೇಡಿ. ಸಾಧ್ಯವಾದರೆ ಬೆಂಬಲ ನೀಡಿ, ಮಾತನಾಡಿಸಿ.
ಮಗುವಿನ ಅಳು ನಿಲ್ಲಿಸಲು ಅಮ್ಮನ ಮಡಿಲು ಬೇಕೇ ಹೊರತು, ಕಾರ್ಟೂನ್ ವೀಡಿಯೋ ಅಲ್ಲ. ಸ್ಕ್ರೀನ್ ಇಲ್ಲದ ಮಗು ಹಿಂದುಳಿಯುವುದಿಲ್ಲ-ಹೆಚ್ಚು ಸೃಜನಶೀಲವಾಗಿ ಬೆಳೆಯುತ್ತದೆ. ಮುಂದಿನ ಪೀಳಿಗೆ ಆರೋಗ್ಯವಂತವಾಗಿ, ಭಾವನಾತ್ಮಕವಾಗಿ ಬೆಳೆಯಬೇಕೆಂದರೆ, ಇಂದೇ ನಾವು ಸ್ಟೀನ್ ಬದಿಗಿಟ್ಟು ಮಕ್ಕಳ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಬೇಕು. ಏಕೆಂದರೆ ಮಕ್ಕಳಿಗೆ ಬೇಕಾಗಿರುವುದು ಹೈ-ಸ್ಪೀಡ್ ವೈಫೈ ಅಲ್ವ ಪೋಷಕರ ಹಾರ್ಟ್ ಕನೆಕ್ಷನ್.
ಪೋಷಕರ ಧರ್ಮಸಂಕಟ: 10 ನೈಜ ಪ್ರಶ್ನೆಗಳು – ತಜ್ಞರ ಉತ್ತರ
ದೈನಂದಿನ ಜೀವನದಲ್ಲಿ ಪೋಷಕರು ಎದುರಿಸುವ ಗೊಂದಲಗಳಿಗೆ ಇಲ್ಲಿದೆ ನೇರ ಉತ್ತರ:
- “ಮಗು ಊಟ ಮಾಡದಿದ್ದರೆ ಹಸಿವಿನಿಂದ ಸುಸ್ತು ಆಗಿಬಿಟ್ಟರೆ? ಅದಕ್ಕೆ ಹೆದರಿ ನಾನು ಫೋನ್ ಕೊಡ್ತೀನಿ.” ಟಿವಿ ನೋಡುತ್ತಾ ತಿನ್ನುವುದು ‘ಮಂಪರು ಊಟ’ವಿದ್ದಂತೆ. ಮಗುವಿಗೆ ರುಚಿಯೂ ಸಿಗಲ್ಲ, ಹೊಟ್ಟೆ ತುಂಬಿದ ಅರಿವೂ ಆಗಲ್ಲ.
ಪರಿಹಾರ: ಫೋನ್ ನೀಡದೆ ಊಟ ಇಡಿ. ಮಗು ತಿನ್ನದಿದ್ದರೆ ಒತ್ತಾಯ ಮಾಡಬೇಡಿ, ಊಟ ತೆಗೆದಿಡಿ. ಹಸಿವಾದಾಗ ಮಗು ತಾನಾಗಿಯೇ ಬಂದು, ರುಚಿ ಅಸ್ವಾದಿಸಿ ತಿನ್ನುತ್ತದೆ. ಇದಕ್ಕೆ 3-4 ದಿನಗಳ ತಾಳ್ಮೆ ಬೇಕು. ಯಾವ ಮಗುವೂ ಹಸಿವಿನಿಂದ ಉಪವಾಸ ಇರುವುದಿಲ್ಲ!
- “ಮನೆಯಲ್ಲಿ ಟಿವಿ ಸುಮ್ಮನೆ ಆನ್ ಇರುತ್ತೆ, ಮಗು ಅದನ್ನೇನು ನೋಡ್ತಾ ಇರಲ್ಲ. ಅದು ಪರವಾಗಿಲ್ವಾ?”
