• ಸಾವನ್ ಕೆ ಸಿಂಧನೂರ್

ಸಿನಿಮಾ ವಿಮರ್ಷೆ

ಹೆಸರೇ ಒಂಚೂರು ವಿಚಿತ್ರವಾಗಿರೋ ಈ ಸಿನಿಮಾ ಒಂದು ಸಸ್ಪೆನ್ಸ್ ಥ್ರಿಲ್ಲರ್. ಹಿಂದೂ ಮೈಥಾಲಜಿಯಲ್ಲಿ ಈ ಚೀನಿ ಡ್ರಾಗನ್ ರೂಪದ ರಾಕ್ಷಸನೊಬ್ಬನ ಉಲ್ಲೇಖವಿದೆ. ಆ ಹೆಸರಿನ ಮೊದಲಾರ್ಧ ಭಾಗವನ್ನೇ ಟೈಟಲ್ ಮಾಡಿಕೊಂಡಿರೋ ಈ ಸಿನಿಮಾ ತನ್ನ ಹೆಸರಿನಿಂದಲೇ ಗಮನ ಸೆಳೆಯುತ್ತದೆ. ಕೇವಲ ಒಂದು ಗಂಟೆ 48 ನಿಮಿಷ ಇರೋ ಈ ಸಿನಿಮಾದ ನಿರ್ದೇಶಕ ತನ್ನ ಮೊದಲ ಪ್ರಯತ್ನದಲ್ಲೇ ಗೆದ್ದಿದ್ದಾನೆ ಎಂದೇ ಹೇಳಬಹುದು. ಇದಕ್ಕೆ ಕಾರಣ ನೋಡುಗನ ಕುತೂಹಲವನ್ನು ಕೊನೆಯವರೆಗೂ ಉಳಿಸಿಕೊಂಡಿರುವುದೇ ಒಂದು ಸಾಕ್ಷಿ. 

ಒಂದು ಐಷಾರಾಮಿ ಪ್ಲಾಟ್ ನಲ್ಲಿ ನಡೆದ ಮುಚ್ಚಿ ಹೋಗಬಹುದಾಗಿದ್ದ ಆತ್ಮಹತ್ಯೆ ಕೇಸ್ ಒಂದನ್ನು ಹಿಡಿದು ಹೊರಡುವ ಕ್ರೈಮ್ ಬ್ರಾಂಚ್ ಇನ್ಸ್ಪೆಕ್ಟರ್ ಇಂದ್ರಾ ಗೆ ಸಿಕ್ಕುವುದೆಲ್ಲ ಊಹೆಗೆ ನಿಲುಕದ ವಿಚಾರಗಳೇ. ಇದು ಅವಳ ಸರ್ವಿಸ್ ನ ಮೊಟ್ಟ ಮೊದಲ ಕೇಸ್ ಕೂಡ ಆಗಿರುತ್ತೆ. ವೈ ಫೈ ಹ್ಯಾಕ್, ಇಂಟಲಿಜಂಟ್ ಟೆಕ್ನಿಕ್ ಬಳಸಿ ಮಾಡಿದ ಕಿಡ್ನಾಪ್ ಕೇಸ್, ಒಂದಿಷ್ಟು ರಾಬರಿ ಕೇಸ್ ಎಲ್ಲವನ್ನೂ ಕೊಲಾಜ್ ರೀತಿಯಲ್ಲಿ ಹೆಣೆದು ಅಂತ್ಯದವರೆಗೂ ಬಿಡಿಸದ ಸಿಕ್ಕಿನಂತೆ ತೋರಿಸುವ ನಿರ್ದೇಶಕ ಆರ್ ಗೌತಮ್ ಅಯ್ಯರ್ ತಮ್ಮ ಮೊದಲ ಪ್ರಯತ್ನದಲ್ಲೇ ಗೆದ್ದಿದ್ದಾರೆ. ಇನ್ನೂ ಲೇಡಿ ಕ್ರೈಮ್ ಬ್ರಾಂಚ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ನಟಿಸಿರುವ ನಿತ್ಯಾ ಶ್ರೀ ಅವರದ್ದು ಭಾವರಹಿತ ಆದರೆ ಹದವರಿತ ಅಭಿನಯ. ಪ್ರಕಾಶ್ ಬೆಳವಾಡಿ, ಸುಧಾರಾಣಿ ಅವರಂತಹ ಖ್ಯಾತನಾಮ ನಟರಿದ್ದರೂ ಈ ಪಾತ್ರ ಸಿನಿಮಾ ಮುಗಿಯುವವರೆಗೂ ನಿಮ್ಮನ್ನು ಕಾಡುತ್ತದೆ. ರಶ್ಮಿಕಾ ಮಂದಣ್ಣ ಅವರು ಮಾಡಬೇಕಾಗಿದ್ದ ಈ ಪಾತ್ರವನ್ನು ಅವರು ಕ್ವಿಟ್ ಮಾಡಿದಕ್ಕೆ ತನಗೆ ಸಿಕ್ಕ ಅವಕಾಶವನ್ನು ಈ ನಟಿ ಅವರಿಗಿಂತಲೂ ಸಮರ್ಥವಾಗಿ ಬಳಸಿಕೊಂಡಿದ್ದಾರೆ ಎಂದೇ ಹೇಳಬಹುದು. ಇನ್ನೂ ಈ ಸಿನಿಮಾದಲ್ಲಿ ಕುಂಟನ ಪಾತ್ರ ಮಾಡಿದ ಸ್ಲಂ ಹುಡುಗ (ಅವನ ಹೆಸರು ಗೊತ್ತಾಗ್ತಾ ಇಲ್ಲ) ಅವನ ಬೀಡಿ ಎಸೆಯುವ ವಿಧಾನ, ಮಾತನಾಡುವ ರೀತಿ ನಿಮಗೆ ಬಾಲಿವುಡ್ ನ ನವಾಜುದ್ದೀನ್ ಸಿದ್ದಿಕಿಯನ್ನು ನೆನಪಿಸುತ್ತದೆ. ಇಂಥದ್ದೇ ಒಂದು ಪಾತ್ರವನ್ನು ನವಾಜುದ್ದೀನ್ ಅಮೀರ್ ಖಾನ್ ಅಭಿನಯದ ತಲಾಶ್ ಚಿತ್ರದಲ್ಲಿ ಮಾಡಿದ್ದಾನೆ. ಒಟ್ಟಾರೆ ಥ್ರಿಲ್ಲರ್ ಇಷ್ಟಪಡುವ ವೀಕ್ಷಕರಿಗೆ ಚಿತ್ರ ನಿರಾಸೆ ಮಾಡಲಾರದು.

