• ಹಂಝ ಮಲಾರ್

ಮಿ.ಎಸ್. ಮುಂಜಾನೆ ಎದ್ದು ಅರ್ಧ ಕಿ.ಮೀ.ವರೆಗೆ ವಾಕಿಂಗ್ ಮುಗಿಸಿ, ಡೈರಿಯಿಂದ ಹಾಲು ಮತ್ತು ತನ್ನ ಮೆಚ್ಚುಗೆಯ “ಶುಭವಾಣಿ”ಯನ್ನು ಖರೀದಿಸಿಕೊಂಡು ಎಂದಿನಂತೆ ಮನೆಗೆ ಹೆಜ್ಜೆ ಹಾಕುತ್ತಲೇ ದಾರಿದೀಪದ ಮಂದ ಬೆಳಕಿನಲ್ಲಿ ಪತ್ರಿಕೆಯ ಮೇಲೆ ಕಣ್ಣಾಡಿಸುತ್ತಾ, ಇನ್ನೇನೋ ಮಳೆ ಸುರಿಯುವ ಲಕ್ಷಣಗಳು ಗೋಚರಿಸಿದ್ದನ್ನು ಕಂಡು ಪತ್ರಿಕೆಯನ್ನು ಮಡಚಿ ನಡಿಗೆ ಬಿರುಸುಗೊಳಿಸಿದರು.
ಇದ್ದಕ್ಕಿದ್ದಂತೆಯೇ “ಮಿ.ಎಸ್.”ರ ಮನಸ್ಸು ಕೂಡ ಬಿಸಿಯಾಗತೊಡಗಿತು. ನನಗೀಗ ಎಷ್ಟು ವರ್ಷ? 64 ಅಲ್ವೇ? ಹಾಗಿದ್ದರೆ ನಾನು ಇನ್ನೆಷ್ಟು ವರ್ಷ ಬದುಕಬಲ್ಲೆ? ಇನ್ನೊಂದೈದಾರು ವರ್ಷ. ಛೆ…ಛೆ… ಗಣಿತ ಶಾಸ್ತ್ರದ ಮೇಷ್ಟ್ರು ಕೂಡ ನನ್ನ ಹಾಗೆ ಲೆಕ್ಕಾಚಾರದ ಹಾಕಲಾರರು? ಎಷ್ಟು ದಿನ ಅಥವಾ ಎಷ್ಟು ವರ್ಷ ಬದುಕಿದರೇನು? ನಾನು ಮಾಡಬೇಕಾದುದು ಇಂತಿಷ್ಟು ವರ್ಷ ಅಂತ ಇದೆಯೇ? ನನಗೆ ಆರೋಗ್ಯ ಅಥವಾ ಶಕ್ತಿ ಇರುವಷ್ಟು ಇಲ್ಲವೇ ಮನಸ್ಸಿಗೆ ತೋಚಿದಷ್ಟು ದಿನ ನಾನೀ ಕೆಲಸ ಮಾಡಬೇಕು. ಭವಿಷ್ಯದ ಬಗ್ಗೆ ನಾನು ಯಾಕೆ ಚಿಂತಿಸಬೇಕು? ಈವತ್ತು ನಾನು, ನಾಳೆ ಇನ್ನೊಬ್ಬ. ಈ ಜಗತ್ತಿನಲ್ಲಿ ಕಷ್ಟ, ಸುಖ, ಪರ, ವಿರೋಧಂತೆ ಸಜ್ಜನ ದುರ್ಜನರು ಇದ್ದೇ ಇರುತ್ತಾರೆ. ನಾಳೆ ನನ್ನ ಮಗ ಸಜ್ಜನನಾಗಬಹುದು ಅಥವಾ ದುರ್ಜನನಾಗಬಹುದು. ನನಗೆ ಅದು ಮುಖ್ಯವಲ್ಲ. ಅಷ್ಟಕ್ಕೂ ನನಗೆ ಯಾಕೆ ಇಂತಹ ತರಲೆ ಪ್ರಶ್ನೆಗಳು ಕಾಡುತ್ತಿವೆ? ಎಂದು ಮಿ.ಎಸ್. ತನಗೆ ತಾನೇ ಪ್ರಶ್ನಿಸಿಕೊಂಡರು.
ಹಾಗೇ ಮನೆಯ ಗೇಟು ತೆರೆದು ಒಳ ಹೊಕ್ಕರು. ಟೇಬಲ್ ಮೇಲೆ ಬಿಸಿ ಕಾಫಿ ಹಬೆಯಾಡುತ್ತಿತ್ತು. ಅದನ್ನು ಕೈಗೆತ್ತಿಕೊಂಡು ಆರಾಮ ಕುರ್ಚಿಯಲ್ಲಿ ಕುಳಿತು, ನಿಧಾನವಾಗಿ ಪತ್ರಿಕೆಯ ಮುಖಪುಟಕ್ಕೆ ಕಣ್ಣು ಹಾಯಿಸಿದರು. ಒಂದೈದು ನಿಮಿಷ ಅವರು ಪತ್ರಿಕೆಯ ಎಲ್ಲ ಪುಟಗಳಿಗೆ ಕಣ್ಣು ಹಾಯಿಸುತ್ತಾರೆ. ನಂತರ ಅದರಲ್ಲಿ ತನಗೆ ಬೇಕಾದ ಸುದ್ದಿಗಳನ್ನು ವಾಚಿಸುತ್ತಾರೆ. ಆ ಪೈಕಿ ತನಗೆ ಲಾಭ ತಂದು ಕೊಡುವ ಸುದ್ದಿಯನ್ನು ಎರಡೆರಡು ಬಾರಿ ಓದುತ್ತಾರೆ. ಇದು ಅವರ ನಿತ್ಯ ಕಾಯಕ. ಅದರ ಮಧ್ಯೆ ಪಾಯಿಖಾನೆ, ಜಾನುವಾರು ದೊಡ್ಡಿಗೆ ಅಡಿಗಲ್ಲು, ಉದ್ಘಾಟನೆ ಎಂದೆಲ್ಲಾ ಆದ್ಯತೆ ನೀಡುತ್ತಾರೆ. ಯಾರು ಎಲ್ಲಿ ಅನ್ಯೋನ್ಯತೆಯಿಂದ ಇದ್ದಾರೆ ಎಂದು ತಿಳಿದುಕೊಳ್ಳುತ್ತಾರೆ. ಹಾಗೇ ಅಲ್ಲಿಗೆ ತೆರಳಿ ಸದ್ದಿಲ್ಲದೆ ತನ್ನ ಕೆಲಸ ಪೂರೈಸಿ ಬರುತ್ತಾರೆ. ಅವರಿಗೆ ಬಹುತೇಕ ರಾಜಕಾರಣಿಗಳ ಜತೆ ನಿಕಟ ಸಂಪರ್ಕವಿದೆ. ಕೆಲವು ಪೊಲೀಸ್ ಅಧಿಕಾರಿಗಳೊಡನೆ ಒಡನಾಟವಿದೆ. ಸಮಾಜ ಘಾತುಕರ ಜತೆ ಚರ್ಚೆ ಮಾಡುತ್ತಾರೆ. ಅವರು ಇಂತಹವರಿಗೆ ಮತ ಹಾಕಿ ಎಂದು ಭಿನ್ನವಿಸಿಕೊಳ್ಳುವುದಿಲ್ಲ. ಇಂತಹ ಕೆಲಸ ಮಾಡಿ ಎಂದು ನೇರವಾಗಿ ಹೇಳುವುದಿಲ್ಲ. ಸಮಾಜ ಘಾತುಕರ ಜತೆ ಬೆರೆಯುತ್ತಲೇ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿದಾರರಾಗಿಯೂ ಕೆಲಸ ಮಾಡುತ್ತಾರೆ.
