ಲೇಖಕರು – ಮುಷ್ತಾಕ್ ಹೆನ್ನಾಬೈಲ್, ಕುಂದಾಪುರ

ದಂಪತಿಗಳು ಮೂರನೇಯ ಮಗು ಹೊಂದಲು ನಮ್ಮದೇನೂ ಅಡ್ಡಿಯಿಲ್ಲ ಎಂದು ಚೀನಾ ಸರ್ಕಾರ ರಾಗ ಎಳೆಯತೊಡಗಿದೆ. ಜನಸಂಖ್ಯೆ ವಿಚಾರದಲ್ಲಿ ಚೀನಾ ಆಡಿದಷ್ಟು ಮಂಗನಾಟ ಜಗತ್ತಿನಲ್ಲಿ ಬೇರಾರೂ ಆಡಿಲ್ಲ. ಹುಟ್ಟು ಸಾವುಗಳೆಂಬ ಸೃಷ್ಟಿಯ ಅನೂಹ್ಯ ಪರಿಕ್ರಮ ಅರಿಯುವಲ್ಲಿ ಕಳೆದ ಸರಿಸುಮಾರು 70 ವರ್ಷಗಳಿಂದ ಆ ದೇಶ ದೊಡ್ಡ ಮಟ್ಟದಲ್ಲಿ ಎಡವಿ ನಗೆಪಾಟಲಿಗೀಡಾಗಿದೆ. ಕಾಲಗಳ ಹಿಂದೆ, ಏರುತ್ತಿರುವ ಜನಸಂಖ್ಯೆಯು ದೇಶಕ್ಕೆ ಮಾರಕ ಎಂದು ಚೀನಾದ ರಾಜಕಾರಣಿಗಳು ಪುಂಖಾನುಪುಂಖವಾಗಿ ಪುಂಗಿದ್ದೇ ಪುಂಗಿದ್ದು. ಆದರೆ ಕಾಲ ಕ್ರಮಿಸಿ ಒಂದು ಪೀಳಿಗೆಯು ಅರ್ಧ ಆಯಸ್ಸಿಗೆ ಬಂದು ನಿಂತಾಗ, ದೇಶ, ಮಾನವ ಜೀವನಶೈಲಿ ಮತ್ತು ಸೃಷ್ಟಿಯ ಜೈವಿಕ ಪರಿಕ್ರಮಗಳಿಗೆ ಈ ನಿಯಂತ್ರಿತ ಜನಸಂಖ್ಯಾ ನೀತಿ ಮಾಡುವ ಅನಾಹುತಗಳ ಅರಿವು ಅವರಿಗಾಯಿತು. ಹಾಗಾಗಿ ದೇವರು- ಧರ್ಮ ಎಂದರೆ ರಾಷ್ಟ್ರೀಯ ಹೆದ್ದಾರಿಯ ಮೇಲೂ ಹೊರಳಾಡಿ ಗಹಗಹಿಸಿ ನಗುವ ಸಣ್ಣ ಕಣ್ಣಿನ ಚೀನಿಯರು, ದೊಡ್ಡದಾಗಿ ಕಣ್ಣುಬಿಟ್ಟು ಆಕಾಶ ನೋಡುತ್ತಾ ದೇವರ ಆಟ ಬಲ್ಲವರಾರು ಎನ್ನತೊಡಗಿದ್ದಾರೆ. ಕೆಲವೊಮ್ಮೆ ಕೆಲವರಿಗೆ ಕೆಟ್ಟ ಮೇಲೆ ಬುದ್ಧಿ ಬರುತ್ತದೆ. ಕೆಟ್ಟ ತಕ್ಷಣ ಬುದ್ಧಿ ಬಂದರೆ ಕೆಟ್ಟಿದ್ದನ್ನು ಸ್ವಲ್ಪವಾದರೂ ಸರಿ ಮಾಡಬಹುದು. ಆದರೆ ಚೀನಾಕ್ಕೆ ಸಂಪೂರ್ಣ ಕೊಳೆತ ಮೇಲೆ ಬುದ್ಧಿ ಬಂದಿದೆ. ಸರಿಯಾಗುವ ಕ್ಷೀಣ ಸಾಧ್ಯತೆಯಷ್ಟೇ ಇರುವುದು. ಆ ದೇಶದಲ್ಲಿ ಹೆಣ್ಣು- ಗಂಡಿನ ಆತಂಕಕಾರಿ ಲಿಂಗಾನುಪಾತದ ವ್ಯತ್ಯಯ, ಸೇನೆಗೆ ಸೇರುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವುದು, ಅರ್ಧ ವಯಸ್ಸಿನಲ್ಲೇ ಕೌಟುಂಬಿಕ ಆಸರೆಯಿಲ್ಲದೆ ದೇಶದ ದೊಡ್ಡ ಸಂಖ್ಯೆಯ ಜನ ಕಾಲಕಾಲದ ರೋಗಗಳು ಮತ್ತು ವೃದ್ಧಾಪ್ಯದ ಕಾರಣದಿಂದ ಅನಾಥಾಶ್ರಮ- ವೃದ್ಧಾಶ್ರಮಗಳಲ್ಲಿ ಬದುಕುವ ಅನಿವಾರ್ಯ ಪರಿಸ್ಥಿತಿ ಉದ್ಭವಿಸಿರುವುದು, ಇಡೀ ದೇಶವನ್ನು ತಲ್ಲಣಗೊಳಿಸಿದೆ. ಆರೋಗ್ಯ, ಶಿಕ್ಷಣ , ಸಾರಿಗೆ, ಸ್ಥಳೀಯಾಡಳಿತಗಳ ಅನುದಿನದ ಅಗತ್ಯ ತಳಮಟ್ಟದ ಕಾರ್ಯಗಳಿಗೆ ಸಿಬ್ಬಂದಿಗಳು ಸಿಗದೆ ಪರದಾಡುವಂತಾಗಿದೆ. ಶಿಸ್ತಿನಿಂದ ಕೂಡಿದ ತನ್ನ ಸರಾಗ ಮತ್ತು ಸ್ಥಿರ ಆಡಳಿತದಿಂದಾಗಿ ಇಡೀ ಜಗತ್ತಿನಲ್ಲೇ ಅಭಿವೃದ್ಧಿಯ ನಾಗಾಲೋಟದಲ್ಲಿದ್ದು, ಅಮೇರಿಕಾಕ್ಕೆ ಪರ್ಯಾಯ ಸೂಪರ್ ಪವರ್ ಆಗಿ ಬೆಳೆದಿದ್ದ ಚೀನಾ, ತನ್ನ ಜನಸಂಖ್ಯಾ ನೀತಿಯಿಂದಾಗಿ ಕಾಲಕಾಲಕ್ಕೆ ಹಿನ್ನಡೆ ಅನುಭವಿಸಿದೆ. ನಿರ್ಬಂಧಿತ ಜನಸಂಖ್ಯಾ ನೀತಿಯು ಚೀನಾದ ಸಾಮಾಜಿಕ ಪರಿಸ್ಥಿತಿಯನ್ನು ಸದ್ಯೋಭವಿಷ್ಯದಲ್ಲಿ ಸರಿಪಡಿಸಲಾರದಷ್ಟು ಏರುಪೇರಾಗಿಸಿದೆ.

20ನೇ ಶತಮಾನದ ಪೂರ್ವಾರ್ಧದಲ್ಲಿ ನಡೆದ ಎರಡು ಭಯಾನಕ ವಿಶ್ವ ಮಹಾಯುದ್ಧಗಳ ಜಾಗತಿಕ ಪರಿಣಾಮವನ್ನು ಕಂಡು ಕನಲಿದ ಚೀನಾ, ಇಡೀ ವಿಶ್ವದ ಮೇಲೆ ಪಾರಮ್ಯ ಸಾಧಿಸಲು ಮತ್ತು ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಲು, 1950ರ ದಶಕದಲ್ಲಿ ಜಗತ್ತಿನ ಅತಿದೊಡ್ಡ ಸೇನೆ ಮತ್ತು ಸಮಾಜ ಹೊಂದುವ ಬಯಕೆಯ ಭಾಗವಾಗಿ, ವ್ಯಾಪಕವಾಗಿ ದೇಶದ ಜನಸಂಖ್ಯೆ ಏರಿಸಲು ಉತ್ತೇಜನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತು. ಚೀನೀ ಸಮಾಜವೂ ಕೂಡ ಹೆಚ್ಚು ಮಕ್ಕಳನ್ನು ಹೆರುವುದು ದೇಶಕ್ಕೆ ಅಗತ್ಯ ಮತ್ತು ಅದು ದೇಶಪ್ರೇಮದ ಭಾಗವೆಂದು ತಿಳಿದು ಅಗತ್ಯ ಕಾರ್ಯಾಚರಣೆಗಿಳಿಯಿತು. ಹೀಗೆ 1949 ರಿಂದ 1980 ರವರೆಗೆ ಈ ಮನಸ್ಥಿತಿಯ ಪಾರಮ್ಯದಿಂದಾಗಿ ಚೀನಾದ ಜನಸಂಖ್ಯೆ ವಿಪರೀತ ಏರಿಕೆ ಕಂಡಿತು. ಒಂದೊಂದು ಮನೆಯಲ್ಲಿ ಕೋಚ್ ಮತ್ತು ಮೀಸಲು ಆಟಗಾರರ ಸಮೇತವಿರುವ ಒಂದಿಡೀ ಫುಟ್ಬಾಲ್ ತಂಡದಷ್ಟು ಇರುವ ಜನರ ಗುಂಪುಗಳು ಗೋಚರಿಸತೊಡಗಿದವು. ಜನಸಂಖ್ಯೆ ಏರಿಕೆಯಿಂದಾಗಿ ದೇಶದ ಸೇನೆ ಏನೋ ಎಣಿಸಿದಂತೆ ದೊಡ್ಡದಾಯಿತು. ಆದರೆ ಯುದ್ಧ ಮಾಡುವ ವಿಲಕ್ಷಣ ಉನ್ಮಾದದಿಂದಾದ 20ನೇ ಶತಮಾನದ ಎರಡು ಮಹಾಯುದ್ಧಗಳಲ್ಲಿ, ಜಗತ್ತಿನ ಹೆಚ್ಚುಕಡಿಮೆ ಎಲ್ಲ ದೇಶಗಳು ಬೆನ್ನಿನ ಮೇಲೆ ತಿಂದ ಬಾಸುಂಡೆಗಳು ಇನ್ನು ಹಾಗೇಯೇ ಇದ್ದವು. ಎಲ್ಲರಿಗೂ ಯುದ್ಧ ಬೇಡವಾಗಿತ್ತು. ಯುದ್ಧದ ನೆನಪಾದರೆ ಹಿಟ್ಲರ್, ಹಿರೋಷಿಮಾ, ನಾಗಾಸಾಕಿ, ಪರ್ಲ್ ಹಾರ್ಬರ್ ನೆನಪಾಗುತ್ತಿತ್ತು. ನೋಡುವ, ಕೊಲ್ಲುವ , ಕೊಚ್ಚುವ ಭಾಷೆ ಹೋಗಿ, ಕೂರುವ , ಮಾತನಾಡುವ, ಸರಿಯಾಗುತ್ತೆ ಎಂಬ ಮಾತುಗಳು ಬರತೊಡಗಿದವು. ಪ್ರಪಂಚವೆಲ್ಲ ಸೇರಿ ತನ್ನ ಮೇಲೆ ದಾಳಿ ಮಾಡಬಹುದೆಂದು ತಿಳಿದು, ದೂರಗಾಮಿ ಆಲೋಚನೆಯೊಂದಿಗೆ ಅಗತ್ಯಕ್ಕಿಂತ ಹೆಚ್ಚು ದೊಡ್ಡ ಸಂಖ್ಯೆಯ ಸೇನೆಯನ್ನು ಕಟ್ಟಿಕೊಂಡ ಚೀನಾ ಅಕ್ಷರಶಃ ಇಂಗು ತಿಂದ ಮಂಗನಂತಾಯಿತು. ಯುದ್ಧಗಳಿಲ್ಲದ ಮೇಲೆ ಸೇನೆ ಏಕೆ? .. ಇಡೀ ವಿಶ್ವದಲ್ಲೇ ಅತ್ಯಂತ ದೊಡ್ಡದಾದ ಸೇನೆಯನ್ನು ಹೊಂದಿದ್ದ ಚೀನಾಕ್ಕೆ ಅವರನ್ನು ಸಾಕುವುದೇ ಕಷ್ಟವಾಯಿತು. ಮಾನವ ಸಂಪನ್ಮೂಲ ಉಪಯೋಗಿಸಿ ಆಹಾರ ಉತ್ಪಾದಿಸುವ ಅದರ ಯೋಜನೆ ಕೂಡ ನಿರೀಕ್ಷಿಸಿದಷ್ಟು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ಬರಲಿಲ್ಲ. ರಕ್ಷಣಾ ಬಜೆಟಿನ ವಿಪರೀತ ವೆಚ್ಚದಿಂದಾಗಿ ದೇಶದಲ್ಲಿ ಆಹಾರ ಮತ್ತು ಇತರ ಉತ್ಪಾದನಾ ಕ್ಷೇತ್ರಗಳು ಗಂಭೀರ ಪರಿಣಾಮ ಎದುರಿಸಿದವು. ಹಾಗಾಗಿ ಚೀನಾ ಸರ್ಕಾರ ಇಕ್ಕಟ್ಟಿಗೆ ಸಿಲುಕಿತು. ಇದರ ಪರಿವೇ ಇಲ್ಲದ ದೇಶದ ಜನ ದೇಶಪ್ರೇಮದ ಗುಂಗಿನಲ್ಲಿ ಜನಸಂಖ್ಯೆ ಏರಿಸುವ ಕಾಯಕದಲ್ಲಿ ನಿತ್ಯ ನಿರಂತರರಾದರು. ದೇಶದ ಪ್ರಜೆಗಳ ಜನಸಂಖ್ಯೆ ಏರಿಸುವ ಈ ಪ್ರಚಂಡ ಪ್ರತಾಪ ಹೀಗೆ ಮುಂದುವರಿದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನರಿತ ಸರ್ಕಾರ, 1980ರಲ್ಲಿ ಕುಟುಂಬಕ್ಕೆ ಒಂದೇ ಮಗು ಕಾನೂನನ್ನು ತಂದು ಕಠಿಣವಾಗಿ ಜಾರಿಗೊಳಿಸಿತು. ಈ ಕಾನೂನಿನಿಂದಾಗಿ ಚೀನಾ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಯಿತು. ಆರಂಭದಲ್ಲಿ ಬಹಳ ಆದರ್ಶ ನೀತಿಯೆಂದು ಪ್ರಪಂಚದಾದ್ಯಂತ ಹೊಗಳಿಕೆಗೆ ಪಾತ್ರವಾದ ಈ ಕುಟುಂಬ ನಿಯಂತ್ರಣಾ ನೀತಿ, 20-25 ವರ್ಷ ಉರುಳಿದ ನಂತರ ಅಂದರೆ, 2004-2005ನೇ ಇಸವಿಯ ಹೊತ್ತಿಗೆ ಚೀನಾದ ಸಾಮಾಜಿಕ ವ್ಯವಸ್ಥೆಯ ಪಾಲಿಗೆ ದೊಡ್ಡ ಉರುಳಾಯಿತು. ಗಂಡು ಹೆಣ್ಣಿನ ವ್ಯಾಪಕವಾದ ಅನುಪಾತ ವ್ಯತ್ಯಾಸ ಆರಂಭವಾಯಿತು. ಆರಂಭದಲ್ಲಿ ಇದಕ್ಕೆ ಹೆಣ್ಣು ಭ್ರೂಣ ಹತ್ಯೆಯೇ ಕಾರಣ ಎಂದು ತಿಪ್ಪೆ ಸಾರಲಾಯಿತಾದರೂ, ಕ್ರಮೇಣ ಅನುಪಾತ ವ್ಯತ್ಯಾಸಕ್ಕೆ ಜನನ ನಿಯಂತ್ರಣವೇ ಕಾರಣ ಎಂದು ಸಂಶೋಧನೆಗಳಿಂದ ತಿಳಿದುಬಂತು. ಒಂದೇ ಮಕ್ಕಳನ್ನು ಹೊಂದಿದ ಕುಟುಂಬಗಳು ದುರ್ಬಲ ಕುಟುಂಬಗಳಾಗಿ ಪರಿವರ್ತಿತವಾದವು. ವಯಸ್ಸಾದ ತಂದೆ ತಾಯಂದಿರನ್ನು ಮತ್ತು ಸಂಸಾರವನ್ನು ಒಬ್ಬರೇ ಒಟ್ಟಿಗೆ ಸಾಕಲಾರದೆ ಅದೆಷ್ಟೋ ಮಕ್ಕಳು ತಮ್ಮ ಹೆತ್ತವರನ್ನು ವೃದ್ಧಾಶ್ರಮಗಳಲ್ಲಿ ಬಿಟ್ಟುಬಂದರು. ಒಂದು ಮತ್ತು ಎರಡು ಮಕ್ಕಳ ಹೆತ್ತವರಿಗೆ ವೃದ್ಧಾಶ್ರಮಗಳು ಬದುಕಿನ ಅಂತಿಮ ಚರಣದ ಖಾಯಂ ಮತ್ತು ನಿಶ್ಚಿತ ತಾಣಗಳಾದವು. ಚೀನಾ ದೇಶದ ಗಲ್ಲಿಗಲ್ಲಿಗಳಲ್ಲಿ ವೃದ್ಧಾಶ್ರಮಗಳು ಕಂಡುಬಂದವು. ಇರುವ ಒಂದೇ ಸಂತಾನವನ್ನು ಸೇನೆಗಾಗಲಿ ಅಥವ ದೂರದ ಅಗತ್ಯದ ದೇಶಸೇವೆಗಾಗಲಿ ಕಳುಹಿಸಲು ಹೆತ್ತವರು ಹಿಂಜರಿದರು. ದಿನ ಕಳೆದಂತೆ ಸೇನೆಗೆ ಸೇರುವವರ ಸಂಖ್ಯೆಯೇ ಕಡಿಮೆಯಾಯಿತು. ಸೇರುವವರು ಒಂದೋ ದೇಶ, ಇಲ್ಲವೇ ಕುಟುಂಬ ಎರಡರಲ್ಲಿ ಒಂದು ಆಯ್ದುಕೊಳ್ಳಬೇಕಿತ್ತು. ಕುಟುಂಬಗಳಲ್ಲಿ ಕಾಲಕಾಲಕ್ಕೆ ಸಂಭವಿಸುವ ಆರ್ಥಿಕ- ಕೌಟುಂಬಿಕ ಬಿಕ್ಕಟ್ಟುಗಳು ಒಬ್ಬರೇ ನಿಭಾಯಿಸಬೇಕಿತ್ತು. ಹೆಣ್ಣುಮಕ್ಕಳ ತಂದೆ- ತಾಯಂದಿರುಗಳು ಅಕ್ಷರಶಃ ಅನಾಥರಾದರು. ಕೌಟುಂಬಿಕ ಕಲಹಗಳು ತಾರಕಕ್ಕೇರಿ ಚೀನಾ ದೇಶದ ಸಾಮಾಜಿಕ ಜೀವನ ಹಿಂದೆಂದಿಗಿಂತ ಹೆಚ್ಚು ಗೊಂದಲಮಯ ಮತ್ತು ಪ್ರಕ್ಷುಬ್ಧಮಯವಾಯಿತು. ಇದರಿಂದಾಗಿ ಮಾನಸಿಕ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ವಿಪರೀತ ಏರತೊಡಗಿತು. ತಂದೆ ತಾಯಿಗಳಿಗೆ ಒಂದೇ ಮಗು ಇರುವುದರಿಂದ, ಕಡಿಮೆ ಆದಾಯವಿದ್ದರೂ ಉತ್ತಮ ಶಿಕ್ಷಣ ಸವಲತ್ತನ್ನು ನೀಡಲು ಸುಲಭವಾಗುತ್ತಿತ್ತು. ಹೀಗೆ ಉನ್ನತ ಶಿಕ್ಷಣ ಪಡೆದು ಎಲ್ಲರೂ ಮೇಲ್ದರ್ಜೆಯ ಕೆಲಸಗಳನ್ನೇ ಬಯಸುತ್ತಿದ್ದರು. ಕಡಿಮೆ ಸಂಬಳದ ದಿನಗೂಲಿ ಮತ್ತು ಇತರ ಕೆಲಸಗಳಿಗೆ ಕಾರ್ಮಿಕರ ಕೊರತೆ ಕಾಡತೊಡಗಿತು. ಹೀಗೆ ಸಾಲುಸಾಲು ಸಮಸ್ಯೆಗಳು ಚೀನಾದಲ್ಲಿ ಈ ಒಂದೇ ಮಗು ಕಾನೂನಿಂದ ಹುಟ್ಟಿಕೊಂಡಿತು. ಇನ್ನು ಹೀಗೆ ಮುಂದುವರಿದರೆ ಪರಿಸ್ಥಿತಿ ಇನ್ನಷ್ಟು ಗಂಡಾಂತರಕಾರಿಯಾದೀತು ಎಂದರಿತು, 2013ರಲ್ಲಿ 2 ನೇ ಮಗು ಹೊಂದಲು ಅವಕಾಶವಾಗುವ ಕಾನೂನು ಚೀನಾ ಸರ್ಕಾರ ಜಾರಿಗೊಳಿಸಿತು. ಆದರೆ ಕಳೆದ ಸರಿಸುಮಾರು 8 ವರ್ಷಗಳಿಂದ ಇದರಿಂದಲೂ ಪರಿಸ್ಥಿತಿ ಸುಧಾರಿಸುವ ಸಣ್ಣ ಸಂಭಾವ್ಯತೆಯೂ ಕಾಣದಿದ್ದಾಗ ಹತಾಶೆಗೊಂಡ ಚೀನಾ ಸರ್ಕಾರ, ಈ ವರ್ಷ ಅಂದರೆ 2021ರಲ್ಲಿ 3 ನೇಯ ಮಗು ಹೊಂದಲು ಅವಕಾಶ ನೀಡಿ ಕಾನೂನು ತಿದ್ದಿಪಡಿ ಮಾಡಿದ್ದೂ ಅಲ್ಲದೆ, ಒಂದೊಮ್ಮೆ ಇದನ್ನು ಮೀರಿ 4 ನೇಯ ಮಗುವಾದರೂ ಕಾನೂನು ಉಲ್ಲಂಘಿಸಿದ ಕಾರಣಕ್ಕೆ ಇರುವ ಶಿಕ್ಷೆಯ ಪ್ರಮಾಣವನ್ನು ಕಡಿತಗೊಳಿಸಿದೆ. ಹೀಗೆ ಚೀನಾ ಕಳೆದ 40 ವರ್ಷಗಳಲ್ಲಿ ಸೃಷ್ಟಿಯೊಂದಿಗೆ ಸೆಣಸಾಟ ಮಾಡಲು ಹೋಗಿ ಸದ್ದಿಲ್ಲದೆ ಸೋಲೊಪ್ಪಿಕೊಂಡಿದೆ.

