ಆಧುನಿಕ ಜಗತ್ತಿನಲ್ಲಿ, “ನಾನು” ಎಂಬ ಪದವು ನಮ್ಮ ಸಂಭಾಷಣೆಗಳು, ಚಿಂತನೆಗಳು ಮತ್ತು ಆಕಾಂಕ್ಷೆಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಸಾಮಾಜಿಕ ಮಾಧ್ಯಮದ ಪ್ರೊಫೈಲ್‌ಗಳಿಂದ ಹಿಡಿದು ವೈಯಕ್ತಿಕ ಗುರಿಗಳವರೆಗೆ, “ನಾನು” ಎಂಬುವುದು ಎಲ್ಲದರ ಕೇಂದ್ರಬಿಂದುವಾಗಿದೆ. ಯಾವುದೇ ವಿಚಾರವನ್ನು ಪ್ರಸ್ತಾಪಿಸುವ ಸಂದರ್ಭದಲ್ಲೂ ” ನಾನು” ಎಂಬುದು ಗೊತ್ತಿದ್ದೋ, ಗೊತ್ತಿಲ್ಲದೆಯೋ ಪ್ರಾಬಲ್ಯ ಸಾಧಿಸುತ್ತದೆ.
ವಾಸ್ತವದಲ್ಲಿ ಈ “ನಾನು” ಎಂಬ ಒಲವು ಒಂದು ಅಪಾಯಕಾರಿ ಬಲೆ. “ನಾನು”, ” ನನ್ನಿಂದ” ಎಂಬ ಪದಗಳು ನಮ್ಮನ್ನು ಸಮಾಜದಿಂದ ದೂರೀಕರಿಸುತ್ತದೆ. ಆರಂಭದಲ್ಲಿ ನಮಗೆ ಇದು ಹಿತ ನೀಡಿದರೂ ಕ್ರಮೇಣ ನಮ್ಮನ್ನು ಹಿಂತಿರುಗಲು ಆಗದ “ಟ್ರ್ಯಾಪ್” ನಲ್ಲಿ ಬೀಳಿಸಿ ಬೀಡುವುದುಂಟು. ಅಲ್ಲಾಹನು ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಪ್ರತಿಭೆಯನ್ನು ನೀಡಿ ಪೋಷಿಸಿದ್ದಾನೆ. ಇದು ಆತನ ಕೊಡುಗೆ. ಆ ಪ್ರತಿಭೆಯನ್ನು ಬಳಸಿ ಬೆಳೆಯುವ ನಾವುಗಳು ಯಾವುದೇ ಕೆಲಸದ ಸಂದರ್ಭದಲ್ಲಿ ಇದು ನನ್ನಿಂದ ಆಗಿದ್ದು, ನಾನಿಲ್ಲದಿದ್ದರೆ ಇದು ಸಾಧ್ಯನೇ ಇರುತ್ತಿರಲಿಲ್ಲ ಎಂಬುವುದರೊಂದಿಗೆ ಆರಂಭವಾಗುತ್ತದೆ. ನಂತರ ಇದರ ಮುಂದುವರಿದ ಭಾಗವಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು, ವೇದಿಕೆಗಳಲ್ಲಿ ಕಾಣಿಸಿಕೊಳ್ಳಬೇಕು. ಪ್ರಶಸ್ತಿ, ಸನ್ಮಾನಗಳ ಗೀಳು ಹತ್ತಿಸಿಕೊಂಡು ಜೀವನ ಅಪಾಯಕಾರಿ ತಿರುವಿನಲ್ಲಿ ಸಿಲುಕಿಕೊಳ್ಳುತ್ತದೆ.
