– ಚರಣ್ ಐವರ್ನಾಡು

ಗೆಜ್ಜೆಗಿರಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳಿಗೆ ಮೆರವಣಿಗೆ ಬರುವಾಗ ಮುಸಲ್ಮಾನರು ಕೊಡುವ ಪಾನಕ, ನೀರು ಕುಡಿಯಬಾರದು; ಅದರಲ್ಲಿ ಮಕ್ಕಳಾಗದಂತಹ ಕೆಮಿಕಲ್ ಹಾಕಲಾಗುತ್ತಿದೆ ಎಂಬ ಪೋಸ್ಟುಗಳು ವಾಟ್ಸಪ್ಪ್ ನಲ್ಲಿ ಹರಡಲಾಗುತ್ತಿದೆ. ಮಕ್ಕಳಾಗದ ಹಾಗೆ ಮಾಡುವ ಕೆಮಿಕಲ್ ಯಾವುದು ಅಂತ ಬೈದೇರ್ಲಿಗೆ ಗೊತ್ತು ! ಖಾದರಿಚ್ಚ (ಶಾಸಕ ಯು. ಟಿ  ಕಾದರ್) “ಕೆಮ್ಮಲೆದ ಬ್ರಮ್ಮ…” ಎಂದು ಹಾಡುವುದು ನಮ್ಮ ನಡುವೆ ಟ್ರೊಲ್ ಆಗುತ್ತದೆ. ಅವರೇನು ಸಂಗೀತ ಕಲಿತು ಹಾಡ್ತಿಲ್ಲ, ಇಷ್ಟ ಪಟ್ಟು ಹಾಡಿದ್ದಾರೆ. ಒಡೆದು ಚೂರು ಮಾಡುವ ಈ ಸಂದರ್ಭದಲ್ಲಿ ನಾವು ಕಟ್ಟುವ ಹಾಡು ಹಾಡುತ್ತೇವೆ.

ಕೋಟಿ ಚೆನ್ನಯರಿಗೂ ಬ್ಯಾರಿಗಳಿಗೂ ಯಾರು ಸಂಬಂಧ ಇಲ್ಲ ಎಂದವರು? ಕೋಟಿ ಚೆನ್ನಯರು ವೀರ ಮರಣ ಹೊಂದಿದ ಮೇಲೆ ಅವರ ಜವಾಬ್ದಾರಿಯನ್ನು ನಿಭಾಯಿಸಿದವನು ಒಬ್ಬ ಬ್ಯಾರಿ. ನಡ್ಕದ ಅಜ್ಜ ಈ ಕಥೆಯನ್ನು ಹೇಳುತ್ತಿದ್ದರು ಮತ್ತು ಬರೆದಿದ್ದರು ಕೂಡ. ಅವರಲ್ಲಿ ಸ್ಥಳೀಯ ಚರಿತ್ರೆಯನ್ನು ಕಟ್ಟಬಲ್ಲ ಅನೇಕ ಕಥನಗಳು ಇದ್ದವು. ಅವು ಅವರೊಂದಿಗೆ ಸ್ವರ್ಗ ಸೇರಿದವು ಎಂಬುದು ಬೇಜಾರಿನ ಸಂಗತಿ.

******

ಕೋಟಿ ಚೆನ್ನಯರು ಮರಣ ಹೊಂದಿದ ಮೇಲೆ ಎಣ್ಮೂರು ಸೂತಕದಲ್ಲಿ ಇತ್ತು. ದೇವು ಬಲ್ಲಾಳನ ಪಟ್ಟವನ್ನು ರಕ್ಷಿಸಲು ಅವಳಿ ವೀರರು ತಮ್ಮ ಪ್ರಾಣವನ್ನು ಅರ್ಪಿಸಿದ್ದರು. ಇವರ ನಂತರ ಎಣ್ಮೂರಿನ ದೇವು ಬಲ್ಲಾಳನ ಪಟ್ಟವನ್ನು ಕಾಪಾಡುವ ವೀರರು ಯಾರು? ಆಗ ಅವರಿಗೆ ಬೆಂಗಾವಲಾಗಿ ನಿಂತ ವೀರ “ಮಾಮ್ಮಾಲಿ” ಬ್ಯಾರಿ!

