• ಶಾರೂಕ್ ತೀರ್ಥಹಳ್ಳಿ
    8050801021

ಪರೀಕ್ಷೆಯಲ್ಲಿ ಫೈಲ್ ಆಗಿದ್ದ ಶ್ರೇಯಾ ಎಂಬ ವಿದ್ಯಾರ್ಥಿಯನ್ನು ಅವಳ ಸ್ನೇಹಿತೆ ರೂಪಾ ಮನವೊಲಿಸುತ್ತಿರುವಾಗ ಎದುರಿಗೆ ಬಂದ ಗೂಡ್ಸ್ ರೈಲಿಗೆ ಮೈಯೊಡ್ಡಿದ ಶ್ರೇಯಾ ತೀವ್ರ ಗಾಯಗೊಂಡು ಚಿಕಿತ್ಸೆಗೆಂದು ವಿಮ್ಸ್ಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಸಾವಿಗೀಡಾದಳು. ರೂಪಾಳಿಗೂ ರೈಲು ತಾಗಿ ಗಾಯಗಳಾಗಿವೆ. ಕೋಲಾರದ ಬೆಳ್ಳೂರಿನ ಆದಿತ್ಯ ಚಕ್ರವರ್ತಿ ಇಂಗ್ಲಿಷ್ ವಿಷಯದಲ್ಲಿ ಫೇಲಾಗಿದ್ದಕ್ಕೆ ನರಸಾಪುರ ದೊಡ್ಡ ಕೆರೆಗೆ ಹಾರಿ ಆತ್ಯಹತ್ಯೆ ಮಾಡಿಕೊಂಡಿದ್ದಾನೆ. ಹರಿಹರದಲ್ಲಿ ಎಂಕೆಇಟಿ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಜಯರಾಮ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಿವಮೊಗ್ಗದ ಚಿಕ್ಕಮರಸ ಗ್ರಾಮದ ವಿದ್ಯಾರ್ಥಿನಿ ಚಿತ್ರಾ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಹಾಕಿಕೊಂಡಿದ್ದಾಳೆ. ಅರಕಲಗೂಡು ತಾಲೂಕಿನ ದಾಸಯ್ಯನಕೊಪ್ಪಲು ಗ್ರಾಮದ ಭೂಮಿಕಾ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಂಗಳೂರಿನಲ್ಲಿ ವಿನಾಯಕನಗರ ನಿವಾಸಿ ರಾಹುಲ್ ರೆಡ್ಡಿ ನೇಣು ಬಿಗಿದುಕೊಂಡಿದ್ದರೆ, ಬಾಬಾನಗರ ನಿವಾಸಿ ಪ್ರವೀಣ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಲಾರದ ಕಾಮಸಮುದ್ರ ಕೇತಗಾನಹಳ್ಳಿ ಕಾಂತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ಹೊರಬಿದ್ದ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣದ ಕಾರಣಕ್ಕೆ ರಾಜ್ಯಾದ್ಯಂತ ವಿವಿಧ ಕಡೆಗಳಲ್ಲಿ ಎಂಟು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ವರದಿಗಳು. ಇದು ಒಂದೇ ದಿನದಲ್ಲಿ ಪ್ರಕಟವಾದ ಆತ್ಮಹತ್ಯೆಯ ವರದಿಗಳು. ಅಷ್ಟೇ ಅಲ್ಲ. ದೇಶದಲ್ಲಿ ಕೋರೋನ ಎಂಬ ಮಹಾಮಾರಿ ಬಂದ ನಂತರದಲ್ಲಿ ಆತ್ಮಹತ್ಯೆ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸಿನಿಮಾ ನಟ ಆತ್ಯಹತ್ಯೆ, ಹೋಟಲ್ ಉದ್ಯಮೀ ಆತ್ಮಹತ್ಯೆ, ಸಾಲ ತೀರಸಲು ಸಾಧ್ಯವಾಗದೆ ರೈತ ಆತ್ಮಹತ್ಯೆ ಎಂಬ ವರದಿಗಳಂತೂ ನಾವು ದಿನ ನಿತ್ಯ ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ನೋಡುತ್ತಲೇ ಇರುತ್ತೇವೆ. ಎಲ್ಲರಿಗೂ ಒಂದಲ್ಲ ಒಂದು ಸಮಸ್ಯೆಗಳು ಇದ್ದೇ ಇರುತ್ತದೆ, ಆದರೆ ಆ ಎಲ್ಲಾ ಸಮಸ್ಯೆಗಳಿಗೆ ಆತ್ಮಹತ್ಯೆ ಒಂದೇ ಪರಿಹಾರವೇ ಎಂಬದನ್ನು ಪ್ರತಿಯೊಬ್ಬರೂ ಯೋಚಿಸಿ ಮುನ್ನಡೆಯಬೇಕಾಗಿದೆ. ಆತ್ಮಹತ್ಯೆಯ ಬಗ್ಗೆ ಯೋಚಿಸುವುದು ಅಸಹಜ ವಿಷಯವಲ್ಲ. ಬಹಳಷ್ಟು ಮಂದಿ ತೀವ್ರ ಖಿನ್ನತೆಗೆ ಒಳಗಾದಾಗ, ಕಷ್ಟಗಳಿಂದ ಬೇಸತ್ತು ಜೀವನವನ್ನು ಕೊನೆಗೊಳಿಸಲು ಯೋಚಿಸುತ್ತಾರೆ. ಹೀಗಾಗಿ ಒಂದು ಕ್ಷಣ ಇಂತಹ ಚಿಂತನೆಗಳು ಮಾನಸಿಕ ಅಸ್ವಸ್ಥರಲ್ಲಿ ಮಾತ್ರವಲ್ಲ, ಸಾಮಾನ್ಯ ಮನುಷ್ಯರಲ್ಲಿ ಕೂಡಾ ನುಸುಳಬಹುದು. ಒಬ್ಬ ವ್ಯಕ್ತಿಯ ದೈನಂದಿನ ಜೀವನದಲ್ಲಿ ಈ ಚಿಂತನೆಯ ತೀವ್ರತೆ ಅಧಿಕಗೊಂಡರೆ, ಅದು ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತದೆ.
ಆತ್ಮಹತ್ಯೆಯ ಚಿಂತನೆಯು ಯಾವ ವ್ಯಕ್ತಿಯಲ್ಲಿ ಬೇಕಾದರೂ ಮೂಡಬಹುದು. ಅದಕ್ಕೇನು ವಯಸ್ಸಿನ ಮಿತಿ, ವ್ಯಕ್ತಿತ್ವ , ಸಾಧನೆ ಅಥವಾ ಸಾಮಾಜಿಕ ಸ್ಥಾನಮಾನದ ಚೌಕಟ್ಟಿರುವುದಿಲ್ಲ. ಮಾನಸಿಕ ಅಸ್ವಸ್ಥತೆ, ಸಾಮಾಜಿಕ – ಸಾಂಸ್ಕೃತಿಕ ಒತ್ತಡಗಳು ಮುಂತಾದ ಅಂಶಗಳು ವ್ಯಕ್ತಿಯ ಮೇಲೆ ತೀವ್ರ ಪರಿಣಾಮ ಬೀರಬಹುದು. ಭಾರತದಲ್ಲಿ, 15-29ರ ವಯೋಮಾನದವರಲ್ಲಿ ಆತ್ಮಹತ್ಯೆ ಅತಿಹೆಚ್ಚಾಗಿ ಕಂಡುಬರುತ್ತದೆ. ಅದರಲ್ಲೂ ಮಹಿಳೆಯರಲ್ಲಿ ಇದು ಹೆಚ್ಚು ಎಂದು ಸಂಶೋಧನೆಗಳು ತಿಳಿಸಿವೆ. ಸಂಶೋಧನೆಯ ಪ್ರಕಾರ ಇಂತಹ ಮನಸ್ಥಿತಿಗೆ ಯಾವುದೇ ನಿರ್ದಿಷ್ಟ ವಯೋಮಿತಿಯಿಲ್ಲ. ಆತ್ಮಹತ್ಯೆಯ ಬಗ್ಗೆ ಚಿಂತಿಸುವವರು, ಅಥವಾ ಆತ್ಮಹತ್ಯೆಮಾಡಿಕೊಳ್ಳುವವರೆಲ್ಲರೂ ಮಾನಸಿಕ ಅಸ್ವಸ್ಥರಾಗಿರುವುದಿಲ್ಲ, ಮತ್ತು ಮಾನಸಿಕ ಅಸ್ವಸ್ಥರೆಲ್ಲರೂ ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆಂದಲ್ಲ. ಒಬ್ಬ ವ್ಯಕ್ತಿಯು ಇದರ ಬಗ್ಗೆ ಚಿಂತಿಸಲು ಹಲವಾರು ರೀತಿಯ ಜೈವಿಕ ಸಾಮಾಜಿಕ ಕಾರಣಗಳು ಇರುತ್ತವೆ. ಆತ್ಮಹತ್ಯೆಯು ವಿಭಿನ್ನ ಅಂಶಗಳ ಮಿಶ್ರಫಲವಾಗಿದ್ದು, ಒಂದು ಸಂಕೀರ್ಣ ಪ್ರಕ್ರಿಯೆಯಾಗಿದೆ. ಅದರಲ್ಲಿ ಮಾನಸಿಕ ಅಸ್ವಸ್ಥತೆ ಒಂದು ಕಾರಣವಾಗಿರಬಹುದು ಅಥವಾ ಇಲ್ಲದೆಯೂ ಇರಬಹುದು. ಆತ್ಮಹತ್ಯೆಯು ತೀವ್ರ ಮಾನಸಿಕ ಖಿನ್ನತೆಯ ಸೂಚಕವಾಗಿದ್ದರೂ, ಆತ್ಮಹತ್ಯೆಗೆ ಅದೇ ಪ್ರಮುಖ ಕಾರಣವಾಗಬೇಕೆಂದಿಲ್ಲ. ವ್ಯಕ್ತಿಯ ದೌರ್ಬಲ್ಯ ಅಥವಾ ತನ್ನ ಮುಂದಿರುವ ಸವಾಲುಗಳನ್ನು ಎದುರಿಸುವ ಸಾಮರ್ಥ್ಯದ ಕೊರತೆ ಆತ್ಮಹತ್ಯೆಯ ಪ್ರಯತ್ನಕ್ಕೆ ಕಾರಣವೆಂಬ ನಂಬಿಕೆ ಸಾಮಾನ್ಯ. ಒಬ್ಬ ವ್ಯಕ್ತಿ ವಿನಾಕಾರಣ ಆತ್ಮಹತ್ಯೆಯ ಬಗ್ಗೆ ಯೋಚಿಸುವುದಿಲ್ಲ. ಅವನಲ್ಲಿ ಆ ಯೋಚನೆ ಮೂಡಲು ಮಾನಸಿಕ ಖಿನ್ನತೆ, ಸಾಮಾಜಿಕ ಕಾರಣಗಳು ಅಥವಾ ಜೈವಿಕ ಕಾರಣಗಳಿರಬಹುದು. ಆತ್ಮಹತ್ಯೆಯ ಪ್ರಯತ್ನವು ಸಾಮಾನ್ಯವಾಗಿ ಖಿನ್ನತೆಯ ಸೂಚಕವಾಗಿರುತ್ತದೆ. ಕೆಲವೊಮ್ಮೆ ಸದೃಢ ಮನಸ್ಸಿನ ವ್ಯಕ್ತಿಗಳಲ್ಲೂ ಈ ಯೋಚನೆ ನುಸುಳುವುದುಂಟು. ಸಂಶೋಧನೆಗಳ ಪ್ರಕಾರ, ಆತ್ಮಹತ್ಯೆಯ ಚಿಂತನೆಯು ಸಾಮಾನ್ಯ ವ್ಯಕ್ತಿಗಳಿಗಿಂತ ಖಿನ್ನತೆಗೊಳಗಾದವರಲ್ಲಿ ಹೆಚ್ಚಾಗಿರುತ್ತದೆ. ಆದಾಗ್ಯೂ, ಕೆಲವು ಸಾಮಾಜಿಕ ಸನ್ನಿವೇಶಗಳು ಮಹತ್ವದ ಪಾತ್ರ ವಹಿಸುತ್ತವೆ. ಖಿನ್ನತೆಯಿರುವ ಒಬ್ಬ ವ್ಯಕ್ತಿಗೆ ಸಮಾಜದಿಂದ ಅಥವಾ ಕುಟುಂಬದವರಿಂದ ಬೆಂಬಲ ಮತ್ತು ಪ್ರೀತಿ ದೊರೆತರೆ ಮತ್ತು ತಾನು ಕೆಲಸ ಮಾಡುವ ಸ್ಥಳಗಳಲ್ಲಿ ಅಥವಾ ಸಮುದಾಯದಿಂದ ಸೂಕ್ತ ಸಮಯದಲ್ಲಿ ನೈತಿಕ ಬೆಂಬಲ ದೊರೆತರೆ ಅವನ ಮಾನಸಿಕ ಒತ್ತಡಗಳು ತಹಬದಿಗೆ ಬರಬಹುದು. ಯಾವುದೇ ವ್ಯಕ್ತಿಯ ಇಂತಹ ಪರಿಸ್ಥಿತಿಗೆ ಮಾನಸಿಕ ಅಸ್ವಸ್ಥತೆಯೊಂದೇ ಕಾರಣವಲ್ಲ.
ಸೋಲೇ ಗೆಲುವಿನ ಸೋಪಾನ ಎಂಬ ಗಾದೆ ಮಾತು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾಗಿದೆ. ಯಾವುದೇ ಒಂದು ಸೋಲಿನಿಂದ ನಮ್ಮಲ್ಲಿ ಕೀಳರಿಮೆ ಉಂಟಾದರೆ ನಾವು ಜೀವನದಲ್ಲೇ ಸೋತು ಹೋಗಿದ್ದೇವೆ ಅಂದುಕೊಳ್ಳುವವರು ನಮ್ಮ ಮದ್ಯೆ ಸಾಕಷ್ಟು ಮಂದಿ ಇದ್ದಾರೆ. ನಾವು ಸೋಲಿನ ಹಿಂದೆ ಗೆಲುವು ಸಾಧ್ಯವಿದೆ ಎಂಬುದನ್ನು ಕ್ಷಣಾರ್ಥದಲ್ಲಿ ಮರೆತು ಬಿಡುತ್ತೇವೆ. ಮನುಷ್ಯನ ಜೀವನದಲ್ಲಿ ಸಮಸ್ಯೆಗಳು ಸಾಗರದ ಅಲೆಗಳಿಂದಂತೆ ಅದು ಬಂದು ಹೋಗುತ್ತಲೇ ಇರುತ್ತದೆ ಎಂಥಹ ಕಠಿಣ ಸಮಸ್ಯೆಗಳೇ ಬಂದರು ಅದನ್ನು ಎದುರಿಸಿ ಜೀವನ ನಡೆಸುವುದೇ ನಮ್ಮೆಲ್ಲರ ಜೀವನದ ಮುಖ್ಯ ಉದ್ದೇಶವಾಗಿರಬೇಕು. ಸಮಸ್ಯೆ ಬಂದಾಗ ನಾನು ಸೋತೆ ಇನ್ನು ನನ್ನ ಜೀವನಕ್ಕೆ ಬೆಲೆಯಿಲ್ಲ ಎಂದು ಆತ್ಮಹತ್ಯೆ ಮಾಡಿಕೊಳ್ಳುವಂತಹ ಹೇಡಿತನ ನಮ್ಮಲ್ಲಿರಬಾರದು.

LEAVE A REPLY

Please enter your comment!
Please enter your name here