ಕ್ರಮೇಣ ಇದು ನಮ್ಮನ್ನು ಅಲ್ಲಾಹನ ಮಾರ್ಗದಿಂದ ದೂರಗೊಳಿಸಿ ಅಹಂಕಾರ, ಗರ್ವ ಮತ್ತು ಆಧ್ಯಾತ್ಮಿಕ ವೈರಾಗ್ಯಕ್ಕೆ ದೂಡುತ್ತದೆ. ಕುರಾನ್ ಮತ್ತು ಸುನ್ನತ್‌ಗಳು ನಮಗೆ ಆತ್ಮದ (ನಫ್ಸ್) ಅಪಾಯಗಳ ಬಗ್ಗೆ ಪದೇ ಪದೇ ಎಚ್ಚರಿಕೆ ನೀಡುತ್ತವೆ ಮತ್ತು ವಿನಯ ಮತ್ತು ದೈವಿಕ ಸಮರ್ಪಣೆಯ ಕಡೆಗೆ ಮಾರ್ಗದರ್ಶನ ನೀಡುತ್ತವೆ.
ಇಸ್ಲಾಮಿನಲ್ಲಿ ” ನಫ್ಸ್” ಎಂಬುದು ಮನುಷ್ಯನ ಒಂದು ಸಂಕೀರ್ಣ ಅಂಶವಾಗಿದೆ. ಕುರಾನ್ ಮೂರು ರೀತಿಯ ನಫ್ಸ್‌ಗಳನ್ನು ವಿವರಿಸುತ್ತದೆ: *ನಫ್ಸ್ ಅಲ್-ಅಮ್ಮಾರ* (ಕೆಡುಕಿಗೆ ಪ್ರೇರೇಪಿಸುವ ಆತ್ಮ, ಕುರಾನ್ 12:53), *ನಫ್ಸ್ ಅಲ್-ಲವ್ವಾಮ* (ಸ್ವಯಂ-ನಿಂದಿಸುವ ಆತ್ಮ, ಕುರಾನ್ 75:2), ಮತ್ತು *ನಫ್ಸ್ ಅಲ್-ಮುತ್ಮಾಇನ್ನ* (ಶಾಂತಿಯಲ್ಲಿರುವ ಆತ್ಮ, ಕುರಾನ್ 89:27). ನಫ್ಸ್ ಅಲ್-ಅಮ್ಮಾರ ವಿಶೇಷವಾಗಿ ಅಪಾಯಕಾರಿಯಾಗಿದೆ. ಏಕೆಂದರೆ ಇದು ವ್ಯಕ್ತಿಯನ್ನು ತನ್ನ ಆಸೆಗಳು, ಅಹಂಕಾರ ಮತ್ತು ಸ್ವಾರ್ಥದ ಕಡೆಗೆ ಒಯ್ಯುತ್ತದೆ. ಅಲ್ಲಾಹನಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವುದಕ್ಕೆ ತಡೆಯೊಡ್ಡುತ್ತದೆ. “ನಾನು ಉತ್ತಮನಾಗಿದ್ದೇನೆ,” “ನನಗೆ ಇನ್ನೂ ಹೆಚ್ಚು ಅರ್ಹತೆ ಇದೆ” ಅಥವಾ “ನನಗೆ ಬೇರೆ ಯಾರೂ ಬೇಡ” ಎಂದು “ನಾನು” ಎಂಬ ‘ಟ್ರ್ಯಾಪ್’ ಸೃಷ್ಟಿಸುತ್ತದೆ.
ಪ್ರವಾದಿ ಮುಹಮ್ಮದ್ (ಸ) ‘ನಾನು’ ಎಂಬ ಗರ್ವದ ವಿನಾಶಕಾರಿ ಸ್ವಭಾವದ ಕುರಿತು ಹೇಳುವುದು, “ಯಾರ ಹೃದಯದಲ್ಲಿ ಒಂದು ಸಾಸಿವೆ ಕಾಳಿನಷ್ಟು ಗರ್ವವಿದ್ದರೂ ಅವನು ಸ್ವರ್ಗಕ್ಕೆ ಪ್ರವೇಶಿಸಲಾರ” (ಸಹೀಹ್ ಮುಸ್ಲಿಂ, 91). ನಾನು ಎಂಬ ಅಹಂಕಾರವು ಸ್ವಯಂ ಭಾವನೆಯಿಂದ ಸೃಷ್ಟಿಯಾಗಿ ಕ್ರಮೇಣ ಅಲ್ಲಾಹನ ಅನುಗ್ರಹ, ಸಾಮರ್ಥ್ಯಗಳನ್ನು ಮರೆತು, ನಮ್ಮ ಅಸ್ತಿತ್ವವು ಅಲ್ಲಾಹನಿಂದಲೇ ಎಂಬ ವಾಸ್ತವಿಕತೆಯಿಂದ ದೂರ ಸರಿಯುವಂತೆ ಮಾಡುತ್ತದೆ.
“ನಾನು” ಎಂಬ ಅಪಾಯಕಾರಿ ಬಲೆ:
“ನಾನು” ಎಂಬ ಅಹಂಕಾರ (ಕಿಬ್ರ್)ವು ಸ್ವಯಂ-ಪೂಜೆ, ಅಥವಾ ಅಲ್ಲಾಹನನ್ನು ಮರೆತು ಬಿಡಲು ಕಾರಣವಾದಾಗ ಅದು ನಮ್ಮ ಸುತ್ತ ಒಂದು ಬಲೆಯಾಗಿ ಮಾರ್ಪಾಡುತ್ತದೆ. ಇಂದು ವಾಸ್ತವಿಕ ಜಗತ್ತಿನಲ್ಲಿ ಹಲವು ರೀತಿಯ “ನಾನು” ಗಳನ್ನು ನಾವು ಕಾಣುತ್ತೇವೆ. ಅವುಗಳ ಕುರಿತು ಚರ್ಚಿಸುವುದಾದರೆ….,
1. ಗರ್ವ ಮತ್ತು ಅಹಂಕಾರ :
ಒಬ್ಬರ ಸಾಧನೆಗಳು ಕೇವಲ ವೈಯಕ್ತಿಕ ಪ್ರಯತ್ನದ ಫಲವೆಂದು ಭಾವಿಸುವುದು. ಈ ಯಶಸ್ಸಿನ ಹಿಂದೆ ಅಲ್ಲಾಹನ ಅನುಗ್ರಹವಿದೆಯೆಂಬುವುದನ್ನು ನಿರ್ಲಕ್ಷಿಸಿ ಬಿಡುತ್ತೇವೆ. ಆದ್ದರಿಂದ ಕ ಕುರಾನ್ ನಮಗೆ ತಿಳಿಸುವುದು, “ನೀವು ಹೊಂದಿರುವ ಯಾವುದೇ ಕೃಪೆಯೂ ಅಲ್ಲಾಹನಿಂದಲೇ ಆಗಿದೆ” (16:53).
2. ಸ್ವಯಂ-ಕೇಂದ್ರಿತತೆ:
ಇತರರ ಅಗತ್ಯಗಳಿಗಿಂತ ಅಥವಾ ಅಲ್ಲಾಹನ ಆದೇಶಗಳಿಗಿಂತ ವೈಯಕ್ತಿಕ ಆಸೆಗಳಿಗೆ ಆದ್ಯತೆ ನೀಡುವುದು. ಇದು ಖ್ಯಾತಿ, ಸಂಪತ್ತು ಅಥವಾ ಸ್ಥಾನಮಾನದ ಬೆನ್ನಟ್ಟುವಿಕೆಯಲ್ಲಿ ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಕಡೆಗಣಿಸುವುದಾಗಿದೆ.
3. ಆಧ್ಯಾತ್ಮಿಕ ವೈರಾಗ್ಯ:
ಗರ್ವದ ಆತ್ಮವು ವ್ಯಕ್ತಿ ಮತ್ತು ಅಲ್ಲಾಹನ ನಡುವೆ ಒಂದು ತಡೆಗೋಡೆಯನ್ನು ಸೃಷ್ಟಿಸುತ್ತದೆ. ಏಕೆಂದರೆ ಹೃದಯವು ಕೃತಜ್ಞತೆ ಮತ್ತು ಆರಾಧನೆಗಿಂತ ಸ್ವಯಂ-ಸ್ತುತಿ ನಮ್ಮಲ್ಲಿ ತುಂಬಿಹೋಗುತ್ತದೆ.
