ಇಸ್ಮತ್ ಪಜೀರ್

2008ರಲ್ಲಿ ರಿಲಯನ್ಸ್-ಸಿಎನ್‌ಎನ್-ಐಬಿಎನ್ ಸಂಸ್ಥೆಗಳು ಜಂಟಿಯಾಗಿ ಅಖಿಲ ಭಾರತ ಮಟ್ಟದಲ್ಲಿ ಒಟ್ಟು ಇಪ್ಪತ್ತನಾಲ್ಕು ಮಂದಿಗೆ ರಿಯಲ್ ಹೀರೋ ಎಂಬ ಪ್ರಶಸ್ತಿಗಳನ್ನು ನೀಡಿ ಗೌರವಿಸಿತ್ತು.  ದೇಶದ ವಿವಿಧ ಭಾಗಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ಸಾಮಾನ್ಯ ವ್ಯಕ್ತಿಗಳಿಗೆ ಆ ಪ್ರಶಸ್ತಿ ನೀಡಿರುವುದೇ ಆ ಪ್ರಶಸ್ತಿಯ ವಿಶೇಷವಾಗಿತ್ತು. ಹಾಗೆ ರಿಯಲ್ ಹೀರೋ ಪ್ರಶಸ್ತಿಗೆ ಭಾಜನರಾದ ಇಪ್ಪತ್ತನಾಲ್ಕು ಮಂದಿಯಲ್ಲಿ ಹಾಜಬ್ಬರೂ ಒಬ್ಬರಾಗಿದ್ದರು. ಅಂದು ಅವರಿಗೆ ಆ ಪ್ರಶಸ್ತಿಯ ಜೊತೆಗೆ ಐದು ಲಕ್ಷ ರೂಪಾಯಿ ನಗದು ಬಹುಮಾನವೂ ದೊರಕಿತ್ತು. ಸಾಮಾನ್ಯವಾಗಿ ದೊಡ್ಡ ಮೊತ್ತದ ನಗದು ಬಹುಮಾನ ಸಿಕ್ಕರೆ ಅದರ ಮೇಲಿನ ತೆರಿಗೆಯ ಮೊತ್ತವನ್ನು ಕಳೆದೇ ನೀಡುವುದು ಪದ್ಧತಿ.ಹಾಜಬ್ಬರಿಗೆ ರಿಯಲ್ ಹೀರೋ ಪ್ರಶಸ್ತಿ ನೀಡಿದಾಗ ಇದರೊಂದಿಗೆ ನಿಮಗೆ ನೀಡುವ ಐದು ಲಕ್ಷ ರೂಪಾಯಿಗಳನ್ನು ಏನು ಮಾಡುತ್ತೀರಿ ಎಂದು ಕೇಳಲಾದಾಗ ಹಾಜಬ್ಬ “ಅದನ್ನು ಶಾಲೆಗಾಗಿ ವ್ಯಯಿಸುವೆ ” ಎಂದರು.ಸಂಪೂರ್ಣ ಮೊತ್ತವನ್ನೂ ಶಾಲೆಗಾಗಿ ವ್ಯಯಿಸುವಿರಾ ಎಂದು ಮರು ಪ್ರಶ್ನೆ ಕೇಳಲಾದಾಗ ಅವರು” ಹೌದು, ಸಂಪೂರ್ಣ ಐದು ಲಕ್ಷವನ್ನೂ…” ಎಂದರು.ಆದುದರಿಂದ ಅವರಿಗೆ ಸಂಪೂರ್ಣ ತೆರಿಗೆ ವಿನಾಯಿತಿಯೊಂದಿಗೆ ಐದು ಲಕ್ಷವೂ ಸಿಕ್ಕಿತು. ಅವರು ಹೇಳಿದಂತೆಯೇ ಅದನ್ನು ಸಂಪೂರ್ಣವಾಗಿ ಶಾಲಾಭಿವೃದ್ಧಿಗೆ ವಿನಿಯೋಗಿಸಿದರು.ಒಂದು ವೇಳೆ ಅವರು ಆ ಸಂಪೂರ್ಣ ಮೊತ್ತವನ್ನೂ‌‌ ಸ್ವಂತಕ್ಕಾಗಿ ಇಟ್ಟುಕೊಂಡರೂ ಅದನ್ನು ಯಾರೂ ಪ್ರಶ್ನಿಸುವಂತಿರಲಿಲ್ಲ. ಯಾಕೆಂದರೆ ಅದು ಅವರಿಗೆ ದೊರೆತ ಪ್ರಶಸ್ತಿಯಾಗಿತ್ತೇ ಹೊರತು ಶಾಲೆಗಲ್ಲ.ಹಾಜಬ್ಬರಿಗೆ ವೈಯಕ್ತಿಕವಾಗಿ ಬಹಳಷ್ಟು ಆರ್ಥಿಕ ತಾಪತ್ರಯಗಳಿತ್ತು,ಸಾಲವಿತ್ತು. ಆದರೂ ಅವ್ಯಾವುವನ್ನೂ ಅವರು ಲೆಕ್ಕಿಸಿರಲಿಲ್ಲ. 