ಕುರಿಯ ಗುತ್ತು ಪುತ್ತೂರಿನ ಹೆಗ್ಗಡೆಯ ಬೀಡಿಗೆ ಸೇರಿದ ಖ್ಯಾತ ಗುತ್ತು. ಇಲ್ಲಿನ ಗುತ್ತಿನಾರ್ ಮರಣಹೊಂದಿದ ಮೇಲೆ ಗುತ್ತಿನ ಹೆಂಗಸು ಗುತ್ತಿನ ಜವಾಬ್ದಾರಿ ಹೊರುತ್ತಾಳೆ. ಗುತ್ತಿನ ಪರಿಸರದಲ್ಲಿ ಇದ್ದ ಮುಸ್ಲಿಂ ಕುಟುಂಬದ ಯುವಕ ಗುತ್ತಿನ ದಂಡಿನ ಮುಖಂಡ. ಅನಾಥನಾಗಿದ್ದ ಅವನು ತನ್ನ ಮಡದಿಯ ಜೊತೆಗೆ ವಾಸ ಮಾಡುತ್ತಿದ್ದ.

ಹೀಗಿರಲು ಗುತ್ತಿಗೆ ವಿಜಯನಗರದ ತಾಳಿಕೋಟೆಯ ಕದನಕ್ಕೆ ಸೈನಿಕರು ಮತ್ತು ನಿಧಿಯನ್ನು ನೀಡುವಂತೆ ಪುತ್ತೂರಿನ ಹೆಗ್ಗಡೆಗೆ ಬರುತ್ತದೆ. ಅವನು ತನ್ನ ಕೈಕೆಳಗೆ ಬರುವ ನಾಲ್ಕು ಗುತ್ತುಗಳನ್ನು ಕರೆದು ಸಭೆ ನಡೆಸುತ್ತಾನೆ. ಯುದ್ಧಕ್ಕೆ ಪಡೆಯನ್ನು ಕಳುಹಿಸಲು ಅದಕ್ಕೆ ಮುಖಂಡನಾಗಿ ಕುರಿಯ ಗುತ್ತಿನ ಬ್ಯಾರಿ ಮುಖಂಡನನ್ನು ನೇಮಿಸಿದಾಗ ಗುತ್ತಿನ ಹೆಂಗಸು ವಿರೋಧ ಮಾಡುತ್ತಾಳೆ. ಅವಳಿಗೆ ತುಂಬು ಗರ್ಭಿಣಿ ಮಡದಿಯನ್ನು ಹೊಂದಿರುವ ಬ್ಯಾರಿಯನ್ನು ಯುದ್ದಕ್ಕೆ ಕಳುಹಿಸುವುದು ಇಷ್ಟವಿರಲಿಲ್ಲ. ಆದರೆ ಬ್ಯಾರಿ ತನ್ನ ಪಡೆಯೊಂದಿಗೆ ವಿಜಯನಗರದ ಯುದ್ದಕ್ಕೆ ಹೋಗುತ್ತಾನೆ. ಯುದ್ಧದಲ್ಲಿ ಮರಣ ಹೊಂದುತ್ತಾನೆ.

ಇತ್ತ ಗಂಡನನ್ನು ಕಳೆದುಕೊಂಡ ಬ್ಯಾರ್ದಿ ಒಂದು ಗಂಡು ಮಗುವಿಗೆ ಜನ್ಮ ನೀಡಿ ಮರಣ ಹೊಂದುತ್ತಾಳೆ. ಈ ಮಗುವನ್ನು ಗುತ್ತಿನ ಮನೆಯ ಒಡತಿಯೇ “ಮಮ್ಮಾಲಿ/ಮಮ್ಮದೆ” ಎಂಬ ಹೆಸರು ಇಟ್ಟು ಸಾಕುತ್ತಾಳೆ. ಅವ ಮುಸಲ್ಮಾನನಾದರೂ ಅವನಿಗೆ ನಮಾಜು ಮಾಡಲು ಗುತ್ತಿನಲ್ಲಿ ಅಡ್ಡಿ ಇರಲಿಲ್ಲ. ಒಂದು ದೀಪ ಉರಿಸಿ ನಿತ್ಯ ನಮಾಜು ಮಾಡುತ್ತಿದ್ದ.