ಊರವರ ಮಟ್ಟಿಗೆ “ಮಿ.ಎಸ್.’ ಸಮಾಜ ಸೇವಕರು. ಗಣ್ಯರು. ಹಾಗಾಗಿ ಊರಲ್ಲಿ ಅಥವಾ ಆಸುಪಾಸಿನ ಮನೆಯಲ್ಲಿ ಏನೇ ಕಾರ್ಯಕ್ರಮ ನಡೆಸುವುದಿದ್ದರೂ ಮಿ.ಎಸ್. ಬೇಕೇ ಬೇಕು. ಅವರು ಒಂದು ಕ್ಷಣ ಆಗಮಿಸಿ ಮುಗುಳ್ನಗೆ ಬೀರಿ ಫೋಟೋಕ್ಕೆ ಫೋಸು ನೀಡಿದರೆ ಮನೆ ಮಂದಿಗೆ, ಊರಿನ ನಾಗರಿಕರಿಗೆ ನೆಮ್ಮದಿ, ಸಂತಸ.
ಹಾಗಂತ ಅವರು ಈ ಊರಿನವರಲ್ಲ. ಹತ್ತು ವರ್ಷದ ಹಿಂದೆ ಎಲ್ಲಿಂದಲೋ ಬಂದು ಈ ಊರ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾದವರು. ಅವರ ಹೆಂಡತಿಗೆ ಕೂಡ ಅಷ್ಟೆ., ಗಂಡನ ಬಗ್ಗೆ ಅಪಾರ ಪ್ರೀತಿ. ಗಂಡನ ಯಾವ ತೀರ್ಮಾನಕ್ಕೂ ಅವರು ಎದುರಾಡುವುದಿಲ್ಲ. ಇದ್ದ ಒಬ್ಬ ಮಗ ಅಮೇರಿಕಾದಲ್ಲಿ ಎಂಜಿನಿಯರ್ ಆಗಿದ್ದಾನೆ. ಮನೆಯಲ್ಲಿ ಹೆಂಡತಿಗೆ ಸುಮ್ಮನೆ ಕೂರಲು ಬೋರು. ಹಾಗಾಗಿ ಆಕೆ ಮುಂಜಾನೆ ಎದ್ದು 10 ಗಂಟೆಯೊಳಗೆ ಎಲ್ಲ ಕೆಲಸ ಮುಗಿಸಿ ಆಸುಪಾಸಿನ ಮಹಿಳೆಯರ ಜತೆಗೂಡಿ ಸಮಾಜ ಸೇವೆ ಮಾಡುತ್ತಾಳೆ. ಸಮಾಜದ ಬಗ್ಗೆ ಆಕೆಗೆ ಎಲ್ಲಿಲ್ಲದ ಕಾಳಜಿ. ಜಾತಿ, ಧರ್ಮ, ಭಾಷೆಯ ಹಂಗೇ ಇಲ್ಲ. ಎಲ್ಲ ಜನರು ನನ್ನವರು ಎಂಬ ಪ್ರೀತಿಯಿಂದ ಕೆಲಸ ಮಾಡುತ್ತಾಳೆ.
ಹೆಂಡತಿ ಮರಳಿ ಮನೆ ಸೇರುವಾಗ ಸಂಜೆ 5 ಗಂಟೆಯಾಗುತ್ತದೆ. ಅದರ ಮಧ್ಯೆ “ಮಿ.ಎಸ್” ರ ಕೆಲಸಗಳು ನಡೆಯುತ್ತದೆ. ಮನೆಯಲ್ಲಿ ಕುಳಿತು ಮೊಬೈಲ್‍ನಲ್ಲೇ ಅವರು ತನ್ನ ತಂಡದ ಸದಸ್ಯರ ಜತೆ ಎಲ್ಲಿ, ಏನು ಮಾಡಬೇಕು? ಎಂಬುದರ ಬಗ್ಗೆ ಚರ್ಚಿಸುತ್ತಾರೆ. ಹಾಗೇ ನೀಲ ನಕಾಶೆ ತಯಾರಿಸುತ್ತಾರೆ. ಅದಕ್ಕೆ ಕಾಗದ ಪೆನ್ನು, ಪೆನ್ಸಿಲು, ಸ್ಕೇಲ್… ಇದ್ಯಾವುದರ ಅಗತ್ಯವಿಲ್ಲ. ಮೇಲ್ನೋಟಕ್ಕೆ ಮನೆಯೇ ಅವರ ಕಚೇರಿ. ಆದರೆ, ತನ್ನ ಕೆಲಸ ಕಾರ್ಯಗಳ ಬಗ್ಗೆ ಅಲ್ಲಿ ಯಾವುದೇ ದಾಖಲೆಗಳನ್ನು ಇಟ್ಟುಕೊಳ್ಳುವುದಿಲ್ಲ. ಅದು ಅವರ ಬುದ್ಧಿವಂತಿಕೆ!.