ಚಿತ್ರದ ಬಿ ಜಿ ಎಂ ಮತ್ತು ಎಡಿಟಿಂಗ್(ಡಿ ಎ ವಸಂತ್), ಛಾಯಾಗ್ರಹಣ(ಆದಿತ್ಯ ವೆಂಕಟೇಶ್) ಚಿತ್ರವನ್ನು ಇನ್ನಷ್ಟು ಬಿಗಿಯಾಗಿ ಹಿಡಿದಿಟ್ಟಿವೆ. ಒಟ್ಟಾರೆ ಹಿಂದೂ ಮೈಥಾಲಜಿಯ ಪಾತ್ರವೊಂದನ್ನು ಅಡಾಫ್ಟ್ ಮಾಡಿಕೊಂಡು ಹೆಣೆದಿರುವ ಕಥೆ ಚಿತ್ರಕಥೆ ಸಂಭಾಷಣೆ ವಿಶೇಷ ಎನಿಸಲಿದೆ. ಅಂತ್ಯದಲ್ಲಿ ಬರುವ ತರುಣ್ ಸುಧೀರ್ ಪಾತ್ರ ನಿಮ್ಮನ್ನು ನಿಮ್ಮ ಊಹೆಯನ್ನು ಟಕ್ಕನೆ ಬದಲಿಸಿಬಿಡುತ್ತದೆ. ಇಂತಹ ವಿಶಿಷ್ಟ ಪಾತ್ರ ಒಂದನ್ನು ಮಾಡಿದ ಅವರು ಅಭಿನಂದನಾರ್ಹರು. ಅಮೆಜಾನ್ ಪ್ರೈಮ್ ನಲ್ಲಿದೆ ನೋಡಿ..

ಮುಖ್ಯವಾದದ್ದೊಂದು ವಿಷಯ ಮರೆತಿದ್ದೆ..

ದಯವಿಟ್ಟು ಮನೆಯಲ್ಲಿರಿ ಕರೋನ ವಿರುದ್ಧದ ಹೋರಾಟಕ್ಕೆ ಬಲ ತುಂಬಿರಿ ಪ್ಲೀಸ್ ಸ್ಟೇ ಹೋಮ್!

LEAVE A REPLY

Please enter your comment!
Please enter your name here