ಒಂದು ದಿನ ದನ ಮೇಯಿಸಲು ಹೋಗಿದ್ದ ಮಾಮ್ಮಲಿ ಮರದ ಕೆಳಗೆ ಮಲಗಿದ್ದ. ಅವನ ಮುಖಕ್ಕೆ ಬಿಸಿಲು ಬಡಿಯುತ್ತಿತ್ತು. ಆಗ ಒಂದು ಸರ್ಪ ಹೆಡೆ ಎತ್ತಿ ಅವನ ಮುಖಕ್ಕೆ ಬಿಸಿಲು ಬೀಳದಂತೆ ನಿಂತಿತ್ತಂತೆ. ಅದನ್ನು ನೋಡಿ ಇತರ ಹುಡುಗರು ಭಯದಲ್ಲಿ ಓಡಿ ಹೋಗಿದ್ದರು. ಆದರೆ ಮಮ್ಮಾಲಿ ಮಾತ್ರ ಏನೂ ಅಗದವನಂತೆ ಇದ್ದ.ಇವನು ಗುಟ್ಟಿನಲ್ಲಿ ಬೆಳೆದಂತೆ ಅವನ ಕಾರಣಿಕ ಕೂಡಾ ದಿನೇ ದಿನೇ ಬೆಳೆಯಿತು. ಕುರಿಯ ಗುತ್ತಿನ ಸಂಪತ್ತು ಸಮೃದ್ಧವಾಗಿ ಬೆಳೆಯಿತು.

ಒಂದು ದಿನ ಕುರಿಯ ಗುತ್ತಿನ ಕಪಿಲೆ ದನವನ್ನು ಹುಲಿ ಹಿಡಿಯಿತು. ದನವನ್ನು ಕಳೆದುಕೊಂಡ ಗುತ್ತಿನ ಒಡತಿ ಅಳುತ್ತಿದ್ದಳು. ಅಂದು ರಾತ್ರಿ ಮಮ್ಮಾಲಿ ದನವನ್ನು ಕೊಂದ ಜಾಗಕ್ಕೆ ಕರಿ ಕಂಬಳಿ ಹೊದ್ದು ಹೋಗಿ ಹುಲಿಗಾಗಿ ಕಾದನು, ಹುಲಿ ಬಂದಂತೆ ಅದನ್ನು ಹೊಡೆದು ಸಾಯಿಸಿದ. ಸತ್ತ ಹುಲಿಯನ್ನು ಹಗ್ಗದಲ್ಲಿ ಕಟ್ಟಿ ತನ್ನ ಸೊಂಟಕ್ಕೆ ಬಿಗಿದು ಎಳೆದುಕೊಂಡು ಕುರಿಯ ಗುತ್ತಿನ ಅಂಗಳಕ್ಕೆ ತಂದು ಹಾಕಿದ.ಇಂತಹ ವೀರನನ್ನು ಗರಡಿಗೆ ಸೇರಿಸಿ ವೀರನನ್ನಾಗಿ ಮಾಡಲು ಗುತ್ತಿನ ಒಡತಿ ತೀರ್ಮಾನಿಸುತ್ತಾಳೆ. ಆದರೆ ಪುತ್ತೂರಿನಲ್ಲಿ ಗರಡಿ ಇರಲಿಲ್ಲ. ಅವನ್ನನ್ನು ವಿಟ್ಲದ ಅರಸನ ಗರಡಿಗೆ ಸೇರಿಸುತ್ತಾಳೆ. ವಿಟ್ಲದ ಅರಸರಿಗೆ ಗರಡಿಯ ಗುರುವಾಗಿ ಇದ್ದವರು ದೇರಣ್ಣ ಗೌಡ ಎಂಬವನು. ಇವನ ಅಡಿಯಲ್ಲಿ ಮಮ್ಮಾಲಿ ಅಂಗ ಸಾಧನೆಯನ್ನು ಕಲಿಯುತ್ತಿರುತ್ತಾನೆ.

ಒಮ್ಮೆ ರಾಜ ಕುಟುಂಬಕ್ಕೆ ಸೇರಿದ ಯುವಕ ದೇರಣ್ಣ ಗೌಡರ ಪ್ರೇಯಸಿಯ ಮಾನ ಭಂಗ ಮಾಡುತ್ತಾನೆ. ಆಗ ದೇರಣ್ಣ ಗೌಡ ಇದನ್ನು ಪ್ರಶ್ನಿಸಿ ರಾಜ ವಿರೋಧಕ್ಕೆ ಒಳಾಗಾಗ ಬೇಕಾದೀತು ಎಂದು ಸಾಧುವಾದ ಎಣ್ಮೂರು ದೇವು ಬಲ್ಲಾಳನ ಬೀಡಿಗೆ ತನ್ನ ಪ್ರೇಯಸಿಯೊಂದಿಗೆ ಬರುತ್ತಾನೆ. ಬಲ್ಲಾಳ ಅವನಿಗೆ ಅಕ್ರಿಕೆ (ತುರಿಕೆ ಉಂಟು ಮಾಡುವ ಸಸ್ಯ) ಹೆಚ್ಚಿದ್ದ ಅಕ್ರಿಕಟ್ಟೆ ಎಂಬ ಭೂಮಿಯನ್ನು ನೀಡಿ ಆಶ್ರಯ ನೀಡುತ್ತಾರೆ. ಹಾಗೆ ಬಲ್ಲಾಳರು ಗೌಡನ ಮೂಲಕ ಪಡ್ಪು ಎಂಬಲ್ಲಿ ಗರಡಿ ಶಾಲೆ ತೆರೆಯುತ್ತಾರೆ.