ಪತ್ರಿಕೆಯ ಮುಖಪುಟದ ಕೆಳಗಡೆ ಐದು ಕಾಲಂನಲ್ಲಿ ಪ್ರಕಟವಾದ ಆ ಸುದ್ದಿ “ಮಿ.ಎಸ್.”ರ ಗಮನ ಸೆಳೆಯಿತು. ಅವರು ಅದನ್ನು ಎರಡೆರಡು ಬಾರಿ ಓದಿ ತದೇಕ ಚಿತ್ತದಿಂದ ಓದಿದರು. ಹಾಗೇ ಕುಶಿಯಿಂದ ಮನದಲ್ಲೇ ನಲಿದಾಡಿದರು. ಅದನ್ನು ಅದುಮಿಡಲಾಗದೆ ಹೆಂಡತಿಯ ಜತೆ ತುಂಬಾ ಗೆಲುವಿನಿಂದ ಮಾತನಾಡಿದರು. ಈಕೆ ಮನೆಯಿಂದ ಬೇಗ ಹೊರಟರೆ ಸಾಕು ಎಂದು ಮನಸಲ್ಲಿ ಹೇಳಿಕೊಂಡರು. ಆದರೆ, ಹೆಂಡತಿ ಎಂದಿನ ಸಮಯ ಮೀರಿದರೂ ಹೊರಡುವ ಲಕ್ಷಣ ಕಾಣದಿದ್ದಾಗ ಒಳಗಿಂದೊಳಗೆ ಕುದಿಯತೊಡಗಿದರು. ಆದರೂ ತನ್ನ ಶಿಷ್ಯ “ಮಿ.ಎ.”ನ ಮೊಬೈಲ್ ಸಂಪರ್ಕಿಸಿದಾಗ ಅದು ಸ್ವಿಚ್ಡ್ ಆಫ್ ಆಗಿರುವುದನ್ನು ತಿಳಿದು ಕೆಂಡಮಂಡಲವಾದರು. ಮೊಬೈಲ್ ಸ್ವಿಚ್ಡ್ ಆಫ್ ಮಾಡಬೇಡ ಅಂತ ನಾನು ಎಷ್ಟು ಸಲ ಹೇಳಲಿಲ್ಲ ಎಂದು ಮನದಲ್ಲೇ ಆಕ್ರೋಶ ವ್ಯಕ್ತಪಡಿಸಿದರು.
“ನಿಮ್ಮದೇನೂ ಕೆಲಸವಿದ್ದರೆ ಅಮ್ಮಾವ್ರು ಹೊರಟು ಹೋದ ನಂತರ ಅಲ್ವ ಸಾರ್? ಅದಕ್ಕೆ ನಾನು 10 ಗಂಟೆಯ ಬಳಿಕ ಮೊಬೈಲ್ ಚಾಲನೆಯಲ್ಲಿಟ್ಟಿರುತ್ತೇನೆ. ನಿಮ್ಮ ಸಂಪರ್ಕದ ಹೊರತು ನನಗೆ ಬೇರೆ ಯಾವುದೇ ಕರೆ ಬರುವುದಿಲ್ಲ ಸಾರ್” ಎಂದು “ಮಿ.ಎ.” ಹಲ್ಲುಗಿಂಜಿದ್ದನ್ನು ನೆನಪಿಸಿಕೊಂಡ “ಮಿ.ಎಸ್.” ತನ್ನ ಕೋಪವನ್ನು ಹೆಂಡತಿಗೆ ತಿಳಿಯದಂತೆ ನೋಡಿಕೊಂಡರು.
“ನಾ ಬರ್ತೇನೆ” ಎನ್ನುತ್ತಾ ಆಕೆ 11 ಗಂಟೆಗೆ ಹೊರಟು ನಿಂತಾಗ, “ಮಿ.ಎಸ್.” ತನ್ನ ಶಿಷ್ಯ “ಮಿ.ಎ.”ಯ ಮೊಬೈಲ್‍ಗೆ ರಿಂಗ್ ಕೊಟ್ಟರು. ಆ ಕಡೆ ರಿಂಗುಣಿಸಿದಾಗ ಗೆಲುವಾದರು. ಹಾಗೇ “ಹಲೋ” ಎಂಬ ಧ್ವನಿ ಅತ್ತ ಕಡೆಯಿಂದ ತೇಲಿ ಬಂದಾಗ “ಶುಭವಾಣಿ” ಓದಿದೆಯಾ?” ಎಂದು ಕೇಳಿದರು.
“ಇಲ್ಲ ಸಾರ್., ಏನುಂಟು?”- ಮಿ.ಎ. ಕೇಳಿದ.
“ಛೆ” ಎಂದು ಧ್ವನಿ ಹೊರಡಿಸಿದ “ಮಿ.ಎಸ್.” ಒಂದೋ ಪತ್ರಿಕೆ ಓದು, ಇಲ್ಲವೇ ಅರ್ಧಗಂಟೆಯೊಳಗೆ ಈ ಕಡೆ ಬಾ” ಎಂದರು.
ನಂತರ ಮಿ.ಬಿ., ಮಿ.ಸಿ., ಮಿ.ಡಿ.,ಗೂ ಫೋನಾಯಿಸಿದರು. ಅವರ್ಯಾರೂ ಆವತ್ತಿನ ಶುಭವಾಣಿ ಪತ್ರಿಕೆಯನ್ನು ಇನ್ನೂ ಓದಿರಲಿಲ್ಲ. ಎಲ್ಲರಿಗೂ ಮನಸ್ಸಲ್ಲೇ ಬೈಯ್ಯುತ್ತಾ, “ಬೇಗ ಬನ್ನಿ” ಎಂದು ಆದೇಶ ಮಿಶ್ರಿತ ದಾಟಿಯಲ್ಲಿ ಸೂಚಿಸಿದರು.
