ಅದೊಂದು ನ್ಯಾಯಾಲಯದ ಸನ್ನಿವೇಶ ಅಪರಾಧಿ ಸ್ಥಾನದಲ್ಲಿ ಹರೆಯದ ಹುಡುಗನೊಬ್ಬನಿದ್ದಾನೆ ಮ್ಯಾಜಿಸ್ಟ್ರೇಟ್ ತೀರ್ಪು ನೀಡಿದ್ದಾರೆ ತೀರ್ಪು ಗಲ್ಲುಶಿಕ್ಷೆ! ಹುಡುಗ ಮುಗುಳ್ನಕ್ಕ! ಆಶ್ಚರ್ಯಚಕಿತರಾದ ಮ್ಯಾಜಿಸ್ಟ್ರೇಟ್ ಮತ್ತೆ ಕೇಳಿದ ನಿನ್ನ ಕೊನೆಯಾಸೆಯೇನು? ಉತ್ತರಿಸಿದ ಹುಡುಗ “ನನಗೆ ಇನ್ನೊಂದಿಷ್ಟು ಸಮಯಾವಕಾಶವಿದ್ದಿದ್ದರೆ ಬ್ರಿಟೀಷ್ ರನ್ನು ದೇಶದಿಂದ ಹೊಡೆದೋಡಿಸಲು ಬಾಂಬ್ ತಯಾರಿಸುವುದನ್ನು ನಿಮಗೂ ಹೇಳಿಕೊಡುತ್ತಿದ್ದೆ”! ಈ ಹುಡುಗ ಮತ್ಯಾರೂ ಅಲ್ಲ ಸುಪ್ರಸಿದ್ಧ ಕ್ರಾಂತಿಕಾರಿ ಖುದಿರಾಮ್ ಬೋಸ್.
ಖುದಿರಾಮ್ ರು ತ್ರೈಲೋಕ್ಯನಾಥ ಬಸು ಮತ್ತು ಲಕ್ಷ್ಮೀಪ್ರಿಯದೇವಿ ದಂಪತಿಗಳ ಮಗನಾಗಿ 1889 ರ ಡಿಸೆಂಬರ್ 3 ರಂದು ಬಂಗಾಳದ ಮಿಡ್ನಾಪುರ್ ಜಿಲ್ಲೆಯ ಹಬೀಬ್ ಪುರ್ ನಲ್ಲಿ ಜನಿಸಿದರು. ತನ್ನ 6ನೇ ವಯಸ್ಸಿನಲ್ಲಿ ತಂದೆ-ತಾಯಿಗಳನ್ನು ಕಳೆದುಕೊಂಡು ಅಕ್ಕ ಅನುರೂಪಳ ಆರೈಕೆಯಲ್ಲಿ ಬೆಳೆಯಲಾರಂಭಿಸಿದರು. ಮಿಡ್ನಾಪುರದ ಹಾಮಿಲ್ಟನ್ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಕ್ರಾಂತಿಕಾರಿ ಹೋರಾಟಗಾರರಾಗಿದ್ದ ಅಲ್ಲಿನ ಶಿಕ್ಷಕ ಸತ್ಯೇಂದ್ರನಾಥ್ ರಿಂದ ಪ್ರಭಾವಿತರಾದರು. ತನ್ನ ಸುತ್ತಮುತ್ತಲಿನ ಜನರು ಬ್ರಿಟೀಷರಿಂದ ಅನುಭವಿಸುತ್ತಿದ್ದ ಶೋಷಣೆಗಳನ್ನು ಹತ್ತಿರದಿಂದ ಕಂಡು ಮನಮರುಗಿದ್ದ ಖುದಿರಾಮ್ ಶೋಷಿತ ಜನರ ವಿಮೋಚನೆಗಾಗಿ ಕ್ರಾಂತಿಕಾರಿ ಹೋರಾಟದ ಹಾದಿಯನ್ನು ಆಯ್ದುಕೊಂಡರು.