ಹೇಳದೆ ಕೇಳದೆ ವಿಟ್ಲ ಬಿಟ್ಟ ಗುರುವನ್ನು ಹುಡುಕಿಕೊಂಡು ಮಮ್ಮಾಲಿ ಪಡ್ಪುವಿನಲ್ಲಿ ಇದ್ದ ಗರಡಿಗೆ ಬರುತ್ತಾನೆ. ಮತ್ತೆ ತನ್ನ ಗುರು ದೇರಣ್ಣ ಗೌಡನನ್ನು ಕೂಡಿಕೊಳ್ಳುತಾನೆ. ಇದು ಆಗಿದ್ದು ಕೋಟಿ ಚೆನ್ನಯರು ಮರಣ ಹೊಂದಿ ಎರಡು ವರ್ಷಗಳು ತುಂಬುತ್ತಿದ್ದ ಹಾಗೆ. ಕೋಟಿ ಚೆನ್ನಯರು ಮತ್ತು ಮಂಜು ಪೆರ್ಗಡೆ ತೀರಿದ ಮೇಲೆ ಎಣ್ಮೂರು ಬೀಡಿಗೆ ರಕ್ಷಣೆಗಾಗಿ ಯಾರೂ ಇರಲಿಲ್ಲ. ದೇರಣ್ಣನ ಶಿಷ್ಯ ಮಮ್ಮಾಲಿಯನ್ನು ದೇವು ಬಲ್ಲಾಳ ಮೆಚ್ಚಿ ಹತ್ತಿರ ಮಾಡಿಕೊಂಡ. ಅವನ ರಕ್ಷಣೆಯಲ್ಲಿ ಬಲ್ಲಾಳ ಎಣ್ಮೂರು ಪಟ್ಟವನ್ನು ಅಳುತ್ತಿದ್ದ.

ವೃದ್ದನಾಗಿದ್ದ ದೇವು ಬಲ್ಲಾಳನ ಪಟ್ಟದ ಮೇಲೆ ಅವನ ಅಳಿಯ ರುಕ್ಮ ಬಲ್ಲಾಳನ ಕಣ್ಣು ಬಿತ್ತು. ಪಟ್ಟವನ್ನು ಹಸ್ತಾಂತರ ಮಾಡುವಂತೆ ಇವನು ಬಲ್ಲಾಳನಿಗೆ ಹೇಳಿದ್ದ. ಇದನ್ನು ಚಾವಡಿಯಲ್ಲಿ ಪ್ರಸ್ತಾಪ ಮಾಡಿದಾಗ ಪಟ್ಟವನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ದೇವು ಬಲ್ಲಾಳ ಘೋಷಿಸುತ್ತಾನೆ. ಬಲ್ಲಾಳನಿಗೆ ಇಕ್ಕೇರಿಯ ಅರಸರು ಪಟ್ಟದ ಕತ್ತಿ ಮತ್ತು ಕಿರೀಟವನ್ನು ಕೊಟ್ಟಿದ್ದರಂತೆ. ಅದನ್ನು ತನ್ನ ವಶ ಮಾಡಿಕೊಂಡರೆ ಕಿರೀಟ ಮತ್ತು ಮತ್ತು ಪಟ್ಟದ ಕತ್ತಿ ಇಲ್ಲದ ಬಲ್ಲಾಳ ಅಧಿಕಾರ ಬಿಡಬೇಕಾಗುತ್ತದೆ ಎಂದು ರುಕ್ಮ ಬಲ್ಲಾಳ ಕುತಂತ್ರಗಳನ್ನು ಹೂಡುತ್ತಾನೆ. ಅದಕ್ಕಾಗಿ ಕಡಬದ ಬಲ್ಲಾಳನ ಸಹಾಯ ಕೋರುತ್ತಾನೆ. ಆದರೆ ಇದು ಮಮ್ಮಾಲಿ ಇರುವ ತನಕ ಸಾಧ್ಯ ಇಲ್ಲ ಎಂಬುದು ಅವನಿಗೆ ಗೊತ್ತಿತ್ತು.

