ಸರ್ ಸೈಯದ್ ಮುಹಮ್ಮದ್ ಸಾದುಲ್ಲಾ ಸ್ವತಂತ್ರ ಭಾರತವನ್ನು ರೂಪಿಸುವಲ್ಲಿ ಅಪಾರ ಕೊಡುಗೆ ನೀಡಿದ್ದರೂ, ಇತಿಹಾಸದ ಪುಟಗಳಲ್ಲಿ ಅಷ್ಟಾಗಿ ಗುರುತಿಸಲ್ಪಡದ ಭಾರತೀಯ ಮುಸ್ಲಿಂ ನಾಯಕರಲ್ಲಿ ಒಬ್ಬರು. ಡಾ. ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ ನೇತೃತ್ವದ ಭಾರತೀಯ ಸಂವಿಧಾನದ ಕರಡು ಸಮಿತಿಯಲ್ಲಿದ್ದ ಏಕೈಕ ಮುಸ್ಲಿಂ ಸದಸ್ಯ ಇವರಾಗಿದ್ದರು. ಸಂವಿಧಾನ ಕರಡು ಸಮಿತಿಯಲ್ಲಿ ಸಾದುಲ್ಲಾ ಅವರ ಪಾತ್ರದ ಬಗ್ಗೆ ಬೆಳಕು ಚೆಲ್ಲುವ ಮೊದಲು, ಭಾರತದ ಸಂವಿಧಾನವನ್ನು ಸಿದ್ಧಪಡಿಸಿದ ಸಂವಿಧಾನ ಸಭೆಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.


ಡಿಸೆಂಬರ್ 9, 1946 ರಂದು ಸಂವಿಧಾನ ಸಭೆಯನ್ನು ರಚಿಸಲಾಯಿತು. ಮುಸ್ಲಿಂ ಲೀಗ್ ಈ ಸಭೆಯನ್ನು ಬಹಿಷ್ಕರಿಸಿತ್ತು. ಡಾ. ರಾಜೇಂದ್ರ ಪ್ರಸಾದ್ ಅವರು ಅದರ ಅಧ್ಯಕ್ಷರಾಗಿ ಆಯ್ಕೆಯಾದರು. ಪ್ರಾರಂಭದಲ್ಲಿ ಇದು 389 ಸದಸ್ಯರನ್ನು ಹೊಂದಿತ್ತು, ವಿಭಜನೆಯ ನಂತರ ಈ ಸಂಖ್ಯೆ 299 ಕ್ಕೆ ಇಳಿಯಿತು. ಜನವರಿ 22, 1947 ರಂದು ಇದು ‘ಧ್ಯೇಯೋದ್ದೇಶಗಳ ನಿರ್ಣಯ’ವನ್ನು (Objectives Resolution) ಸರ್ವಾನುಮತದಿಂದ ಅಂಗೀಕರಿಸಿತು. ಅದೇ ವರ್ಷ ಜುಲೈ 22 ರಂದು ರಾಷ್ಟ್ರಧ್ವಜವನ್ನು ಅಂಗೀಕರಿಸಲಾಯಿತು ಮತ್ತು ಆಗಸ್ಟ್ 15, 1947 ರಂದು ದೇಶದ ವಿಭಜನೆಯೊಂದಿಗೆ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿತು. ಆಗಸ್ಟ್ 29, 1947 ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ಕರಡು ಸಮಿತಿಯನ್ನು ನೇಮಿಸಲಾಯಿತು. ಸಮಿತಿಯ ಇತರ ಸದಸ್ಯರೆಂದರೆ ಕೆ.ಎಂ. ಮುನ್ಶಿ, ಮುಹಮ್ಮದ್ ಸಾದುಲ್ಲಾ, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಗೋಪಾಲಸ್ವಾಮಿ ಅಯ್ಯಂಗಾರ್, ಎನ್. ಮಾಧವ ರಾವ್, ಡಿ.ಪಿ. ಖೇತಾನ್ ಮತ್ತು ಟಿ.ಟಿ. ಕೃಷ್ಣಮಾಚಾರಿ. ನವೆಂಬರ್ 22, 1949 ರಂದು ಸಂವಿಧಾನ ಸಭೆಯಲ್ಲಿ ‘ಭಾರತದ ಸಂವಿಧಾನ’ವನ್ನು ಅಂಗೀಕರಿಸಲಾಯಿತು ಮತ್ತು ಸಂವಿಧಾನ ಸಭೆಯ ಕೊನೆಯ ಅಧಿವೇಶನವು ಜನವರಿ 24, 1950 ರಂದು ನಡೆಯಿತು. 2 ವರ್ಷ, 11 ತಿಂಗಳು ಮತ್ತು 18 ದಿನಗಳ ನಂತರ, ಜನವರಿ 26, 1950 ರಂದು ‘ಭಾರತದ ಸಂವಿಧಾನ’ ಜಾರಿಗೆ ಬಂದಿತು.

ಯಾರು ಈ ಸರ್ ಸೈಯದ್ ಮುಹಮ್ಮದ್ ಸಾದುಲ್ಲಾ? :

ಅಸ್ಸಾಂನ ಧೀಮಂತ ನಾಯಕರಾಗಿದ್ದ ಸಾದುಲ್ಲಾ ಭಾರತದ ಸ್ವಾತಂತ್ರ್ಯ ಪೂರ್ವದ ರಾಜಕೀಯ ಇತಿಹಾಸದಲ್ಲಿ ಮತ್ತು ಸಂವಿಧಾನ ರಚನೆಯ ಪ್ರಕ್ರಿಯೆಯಲ್ಲಿ ಪ್ರಮುಖವಾಗಿ ಕೇಳಿಬರುವ ಹೆಸರು. ಬ್ರಿಟಿಷ್ ಭಾರತದಲ್ಲಿ ಅಸ್ಸಾಂ ಪ್ರಾಂತ್ಯದ ಮೊದಲ ಪ್ರಧಾನ ಮಂತ್ರಿಯಾಗಿದ್ದ ಇವರು, ಆಧುನಿಕ ಅಸ್ಸಾಂನ ನಿರ್ಮಾಣಕ್ಕೆ ಬುನಾದಿ ಹಾಕಿದವರು. ಸಮರ್ಥ ಸಂಸದೀಯ ಪಟು, ವಾಗ್ಮಿ, ಅನುಭವಿ ಆಡಳಿತಗಾರ ಮತ್ತು ಸೈದ್ಧಾಂತಿಕ ಮತ್ತು ಉದಾರವಾದಿ ನಾಯಕರಾಗಿದ್ದರು. ಮುಹಮ್ಮದ್ ಸಾದುಲ್ಲಾ ರವರು ತಮ್ಮ, ಪ್ರಾಮಾಣಿಕತೆ, ದಕ್ಷ ಆಡಳಿತ ಮತ್ತು ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದರು. ಭಾರತೀಯ ಇತಿಹಾಸ ಅವರನ್ನು ಶ್ರೇಷ್ಠ ವ್ಯಕ್ತಿಯಾಗಿ ಪರಿಗಣಿಸಲ್ಪಟ್ಟಿದೆ.

