ತಲ್ಹಾ ಇಸ್ಮಾಯೀಲ್. ಕೆ.ಪಿ ಕಾನೂನು ವಿದ್ಯಾರ್ಥಿ, ಎಸ್.ಡಿ.ಎಂ ಕಾನೂನು ಮಹಾ ವಿದ್ಯಾಲಯ, ಮಂಗಳೂರು

ಗೌರಿ ಲಂಕೇಶ್‍ರವರ ನಿಗೂಢ ಹತ್ಯೆಯ ನಂತರ ಇಂದಿನವರೆಗೂ ಲಕ್ಷಾಂತರ ಜನರು ದೇಶಾದ್ಯಂತ ಬೀದಿಗೆ ಇಳಿದು ಪ್ರತಿಭಟಿಸಿದರು. ಆ ಹತ್ಯೆಯ ನಿಜವಾದ ಆರೋಪಿಗಳನ್ನು  ಪತ್ತೆ ಹಚ್ಚಲು ಸರಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ. ಹೀಗೆ ಎಂ.ಎಂ ಕಲಬುರ್ಗಿಯವರ, ಪನ್ಸಾರೆಯವರ, ನ್ಯಾಯವಾದಿ ನೌಶಾದ್ ಖಾಸಿಮ್ ಜೀ ..ಹೀಗೇ ಲೆಕ್ಕ ಮಾಡಲು ಹೋದರೆ ಉದ್ದವಾದ ಪಟ್ಟಿ ನಮ್ಮ ಕಣ್ಣ ಮುಂದೆ ಬರುತ್ತದೆ.

ಈ ಎಲ್ಲಾ ಜನಪ್ರಿಯ ವ್ಯಕ್ತಿಗಳ ಹತ್ಯೆಗಳು ನಿಗೂಢವಾಗಿ ನಡೆದಿರುವುದು ಮತ್ತು ಅದರ ಆರೋಪಿಗಳನ್ನು ಪತ್ತೆ ಹಚ್ಚಲು ಸರಕಾರಗಳು ವಿಫಲವಾಗುತ್ತಿರುವಾಗ ಸಾಮಾನ್ಯವಾಗಿ ಇಂತಹ ಹತ್ಯೆಗಳಿಂದ ಯಾರಿಗೆ ಲಾಭ? ಯಾರು ಇಂತಹ ಕೃತ್ಯಗಳನ್ನು ಎಸಗುತ್ತಾರೆ ಎಂಬಂತಹ ಪ್ರಶ್ನೆಗಳನ್ನು ಜನರು ಸ್ವಯಂ ತಮ್ಮಲ್ಲಿಯೇ ಕೇಳಿಕೊಳ್ಳುತ್ತಾರೆ. ಆದರೆ, ಅವರಿಗೆಲ್ಲರಿಗೂ ತಿಳಿದಿರುವ ಒಂದು ಸತ್ಯವೇನೆಂದರೆ, ಈ ವ್ಯಕ್ತಿಗಳು ಜೀವಂತವಿರುವಾಗ ಯಾವ ರೀತಿಯ ಚಿಂತನೆಗಳನ್ನು ವಿರೋಧಿಸುತ್ತಿದ್ದರು ಎಂಬುವುದಾಗಿದೆ. ಈ ರೀತಿಯ ಹತ್ಯೆಗಳು ನಡೆಯಲು ಪ್ರಮುಖ ಕಾರಣವಾಗಿ ನಮ್ಮ ನಾಗರಿಕ ಸಮುದಾಯವನ್ನು ದೂರುತ್ತೇವೆ. ಏಕೆಂದರೆ ಈ ರೀತಿಯ ಹತ್ಯೆಗಳು ದೇಶದಲ್ಲಿ ಒಂದು ಸಾಮಾನ್ಯ ಸಂಪ್ರದಾಯವಾಗಿ ಬಿಟ್ಟಿದೆ. ಅದನ್ನು ಪ್ರಶ್ನಿಸುವವರೇ ಇಲ್ಲದಾಗುತ್ತಿದ್ದಾರೆ. ಪ್ರಶ್ನಿಸಿದರೆ ಉತ್ತರವೂ ದೊರೆಯುತ್ತಿಲ್ಲ.

