
ಈ ಸಿನಿಮಾ ನೋಡಿದ ಮೇಲೆ ಉಮ್ಮಳಿಸಿ ಬರುವ ದುಃಖ ಮತ್ತು ಆಕ್ರೋಶದ ನಡುವೆ ತಕ್ಷಣಕ್ಕೆ ನನಗೆ ನೆನಾಪಾಗಿದ್ದು “ಮಾನವೀಯತೆ ಉಳಿಯಲಿ, ಮನುಷ ರೂಪದ ಕ್ರೂರತನ ಅಳಿಯಲಿ” ಎನ್ನುವ ಸಾಲು.
ಎಷ್ಟೇ ಬಿಡುವಿಲ್ಲದ ಕೆಲಸವಿದ್ದರೂ ಬಿಡುವು ಮಾಡಿಕೊಂಡು ನೋಡಲೇ ಬೇಕಾದ ಸಿನಿಮಾವೆಂದರೆ ಅದು ಜೈ ಭೀಮ್.. ಈ ಸಿನಿಮಾ ನೋಡಲು ವ್ಯಯ ಮಾಡುವ ಸಮಯ ಒಂದಿಲ್ಲೊಂದು ಕಾರಣಕ್ಕೆ ನಮ್ಮಲ್ಲಿ ಹೊಸದೊಂದು ಪ್ರಜ್ಞೆ ಮೂಡಿಸುತ್ತದೆ ಎನ್ನುವುದು ನನ್ನ ನಂಬಿಕೆ.
ಈ ಸಿನಿಮಾ ಇರುಳರು/ಇರುಳಿಗರು ಎನ್ನುವ ಅತ್ಯಂತ ಹಿಂದುಳಿದ ಬುಡುಕಟ್ಟು ಜನಾಂಗಕ್ಕೆ ಸೇರಿದವರ ಜೀವನಕ್ಕೆ ಸಂಬಂಧಿಸಿದಂತೆ ಬೆಳಕು ಚೆಲ್ಲಿದರೂ, ಅದಕ್ಕೂ ಮೀರಿ ಇಲ್ಲಿಯ ಅಸಂಘಟಿತ, ಅಶಕ್ತ, ಅನುಮಾನಿತ, ಅವಮಾನಿತ ಸಮುದಾಯಗಳ ನೋವು ಇದಕ್ಕಿಂತ ಭಿನ್ನವಾಗಿಲ್ಲ ಎನ್ನುವುದು ಸಿನಿಮಾ ನೋಡುವಾಗ ನಮ್ಮ ಅರಿವಿಗೆ ಬರುತ್ತದೆ. ಅನಕ್ಷರಸ್ಥ, ಅಸಹಾಯಕ ಸಮುದಾಯಗಳು ತಮ್ಮದಲ್ಲದ ತಪ್ಪಿಗೆ ನೋವನ್ನು ನುಂಗಿಕೊಂಡು ಬದುಕುತ್ತಿದೆ. ಅವರ ನೋವನ್ನು ಸಿನಿಮಾ ಮಾಡಲು ಹೊರಟವರ ಧೈರ್ಯವನ್ನು ಮೆಚ್ಚಲೇ ಬೇಕು. ಅದಲ್ಲದೆ ಈ ಸಿನಿಮಾದಲ್ಲಿ ತಮ್ಮದಲ್ಲದ ತಪ್ಪಿಗೆ ಪೋಲಿಸರ ದೌರ್ಜನ್ಯದಿಂದ ಒಬ್ಬ ಇರುಳರ ಅಮಾಯಕ ಯುವಕ ಲಾಕಪ್ ಡೆತ್ ಆಗುತ್ತಾನೆ. ಆ ದೃಶ್ಯ ನೋಡುವಾಗ ನನಗೆ ನೆನಪಾಗಿದ್ದು 2001 ರಿಂದ 2021 ರ ವರೆಗಿನ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ವರದಿ. ಈ ವರದಿ ನಮ್ಮ ಮುಂದಿಡುವಂತೆ ಕಳೆದ 20 ವರ್ಷದಲ್ಲಿ ದೇಶಾದ್ಯಂತ 1888 ಲಾಕಪ್ ಡೆತ್ ಆಗಿದೆ. ಅದರಲ್ಲಿ ಪೋಲಿಸರ ಮೇಲೆ 893 ಪ್ರಕರಣ ದಾಖಲಾಗಿದೆ. 