ಸೈಯದ್ ಮುಹಮ್ಮದ್ ಸಾದುಲ್ಲಾ ಅವರು ಮೇ 21, 1985 ರಂದು ಗುವಾಹಟಿಯ ಸಾಂಪ್ರದಾಯಿಕ ಅಸ್ಸಾಮಿ ಮುಸ್ಲಿಂ ಕುಟುಂಬದಲ್ಲಿ ಜನಿಸಿದರು. ಗುವಾಹಟಿಯ ಕಾಟನ್ ಕಾಲೇಜು ಮತ್ತು ಕಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಮುಗಿಸಿದ ನಂತರ 1910 ರಲ್ಲಿ ಲಖ್ಟಕಿಯಾದಲ್ಲಿ ಪ್ರಾಕ್ಟೀಸ್ ಆರಂಭಿಸಿದರು. ಬಳಿಕ ಗುವಾಹಟಿಯಲ್ಲಿ ಎಂ.ಎ, ಬಿಎಲ್, ವಕೀಲರಾಗಿ ತಮ್ಮ ವೃತ್ತಿಜೀವನ ಆರಂಭಿಸಿದರು. ಅದೇ ಸಮಯದಲ್ಲಿ ಕಚಾರಿಹತ್‌ನ ಸೈಯದ್ ಮುಹಮ್ಮದ್ ಸಾಲೀಹ್ ಅವರ ಹಿರಿಯ ಮಗಳನ್ನು ವಿವಾಹವಾದರು. ಕೇವಲ ಒಂದು ದಶಕದಲ್ಲಿ ಅಸ್ಸಾಂನ ಅತ್ಯಂತ ಪ್ರಸಿದ್ಧ ವಕೀಲರಾಗಿ ಬೆಳೆದ ಸಾದುಲ್ಲಾರವರು. ಪ್ರಾರಂಭದಲ್ಲಿ ಅಸ್ಸಾಂ ರಾಜಕೀಯದಿಂದ ನಿರಾಶೆಗೊಂಡ ಸಾದುಲ್ಲಾ, ಅನಾರೋಗ್ಯ ತಂದೆಯ ಅನುಮತಿಯ ಮೇರೆಗೆ 1922 ರಲ್ಲಿ ಕಲ್ಕತ್ತಾಗೆ ಸ್ಥಳಾಂತರ ಗೊಂಡರು. ಕಲ್ಕತ್ತವನ್ನು ಕರ್ಮಭೂಮಿಯಾಗಿ ಆಯ್ಕೆ ಮಾಡಿದರು. ಕಲ್ಕತ್ತಾ ಹೈಕೋರ್ಟ್‌ನಲ್ಲಿ ವಕೀಲ ವೃತ್ತಿ ಕೈಗೊಂಡು ಮತ್ತಷ್ಟು ಪ್ರಸಿದ್ಧಿ ಪಡೆದರು. ಸಮಕಾಲೀನರಾದ ಫಜ್ಲುಲ್ ಹಕ್, ನವಾಬ್ ಅತ್ತಾವುರ್ ರೆಹಮಾನ್ ಮತ್ತು ಬ್ಯಾರಿಸ್ಟರ್ ಖುದಾ ಬಕ್ಷ್ ರವರಿಗೆ ಸಮಾನರಾಗಿ ಬೆಳೆದರು.