ಇಲ್ಲ. ಇದನ್ನು ‘Background TV’ ಎನ್ನುತ್ತಾರೆ. ಹಿನ್ನೆಲೆಯಲ್ಲಿ ಶಬ್ದ ಇದ್ದಾಗ, ತಾಯಿ-ಮಗುವಿನ ನಡುವಿನ ಮಾತುಕತೆ (Talk time) ಶೇ.50 ರಷ್ಟು ಕಡಿಮೆಯಾಗುತ್ತದೆ. ಈ ಮೌನವೇ ಮಗುವಿನ ಭಾಷಾ ಬೆಳವಣಿಗೆಗೆ ದೊಡ್ಡ ಶತ್ರು. - “ರೈಮ್ಸ್, ಕಾರ್ಟೂನ್ ಬೇಡ ಸರಿ. ಕನಿಷ್ಠ ದೇವರ ಶ್ಲೋಕಗಳನ್ನು ವಿಡಿಯೋದಲ್ಲಿ ಹಾಕಬಹುದಾ?”
ವಿಷಯ (Content) ಯಾವುದಿದ್ದರೂ, ಸ್ಟೀನ್ ವೇಗ (Pacing) ಮುಖ್ಯವಾಗುತ್ತದೆ. ಭಕ್ತಿಗೀತೆಗಳ ವಿಡಿಯೋಗಳಲ್ಲೂ ದೃಶ್ಯಗಳು ವೇಗವಾಗಿ ಬದಲಾಗುತ್ತವೆ. ಇದು ಎಳೆಯ ಮೆದುಳಿನ ಮೇಲೆ ಅತಿಯಾದ ಒತ್ತಡ ನೀಡುತ್ತದೆ. ಅಡಿಯೋ ಹಾಕಿ, ವಿಡಿಯೋ ಬೇಡ. - “ನಾನು ಮಗುವಿನ ಜೊತೆ ಕುಳಿತು ನಾನೂ ನೋಡುತ್ತೇನೆ. ಆಗ ಪರವಾಗಿಲ್ವಾ?”
ಒಂಟಿಯಾಗಿ ನೋಡುವುದಕ್ಕಿಂತ ಇದು ಸ್ವಲ್ಪ ಉತ್ತಮ. 2 ವರ್ಷ ಮೇಲ್ಪಟ್ಟ ಮಕ್ಕಳಿಗೆ ನೀವು ಜೊತೆಗಿದ್ದು, “ಅಲ್ಲಿ ನೋಡು ಆನೆ ಬಂತು, ಆನೆ ದೊಡ್ಡದಿದೆ ಅಲ್ವಾ?” ಎಂದು ವಿವರಿಸುತ್ತಾ ತೋರಿಸಿದರೆ ಮಾತ್ರ ಅದು ಕಲಿಕೆಯಾಗುತ್ತದೆ. - “ವಿಡಿಯೋ ಕಾಲ್ ಕೂಡ ಸ್ಟೀನ್ ಟೈಮ್ ಅಲ್ವಾ? ಹಾಗಾದ್ರೆ ಅಜ್ಜ-ಅಜ್ಜಿ ಜೊತೆ ಮಾತಾಡೋದು ತಪ್ಪಾ?”
