ದಿನಾಂಕ:25.04.2020

ಸನ್ಮಾನ್ಯ ಶ್ರೀ ಯಡಿಯೂರಪ್ಪನವರು
ಗೌರವಾನ್ವಿತ ಮುಖ್ಯ ಮಂತ್ರಿಗಳು
ಕರ್ನಾಟಕ ಸರ್ಕಾರ
ವಿಧಾನಸೌಧ,ಬೆಂಗಳೂರು

ಮನವಿ ಪತ್ರ

ಗೌರವಾನ್ವಿತ ಸರ್,

ವಿಷಯ: ಇಂದಿನ ಪರಿಸ್ಥಿತಿಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುವುದು ಸೂಕ್ತವಲ್ಲವೆಂಬುದನ್ನು ತಮ್ಮ ಅವಗಾಹನೆಗೆ ತರುವ ಬಗ್ಗೆ

ಶಿಕ್ಷಣ ಕ್ಷೇತ್ರದಲ್ಲಿ ಹಲವು ದಶಕಗಳು ಕೆಲಸ ನಿರ್ವಹಿಸಿದ ಸುಮಾರು 3-4 ದಶಕಗಳ ಅಪಾರ ಆಡಳಿತ ಹಾಗು ಶೈಕ್ಷಣಿಕ ಅನುಭವವುಳ್ಳ ನಿವೃತ್ತ ನಿರ್ದೇಶಕರುಗಳು , ಇಲಾಖೆಯ ಹತ್ತಾರು ಹಿರಿಯ ವಿಶ್ರಾಂತ ಅಧಿಕಾರಿಗಳು ಹಾಗು ಈ ಕ್ಷೇತ್ರದಲ್ಲಿ ಕೆಳಸ್ಥರದಲ್ಲಿ ಕೆಲಸ ನಿರ್ವಹಿಸುವ ಹಲವು ಮೂಲ ವಾರಸುದಾರರರ ಜೊತೆ ವಿಸ್ತೃತವಾಗಿ ಚರ್ಚಿಸಿದ ನಾವು ಈ ದೇಶದ ಪ್ರಜ್ಞಾವಂತ ನಾಗರೀಕರಾಗಿ ಎಸ್ಎಸ್ಎಲ್ ಸಿ ಪರೀಕ್ಷೆಯ ಬಗ್ಗೆ ನಮ್ಮ ಅನಿಸಿಕೆಗಳನ್ನು ಹಾಗು ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬೇಕೆಂಬ ತುಡಿತದೊಂದಿಗೆ ಈ ಪತ್ರ ಬರೆಯುತ್ತಿದ್ದೇವೆ .

ಇಡೀ ಪ್ರಪಂಚವೇ ಈ ಕೋವಿಡ್ 19 ರ ಕರಾಳ ಹಸ್ತದಡಿ ನಲುಗಿ ಮುಂದೇನು ಎಂಬ ಭಯದಲ್ಲಿ ನಲುಗುತ್ತಿದೆ. ಇದರಲ್ಲಿ ನಮ್ಮ ದೇಶ ಹಾಗು ನಮ್ಮ ರಾಜ್ಯ ಹೊರತಾಗಿಲ್ಲ ಎನ್ನುವುದು ನನ್ನ ಅನಿಸಿಕೆ. ನಮ್ಮ ಮನೆಯ ಜನರೇ ಕೆಲಸದ ನಿಮಿತ್ತ ಹೊರಗೆ ಹೋಗಿ ಮನೆಗೆ ಬಂದರೆ, ಅವರಿಗೆ ಎಲ್ಲಿ ಸೋಂಕು ಬಂದಿದೆಯೋ, ಅವರಿಂದ ನಮಗೆ ಏನಾಗುತ್ತದೆಯೋ ಎನ್ನುವ ಹೆದರಿಕೆ, ಅಪನಂಬಿಕೆ, ಭಯ ಶುರುವಾಗಿದೆ.

ಕರ್ನಾಟಕ ಸರ್ಕಾರ ಜೂನ್ ತಿಂಗಳಿನಲ್ಲಿ ಎಸ್ .ಎಸ್. ಎಲ್. ಸಿ. ಪರೀಕ್ಷೆಯನ್ನು ಮಾಡುವುದಾಗಿ ಪ್ರಕಟಿಸಿದೆ. 10 ನೇ ತರಗತಿ ಶೈಕ್ಷಣಿಕ ಏಣಿಯಲ್ಲಿ ಮಹತ್ವದ ಘಟ್ಟವಾಗಿದ್ದು ಎಸ್ ಎಸ್ ಎಲ್ ಸಿ ಪ್ರಮಾಣ ಪತ್ರವು ಒಂದು ಮಹತ್ವದ ದಾಖಲೆಯಾಗಿದೆ. ಎಲ್ಲಾ ಮಕ್ಕಳು ತೇರ್ಗಡೆಯಾಗಿ ಆ ಪ್ರಮಾಣ ಪತ್ರವನ್ನು ಪಡೆಯುವುದು ಅತ್ಯಂತ ಮಹತ್ವದ ವಿಷಯವೆಂಬುದನ್ನು ನಾವು ಮನಗಂಡಿದ್ದೇವೆ. ಆದರೆ, ವಿದ್ಯಾರ್ಥಿಗಳ ಜೀವದ ಹಿತದೃಷ್ಟಿಯಿಂದ, ಈ ಸಂದರ್ಭದಲ್ಲಿ ಪರೀಕ್ಷೆಯಿಲ್ಲದೆ ಅವರ ಹಿಂದಿನ ಶೈಕ್ಷಣಿಕ ಪ್ರತಿಭೆ/ಕಾರ್ಯಕ್ಷಮತೆಯನ್ನು ನೋಡಿ ತೇರ್ಗಡೆ ಮಾಡುತ್ತಿರುವುದರಿಂದ ಮಕ್ಕಳ ಪ್ರೊಫೈಲ್ ಇದ್ದೇ ಇರುತ್ತದೆ. ನಮ್ಮ ಕಳಕಳಿ ಪರೀಕ್ಷೆ ಬೇಡವೆನ್ನುವದಷ್ಟೇ ಹೊರತು ಮಹತ್ವ ಪ್ರಮಾಣ ಪತ್ರದ ಬಗ್ಗೆ ಅಲ್ಲ. ಪರೀಕ್ಷೆ ಇಲ್ಲದೆಯೂ ಎಲ್ಲಾ ಮಕ್ಕಳಿಗೆ ಎಂದಿನಂತೆ ಎಸ್ ಎಸ್ ಎಲ್ ಸಿ ಪ್ರಮಾಣ ಪತ್ರ ದೊರೆಯಬೇಕು. ಕೋವಿಡ್ ನ ಈ ಸಂಕಷ್ಟದ ಸಂದರ್ಭದಲ್ಲಿ ಇದೊಂದು ನಿರ್ಣಾಯಕ ತೀರ್ಮಾನವಾಗಲಿದ್ದು ಲಕ್ಷ-ಲಕ್ಷ ಮಕ್ಕಳು ಪಾಲಕರು ಆತಂಕ , ಖಿನ್ನತೆ ಮತ್ತು ಭಯದಿಂದ ಹೊರಬಂದು ಸರ್ಕಾರದ ಈ ನಿರ್ಣಯಕ್ಕೆ ಚಿರಋಣಿಗಳಾಗಲಿದ್ದಾರೆ.