ಮಮ್ಮಾಲಿ ನಮಾಜು ಮಾಡಲು ಎಣ್ಮೂರಿನಲ್ಲಿ ಪಳ್ಳಿ (ಮಸೀದಿ) ಇರಲಿಲ್ಲ. ಅವನು ಕಡಬದ ಪಲ್ಲಿಗೆ ಹೋಗಬೇಕಿತ್ತು. ಒಂದು ಶುಕ್ರವಾರ ಕಡಬದ ಪಳ್ಳಿಗೆ ಹೋಗುವಾಗ ಕಡಬದ ಪಲ್ಲಿಯಲ್ಲಿ ಇರುವ ಯುವಕರು ಅಂದು ಒಬ್ಬರೂ ಇರಲಿಲ್ಲ. ಮಮ್ಮಾಲಿಗೆ ಅನುಮಾನ ಬರುತ್ತದೆ. ನೇರ ಎಣ್ಮೂರಿನ ಕಡೆಗೆ ನಡೆಯುತ್ತಾನೆ.

ಇತ್ತ ಮಮ್ಮಾಲಿ ಇಲ್ಲದ ಸಮಯದಲ್ಲಿ ರುಕ್ಮ ಬಲ್ಲಾಳ ಕಡಬದ ಬಲ್ಲಾಳನ ಪಡೆಯೊಂದಿಗೆ ಎಣ್ಮೂರಿನ ಬೀಡಿನ ಮೇಲೆ ಧಾಳಿ ಇಟ್ಟು ಪಟ್ಟದ ಕತ್ತಿ ಮತ್ತು ಪೇಟವನ್ನು ವಶಮಾಡಿಕೊಳ್ಳುತ್ತಾನೆ.ಕಡಬದ ದಂಡು ಕಡಬದ ಕಡೆಗೆ ಮರಳುವಾಗ ಹಿಂತಿರುಗಿ ಬರುತ್ತಿರುವ ಮಮ್ಮಾಲಿ ಬ್ಯಾರಿ ಪಂಜದ ಕಮಿಲದಲ್ಲಿ ಎದುರಾಗುತ್ತಾನೆ. ಮಮ್ಮಾಲಿ ಮತ್ತು ಕಡಬದ ದಂಡಿನ ನಡುವೆ ಕಾದಾಟ ನಡೆಯುತ್ತದೆ. ಲಡಾಯಿಯಲ್ಲಿ ಮಮ್ಮಾಲಿ ಒಬ್ಬನೇ ಕಾದಾಡಿ ಎಣ್ಮೂರಿನ ಪಟ್ಟದ ಕತ್ತಿ ಮತ್ತು ಪೇಟವನ್ನು ಮರುವಶ ಮಾಡಿಕೊಳ್ಳುತ್ತಾನೆ.

ಮಮ್ಮಾಲಿ ಎಣ್ಮೂರಿನ ಬೀಡಿಗೆ ಬಂದಾಗ ದೇವು ಬಲ್ಲಾಳ ಮತ್ತು ದೇರಣ್ಣ ಗೌಡ ದುಃಖದಲ್ಲಿ ಇರುತ್ತಾರೆ. ಬ್ಯಾರಿ ತಾನು ತಂದ ಪೇಟ ಮತ್ತು ಕತ್ತಿಯನ್ನು ಬಲ್ಲಾಳರಿಗೆ ಒಪ್ಪಿಸುತ್ತಾನೆ. ಆಗ ಬಲ್ಲಾಳರು ಒಮ್ಮೆ ಕಳೆದುಕೊಂಡ ಪಟ್ಟವನ್ನು ಮತ್ತೆ ಏರುವುದಿಲ್ಲ ಎಂದು ಹೇಳಿ ಮಮ್ಮಾಲಿಯನ್ನು ಪಟ್ಟ ಏರುವಂತೆ ಒತ್ತಾಯಿಸುತ್ತಾರೆ. ಬ್ಯಾರಿ ಎಷ್ಟೇ ತಿರಸ್ಕರಿಸಿದರು ಬಲ್ಲಾಳ ಒಪ್ಪುವುದಿಲ್ಲ. ಆಗ ಮಮ್ಮಾಲಿ ಪಟ್ಟದ ಕತ್ತಿ ಮತ್ತು ಪೇಟವನ್ನು ಪಟ್ಟದ ಮಣೆಯ (ಸಿಂಹಾಸನ) ಮೇಲೆ ಇಟ್ಟು ಬೀಡನ್ನು ಕಾಯುತ್ತಾನೆ. ಬಲ್ಲಾಳ ತನ್ನ ನಂತರ ಮಮ್ಮಾಲಿಗೆ ಪಟ್ಟ ಹೋಗಬೇಕು ಎಂದು ಅವನು ಪಟ್ಟವೇರಿ ಮಾಡಬೇಕಾದ ಜವಾಬ್ದಾರಿಗಳನ್ನು ಕುರಿತು ಶಾಸನ ಬರೆಸುತ್ತಾನೆ. ಕೆಲ ಕಾಲದ ನಂತರ ಬಲ್ಲಾಳ ಮರಣ ಹೊಂದುತ್ತಾನೆ.

