ಮಾನವ ಇತಿಹಾಸದಲ್ಲಿ ಪ್ರತಿಯೊಂದು ಸಮುದಾಯವೂ ಮಾನವನ ಜೀವನವನ್ನು ಶುದ್ದೀಕರಿಸಲು ಹಲವು ನಿಯಮಗಳು ಮತ್ತು ತರಬೇತಿ ವಿಧಾನಗಳನ್ನು ಅಳವಡಿಸಿಕೊಂಡಿದೆ. ಕೆಲವೆಡೆ ಧ್ಯಾನ ಇದ್ದರೆ ಇನ್ನೂ ಕೆಲವು ಕಡೆ ಯೋಗ ಇದೆ, ಇನ್ನೂ ಇನ್ನೂ ಕೆಲವೆಡೆ ಇತರೆ ನಿಯಮ ಮತ್ತು ಆತ್ಮಸಂಯಮದ ಅಭ್ಯಾಸಗಳಿವೆ. ಇಸ್ಲಾಂ ಧರ್ಮವು ಮನುಷ್ಯನ ನೈತಿಕ ತರಬೇತಿಗಾಗಿ ಅತ್ಯಂತ ಪರಿಣಾಮಕಾರಿ ವ್ಯವಸ್ಥೆಯನ್ನು ನೀಡಿದೆ; ಅದನ್ನು “ಉಪವಾಸ (ರೋಝ)” ಎಂದು ಕರೆಯಲಾಗುತ್ತದೆ. ಮೇಲ್ನೋಟಕ್ಕೆ ಇದು ಕೆಲವು ಗಂಟೆಗಳ ಹಸಿವು-ಬಾಯಾರಿಕೆಯಂತೆ ಕಾಣಬಹುದು, ಆದರೆ ವಾಸ್ತವದಲ್ಲಿ ಇದು ಮನುಷ್ಯನ ಸ್ವಭಾವ, ಸಮಾಜ ಮತ್ತು ಪರಸ್ಪರ ಸಂಬಂಧಗಳನ್ನು ಸುಧಾರಿಸುವ ಸಂಪೂರ್ಣ ತರಬೇತಿಯಾಗಿದೆ.
ರಮಝಾನ್ ಮತ್ತು ಉಪವಾಸದ ಅರ್ಥ
ರಮಝಾನ್ ತಿಂಗಳು ಆರಂಭವಾಗುತ್ತಿದ್ದಂತೆ ವಿಶ್ವದಾದ್ಯಂತ ಮುಸ್ಲಿಮರು ಬೆಳಗಿನ ಮುಂಜಾವಿನಿಂದ ಸೂರ್ಯಾಸ್ತಮದವರೆಗೆ ಆಹಾರ, ಪಾನೀಯ ಮತ್ತು ಇಚ್ಛೆಗಳ ನಿಯಂತ್ರಣದಲ್ಲಿರುತ್ತಾರೆ. ಸಾಮಾನ್ಯವಾಗಿ ಇತರ ಧರ್ಮದ ಸಹೋದರರ ಮನದಲ್ಲಿ ಪ್ರಶ್ನೆ ಮೂಡುತ್ತದೆ — ಮುಸ್ಲಿಮರು ಉಪವಾಸ ಯಾಕೆ ಇಡುತ್ತಾರೆ? ಇದು ಕೇವಲ ಹಸಿವು-ಬಾಯಾರಿಕೆ ತಾಳುವುದಕ್ಕಾಗಿಯೋ? ಅಥವಾ ಇದರ ಹಿಂದೆ ಯಾವುದಾದರೂ ಆಳವಾದ ಉದ್ದೇಶವಿದೆಯೇ? ವಾಸ್ತವವಾಗಿ ಉಪವಾಸ ಒಂದು ಕೇವಲ ಧಾರ್ಮಿಕ ಆಚರಣೆ ಅಲ್ಲ; ಇದು ನೈತಿಕ ಮತ್ತು ಮಾನವೀಯ ತರಬೇತಿಯ ವ್ಯವಸ್ಥೆ, ಇದರ ಪರಿಣಾಮ ವ್ಯಕ್ತಿಯಿಂದ ಸಮಾಜದವರೆಗೆ ತಲುಪುತ್ತದೆ.
ಉಪವಾಸದ ಕಡ್ಡಾಯತೆ
ಇಸ್ಲಾಂನಲ್ಲಿ ಉಪವಾಸ ಮೂಲಭೂತ ಕೃತ್ಯಗಳಲ್ಲಿ ಒಂದಾಗಿದೆ. ಪವಿತ್ರ ಕುರಾನ್ ಹೇಳುತ್ತದೆ:
“ಓ ಸತ್ಯವಿಶ್ವಾಸಿಗಳೇ, ಗತ ಪ್ರವಾದಿಗಳ ಅನುಯಾಯಿಗಳಿಗೆ ಕಡ್ಡಾಯಗೊಳಿಸಿದ್ದಂತೆಯೇ ನಿಮ್ಮ ಮೇಲೂ ಉಪವಾಸ ವ್ರತವನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ನಿಮ್ಮಲ್ಲಿ ಧರ್ಮನಿಷ್ಠೆಯ ಗುಣವಿಶೇಷವುಂಟಾಗುವುದೆಂದು ಆಶಿಸಲಾಗಿದೆ.”
ಈ ವಾಕ್ಯದಿಂದ ಎರಡು ವಿಷಯಗಳು ಸ್ಪಷ್ಟವಾಗುತ್ತವೆ:
ಮೊದಲನೆಯದಾಗಿ- ‘ಉಪವಾಸವು ಕೇವಲ ಮುಸ್ಲಿಮರಿಗೆ ಮಾತ್ರ ಸೀಮಿತವಲ್ಲ; ಹಿಂದಿನ ಸಮುದಾಯಗಳಲ್ಲಿಯೂ ಕಡ್ಡಾಯಗೊಳಿಸಲಾಗುತ್ತು,’
ಎರಡನೆಯದಾಗಿ- ‘ಈ ಉಪವಾಸದ ಉದ್ದೇಶ ಕೇವಲ ಹಸಿವು ತಾಳುವುದು ಅಲ್ಲ, ಆದರೆ ಮಾನವನಲ್ಲಿ ತಕ್ವಾ (ಸ್ವನಿಯಂತ್ರಣ ಮತ್ತು ದೇವಭೀತಿ) ಉಂಟುಮಾಡುವುದು.’
ಉಪವಾಸದ (ತಾತ್ಪರ್ಯ (ಹಿಕ್ಮತ್)
ಉಪವಾಸ ಮನುಷ್ಯನಿಗೆ ಒಂದು ರೀತಿಯ “ಸ್ವಾತಂತ್ರ್ಯ” ಕಲಿಸುತ್ತದೆ-ಆದರೆ ಆಸೆಗಳಿಂದ ಸ್ವಾತಂತ್ರ್ಯ. ಸಾಮಾನ್ಯವಾಗಿ ಮಾನವನಿಗೆ ಯಾವಾಗ ಬೇಕಾದರೂ ತಿನ್ನುವ-ಕುಡಿಯುವ ಅವಕಾಶ ಇರುತ್ತದೆ; ಆದರೆ ಉಪವಾಸದಲ್ಲಿ ಅವನು ತನ್ನ ಹಕ್ಕಿನ ಅಗತ್ಯಗಳನ್ನೂ ದೇವರ ಆದೇಶಕ್ಕಾಗಿ ತ್ಯಜಿಸುತ್ತಾನೆ. ಇದರಿಂದ ಮೂರು ಮುಖ್ಯ ಗುಣಗಳು ಬೆಳೆಸಲ್ಪಡುತ್ತವೆ:
1- ಆತ್ಮನಿಯಂತ್ರಣ (Self-Control):
ನೀರಿರುವಾಗಲೂ ಕುಡಿಯದೆ ಇರುವವನು ತನ್ನ ಮನಸ್ಸನ್ನು ನಿಯಂತ್ರಿಸಲು ಕಲಿಯುತ್ತಾನೆ; ಇದು ಅವನನ್ನು ತಪ್ಪುಗಳಿಂದ ದೂರ ಇಡುತ್ತದೆ.
2- ಹೊಣೆಗಾರಿಕೆಯ ಭಾವನೆ:
ಮಾನವನು ಒಬ್ಬನೇ ಇಲ್ಲ, ಒಬ್ಬ ಉನ್ನತ ಶಕ್ತಿ ತನ್ನನ್ನು ನೋಡುತ್ತಿದೆ ಎಂಬ ಅರಿವು ಮೂಡುತ್ತದೆ; ಇದು ಅವನನ್ನು ಪ್ರಾಮಾಣಿಕನನ್ನಾಗಿ ಮಾಡುತ್ತದೆ.
3- ಕೃತಜ್ಞತೆ:
ಹಸಿವು-ಬಾಯಾರಿಕೆ ಅನುಭವಿಸಿದ ನಂತರ ಸಾಮಾನ್ಯ ಆಹಾರವೂ ಅಮೂಲ್ಯವಾಗಿ ಕಾಣುತ್ತದೆ; ಮಾನವನು ಕೃತಜ್ಞತೆಯನ್ನು ಕಲಿಯುತ್ತಾನೆ.
ಮಾನವ ಸಮಾಜದ ಮೇಲೆ ಪರಿಣಾಮ
ಉಪವಾಸವು ಕೇವಲ ವ್ಯಕ್ತಿಯನ್ನು ಮಾತ್ರವಲ್ಲ, ಸಮಾಜವನ್ನೇ ಸುಧಾರಿಸುತ್ತದೆ.
