ಇಂದಿನ ಉದಾರವಾದಿಯಾದ ಸಾಂವಿಧಾನಿಕ ವ್ಯವಸ್ಥೆಯಲ್ಲಿ ನ್ಯಾಯಾಲಯಗಳ ಹೊಣೆಗಾರಿಕೆಯುವಿರೋಧಾಭಾಸದ ಹಂತಕ್ಕೇರಿದೆ. ಒಂದೆಡೆ ರಾಜಕೀಯ ಒತ್ತಡದಿಂದ ಇವು ತಮ್ಮನು ದೂರವಿರಿಸಿ ತನ್ನ ನಿಷ್ಪಕ್ಷತೆಯನ್ನು ಕಾಪಾಡಬೇಕಲ್ಲದೆ; ಇನ್ನೊಂದೆಡೆ ನ್ಯಾಯಿಕ, ನೈತಿಕ ತತ್ವಗಳನ್ನು ಹಾಗು ಪ್ರಜಾಪ್ರಭುತ್ವದ ನ್ಯಾಯಸಮ್ಮತೆಯ ಬೇಡಿಕೆಗಳನ್ನು ಈಡೇರಿಸಬೇಕಾಗಿದೆ.

ಇಂದಿನ ಪ್ರಜಾಪ್ರಭುತ್ವದಲ್ಲಿ ನ್ಯಾಯಾಂಗದ ಸ್ವಾತಂತ್ರ್ಯವು ಎಷ್ಟು ಮುಖ್ಯವೋ, ಅದರ ಉತ್ತರದಾಯಿತ್ವವೂ ಅಷ್ಟೇ ಅಗತ್ಯ. ಮಿತಿಮೀರಿದ ನಿಯಂತ್ರಣವು ನ್ಯಾಯಾಂಗದ ಸ್ವಾತಂತ್ರ್ಯವನ್ನು ಕಸಿದುಕೊಂಡರೆ, ಉತ್ತರದಾಯಿತ್ವದ ಕೊರತೆಯು ವ್ಯವಸ್ಥೆಯಲ್ಲಿ ಸ್ವೇಚ್ಛಾಚಾರಕ್ಕೆ ಕಾರಣವಾಗುತ್ತದೆ.

ಈ ಉದ್ವಿಗ್ನತೆಯು ಭಾರತದ ನ್ಯಾಯಾಂಗ ಹೊಣೆಗಾರಿಕಾ ರಚನಾ ಪದ್ದತಿಯಲ್ಲಿ ಎಂದಿನಿಂದಲೂ ಪ್ರತಿಬಿಂಬಿತವಾಗಿದೆ.

ಪ್ರಸ್ತುತ ನ್ಯಾಯಾಲಯಗಳಲ್ಲಿ ಅನುಸರಿಸಲಾಗುವ ನೇಮಕಾತಿಯ ಪ್ರಕ್ರಿಯೆ, ದುರಾಡಳಿತೆಯನ್ನು ನೀಗಿಸಲು ಕೈಗೊಳ್ಳಲಾಗುವ ಆಂತರಿಕ ಕ್ರಮಗಳನ್ನು ಆಲಿಸಿದರೆ ಅವು ಸಮಾಜದ ಪರವಾಗಿರುವ ನ್ಯಾಯಾಂಗದ ಹೊಣೆಗಾರಿಕೆಯ ಮೇಲೆ ಸವಾಲುಗಳನ್ನು ಬೀರುವಂತಹ ಪರಿಸ್ಥಿತಿ ತಲುಪಿದೆ.

1.ವ್ಯಾಖ್ಯಾನ

ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳು ನೀಡುವ ತೀರ್ಪುಗಳು, ಅವುಗಳ ಕಾರ್ಯವೈಖರಿ ಹಾಗೂ ಸಾಂಸ್ಥಿಕ ನಡವಳಿಕೆಯನ್ನು ಕಾನೂನುಬದ್ಧವಾಗಿರಿಸಲು ಮತ್ತು ಅವುಗಳನ್ನು ಸಾರ್ವಜನಿಕರಿಗೆ ಹಾಗೂ ಸರ್ಕಾರದ ಇತರ ಅಂಗಗಳಿಗೆ ಜವಾಬ್ದಾರರಾಗಿಸಲು ರೂಪಿಸಲಾದ ವಿಧಾನಗಳನ್ನು ‘ನ್ಯಾಯಾಂಗದ ಹೊಣೆಗಾರಿಕೆ’ (Judicial Accountability) ಎಂದು ಕರೆಯಲಾಗುತ್ತದೆ.”

