ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ವಿದ್ಯಾರ್ಥಿಗಳ ಮೇಲೆ ನಡೆಯುವ ಜಾತಿ ಆಧಾರಿತ ತಾರತಮ್ಯ ಮತ್ತು ಕಿರುಕುಳವನ್ನು ತಡೆಗಟ್ಟಲು ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ರ ರಾಜ್ಯ ಬಜೆಟ್‌ನಲ್ಲಿ ಘೋಷಿಸಿದಂತೆ, ರಾಜ್ಯದಲ್ಲಿ ಶೀಘ್ರದಲ್ಲೇ ‘ರೋಹಿತ್ ವೇಮುಲ ಕಾಯ್ದೆ’ ಜಾರಿಗೆ ಬರಲಿದೆ. ಈ ಘೋಷಣೆಯನ್ನು ವಿದ್ಯಾರ್ಥಿ ಚಳವಳಿಗಳು ಮತ್ತು ನಾಗರಿಕ ಸಮಾಜವು ದಶಕದಿಂದ ನಡೆದ ಹೋರಾಟದ ಪ್ರಮುಖ ಜಯವೆಂದು ನೋಡುತ್ತಿದೆ.
ಹಿನ್ನೆಲೆ ಮತ್ತು ಉದ್ದೇಶ
2016ರಲ್ಲಿ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಅವರ ಸಾವು ಭಾರತದ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಜಾತಿ ತಾರತಮ್ಯದ ಬಗ್ಗೆ ದೇಶವ್ಯಾಪಿ ಚರ್ಚೆಗೆ ಕಾರಣವಾಯಿತು. ಫೆಲೋಶಿಪ್ ಸ್ಥಗಿತ, ಹಾಸ್ಟೆಲ್‌ನಿಂದ ಬಹಿಷ್ಕಾರ ಮತ್ತು ರಾಜಕೀಯ ಒತ್ತಡಗಳ ನಡುವಿನ ಪರಿಸ್ಥಿತಿಯಲ್ಲಿ ರೋಹಿತ್ ಬಲಿಯಾದರು. ಈ ಘಟನೆಯ ನಂತರ ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಇಂತಹ ತಾರತಮ್ಯವನ್ನು ತಡೆಯಲು ಪ್ರತ್ಯೇಕ ಕಾಯ್ದೆಗಾಗಿ ಆಗ್ರಹ ಕೇಳಿಬಂದಿತ್ತು. ಅಲ್ಲಿ ಎರಡು ಕರಡು ಮಸೂದೆಗಳನ್ನು ಸಿದ್ಧಪಡಿಸಲಾಯಿತಾದರೂ, ಅವು ಕಾನೂನಾಗಿ ಜಾರಿಯಾಗಲಿಲ್ಲ.
2024ರಲ್ಲಿ ಕರ್ನಾಟಕದಲ್ಲಿ ನಾಗರಿಕ ಸಮಾಜದ ಸಂಘಟನೆಗಳು, ವಕೀಲರು, ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು ಮತ್ತು ‘ಅಂಬೇಡ್ಕರ್ ರೀಡಿಂಗ್ ಸರ್ಕಲ್’ ಒಗ್ಗೂಡಿ ಈ ಹೋರಾಟಕ್ಕೆ ಮರುಜೀವ ನೀಡಿದರು. ಈ ಪ್ರಯತ್ನಗಳು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಬೃಹತ್ ಪ್ರತಿಭಟನೆಗಳಲ್ಲಿ ವ್ಯಕ್ತವಾಗಿದ್ದು, ಇದರ ಬೆನ್ನಲ್ಲೇ ಮುಖ್ಯಮಂತ್ರಿಗಳು ರೋಹಿತ್ ಕಾಯ್ದೆಯನ್ನು ಜಾರಿಗೆ ತರುವ ಭರವಸೆ ನೀಡಿದ್ದರು.