ಇತ್ತ ರುಕ್ಮ ಬಲ್ಲಾಳ ಪಟ್ಟವನ್ನು ದಕ್ಕಿಸಿಕೊಳ್ಳಲು ಪ್ರಯತ್ನ ನಡೆಸುತ್ತಿರುತ್ತಾನೆ. ಅವನು ಕುಂಬ್ಳೆ ರಾವಂತರಸ ಮತ್ತು ವಿಟ್ಲದ ಹೆಗ್ಗಡೆಗೆ ದೂರು ನೀಡುತ್ತಾನೆ. ಇವರು ಮಮ್ಮಾಲಿಯನ್ನು ಕರೆದು ರುಕ್ಮ ಬಲ್ಲಾಳನಿಗೆ ಪಟ್ಟ ಬಿಟ್ಟು ಕೊಡುವಂತೆ ಆದೇಶ ನೀಡುತ್ತಾರೆ. ಪಟ್ಟ ಬಿಟ್ಟು ಕೊಟ್ಟರೆ ಸ್ವರ್ಗರ್ಥರಾದ ದೇವು ಬಲ್ಲಾಳರಿಗೆ ಅಪಚಾರ ಬಗೆದ ಹಾಗೆ ಎಂದು ಮಮ್ಮಾಲಿ ಇದಕ್ಕೆ ಒಪ್ಪುವುದಿಲ್ಲ.

ಆಗ ಕುಂಬ್ಳೆ ಮತ್ತು ವಿಟ್ಲದ ಅರಸರು ಒಂದು ತೀರ್ಮಾನಕ್ಕೆ ಬರುತ್ತಾರೆ. ಯಾರ ತಲೆಗೆ ಪಟ್ಟದ ಆನೆ ಪಟ್ಟದ ಕಿರೀಟ ಹಾಕಿದ ಮುಂಡಾಸು ತೋಡಿಸುತ್ತದೆಯೋ ಅವರು ಮುಂದೆ ಎಣ್ಮೂರು ಬೀಡಿನ ಪಟ್ಟ ಏರಬೇಕು ಎಂದು ಅದೇಶಿಸುತ್ತಾರೆ. ಇದಕ್ಕೆ ಬ್ಯಾರಿ ಒಪ್ಪುತ್ತಾನೆ. ಆದರೆ ಆನೆ ಮಮ್ಮಾಲಿ ಬ್ಯಾರಿಯ ತಲೆಗೆ ಪಟ್ಟದ ಮುಂಡಾಸು ತೊಡಿಸುತ್ತದೆ. ಪಟ್ಟ ಮಮ್ಮಾಲಿಯದಾಗುತ್ತದೆ. ಆದರೆ ಇವನು ಪಟ್ಟದ ಕತ್ತಿ ಮತ್ತು ಮುಂಡಾಸನ್ನು ಪಟ್ಟದ ಮಣೆಯ ಮೇಲೆ ಇಟ್ಟು ಬೀಡನ್ನು ಅಳುತ್ತಾನೆ. ಮಣೆಯ ಪಕ್ಕ ಒಂದು ಸರ್ಪ ಮಲಾಗಿರುತ್ತಿತ್ತಂತೆ! ರುಕ್ಮ ಬಲ್ಲಾಳ ತನಗೆ ದಕ್ಕಿದ ಭೂಮಿಯನ್ನು ಅನುಭವಿಸಲು ಸಾಧ್ಯವಾಗದೆ ಊರು ಬಿಟ್ಟ.ಬ್ಯಾರಿ ಬೀಡಿನಲ್ಲಿ ವಾಸ ಮಾಡದೆ ಪಕ್ಕದಲ್ಲಿ ತನಗೊಂದು ಮನೆ ಕಟ್ಟಿಸಿಕೊಂಡ. ಆದರೆ ಬೀಡಿನಿಂದ ಆಗಬೇಕಾದ ಎಲ್ಲ ಧರ್ಮ ಕಾರ್ಯಗಳನ್ನು ಮಾಡಿಸಿಕೊಂಡು ಬರುತ್ತಿದ್ದ.