ಈ ಹಿನ್ನೆಲೆಯಲ್ಲಿ , ನಿಜವಾಗಿಯೂ ಪರೀಕ್ಷೆಯನ್ನು ನಡೆಸುವುದು ಅನಿವಾರ್ಯವೇ? ಅತಿಮುಖ್ಯವೇ? ಸಮಂಜಸವೇ? ಈ ಪರೀಕ್ಷೆ ವಿದ್ಯಾರ್ಥಿಗಳ ಜೀವಕ್ಕಿಂತ ದೊಡ್ಡದೇ? ಎನ್ನುವುದನ್ನು ಸರ್ಕಾರ ಮನಗಾಣಬೇಕಿದೆ . ಈ ವಿಷಯದಲ್ಲಿ ಈಗಾಗಲೇ ಹಲವು ರಾಜ್ಯಗಳು ಪರೀಕ್ಷೆ ರದ್ದುಮಾಡಿ ಎಲ್ಲಾ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡುವ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಿ, ಎಲ್ಲಾ ವಿದ್ಯಾರ್ಥಿಗಳಿಗೂ ತೇರ್ಗಡೆ ಮಾಡಿ ಅವರಿಗೆ ಪ್ರಮಾಣ ಪತ್ರಗಳನ್ನು ನೀಡಬೇಕು ಎಂಬುದಕ್ಕೆ ಸ್ಪಷ್ಟವಾದ ವೈಜ್ಞಾನಿಕ ಕಾರಣಗಳನ್ನೊಳಗೊಂಡ ಅಂಶಗಳನ್ನು ಘನ ಸರ್ಕಾರದ ಮುಂದೆ ಇಡ ಬಯುಸುತ್ತೇವೆ.