1- ಬಡವರ ಅರಿವು
ಹಸಿವಿನ ಅನುಭವದಿಂದ ಬಡವರ ನೋವು ತಿಳಿಯುತ್ತದೆ; ಆದ್ದರಿಂದ ರಮಝಾನ್ ತಿಂಗಳಲ್ಲಿ ದಾನ-ಧರ್ಮ ಹೆಚ್ಚಾಗುತ್ತದೆ.
2- ಅಪರಾಧದಲ್ಲಿ ಕಡಿತ
ಮಾನವರು ಸುಳ್ಳು, ಮೋಸ ಮತ್ತು ಅನ್ಯಾಯವನ್ನು ಬಿಡಲು ಪ್ರಯತ್ನಿಸುವಾಗ ಸಮಾಜದಲ್ಲಿ ಶಾಂತಿ ಹೆಚ್ಚುತ್ತದೆ. ಉಪವಾಸವು ಕೇವಲ ಆಹಾರದಿಂದ ಮಾತ್ರವಲ್ಲ, ಕೆಟ್ಟ ನಡೆಗಳಿಂದಲೂ ದೂರ ಇಡುತ್ತದೆ.
3- ಸಮಾನತೆ ಮತ್ತು ಸಹೋದರತ್ವ
ಶ್ರೀಮಂತ-ಬಡ ಎಲ್ಲರೂ ಒಂದೇ ಸಮಯದಲ್ಲಿ ಉಪವಾಸ ಇಟ್ಟು ಒಂದೇ ಸಮಯದಲ್ಲಿ ಉಪವಾಸ ಅಂತ್ಯಗೊಳಿಸುತ್ತಾರೆ; ಇದರಿಂದ ವರ್ಗಭೇದ ಕಡಿಮೆಯಾಗುತ್ತದೆ ಮತ್ತು ಸಹೋದರತ್ವ ಬೆಳೆದು ಬರುತ್ತದೆ.
4- ಕುಟುಂಬ ಮತ್ತು ಸಾಮಾಜಿಕ ಸಂಬಂಧಗಳು
ಇಫ್ತಾರ್ ಮತ್ತು ಸಹರಿ ಸಮಾರಂಭಗಳು ಸಂಬಂಧಗಳನ್ನು ಬಲಪಡಿಸುತ್ತವೆ; ಜನರು ಒಬ್ಬರಿಗೊಬ್ಬರು ಆಹಾರ ಹಂಚಿಕೊಳ್ಳುತ್ತಾರೆ ಮತ್ತು ಮನಸ್ತಾಪಗಳು ದೂರವಾಗುತ್ತವೆ.
ಕೊನೆಯ ಮಾತು
ಉಪವಾಸವು ಮನುಷ್ಯನನ್ನು ಕೇವಲ ಧಾರ್ಮಿಕನನ್ನಾಗಿ ಮಾತ್ರವಲ್ಲ, ಒಳ್ಳೆಯ ನಾಗರಿಕನನ್ನಾಗಿಯೂ ರೂಪಿಸುತ್ತದೆ. ಇದು ಸಹನೆ, ನಿಯಮ ಪಾಲನೆ ಮತ್ತು ಪರರ ಹಕ್ಕುಗಳ ಗೌರವವನ್ನು ಕಲಿಸುತ್ತದೆ. ಉಪವಾಸ ಇಟ್ಟುಕೊಂಡು ಕೂಡ ಸುಳ್ಳು ಮತ್ತು ಅನ್ಯಾಯವನ್ನು ಬಿಡದಿದ್ದರೆ, ಅವನು ಉಪವಾಸದ ನಿಜವಾದ ಆತ್ಮವನ್ನು ಪಡೆಯಲಿಲ್ಲ ಎಂದರ್ಥ.
ಹೀಗಾಗಿ ರಮಝಾನ್ ತಿಂಗಳ ಸಂದೇಶ ಕೇವಲ ಮುಸ್ಲಿಮರಿಗೆ ಮಾತ್ರ ಸೀಮಿತವಲ್ಲ; ಅದು ಸಂಪೂರ್ಣ ಮಾನವಕುಲಕ್ಕಾಗಿ ಆಗಿರುತ್ತದೆ, ಅದೇ ರೀತಿ ಮನುಷ್ಯನು ತನ್ನ ಆಸೆಗಳ ದಾಸನಾಗದೆ, ನೈತಿಕತೆ, ಸಹಾನುಭೂತಿ ಮತ್ತು ನ್ಯಾಯದೊಂದಿಗೆ ಜೀವನ ನಡೆಸಬೇಕು ಎಂಬುದೇ ಉಪವಾಸದ ನಿಜವಾದ ಜಾಗತಿಕ ಸಂದೇಶ.


















