ಈ ಪರಿಕಲ್ಪನೆಯು ಕೆಳಗೆ ನೀಡಲಾದ ಮೂರು ಮುಖ್ಯ ಸಿದ್ಧಾಂತಗಳನ್ನು ಅವಲಂಬಿಸಿದೆ :

1. ರೂಲ್ ಆಫ್ ಲಾ (ಕಾನೂನಿನ ಆಡಳಿತ)

2. ನ್ಯಾಯ ಸಮ್ಮತತೆ

3. ಸಾಂಸ್ಥಿಕ ಕಾರ್ಯಕ್ಷಮತೆ – ನ್ಯಾಯವನ್ನು ಸಮಯಪ್ರಮಾಣವಾಗಿ ಮತ್ತು ಪರಿಣಾಮಕಾರಿಯಾಗಿ ಒದಗಿಸುವ ಕರ್ತವ್ಯ.

ಹೊಣೆಗಾರಿಕೆಯ ವಿಧಗಳು :-

1. ಬಾಹ್ಯ ಹೊಣೆಗಾರಿಕೆ :-ನಿರ್ವಹಾತ್ಮಕ ಮತ್ತು ಇತರ ಸ್ವತಂತ್ರ ಸಂಸ್ಥೆಗಳ ಕಾರ್ಯಾಚರಣೆಯ ಕುರಿತು ನಿರೀಕ್ಷಣೆ.

2. ಆಂತರಿಕ ಹೊಣೆಗಾರಿಕೆ :- ನ್ಯಾಯಾಂಗಗಳದೊಳಗಿನ ಸ್ವಯಂ-ನಿಗಾವಳಿಕೆ ವ್ಯವಸ್ಥೆಗಳ ಮೇಲಿನ ಸಮೀಕ್ಷೆ.

3. ಸಾರ್ವಜನಿಕ ಹೊಣೆಗಾರಿಕೆ :- ಇದು ನ್ಯಾಯಾಂಗದ ಪಾರದರ್ಶಕತೆ, ತೀರ್ಪುಗಳ ಪ್ರಕಟಣೆ, ಮಾಧ್ಯಮ ನಿರೀಕ್ಷಣೆ ಹಾಗು ಡೇಟಾಗಳ ಸಾಮಾಜಿಕ ಲಭ್ಯತೆಯನ್ನು ಒಳಗೊಂಡಿದೆ.

2.ವಿಧಾನ ಮತ್ತು ಸವಾಲುಗಳು :-

ಹೊಣೆಗಾರಿಕೆ ವಿಧಿಸಲು ಆಯೋಜಿಸಲಾಗುವ ಸಾಮಾನ್ಯ ವಿಧಗಳು ಈ ಕೆಳಗಿನಂತಿವೆ :-

1. ಹಿತಾಸಕ್ತಿ ಮತ್ತು ಸ್ವತ್ತುಗಳನ್ನು ಬಹಿರಂಗಪಡಿಸುವುದು

2. ನೇಮಕಾತಿ ಹಾಗು ಬಿಡುವಿಕೆಯ ಮೇಲೆ ತಪಾಸಣೆ

3. ಸಾರ್ವಜನಿಕರಿಗೆ ಮಾಹಿತಿಗಳನ್ನು ದೊರಕಿಸುವುದು ಸೂಕ್ತವಾದ ದೂರಹೂಡಿಕೆಯ ವ್ಯವಸ್ಥೆ ಹಾಗು ಭ್ರಷ್ಟಾಚಾರದ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳುವುದು.

ಸವಾಲುಗಳು :-

1.. ಭ್ರಷ್ಟಾಚಾರವನ್ನು ಕಡಿತಗೊಳಿಸುವ ವೇಳೆ ನ್ಯಾಯಾಂಗದ ಸ್ವತಂತ್ರತೆಯ ರಕ್ಷಣೆ.

2. ಪಾರದರ್ಶಕತೆ ಹಾಗು ಗೌಪ್ಯತೆಯ ಹಕ್ಕಿನ ನಡುವೆ ಸಮತೋಲನ ಸ್ಥಾಪನೆ.