ಅಂದಿನ ದಿನಗಳಲ್ಲಿ ಅವರ ಸುತ್ತ ಮುತ್ತಲ ಊರುಗಳಲ್ಲಿ ಜಮೀನಿಗೆ ಅಂತಹ ಬೆಲೆಯೇನೂ ಇರಲಿಲ್ಲ.  ಇಂದು ಅವರ ಸುತ್ತ ಮುತ್ತಲ ಊರುಗಳೆಲ್ಲಾ ಎಜುಕೇಶನ್ ಹಬ್ ಆದುದರಿಂದ ಅಲ್ಲೆಲ್ಲಾ ಇಂದು ತುಂಡು ಭೂಮಿಗೂ ಚಿನ್ನದ ಬೆಲೆಯಿದೆ.ಒಂದು ವೇಳೆ ಅವರು ಅಂದು ಆ ಮೊತ್ತವನ್ನು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿದ್ದರೆ  ಇಂದು ಹಾಜಬ್ಬರು ಕೋಟಿಗೆ ತೂಗುತ್ತಿದ್ದರೇನೋ….ಅವರು ತನಗೆ ಸಿಕ್ಕಿದ್ದನ್ನೆಲ್ಲಾ ಶಾಲಾರ್ಪಣೆ ಮಾಡಿದರು ಅಥವಾ ಕೆರೆಯ ನೀರ ಕೆರೆಗೆ ಚೆಲ್ಲಿದರು. ಇದು ನಿಜವಾದ ಸಂತತ್ವ…ಈ ಘಟನೆಗಳನ್ನಾಧರಿಸಿ “ಮದರಂಗಿ”  ಎಂಬ ಮಾಸಿಕ ಪತ್ರಿಕೆಯ 2009ರ ಎಪ್ರಿಲ್ ತಿಂಗಳ  ನನ್ನ  “ನಾಡಿ ಮಿಡಿತ” ಎಂಬ ಅಂಕಣಕ್ಕೆ  “ಹೀಗೊಬ್ಬ ಅಕ್ಷರ ಸಂತ : ಹರೇಕಳ ಹಾಜಬ್ಬ” ಎಂಬ ಲೇಖನ ಬರೆದೆ.ಹಾಜಬ್ಬರು ನನ್ನೂರು ಪಜೀರಿನ ಪಕ್ಕದ ನ್ಯೂಪಡ್ಪು ಎಂಬ ಊರಿನವರು. 2009ರ ಮೇ ತಿಂಗಳಲ್ಲಿ ಪಜೀರಿನ ಜಮೀಯತುತ್ತುಲಬಾ ಫ್ರೆಂಡ್ಸ್ ಅಸೋಸಿಯೇಶನ್ (ರಿ) ಎಂಬ ಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹಾಜಬ್ಬರಿಗೊಂದು ಸನ್ಮಾನ ಮಾಡುವುದೆಂದು ತೀರ್ಮಾನ ಮಾಡಲಾಯಿತು. ನಾನೂ ಆ ಸಭೆಯಲ್ಲಿದ್ದುದರಿಂದ ಸನ್ಮಾನ ಎನ್ನುವುದಕ್ಕಿಂತ “ಅಕ್ಷರ ಸಂತ” ಎಂಬ ಬಿರುದು ಕೊಡೋಣ ಎಂಬ ನನ್ನ ಅಭಿಪ್ರಾಯ ಮಂಡಿಸಿದೆ. ಸಭೆ ಸರ್ವಾನುಮತದಿಂದ ನನ್ನ ಅಭಿಪ್ರಾಯವನ್ನು ಒಪ್ಪಿಕೊಂಡಿತು.ಅದರಂತೆಯೇ ಬಂಟ್ವಾಳ ತಾಲೂಕಿನ ಪಜೀರು ರಹ್ಮಾನ್ ಜುಮಾ ಮಸೀದಿಯಲ್ಲಿ 2009ರ ಮೇ ಇಪ್ಪತ್ತನಾಲ್ಕರಂದು ನಡೆದ ಕಾರ್ಯಕ್ರಮದಲ್ಲಿ‌ ಹಿರಿಯ ಸಾಹಿತಿ ಅಮೃತ ಸೋಮೇಶ್ವರರು ಹಾಜಬ್ಬರಿಗೆ “ಅಕ್ಷರ ಸಂತ” ಪ್ರಶಸ್ತಿ ಪ್ರದಾನಿಸಿದರು.ಮುಂದೆ ಮಂಗಳೂರು ವಿಶ್ವವಿದ್ಯಾನಿಲಯದ ಪಠ್ಯದಲ್ಲಿ ಹಾಜಬ್ಬರ ಕುರಿತಂತೆ ಒಂದು ಪಠ್ಯ ಅಳವಡಿಸಬೇಕೆಂದು ಅಂದು ಮಂಗಳೂರು ವಿವಿಯ ಬೋರ್ಡ್ ಆಫ್ ಸ್ಟಡೀಸ್ ಇದರ ಮುಖ್ಯಸ್ಥರಾಗಿದ್ದ ಪ್ರೊ.