-‌ ನಿಖಿಲ್ ಕೋಲ್ಪೆ

“ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಸಂದರೂ…ಅದಾಗಿಲ್ಲ, ಇದಾಗಿಲ್ಲ…” ಇದು ಇತ್ತೀಚಿನ ಕೆಲ ದಶಕಗಳಿಂದ ಸ್ವಾತಂತ್ಯೋತ್ಸವದಂದು ನಾವು ಮಾಮೂಲಿಯಾಗಿ ಕೇಳುತ್ತಾಬಂದಿರುವ ಭಾಷಣಗಳು! ಇಂದು ಸ್ವಾತಂತ್ರ್ಯ ದಿನಾಚರಣೆ ಕೇವಲ ಒಂದು ಸಾಂಕೇತಿಕ ಆಚರಣೆಯಾಗುತ್ತಿದೆಯೇ? ಶಾಲಾ, ಕಾಲೇಜು, ಕಚೇರಿಗಳಿಗೆ ರಜೆ, ಅವುಗಳೂ ಸೇರಿದಂತೆ ಹಲವೆಡೆ ಧ್ವಜಾರೋಹಣ, ಸಿಹಿತಿಂಡಿ ಹಂಚಿಕೆ, ಅದೇ ಅದೇ ಭಾಷಣಗಳು… ಇಷ್ಟಕ್ಕೇ ಸೀಮಿತವಾಗುತ್ತಿದೆಯೆ?! ಸ್ವಾತಂತ್ರ್ಯದ ಅರ್ಥವನ್ನು ನಾವು ಮರೆಯುತ್ತಿದ್ದೇವೆಯೇ? ನಮ್ಮ ದೇಶದ ಸಮಗ್ರತೆ ಮತ್ತು ವೈಯಕ್ತಿಕ, ಸಾಮುದಾಯಿಕ ಸ್ವಾತಂತ್ರ್ಯಗಳೇ ಅಪಾಯದಲ್ಲಿ ಇರುವ ಈ ಸಂದರ್ಭದಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಮತ್ತೊಮ್ಮೆ ಮರುನಿರೂಪಿಸಬೇಕಾದ ಅಗತ್ಯವಿದೆ.

ಮೂಲತಃ ಎಲ್ಲಾ ಪ್ರಾಣಿಗಳಂತೆ ನೈಸರ್ಗಿಕ ನಿಯಮಗಳಿಗೆ ಅಧೀನವಾಗಿ ಸ್ವತಂತ್ರನಾಗಿಯೇ ಹುಟ್ಟಿದ ಮಾನವ, ನಂತರ ಸಮಾಜ ಕಟ್ಟಿಕೊಂಡ ಮೇಲೆ ಒಂದು ವ್ಯವಸ್ಥೆಯ ಅಗತ್ಯಬಿತ್ತು. ಬುಡಕಟ್ಟು ವ್ಯವಸ್ಥೆ, ಪಾಳೇಗಾರಿ ರಾಜಪ್ರಭುತ್ವ ಇತ್ಯಾದಿಗಳನ್ನು ದಾಟಿ ಪ್ರಜಾಪ್ರಭುತ್ವದ ಹಂತವನ್ನು ಮುಟ್ಟಿರುವ ನಾವು ವ್ಯಕ್ತಿಸಮಾನತೆಯ ಪರಿಕಲ್ಪನೆಯನ್ನು ಬೆಳೆಸಿಕೊಂಡು ಬಂದಿದ್ದೇವೆ. ಹಾಗಾದರೆ ನಾವೀಗ ಸಮಾನತೆಯನ್ನು ಸಾಧಿಸಿದ್ದೇವೆಯೇ ಎಂದು ಕೇಳಿದರೆ ಉತ್ತರ ಬಹುಮಟ್ಟಿಗೆ ಇಲ್ಲ ಎಂಬುದೇ ಆಗಿದೆ.