ಈ ಬಾರಿ ಪರೀಕ್ಷೆಯನ್ನು ತೆಗೆದುಕೊಳ್ಳಬಹುದಾದ ವಿದ್ಯಾರ್ಥಿಗಳ ಅಂದಾಜು ಸಂಖ್ಯೆ: 8.5 ಲಕ್ಷ (ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವೆಬ್ ಸೈಟ್ ಮಾಹಿತಿಯಂತೆ). ಪರೀಕ್ಷೆಯ ನಿರ್ವಾಹಕ ಸಿಬ್ಬಂದಿ ಅಂದಾಜು 2.2 ಲಕ್ಷ. ಇವರಲ್ಲಿ ದುರದ್ರಷ್ಟವಶಾತ್ ಯಾರಿಗಾದರೂ ಸೋಂಕು ಉಂಟಾಗಿ ಅವರಿಗೆ ಏನಾದರು ಆದರೆ ಇದರ ಜವಾಬ್ದಾರರು ಯಾರು ಎಂಬುದು ಕುಟುಂಬದವರ ಪ್ರಶ್ನೆ.
ಪರೀಕ್ಷೆಯ ಸಂದರ್ಭದಲ್ಲಿ , ಪರೀಕ್ಷೆಯನ್ನು ತೆಗೆದುಕೊಳ್ಳುವ ವಿದ್ಯಾರ್ಥಿಯ ಕುಟುಂಬ (ಕನಿಷ್ಠ ಮೂರು ಮಂದಿ) ಹಾಗು ನಿರ್ವಹಣಾ ಸಿಬ್ಬಂದಿ ಅಂದರೆ ಸುಮಾರು 25-30 ಲಕ್ಷ ಮಂದಿಯು ಪ್ರತಿದಿನ ಆತಂಕದಲ್ಲಿ ಇರುತ್ತಾರೆ. ವಿದ್ಯಾರ್ಥಿಗಳು ಕೂಡ ಇಂತಹ ಭಯದ ಸನ್ನಿವೇಶದಲ್ಲಿ ಹೇಗೆ ಅವರು ತಮ್ಮ ಗಮನವನ್ನು ಕೇಂದ್ರೀಕರಿಸಿ ಆತಂಕರಹಿತವಾಗಿ ಪರೀಕ್ಷೆಯನ್ನು ಬರೆಯಲು ಹೇಗೆ ಸಾಧ್ಯವಾಗುತ್ತದೆ? ಪರೀಕ್ಷೆಯ ನಿರ್ವಾಹಕ ಸಿಬ್ಬಂದಿಯು ಹೇಗೆ ತಾನೇ ಮಾನಸಿಕ ಒತ್ತಡದಲ್ಲಿ ಪರೀಕ್ಷೆಯನ್ನು ನಡೆಸಲು ಸಾಧ್ಯ?
ಪರೀಕ್ಷೆ ನಡೆಸುವ ಹಾಗು ನಂತರದಲ್ಲಿ ಪರೀಕ್ಷೆಯಲ್ಲಿ ನೇರವಾಗಿ ಭಾಗಿಯಾಗುವವರಿಗೆ ಸೋಂಕು ಹರಡುವ ಭಯ, ಅವರ ಕುಟುಬದವರಿಗೆ ಯಾವಾಗ ಏನಾಗುವುದೋ ಎನ್ನುವ ಆತಂಕ ಮತ್ತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೂ ಕೂಡ ಅದೇ ಬಗೆಯ ಉದ್ವೇಗ ಮತ್ತು ಒತ್ತಡ ಹೆಚ್ಚುವುದಿಲ್ಲವೇ .
ಬಹುತೇಕ ಪರೀಕ್ಷಾ ಕೇಂದ್ರಗಳಿರುವುದು ಜಿಲ್ಲಾ ಕೇಂದ್ರಗಳಲ್ಲಿ ಆದರೆ ರಾಮನಗರ ಹೊರತು ಪಡಿಸಿ ಎಲ್ಲಾ ಜಿಲ್ಲೆಗಳು ಕೋವಿದ್ ಕಂಟೈನ್ ಮೆಂಟ್ ಜೋನ್ ನಲ್ಲಿವೆ. ಇನ್ನು ಉಳಿದಿರುವ ಕೇಂದ್ರಗಳು ಹೋಬಳಿ ಮತ್ತು ತಾಲೂಕು ಮಟ್ಟದ ಕ್ಲಸ್ಟರ್ ಕೇಂದ್ರಗಳಾಗಿರುವುದರಿಂದ ಮತ್ತೊಮ್ಮೆ ಸುಮಾರು 8 ಲಕ್ಷ ವಿದ್ಯಾರ್ಥಿಗಳು ಮತ್ತು ಅಷ್ಟೇ ಸಂಖ್ಯೆಯ ಪೋಷಕರು ಪರಸ್ಪರ ಭೇಟಿಯಾದರೆ ಇದಕ್ಕಿಂತ ದುರಂತ ಮತ್ತೇನಿದೆ. ಜಿಲ್ಲಾ ಕೇಂದ್ರಗಳು ಹಲವು ಶಾಲೆಗಳನ್ನು ಹೊಂದಿರುವ ಕ್ಲಸ್ಟರ್ ಪರೀಕ್ಷಾ ಕೇಂದ್ರ ಗಳನ್ನು ಹೊಂದಿರುವುದರಿಂದ ಇದು ಪೋಷಕರು ಮತ್ತು ವಿದ್ಯಾರ್ಥಿಗಳು ನಗರದಾದ್ಯಂತ ಸಂಚರಿಸಲು ಅನುವು ಮಾಡಿಕೊಟ್ಟಂತಾಗುವುದಿಲ್ಲವೇ ?
ಇನ್ನು ಪ್ರಶ್ನೆ ಪತ್ರಿಕೆ ಪೂರಿಕೆಯಾಗುವುದು ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರಗಳಿಂದ ಇದರಿಂದ ಕೋವಿಂದ್ ಸೋಂಕು ಜಿಲ್ಲಾ ಕೆಂದ್ರಗಳಿಂದ ತಾಲೂಕು ಕೇಂದ್ರ ಗಳತ್ತ ಪಸರಿಸಲು ಇದು ದಾರಿ ಮಾಡಕೊಡುವುದಿಲ್ಲವೆ?
ಪರೀಕ್ಷೆ ಬರೆಯಲು ಜ್ವರ ವಿರುವವರಿಗೆ ಬೇರೆ ವ್ಯವಸ್ಥೆ .ಮಾಡುತ್ತೇವೆ ಎಂದು ಹೇಳಿದ್ದೀರಾದರು ಇಂತಹ ಸಮಯದಲ್ಲಿ ನನಗೆ ಜ್ವರವಿದೆಯೆಂದು ಯಾರು ತಾನೆ ಹೇಳುತ್ತಾರೆ? ಇದು ಸಾಧ್ಯವಿಲ್ಲದ ಮಾತು.ಇನ್ನು ಥರ್ಮಲ್ ಸ್ಕ್ಯಾನರ್ ಮಾತು ಜ್ವರದಿಂದ ಬಳಲುವವರು ಪ್ಯಾರಾಸಿಟಮಲ್ ಔಷಧಿ ಸೇವನೆ ಮಾಡಿದ್ದರೆ ಜ್ವರ ಪತ್ತೆ ಯಾಗದೇ ಇರುವ ಸಾಧ್ಯತೆಯೆ ಹೆಚ್ಚು. ಯಾವುದಾದರೊಂದು ಪರೀಕ್ಷಾ ಕೇಂದ್ರದಲ್ಲಿ ಕೋವಿದ್ ಪ್ರಕರಣ ನುಸುಳಿದರೆ ಯಾರನ್ನು ಕ್ವಾರಂಟಯಿನ್ ಮಾಡುತ್ತೀರಿ; ಶಾಲಾ ಮಕ್ಕಳು, ಎಲ್ಲಾ ಪೋಷಕರು, ಪರೀಕ್ಷಾ ಕೇಂದ್ರದ ಎಲ್ಲಾ ಸಿಬ್ಬಂದಿ, ಪ್ರಶ್ನೆ ಪತ್ರಿಕೆ ಪೂರೈಕೆ ಮಾಡುವವರು, ಖಜಾನೆ ಸಿಬ್ಬಂದಿ, ಪರೀಕ್ಷಾ ಅಧಿಕಾರಿಗಳು, ಬಸ್ ನಲ್ಲಿ ಸಂಚರಿಸಿದ ಎಲ್ಲರನ್ನೂ, ಆ ಪ್ರದೇಶದಲ್ಲಿ ವಾಸಿಸುವ ಎಲ್ಲರನ್ನೂ!