ಕುರಾನ್‌ನಲ್ಲಿರುವ ಇಬ್ಲೀಸ್‌ನ (ಶೈತಾನ್) ಘಟನೆಯು ಇದಕ್ಕೆ ಒಂದು ಶಕ್ತಿಶಾಲಿ ಉದಾಹರಣೆಯಾಗಿದೆ. “ಅಲ್ಲಾಹನು ಆಮಮರಿಗೆ (ಆ) ನಮಸ್ಕರಿಸಲು ದೇವದೂತರಿಗೆ ಆದೇಶಿಸಿದಾಗ, ಇಬ್ಲೀಸ್‌ನು ನಿರಾಕರಿಸಿದನು. “ನಾನು ಅವನಿಗಿಂತ ಉತ್ತಮನಾಗಿದ್ದೇನೆ. ನೀನು ನನ್ನನ್ನು ಬೆಂಕಿಯಿಂದ ಸೃಷ್ಟಿಸಿದೆ ಮತ್ತು ಅವನನ್ನು ಮಣ್ಣಿನಿಂದ ಸೃಷ್ಟಿಸಿದೆ” (ಕುರಾನ್ 7:12) ಎಂದು ಗರ್ವ ಪ್ರದರ್ಶಿಸುತ್ತಾನೆ. ಅವನ “ನಾನು” ಅವನ ಶಾಶ್ವತ ಪತನಕ್ಕೆ ಕಾರಣವಾಗುತ್ತದೆ. ಇನ್ನು ಪ್ರವಾದಿಗಳ ಕಾಲದಲ್ಲಿ ಸಂಪತ್ತಿನ, ಅಧಿಕಾರದ, ಶಕ್ತಿಯ ಗರ್ವ ತೋರಿದ ರಾಜರು, ಸರ್ವಾಧಿಕಾರಿಗಳು,ಸಮುದಾಯಗಳು ಮಣ್ಣಿನಲ್ಲಿ ಮಣ್ಣಾಗಿ ಹೋದವು.
“ನಾನು” ಎಂಬ ಟ್ರ್ಯಾಪ್ ನಿಂದ ನಾವೆಲ್ಲರೂ ಹೊರ ಬರಬೇಕಾದರೆ ಮತ್ತೆ ಇಸ್ಲಾಮಿ ಮೌಲ್ಯದೆಡೆಗೆ ಅದರ ಬಲಿಷ್ಠ ಚಿಂತನೆಯೆಡೆಗೆ ಮರಳಬೇಕಾಗಿದೆ. ಇಸ್ಲಾಂ “ನಾನು” ಎಂಬ ಬಲೆಯಿಂದ ನಮ್ಮನ್ನು ರಕ್ಷಿಸಿಕೊಳ್ಳುವ ಗುರಾಣಿಯನ್ನು ಒದಗಿಸುತ್ತದೆ. ಅದರ ಸುಸ್ಪಷ್ಟ ಮಾರ್ಗದರ್ಶನದಿಂದ ಮಾತ್ರ ಇದು ಸಾಧ್ಯವಾಗುತ್ತದೆ.