ಇಲ್ಲ ವಿಡಿಯೋ ಕಾಲ್ ಗೆ ವಿನಾಯಿತಿ ಇದೆ. ಇಲ್ಲಿ ಮಗು ಮಾತನಾಡಿದಾಗ ಎದುರಿನವರು ಪ್ರತಿಕ್ರಿಯಿಸುತ್ತಾರೆ. ಇದು ಬಾಂಧವ್ಯ ಬೆಳೆಸಲು ಸಹಕಾರಿ. - “ಮಗು ಅತ್ತು ಹಟ ಮಾಡಿದಾಗ ಸಮಾಧಾನ ಮಾಡಲು ಬೇರೆ ದಾರಿಯೇ ಕಾಣಲ್ಲ…” ಅತ್ತಾಗ ಪೋನ್
ಕೊಟ್ಟರೆ, ಮಗುವಿಗೆ “ನನಗೆ ಬೇಸರವಾದರೆ, ಕೋಪ ಬಂದರೆ ನಾನೇ ಸಮಾಧಾನ ಮಾಡಿಕೊಳ್ಳುವುದು ಹೇಗೆ” ಎಂಬ ಕೌಶಲ ಕಲಿಯಲು ಸಾಧ್ಯವಾಗುವುದೇ ಇಲ್ಲ. ಅಳುವುದು ಮಗುವಿನ ಭಾಷೆ, ಅಳಲಿ ಬಿಡಿ, ಸಮಾಧಾನ ಮಾಡಲು ತಬ್ಬಿಕೊಳ್ಳಿ - “ನಾನು ಅಡುಗೆ ಮಾಡುವಾಗ ಅಥವಾ ಕೆಲಸ ಮಾಡುವಾಗ ಮಗು ಕಾಟ ಕೊಡಬಾರದು ಅಂತ ಸ್ವಲ್ಪ ಹೊತ್ತು ಕೊಡ್ತೀನಿ…“
ಮಗು ನಿಮ್ಮ ಗಮನ (Attention) ಬಯಸುತ್ತಿದೆಯೇ ಹೊರತು ಫೋನ್ ಅಲ್ಲ. ಮಗುವನ್ನು ನಿಮ್ಮ ಕೆಲಸದಲ್ಲಿ ಭಾಗಿಯಾಗಿಸಿ. ಅಡುಗೆ ಮಾಡುವಾಗ ಹಿಟ್ಟು ಕಲಿಸಲು ಕೊಡಿ, ಅಥವಾ ಪಾತ್ರೆ ಜೋಡಿಸಲು ಹೇಳಿ. ಇದು ಅವರಿಗೆ ಆಟದಂತೆ. - “ಮಗು ಕಾರ್ಟೂನ್ ನೋಡಿಕೊಂಡೇ ನಿದ್ರೆ ಮಾಡುತ್ತೆ ಇಲ್ಲದಿದ್ದರೆ ಮಲಗಲ್ಲ.“
ಇದು ಅತ್ಯಂತ ಕೆಟ್ಟ ಅಭ್ಯಾಸ. ಸ್ಕ್ರೀನ್ನಿಂದ ಬರುವ ‘ನೀಲಿ ಬೆಳಕು’ ನಿದ್ರೆಗೆ ಬರುವುದನ್ನು ತಡೆಯುತ್ತದೆ. ಇದರಿಂದ ಮರುದಿನ ಮಗು ಕಿರಿಕಿರಿ ಮಾಡುತ್ತದೆ. ಮಲಗುವ 1 ಗಂಟೆ ಮುಂಚೆ ಫೋನ್ ಸ್ವಿಚ್ ಆಫ್ ಮಾಡಲೇಬೇಕು. - “ಎಲ್ಲರ ಮನೆಯಲ್ಲೂ ಮಕ್ಕಳು ನೋಡ್ತಾರೆ, ನಮ್ಮಮಗು ನೋಡದಿದ್ದರೆ ಹಿಂದುಳಿಯಲ್ವಾ?”
ಸ್ಟೀವ್ ಜಾಬ್ ಮತ್ತು ಬಿಲ್ ಗೇಟ್ಸ್ ಕೂಡ ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಸ್ಕ್ರೀನ್ ನಿಷೇಧಿಸಿದ್ದರು! ಸ್ಕ್ರೀನ್ ಇಲ್ಲದ ಮಗು ಹಿಂದುಳಿಯುವುದಿಲ್ಲ. ಬದಲಿಗೆ ಹೆಚ್ಚು ಸೃಜನಶೀಲವಾಗುತ್ತದೆ (Creative). - “ನಾನು ಮಗುವಿಗೆ ಫೋನ್ ನೋಡಬೇಡ ಅಂತೀನಿ, ಆದ್ರೆ ನನ್ನ ಕೆಲಸಕ್ಕೆ ನಾನು ನೋಡಲೇಬೇಕಲ್ಲ?”
