ಶೆಹಝಾದ್ ಶಕೀಬ್ ಮುಲ್ಲಾ

ಮೈಸೂರು

 

“ನನ್ನ ಪಾದಗಳಿಗೆ ಮಾರ್ಗದರ್ಶನ ಮಾಡಬಲ್ಲ ಒಂದು ದೀಪ ಇದ್ದರೆ ಅದು ನನ್ನ ಅನುಭವಗಳು. ನನಗೆ ಭವಿಷ್ಯವನ್ನು ನಿರ್ಣಯಿಸುವ ಯಾವ ದಾರಿಯೂ ಗೊತ್ತಿಲ್ಲ ಆದರೆ, ಇತಿಹಾಸದ ಹೊರತು.”                    -ಪ್ಯಾಟ್ರಿಕ್ ಹೆನ್ರಿ

ಇತಿಹಾಸ, ಎಂಬುವುದು ಸತತವಾಗಿ ಪಟ್ಟಭದ್ರ ಹಿತಾಸಕ್ತಿಗಳಿಂದ ಗರಿಷ್ಠ ಸಂಕಷ್ಟವನ್ನು ಅನುಭವಿಸುತ್ತಿರುವ ವಿಷಯವಾಗಿದೆ. ತಮ್ಮ ಸೈದ್ಧಾಂತಿಕ ಭ್ರಮೆಗೆ ಮತ್ತು ಅನಗತ್ಯ ಹಾಗು ಕಾಲ್ಪನಿಕ ಕಾನೂನು ಬದ್ಧತೆಯನ್ನು ಒದಗಿಸಿಕೊಡಲು ಅಥವಾ ಮಿಥ್ಯ ಆವರಣವನ್ನು ನಿರ್ಮಿಸಲು ಅವರು ಅದರಲ್ಲಿ ಹಸ್ತಕ್ಷೇಪವನ್ನು ಮತ್ತು ಕೋಮುವಾದಿಕರಣವನ್ನು ಮಾಡುತ್ತಾರೆ. ಇತಿಹಾಸವು ಮನುಷ್ಯ ಅಭಿಪ್ರಾಯಗಳಲ್ಲಿ ಕಡಿಮೆ ತಪ್ಪು ಸಂಭವಿಸಬಹುದಾದ ಮಾರ್ಗದರ್ಶಕವಾದುದರಿಂದ ಪಟ್ಟಭದ್ರ ಹಿತಾಸಕ್ತಿಗಳ ಕೆಂಗಣ್ಣಿಗೆ ಗುರಿಯಾಗಿದೆ ಮತ್ತು ಅವರು ತಮ್ಮ ಸಮಾಜೋ-ರಾಜಕೀಯ ಪ್ರಸ್ತುತತೆಯ ಸಿಂಧುತ್ವವನ್ನು ಗಳಿಸುವಲ್ಲಿ ಅತಿಯಾಗಿ ಹತಾಶರಾಗಿದ್ದಾರೆ. ಪ್ರಸ್ತುತ ಕೇಂದ್ರ ಸರಕಾರದ ಸಾಂಸ್ಕøತಿಕ ಇಲಾಕೆಯು ಇತಿಹಾಸವನ್ನು ಪುನರ್ ರಚಿಸಲು ಕಮಿಟಿಯೊಂದನ್ನು ರಚಿಸಿರುವುದು ಸರಕಾರದ ಪಟ್ಟುಹಿಡಿದ ಧೋರಣೆಯನ್ನು ಬೊಟ್ಟು ಮಾಡುತ್ತದೆ.

ಯಾವುದೇ ಸೈದ್ಧಾಂತಿಕ ಅಥವಾ ರಾಜಕೀಯ ನಿಲುವನ್ನು ಸಮರ್ಥಿಸಲು ಮತ್ತು ಬೆಂಬಲಿಸಲು ಇತಿಹಾಸವು ಉಪಯುಕ್ತ ಸಾಧನವಾಗಿದೆ. ಇಂದಿನ ನಮ್ಮ ಆಡಳಿತದ ವಿತರಣೆಗೆ ಕೆಲವು ಸೈದ್ಧಾಂತಿಕ ಪ್ರವೃತಿಗಳಿವೆ ಮತ್ತು ಅವರ ದೃಷ್ಟಿಕೋನವನ್ನು ರುಜುವಾತು ಮಾಡಲು ಇತಿಹಾಸದ ಸಂಪೂರ್ಣ ನೀತಿಯನ್ನು ಅಪಾಯದಲ್ಲಿ ತಂದಿಟ್ಟಿದ್ದಾರೆ. ಕೋಮುವಾದಿ ಶಕ್ತಿಗಳಿಗೆ ಇತಿಹಾಸವೆಂಬುವುದು ವಿಶೇಷ ಆಸಕ್ತಿಯ ವಿಚಾರವಾಗಿದೆ. ಯಾಕೆಂದರೆ, ಭಾರತದ ಬಗೆಗಿನ ಅವರ ಗ್ರಹಿಕೆಯು ವಿಕೃತ ಮತ್ತು ಕೃತ್ರಿಮ ಇತಿಹಾಸವನ್ನು ಅವಲಂಭಿತವಾಗಿರುವ ವಸಾಹತು ಪ್ರಸ್ತುತ ಪಡಿಸುವ ಇತಿಹಾಸ ಮತ್ತು ಕೋಮು ಸಿದ್ಧಾಂತದಲ್ಲಿ ಆಧಾರಿತವಾಗಿದೆ. ಇದು ಕೇವಲ ತಪ್ಪು ವ್ಯಾಖ್ಯಾನಕ್ಕೆ ಸಂಬಂಧಿಸಿದಂತಹ ವಿಷಯ ಮಾತ್ರವಲ್ಲ. ಬದಲಾಗಿ ಇದು ಸತ್ಯವನ್ನು ವಿಕೃತಗೊಳಿಸುವ, ಆಯ್ದ ಮತ್ತು ಪಕ್ಷಪಾತವಾದ ವಿಷಯಗಳ ತಿದ್ದುಪಡಿಯನ್ನು ಹೊಂದಿದೆ. ಕೋಮು ಪ್ರಚೋದನೆಯೊಂದಿಗೆ ಇತಿಹಾಸದ ಪುನರ್ ರಚನೆಯು ನಾಗರೀಕ ಹಕ್ಕುಗಳ ಆಂದೋಲನ, ವಸಾಹತು ವಿರೋಧಿ ಚಳುವಳಿ, ಮಾನವ ಹಕ್ಕು ಹೋರಾಟ, ಸಮಾನತೆ, ಸ್ವಾತಂತ್ರ್ಯ ಹಾಗು ಶೈಕ್ಷಣಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳ ಪಾತ್ರವನ್ನು ನಾಶಮಾಡುತ್ತದೆ. ಪಕ್ಷಪಾತ ಮತ್ತು ಪಂಥೀಯವಾದ ಇತಿಹಾಸದ ಹಸ್ತಕ್ಷೇಪವು ಮಾರುಕಟ್ಟೆ ಅವಲಂಭಿತ ನವ ಉದಾರವಾದಿ ತರ್ಕಬದ್ಧತೆ, ರಾಜ್ಯ ಹಿಂಸಾಚಾರ ಮತ್ತು ಫಾಸಿಸ್ಟ್ ಮಿಲಿಟರಿತ್ವದ ಪ್ರಾಬಲ್ಯಕ್ಕೆ ಹೇತುವಾಗಬಹುದು.