1. ತೌಹೀದ್ (ಏಕ ದೇವತ್ವ):
ಎಲ್ಲಾ ಶಕ್ತಿ, ಮಹಿಮೆ ಮತ್ತು ಯಶಸ್ಸು ಅಲ್ಲಾಹನಿಗೆ ಮಾತ್ರ ಮೀಸಲು ಎಂದು ನಮ್ಮಲ್ಲಿ ಕೃತಜ್ಞಾ ಭಾವವನ್ನು ಸೃಷ್ಟಿಸುವ ಅಗತ್ಯವಿದೆ. ಕುರಾನ್ ನೆನಪಿಸುತ್ತದೆ, “ಆಕಾಶಗಳು ಮತ್ತು ಭೂಮಿಯ ಆಡಳಿತವು ಅಲ್ಲಾಹನಿಗೆ ಸೇರಿದೆ” (3:189). ಈ ಸತ್ಯವನ್ನು ಮನಗೊಂಡು ನಮ್ಮ ದೌರ್ಬಲ್ಯವನ್ನು ಬದಿಗೊತ್ತಿ ಅವನ ಭೋದನೆಗಳತ್ತ ಮರಳಬೇಕಾಗಿದೆ.
2. ಪ್ರಾರ್ಥನೆ:
ಅಲ್ಲಾಹನನ್ನು ಸದಾ ನೆನಪಿಸುತ್ತ ಅವನಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಶಿರ ಬಾಗುವ ಪ್ರವೃತಿ ಬೆಳೆಸಿಕೊಳ್ಳಬೇಕು. ಇದರಿಂದ ಅಲ್ಲಾಹನಿಗೆ ನಮ್ಮ ದಾಸ್ಯಭಾವವನ್ನು ದೈಹಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ನೆನಪಿಸುತ್ತದೆ. ಐದು ಬಾರಿಯ ದೈನಂದಿನ ಪ್ರಾರ್ಥನೆಗಳು “ನಾನು” ಎಂಬುದು ಅಸ್ತಿತ್ವದ ಕೇಂದ್ರವಲ್ಲ ಎಂಬ ಭಾವನೆಯನ್ನು ಬಲಪಡಿಸುತ್ತವೆ.
3. ಝಿಕ್ರ್
(ಅಲ್ಲಾಹನ ಸ್ಮರಣೆ): ಸುಬ್ಹಾನಲ್ಲಾಹ್ (ಅಲ್ಲಾಹನಿಗೆ ಮಹಿಮೆಯಿರಲಿ) ಅಥವಾ ಅಲ್ಹಮ್ದುಲಿಲ್ಲಾಹ್ (ಎಲ್ಲಾ ಸ್ತುತಿಗಳು ಅಲ್ಲಾಹನಿಗೆ ಸೇರಿವೆ) ಎಂದು ನಿರಂತರವಾಗಿ ಸ್ಮರಿಸುವುದು ಹೃದಯವು ದೇವ ಮಾರ್ಗದಲ್ಲಿ ದೃಢವಾಗಿರಿಸಿ ಅಲ್ಲಾಹನಿಗೆ ಕೃತಜ್ಞತರಾಗಿ ಜೀವಿಸಲು ಸಹಾಯ ಮಾಡಲಿದೆ.
4. ಸದಕಾ (ದಾನ):
ಅಲ್ಲಾಹನ ಮಾರ್ಗದಲ್ಲಿ ವ್ಯಾಪಕವಾಗಿ ದಾನ ಮಾಡುವುದರಿಂದ ನಮ್ಮನ್ನು ಮತ್ತಷ್ಟು ವಿನೀತನನ್ನಾಗಿಸುತ್ತದೆ. ಪ್ರವಾದಿ (ಸಲ್ಲಲ್ಲಾಹು ಅಲೈಹಿ ವ ಸಲ್ಲಮ್) ಹೇಳಿದ್ದಾರೆ, “ದಾನವು ಸಂಪತ್ತನ್ನು ಕಡಿಮೆಗೊಳಿಸುವುದಿಲ್ಲ” (ಸಹೀಹ್ ಮುಸ್ಲಿಂ, 2588).