ಮಾರ್ಚ್ 6, 2026ರ ಬಜೆಟ್‌ನಲ್ಲಿ ಅಧಿಕೃತವಾಗಿ ಘೋಷಿಸಲಾದ ಈ ಉದ್ದೇಶಿತ ಕಾನೂನು, ಜಾತಿ ದೌರ್ಜನ್ಯಗಳನ್ನು ಕೇವಲ ಕ್ರಿಮಿನಲ್ ಕಾನೂನಿನ ಮೂಲಕ ನೋಡುವ ಸಾಂಪ್ರದಾಯಿಕ ಕ್ರಮವನ್ನು ಮೀರಿ, ಸಾಂಸ್ಥಿಕ ತಾರತಮ್ಯವನ್ನು ಎದುರಿಸಲು ‘ಸಿವಿಲ್ ಕಾನೂನು’ (Civil Law) ಚೌಕಟ್ಟನ್ನು ಒದಗಿಸುತ್ತದೆ. ಮೀಸಲಾತಿಯ ಮೂಲಕ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಎದುರಿಸುವ ವಾಸ್ತವ ತಾರತಮ್ಯವನ್ನು ತಡೆಯುವುದು ಈ ಕಾಯ್ದೆಯ ಪ್ರಮುಖ ಉದ್ದೇಶವಾಗಿದೆ.
ಕ್ರಿಮಿನಲ್ ಕಾನೂನು ಮತ್ತು ವಾಸ್ತವದ ಸವಾಲುಗಳು
ಪ್ರಸ್ತುತ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳ ಮೇಲಿನ ನೇರ ತಾರತಮ್ಯವನ್ನು ಸಂವಿಧಾನದ ಮೀಸಲಾತಿ ನಿಯಮಗಳ ಮೂಲಕ ನಿರ್ವಹಿಸಲಾಗುತ್ತದೆ. ಇನ್ನು ದೈಹಿಕ ದೌರ್ಜನ್ಯ ಅಥವಾ ಬಹಿರಂಗ ಕಿರುಕುಳವನ್ನು ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 1989’ ಅಡಿಯಲ್ಲಿ ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲಾಗುತ್ತದೆ.
ಆದರೆ ಇಂತಹ ಕಾನೂನುಗಳಿದ್ದರೂ ಶಿಕ್ಷಣ ಸಂಸ್ಥೆಗಳಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯದವರನ್ನು ಕಡೆಗಣಿಸುವ ಪ್ರವೃತ್ತಿ ಮುಂದುವರಿದಿದೆ. ಈಗ ನೇರ ದೌರ್ಜನ್ಯಕ್ಕಿಂತ ಹೆಚ್ಚಾಗಿ ಸೂಕ್ಷ್ಮ ಮತ್ತು ಪರೋಕ್ಷ ರೂಪಗಳಲ್ಲಿ ತಾರತಮ್ಯ ವ್ಯಕ್ತವಾಗುತ್ತಿವೆ. ಇವು ಕ್ರಿಮಿನಲ್ ಅಪರಾಧಗಳ ವ್ಯಾಪ್ತಿಗೆ ಬರದಿದ್ದರೂ, ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಕುಗ್ಗಿಸಿ ಅವರನ್ನು ಶೈಕ್ಷಣಿಕ ವ್ಯವಸ್ಥೆಯಿಂದ ಹೊರದಬ್ಬುವ ಪರಿಸ್ಥಿತಿಯನ್ನು ನಿರ್ಮಿಸುತ್ತವೆ. ಈ ರೀತಿಯ ಸೂಕ್ಷ್ಮ ತಾರತಮ್ಯವನ್ನು ಎದುರಿಸಲು ರೋಹಿತ್ ಕಾಯ್ದೆ ಅಗತ್ಯವೆಂದು ಹೋರಾಟಗಾರರು ಹೇಳುತ್ತಾರೆ.