3. ನೇಮಕಾತಿ ಪ್ರಕ್ರಿಯೆಯನ್ನು ಪ್ರತಿಷಾಭಿವೃದ್ಧಿ ಆಧಾರಿತ ಹಾಗು ಅತಿಹೆಚ್ಚು ಜವಾಬ್ದಾರಿಯುತಗೊಳಿಸುವುದು.

3. ಭಾರತದಲ್ಲಿ ನ್ಯಾಯಾಂಗ ಹೊಣೆಗಾರಿಕೆ: ಕಾನೂನು ಚೌಕಟ್ಟು ಮತ್ತು ಪ್ರಾಯೋಗಿಕ ಅಂಶಗಳು

(i) ನೇಮಕಾತಿ ಮತ್ತು ಉನ್ನತೀಕರಣ:-

ನ್ಯಾಯಾಧೀಶರ ನೇಮಕಾತಿಯನ್ನು ಭಾರತದ ರಾಷ್ಟ್ರಪತಿಯು ಮುಖ್ಯ ನ್ಯಾಯಾಧೀಶರ ಹಾಗು ಇತರ ನ್ಯಾಯಾಧೀಶರ ಸಮ್ಮತಿಯಿಂದ ಮಾಡಬೇಕೆಂದು ಭಾರತೀಯ ಸಂವಿಧಾನದ ವಿಧಿ 124-128 ಹಾಗು ವಿಧಿ 217-222 ಸೂಚಿಸುತ್ತದೆ. ‘ಕಾಲೇಜಿಮ್ ವ್ಯವಸ್ಥೆ’ ಎಂದು ಕರೆಯಲಾಗುವ ಈ ಪ್ರಕ್ರಿಯೆಯು ಅಡ್ವೋಕೇಟ್ ಆನ್ ರೆಕಾರ್ಡ್ ಅಸೋಸಿಯೇಷನ್ v. ಯೂನಿಯನ್ ಒಫ್ ಇಂಡಿಯಾ ನಂತಹ ತೀರ್ಪುಗಳ ಪ್ರತಿಫಲವಾಗಿದೆ. ಆದರೆ ಈ ವ್ಯವಸ್ಥೆಯಡಿಯಲ್ಲಿ ಉಚ್ಛ ನ್ಯಾಯಾಧೀಶರ ಪ್ರಧಾನ ಪ್ರಭಾವವಿರುವುದರಿಂದ ಈ ಪ್ರಕ್ರಿಯೆಯು ಟೀಕೆಗೆ ಒಳಗಾಗಿರುವುದು ಗಮನಾರ್ಹ. ಅದಲ್ಲದೆ ವಿಧಿ 124(4) ಹಾಗು 217(1) ಗಳಲ್ಲಿ ನೀಡಲಾದ ಪ್ರಕ್ರಿಯೆ ಗಳು ಕೂಡ ಕಠಿಣವಾಗಿವೆ.

(ii) ಆಂತರಿಕ ನಿಯಮಗಳು_ :-ಭಾರತೀಯ ನ್ಯಾಯವ್ಯವಸ್ಥೆಯು ಆಂತರಿಕ ದುರ್ನಡತೆ ಹಾಗೂ ಭ್ರಷ್ಟಾಚಾರದ ಪ್ರಕರಣಗಳನ್ನು ನಿವಾರಿಸಲು ಅಳವಡಿಸಿಕೊಂಡಿರುವ ಕಾರ್ಯವಿಧಾನಗಳು ಶಾಸನಬದ್ಧವಾಗಿಲ್ಲ. ಇಂತಹ ಸ್ಪಂದನಾಶೀಲ ಆಂತರಿಕ ಹೊಣೆಗಾರಿಕೆಯ ಕೊರತೆಯು ಇಡೀ ವ್ಯವಸ್ಥೆಯ ಮೇಲೆ ಸಾರ್ವಜನಿಕರಿಗಿರುವ ವಿಶ್ವಾಸವನ್ನು ಕುಂಠಿತಗೊಳಿಸುತ್ತದೆ ಎಂಬ ಅಭಿಪ್ರಾಯವನ್ನು ನ್ಯಾಯತಜ್ಞರು ಹೊಂದಿದ್ದಾರೆ.