ಪರೀಕ್ಷೆಯನ್ನು ನಡೆಸಲು ಹೆಚ್ಚಿನ ಕಟ್ಟಡಗಳು, ಸಿ.ಸಿ.ಟಿ.ವಿ ಕ್ಯಾಮರಾಗಳು ಹಾಗು ದೈಹಿಕ ದೂರವನ್ನು ಕಾಪಾಡಿಕೊಳ್ಳಲು ಹೆಚ್ಚಿನ ಪೀಠೋಪಕರಣಗಳು/ ಆಸನ ವ್ಯವಸ್ಥೆಗೆ ಹೆಚ್ಚಿನ ಖರ್ಚು, ಇದನ್ನು ಭರಿಸಲು ಸರ್ಕಾರದ ಮೇಲೆ ಆರ್ಥಿಕ ಒತ್ತಡವಾಗುವುದಿಲ್ಲವೇ ?

ಪರೀಕ್ಷೆಯ ನಂತರ ಕೇಂದ್ರೀಕೃತ ಮೌಲ್ಯಮಾಪನ; ಇದರಲ್ಲಿ ಭಾಗಿಯಾಗುವ ಶಿಕ್ಷಕರ ಮನೋಸ್ಥಿತಿ ಹಾಗು ಇದಕ್ಕೆ ತಗಲುವ ವೆಚ್ಚ ಸುಮಾರು 15 ರಿಂದ 20 ಕೋಟಿ. ಪರೀಕ್ಷೆಯಲ್ಲಿ ಅನುತ್ತೀರ್ಣ ಆಗುವವರಿಗೆ (ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವೆಬ್ ಸೈಟ್ ಮಾಹಿತಿಯಂತೆ ಸುಮಾರು 2.2 ಲಕ್ಷ) ಮತ್ತೆ ಮರು ಪರೀಕ್ಷೆ ಹಾಗು ಮರು ಮೌಲ್ಯಮಾಪನ.
ಪರೀಕ್ಷೆ ನಡೆಸದಿದ್ದರೆ ಕೆಲವು ವಿದ್ಯಾರ್ಥಿಗಳಿಗೂ ಹಾಗು ಅವರ ಪೋಷಕರಿಗೆ ನಿರಾಸೆಯಾಗಬಹುದು. ಪರೀಕ್ಷಾಮಂಡಳಿ ಮುದ್ರಿಸಿರುವ ಪ್ರಶ್ನೆ ಪತ್ರಿಕೆಗಳು ಈ ವರ್ಷ ಬಳಕೆಯಾಗುವುದಿಲ್ಲ . ಆದರೆ, ಪರೀಕ್ಷೆಯನ್ನು ನಡೆಸಿ ನಮ್ಮ ಯುವ ವಿದ್ಯಾರ್ಥಿಗಳ ಜೀವಕ್ಕೆ ಆಗುವ ತೊಂದರೆಯ ಮುಂದೆ ಬಹುಷಃ, ಕೆಲವು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಆಗುವ ನಿರಾಸೆಯನ್ನು ಸಹಿಸಿಕೊಳ್ಳಬಹುದು ಎಂದು ಭಾವಿಸುತ್ತೇವೆ. ಮುದ್ರಿಸಿರುವ ಪ್ರಶ್ನೆಪತ್ರಿಕೆಗಳನ್ನು ಜೋಪಾನವಾಗಿ ಕಾಯ್ದಿರಿಸಿ, ಮುಂದಿನ ವರುಷ ಮತ್ತೆ ಮರು ಬಳಸಬಹುದಲ್ಲವೇ?

ಇದೆಲ್ಲದರ ಜೊತೆಗೆ ಈಗ ಕೆಲವು ಖಾಸಗಿ ಸಂಘ ಸಂಸ್ಥೆಗಳು ಮಕ್ಕಳಿಗೆ ನೆರವು ಮಾಡುವ ನೆಪದಲ್ಲಿ ಪ್ರಶ್ನೆಗಳ ಬ್ಯಾಂಕ್ ತಯಾರಿಸಿ ಅದು ಹೆಚ್ಚು ಉಪಯುಕ್ತವಾಗಿದೆ ಎಂಬ ಸೋಗಿನಲ್ಲಿ ಮಾರಾಟ ಪ್ರಾರಂಭಿಸದ್ದು ಇದು ದೊಡ್ಡ ಮಟ್ಟದಲ್ಲಿ ಮಕ್ಕಳ-ಪಾಲಕರ ಶೋಷಣೆಗೆ ಎಡೆಮಾಡಿಕೊಡುವುದಲ್ಲದೆ ವ್ಯಾಪಕ ಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆ. ಇದನ್ನು ನಿಲ್ಲಿಸಬಹುದು

ಪರೀಕ್ಷೆಗೆ ತಗಲುವ ಕೋಟಿಗಟ್ಟಲೆ ಹಣವನ್ನು ಶಿಕ್ಷಣ ಕ್ಷೇತ್ರದಲ್ಲಿನ ಪ್ರಮುಖ ಸಮಸ್ಯೆಗಳಾದ ಮೂಲಸೌಕರ್ಯ , ಪೌಷ್ಠಿಕಾಂಶ , ಮಕ್ಕಳ ಆರೋಗ್ಯ ಅಥವಾ ರಾಜ್ಯವು ಭರಿಸುತ್ತಿರುವ ವೈದ್ಯಕೀಯ ವೆಚ್ಚಗಳನ್ನು ನಿರ್ವಹಿಸಲು ಇತ್ಯಾದಿಗಳಿಗೆ ಬಳಬಹುದಲ್ಲವೇ? (ಪರೀಕ್ಷೆಯಿಂದ ಉಂಟಾಗುವ ಆತಂಕ, ಭಯ, ಒತ್ತಡಗಳ ಖರ್ಚು-ವೆಚ್ಚವನ್ನು ಲೆಕ್ಕ ಮಾಡಲು ಸಾಧ್ಯವಿಲ್ಲ) .