12 ಗಂಟೆಯೊಳಗೆ ನಾಲ್ವರು ಶಿಷ್ಯರು “ಮಿ.ಎಸ್” ರ ಮನೆಯೊಳಗೆ ಕಾಲಿಟ್ಟರು. ಎಲ್ಲರನ್ನೂ ಎದುರಲ್ಲಿ ಕೂರಿಸಿ “ಶುಭವಾಣಿ”ಯ ಆ ಸುದ್ದಿ ಜೋರಾಗಿ ವಾಚಿಸುವುದೋ ಅಥವಾ ಅದನ್ನು ಅವರಿಗೆ ಓದಲು ಕೊಡುವುದೋ ಎಂದು ತನ್ನಲ್ಲೇ ಯೋಚಿಸಿ ಒಬ್ಬೊಬ್ಬರು ಓದಿದರೆ ಸಮಯ ವ್ಯಯವಾಗುತ್ತದೆ. ಎಲ್ಲರಿಗೂ ನಾನೇ ಸ್ವಲ್ಪ ಜೋರಾಗಿ ಓದುತ್ತೇನೆ ಎನ್ನುತ್ತಾ ಓದತೊಡಗಿದರು.
“ದೇಶದ ನಾನಾ ಕಡೆ ಹಿಂದೂ ಮುಸ್ಲಿಮರು ಕ್ಷುಲ್ಲಕ ವಿಷಯಕ್ಕೆ ಸಂಬಂಧಿಸಿದಂತೆ ಹೊಡೆದಾಡಿಕೊಂಡರೆ, ಇಲ್ಲೊಂದು ಕುಗ್ರಾಮದ ಜನರಿಗೆ ಜಾತಿ, ಧರ್ಮದ ಪ್ರಶ್ನೆಯೇ ಇಲ್ಲ. ಇಲ್ಲಿ ಎಲ್ಲರೂ ಅನ್ಯೋನ್ಯತೆಯಿಂದಿದ್ದಾರೆ. ಹಿಂದೂಗಳು ಮುಸ್ಲಿಮರನ್ನು ಮತ್ತವರ ಮಸೀದಿಯನ್ನು ಹಾಗು ಹಬ್ಬ ಹರಿದಿನಗಳನ್ನು ಗೌರವಿಸಿದರೆ, ಮುಸ್ಲಿಮರು ಹಿಂದೂಗಳನ್ನೂ ಅದೇ ರೀತಿ ಕಾಣುತ್ತಾರೆ. ವಿಪರ್ಯಾಸವೇನೆಂದರೆ, ಈ ಕುಗ್ರಾಮ ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ. ಕಳೆದ 20 ವರ್ಷದಿಂದ ಇಲ್ಲಿ ಸುಮಾರು 30 ಕುಟುಂಬಗಳ ನೂರಾರು ಜನರು ವಾಸಿಸುತ್ತಿದ್ದರೂ ಸೂಕ್ತ ರಸ್ತೆ, ನೀರು, ದಾರಿದೀಪ, ವಿದ್ಯುತ್ ಇಲ್ಲದೆ ಪರದಾಡುತ್ತಿದ್ದಾರೆ. ಜಗತ್ತು ಜಾಗತೀಕರಣದ ಪ್ರಭಾವಕ್ಕೆ ಒಳಗಾದರೂ ಈ ಕುಗ್ರಾಮಕ್ಕೆ ಅದರ ಸೋಂಕು ಇನ್ನೂ ತಲುಪಿಲ್ಲ. ಸಂಬಂಧಪಟ್ಟವರು ಈ ಕುಗ್ರಾಮಕ್ಕೆ ಎಲ್ಲ ಮೂಲಭೂತ ಸೌಕರ್ಯಗಳನ್ನು ದೊರಕಿಸಿಕೊಟ್ಟರೆ ಇವರ ಬದುಕು ನೆಮ್ಮದಿಯಿಂದ ಕೂಡೀತು…”
“ಅದನ್ನು ವರದಿ ಮಾಡಿದವ ಯಾರು ಸಾರ್?”- ಒಬ್ಬ ಪ್ರಶ್ನಿಸಿದ.
“ಯಾರೇ ಆಗಲಿ, ಅದನ್ನು ಕಟ್ಟಿಕೊಂಡು ನಮಗೆ ಏನಾಗಲಿಕ್ಕಿದೆ?”-ಇನ್ನೊಬ್ಬ ಹೇಳಿದ.
“ನಿನ್ನ ತಲೆಯಲ್ಲಿ ಏನಿದೆ? ನೀನು ಏನನ್ನು ತಿನ್ತಾ ಇದ್ದೀಯ? ಅದನ್ನು ಕಟ್ಟಿಕೊಂಡು ನಮಗೇನು ಅಂತ ಕೇಳ್ತೀಯಲ್ಲಾ… ಅಂತಹ ವರದಿಗಾರರೇ ನಮ್ಮ ಮುಖ್ಯ ಬಂಡವಾಳ. ಮೊದಲು ನಾವು ಆ ವರದಿಗಾರನನ್ನು ಸಂಪರ್ಕಿಸಿ ಆತನಿಗೊಂದು ಸನ್ಮಾನ ಮಾಡಿ ಸ್ವಲ್ಪ ಗೌರವ ಧನ ನೀಡಿ ಇಂತಹದ್ದೇ ಮತ್ತಷ್ಟು ವರದಿಗಳನ್ನು ಹುಡುಕಿ ಬರೆಯಲು ಪ್ರೋತ್ಸಾಹಿಸಬೇಕು. ಅದರಿಂದ ನಮ್ಮ ಕೆಲಸ ಮತ್ತು ಜವಾಬ್ದಾರಿ ಹೆಚ್ಚಾಗುತ್ತದೆ”-ಮಿ.ಎಸ್. ಹೇಳಿಕೊಂಡರು.