ಅಸ್ಸಾಂ ಚೀಫ್ ಕಮಿಷನರ್ ಪ್ರಾಂತ್ಯವಾದ ಬಳಿಕ ವಕೀಲರಾಗಿ ತಮ್ಮ ಛಾಪು ಮೂಡಿಸಿದ ಸಾದುಲ್ಲಾ ರವರು ಮಂಡಳಿಯ ಚರ್ಚೆಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದರು ಮತ್ತು ಅಸ್ಸಾಂನ ಜನರ ಹಿತಾಸಕ್ತಿಯ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದರು. 1917ರ ಹೊತ್ತಿಗೆ ಗುವಾಹಟಿ ಪುರಸಭೆಯ ಅಧ್ಯಕ್ಷರಾದರು ಮತ್ತು ಶಿಲ್ಲಾಂಗ್‌ನಲ್ಲಿ ಶಾಸಕಾಂಗ ಮಂಡಳಿಯ ಸದಸ್ಯರಾಗಿ ನಾಮನಿರ್ದೇಶನಗೊಂಡರು. ಸಾದುಲ್ಲಾರವರು ಅಖಿಲ ಭಾರತ ಮುಸ್ಲಿಂ ಲೀಗ್‌ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಡಿಸೆಂಬರ್ 1917 ರಲ್ಲಿ ಕಲ್ಕತ್ತಾದಲ್ಲಿ ನಡೆದ ಲೀಗ್‌ನ 10 ನೇ ಅಧಿವೇಶನದಲ್ಲಿ ಭಾಗವಹಿಸಿದ್ದರು ಮತ್ತು ಮುಸ್ಲಿಂ ಲೀಗ್ ಹಾಗೂ ಕಾಂಗ್ರೆಸ್ ನಡುವಿನ ‘ಲಕ್ನೋ ಒಪ್ಪಂದ’ದ ಮಾತುಕತೆ ನಡೆಸಿದ ಸಮಿತಿಯ ಸದಸ್ಯರಾಗಿದ್ದರು.1919 ರಲ್ಲಿ ಅಸ್ಸಾಂ ಶಾಸನ ಸಭೆಯ ಸದಸ್ಯರಾಗಿ ಆಯ್ಕೆಯಾದ ಸಾದುಲ್ಲಾ ಅವರು, ಅಸ್ಸಾಂನ ಜನರ ಹಿತಾಸಕ್ತಿಗಳ ಪರವಾಗಿ ಸದಾ ಧ್ವನಿ ಎತ್ತುತ್ತಿದ್ದರು.
1922ರ ನವೆಂಬರ್ ತಂದೆ ಸೈಯದ್ ತಯ್ಯಬುಲ್ಲಾ ರವರು ಅಗಲಿಕೆಯಿಂದ ತುಂಬಾ ನೊಂದುಕೊಂಡರು. ಒಂದು ವರ್ಷದ ನಂತರ ಅವರು ಸುಧಾರಿತ ಶಾಸಕಾಂಗ ಮಂಡಳಿ ಚುನಾವಣೆಗೆ ಸ್ಪರ್ಧಿಸಲು ಮತ್ತೊಮ್ಮೆ ಅಸ್ಸಾಂಗೆ ಮರಳಿದರು ಬಹುಮತದೊಂದಿಗೆ ಆಯ್ಕೆಯಾದರು. 1924 ರಲ್ಲಿ ಅವರ ಪತ್ನಿ ಹೆರಿಗೆಯ ಸಮಯದಲ್ಲಿ ನಿಧನರಾದರು. ಈ ಆಘಾತ ಅವರನ್ನು ಆಳವಾಗಿ ಕಾಡಿತು ದುಃಖದಿಂದ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು. ಆ ಸಮಯದಲ್ಲಿ ಅವರು ಕೆಲಸ ಮತ್ತು ಮಕ್ಕಳ ಪಾಲನೆಗೆ ಹೆಚ್ಚಿನ ‌ಸಮಯ ಒದಗಿಸಿದರು.