ಭಾರತದ ಕ್ರಾಂತಿಕಾರಿ ಹೋರಾಟದಲ್ಲಿ ಮುಖ್ಯ ಪಾತ್ರವಹಿಸಿದ ಬಂಗಾಳವನ್ನು ವಿಭಜಿಸಿದರೆ ಜನತೆಯ ಐಕ್ಯತೆಯನ್ನು ಮುರಿದು ಕ್ರಾಂತಿಕಾರಿಗಳ ಹೋರಾಟವನ್ನು ತಡೆಗಟ್ಟಬಹುದು ಎಂಬ ಆಲೋಚನೆಯನ್ನು ಬ್ರಿಟಿಷರು ಹೊಂದಿದ್ದರು. ಅದಕ್ಕನುಗುಣವಾಗಿ 1905ರಲ್ಲಿ ಆಗಿನ ವೈಸರಾಯ್ ಆಗಿದ್ದ ಕರ್ಜನ್ ಬಹುಸಂಖ್ಯಾತ ಹಿಂದೂಗಳ ಪಶ್ಚಿಮ ಪ್ರಾಂತ್ಯ(ಈಗಿನ ಪಶ್ಚಿಮ ಬಂಗಾಳ), ಬಹುಸಂಖ್ಯಾತ ಮುಸ್ಲಿಮರ ಪೂರ್ವ ಪ್ರಾಂತ್ಯ(ಈಗಿನ ಬಾಂಗ್ಲಾದೇಶ) ಎಂಬುದಾಗಿ ಬಂಗಾಳವನ್ನು ಇಬ್ಭಾಗ ಮಾಡಿದರು. ಅಲ್ಲಿಂದ ಜನತೆಯ ಉಗ್ರ ಪ್ರತಿಭಟನೆ ಆರಂಭವಾಯಿತು.
1906ರ ಫೆಬ್ರವರಿ ತಿಂಗಳಿನಲ್ಲಿ ಬಂಗಾಳದ ಮೇಧನಿಪುರದಲ್ಲಿ ಬ್ರಿಟಿಷರು ಒಂದು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದ ಉದ್ದೇಶ ಭುಗಿಲೆದ್ದಿದ್ದ ಪ್ರತಿಭಟನೆಯನ್ನು ತಣ್ಣಗಾಗಿಸುವುದು ಮತ್ತು ಭಾರತದಲ್ಲಿ ನಾವು ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದೇವೆ ಎಂದು ಪ್ರಚಾರ ಮಾಡುವುದೇ ಆಗಿತ್ತು. ಬ್ರಿಟಿಷರ ಈ ಕುತಂತ್ರದ ವಿರುದ್ಧ ಖುದಿರಾಮರು ಸೋನಾರ್ ಬಾಂಗ್ಲ ಎಂಬ ಕರಪತ್ರಗಳನ್ನು ಹಂಚಿ ಭಾರತೀಯರಿಗೆ ವಾಸ್ತವದ ಅರಿವನ್ನು ಮೂಡಿಸುತ್ತಿದ್ದರು. ಇದನ್ನರಿತ ಬ್ರಿಟಿಷರ ಪೊಲೀಸನೊಬ್ಬ ಖುದಿರಾಮನನ್ನು ಬಂಧಿಸಲು ಬಂದಾಗ “ವಾರೆಂಟ್ ಇಲ್ಲದೆ ನನ್ನನ್ನು ಬಂಧಿಸಲು ಬಂದಿರುವಿರಾ? ನನ್ನನ್ನು ಮುಟ್ಟಿದರೆ ಜೋಕೆ? ಎಂದು ಹೇಳಿ ಪೋಲಿಸನ ಮುಖಕ್ಕೆ ಜೋರಾಗಿ ಹೊಡೆದು ಅಲ್ಲಿಂದ ತಪ್ಪಿಸಿಕೊಂಡರು!
ಕ್ರಾಂತಿಕಾರಿ ಮಾರ್ಗದಲ್ಲಿ ಭಾರತವನ್ನು ಸ್ವತಂತ್ರಗೊಳಿಸಬೇಕೆಂಬ ಗುರಿಯನ್ನು ಹೊಂದಿದ್ದ ‘ಅನುಶೀಲನ್ ಸಮಿತಿ’ಯ ಕ್ರಾಂತಿಕಾರಿಗಳಾದ ಬರಿಂದ್ರಕುಮರ್ ಘೋಷ್ ಮತ್ತು ಹೇಮಚಂದ್ರ ಕನಂಗೊರವರು 1907ರಲ್ಲಿ ಫ್ರಾನ್ಸ್ ಗೆ ತೆರಳಿ ಬಾಂಬ್ ತಯಾರಿಕೆಯನ್ನು ಕಲಿತು ಬಂಗಾಳಕ್ಕೆ ಮರಳಿದರು. ಇವರಿಂದ ಬಾಂಬ್ ತಯಾರಿಸುವುದನ್ನು ಕಲಿತ ಖುದಿರಾಮ್ ಬಂಗಾಳದ ಹಲವು ಕ್ರಾಂತಿಕಾರಿಗಳೊಂದಿಗೆ ಸಂಪರ್ಕ ಸಾಧಿಸುತ್ತಾ ಹೋದರು.