ಕರಡು ಕಾಯ್ದೆಯ ಪ್ರಮುಖ ಅಂಶಗಳು
ಅಭಿಯಾನದ ವತಿಯಿಂದ ಸಲ್ಲಿಸಲಾದ ರೋಹಿತ್ ವೇಮುಲ ಕಾಯ್ದೆಯ ಕರಡಿನಲ್ಲಿ ಕೆಲವು ಪ್ರಮುಖ ಅಂಶಗಳನ್ನು ಒಳಗೊಂಡಿವೆ:
• ವ್ಯಾಪ್ತಿ: ಕರ್ನಾಟಕದ ಎಲ್ಲಾ ಸರ್ಕಾರಿ, ಖಾಸಗಿ ಮತ್ತು ದತ್ತಿ ಶಿಕ್ಷಣ ಸಂಸ್ಥೆಗಳು, ವಸತಿ ನಿಲಯಗಳು ಹಾಗೂ ಡಿಜಿಟಲ್ ಕಲಿಕಾ ಕೇಂದ್ರಗಳಿಗೆ ಈ ಕಾನೂನು ಅನ್ವಯವಾಗುತ್ತದೆ.
• ವ್ಯಾಪಕ ರಕ್ಷಣೆ: ಕೇವಲ ವಿದ್ಯಾರ್ಥಿಗಳಲ್ಲದೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೂ (ಗುತ್ತಿಗೆ ಆಧಾರಿತ ನೌಕರರು ಸೇರಿದಂತೆ) ರಕ್ಷಣೆ ಒದಗಿಸಲಾಗುತ್ತದೆ.
• ತಾರತಮ್ಯದ ವ್ಯಾಖ್ಯಾನ: ನೇರ, ಪರೋಕ್ಷ ಮತ್ತು ಪಾಲಿಸಿಗಳಲ್ಲಿ ಅಡಕವಾಗಿರುವ ಸಾಂಸ್ಥಿಕ ತಾರತಮ್ಯವನ್ನು ನಿಷೇಧಿಸಲಾಗುತ್ತದೆ.
• ನಾಗರಿಕ ಪರಿಹಾರ ವ್ಯವಸ್ಥೆ: ಕೇವಲ ಶಿಕ್ಷೆಯಲ್ಲದೆ ಆಡಳಿತಾತ್ಮಕ ತಿದ್ದುಪಡಿ, ಹಣಕಾಸಿನ ಪರಿಹಾರ ಮತ್ತು ಸಂತ್ರಸ್ತರಿಗೆ ಕೌನ್ಸೆಲಿಂಗ್ ಒದಗಿಸಲು ಒತ್ತು ನೀಡಲಾಗಿದೆ.
• ಸಮಾನತಾ ಸಮಿತಿಗಳು: ಪ್ರತಿ ಸಂಸ್ಥೆಯಲ್ಲೂ ಕಡ್ಡಾಯವಾಗಿ ಸಮಿತಿ ರಚಿಸಬೇಕು. ಇಲ್ಲಿ ಎಸ್‌ಸಿ/ಎಸ್‌ಟಿ ಪ್ರತಿನಿಧಿಗಳಿರಬೇಕು ಮತ್ತು ದೂರುಗಳ ವಿಚಾರಣೆ 90 ದಿನಗಳೊಳಗೆ ಪೂರ್ಣಗೊಳ್ಳಬೇಕು.
• ದಂಡನೆಗಳು: ನಿಯಮ ಉಲ್ಲಂಘಿಸುವ ಸಂಸ್ಥೆಗಳಿಗೆ ದಂಡ ವಿಧಿಸುವುದರ ಜೊತೆಗೆ ತಪ್ಪಿತಸ್ಥ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸುವ ಅವಕಾಶವಿದೆ.
• ಹಕ್ಕುಗಳ ರಕ್ಷಣೆ: ತಾರತಮ್ಯದ ವಿರುದ್ಧ ಧ್ವನಿಯೆತ್ತುವ ಎಸ್‌ಸಿ/ಎಸ್‌ಟಿ ವ್ಯಕ್ತಿಗಳ ಹಕ್ಕುಗಳನ್ನು ಕಾಯ್ದೆ ರಕ್ಷಿಸುತ್ತದೆ.
ಯುಜಿಸಿ ನಿಯಮಗಳಿಗಿಂತ ಇದು ಹೇಗೆ ಭಿನ್ನ?