ಅಭಯ್ ಕುಮಾರ್ ಅವರಲ್ಲಿ  ವಿನಂತಿಸಿಕೊಂಡೆ. ನಮ್ಮಲ್ಲಿ ಯಾವುದೇ ಪಠ್ಯವನ್ನೂ ಸಾಹಿತ್ಯದ ಜರ್ನಲ್‌ಗಳಿಂದ ಆಯ್ಕೆ ಮಾಡಿ ಪ್ರಕಟಿಸುವುದು ಕ್ರಮ ಎಂದರು. ಆದುದರಿಂದ ತಾವು ಮೊದಲು ಅದನ್ನು ಯಾವುದಾದರೂ ಸಾಹಿತ್ಯದ ಜರ್ನಲ್‌ನಲ್ಲಿ ಪ್ರಕಟಿಸಿ ಎಂದು ಸೂಚಿಸಿದರು. ಹಾಗೆ ಹೊಸತು ಮಾಸಿಕದ 2012ರ ಜುಲೈ ಸಂಚಿಕೆಯಲ್ಲಿ ಪ್ರಕಟವಾದ ಲೇಖನಕ್ಕೂ “ಹೀಗೊಬ್ಬ ಅಕ್ಷರ ಸಂತ : ಹರೇಕಳ ಹಾಜಬ್ಬ ಎಂಬ ಶೀರ್ಷಿಕೆಯನ್ನೇ ನೀಡಿದ್ದೆ. ಆ ಲೇಖನ 2013ರಿಂದ 2016ರ ವರೆಗೆ ಮಂಗಳೂರು ವಿ.ವಿ.ಯ ಮೊದಲ ವರ್ಷದ ಬಿ.ಕಾಂ. ಕನ್ನಡ ಪಠ್ಯಪುಸ್ತಕ ” ನುಡಿವಣಿ” ಯಲ್ಲಿ ಪಠ್ಯವಾಗಿ ಮೂರು ವರ್ಷಗಳ ಕಾಲ ಇತ್ತು. 2016ರಿಂದ ಕೇರಳ ಸರಕಾರದ ಎಂಟನೇ ತರಗತಿಯ ಕನ್ನಡ ಭಾಷಾ  ಪಠ್ಯಕ್ಕೂ ನನ್ನಲ್ಲಿ ಬರಹ ಅಪೇಕ್ಷಿಸಿದಾಗಲೂ ಅದೇ ಅಕ್ಷರ ಸಂತ ಎಂಬ ಶೀರ್ಷಿಕೆಯನ್ನೇ ನೀಡಿದ್ದೆ.2011ರಲ್ಲಿ ಹಾಜಬ್ಬರ ಕುರಿತಂತೆ ಪ್ರಕಟವಾದ ನನ್ನ ಕೃತಿಯೊಂದನ್ನು ಮೊದಲ ಬಾರಿಗೆ ಕನ್ನಡ ಸಂಘ ಕಾಂತಾವರ ತನ್ನ ನಾಡಿಗೆ ನಮಸ್ಕಾರ ಎಂಬ ಮಾಲಿಕೆಯಲ್ಲಿ  ಪ್ರಕಟಿಸಿತ್ತು. ಆ ಕೃತಿಗೂ “ಅಕ್ಷರ ಸಂತ: ಹರೇಕಳ ಹಾಜಬ್ಬ” ಎಂಬ ಶೀರ್ಷಿಕೆ ನೀಡಿದ್ದೆ. ಆದರೆ ಹಿರಿಯ ಸಾಹಿತಿ ಡಾ.ನಾ.ಮೊಗಸಾಲೆ ಮತ್ತು ವಿ.ಗ.ನಾಯಕ್‌ರನ್ನೊಳಗೊಂಡ ಸಂಪಾದಕ ಮಂಡಳಿ ಪುಸ್ತಕದ ಹೆಸರನ್ನು “ಅಪರೂಪದ ಸಮಾಜ ಸೇವಕ : ಹರೇಕಳ ಹಾಜಬ್ಬ “ಎಂದು ಬದಲಿಸಿತ್ತು.

ಹಾಜಬ್ಬರನ್ನು ಅಕ್ಷರ ಯೋಗಿ, ಅಕ್ಷರ ಭಗೀರಥ, ಅಕ್ಕರದ ಅವಧೂತ,ಅಕ್ಷರ ಗಾಂಧಿ, ಅಕ್ಷರ ಮಹಾತ್ಮ ಹೀಗೆ ಬೇರೆ ಬೇರೆ ಹೆಸರಿನಲ್ಲಿ ಕರೆಯಲಾಗಿತ್ತಾದರೂ ಅವರ ಹೆಸರಿನೊಂದಿಗೆ ಗಟ್ಟಿಯಾಗಿ ಉಳಿದದ್ದು ಮಾತ್ರ  ಅಕ್ಷರ ಸಂತ..

LEAVE A REPLY

Please enter your comment!
Please enter your name here