ಸ್ವಾತಂತ್ರ್ಯದ ಆಯಾಮಗಳನ್ನು ನಾವು ಮೊದಲಿಗೆ ನಾವು ಪರಿಶೀಲಿಸಬೇಕಾಗಿದೆ. ಮೊದಲನೆಯದು ರಾಜಕೀಯ ಸ್ವಾತಂತ್ರ್ಯ ಅಂದರೆ ನಮ್ಮನ್ನು ನಾವೇ ಆಳಿಕೊಳ್ಳುವ ಸ್ವಾತಂತ್ರ್ಯ. ಸಂವಿಧಾನವು ನೀಡಿರುವ ಮತದಾನದ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯ ಇತ್ಯಾದಿಗಳ ಮೂಲಕ ನಾವು ಸ್ವಲ್ಪಮಟ್ಟಿಗೆ ನಾವಿದನ್ನು ಸಾಧಿಸಿದ್ದೇವೆ. ಆದರೆ, ಮಹಿಳೆಯರು ಸೇರಿದಂತೆ ಎಲ್ಲಾ ಜನವರ್ಗಗಳಿಗೆ ಆಡಳಿತದಲ್ಲಿ ಸೂಕ್ತ ಪ್ರಾತಿನಿಧ್ಯ ಸಿಕ್ಕಿದೆಯೇ ಎಂದು ಕೇಳಿದರೆ ಉತ್ತರ ಇಲ್ಲ ಎಂದೇ ಹೇಳಬೇಕಾಗಿದೆ. ಇದು ಪ್ರಜಾಪ್ರಭುತ್ವದ ಮಿತಿ ಕೂಡಾ.

ಎರಡನೆಯದು ಸಾಮಾಜಿಕ ಸ್ವಾತಂತ್ರ್ಯ. ಸಂವಿಧಾನವು ಎಲ್ಲರನ್ನು ಸಮಾನವೆಂದು ಸಾರಿದ್ದರೂ, ವಾಸ್ತವದಲ್ಲಿ ನಾವದನ್ನು ಸಾಧಿಸುವಲ್ಲಿ ಬಹುತೇಕ ವಿಫಲರಾಗಿದ್ದೇವೆ. ಇಂದು ನಾವು ಜಾತಿ, ಧರ್ಮ, ಲಿಂಗಾಧರಿತ ತಾರತಮ್ಯದಲ್ಲಿ ನಲುಗುತ್ತಿದ್ದೇವೆ. ಇದನ್ನು ಮುಂದೆ ನೋಡೋಣ.

ಮೂರನೆಯದು ಆರ್ಥಿಕ ಸ್ವಾತಂತ್ರ್ಯ. ಹಾಗೆ ನೋಡಿದರೆ ಉಳಿದೆಲ್ಲಾ ಸ್ವಾತಂತ್ರ್ಯಗಳು ಎಲ್ಲಾ ರೀತಿಯಲ್ಲಿ ಇದಕ್ಕೆ ತಳಕುಹಾಕಿಕೊಂಡಿವೆ. ಆರ್ಥಿಕ ಸ್ವಾತಂತ್ರ್ಯ ಎಂದರೆ, ಸ್ವಾಭಿಮಾನದಿಂದ ತಿಂದುಂಡು ಬದುಕುವ ಸ್ವಾತಂತ್ರ್ಯ. ಇದರ ನಿಯಂತ್ರಣಕ್ಕಾಗಿಯೇ ಎಲ್ಲಾ ಪ್ರಭುತ್ವಗಳು ಹವಣಿಸುತ್ತವೆ. ಉಳಿದಂತೆ ಮಹಿಳಾ ಸ್ವಾತಂತ್ರ್ಯ ಇತ್ಯಾದಿಯಾಗಿ ಎಲ್ಲಾ ಸ್ವಾತಂತ್ರ್ಯಗಳು ಈ ಮೂರಕ್ಕೆ ತಳಕುಹಾಕಿಕೊಂಡಿವೆ.