“ನಾವು ಈವರೆಗೆ ಅಂತಹ ಕಾರ್ಯ ಮಾಡಲಿಲ್ಲವಲ್ಲ” ಒಬ್ಬ ಹೇಳಿದ.
“ಹೌದು, ನಾವು ಈವರೆಗೆ ಅಂತಹ ಕಾರ್ಯ ಮಾಡಿಲ್ಲ. ಆದರೆ, ಇನ್ಮೇಲೆ ಹಾಗೇ ಮಾಡಬೇಕು”-ಮಿ.ಎಸ್. ಉಸುರಿದರು.
“ಸಾರ್ವಜನಿಕ ಸನ್ಮಾನವಾ? ಗೌಪ್ಯ ಸನ್ಮಾನವಾ?”
“ಸಾರ್ವಜನಿಕ ಸನ್ಮಾನ, ಅಲ್ಲಿಂದಲೇ ನಮ್ಮ ಕೆಲಸ ಶುರು. ಆ ಸನ್ಮಾನವನ್ನು ನಾವು ಅದೇ ಊರಿನಲ್ಲಿ ಆಯೋಜಿಸೋಣ”- ಮಿ.ಎಸ್. ನುಡಿದರು,
“ನಮ್ಮ ಸ್ಕೆಚ್‍ನ ಬಗ್ಗೆ ನಿಮ್ಮಲ್ಲೇನಾದರು ಐಡಿಯಾ ಇದೆಯಾ?”-ಮಿ.ಎಸ್. ಪ್ರಶ್ನಿಸಿದರು.
ನಾಲ್ವರು ಪರಸ್ಪರ ಮುಖ ನೋಡಿಕೊಂಡರು. ಆದರೂ ಬೇಸರಿಸದ ಮಿ.ಎಸ್. “ನೋಡಿ, ನಾನು ನಾಲ್ಕು ಮಂದಿಗೆ ನಾಲ್ಕು ಕೆಲಸ ಹಂಚುತ್ತೇನೆ. ಮೂರು ತಿಂಗಳೊಳಗೆ ನಮ್ಮ ಕೆಲಸ ಸಾಧಿಸಬೇಕು. ನಾನು ರಾಜಕಾರಣಿಗಳ ಜತೆ ಮಾತುಕತೆ ನಡೆಸುತ್ತೇನೆ. ನಮಗೆ ರಾಜಕೀಯ ಪಕ್ಷಗಳು ಮುಖ್ಯವಲ್ಲ. ಹಣ ಮುಖ್ಯ. ಯಾರು ಹೆಚ್ಚು ಹಣ ನೀಡುತ್ತಾರೋ ಅವರ ಪರವಾಗಿ ಕೆಲಸ ಮಾಡಬೇಕು. ಒಳಗಿಂದೊಳಗೆ ಕಿಡಿ ಹಚ್ಚಬೇಕು. ಆ ಕಿಡಿ ಹಚ್ಚಲು ನಮಗೆ ಕನಿಷ್ಠ ನಾಲ್ಕು ಮಂದಿ ಯುವಕರು ಸಾಕು. ನಾವು ಅವರನ್ನು ಉಪಾಯದಿಂದ ಯಮಾರಿಸಿ ಮಲಗಿಸಿದರೆ ನಮ್ಮ ಹುಳುಕು ಬಯಲಾಗದು. ಮುಖ್ಯವಾಗಿ ನಾವು ಆಯ್ಕೆ ಮಾಡಿಕೊಳ್ಳುವ ಯುವಕರು ನಮ್ಮ ಯೋಜನೆಗೆ ಪೂರಕವಾಗಿರುತ್ತಾರೋ ಎಂದು ನೋಡಬೇಕು. ಇಲ್ಲದಿದ್ದರೆ ನಾವು ಆ ದಾರಿಗೆ ಕರೆತರಬೇಕು. ಹೀಗೆ ಆಯ್ಕೆ ಮಾಡಿಕೊಳ್ಳುವಾಗಲೂ ನಮಗೆ ಜಾತಿ ಮುಖ್ಯವಾಗಬಾರದು. ನಾವು ಅದನ್ನು ಮೀರಿ ನಿಂತವರು. ಆದರೆ, ಅವರಲ್ಲಿ ನಾವು ಜಾತಿ, ಧರ್ಮದ ವಿಷಬೀಜ ಬಿತ್ತಬೇಕು. ಮುಂದೆ ಅಲ್ಲಿ ಗಲಭೆ ಸೃಷ್ಟಿಯಾಗುತ್ತದೆ, ಸಾವು ನೋವು ಸಂಭವಿಸುತ್ತದೆ. ಆಸ್ತಿಪಾಸ್ತಿ ನಷ್ಟ ಉಂಟಾಗುತ್ತದೆ. ನಮಗೆ ಯಾರು ಹೆಚ್ಚು ಸಹಾಯ ಮಾಡುತ್ತಾರೋ ಆ ರಾಜಕಾರಣಿಯನ್ನು ನಾವು ನಮ್ಮ ಸೇವಾ ಕಾರ್ಯದ ಸಂದರ್ಭ ಹೈಲೈಟ್ ಮಾಡಬೇಕು. ಹಾಗೇ ಅವರಿಗೆ ಮುಂದಿನ ಚುನಾವಣೆಯಲ್ಲಿ ಮತ ಬೀಳುವ ಹಾಗೆ ಮಾಡಬೇಕು. ಇದೊಂದು ದಂಧೆಯಾ? ವ್ಯಾಪಾರವಾ? ಗೊತ್ತಿಲ್ಲ. ಆದರೆ, ನಮ್ಮ ಮಟ್ಟಿಗೆ ಅದು ಕೇವಲ ಕೆಲಸ. ಅದಕ್ಕಾಗಿ ನಾವು ಭಕ್ಷೀಸು ಪಡೆಯುತ್ತೇವೆ ಅಷ್ಟೆ. ಇದು ನಮ್ಮ ನಾಲ್ಕನೇ ಸ್ಕೆಚ್. ಮೂರು ಸ್ಕೆಚ್‍ನಲ್ಲಿ ನಾವು ಸಫಲರಾಗಿದ್ದೇವೆ. ನಮ್ಮಲ್ಲಿ ಒಂದೇ ಜಾತಿ, ಧರ್ಮಕ್ಕೆ ಸೇರಿದವರಿಲ್ಲ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು”