358 ಸಿಬ್ಬಂದಿಗಳ ಮೇಲೆ ಚಾರ್ಜ್ ಶೀಟ್ ಸಲ್ಲಿಕೆಯಾದರೂ ಶಿಕ್ಷೆಯಾಗಿದ್ದು ಕೇವಲ 26 ಪೋಲಿಸರಿಗೆ. ಹೀಗಾದರೆ 1888 ಲಾಕಪ್ ಡೆತ್ ನ ಹೊಣೆಯನ್ನು ಯಾರು ಹೊರಬೇಕು ಎನ್ನುವ ಪ್ರಶ್ನೆ ಮತ್ತು ಆ ಕುಟುಂಬದ ಪರಿಸ್ಥಿತಿ ಏನಾಗಿರಬಹುದು ಎನ್ನುವ ಪ್ರಶ್ನೆಯೂ ಉದ್ಭವಿಸುತ್ತದೆ. ಇಂತಹ ಅನೇಕ ವಿಷಯಗಳ ಕುರಿತಾಗಿ ಯೋಚಿಸುವಂತೆ ಮಾಡುವ ಸಿನಿಮಾ ಜೈ ಭೀಮ್. ಈ ಕಾರಣಕ್ಕಾಗಿ ಪ್ರತಿಯೊಬ್ಬ ಜವಾಬ್ದಾರಿಯುತ ವ್ಯಕ್ತಿ ಈ ಸಿನಿಮಾದಿಂದ ಕಲಿಯುವ ಪಾಠ ಸಾಕಾಷ್ಟಿದೆ.
ಜೈ ಭೀಮ್ ಸಿನಿಮಾ ಬಿಡುಗಡೆ ಆದ ಸಮಯದಲ್ಲಿ #ನವೀನ್_ಸೂರಿಂಜೆ ಬರೆದ “ಮಂಗಳೂರು ಮುಸ್ಲಿಮರ ಜೈ ಭೀಮ್ ಸಿನಿಮಾ” ಎನ್ನುವ ಲೇಖನ ಹರಿದಾಡುತ್ತಿತ್ತು. ಈ ಲೇಖನವನ್ನು ಜೈ ಭೀಮ್ ಸಿನಿಮಾ ನೋಡಿದ ಮೇಲೆಯೆ ನಾನು ಓದಬೇಕು ಎಂದು ನಿರ್ಧಾರ ಮಾಡಿದ್ದೆ. ಅದರಂತೆ ಸಿನಿಮಾ ನೋಡಿದ ಮರುಕ್ಷಣವೇ ಈ ಲೇಖನವನ್ನು ಓದಿ ಮುಗಿಸಿದೆ. ಮೊದಲೇ ಜೈ ಭೀಮ್ ಸಿನಿಮಾದಿಂದ ಸುಧಾರಿಸಿ ಕೊಳ್ಳಲಾಗದ ಮನಸ್ಸಿಗೆ ಗಾಯದ ಮೇಲೆ ಬರೆ ಎಳೆದಂತಾಯಿತು. ಈ ಲೇಖನದ ವಿಷಯವನ್ನು ಸಿನಿಮಾ ಮಾಡುವವರು ಯಾರು ಎನ್ನುವ ನನ್ನ ಯಕ್ಷ ಪ್ರಶ್ನೆಗೆ ಉತ್ತರವಾಗಿ ಹೊಳೆದದ್ದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಘೋಷಣೆಯಾದ “ಶಿಕ್ಷಣ, ಸಂಘಟನೆ ಮತ್ತು ಹೋರಾಟ”.





















