ಸರಿ! ಈಗ ನಾವು ಆಚರಿಸುತ್ತಿರುವುದು ಯಾವ ಸ್ವಾತಂತ್ರ್ಯವನ್ನು?! ನಾವೀಗ ಅಚರಿಸುತ್ತಿರುವುದು 1947ರಲ್ಲಿ ದಮನಕಾರಿ, ಲೂಟಿಕೋರ ಬ್ರಿಟಿಷರಿಂದ ಪಡೆದ ರಾಜಕೀಯ ಸ್ವಾತಂತ್ರ್ಯವನ್ನು! ಅದಕ್ಕೆ ಮುಂಚಿತವಾಗಿ ನಾವು ಸ್ವತಂತ್ರರಾಗಿದ್ದೆವೆ?! ಖಂಡಿತವಾಗಿಯೂ ಇಲ್ಲ! ಬ್ರಿಟಿಷರಿಗಿಂತ ದಮನಕಾರಿಗಳೂ, ಕ್ರೂರಿಗಳೂ ಆಗಿದ್ದ ರಾಜರ ಪ್ರಭುತ್ವದ ಅಡಿಯಲ್ಲಿ ಬಹುತೇಕ ಜನರು ನಲುಗುತ್ತಿದ್ದರು.

ನಮ್ಮ ಸ್ವಾತಂತ್ರ್ಯ ಹೋರಾಟ ಆರಂಭವಾದದ್ದು ಇಂತಹ ಆಳುವ ವರ್ಗಗಳು ತಮ್ಮಿಂದ ಅಧಿಕಾರ ಕಸಿದುಕೊಂಡ ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟಗಳಿಂದ. ಅವರಿಗೆ ಬ್ರಿಟಿಷರಿಂದ ತಮ್ಮ ಸ್ವಾತಂತ್ಯ ಪಡೆಯಬೇಕಾಗಿತ್ತೇ ಹೊರತು ಆ ಸ್ವಾತಂತ್ರ್ಯವನ್ನು ಜನಸಾಮಾನ್ಯರಿಗೆ ವರ್ಗಾಯಿಸುವ ಯಾವ ಉದ್ದೇಶವೂ ಇರಲಿಲ್ಲ! ಜೊತೆಗೆ ಜನಸಾಮಾನ್ಯರೂ, ಆದಿವಾಸಿಗಳೂ ತಮ್ಮ ಶೋಷಣೆಯ ವಿರುದ್ದ ನಡೆಸಿದ ಅನೇಕ ಹೋರಾಟಗಳು ಇದ್ದವು. ಹಿಂದೂ-ಮುಸ್ಲಿಂ ಸಾಧು-ಫಕೀರರು ಕೆಲವು ವರ್ಷಗಳ ಕಾಲ ನಡೆಸಿದ ಹೋರಾಟ, ಕೇವಲ ಬಿಲ್ಲುಬಾಣಗಳನ್ನು ಹಿಡಿದುಕೊಂಡು ಸಂತಾಲ್ ಆದಿವಾಸಿಗಳು ನಡೆಸಿದ ಹೋರಾಟಗಳು, ಭಿಲ್ ಬಂಡಾಯ, ಹೀಗೆ ಹಲವನ್ನು ಹೆಸರಿಸಬಹುದು. ನಮ್ಮದೇ ಜಿಲ್ಲೆಯಲ್ಲಿ ಅಮರಸುಳ್ಯ ದಂಗೆ ಇಂತವುಗಳಲ್ಲಿ ಒಂದು.

ನಂತರ ರಾಷ್ಟ್ರೀಯತೆಯ ಪರಿಕಲ್ಪನೆ ಮೂಡಿಬಂದಾಗ ಕಾಂಗ್ರೆಸ್ ಕಮ್ಯುನಿಸ್ಟರ ನೇತೃತ್ವದಲ್ಲಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟಗಳು ನಡೆದವು. ಇವೆಲ್ಲ ಮುಖ್ಯವಾಗಿ ರಾಜಕೀಯ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟಗಳು. ಗಾಂಧೀಜಿ ಇದರ ಪ್ರಮುಖ ನೇತೃತ್ವ ವಹಿಸಿದ್ದರು.