“ಮಿ.ಎ… ನೀನು ಆ ಊರಿನ ಒಬ್ಬ ಯುವಕನ ಪರಿಚಯ ಮಾಡಿಕೊಂಡು ಇನ್ನೊಂದು ಧರ್ಮದ ಯುವತಿಯನ್ನು ಪ್ರೀತಿಸಲು ಪ್ರೇರೇಪಿಸಬೇಕು”
“ಮಿ.ಬಿ. ನೀನು ಅಲ್ಲಿನ ಮಸೀದಿಗೆ ಹಂದಿ ಮಾಂಸ ಅಥವಾ ದೇವಸ್ಥಾನಕ್ಕೆ ದನದ ಮಾಂಸ ಎಸೆಯಲು ಒಬ್ಬ ಯುವಕನನ್ನು ಗೊತ್ತುಪಡಿಸಬೇಕು”
“ಮಿ.ಸಿ. ನೀನು ಶಾಲಾ ಕಾಲೇಜಿನ ಕ್ಯಾಂಪಸ್‍ನಲ್ಲಿ ಸಂಘರ್ಷ ಹುಟ್ಟಿಸಲು ಪ್ರಯತ್ನಿಸಬೇಕು”
“ಮಿ.ಡಿ. ನೀನು ಸಾರ್ವಜನಿಕ ಸ್ಥಳ ಅಥವಾ ಬಸ್‍ಗಳಲ್ಲಿ ಯುವತಿಯರ ಚುಡಾವಣೆಗೆ ಸಿದ್ಧತೆ ಮಾಡಬೇಕು”
ಅದನ್ನು ನಾಲ್ವರು ಕೇಳಿಸಿಕೊಂಡು ಉಗುಳು ನುಂಗಿದರು.
“ನೀವ್ಯಾರು ಇದನ್ನು ನೇರವಾಗಿ ಮಾಡಬೇಡಿ. ಎಲ್ಲವನ್ನು ತೆರೆಮರೆಯಲ್ಲಿ ನಿಂತು ಮಾಡಿ. ಮೊದಲ ಕಂತಿನಲ್ಲಿ ನಿಮಗೆ ತಲಾ ಐದು ಸಾವಿರ ರೂಪಾಯಿ ಕೊಡಲಾಗುವುದು. ನೀವು ನಿಮ್ಮ ಕೃತ್ಯಕ್ಕೆ ಬಳಸುವ ವ್ಯಕ್ತಿ ನಿರ್ದಿಷ್ಟ ಜಾತಿಯವನಾಗಿರಬೇಕಿಲ್ಲ. ನಿಮಗೆ ತಿರುಗಿ ಬೀಳದ ಅಮಾಯಕ ಬುದ್ಧಿವಂತರನ್ನೇ ಆಯ್ಕೆ ಮಾಡಿ. ಅದಕ್ಕಾಗಿ ತಮ್ಮ ಮಾತಿನ ಕಲೆಯನ್ನು ಕರಗತ ಮಾಡಿ. ಮುಂದಿನ ವಾರ ನಾವು ಆ ವರದಿಗಾರನಿಗೆ ಸನ್ಮಾನ ಮಾಡೋಣ. ಅದಕ್ಕೂ ಮುನ್ನ ನಾನು ವರದಿಗಾರ ಯಾರು ಎಂದು ತಿಳಿದುಕೊಂಡು ಎಲ್ಲ ವ್ಯವಸ್ಥೆ ಮಾಡುತ್ತೇನೆ” ಎನ್ನುತ್ತಾ ನಾಲ್ಕು ಮಂದಿಗೆ ತಲಾ ಐದು ಸಾವಿರ ರೂಪಾಯಿ ನೀಡಿ ಎದ್ದು ನಿಂತರು.
ಹಾಗೇ ನಾಲ್ಕು ಮಂದಿ ಅಲ್ಲಿಂದ ಹೊರಟು ಬಂದರು. ಇತ್ತ “ಮಿ.ಎಸ್.” ರಾಜಕೀಯ ಪಕ್ಷಗಳ ಮುಖಂಡರ ಜತೆ ವ್ಯವಹಾರ ಕುದುರಿಸತೊಡಗಿದರು. ಪಕ್ಷವೊಂದರ ಒಬ್ಬ ಮುಖಂಡ 15 ಲಕ್ಷದ ಆಫರ್ ನೀಡಿದ. ಅಲೆದೂ ತೂಗಿ ನೋಡಿದ ಮಿ.ಎಸ್. ಗಲಭೆಯ ನಂತರ ಸೇವೆ-ಬೆಸುಗೆ ಎಂಬ ನೆಪದಲ್ಲಿ ಒಂದಷ್ಟು ಓಡಾಡಿ, ಅಲ್ಪಸ್ವಲ್ಪ ಹಣ ಖರ್ಚು ಮಾಡಿ, ಉದಾರ ದಾನಿ ಎಂದು ಆ ರಾಜಕಾರಣಿಯನ್ನು ಪ್ರಚಾರಕ್ಕೆ ತಂದು ಚುನಾವಣೆಯಲ್ಲಿ ಆತನ ಗೆಲುವಿಗೆ ಪೂರಕ ವಾತಾವರಣ ಸೃಷ್ಟಿಸುವ ಗುತ್ತಿಗೆಯನ್ನು ವಹಿಸಿಕೊಂಡರು.