ಮಕ್ಕಳು ನೀವು ಹೇಳುವುದನ್ನು ಕೇಳುವುದಿಲ್ಲ ನೀವು ಮಾಡುವುದನ್ನು ನೋಡಿ ಕಲಿಯುತ್ತಾರೆ. ಅಪ್ಪ-ಅಮ್ಮನೇ ಫೋನ್ ನೋಡುವಾಗ ನನಗೇಕೆ ಇಲ್ಲ? ಎಂಬ ಪ್ರಶ್ನೆ ಅವರಿಗೆ ಬರುತ್ತದೆ. ಮಗುವಿನ ಮುಂದೆ ಆದಷ್ಟು ಫೋನ್ ಬದಿಗಿಡಿ.




















































I read your article and its really appreciable…….keep growing…..God bless
Masha Allah
Very informative and helpful write up
Masha Allah. Necessary write for today’s parents
Really a practical tips, Appricated. 👏👏
Really a practical tips, Appreciated. 👏👏
ಒಳ್ಳೆಯ ಸಂದೇಶ ಸರ್ ಇದು, ಇಂದಿನ ವಿದ್ಯಮಾನದಲ್ಲಿ , ಜಾಗತೀಕರಣತಂತ್ರಜ್ಞಾನದ ಜೊತೆ ಹೋಗುವ ಬದಲು ಹಳೆಯ ಕಾಲದ ” ಕುಟುಂಬ ಸದಸ್ಯರ ಪ್ರೀತಿ” ಬಹಳ ಮುಖ್ಯ.
ಎಂಬುದು ಪ್ರತಿಯೊಬ್ಬರ ಅರಿತುಕೊಳ್ಳಬೇಕು, ಸರ್
ಇಡೀ ಸಮಾಜಕ್ಕೆ ಎಚ್ಚರಿಸುವ ಸಂದೇಶವಿದು..
ಇಂತಹ ಸಂದೇಶಗಳನ್ನು ನಮ್ಮ ನಾಗರಿಕ ಸಮಾಜಕ್ಕೆ ಅವಶ್ಯಕತೆ.. ಇಂತಹ ಲೇಖನಗಳು ಮತ್ತೆ ಮತ್ತೆ ಬರಲಿ..
ಧನ್ಯವಾದಗಳು ಸರ್…
🙏ಸರ್ ಚೆನ್ನಾಗಿದೆ…. ನಿಜ ಸರ್ ಎಲ್ಲರ ಮನೆಯಲ್ಲೂ ಇದೆ ಸಮಸ್ಯೆ ಇರೋದು.. ನಾವೇ ಮಕ್ಕಳ ಮುಂದೆ ಫೋನ್ ನೋಡದೆ ಮಕ್ಕಳ ಜೊತೆಗೆ ಕೆಲವು ಸಮಯ ಬೆರೆತು ಆಟವಾಡಿದರೆ ಮಗುವಿನ ಮನಸ್ಸು ಮತ್ತು ಪಾಲಕರ ಮನಸ್ಸು ಸರಿ ಹೋಗುತ್ತದೆ. ಆದರೆ…. ಸಮಯ ಇಲ್ಲ ಎಂದು ಮಗುವಿಗೆ ಫೋನ್ ಕೊಟ್ಟುಬಿಡುತ್ತಾರೆ ಇದರ ಪರಿಣಾಮವಾಗಿ ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಯಲ್ಲಿ ಕುಂಠಿತವಾಗುತ್ತದೆ.