(iii) ಪಾರದರ್ಶಕತೆ ಮತ್ತು ಕಾರ್ಯಕ್ಷಮತೆಯ ಅಂಕಿಅಂಶಗಳು:-ಇತೀಚಿನ ಸಮಯದಲ್ಲಿ ಭಾರತದ ಪ್ರಯತ್ನವೂ ತನ್ನ ನ್ಯಾಯ ವ್ಯವಸ್ಥೆಯಲ್ಲಿನ ಪಾರದರ್ಶಕತೆಯನ್ನು ಉನ್ನತಗೊಳಿಸುವುದಾಗಿದೆ. ಈ ನಿಟ್ಟಿನಲ್ಲಿ ಇಂದು ನ್ಯಾಯಾಲಯಗಳು ತಮ್ಮ ಕಾರ್ಯಾಚರಣೆಗಳ ನೇರಪ್ರಸಾರವನ್ನು ಮಾಡುತ್ತಿವೆ ಅಲ್ಲದೆ ನ್ಯಾಷನಲ್ ಜುಡಿಷಿಯಲ್ ಡೇಟಾ ಗ್ರಿಡ್ ನಂತಹ ಪೋರ್ಟಲ್ ಗಳಲ್ಲಿ ವ್ಯಾಜ್ಯ-ಪ್ರಕರಣಗಳ ವಿವಿಧ ಹಂತಗಳ ಮಾಹಿತಿಯನ್ನು ನೀಡುತ್ತಿವೆ. ಹೀಗಿದ್ದರೂ, ನ್ಯಾಯಾಧೀಶರು ತಮ್ಮೆಲ್ಲ ಆಸ್ತಿ-ಪಾಸ್ತಿಗಳ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸದ ಕಾರಣ ಮತ್ತು ಕಾಲೇಜಿಯಂ ಸಂಸ್ಥೆಯು ಶಿಫಾರಸುಗಳನ್ನು ಅಸ್ಪಷ್ಟವಾಗಿ (ಅಥವಾ ಕಾರಣ ನೀಡದೆ) ನಿರಾಕರಿಸುತ್ತಿರುವುದು ಈ ಪಾರದರ್ಶಕತೆಗೆ ಧಕ್ಕೆ ಉಂಟುಮಾಡುತ್ತಿದೆ.

4. ಆಧುನಿಕ ಪ್ರವೃತ್ತಿಗಳು ಹಾಗು ಹೊಣೆಗಾರಿಕೆಯ ಮೇಲೆ ಅದರ ಪ್ರಭಾವ :-

2025ರ ವರದಿಗಳ ಪ್ರಕಾರ 5 ಕೋಟಿಗಿಂತ ಹೆಚ್ಚು ಪ್ರಕರಣಗಳು ಅಧೀನ ನ್ಯಾಯಾಲಯದಲ್ಲಿ ಬಾಕಿಯಿದ್ದರೆ ಸರ್ವೋಚ್ಚ ನ್ಯಾಯಾಲಯದಲ್ಲಿ ಸುಮಾರು 80,000 ಕ್ಕಿಂತ ಅಧಿಕ ಪ್ರಕರಣಗಳು ಅನಿರ್ಧಾರಿತವಾಗಿವೆ. ಈ-ಕೋರ್ಟ್ಸ್ (e-Courts) ಮತ್ತು ಎನ್.ಜೆ.ಡಿ.ಜಿ (NJDG) ನಂತಹ ತಾಂತ್ರಿಕ ಬೆಳವಣಿಗೆಗಳು, ಸಂಶೋಧಕರಿಗೆ ಹಾಗೂ ಮಾಧ್ಯಮ ವಲಯಕ್ಕೆ ನ್ಯಾಯದಾನದ ವಿಳಂಬ ಮತ್ತು ನ್ಯಾಯಾಂಗ ವ್ಯವಸ್ಥೆಗೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ವಿಶ್ಲೇಷಿಸಲು ಅನುವು ಮಾಡಿಕೊಡುತ್ತಿವೆ.