ಭಾರತೀಕರಣದ ಎಲ್ಲಾ ಚರ್ಚೆ ಮತ್ತು ಸಮರ್ಥನೆಯ ನಡುವೆಯು ಈ ರೀತಿಯಾದ ಬದಲಾವಣೆಯನ್ನು ಪ್ರತಿಪಾದಿಸುತ್ತಿರುವ ಇತಿಹಾಸಕಾರರು ಮೂಲತಃವಾಗಿ ವ್ಯಕ್ತಪಡಿಸುತ್ತಿರುವುದು ವಸಾಹತು ನೀತಿ ಎಂಬುವುದು ಒಂದು ವ್ಯಂಗ್ಯವಾಗಿದೆ. ಇತಿಹಾಸವನ್ನು ಹಿಂದೂ ಕಾಲ, ಮುಸ್ಲಿಮ್ ಕಾಲ ಮತ್ತು ಬ್ರಿಟಿಷ್ ಕಾಲವೆಂದು ವಿಂಗಡಿಸಿರುವುದೇ ವಸಾಹತು ಶಕ್ತಿಯ ಒಂದು ತಂತ್ರವಾಗಿದೆ. ಮುಸ್ಲಿಮ್ ರಾಜರ ಆಡಳಿತ ಕಾಲದಲ್ಲಿ ಹಿಂದೂ ಸಮುದಾಯವು ಬಳಲುತ್ತಿತು ಎಂಬ ವಾದ ನಿರ್ಮಾಣವೇ ವಸಾಹತು ಕಲ್ಪನೆಯಾಗಿದೆ. ಈ ರೀತಿಯಾದ ಒಡಕು ಮತ್ತು ನಿರ್ಮಾಣಗಳನ್ನು ಬ್ರಿಟಿಷ್ ವಸಾಹತು ಶಕ್ತಿಗಳು ತಮ್ಮ ಆಳ್ವಿಕೆಯನ್ನು ಸಮರ್ಥಿಸಲು ಮತ್ತು ನ್ಯಾಯಸಮ್ಮತತೆಯನ್ನು ಉಂಟುಮಾಡಲು ಬಳಸುತ್ತಿದ್ದರು. ಹಿಂದೂಗಳನ್ನು ಮತ್ತು ಮುಸ್ಲಿಮ್ ಸಮುದಾಯವನ್ನು ಮತ್ತಷ್ಟು ಕಾದಾಡುವ ಸಮುದಾಯಗಳಾಗಿ ವಿಭಜಿಸಿದಾಗ ಬ್ರಿಟಿಷರಿಗೆ ಭಾರತದಲ್ಲಿ ಉಪಸ್ಥಿತಿಯನ್ನು ನ್ಯಾಯಿಕರಿಸಲು ಸಾಧ್ಯವಾಯಿತು ಮತ್ತು ಎರಡು ಸಮುದಾಯಗಳು ಬ್ರಿಟಿಷರ ವಿರುದ್ಧ ಒಂದಾಗುವುದನ್ನು ತಡೆಯಿತು. ಪ್ರಶ್ನೆ ಏನೆಂದರೆ, ಭಾರತೀಕರಣಕ್ಕೆ ಪ್ರಯತ್ನಿಸುತ್ತಿರುವುದಾದರೆ, ಅದರ ಪರಿಣಾಮವು ಯಾಕಾಗಿ ವಸಾಹತು ಶಾಹಿ ಲಕ್ಷಣವನ್ನು ಹೊಂದಿದೆ?

ದೇಶಪ್ರೇಮದ ಭಾವನೆಯನ್ನು ಕುಂಠಿತಗೊಳಿಸುತ್ತದೆ ಎಂಬ ಹಿನ್ನೆಲೆಯಲ್ಲಿ ನಾಗರೀಕ ಸಮಾಜವು ತನ್ನ ಇತಿಹಾಸದ ಅತೃಪ್ತ ವಿಷಯಗಳನ್ನು ಬೋಧಿಸದೆ ತಪ್ಪಿಸಿಕೊಂಡು ಮುಂದುವರಿಯಲು ಸಾಧ್ಯವಿಲ್ಲ. ಹಾಗೆಯೇ, ನಮ್ಮ ಗತ ವೈಭವವನ್ನು ತೋರಿಸಲು ಕೃತ್ರಿಮ ಕಲ್ಪನೆಗಳನ್ನು ಪುರಾವೆಗಳಾಗಿ ತುರುಕಲು ಅಥವಾ ತೇಲಿ ಬಿಡಲು ಸಾಧ್ಯವಿಲ್ಲ. ಭಾರತದ ಇತಿಹಾಸವನ್ನು ತಿರುಚುವ ಕೋಮುವಾದಿಗಳ ಪ್ರಯತ್ನ ಮತ್ತು ದೇಶಪ್ರೇಮವನ್ನು ಹುಟ್ಟುಹಾಕುವ ಹೆಸರಿನಲ್ಲಿ ಸಂಕುಚಿತ ಪಂಥೀಯ ಬಣ್ಣವನ್ನು ನೀಡುವುದು ಮತ್ತು ಭಾರತದ ವೈಭವದ ಪ್ರದರ್ಶನವು, ವಾಸ್ತವವಾಗಿ ಅದರ ವಿರುದ್ಧ ಸ್ಥಿತಿಯಲ್ಲಿ ಕೊನೆಯಾಗಬಹುದು.

ಇತಿಹಾಸವು ನಮ್ಮ ಗತವನ್ನು ಅರ್ಥೈಸಲು, ನಮ್ಮ ನಾಗರೀಕತೆಯ ಬೆಳವಣಿಗೆ, ಅದನ್ನು ರೂಪಿಸಿದಂತಹ ವಿಚಾರಗಳು ಮತ್ತು ತಪ್ಪುಗಳನ್ನು ಗುರುತಿಸಲು ಸಹಕರಿಸುತ್ತದೆ. ಭಾರತದ ಇತಿಹಾಸವು ದೇಶದ ಭವ್ಯವಾದ ವೈವಿಧ್ಯತೆಯ ಅದ್ಭುತ ವಿವರಣೆಯಾಗಿದೆ. ಭಾರತದ ಸ್ವಾತಂತ್ರ್ಯ ಚಳುವಳಿಯು ಭಾರತದ ಇತಿಹಾಸದ ಅವಶ್ಯ ಮತ್ತು ಅಗತ್ಯ ಭಾಗವಾಗಿದೆ. ಭಾರತದ ಸ್ವಾತಂತ್ರ್ಯ ಚಳುವಳಿಯ ಅತ್ಯಂತ ಮಹತ್ವಪೂರ್ಣ ಸಾಧನೆ ಏನೆಂದರೆ, ಮುಕ್ತ, ಪ್ರಜಾಪ್ರಭುತ್ವ ಮತ್ತು ನಾಗರೀಕ ಸ್ವಾತಂತ್ರ್ಯದ ರಾಜ್ಯ ನಿರ್ಮಾಣವಾಗಿದೆ. ಈ ಮೌಲ್ಯಗಳ ವಾಸ್ತವೀಕರಣಕ್ಕೆ ತಡೆಯಾಗುವ ಸವಾಲುಗಳನ್ನು ಗುರುತಿಸಲು ಇತಿಹಾಸವನ್ನು ಬಳಸಿಕೊಳ್ಳಬೇಕಿದೆ. “ಅಧಿಕಾರ ಭ್ರಷ್ಟವಾಗಲು ಒಲವು ತೋರಿಸುತ್ತದೆ ಮತ್ತು ಸಂಪೂರ್ಣ ಅಧಿಕಾವು ಸಂಪೂರ್ಣವಾಗಿ ಭ್ರಷ್ಟವಾಗುತ್ತದೆ” ಎಂಬುವುದನ್ನು ಇತಿಹಾಸವು ಕಲಿಸುತ್ತದೆ. ಅದು ನಮಗೆ ಗಲಭೆ, ಯುದ್ಧ ಮತ್ತು ಹತ್ಯಾಕಾಂಡಗಲು ಘೋರ ಹಾಗು ಅನಾಗರೀಕವಾಗಿತ್ತು ಮತ್ತು ಆಗಿರುತ್ತದೆ ಎಂಬುದನ್ನು ಕಲಿಸುತ್ತದೆ. ಈ ಘಟನೆಗಳನ್ನು ಪುನಾರಾವರ್ತಿಸಬಾರದು ಎಂದು ನಮಗೆ ನಾವೇ ನೆನಪಿಸಿಕೊಳ್ಳಲು ಈ ಸಂಭವಗಳ ಅಧ್ಯಯನವನ್ನು ನಾವು ನಡೆಸಬೇಕಿದೆ. ಈ ರೀತಿಯಾದಂತಹ ಘಟನೆಗಳು ಮತ್ತೆಂದೂ ಜರುಗಬಾರದು. ಇತಿಹಾಸವು ನಮಗೆ ಸ್ವಾತಂತ್ರ್ಯದ ಮಹತ್ವವನ್ನು, ನಾಗರೀಕ ಹಕ್ಕುಗಳನ್ನು ಕಲಿಸುತ್ತದೆ. ಅಲ್ಲದೇ, ಅದು ನಮಗೆ ರಾಷ್ಟ್ರಗಳು ಹೇಗೆ ಒಂದು ವಿಶ್ವ ದೃಷ್ಟಿಕೋನವನ್ನು ಹೇರುವ ಪ್ರಯತ್ನಗಳಲ್ಲಿ ಸೋತು ಹೋಯಿತು ಎಂಬುವುದನ್ನು ಕಲಿಸಿಕೊಡುತ್ತದೆ. ನಾವು ಇದನ್ನೆಲ್ಲಾ ಕಲಿತು ಉದ್ದೇಶಪೂರ್ವಕವಾಗಿ ನಮ್ಮ ಕಾರ್ಯಪ್ರವೃತ್ತತೆಯನ್ನು ವ್ಯಾಖ್ಯಾನಿಸಿದ್ದರೆ ಎಷ್ಟು ಚೆನ್ನಾಗಿತ್ತು?

 

 

LEAVE A REPLY

Please enter your comment!
Please enter your name here