ಹಾಗಾದರೆ, ಸಾಮಾಜಿಕ ಸ್ವಾತಂತ್ರ್ಯದ ಗತಿಯೇನು? ಕೆಲವು ವರ್ಗಗಳು ಎಲ್ಲಾ ಪ್ರಭುತ್ವಗಳಲ್ಲಿಯೂ ಸುಖವಾಗಿದ್ದರೆ, ಬಹುಜನರು ಶತಮಾನಗಳಿಂದ ತುಳಿತಕ್ಕೊಳಗಾದ, ಅಸಮಾನತೆ- ಕ್ರೌರ್ಯಗಳಿಗೆ ಗುರಿಯಾದ ಜನರ ಪಾಡೇನು? ಅವರ ಉದ್ಧಾರ ಮತ್ತು ಬಿಡುಗಡೆಗಾಗಿ ಸಮಾನಾಂತರ ಹೋರಾಟವೊಂದು ನಡೆಯುತ್ತಿತ್ತು. ಇದರ ನೇತೃತ್ವ ವಹಿಸಿದವರಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪ್ರಮುಖರು.

ಗಾಂಧೀಜಿ ರಾಜಕೀಯ ಸ್ವಾತಂತ್ರ್ಯದ ಮೂಲಕ ರಾಜಕೀಯ ಸ್ವಾತಂತ್ರ್ಯವನ್ನು ಪಡೆಯಲು ಉದ್ದೇಶಿಸಿದರೆ, ಅಂಬೇಡ್ಕರ್ ಅವರು ಸಾಮಾಜಿಕ ಸ್ವಾತಂತ್ರ್ಯದ ಮೂಲಕ ರಾಜಕೀಯ ಸ್ವಾತಂತ್ರ್ಯವನ್ನು ಪಡೆಯಲು ಬಯಸಿದ್ದರು. ಇವು ಮೇಲ್ನೋಟಕ್ಕೆ ತದ್ವಿರುದ್ಧವಾಗಿ ಕಂಡರೂ ಇಬ್ಬರ ಅಂತಿಮ ಗುರಿ ಒಂದೇ ಆಗಿತ್ತು! ಹೀಗಿದ್ದರೂ, ಈಗ ಕೆಲವು ಸ್ಥಾಪಿತ ಹಿತಾಸಕ್ತಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಅವರಿಬ್ಬರನ್ನು ಬದ್ಧ ವೈರಿಗಳೆಂಬಂತೆ ಬಿಂಬಿಸುತ್ತಿದ್ದಾರೆ.

ಇದೀಗ ಬ್ರಿಟಿಷರು ಹೋದರೂ, ಅವರಿಬ್ಬರ ಅಂತಿಮ ಉದ್ದೇಶ ಪೂರ್ಣವಾಗಿ ಈಡೇರಿದೆಯೆ ಎಂದರೆ, ಅದಕ್ಕೆ ಉತ್ತರ ಇಲ್ಲ ಎಂಬುದೇ ಅಗಿದೆ. ಅಭಿವೃದ್ಧಿ ಬಹಳಷ್ಟು ಆಗಿದೆ! ಇದನ್ನು ಅಲ್ಲಗೆಳೆಯಲು ಮೂರ್ಖರಿಂದ ಮಾತ್ರ ಸಾಧ್ಯ. ದೇಶ ಬಹಳಷ್ಟು ಪ್ರಗತಿ ಸಾಧನೆ ಮಾಡಿದೆ. ಆದರೆ ಇದರ ಫಲ ತಳಮಟ್ಟದ ಜನರನ್ನು ತಲುಪಿದೆಯೇ?!