ರಾಜಕೀಯದಲ್ಲಿ ಪ್ರಗತಿಯ ಹೆಜ್ಜೆಗಳನ್ನಿಟ್ಟ ಸಾದುಲ್ಲಾ 1924 ರಿಂದ 1934 ರವರೆಗೆ ಅಸ್ಸಾಂನ ಶಿಕ್ಷಣ ಮತ್ತು ಕೃಷಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅಸ್ಸಾಂನ ಶಿಕ್ಷಣ ಮತ್ತು ಕೃಷಿ ಕ್ಷೇತ್ರದ ಸುಧಾರಣೆಗೆ ಅವಿರತವಾಗಿ ಶ್ರಮಿಸಿದ ಅವರು ಬ್ರಿಟಿಷ್ ಭಾರತದಲ್ಲಿ ರಾಜಕೀಯವಾಗಿ ಹೆಚ್ಚು ಮೇಲ್ಮೈಯನ್ನು ಗಳಿಸಿದರು.
1937 ರಿಂದ 1946 ರ ನಡುವಿನ ಅವಧಿಯಲ್ಲಿ ಇವರು ಅಸ್ಸಾಂ ಪ್ರಾಂತ್ಯದ ಪ್ರಧಾನ ಮಂತ್ರಿಯಾಗಿ (Premier) ಕಾರ್ಯನಿರ್ವಹಿಸಿದರು. ಅಸ್ಸಾಮ್ ನ ಮೊದಲ ಪ್ರಧಾನ ಮಂತ್ರಿ ಎಂಬ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ.
ಈ ಸಮಯದಲ್ಲಿ ಭೂ ವಸಾಹತು ನೀತಿಯ ಮೂಲಕ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಶ್ರಮಿಸಿದರು. ಎರಡನೇ ಮಹಾಯುದ್ಧದ ಸಮಯದಲ್ಲಿ “ಹೆಚ್ಚು ಆಹಾರ ಬೆಳೆಯಿರಿ” ಎಂಬ ಕಾರ್ಯಕ್ರಮದ ಮೂಲಕ ಕೃಷಿ ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡಿದರು.

ವಿಭಜನೆಯ ಸಮಯದಲ್ಲಿ ಅಸ್ಸಾಂ ಪಾಕಿಸ್ತಾನದಿಂದ ಬೇರ್ಪಟ್ಟಾಗ, ಅವರು ಅಸ್ಸಾಂನಲ್ಲಿಯೇ ಉಳಿದರು. ಅಸ್ಸಾಂನ ಪ್ರಧಾನ ಮಂತ್ರಿಯಾಗಿ ಅವರು ಆಧುನಿಕ ಅಸ್ಸಾಂನ ನಿರ್ಮಾಣಕ್ಕೆ ಮಹತ್ತರ ಕೊಡುಗೆ ನೀಡಿದರು.
ಆದ್ದರಿಂದ ಸಾದುಲ್ಲಾರನ್ನು ಆಧುನಿಕ ಅಸ್ಸಾಂನ ಶಿಲ್ಪಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಅಸ್ಸಾಂ ಸರ್ಕಾರದ ಮುಖ್ಯಸ್ಥರಾಗಿ ಅವರು ಅನೇಕ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದರು. ಕೈಗಾರಿಕೆಗಳ ಉತ್ತೇಜನದಲ್ಲಿ ಅವರು ವಿಶೇಷ ಆಸಕ್ತಿ ವಹಿಸಿದ್ದರು. ಅಸ್ಸಾಂನಲ್ಲಿ ಕೃಷಿಯನ್ನು ಅಭಿವೃದ್ಧಿಪಡಿಸಲು ಮತ್ತು ಸೆಣಬಿನ ಕೃಷಿಯನ್ನು ಪರಿಚಯಿಸಲು ರೈತರಿಗೆ ಹಲವು ಯೋಜನೆಗಳನ್ನು ರೂಪಿಸಿದರು. ಈಶಾನ್ಯ ಪ್ರದೇಶದ ಬುಡಕಟ್ಟು ಜನರಿಗಾಗಿಯೂ ಕೆಲಸ ಮಾಡಿದರು ಮತ್ತು ತಮ್ಮ ಮೊದಲ ಸಂಪುಟದಲ್ಲಿ ಬುಡಕಟ್ಟು ನಾಯಕ ಜೆ.ಜೆ.ಎಂ. ನಿಕೋಲಸ್ ರಾಯ್ ಅವರನ್ನು ಸೇರಿಸಿಕೊಂಡಿದ್ದರು.