ನನ್ನ ಅಭಿಪ್ರಾಯದಲ್ಲಿ ಇಂತಹ ಹತ್ಯೆಗಳಿಗೆ ಒಂದು ಪ್ರಮುಖ ಕಾರಣವೆನೆಂದರೆ, ಇಂದಿಗೆ ಸುಮಾರು ಎಂಟು ವರ್ಷ ಹಿಂದೆ ನಡೆದಿರುವಂತಹ ಬಾಂಬೆ ಹೈಕೋರ್ಟು ನ್ಯಾಯವಾದಿ ಮತ್ತು ಮಾನವಹಕ್ಕು ಹೋರಾಟಗಾರ ಶಹೀದ್ ಶಾಹಿದ್ ಅಝ್ಮಿಯವರನ್ನು ಕುರ್ಲಾದಲ್ಲಿರುವ ಅವರ ಸ್ವಂತ ಕಛೇರಿಯಲ್ಲಿಯೇ ದುಷ್ಕರ್ಮಿಗಳು ಗುಂಡು ಹಾರಿಸಿ ಬರ್ಬರವಾಗಿ ಕೊಂದಿರುವ ಭೀಕರ ಘಟನೆ. ಆಗ ನಾಗರಿಕ ಸಮಾಜವು ಮೌನ ವಹಿಸಿತು. ಬೆರಳೆಣಿಕೆಯಷ್ಟೆ ಸಂಘಟನೆಗಳು, ಜನಪ್ರತಿನಿಧಿಗಳು ಅದನ್ನು ಖಂಡಿಸಿದರು. ಆದರೆ ಇಂದಿಗೆ ಎಂಟು ವರ್ಷ ಕಳೆದರೂ ಅವರ ಮನೆಯವರಿಗೆ ನ್ಯಾಯ ದೊರಕಿಲ್ಲ. ಕೊಂದವರು ಅಝ್ಮಿಯವರ ಕೊಲೆಯ ನಂತರ ದೇಶದಲ್ಲಿ ಭಯೋತ್ಪಾದಕ ಕೇಸುಗಳಲ್ಲಿ ಸಿಲುಕಿರುವ ಅಮಾಯಕ ಆರೋಪಿಗಳ ಪರವಾಗಿ ವಾದಿಸುವಂತಹ ವಕೀಲರು ಇರುವುದಿಲ್ಲವೆಂದು ಭಾವಿಸಿರಬಹುದು. ಆದರೆ, ಇಂದು ಭಯೋತ್ಪಾದಕ ಕೇಸುಗಳಲ್ಲಿ ಬಂಧನವಾಗುತ್ತಿರುವಂತಹ ಅಮಾಯಕರ ಪರವಾಗಿ ವಾದಿಸಲು ಎಷ್ಟೋ ಯುವ ವಕೀಲರು ಮುಂದೆ ಬಂದಿದ್ದಾರೆ ಅನ್ನೋದು ಒಳ್ಳೆಯ ಬೆಳವಣಿಗೆ. ಈ ರೀತಿ ಅಮಾಯಕರ ಪರವಾಗಿ ವಾದಿಸುವಂತಹ ವಕೀಲರಿಗೆ 32 ವಯಸ್ಸಿನ ಶಹೀದ್ ಅಝ್ಮಿ ಪ್ರೇರಕ ಶಕ್ತಿಯಾಗಿದ್ದಾರೆ.

ಅಝ್ಮಿಯವರು ತನ್ನ ಏಳು ವರ್ಷದ ವೃತ್ತಿ ಜೀವನದಲ್ಲಿ ಸುಮಾರು ಹದಿನೇಳು ಮಂದಿಯನ್ನು ಭಯೋತ್ಪಾದಕ ಕೇಸಿನಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಜೈಲಿಗೆ ತಳ್ಳಲ್ಪಟ್ಟಿದ್ದ ನಿರಪರಾಧಿಗಳನ್ನು ಘನತೆಯೊಂದಿಗೆ, ನ್ಯಾಯ ಪೂರ್ವಕವಾಗಿ ಬಿಡುಗಡೆಗೊಳಿಸಿದ್ದರು. ಅದೆಷ್ಟೋ ಪ್ರಸಿದ್ಧ ವಕೀಲರುಗಳಿಗೆ ಭಯೋತ್ಪಾದಕ ಕೇಸುಗಳಲ್ಲಿ ಭಾಗಿಯಾಗಿರುವಂತಹ ಅಮಾಯಕರನ್ನು ಬಿಡುಗಡೆಗೊಳಿಸಲು ದಶಕಗಳೇ ಬೇಕಾಗಿರುವಾಗ ಅಝ್ಮಿಯವರು ಕೇವಲ ಮೂರು-ನಾಲ್ಕು ವರ್ಷಗಳಲ್ಲಿಯೇ ಅಮಾಯಕರನ್ನು ಬಿಡುಗಡೆಗೊಳಿಸುತ್ತಿದ್ದರು.