ಈ ಸಂದರ್ಭದಲ್ಲಿ , ಖ್ಯಾತ ವೈದ್ಯರಾದ ಡಾ.ದೇವಿಶೆಟ್ಟಿ ಯವರು ಅಭಿಪ್ರಾಯವನ್ನು ಉಲ್ಲೇಖಿಸುವುದು ಸೂಕ್ತ:

“ಲಾಕ್ಡೌನ್ನ ಆರ್ಥಿಕ ಪರಿಣಾಮ ಮತ್ತು ಜನರು ಎದುರಿಸುತ್ತಿರುವ ಕಷ್ಟಗಳಿಗೆ ಸಂಬಂಧಿಸಿದಂತೆ, ನಾವೆಲ್ಲರೂ ಜೀವಂತವಾಗಿರುವಾಗ ಮಾತ್ರ ಆರ್ಥಿಕ ವಿಚಾರಗಳು ಮಹತ್ವದ್ದಾಗಿದೆ ಎಂದು ನಾನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ, ಆದ್ದರಿಂದ ನಮ್ಮ ಆದ್ಯತೆಗಳನ್ನು ಸರಿಯಾಗಿ ತೀರ್ಮಾನಿಸುವುದ ಮುಖ್ಯವಾಗಿದೆ”

ಎಲ್ಲಕ್ಕಿಂತ ಹೆಚ್ಚಾಗಿ, ನಮ್ಮ ವಿದ್ಯಾರ್ಥಿಗಳನ್ನು, ಶಿಕ್ಷಕರನ್ನು, ಅಧಿಕಾರಿಗಳನ್ನು ಮತ್ತು ನಿರ್ವಾಹಕ ಸಿಬ್ಬಂದಿಯನ್ನು ಕೋವಿಡ್ 19 ಪಿಡುಗಿನಿಂದ ರಕ್ಷಿಸಬಹುದು.
ನಾವು ಈಗಾಗಲೇ , ವಲಸೆ ಕಾರ್ಮಿಕರ ವಿಚಾರದಲ್ಲಿ ಎಡವಿದ ಪರಿಣಾಮ ಏನಾಯಿತು ಎಂಬುದನ್ನು ಖುದ್ದಾಗಿ ನೋಡಿದ್ದೇವೆ. ಅದರಿಂದ ಉಂಟಾದ ಪರಿಣಾಮದಿಂದ ಎಷ್ಟು ಜನರು ಜೀವ ಕಳೆದುಕೊಳ್ಳಬೇಕಾಯಿತು ಎಂಬುದು ನಮ್ಮ ಮುಂದೆ ಜ್ವಲಂತ ಸಾಕ್ಷಿಯಿದೆ
ಕೊನೆಯದಾಗಿ , ನಮ್ಮ ಮಗಳು/ಮಗ ಇಂತಹ ಸನ್ನಿವೇಶದಲ್ಲಿ ಪರೀಕ್ಷೆ ಎದುರಿಸಿದ್ದರೆ ಒಬ್ಬ ತಂದೆ/ತಾಯಿಯಾಗಿ ನಮಗೆ ಯಾವ ರೀತಿಯ ಭಯ. ಆತಂಕ, ಒತ್ತಡ ಇರುತ್ತಿತ್ತು ಎನ್ನುವುದನ್ನು ಆಧರಿಸಿ ನಮ್ಮ ಅನಿಸಿಕೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ . ಎಲ್ಲಾ ಪೋಷಕರು ಬಹುಷಃ ನಮ್ಮ ಅಭಿಪ್ರಾಯಗಳಿಗೆ ಸಮ್ಮತಿಸುತ್ತಾರೆಂದು ಭಾವಿಸುತ್ತೇವೆ.

