ತಲ್ಹಾ ಇಸ್ಮಾಯಿಲ್ ಕೆ.ಪಿ
ಟ್ರಸ್ಟಿ, ಸೆಂಟರ್ ಫಾರ್ ಎಜುಕೇಶನಲ್ ರಿಸರ್ಚ್ ಆ್ಯಂಡ್ ಅನಾಲಿಸೀಸ್

ಸರಕಾರಿ ಶಾಲೆಗಳ ಸಬಲೀಕರಣ ಸಮಿತಿ ವರದಿ 2017ವು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರೋ.ಎಸ್.ಜಿ ಸಿದ್ಧರಾಮಯ್ಯ ರವರ ಅಧ್ಯಕ್ಷೆತೆಯಲ್ಲಿ ರಚಿಸಲಾದ ಒಂದು ಅತೀ ಪ್ರಮುಖ ವರದಿಯಾಗಿದೆ. ಈ ಅಧ್ಯಯನವು ರಾಜ್ಯದ ಸರಕಾರಿ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯ ವಾಸ್ತವಾಂಶವನ್ನು ಸಮಾಜದ ಮುಂದೆ ತೆರೆದಿಟ್ಟಿದೆ. ಈ ವರದಿಯಲ್ಲಿ ರಾಜ್ಯ ಸರಕಾರಕ್ಕೆ 21 ಶಿಫಾರಸ್ಸುಗಳು ಮಾಡಲಾಗಿದೆ. ಪ್ರಥಮ ಶಿಫಾರಸ್ಸು-

ಮಕ್ಕಳ ಜೀವ ರಕ್ಷಣೆಯ ದೃಷ್ಟಿಯಿಂದ ಹಾಗು ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ನಿರಾಳವಾಗಿ ಕಳುಹಿಸುವ ವಾತಾವರಣ ಸೃಷ್ಟಿಯ ಅಗತ್ಯತೆಯಿಂದ, ದುಸ್ಥಿತಿಯಲ್ಲಿರುವ ಎಲ್ಲಾ ಶಾಲಾ ಕೊಠಡಿಗಳನ್ನು ತುರ್ತಾಗಿ ನವೀಕರಣಗೊಳಿಸಬೇಕು ಮತ್ತು ಸರ್ಕಾರಿ ಶಾಳೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ತಕ್ಷಣ ತುರ್ತು ಕ್ರಮ ವಹಿಸಬೇಕು. ಸರ್ಕಾರಿ ಶಾಲೆಗಳನ್ನು ಮುಚ್ಚುವ, ವಿಲೀನ ಮಾಡುವ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಿ ಮುಚ್ಚಿರುವ ಎಲ್ಲಾ ಸರ್ಕಾರಿ ಶಾಲೆಗಳನ್ನು ಪುನಃ ತೆರೆಯಲು ಕ್ರಮ ಕೈಗೊಳ್ಳಬೇಕು.

ಈ ಶಿಫಾರಸ್ಸಿನ ಕೆಲವೊಂದು ಅಂಶಗಳನ್ನು ಜನ ಸಾಮಾನ್ಯರು ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು ಅಗತ್ಯವೆಂದು ನಾನು ಭಾವಿಸುತ್ತೇನೆ.

ಕೊಠಡಿಗಳ ದುಸ್ಥಿತಿ:

ಶಿಫಾರಸ್ಸಿನಂತೆ ದುಸ್ಥಿತಿಯಲ್ಲಿರುವ ಎಲ್ಲಾ ಶಾಲಾ ಕೊಠಡಿಗಳನ್ನು ತುರ್ತಾಗಿ ನವೀಕರಣಗೊಳಿಸಬೇಕು ಎನ್ನುವಾಗ, ಏನೋ ಒಂದು ಹತ್ತಿಪ್ಪತ್ತು ಕೊಠಡಿಗಳಿರುವುದು ಅದನ್ನು ಒಂದೆರಡು ತಿಂಗಳಲ್ಲಿ ನವೀಕರಣಗೊಳಿಸಬಹುದೆಂದು ಭಾಸವಾಗಬಹುದು. ಆದರೆ, ಅದರ ಸಂಖ್ಯೆಯು ನಿಮ್ಮನ್ನು ಅಚ್ಚರಿಗೊಳಿಸಬಹುದು. 2017ರಲ್ಲಿ ದುಸ್ಥಿತಿಯಲ್ಲಿರುವ ಕೊಠಡಿಗಳ ಸಂಖ್ಯೆ 73,129 ಆಗಿದೆ. ಈ ಎಲ್ಲಾ ಕೊಠಡಿಗಳ ನವೀಕರಣ ಮತ್ತು ನಿರ್ವಹಣೆಯ ಹೊಣೆ ಸರಕಾರದ್ದು ಎಂದು ತಿಳಿದಿದ್ದರೂ ಕೂಡಾ ಸರ್ಕಾರವನ್ನು ಪ್ರಶ್ನಿಸುವ ಅಥವಾ ತನ್ನ ಕ್ಷೇತ್ರದ ಜನಪ್ರತಿನಿಧಿ ಹಾಗು ಶಾಲಾ ಎಸ್.ಡಿ.ಎಂ.ಸಿ ಕಮಿಟಿಯ ಅಧ್ಯಕ್ಷರಾದ ಶಾಸಕರನ್ನು ಈ ಕುರಿತು ಕೇಳುವವರು ಯಾರೂ ಇರುವುದಿಲ್ಲ. ಮಕ್ಕಳ ಪೋಷಕರು, ಎಸ್.ಡಿ.ಎಂ.ಸಿ ಮತ್ತು ಇತರ ಸ್ಥಳೀಯ ಸಂಘ ಸಂಸ್ಥೆಗಳು ನಿರಂತರ ಪ್ರಯತ್ನ ಮಾಡಿದಲ್ಲಿ ಈ ಸರಕಾರಿ ಶಾಲೆಗಳ ಸ್ಥಿತಿಯು ಉತ್ತಮಗೊಳ್ಳಬಹುದು. ಶಾಲೆಗಳಲ್ಲಿ ಕೊಠಡಿಗಳದ್ದೇ ಸಮಸ್ಯೆಯಲ್ಲ. ಬದಲಾಗಿ, ಶಾಲಾ ಶೌಚಾಲಯ, ವಿದ್ಯುತ್, ಗ್ರಂಥಾಲಯ, ಶುದ್ಧ ಕುಡಿಯುವ ನೀರು, ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್ ಇತ್ಯಾದಿಗಳೆಲ್ಲವೂ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿರುವುದನ್ನು ಗಮನಿಸಿ ಅದನ್ನು ಸಬಲೀಕರಿಸಲು ಪ್ರಯತ್ನಿಸ ಬೇಕಾದುದು ಅಗತ್ಯವಾಗಿದೆ.

ಖಾಲಿ ಇರುವ ಶಿಕ್ಷಕರ ಹುದ್ದೆ:

2016-17 ಸಾಲಿನಲ್ಲಿ ಎಲಿಮೆಂಟರಿ ಶಾಲೆಗಳಲ್ಲಿ ಮಂಜೂರಾದ ಶಿಕ್ಷಕರ ಹುದ್ದೆಗಳ ಪೈಕಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ಸಂಖ್ಯೆಯು 28,582 ಆಗಿದೆ. ಇದಕ್ಕೆ ಕಾರಣ ಸರಕಾರಿ ಶಾಲೆಗಳಲ್ಲಿರುವ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತುಂಬ ಬೇಕೆನ್ನುವ ಚಿಂತೆ ಆ ಕ್ಷೇತ್ರದಲ್ಲಿರುವ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿರುವ ಶಾಸಕರಿಗೆ ಹಾಗು ಎಸ್.ಡಿ.ಎಂ.ಸಿ ಸದಸ್ಯರು ಮತ್ತು ಸ್ಥಳೀಯ ಸಂಘ-ಸಂಸ್ಥೆಗಳಿಗಿರುವುದು ಬಹಳ ಕಡಿಮೆ. ಶಾಸಕರಂತೂ ಶಿಕ್ಷಣಪರ ಹೋರಾಟಗಾರರ ಬೇಡಿಕೆಗಳಿಗೆ ಸೊಪ್ಪು ಹಾಕುವುದೇ ಇಲ್ಲ. ಆದ್ದರಿಂದಾಗಿ ಸರಕಾರಿ ಶಾಲೆಗಳ ಈ ಸ್ಥಿತಿಗೆ ನೇರ ಕಾರಣ ಅವರೇ ಎಂದು ದೂರುವವರು ಇದ್ದಾರೆ. ಬಹಳಷ್ಟು ಸರಕಾರಿ ಶಾಲೆಗಳಲ್ಲಿ ಮುಖ್ಯ ಶಿಕ್ಷಕರು, ವಿಜ್ಞಾನ, ಗಣಿತ, ಇಂಗ್ಲೀಷ್ ಹೀಗೆ ಮಕ್ಕಳು ಕಲಿಕೆಯಲ್ಲಿ ಹಿಂದಿರುವ ವಿಷಯಗಳ ಶಿಕ್ಷಕರ ಹುದ್ದೆಯು ಹತ್ತು-ಹದಿನೈದು ವರ್ಷಗಳಿಂದ ಖಾಲಿ ಇರುವ ಕುರಿತು ಯಾರು ಕಿಂಚಿತ್ತೂ ತಲೆ ಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ಸರಕಾರಿ ಶಾಲೆಗಳ ಎಸ್.ಡಿ.ಎಂ.ಸಿ ಗಳಲ್ಲಿ ಹೆಚ್ಚಿನಾಂಶ ಸದಸ್ಯರು ಕಾರ್ಮಿಕ ವರ್ಗ ಅಥವಾ ಇತರ ಸಮಾನ ಕೆಲಸಗಳಲ್ಲಿ ತೊಡಗಿಕೊಂಡು ತನ್ನ ಹೊಟ್ಟೆ ಪಾಡಿಗಾಗಿ ದುಡಿಯುವ ಅವರಿಗೆ ಶಾಲೆಯ ಸಮಸ್ಯೆಗಳು ತಲೆಗೆ ಹೊಕ್ಕುವುದೇ ವಿರಳ.