ಒಮ್ಮೆ ಅವರು ಈ ರೀತಿ ಹೇಳಿದ್ದರು, “ಒಬ್ಬ ಅಮಾಯಕ ವ್ಯಕ್ತಿಯು ಭಯೋತ್ಪಾದಕ ಕೇಸು ಎಂಬ ಒಂದೇ ಕಾರಣಕ್ಕಾಗಿ ಜೈಲಿನಲ್ಲಿ ದಶಕಗಳವರೆಗೆ ಕೊಳೆಯುತ್ತಿರುವುದನ್ನು ನನ್ನಿಂದ ನೋಡಲು ಸಾಧ್ಯವಿಲ್ಲ”. ಮೂರು ದಿನಗಳ ವಕೀಲರ ತರಬೇತಿ ಶಿಬಿರದಲ್ಲಿ ಮಾತನಾಡುತ್ತ ಅವರು, “ಪ್ರಥಮವಾಗಿ ನಾವು ಮಾಡಬೇಕಾಗಿರುವ ಕೆಲಸವೇನೆಂದರೆ ಡಾಕ್ಯುಮೆಂಟೇಶನ್ ಆಫ್ ರಿಸರ್ಚ್. ಅಂದರೆ ಒಂದು ಕೇಸಿನ ಕುರಿತು ಆಳವಾದ ಸಂಶೋಧನೆ ನಡೆಯಬೇಕು. ಇಂದು ಒಂದು ಭಯೋತ್ಪಾದಕ ಕೇಸು ನಡೆದರೆ ನಾವು ಮೂರು-ನಾಲ್ಕು ವರ್ಷಗಳಲ್ಲಿಯೇ ಜನರ ಮೇಲೆ ಯಾವ ರೀತಿಯ ದೌರ್ಜನ್ಯ ನಡೆದಿದೆ ಎಂಬುವುದನ್ನೇ ಮರೆತು ಬಿಡುತ್ತೇವೆ. ಹೇಗೆ ಒಂದೇ ದಿನದಲ್ಲಿ 7/11 ಬ್ಲಾಸ್ಟ್ ಕೇಸಿನಲ್ಲಿ ಹನ್ನೊಂದು ಮಂದಿ ಆರೋಪಿಗಳು ಕನ್ಫೆಷನ್ ಸ್ಟೇಟ್‍ಮೆಂಟ್ ನೀಡಿದ್ದಾರೆ? ಅದೇ ರೀತಿ ಮಾಲೆಗಾಂವ್ ಬಾಂಬ್ ಪ್ರಕರಣದಲ್ಲಿ ಕೇವಲ ಎರಡು ದಿನದಲ್ಲಿಯೇ ಎಂಟು ಆರೋಪಿಗಳು ಕನ್ಫೆಷನ್ ಸ್ಟೇಟ್ಮೆಂಟ್‍ನ್ನು ನೀಡಲು ಹೇಗೆ ಸಾಧ್ಯ? ಪೊಲೀಸ್ ಇಲಾಖೆಯು ಅ ವ್ಯಕ್ತಿಗಳು, ಹಾರ್ಡ್‍ಕೋರ್ ಕ್ರಿಮಿನಲ್ಸ್, ಬ್ರೈನ್ ವಾಶ್ಡ್ ಕ್ರಿಮಿನಲ್ಸ್ ಎಂದು ಪದೇ ಪದೇ ಬಿಂಬಿಸುತ್ತದೆ. ಒಂದು ವೇಳೆ ಹಾಗಾದರೆ ಆ ವ್ಯಕ್ತಿಗಳು ಏಕೆತಾನೆ ತನ್ನ ತಪ್ಪುಗಳನ್ನು ಅಷ್ಟು ಬೇಗ ಒಪ್ಪಿಕೊಳ್ಳುತ್ತಾರೆ? ಇಂತಹ ಅನೇಕ ವಿಷಯಗಳ ಕುರಿತು ನಿಖರವಾದ ಸಂಶೋಧನೆ ಮಾಡಲು ನಮ್ಮಲಿ ಸಂಸ್ಥೆಗಳಿಲ್ಲ. ಇಂದು ಇಂತಹ ಭಯೋತ್ಪಾದಕ ಕಾನೂನುಗಳಲ್ಲಿ ಕೇವಲ ಮುಸಲ್ಮಾನರ ಬಂಧನ ನಡೆಯುತ್ತಿದೆ. ಹಾಗೆಂದಾದರೆ ದೇಶದಲ್ಲಿ ನಡೆಯುತ್ತಿರುವ ಎಲ್ಲಾ ಭಯೋತ್ಪಾದಕ ಕೃತ್ಯಗಳು ಮುಸಲ್ಮಾನರು ಮಾಡಿದ್ದಾರೆಯೇ ಎಂಬ ಆತಂಕ ಜನರಲ್ಲಿ ಮೂಡುತ್ತದೆ.