ಸಂವಿಧಾನ ರಚನೆಯಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. 1947 ರಲ್ಲಿ ಅಸ್ಸಾಂ ವಿಧಾನಸಭೆಯು ಸಾದುಲ್ಲಾ ಅವರನ್ನು ಭಾರತದ ಸಂವಿಧಾನ ಸಭೆಗೆ ಆಯ್ಕೆ ಮಾಡಿತು ಮತ್ತು ನಂತರ ಅವರನ್ನು ಕರಡು ಸಮಿತಿಗೆ ಆಯ್ಕೆ ಮಾಡಿತು. ಹೀಗಾಗಿ ಅವರು ಭಾರತ ಗಣರಾಜ್ಯದ ಸಂವಿಧಾನದ ತಯಾರಿಕೆಯಲ್ಲಿ ಸ್ಥಾನ ಪಡೆದ ಏಕೈಕ ಮುಸ್ಲಿಂ ಎಂಬ ಗೌರವ ಅವರಿಗೆ ಸಲ್ಲುತ್ತದೆ. ಭಾರತದ ಇತಿಹಾಸದಲ್ಲಿ ಸಾದುಲ್ಲಾ ಅವರ ಅತ್ಯಂತ ಮಹತ್ವದ ಕೊಡುಗೆಯೆಂದರೆ ಭಾರತದ ಸಂವಿಧಾನ ರಚನಾ ಸಭೆಯ ಸದಸ್ಯರಾಗಿ ಸಲ್ಲಿಸಿದ ಸೇವೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದ ಕರಡು ಸಮಿತಿಯ (Drafting Committee) ಸದಸ್ಯರಾಗಿದ್ದ ಏಕೈಕ ಮುಸ್ಲಿಂ ಪ್ರತಿನಿಧಿ ಇವರಾಗಿದ್ದರು. ಭಾರತದ ಸಂವಿಧಾನಕ್ಕೆ ಅಂತಿಮ ರೂಪ ನೀಡುವಲ್ಲಿ ಇವರು ಸಕ್ರಿಯವಾಗಿ ಪಾಲ್ಗೊಂಡಿದ್ದರು.

ಇವರ ಅಮೂಲ್ಯ ಸೇವೆ ಮತ್ತು ಆಡಳಿತಕ್ಕೆ ಅನೇಕ ಬಿರುದುಗಳು ಮತ್ತು ಗೌರವಗಳು ಲಭಿಸಿವೆ. ಇವರ ಶ್ರೇಷ್ಠ ಆಡಳಿತ ಮತ್ತು ಸಾರ್ವಜನಿಕ ಸೇವೆಯನ್ನು ಗುರುತಿಸಿ ಬ್ರಿಟಿಷ್ ಸರ್ಕಾರವು ಇವರಿಗೆ 1928 ರಲ್ಲಿ ನೈಟ್‌ಹುಡ್ (Knight) ಮತ್ತು 1946 ರಲ್ಲಿ KCIE (Knight Commander of the Order of the Indian Empire): ಎಂಬ ಉನ್ನತ ಗೌರವಕ್ಕೆ ಪಾತ್ರರಾದರು.

ಸಾದುಲ್ಲಾ ಅವರು ಕೇವಲ ರಾಜಕಾರಣಿಯಷ್ಟೇ ಅಲ್ಲದೆ, ಉತ್ತಮ ಕ್ರೀಡಾಪಟುವೂ ಆಗಿದ್ದರು. ಅವರು ಗುವಾಹಟಿಯ ಟೌನ್ ಕ್ಲಬ್ ಪರವಾಗಿ ಫುಟ್‌ಬಾಲ್ ಮತ್ತು ಕ್ರಿಕೆಟ್ ಆಡುತ್ತಿದ್ದರು. ಹಾಗೆಯೇ ಲಾನ್ ಟೆನಿಸ್ ಆಟದಲ್ಲೂ ಆಸಕ್ತಿ ಹೊಂದಿದ್ದರು.