ಇಂದು ನಾವು ಯಾವ ಹಂತ ತಲುಪಿದ್ದೇವೆ? ಧರ್ಮದ ಹೆಸರಿನಲ್ಲಿ ಕೋಮುವಾದಿ ರಾಜಕಾರಣ ನಡೆಯುತ್ತಿದೆ. ಅಲ್ಪಸಂಖ್ಯಾತರ, ದಲಿತರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಇದಕ್ಕೆ ಪ್ರತಿಯಾಗಿ ಅಲ್ಪಸಂಖ್ಯಾತರಲ್ಲಿ ಕೆಲವೇ ಮೂರ್ಖರು ಭಯೋತ್ಪಾದನೆ, ದೇಶದ್ರೋಹದ ಕೆಲಸಗಳಲ್ಲಿ ತೊಡಗಿದ್ದಾರೆ. ಒಟ್ಟಿನಲ್ಲಿ ಅಸಹಿಷ್ಣುತೆ ಮಿತಿ ಮೀರುತ್ತಿದೆ. ಸಮಾಜದ ವಿಭಜನೆ ನಿರಂತರವಾಗಿ ನಡೆಯುತ್ತಿದೆ. ಇದು ದೇಶದ ಏಕತೆಗೆ ಮಾರಕವಾಗಿ ಪರಿಣಮಿಸಬಹುದು.

ಇತ್ತೀಚಿನ ಕೆಲವು ಬೆಳವಣಿಗೆಗಳು ಆತಂತಕಾರಿ‌. ಹಿಂದೂ ಧರ್ಮದ ಹೆಸರಿನಲ್ಲಿ ಮೇಲ್ವರ್ಗದ ಆಡಳಿತವನ್ನು ಬಲಾತ್ಕಾರ ಮತ್ತು ಕುಟಿಲ ತಂತ್ರಗಳ ಮೂಲಕ ಹೇರುವ ಪ್ರಯತ್ನ ನಡೆಯುತ್ತಿದೆ. ಕ್ಷುಲ್ಲಕ ಕಾರಣಗಳಿಗಾಗಿ ಮುಸ್ಲಿಮರನ್ನು ಹೊಡೆದುಕೊಲ್ಲುವ- ಕುದುರೆ ಮೇಲೆ ಕುಳಿತರು, ಶೂ ಧರಿಸಿದರು, ನೃತ್ಯ ಮಾಡಿದರು ಇತ್ಯಾದಿ ಕ್ಷುಲ್ಲಕ ಕಾರಣಗಳಿಗಾಗಿ ಹೊಡೆದುಕೊಲ್ಲುವ ಘಟನೆಗಳು ಹೆಚ್ಚಾಗುತ್ತಿವೆ. ಧ್ವನಿ ಎತ್ತಿದವರ ಬಾಯಿ ಮುಚ್ಚಿಸುವ, ದೇಶದ್ರೋಹದ ಪಟ್ಟಕಟ್ಟುವ, ಕೊಲೆ ಮಾಡುವ ಪರಿಪಾಠ ಹೆಚ್ಚಾಗಿದೆ. ವ್ಯಕ್ತಿ ಪೂಜೆ ಬೆಳೆಯುತ್ತಿದೆ ಸರ್ವಾಧಿಕಾರದ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಸಂಪತ್ತು ಕೆಲವೇ ಶ್ರೀಮಂತರ ಪಾಲಾಗುತ್ತಿದೆ. ಪ್ರಭುತ್ವ ಅವರ ಅಡಿಯಾಳಿನಂತೆ ವರ್ತಿಸುತ್ತಿದೆ. ಸುಳ್ಳಿನ ಬೆತ್ತಲೆ ನೃತ್ಯ ನಡೆಯುತ್ತಿದೆ.

ಇದಕ್ಕೆ ಕಲಶ ಇಟ್ಟಂತೆ ಇತ್ತೀಚೆಗೆ ದೇಶದ ಪ್ರಜಾಪ್ರಭುತ್ವಕ್ಕೆ ಆಧಾರವಾದ ಸಂವಿಧಾನವನ್ನೇ ಸುಡಲಾಗಿದೆ! ಈ ಹಿನ್ನೆಲೆಯಲ್ಲಿ ನಮ್ಮ ಇರುವ ಸ್ವಾತಂತ್ರ್ಯವನ್ನು ಆಚರಿಸುವುದರ ಜೊತೆಗೆಯೇ ಅದನ್ನು ಉಳಿಸುವ ಪ್ರಯತ್ನವನ್ನು ನಾವು ಮಾಡಬೇಕಾಗಿದೆ!

LEAVE A REPLY

Please enter your comment!
Please enter your name here