ಇತ್ತ ಬಂಗಾಳ ವಿಭಜನೆಯ ವಿರುದ್ಧ ಚಳುವಳಿ ಬೃಹದಾಕಾರವಾಗಿ ಬೆಳೆಯುತ್ತಲೇ ಹೋಯಿತು. ಕಲ್ಕತ್ತಾ ಪ್ರೆಸಿಡೆನ್ಸಿಯ ಮೆಜಿಸ್ಟ್ರೇಟ್ ಕಿಂಗ್ಸ್ ಪೋರ್ಡ್ ಸ್ವಾತಂತ್ರ ಹೋರಾಟಗಾರರಿಗೆ ಅನ್ಯಾಯಯುತವಾದ ಹಾಗೂ ಕ್ರೂರ ಶಿಕ್ಷೆಯನ್ನು ವಿಧಿಸುವುದರಲ್ಲಿ ಕುಖ್ಯಾತನಾಗಿದ್ದ. ಈತನ ವಿರುದ್ಧ ಜನತೆಯ ಆಕ್ರೋಶ ಹೆಚ್ಚುತ್ತಲೇ ಹೋಯಿತು. ಕ್ರಾಂತಿಕಾರಿಗಳ ಗುಂಪು ಈತನನ್ನು ಕೊನೆಗಾಣಿಸಲು ಯೋಜನೆಯನ್ನು ರೂಪಿಸಿತು. ಜನರ ಭಾವನೆಯನ್ನು ಅರಿತ ಬ್ರಿಟಿಷ್ ಸರ್ಕಾರ ಕಿಂಗ್ಸ್ ಪೋರ್ಡನನ್ನು ಬಂಗಾಳದಿಂದ ಬಿಹಾರದ ಮುಜಾಫರ್ ಗೆ ವರ್ಗವಾಣೆ ಮಾಡಿತು ಆದರೆ ಕ್ರಾಂತಿಕಾರಿಗಳಿಗೆ ತಾವು ಕೈಗೊಂಡ ಕಾರ್ಯವನ್ನು ನೆರವೇರಿಸಲು ಇವ್ಯಾವುದೂ ಅಡ್ಡ ಬರುವುದಿಲ್ಲ ಎಂಬುದನ್ನು ಅವರು ಮರೆತಿದ್ದಿರಬಹುದು! ಕಿಂಗ್ಸ್ ಪೋರ್ಡ್ ನನ್ನು ಕೊನೆಗಾಣಿಸುವ ಕಾರ್ಯವನ್ನು ‘ಯುಗಾಂತರ ಗುಂಪಿ’ನ ನಾಯಕರುಗಳು ಚರ್ಚಿಸಿ ನಿರ್ಧರಿಸಿದಂತೆ ಖುದಿರಾಮ್ ಮತ್ತು ಆತನ ಸಹ ಕ್ರಾಂತಿಕಾರಿ ಪ್ರಫುಲ್ಲ ಚಾಕಿಗೆ ವಹಿಸಿದರು.
ಇದು ತನ್ನ ಜೀವನದಲ್ಲಿ ಲಭಿಸಿದ ಶ್ರೇಷ್ಠ ಕಾರ್ಯವೆಂದು ಭಾವಿಸಿದ ಖುದಿರಾಮ್, ಪ್ರಫುಲ್ಲ ಚಾಕಿ ಯೊಂದಿಗೆ ಮುಜಾಫರ್ ಗೆ ತೆರಳಿ ಕಿಂಗ್ಸ್ ಪೋರ್ಡ್ ವಾಸವಿದ್ದ ಬೀದಿಯಲ್ಲಿರುವ ಮನೆಯೊಂದರಲ್ಲೆ ಹರೇನ್ ಶಂಕರ್ ಎಂದು ಹೆಸರನ್ನು ಬದಲಿಸಿಕೊಂಡು ವಾಸಿಸತೊಡಗಿದರು. ಕಿಂಗ್ಸ್ ಪೋರ್ಡ ನ ಚಲನ-ವಲನಗಳನ್ನು ಗಮನಿಸಿ ಯೋಜನೆಯನ್ನು ರೂಪಿಸಿದರು. ಆತ ಸಂಜೆ ಕುದುರೆಗಾಡಿಯಲ್ಲಿ ಯುರೋಪಿಯನ್ ಕ್ಲಬ್ ನ ಪೂರ್ವ ದ್ವಾರದ ಮೂಲಕ ಹೊರಟು ಬರುವಾಗ ಬಾಂಬ್ ಹಾಕಲು ನಿರ್ಧರಿಸಿದರು. ಆದರೆ ಅನಿರೀಕ್ಷಿತವಾಗಿ ಆ ಗಾಡಿಯಲ್ಲಿ ಕಿಂಗ್ಸ್ ಪೋರ್ಡ್ ನ ಗೆಳೆಯ ಕೆನಡಿಯ ಪತ್ನಿ ಮತ್ತು ಗೆಳತಿ ಮಾತ್ರವಿದ್ದರು. ಇದನ್ನರಿಯದೆ ಬಾಂಬ್ ಹಾಕಿ, ತಾವು ಕಿಂಗ್ಸ್ ಪೋರ್ಡ್ ನನ್ನೇ ಮುಗಿಸಿದ್ದೇವೆ ಎಂದೆನಿಸಿ ಪ್ರಫುಲ್ಲ ಒಂದು ಕಡೆ, ಖುದಿರಾಮ್ ಇನ್ನೊಂದು ಕಡೆ ಓಡಿದರು. ಪ್ರಪುಲ್ಲ ತಾನು ಬ್ರಿಟಿಷರ ಪೊಲೀಸರಿಗೆ ಸೆರೆಯಾಗುವುದನ್ನಿಚ್ಚಿಸದೆ ತನಗೆ ತಾನೇ ಗುಂಡಿಟ್ಟುಕೊಂಡು ಅಮರನಾದ.
ಇತ್ತ ರಾತ್ರಿಯಿಡಿ 22 ಮೈಲಿ ಬರಿಗಾಲಲ್ಲಿ ಓಡಿ ದಣಿದಿದ್ದ ಖುದಿರಾಮ್ ವೈನಿ ರೈಲ್ವೇ ಸ್ಟೇಷನ್ನಿನ ಅಂಗಡಿಯೊಂದರಲ್ಲಿ ನೀರು ಕುಡಿಯುತ್ತಿದ್ದಾಗ ಈತನ ಕೊಳೆಯಾಗಿದ್ದ ವಸ್ತ್ರ, ಕೈ-ಕಾಲನ್ನು ಕಂಡು ಸಂಶಯಗೊಂಡ ಪೊಲೀಸರು ಬಾಂಬ್ ಸ್ಫೋಟಿಸಿದ ಖುದಿರಾಮ್ ಇವನೇ ಇರಬೇಕೆಂದು ಬಂಧಿಸಿದರು. ತದ ನಂತರ ವಿಚಾರಣೆಯೆಂಬ ನಾಟಕ ನಡೆದು ಖುದಿರಾಮನಿಗೆ ಗಲ್ಲು ಶಿಕ್ಷೆಯನ್ನು ವಿಧಿಸಲಾಯಿತು. ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸುವ ಅವಕಾಶವಿದ್ದರೂ ಅದನ್ನು ನಿರಾಕರಿಸಿ ದೇಶಕ್ಕೋಸ್ಕರ ಪ್ರಾಣಾರ್ಪಣೆ ಮಾಡಲು ಖುದಿರಾಮ ಉತ್ಸುಕತೆ ತೋರಿದ. ಹಾಗಾಗಿ ಈ ವಿಧಿಯೇ ಅಂತಿಮವಾಯಿತು.