ಯುಜಿಸಿ ಇತ್ತೀಚೆಗೆ ಬಿಡುಗಡೆ ಮಾಡಿದ ಸಮಾನತೆ ಕುರಿತ ನಿಯಮಗಳು ಜಾತಿ ಆಧಾರಿತ ತಾರತಮ್ಯವನ್ನು ಲಿಂಗ, ಧರ್ಮ ಹಾಗೂ ಪ್ರದೇಶ ಆಧಾರಿತ ಇತರ ತಾರತಮ್ಯಗಳೊಂದಿಗೆ ಒಂದೇ ಚೌಕಟ್ಟಿನಲ್ಲಿ ಪರಿಗಣಿಸುತ್ತದೆ. ಇದರಿಂದ ಜಾತಿ ಆಧಾರಿತ ಶೋಷಣೆಯ ವಿಶಿಷ್ಟತೆಯನ್ನು ಮರೆಮಾಚುವ ಅಪಾಯವಿದೆ. ಇದು ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳ ದೂರುಗಳ ವಿರುದ್ಧ “ವಿಲೋಮ ತಾರತಮ್ಯ” (Reverse Discrimination) ಅಥವಾ “ಶೈಕ್ಷಣಿಕ ವಾತಾವರಣದ ಹದಗೆಡುವಿಕೆ” ಎಂಬ ಆರೋಪಗಳನ್ನು ಎತ್ತುವ ಸಾಧ್ಯತೆಯನ್ನು ಹೆಚ್ಚಿಸಬಹುದು.
ಆದರೆ ಉದ್ದೇಶಿತ ರೋಹಿತ್ ಕಾಯ್ದೆಯು ಯುಜಿಸಿ ಮಾರ್ಗಸೂಚಿಗಳಿಗೆ ವಿರುದ್ಧವಾಗಿಲ್ಲ. ಬದಲಾಗಿ, ಅವುಗಳಲ್ಲಿ ಇರುವ ಲೋಪದೋಷಗಳನ್ನು ಸರಿಪಡಿಸಿ ಜಾತಿ ಆಧಾರಿತ ತಾರತಮ್ಯದ ಸಮಸ್ಯೆಯನ್ನು ಸ್ಪಷ್ಟವಾಗಿ ಗುರುತಿಸುವ ಮೂಲಕ ಪೂರಕವಾಗಿ ಕೆಲಸ ಮಾಡುತ್ತದೆ.
ಮುಂದಿನ ನಿರೀಕ್ಷೆಗಳು
ಹೋರಾಟಗಾರರು ಮತ್ತು ತಜ್ಞರ ಅಭಿಪ್ರಾಯದಲ್ಲಿ, ಸರ್ಕಾರ ಜಾರಿಗೆ ತರಲಿರುವ ಕಾಯ್ದೆಯಲ್ಲಿ ಅದರ ವ್ಯಾಪ್ತಿ, ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ನೀಡುವ ರಕ್ಷಣೆ, ಸಿವಿಲ್ ಪರಿಹಾರ ವ್ಯವಸ್ಥೆ ಹಾಗೂ ಸಂಸ್ಥಾತ್ಮಕ ಜಾರಿ ವ್ಯವಸ್ಥೆಗಳು ಸ್ಪಷ್ಟವಾಗಿ ಒಳಗೊಂಡಿರಬೇಕು. ಸಂಸ್ಥೆಗಳ ಒಳಗೆ ಸಮಾನತಾ ಸಮಿತಿಗಳನ್ನು ರಚಿಸುವುದರ ಜೊತೆಗೆ, ನ್ಯಾಯಾಂಗದ ಮೇಲ್ವಿಚಾರಣೆಯಡಿ ಕಾನೂನು ಪರಿಣಾಮಕಾರಿಯಾಗಿ ಜಾರಿಯಾಗುವಂತೆ ವ್ಯವಸ್ಥೆ ರೂಪಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.



















