ಸಂಜೆಯ ಹೊತ್ತು ಹೆಂಡತಿ ಮನೆಯೊಳಗೆ ಕಾಲಿಟ್ಟಾಗ “ಮಿ.ಎಸ್” ಪ್ರೀತಿಯಿಂದಲೇ ಬರಮಾಡಿಕೊಂಡರು. ಆಕೆಯೂ ಅಷ್ಟೆ, ತುಂಬಾ ಗೆಲುವಿನಿಂದಿದ್ದರು. ಊಟ ಮಾಡಿದಿರಾ? ಹೊರಗೆ ಹೋಗಿದ್ರಾ? ಇಲ್ಲೇ ಸುಮ್ಮನೆ ಕಾಲಹರಣ ಮಾಡಿದ್ರಾ? ಎಂದೆಲ್ಲಾ ಔಪಚಾರಿಕವಾಗಿ ಮಾತನಾಡಿದರು. ಹಾಗೇ ಗಂಡನಿಗೆ ಚಾ ಮಾಡಿಕೊಟ್ಟು ಸ್ನಾನಕ್ಕೆ ವ್ಯವಸ್ಥೆ ಮಾಡ್ಲಾ ಎಂದು ಕೇಳಿದಳು. ಗಂಡ ತಲೆಯಾಡಿಸಿದೊಡನೆ ಬಚ್ಚಲು ಕೋಣೆಗೆ ತೆರಳಿ ಬಿಸಿ ನೀರು ಕಾಯಿಸತೊಡಗಿದಳು.
ಅರ್ಧಗಂಟೆಯ ಬಳಿಕ ಗಂಡ ಸ್ನಾನಕ್ಕಾಗಿ ಬಚ್ಚಲು ಕೋಣೆಗೆ ಕಾಲಿಟ್ಟೊಡನೆ, ಆಕೆ ಟೇಪ್ ರೆಕಾರ್ಡರ್ ಬಳಿ ಬಂದು ತಾನು ಮಾಡಿಟ್ಟು ಹೋದ ಸ್ಕೆಚ್ ಸಕ್ಸಸ್ ಆಗಿದೆಯೇ ಎಂದು ಪರಿಶೀಲಿಸಿದಳು. “ಮಿ.ಎಸ್.” ಸ್ನಾನ ಮುಗಿಸಿ ಬರುವ ಮುನ್ನವೇ ಅದನ್ನು ಜಾಗೃತೆಯಿಂದ ಬಚ್ಚಿಟ್ಟು ಗಂಡನ ಉಪಚಾರ, ಮಾತುಕತೆಯಲ್ಲಿ ತೊಡಗಿದಳು. ಹಾಗೇ ರಾತ್ರಿ ಊಟ ಮುಗಿಸಿ ನಿದ್ದೆಗೆ ಜಾರುವ ಮುನ್ನ ತಾನು ತಂದ ವಿಷವನ್ನು ಜ್ಯೂಸ್‍ನಲ್ಲಿ ಬೆರೆಸಿಕೊಟ್ಟಳು. ಏನೂ ಅರಿಯದ ಮಿ.ಎಸ್. ಅದನ್ನು ಕುಡಿಯುತ್ತಲೇ ಅಸ್ವಸ್ಥರಾದರು. ಹಾಗೆ ಟೇಪ್‍ನ ಸ್ವಿಚ್ ಆನ್ ಮಾಡಿ ತಾನು ಹೊರ ಹೋದ ನಂತರ ಮನೆಯಲ್ಲಿ ನಡೆದ ಮಾತುಕತೆಯನ್ನು ಆಲಿಸುತ್ತಾ, ಚಡಪಡಿಸುವ ಮಿ.ಎಸ್.ಗೂ ಕೇಳಿಸಿಕೊಳ್ಳಲಿ ಎಂದು ಆಶಿಸಿದಳು.
ಕಾಪಾಡು… ಕಾಪಾಡು… ಎಂದು ಮಿ.ಎಸ್. ಎಷ್ಟು ಕೂಗಾಡಿದರೂ ಆಕೆಯ ಮನ ಕರಗಲಿಲ್ಲ. ಇಂತಹ ಕ್ರಿಮಿಗಳಿಗೆ ಇದೇ ತಕ್ಕ ಶಾಸ್ತಿ. ನಾಳೆ ನಾನು ಇವರ ವಿರುದ್ಧ ದೂರು ನೀಡಿ, ದಾಖಲೆಗಳನ್ನು ನೀಡಿದರೂ ರಾಜಕಾರಣಿಗಳು ಅದನ್ನು ಮುಚ್ಚಿ ಹಾಕುತ್ತಾರೆ. ಹಾಗಾಗಿ ತಾನು ಕೈಗೊಂಡ ಈ ನಿರ್ಧಾರ ಸರಿಯಾದುದು ಎಂದು ಆಕೆ ಮತ್ತೊಮ್ಮೆ ಮನಸ್ಸು ಗಟ್ಟಿಮಾಡಿಕೊಂಡಳು.
ಆ ರಾತ್ರಿ ಏನೂ ಆಗಿಲ್ಲ ಎಂಬಂತೆ ಕಾಲ ಕಳೆದಳು. ಹಾಗೇ ತನ್ನ ಮಿ.ಎಸ್.ರ ಶಿಷ್ಯರನ್ನು ಬಲೆಗೆ ಕೆಡಹುವ ಬಗ್ಗೆ ಯೋಚಿಸಿದಳು.
ಮುಂಜಾನೆ ಮಿ.ಎಸ್.ರ ಮೊಬೈಲ್ ಗುಣುಗುಟ್ಟತೊಡಗಿತು.
ಆಕೆ “ಹಲೋ” ಎನ್ನುವ ಮೊದಲೇ “ಸಾರ್. ಈವತ್ತಿನ ಶುಭವಾಣಿಯಲ್ಲಿ ನಿನ್ನೆಯ ವರದಿಗೆ ಸಂಬಂಧಿಸಿದಂತೆ ಒಂದು ಪ್ರತಿಕ್ರಿಯೆ ಪ್ರಕಟವಾಗಿದೆ. ಆ ಕುಗ್ರಾಮದಲ್ಲಿ ಅಂತಹ ವಾತಾವರಣ ನಿರ್ಮಾಣವಾಗಿರುವುದು ಕುಶಿಯ ವಿಷಯ. ಆದರೆ, ಅಲ್ಲಿಗೆ ರಾಜಕಾರಣಿಗಳು ತೆರಳಿ ಪರಿಸ್ಥಿತಿ ಹಾಳು ಮಾಡುವ ಸಾಧ್ಯತೆ ಇದೆ. ಹಾಗಾಗಿ ಮಾಧ್ಯಮಗಳು ಯಾವತ್ತೂ ಇಂತಹ ಶುಭ ಸುದ್ದಿಗಳನ್ನು ಪ್ರಕಟಿಸದಿದ್ದರೆ ಒಳ್ಳೆಯದಿತ್ತು..” ಎಂದೆಲ್ಲಾ ಮಾತು ತೇಲಿ ಬರುತ್ತಿತ್ತು.