5. ತಜ್ಕಿಯಾ (ಆತ್ಮದ ಶುದ್ಧೀಕರಣ):
ಸ್ವಯಂ-ಚಿಂತನೆ, ಕ್ಷಮೆಯಾಚನೆ ಮತ್ತು ಸುನ್ನತ್‌ನ ಅನುಸರಣೆಯ ಮೂಲಕ ನಫ್ಸ್‌ನ ವಿರುದ್ಧ ಸೆಣಸಾಡುವುದು ಅಗತ್ಯ.ಇದರಿಂದಾಗಿ ನಮಗೆ ಅಲ್ಲಾಹನ ಸಾಮೀಪ್ಯವನ್ನು ಪಡೆಯಲು ನೆರವಾಗುತ್ತದೆ.
“ನಾನು” ಎಂಬ ಗರ್ವ ಜಯಿಸಲು ಪ್ರಾಯೋಗಿಕ ಕ್ರಮಗಳು:
“ನಾನು” ಎಂಬ ಬಲೆಯಿಂದ ಮುಕ್ತರಾಗಲು, ಮುಸ್ಲಿಮರು ಇಸ್ಲಾಮಿಕ್ ಬೋಧನೆಗಳಲ್ಲಿ ಬೇರೂರಿರುವ ಪ್ರಾಯೋಗಿಕ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬಹುದು.
ಮರಣದ ಬಗ್ಗೆ ಚಿಂತನೆ: ಪ್ರವಾದಿ (ಸ) ಸಲಹೆ ನೀಡಿದಂತೆ, “ಸಂತೋಷದ ಸಂದರ್ಭದಲ್ಲಿ ವಿನಾಶಕಾರಿಯಾದ ಮರಣವನ್ನು ಆಗಾಗ್ಗೆ ನೆನಪಿಸಿಕೊಳ್ಳಿ” (ತಿರ್ಮಿಧಿ, 2307), ಇದು ನಮ್ಮ ಆತ್ಮವನ್ನು ವಿನೀತಗೊಳಿಸುತ್ತದೆ.
ಕ್ಷಮೆಯಾಚನೆ:
ನಿಯಮಿತವಾಗಿ ಅಸ್ತಘ್ಫಿರುಲ್ಲಾಹ್ (ನಾನು ಅಲ್ಲಾಹನಿಂದ ಕ್ಷಮೆಯಾಚಿಸುತ್ತೇನೆ) ಎಂದು ಹೇಳುವುದು ಹೃದಯವನ್ನು ಶುದ್ಧಿಗೊಳಿಸುತ್ತದೆ ಮತ್ತು ನಮ್ಮ ಅಪೂರ್ಣತೆಯನ್ನು ನೆನಪಿಸುತ್ತದೆ.
ಇತರರ ಸೇವೆ:
ಅಲ್ಲಾಹನ ಮಾರ್ಗದಲ್ಲಿ ನೆರೆಹೊರೆಯವರಿಗೆ ಸಹಾಯ ಮಾಡುವುದು ಅಥವಾ ಸ್ವಯಂಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದ ನಾನು ಎಂಬ ಬಲೆಯಿಂದ ಹೊರ ಬರಲು ಸಹಾಯಕವಾಗಲಿದೆ. ಮನುಷ್ಯ ಎಷ್ಟು ದುರ್ಬಲ ಎಂಬುವುದರ ಸಾಕ್ಷ್ಯತ್ಕಾರ ನಮಗೆ ಇದರಿಂದಾಗುತ್ತದೆ.
ಕುರಾನ್ ಮತ್ತು ಸುನ್ನತ್‌ನ ಅಧ್ಯಯನ :
ನಿರಂತರವಾಗಿ ಕುರಾನ್, ಪ್ರವಾದಿಗಳು ಮತ್ತು ಸಹಾಬಿಗಳ ಜೀವನ ಚರಿತ್ರೆಯನ್ನು ಅಧ್ಯಯನ ಮಾಡಿ ಅವರ ವಿನಯವನ್ನು, ಅವರ ಆದರ್ಶಮಯ ಗುಣವನ್ನು ಅನುಕರಿಸಲು ಗರಿಷ್ಠ ಪ್ರಯತ್ನ ನಡೆಸುವುದು.