ಸುಮಾರು ಕ್ರಿ.ಶ 1590 ರ ಆಸುಪಾಸಿನಲ್ಲಿ ನಡೆದ ಈ ಘಟನೆಯ ಕಥನ ಇಂದು ಕೆಲವು ಆಚರಣೆಗಳ ಮೂಲಕ ಉಳಿದುಕೊಂಡಿದೆ. ಬಲ್ಲಾಳ ಬರೆಸಿದ ತಾಮ್ರ ಶಾಸನ ಇತ್ತೀಚಿನ ವರೆಗೆ ಇತ್ತಂತೆ. 1920 ರ ಅಜುಬಾಜಿನಲ್ಲಿ ಹಳೆಯ ಬೀಡಿಗೆ ಬೆಂಕಿ ಬಿದ್ದ ಮೇಲೆ ಪಟ್ಟದ ಕಿರೀಟ ಮತ್ತು ಈ ತಾಮ್ರ ಶಾಸನ ನಾಶವಾಗಿ ಹೋಯಿತಂತೆ.

ನಡ್ಕದ ಅಜ್ಜನಿಗೆ ಈ ಕತೆಯನ್ನು ಹೇಳಿದವರು ಅವರ ಮಾವ ಆಕ್ರಿಕಟ್ಟೆ ದೇರಣ್ಣ ಗೌಡರ ವಂಶದವರಾದ ಆಕ್ರಿಕಟ್ಟೆ ಹುಕ್ರಪ್ಪ ಗೌಡರು. ಅವರು ಈ ತಾಮ್ರ ಶಾಸನವನ್ನು ನೋಡಿದ್ದಾರೆ ಎಂದು ಹೇಳಿದ್ದರಂತೆ ! ಇದರಲ್ಲಿ ಹೀಗೆ ಬರೆದಿತ್ತು ಎಂದು ನಡ್ಕದ ಅಜ್ಜ ಹೇಳುತ್ತಿದ್ದರು – ವಿಷ್ಣು ದೇವರ ಜಾತ್ರೆ ವರ್ಷವರ್ಥಿ ನಡೆಸುವುದು, ದೇವಾಲಯವನ್ನು ಶುಚಿಯಾಗಿ ಇಡುವುದು, ನಾಗಬನಕ್ಕೆ ಹಾಲು ಎರೆಯುವುದು, ಬಾಕಿಮಾರು ಗದ್ದೆಗೆ. ಬಾಳೆ ಹಾಕಿಸುವುದು, ಬೀಡಿನ ಎಲ್ಲ ಕಾರ್ಯಗಳನ್ನು ನಡೆಸುವುದು, ಮಾಗಣೆ ದೇವರಾದ ಪಂಜ ಪರಿವಾರ ಪಂಚಲಿಗೇಶ್ವರ ಸ್ವಾಮಿಯ ಜಾತ್ರೆಯಲ್ಲಿ ಅಮೈ, ಕೆರ್ಪಡ, ಅಲಂಗಾರು, ಎಣ್ಮೂರಿನವರಿಂದ ಬಿಟ್ಟಿ ಚಾಕರಿ ಮಾಡಿಸುವುದು ಮತ್ತು ವಂತಿಕೆ ನೀಡುವಂತೆ ಮಾಡುವುದು.