ಊರಿನ ಕೆಲವು ಜನರು ಶಾಸಕ ಮಹಾಶಯನ ಬಳಿ, ‘ಸ್ವಾಮಿ ನಮ್ಮ ಶಾಲೆಯ ಮುಖ್ಯ ಶಿಕ್ಷಕ ಹುದ್ದೆ, ಗಣಿತ ಶಿಕ್ಷಕ ಹುದ್ದೆ, ಇಂಗ್ಲಿಷ್ ಶಿಕ್ಷಕ ಹುದ್ದೆ ಖಾಲಿ ಇದೆ ಅದನ್ನು ಭರ್ತಿ ಮಾಡಿಕೊಡಿ’ ಎಂದು ಬೇಡಿಕೊಂಡರೆ ಅವರು ‘ನಾನು ಮಾಡಿ ಕೊಡುತ್ತೇನೆ ನೀವು ಧೈರ್ಯವಾಗಿರಿ ಅದು ನನ್ನ ಕ್ಷೇತ್ರದ ಶಾಲೆ ಮತ್ತು ಆ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷನೂ ನಾನೇ’ ಎಂದೆಲ್ಲಾ ಬಡಾಯಿ ಕೊಚ್ಚುತ್ತಾನೆ. ಐದು ವರ್ಷ ಮುಗಿದಾಗ ಅವರ ಸಾಧನೆಯನ್ನು ಮೆಲುಕು ಹಾಕಲು ಹೋದರೆ ಊರಿನ ಸರಕಾರಿ ಶಾಲೆಗೆ ಅವರಿಂದ ಏನೂ ದೊರೆಯಲಿಲ್ಲವೆಂದೂ ತಿಳಿದು ಬರುತ್ತದೆ. ಆಗ ಮತ್ತೊಮ್ಮೆ ಯಾರಾದರೂ ಪ್ರಶ್ನಿಸಿದರೆ, ‘ಈ ಚುನಾವಣೆಯಲ್ಲಿ ಗೆಲ್ಲಿಸಿ ನಾನು ನಿಮ್ಮ ಊರಿಗೆ ಹೈಟೆಕ್ ಶಾಲೆಯನ್ನು ಮಾಡಿಕೊಡುತ್ತೇನೆ’ ಎಂದೆಲ್ಲಾ ಮಹಾಶಯರು ಭರವಸೆ ಕೊಡುವ ಮೂಲಕ ಜನರನ್ನು ಮರಳು ಮಾಡುತ್ತಾರೆ ಈ ರೀತಿಯ ವರ್ತನೆಯನ್ನು ಪ್ರಶ್ನಿಸುವ ಒಂದು ಶಿಕ್ಷಣ ಪ್ರೇಮಿ ಜನರ ಗುಂಪನ್ನು ಸೃಷ್ಟಿಸಬೇಕಾದುದು ಅತೀ ಅಗತ್ಯವಾಗಿದೆ.

ಮುಂದುವರಿಯುವುದು…..

 

1 COMMENT

  1. ಗುಣಾತ್ಮಕ ಶಿಕ್ಷಣ ನಬಲಿಕರಣಕ್ಕಾಗಿ ಶಿಕ್ಷಕರ,ಪೋಷಕರ ಮತ್ತು ಇಲಾಖೆಯ ಮಾರ್ಗೋಪಯಗಳನ್ನು ಚರ್ಚಿಸಿ

LEAVE A REPLY

Please enter your comment!
Please enter your name here