ತಮ್ಮ ನೇತೃತ್ವದ ಈ ಘನ ಸರ್ಕಾರವು ಪರೀಕ್ಷೆ ನಡೆಸುವ ನಿರ್ಧಾರವನ್ನು ಕೈಬಿಟ್ಟು ಮಕ್ಕಳ –ಪಾಲಕರ-ಇಲಾಖೆಯ ಅಧಿಕಾರಿಗಳ/ಸಿಬ್ಬಂದಿಯ ಜೀವ ರಕ್ಷಣೆಗೆ ಮೊದಲ ಆದ್ಯತೆ ನೀಡುತ್ತದೆಯೆಂದು ನಂಬುತ್ತೇವೆ.ಪರೀಕ್ಷೆಯನ್ನು ರದ್ದುಗೊಳಿಸಿ ಎಲ್ಲಾ ಮಕ್ಕಳನ್ನು ತೇರ್ಗಡೆ ಮಾಡಲು ಒಕ್ಕೊರಲಿನಿಂದ ನಾವೆಲ್ಲರೂ ತಮ್ಮ ಘನ ಸರ್ಕಾರವನ್ನು ಒತ್ತಾಯಿಸುತ್ತೇವೆ.

ಕೋಡಿಹಳ್ಳಿ ಚಂದ್ರಶೇಖರ
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ
ಮಾವಳ್ಳಿ ಶಂಕರ್
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)
ಬಸವರಾಜ ಗುರಿಕಾರ ಪ್ರಾಥಮಿಕ ಶಿಕ್ಷಕರ ಫೆಡರೇಷನ್ (ಎಐಪಿಟಿಎಫ್)
ಜಗನ್ನಾಥರಾವ್ .ಡಿ
ಕರ್ನಾಟಕ ರಾಜ್ಯ ನಿವೃತ್ತ ಶಿಕ್ಷಣ ಅಧಿಕಾರಿಗಳ ವೇದಿಕೆ
ನಿರಂಜನಾರಾದ್ಯ .ವಿ.ಪಿ
ಶಿಕ್ಷಣದ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ (ಫಾಫ್ರೆ)
ಶ್ರೀಮತಿ ಜಯಮ್ಮ
ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕರ ಫೆಡರೇಷನ್
ಶುಭಂಕರ್
ಭಾರತ ಜ್ಞಾನ ವಿಜ್ಞಾನ ಸಮಿತಿ
ಶ್ರೀಮತಿ ವಿದ್ಯಾ ಪಾಟೀಲ್
ರಾಜ್ಯ ಮಹಿಳಾ ಒಕ್ಕೂಟ
ಶ್ರೀಮತಿ ಜ್ಯೋತಿ.ಕೆ
ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್
ಮೊಹಮ್ಮದ್ ಪೀರ್ ಲಟಗೇರಿ
ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ,ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಷನ್ ,ಕರ್ನಾಟಕ
ಮೊಯ್ಯುದ್ದೀನ್ ಕುಟ್ಟಿ
ಕರ್ನಾಟಕ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ
ಶ್ರೀ.ಬಿ.ಪಾದ್ ಭಟ್
ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ
ಸರೋವರ್
ಕರ್ನಾಟಕ ವಿದ್ಯಾರ್ಥಿ ಸಂಘ
ಗಂಗಾಧರ
ಸಮ ಸಮಾಜಕ್ಕಾಗಿ ಗೆಳೆಯರ ಬಳಗ
ಶ್ರೀಮತಿ ಗಾಯತ್ರಿ ದೇವಿ ದತ್
ನಿವೃತ್ತ ನಿರ್ದೇಶಕರು,ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ
ಸಿದ್ಧರಾಮ ಮನೋಳ್ಳಿ
ನಿವೃತ್ತ ನಿರ್ದೇಶಕರು,ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ
ಸಿ.ವಿ.ತಿರುಮಲರಾವ್
ನಿವೃತ್ತ ಜಂಟಿ-ನಿರ್ದೇಶಕರು,ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ
ಫಾದರ್ ಸತೀಸ್
ವಿಮುಕ್ತಿ

LEAVE A REPLY

Please enter your comment!
Please enter your name here