ಮಕೋಕ ಕಾನೂನು(1997/98) ಬಂದಾಗ ಇಂತಹ ಎಲ್ಲಾ ರೀತಿಯ ಭಯೋತ್ಪಾದಕ ಕೃತ್ಯಗಳಿಗೆ ಈ ಕಾನೂನನ್ನು ಪ್ರಯೋಗಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ ಮಾವೋವಾದಿಗಳನ್ನು ಈ ಕಾನೂನಿನಡಿ ಬಂಧಿಸಿದಾಗ ಎಡಪಂಥೀಯ ಸಂಘಟನೆಗಳು ಸಂಶೋಧನಾ ಕಾರ್ಯಗಳ ಮುಖಾಂತರ ಅದನ್ನು ಎದುರಿಸಿತು. ಹಾಗಾಗಿಯೇ ಇಂದು ಟಾಡಾ, ಪೋಟಾದಂತಹ ಕಾನೂನುಗಳು ಕೊನೆಗೊಂಡಿವೆ. ಆದ್ದರಿಂದಾಗಿ ನಾವು ಸರಿಯಾದ ಸಂಶೋಧನೆಯನ್ನು ನಡೆಸಿ ಜನ ಸಾಮಾನ್ಯರ ಮುಂದೆ ಸಮರ್ಪಕವಾಗಿ ತಂದಿಟ್ಟರೆ ಇಂತಹ ದೌರ್ಜನ್ಯಗಳು ಜನರ ಮೇಲೆ ನಡೆಯುವುದಿಲ್ಲ.” ಎಂದು ತನ್ನ ಅಭಿಪ್ರಾಯವನ್ನು ಅಂದಿನ ಯುವ ವಕೀಲರ ಮುಂದಿಟ್ಟಿದ್ದರು.

ನ್ಯಾಯಪರವಾದ ಅಭಿಪ್ರಾಯವನ್ನು ಹೊಂದಿದ್ದ, ಅನ್ಯಾಯದ ವಿರುದ್ಧ ನಿರಂತರವಾಗಿ ಹೋರಾಟ ನಡೆಸಿದ, ಮರ್ದಿತ ಸಮುದಾಯದ ಧ್ವನಿಯಾಗಿದ್ದ ಶಾಹಿದ್ ಅಝ್ಮಿಯಂತಹ ಒಬ್ಬ ದಿಟ್ಟ ವಕೀಲನ ಕಗ್ಗೊಲೆ ನಡೆದಾಗ ನಾಗರಿಕ ಸಮುದಾಯವು ಅದನ್ನು ಸಮ್ಮತಿಸಿದಂತೆ ಸುಮ್ಮನಾಗಿತ್ತು. ಆಗ ಒಂದು ವೇಳೆ ಇಡೀ ಜನ ಸಮುದಾಯವು ಅದನ್ನು ಪ್ರಶ್ನಿಸುತ್ತಿದ್ದರೆ ಇಂದು ಗೌರಿ, ಪನ್ಸಾರೆ, ಕಲ್ಬುರ್ಗಿರವರ ಹತ್ಯೆ ಮಾಡಲು ದುಷ್ಕರ್ಮಿಗಳು ಧೈರ್ಯ ಮಾಡುತ್ತಿರಲಿಲ್ಲ. ಹೋರಾಟದ ಹಾದಿಯಲ್ಲಿ ಮಡಿದ ಇವರಿಗೆಲ್ಲಾ ನ್ಯಾಯ ಯಾವಾಗ?

LEAVE A REPLY

Please enter your comment!
Please enter your name here