ಅತ್ತ ಕಡೆಯಿಂದ ತೇಲಿ ಬಂದ ಮಾತನ್ನು ಆಲಿಸಿದ ಆಕೆ “ಸ್ವಾರಿ, ನಿಮ್ಮ ಬಾಸ್‍ನ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದೆ. ನನಗೆ ಏನು ಮಾಡಬೇಕು ಎಂದು ತೋಚುತ್ತಿಲ್ಲ. ನೀವೆಲ್ಲ ಬೇಗ ಬನ್ನಿ” ಎಂದು ಹೇಳಿದಳು.
ಕ್ಷಣಾರ್ಧದಲ್ಲಿ ನಾಲ್ವರು ಆಗಮಿಸಿದರು.
ಮಿ.ಎಸ್. ಜೀವಚ್ಛವವಾಗಿದ್ದರು. ಅದನ್ನು ಕಂಡು ನಾಲ್ವರಿಗೂ ಮಾತು ಬರಲಿಲ್ಲ. ಅಷ್ಟರಲ್ಲಿ ಆ ಮನೆಯನ್ನು ವಿಶೇಷ ಪೊಲೀಸ್ ತಂಡ ಸುತ್ತುವರಿದಿತ್ತು. ಹಾಗೇ ಅವರನ್ನು ವಶಕ್ಕೆ ತೆಗೆದುಕೊಂಡು, ವ್ಯವಹಾರ ಕುದುರಿಸಿದ ರಾಜಕಾರಣಿಯ ಬೇಟೆಗೆ ಇಳಿದರು.
“ಮಿ.ಎಸ್. ಸ್ಥಳೀಯ ಕೆಲವು ಪೊಲೀಸರ, ರಾಜಕಾರಣಿಗಳ ಸಖ್ಯ ಬೆಳೆಸಿಕೊಂಡು ಕಳೆದ ಹಲವು ವರ್ಷದಿಂದ ಸಮಾಜ ಘಾತುಕ ಕೆಲಸದಲ್ಲಿ ಅಥವಾ ದಂಧೆಯಲ್ಲಿ ತಲ್ಲೀನರಾದ ಬಗ್ಗೆ ನಮಗೆ ಕೆಲವು ವರ್ಷದ ಹಿಂದೆ ಮಾಹಿತಿ ಲಭಿಸಿತ್ತು. ಹೆಂಡತಿಯ ಅಗಲಿಕೆಯಿಂದ ಕಾಡುವ ಒಂಟಿತನ ನೀಗಿಸಲೋ ಅಥವಾ ಹಣದಾಸೆಗೋ ಏನೋ ಗೊತ್ತಿಲ್ಲ ಮಿ.ಎಸ್. ಇಂತಹ ಹೀನ ಕೆಲಸಕ್ಕೆ ಕೈ ಹಾಕಿದ್ದರು. ನಮ್ಮ ತಂಡದ ಈಕೆಯನ್ನು ಪ್ರೇಯಸಿಯ ರೂಪದಲ್ಲಿ ಕಳುಹಿಸಿ ಅಂತಿಮವಾಗಿ ಸಂಗಾತಿಯಂತೆ ನಟಿಸುವಂತೆ ಮಾಡಿ ಕೊನೆಗೂ ಬಲೆಗೆ ಕೆಡವಿದ್ದೇವೆ. ತನ್ನ ಗುಟ್ಟು ಬಯಲಾದದ್ದರಿಂದ ಬೇಸತ್ತು ಮಿ.ಎಸ್. ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಅವರ ಮೊಬೈಲ್ ನಂಬರ್ ಪರಿಶೀಲಿಸಿ ಅವರ ಜತೆ ಕೆಲಸ ಮಾಡಿದವನ್ನು ಬಂಧಿಸಿ ಕಂಬಿ ಎಣಿಸುವಂತೆ ಮಾಡುತ್ತೇವೆ” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿ, ಘಟನೆಯ ಬಗ್ಗೆ ವಿವರಿಸತೊಡಗಿದರು. ಮಿ.ಎಸ್.ನ ಸಂಗಾತಿಯಂತೆ ನಟಿಸಿದ ಇಲಾಖೆಯ ಹೆಡ್‍ಕಾನ್ಸ್‍ಟೇಬಲ್‍ಗೆ ಇಲಾಖೆ ವಿಶೇಷ ಬಹುಮಾನ ನೀಡಿ ಗೌರವಿಸಲಿದೆ ಎಂದು ಘೋಷಿಸಿದರು.
ಈ ಸುದ್ದಿ ತಿಳಿದು ಊರವರು ಆಶ್ಚರ್ಯಚಕಿತರಾದರು. ಒಂದು ಕ್ಷಣ ತನ್ನ ಕಣ್ಣನ್ನು ನಂಬದಾದರು. ಎಲ್ಲಿಂದಲೋ ಬಂದು ತನ್ನ ಮಾತಿನ ದಾಟಿಯಿಂದ ಮೋಡಿ ಮಾಡಿದ್ದನ್ನು ಕೆಲವರು ಜ್ಞಾಪಿಸಿಕೊಂಡರೆ, ಇನ್ನು ಕೆಲವರು ಪೊಲೀಸ್ ಇಲಾಖೆಯಲ್ಲಿದ್ದೂ ಸಂಗಾತಿಯಂತೆ ನಟಿಸಿದ ಆಕೆಯ ಜಾಣ್ಮೆಯನ್ನು ಕಂಡು ಹೌಹಾರಿದರು.

LEAVE A REPLY

Please enter your comment!
Please enter your name here