1908 ರ ಆಗಸ್ಟ್ 11ರಂದು ಖುದಿರಾಮರ ನ್ನು ಗಲ್ಲಿಗೇರಿಸಲು ಕರೆತಂದಾಗ 15 ವಯಸ್ಸಿನ ಈ ಧೀರನ ದೇಹದ ತೂಕ ತನ್ನ ಬಂಧನಕ್ಕೂ ಹಿಂದೆ ಇದ್ದುದ್ದಕ್ಕಿಂತ ಹೆಚ್ಚಾಗಿತ್ತು! ಈತನನ್ನು ಸ್ವಾಗತಿಸಲು ಮುಜಾಫರ್ ನಗರದಲ್ಲಿ ಜನಸಾಗರವೇ ನೆರೆದಿತ್ತು. ಕೇವಲ ಹದಿನೈದನೆಯ ವಯಸ್ಸಿಗೆ ಈ ಮಟ್ಟಕ್ಕೆ ಜನಸ್ತೋಮದ ಮನಸ್ಸನ್ನು ಗೆದ್ದಿದ್ದ ಸ್ವಾತಂತ್ರ ಹೋರಾಟಗಾರ ಭಾರತದ ಇತಿಹಾಸದಲ್ಲಿ ಬೇರಾರೂ ಸಿಗುವುದಿಲ್ಲ. ಖುದಿರಾಮ ಗಲ್ಲುಗಂಬವೇರಿದ ಮರುದಿನ ಅಂದಿನ ಪ್ರಸಿದ್ಧ ಪತ್ರಿಕೆ ಅಮೃತ ಬಜಾರ್ ಹುತಾತ್ಮನ ಮರಣದ ಸುದ್ದಿಯನ್ನು ವಿವರವಾಗಿ ಪ್ರಕಟಿಸಿ “KHUDIRAM END: CHEERFULL AND SMILING” ಎಂಬ ತಲೆ ಬರಹವನ್ನು ನೀಡಿತ್ತು. ಬಾಲಗಂಗಾಧರ ತಿಲಕರು ಹೀಗೆ ಬರೆದರು “1897ರ ಜುಬಲಿ ಹತ್ಯೆಯಾಗಲಿ, ಸಿಖ್ ರೆಜಿಮೆಂಟ್ ಗಳನ್ನು ಹಾಳುಮಾಡಿದ ವರದಿಯಾಗಲಿ ಇಷ್ಟು ಗದ್ದಲವನ್ನುಂಟುಮಾಡಲಿಲ್ಲ. 1857 ರ ದಂಗೆಯ ನಂತರ ನಡೆದ ಅಸಾಧಾರಣ ಘಟನೆಯಿದು ಎಂಬುದು ಇಂಗ್ಲಿಷ್ ಸಾರ್ವಜನಿಕ ಅಭಿಪ್ರಾಯವಾಗಿದೆ!”.
ಖುದಿರಾಮ್ ಎಸೆದ ಬಾಂಬ್ ಕಿಂಗ್ಸ್ ಫೋರ್ಡನನ್ನು ಮುಗಿಸಲು ವಿಫಲವಾಯಿತಾದರೂ ಅದು ಇಡೀ ಬ್ರಿಟಿಷ್ ಸಾಮ್ರಾಜ್ಯವನ್ನು ಅಲುಗಾಡಿಸಿದ್ದು ಮಾತ್ರವಲ್ಲದೆ ಭಾರತೀಯ ಸ್ವಾತಂತ್ರ್ಯ ಸಂಗ್ರಾಮಕ್ಕೋಸ್ಕರ ಸ್ಪೋಟಗೊಂಡ ಮೊದಲ ಬಾಂಬ್ ಎಂದೇ ಹೆಸರುವಾಸಿಯಾಯಿತು. ದೇಶವನ್ನು ಸ್ವಾತಂತ್ರ್ಯಗೊಳಿಸಲು ಅತ್ಯಂತ ಕಿರಿಯ ವಯಸ್ಸಿಗೆ ಗಲ್ಲುಗಂಬವೇರಿದ ಕೀರ್ತಿಗೆ ಖುದಿರಾಮ್ ಪಾತ್ರರಾದರು.
ತನ್ನ ವಿರುದ್ಧದ ಹೋರಾಟವನ್ನು ದಮನಗೊಳಿಸಲು ಅಂದಿನ ಬ್ರಿಟಿಷ್ ಸರ್ಕಾರ ಬಂಗಾಳ ವಿಭಜನೆಯ ಮೂಲಕ ಹಿಂದೂ-ಮುಸಲ್ಮಾನರ ಐಕ್ಯತೆಯನ್ನು ಮುರಿಯಲೆತ್ನಿಸಿದರೂ ಅಂದಿನ ಜನತೆ ‘ಒಡೆದು ಆಳುವ ನೀತಿ’ ಗೆ ಬಲಿಯಾಗದೆ ಬ್ರಿಟಿಷರ ವಿರುದ್ಧ ಒಗ್ಗಟ್ಟಾಗಿ ಹೋರಾಡಿದಂತೆ ಇಂದಿನ ಸಮಾಜದಲ್ಲಿ ನಡೆಯುವ ಅನ್ಯಾಯ, ಶೋಷಣೆಗಳ ವಿರುದ್ಧ ಜನರು ಯಾವುದೇ ರೀತಿಯ ‘ಒಡೆದು-ಆಳುವ’ ಕುತಂತ್ರ ಗಳಿಗೆ ಒಳಗಾಗದೆ ಒಟ್ಟುಗೂಡಿ ಹೋರಾಡಲು ಖುದಿರಾಮ್ ರ ಜೀವನಗಾಥೆ ನಮಗೆಲ್ಲರಿಗೂ ಪ್ರೇರಣೆಯಾಗಲಿ..