ಎಣ್ಮೂರಿನ ಮಹಾವಿಷ್ಣು ದೇವರ ದೇವಾಲಯ ಹಡಿಲು ಬಿದ್ದು ಅದರ ಮೂರ್ತಿಯನ್ನು ಚೊಕ್ಕಾಡಿಗೆ ಕೊಂಡು ಹೋಗಲಾಯಿತು. 2003 ರಲ್ಲಿ ಎಣ್ಮೂರಿನ ದೇವಾಲಯದ ಅವಶೇಷಗಳನ್ನು ಪತ್ತೆ ಮಾಡಿ ಅಲ್ಲಿ ದೇವಾಲಯ ನಿರ್ಮಾಣ ಮಾಡಲಾಯಿತು.

ಮಮ್ಮಾಲಿ ಬ್ಯಾರಿಯು ಅಧಿಕಾರ ಹಿಡಿದ ಮೇಲೆ ಪಂಜದ ದೇವರಿಗೆ ತಪ್ಪದೆ ಸೇವೆ ನಡೆಯುತ್ತಿತ್ತು. ಬ್ಯಾರಿಯ ಕುಟುಂಬ ದೊಡ್ಡದಾಗಿ ಬೆಳೆದಿದೆ. ಸುಳ್ಯದ ಖ್ಯಾತ ನ್ಯಾಯವಾದಿ ಕುಂಞಪಳ್ಳಿಯವರು ಎಣ್ಮೂರು ಬೀಡಿನ ಅರ್ವತ್ತೊಕ್ಕೆಲು ಮನೆಯವರು. ಎಣ್ಮೂರು ಪಟ್ಟವನ್ನು ಉಳಿಸಿದ ಕುಂಞಪಿಲಿ ಮಮ್ಮಾಲಿ ಕುಟುಂಬವನ್ನು ಪಂಜ ಜಾತ್ರೆಯಲ್ಲಿ ಗೌರವಾದರ ನೀಡಿ ಆಹ್ವಾನಿಸಿ ಸ್ವಾಗತಿಸುತ್ತಾರೆ. ಮಮ್ಮಾಲಿ ಹುಟ್ಟಿದ ಮನೆ ಕುರಿಯದ ಗುತ್ತಿನಲ್ಲಿ ನಮಾಜು ಮಾಡುವಾಗ ಅವನು ಉರಿಸಿದ ದೀಪವನ್ನು ಇಂದಿಗೂ ಉರಿಸುತ್ತಾರೆ.

ದೇವಾಲಯದ ಜಾತ್ರೆಯಲ್ಲಿ ಬ್ಯಾರಿಗಳು ಅಂಗಡಿ ಹಾಕುವ ಹಾಗಿಲ್ಲ ಎಂದು ಮನಸುಗಳನ್ನು ಒಡೆಯುವ ದೇಶದ್ರೋಹಿ – ಸಂಸ್ಕೃತಿ ಭಂಜಕ ರ ನಡುವೆ, ಅದಕ್ಕೆ ಪ್ರತಿಯಾಗಿ ಬೆಳೆಯುವ ಅಲ್ಪಸಂಖ್ಯಾತ ಕೋಮುವಾದಕ್ಕೆ ಎದುರಾಗಿ ನಾನು ಮಮ್ಮಾಲಿಯ ಕತೆಯನ್ನು ಗಟ್ಟಿಯಾಗಿ ಹೇಳುತ್ತಾನೆ. ಕೋಟಿ ಚೆನ್ನಯರು ಪ್ರಾಣ ಕೊಟ್ಟದ್ದು ಎಣ್ಮೂರು ಬೀಡಿನ ಪಟ್ಟವನ್ನು ಉಳಿಸಲು. ಅವರ ಮರಣದ ನಂತರ ಅವರ ಕನಸನ್ನು ನಡೆಸಿದ್ದು ಒಬ್ಬ ಬ್ಯಾರಿ ವೀರ ಮಮ್ಮಾಲಿ.

ಇವನ ಕತೆಯನ್ನು ಹೇಳುವುದು ಕಥೆಯನ್ನು ನನಗೆ ಹೇಳಿದ ನಡ್ಕದ ಧರ್ಮಪಾಲ ಅಜ್ಜನಿಗೆ ನೀಡಿದ ಗೌರವ. ಧರ್ಮದ ಹೆಸರಿನಲ್ಲಿ ಒಡೆದು ಹೋಗುತ್ತಿರುವ ದೇಶವನ್ನು ಮರು ಕಟ್ಟುವ ಬಂಧವಾಗಿ ಈ ಕಥೆಯನ್ನು ನಾನು ಹೇಳದೆ ಮತ್ತೆ ಯಾರು ಹೇಳುವುದು?

LEAVE A REPLY

Please enter your comment!
Please enter your name here