1951ರ ಪ್ರಾರಂಭದಲ್ಲಿ ಅವರು ತೀವ್ರ ಅಸ್ವಸ್ಥಕ್ಕೊಳಗಾದರು. ಆ ಬಳಿಕ ಸಾರ್ವಜನಿಕ ಚಟುವಟಿಕೆಗಳಿಂದ ಹಿಂದೆ ಸರಿದರು. ಶಿಲ್ಲಾಂಗ್‌ನಲ್ಲಿ ಚಳಿಗಾಲ ಸಮೀಪಿಸುತ್ತಿದ್ದಂತೆ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿತು ಮತ್ತು ತೀವ್ರ ಶೀತ ಹವಾಮಾನದಿಂದ ತಪ್ಪಿಸಿಕೊಳ್ಳಲು ಅವರು ಬಯಲು ಪ್ರದೇಶಕ್ಕೆ ಹೋದರು ಆರೋಗ್ಯದಲ್ಲಿ ಸುಧಾರಣೆ ಕಾಣಲಿಲ್ಲ. ಜನವರಿ 8, 1955 ರಂದು ತಮ್ಮ ಜನ್ಮಸ್ಥಳವಾದ ಗುವಾಹಟಿಯಲ್ಲಿ ನಿಧನರಾದರು
ಆಧುನಿಕ ಅಸ್ಸಾಂನ ಶಿಲ್ಪಿಗಳಲ್ಲಿ ಒಬ್ಬರಾಗಿ ಮತ್ತು ಭಾರತೀಯ ಸಂವಿಧಾನದ ರಚನೆಯಲ್ಲಿ ಪ್ರಮುಖ ಪಾತ್ರಧಾರಿಯಾಗಿ ಸಾದುಲ್ಲಾ ಅವರ ಹೆಸರು ಭಾರತದ ಇತಿಹಾಸದಲ್ಲಿ ಚಿರಸ್ಥಾಯಿಯಾಗಿದೆ.

Previous articleSIR ಮ್ಯಾಪಿಂಗ್: ಮತದಾರರ ಹಕ್ಕುಗಳ ಮೇಲೆ ಮೌನ ದಾಳಿ?
Next articleಮುಖ್ಯ ಪಾತ್ರದ ಭ್ರಮೆ (Main Character Syndrome): ಅಹಂ ಮತ್ತು ಆತ್ಮದ ನಡುವಣ ಸಂಘರ್ಷ
ಎಂ. ಅಶೀರುದ್ದೀನ್ ಸಾರ್ತಬೈಲ್
ಮುಹಮ್ಮದ್ ಅತೀರುದ್ದೀನ್ ಸಾರ್ತಬೈಲ್ ವಿಭಿನ್ನ ಹಾಗೂ ಬಂಡಾಯ ಸ್ವರೂಪದ ಬರಹದಿಂದ ಗುರುತಿಸಿಕೊಂಡ ಲೇಖಕ. ಕಥೆ, ಲೇಖನ, ಕವನಗಳು ಹಲವು ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ. ಬ್ಯಾರಿ, ಕನ್ನಡ, ಮಲಯಾಳಂ, ಅರೇಬಿಕ್, ತುಳು, ಇಂಗ್ಲಿಷ್, ಉರ್ದು ಮತ್ತು ಹಿಂದಿ ಭಾಷೆಗಳಲ್ಲಿ ಹಿಡಿತವಿರುವ ಇವರು ಅನುವಾದಕರೂ ಹೌದು. ‘ಅಶೀರನ ಕವನಗಳು’ ಇವರ ಮೊದಲ ಕೃತಿ; ‘ಹನುಮಾನ್ ಕಟ್ಟೆಯ ಆಲದ ಮರ’ ಕಥೆ 2024ರ ಬುಕ್ ಬ್ರಹ್ಮ ಕಥಾ ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದಿದೆ. ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಸಾಹಿತ್ಯ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. 2019ರಲ್ಲಿ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ಪ್ರಬಂಧ ಮಂಡಿಸಿದ್ದು, ಪ್ರಸ್ತುತ ಮಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕರಾಗಿದ್ದಾರೆ.

LEAVE A REPLY

Please enter your comment!
Please enter your name here