5.ನಿವಾರಣೆ

1. ಸಂಸತ್ತಿನ ವತಿಯಿಂದ ಪಾರದರ್ಶಕವಾದ ದೂರು ದಾಖಲಿಸುವ ವ್ಯವಸ್ಥೆ ಮತ್ತು ಸ್ವತಂತ್ರ ಪರಿವೀಕ್ಷಣಾ ಸಂಸ್ಥೆಯ ರಚನೆಗೆ ಪೂರಕವಾದ ಕಾನೂನು ರೂಪಿಸುವುದು.

2. ಕಾಲೇಜಿಯಂ ನಡೆಸುವ ನೇಮಕಾತಿ, ವರ್ಗಾವಣೆ ಮತ್ತು ನಿರಾಕರಣೆಗಳಿಗೆ ಸಂಬಂಧಿಸಿದ ನಿರ್ಧಾರಗಳಿಗೆ ಸ್ಪಷ್ಟವಾದ ಕಾರಣಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವುದು.

3. ಪ್ರತಿಯೊಂದು ನ್ಯಾಯಾಲಯವು ತನ್ನ ವಾರ್ಷಿಕ ಕಾರ್ಯಾಚರಣೆ, ಪ್ರಕರಣಗಳ ವಿಲೇವಾರಿ ಮತ್ತು ಆಡಳಿತಾತ್ಮಕ ಸುಧಾರಣೆಗಳನ್ನು ಬಿಂಬಿಸುವ ವಾರ್ಷಿಕ ವರದಿಯನ್ನು ಕಡ್ಡಾಯವಾಗಿ ಪ್ರಕಟಿಸುವುದು.

4. ನ್ಯಾಯಾಧೀಶರಿಗೆ ವೃತ್ತಿಪರ ನೈತಿಕತೆ, ಸಾಮಾಜಿಕ ಜಾಲತಾಣಗಳ ಬಳಕೆ ಮತ್ತು ಸಾಂವಿಧಾನಿಕ ಮೌಲ್ಯಗಳ ಕುರಿತು ನಿಯಮಿತವಾಗಿ ಕಡ್ಡಾಯ ತರಬೇತಿ ನೀಡುವುದು

.5. ಸಾರ್ವಜನಿಕರ ದೂರುಗಳನ್ನು ಮತ್ತು ಆಡಳಿತಾತ್ಮಕ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಲು ಪ್ರತ್ಯೇಕ ಆನ್‌ಲೈನ್ ಪೋರ್ಟಲ್ ವ್ಯವಸ್ಥೆ ಮಾಡುವುದು.

ನ್ಯಾಯಾಂಗ ಸ್ವಾತಂತ್ರ್ಯ ಮತ್ತು ಹೊಣೆಗಾರಿಕೆಯ ನಡುವಿನ ಉದ್ವಿಗ್ನತೆ ಭಾರತದಲ್ಲಿ ಮೂಲಭೂತ ಸವಾಲಾಗಿ ಉಳಿದಿದೆ. ಭಾರತದ ನ್ಯಾಯಾಂಗವು 21ನೇ ಶತಮಾನದ ಬೇಡಿಕೆಗಳಿಗೆ — ತಂತ್ರಜ್ಞಾನ, ಬೃಹತ್ ಪ್ರಮಾಣದ ಮೊಕದ್ದಮೆಗಳು ಮತ್ತು ಸಾರ್ವಜನಿಕ ನಿರೀಕ್ಷೆಗಳಿಗೆ — ಹೊಂದಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ, ಹೊಣೆಗಾರಿಕೆ ವ್ಯವಸ್ಥೆಯ ರಚನೆಯು ನ್ಯಾಯಾಂಗದ ವಿಶ್ವಾಸಾರ್ಹತೆಯನ್ನು ಮಾತ್ರವಲ್ಲದೆ, ಶತಕೋಟಿಗೂ ಹೆಚ್ಚು ಜನರಿರುವ ಈ ಪ್ರಜಾಪ್ರಭುತ್ವದಲ್ಲಿ ನ್ಯಾಯದ ಪರಿಣಾಮಕಾರಿತ್ವವನ್ನೂ ಸಹ ನಿರ್ಧರಿಸುತ್ತದೆ. ಆದ್ದರಿಂದ, ಚಿಂತನಶೀಲ ಸುಧಾರಣೆಗಳಿಗೆ ಸಕಾಲ ಒದಗಿಬಂದಿದೆ.

LEAVE A REPLY

Please enter your comment!
Please enter your name here