ಸತ್ಯ ಸಂಧರ ಸಂಗ:
ಪ್ರವಾದಿ (ಸ) ಹೇಳಿದ್ದಾರೆ, “ವ್ಯಕ್ತಿಯು ತನ್ನ ಆತ್ಮೀಯ ಸ್ನೇಹಿತನ ಧರ್ಮದ ಮೇಲಿರುತ್ತಾನೆ” (ತಿರ್ಮಿಧಿ, 2378). ಆದ್ದರಿಂದ ಸನ್ಮಾನ, ವೇದಿಕೆ, ಸ್ವಯಂ ಪ್ರತಿಷ್ಠೆ, ಗರ್ವ ಅಳವಡಿಸಿಕೊಂಡಿರುವ ಜನರೊಂದಿಗೆ ಅಂತರ ಕಾಯ್ದುಕೊಂಡು ನಮ್ಮನ್ನು ಅಲ್ಲಾಹನ ಮಾರ್ಗದಲ್ಲಿ ಸ್ಥಿರವಾಗಿಸುವ ಜನರ ಸೌಬತ್ (ಗೆಳೆತನ) ಬೆಳೆಸುವುದು.
“ನಾನು” ಎಂಬ ಬಲೆಯು ಸೂಕ್ಷ್ಮವಾದರೂ ಅಪಾಯಕಾರಿ ಶಕ್ತಿಯಾಗಿದೆ. ಇದು ನಮ್ಮನ್ನು ಅಲ್ಲಾಹನ ಮಾರ್ಗದಿಂದ ದಾರಿ ತಪ್ಪಿಸಬಹುದು. ಆತ್ಮದ ಕುಣಿಕೆಗಳನ್ನು ಗುರುತಿಸಿ, ವಿನಯ, ಕೃತಜ್ಞತೆ ಮತ್ತು ಸಮರ್ಪಣೆಯ ಇಸ್ಲಾಮಿ ತತ್ವಗಳನ್ನು ಅಳವಡಿಸಿಕೊಳ್ಳುವ ಮೂಲಕ, ನಾವು “ನಾನು” ಎಂಬುವುದನ್ನು ಮೀರಿ ನಮ್ಮ ಸೃಷ್ಟಿಕರ್ತನಿಗೆ ಹತ್ತಿರವಾಗಬಹುದು. ಕುರಾನ್ ಈ ಪಯಣವನ್ನು ಸುಂದರವಾಗಿ ಸಂಕ್ಷೇಪಿಸುತ್ತದೆ: “ಓ ಶಾಂತಿಯಲ್ಲಿರುವ ಆತ್ಮವೇ, ನಿನ್ನ ಪ್ರಭುವಿನ ಬಳಿಗೆ ತೃಪ್ತಿಯಿಂದ ಮತ್ತು ಆತನಿಗೆ ತೃಪ್ತಿಕರವಾಗಿ ಮರಳು” (89:27-28). “ನಾನು” ಎಂಬ ದೌರ್ಬಲ್ಯವನ್ನು ಸ್ತಬ್ಧಗೊಳಿಸಿ, ಅದರ ಬದಲಿಗೆ ಅಲ್ಲಾಹನ ಸ್ಮರಣೆ, ಕೃತಜ್ಞತೆಯನ್ನು ಪರ್ಯಾಯವಾಗಿಸೋಣ. ಏಕೆಂದರೆ ಆತನ ಸ್ಮರಣೆಯಲ್ಲಿ ಹೃದಯವು ಶಾಂತಿಯನ್ನು ಕಂಡುಕೊಳ್ಳುತ್ತವೆ. ಅಲ್ಲಾಹನು ನಮ್ಮ ತಪ್ಪುಗಳನ್ನು ಮನ್ನಿಸಿ ಆತನ ಮಾರ್ಗದಲ್ಲಿ ಸ್ಥಿರವಾಗಿಸಲಿ.



















