1980ರಲ್ಲಿ ಕುಟುಂಬಕ್ಕೊಂದೇ ಮಗುವಿನ ಕಾನೂನನ್ನು ಚೀನಾ ಜಾರಿಗೆ ತಂದಾಗ, ಆರಂಭದಲ್ಲಿ ಇಡೀ ಪ್ರಪಂಚ ನಿಯಮ ತಂದ ಚೀನಾವನ್ನು ಹೊಗಳಿದ್ದೇ ಹೊಗಳಿದ್ದು. ಭಾರತದಲ್ಲೂ ರಾಜಕಾರಣಿಗಳು ಮತ್ತು ಆಧುನಿಕ ಚಿಂತಕರು ಚೀನಾದ ಈ ನೀತಿಗಳನ್ನು ಕ್ರಾಂತಿಕಾರಿ ಹೆಜ್ಜೆ ಎನ್ನುತ್ತಾ ಭಾಷಣಗಳ ಮೇಲೆ ಭಾಷಣ ಮಾಡಿ ಪುಕ್ಕಟೆ ಶಿಳ್ಳೆ ಚಪ್ಪಾಳೆಗಳನ್ನು ಪಡೆದರು. ಆ ಸಮಕಾಲೀನ ಕಾಲಘಟ್ಟದಲ್ಲಿ ಅತ್ತ ಚೀನಾ ಕಾನೂನು ಅನುಷ್ಠಾನಿಸಿ ಜನಸಂಖ್ಯೆಯನ್ನು ನಿಯಂತ್ರಿಸುತ್ತಿದ್ದರೆ, ಇತ್ತ ಭಾರತೀಯ ಮೇಲ್ವರ್ಗದವರು ಮತ್ತು ಸುಶಿಕ್ಷಿತ ವರ್ಗದವರು ಸ್ವಯಂಪ್ರೇರಿತರಾಗಿ ಅದನ್ನು ಆದರ್ಶವಾಗಿ ಸ್ವೀಕರಿಸಿ ಅಳವಡಿಸಿಕೊಂಡರು. ಆರಂಭದಲ್ಲಿ ಭಾರತದಲ್ಲಿ ಬರೀ ಆಯ್ದ ವರ್ಗದವರು ಮಾತ್ರ ಈ ನೀತಿಯ ಆಕರ್ಷಣೆಗೆ ಒಳಗಾದ್ದರಿಂದ ಚೀನಾದಂತೆ ಸಂಪೂರ್ಣ ಸಾಮಾಜಿಕ ಸ್ಥಿತಿಯ ಮೇಲೆ ಅಂತಹ ಪರಿಣಾಮವೇನೂ ಬೀರಲಿಲ್ಲ. ಆದರೆ ಕಾಲಕಳೆದಂತೆ ಭಾರತದಲ್ಲಿ ಇದು ತನ್ನ ನಿಜರೂಪ ತೋರಿಸಲು ತೊಡಗಿತು. ಚೀನಾದ ಒಂದು ಮಗುವಿನ ನೀತಿಯಿಂದ ಪ್ರೇರಿತವಾಗಿ, ಸ್ವಲ್ಪ ಮಾರ್ಪಾಡಿನೊಂಡಿಗೆ ಭಾರತದಲ್ಲಿ ಎರಡು ಮಕ್ಕಳಿಗೆ ಸೀಮಿತವಾಗುವ ಸ್ವಯಂಪ್ರೇರಿತ ಸಾಮಾಜಿಕ ಮನಸ್ಥಿತಿ ಮೆಲ್ಲನೆ ಇಲ್ಲಿನ ಸುಶಿಕ್ಷಿತ ವರ್ಗಗಳಲ್ಲಿ ದಟ್ಟವಾಗಿ ತದನಂತರದ ವರ್ಷಗಳಲ್ಲಿ ಗೋಚರಿಸಲಾರಂಭಿಸಿತು.1980 ಮತ್ತು 90ರ ದಶಕದಲ್ಲಿ ಭಾರತದಲ್ಲಾದ ಈ ಬದಲಾವಣೆಯಿಂದಾಗಿ ತದನಂತರದ ವರ್ಷಗಳಲ್ಲಿ ಹೆಣ್ಣು ಗಂಡಿನ ಅನುಪಾತದಲ್ಲಿ ಗಣನೀಯ ವ್ಯತ್ಯಯವಾಗಿ, ಸುಶಿಕ್ಷಿತ ವರ್ಗದವರ ಕೌಟುಂಬಿಕ ವ್ಯವಸ್ಥೆಯಲ್ಲಿ ಅಸಮತೋಲನ ಸೃಷ್ಟಿಯಾಗತೊಡಗಿತು. ಹರ್ಯಾಣ, ಪಂಜಾಬ್, ದೆಹಲಿ, ಗುಜರಾತ್, ರಾಜಸ್ಥಾನ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕದಲ್ಲಿ ಅನುಪಾತ ವ್ಯತ್ಯಯದಿಂದಾಗಿ ವ್ಯಾಪಕ ಅಂತರ್ಜಾತಿಯ ವಿವಾಹಗಳಾಗತೊಡಗಿದವು. ಮೇಲ್ವರ್ಗದವರು ಕೆಳವರ್ಗದ ಹೆಣ್ಣುಮಕ್ಕಳನ್ನು ಮದುವೆಯಾಗುವ ಅನಿವಾರ್ಯ ಪರಿಸ್ಥಿತಿ ಉದ್ಭವಿಸಿತು. ಅಂತರ್ಜಾತಿಯ ಮದುವೆಗಳಲ್ಲಿ ಗಂಡ ಹೆಂಡತಿ ಹೊಂದಿಕೊಂಡರೂ ಅವರ ಕುಟುಂಬಗಳು ಒಬ್ಬರಿಗೊಬ್ಬರು ಹೊಂದಿಕೊಳ್ಳುವುದು ತುಸು ಕಷ್ಟ. ಹೀಗಾಗಿ ವಿವಾಹಗಳು ಪವಿತ್ರ ಬಂಧನಗಳ ಭಾವದಿಂದ ಕಳಚಿಕೊಂಡು ತುಸು ಹೆಚ್ಚೇ ವ್ಯಾವಹಾರಿಕ ಸ್ವರೂಪ ಪಡೆದವು. ಈ ಕುಟುಂಬ ನಿಯಂತ್ರಣಾ ಪದ್ಧತಿಯಿಂದಾಗಿ ಮೇಲ್ವರ್ಗಗಳಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದೇ ಇದಕ್ಕೆ ಕಾರಣ. ಭಾರತದಲ್ಲೂ ಹೆಣ್ಣು ಭ್ರೂಣ ಹತ್ಯೆಯೇ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗಲು ಇರುವ ಕಾರಣಗಳಲ್ಲಿ ಒಂದು ಎಂದು ಆರಂಭದಲ್ಲಿ ಬಿಂಬಿಸಲಾಯಿತಾದರೂ, ಬಹುತೇಕ ಭಾರತೀಯ ಆಸ್ತಿಕ ವರ್ಗಗಳಲ್ಲಿ ಭ್ರೂಣ ಹತ್ಯೆಯೂ ಮಾನವ ಹತ್ಯೆಯಷ್ಟೇ ಪಾಪವೆಂಬ ದಟ್ಟ ನಂಬಿಕೆಯಿರುವುದರಿಂದ ಭಾರತದಲ್ಲಿ ಭ್ರೂಣ ಹತ್ಯೆ ಚೀನಾದಷ್ಟು ವ್ಯಾಪಕವಾಗಿಲ್ಲ. ಇಲ್ಲಿ ಅದು ಅಪರೂಪದಲ್ಲೇ ಅಪರೂಪದ ಪ್ರಕರಣ. ಜನನವನ್ನು ಅತಿ ಸೀಮಿತವಾಗಿಸಿದರೆ ಅನುಪಾತ ವ್ಯತ್ಯಯವಾಗುವುದು ನೈಸರ್ಗಿಕ ನಿಯಮ ಎಂಬುದು ಚೀನಾದವರು ಪ್ರಾಯೋಗಿಕವಾಗಿ ಅರಿತರಾದರೂ ಭಾರತೀಯರು ಅದನ್ನು ಇನ್ನಷ್ಟೇ ಅರಿಯಬೇಕಿದೆ. ಚೀನಾದ ಈ ವಿಫಲ ಕಾಯ್ದೆಯಿಂದ ಪ್ರೇರಿತವಾಗಿ, ಭಾರತದ ಸುಶಿಕ್ಷಿತ ವರ್ಗದವರಿಂದ ಬಳುವಳಿಯಾಗಿ ಬಂದು, ಭಾರತದ ಸರ್ವ ಸಮುದಾಯವನ್ನು ಮೆಲ್ಲನೆ ಈ ಕುಟುಂಬ ನಿಯಂತ್ರಣಾ ವಿಧಾನ ಆವರಿಸಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಭಾರತದಲ್ಲೂ ಚೀನಾದಂತೆ ಈಗಾಗಲೇ ವೃದ್ಧಾಶ್ರಮಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯ ಏರಿಕೆಯನ್ನು ಕಾಣುತ್ತಿದೆ. ಪ್ರಸ್ತುತ ಭಾರತದಲ್ಲಿ ಅತಿಹೆಚ್ಚು ದಮನಿತರು ಯಾರೆಂದರೆ, ಒಂದೆರಡು ಮಕ್ಕಳನ್ನು ಹೊಂದಿ ಅವರು ಉದ್ಯೋಗ, ಆಧುನಿಕ ಜೀವನಶೈಲಿ ಮತ್ತು ಇತರ ಕಾರಣಗಳಿಂದ ಹೆತ್ತವರಿಂದ ದೂರವಿದ್ದ ಕಾರಣದಿಂದ, ಆಸರೆ, ಅಕ್ಕರೆ, ಆರೈಕೆಗಳಿಲ್ಲದೆ ಅನಾಥರಾಗಿ ಜೀವಚ್ಛವದಂತೆ ಬದುಕುತ್ತಿರುವ ವಯೋವೃದ್ಧರು. ಪುರಾತನವೂ, ಶ್ರೀಮಂತವೂ ಆದ ಭಾರತೀಯ ಕೌಟುಂಬಿಕ ವ್ಯವಸ್ಥೆ ಮೆಲ್ಲನೆ ಹಳಿ ತಪ್ಪುತ್ತಿರುವುದು ಸೂಕ್ಷ್ಮವಾಗಿ ಅವಲೋಕಿಸಿದಾಗ ಕಾಣಬಹುದು. ಅಂಧ ಆದರ್ಶಗಳ ಅತಿ ಆತುರವು ಅನಾಹುತಕ್ಕೆ ಕಾರಣವಾಗುತ್ತದೆ ಎಂಬುದನ್ನು ಬಹುಶಃ ಅವೈಜ್ಞಾನಿಕ ಜನಸಂಖ್ಯಾ ನೀತಿಯ ಅನುಷ್ಠಾನವಾದಾಗ ಪ್ರಾಯೋಗಿಕವಾಗಿ ಮನಗಾಣಬಹುದು ಎಂಬುದು ಈ ಕುರಿತಾದ ಇತಿಹಾಸದ ಅಧ್ಯಯನದಿಂದ ಬಂದ ಖಚಿತ ಅಭಿಪ್ರಾಯ. ಯಾವ ಕಾನೂನೂ ಇಲ್ಲದೇ ಭಾರತದ ಎಲ್ಲ ಸಮುದಾಯಗಳಲ್ಲಿ 2 ಮಕ್ಕಳೇ ಸಾಕು ಎಂಬ ಸ್ವಯಂ ನಿಯಂತ್ರಣ ಹೆಚ್ಚುಕಡಿಮೆ ಈಗ ಜಾರಿಯಲ್ಲಿದೆ. ಕಳೆದ 10- 15 ವರ್ಷಗಳಿಂದ ಮದುವೆಯಾದ ನಮ್ಮ ಸುತ್ತಮುತ್ತಲಿನ ಯಾವುದೇ ಸಮುದಾಯದ ಕನಿಷ್ಠ 100 ಕುಟುಂಬಗಳನ್ನು ಗಮನಿಸಿ ನೋಡಿದರೆ, ಅದರಲ್ಲಿ ಶೇ 85% ನಿಂದ 90% ಕುಟುಂಬಗಳಲ್ಲಿ ಇರುವುದು 2 ಮಕ್ಕಳ ಈ ಸ್ವಯಂ ನಿಯಂತ್ರಣ ನೀತಿಯೇ. ಇನ್ನು ಬೆರಳೆಣಿಕೆಯ ವರ್ಷಗಳಲ್ಲಿ ಇದು ಶೇ 100% ರಷ್ಟಾಗುವುದು ಖಚಿತ. ಇದರ ಪಶ್ಚಾತ್ ಪರಿಣಾಮಗಳು ಗೊತ್ತಾಗುವುದು ಇದನ್ನು ಅಳವಡಿಸಿಕೊಂಡ ಪೀಳಿಗೆ ಅರ್ಧ ಆಯಸ್ಸು ತಲುಪಿದ ಮೇಲೆಯೇ .ಚೀನಾದಲ್ಲಿ ಅದೇ ಆದದ್ದು. ಈಗಾಗಲೇ ಭಾರತದ ಹೆಚ್ಚಿನ ರಾಜ್ಯಗಳಲ್ಲಿ 100 ಗಂಡಿಗೆ 80 ಹೆಣ್ಣಿನ ಸರಾಸರಿಯಿದೆ. ದೇಶದ ಸರ್ವ ಸಮುದಾಯ ಈ ಸ್ವಯಂ ನಿಯಂತ್ರಣಕ್ಕೆ ಮುಂದಾದರೆ, ಈ ಅನುಪಾತ ಕೆಲವೇ ವರ್ಷಗಳಲ್ಲಿ 100-65 ಕ್ಕೆ ಇಳಿಯುವ ಸಾಧ್ಯತೆ ಸಾಮಾನ್ಯ ಜ್ಞಾನಕ್ಕೆ ನಿಲುಕುತ್ತಿದೆ. ಈಗಿನ ಜೀವನಶೈಲಿ ಮತ್ತು ಅನುದಿನದ ಜೀವನವೆಚ್ಚಗಳನ್ನು ಗಮನಿಸಿದರೆ ಈಗ ಎರಡು ಮಕ್ಕಳು ಹೊಂದಿರುವ ವರ್ಗದವರ ಮುಂದಿನ ಪೀಳಿಗೆ ಶೀಘ್ರದಲ್ಲಿ ಅದನ್ನು ಒಂದಕ್ಕೆ ಇಳಿಸುವ ಸಾಧ್ಯತೆಯಿದೆ. ಈಗ ಮೂರು ಅಥವಾ ನಾಲ್ಕಿದ್ದವರು ಎರಡಕ್ಕೆ ಇಳಿಸುವುದರ ಬಗ್ಗೆ ಯಾವ ಅನುಮಾನವೂ ಬೇಡ. ಆಗ ಭಾರತ ಒಂದು ಮಕ್ಕಳ ನೀತಿಯ ಅಭಿನವ ಚೀನಾ ಆಗುತ್ತದೆ. ಹಾಗಾಯಿತಾದರೆ ಎಲ್ಲ ಸಮುದಾಯದ ಗಂಡು ಮಕ್ಕಳಿಗೆ ಹಳೇ ಕಾಲದ ಸ್ವಯಂವರ ಪದ್ಧತಿಯೇ ಗತಿ. ಈಗ ಮೇಲ್ವರ್ಗದಲ್ಲಿ ಕಂಡುಬರುತ್ತಿರುವ ಗಂಡಿಗೆ ಹೆಣ್ಣು ಸಿಗದ ಸಮಸ್ಯೆ ಒಲ್ಲದ ಮನಸ್ಸಿನಿಂದ ಹೇಗಾದರೂ ಕೆಳವರ್ಗದೊಂದಿಗೆ ಸೇರಿ ಪರಿಹರಿಸಿಕೊಂಡು ಹೋಗಲಾಗುತ್ತಿದೆ. ಎಲ್ಲ ವರ್ಗವೂ ಈ ಸ್ವಯಂ ನಿಯಂತ್ರಣದ ಪರಿಧಿಯೊಳಗೆ ಬಂತಾದರೆ ಹೆಣ್ಣು ನೋಡಲು ಉಗಾಂಡ ,ಮಂಗೋಲಿಯಾ, ಜಿಂಬಾವ್ವೆ, ಕೀನ್ಯಾಕ್ಕೇ ಹೋಗಬೇಕಾದೀತು. ಅಲ್ಲೂ ಇಲ್ಲವಾದರೆ ಅನ್ಯಗ್ರಹವೇ ಗತಿ. ಬದುಕಿನ ಸಂಧ್ಯಾಕಾಲದಲ್ಲಿ ಹೆತ್ತವರನ್ನು ವೃದ್ಧಾಶ್ರಮದ ಸಂಬಳ ಪಡೆವ ಸಿಬ್ಬಂದಿಯೇ ಸಾಕಬೇಕಾದೀತು. ಹೆತ್ತು ಹೊತ್ತ ತಪ್ಪಿಗೆ ಹೊತ್ತಲ್ಲದ ಹೊತ್ತುಗಳಲ್ಲಿಯೂ ಮರುಗುವ ಅವಸ್ಥೆ ಪಾಪ ಅವರದ್ದಾಗಬಹುದು. ಈಗಾಗಲೇ ದೇಶ, ಹಳ್ಳಿಗಳ ದೇಶದಿಂದ ಬದಲಾಗಿ ಪಟ್ಟಣದ ದೇಶವಾಗುತ್ತಿದೆ. ಆಧುನಿಕ ಶಿಕ್ಷಣದಿಂದ ಪ್ರೇರಿತರಾಗಿ ಮತ್ತು ಆಧುನಿಕ ಬದುಕಿನ ಆಕರ್ಷಣೆಗೆ ಒಳಗಾಗಿ ಈಗಿನ ನವ ಪೀಳಿಗೆಯವರು ಹಳ್ಳಿಯ ಹಳೆಯ ಮನೆಗಳಿಗೆ ಬೀಗ ಜಡಿದಿದ್ದರಿಂದ ಗೋಡೆಗಳು ನೆಲಕ್ಕೊರಗಿವೆ. ಹಳೆಯ ಮನೆಗಳಿಗೆ ಹೊಸ ಜನರು ಕೇವಲ ಪ್ರವಾಸಕ್ಕಾಗಿ ಮಾತ್ರ ಬರುತ್ತಿದ್ದಾರೆ. ಚೀನಾದಂತೆ ಕುಟುಂಬ ನಿರ್ವಹಣೆಯ ಅನಿವಾರ್ಯತೆಯಿಂದಾಗಿ ಸೇನೆಗೆ ಸೇರಲು ಮನಸ್ಸು ಮಾಡುವವರೂ ಹಿಂದೇಟು ಹಾಕುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುತ್ತಿಲ್ಲ.

ಪ್ರಸ್ತಾವಿತ ಜನಸಂಖ್ಯಾ ನೀತಿಯು ರಾಜಕಾರಣಿಗಳಿಗೆ ಅವರ ರಾಜಕೀಯ ಭವಿಷ್ಯದ ದಾಳ ಅಥವ ವಿಚಾರಗಳಾಗಿರಬಹುದು. ಆದರೆ ನಮ್ಮ ಮುಂದಿನ ಪೀಳಿಗೆಗೆ ಇದು ಜೀವನ್ಮರಣದ ವಿಚಾರ. ಜಾಗರೂಕತೆಯಿಂದ ಹೆಜ್ಜೆಯಿಡಬೇಕಿದೆ. ಭಾಷಣಗಳ ಭರಾಟೆಯಲ್ಲಿ ಪ್ರಚೋದನೆಗಳಿಗೊಳಗಾಗಿ ಈ ವಿಚಾರದಲ್ಲಿ ಎಡವಿ ಚೀನಾ ಆಗುವುದಕ್ಕಿಂತ, ಬುದ್ಧಿ ಉಪಯೋಗಿಸಿ ಸಂಯಮದಿಂದ ಸಂಬಂಧಪಟ್ಟವರೊಂದಿಗೆ ಸೂಕ್ತ ರೀತಿಯಲ್ಲಿ ಸಮಾಲೋಚಿಸಿ ಭಾರತವಾಗುವುದೇ ಲೇಸು. ರಾಜಕೀಯ ಪ್ರೇರಿತವಾಗಿ ಕುಟುಂಬ ನಿಯಂತ್ರಣ ವಿಧಾನದ ಬಗ್ಗೆ ಆಲೋಚಿಸುವುದಕ್ಕಿಂತ, ಸಂಶೋಧನಾತ್ಮಕವಾದ ಫಲಿತಾಂಶಗಳ ಮೇಲಿನ ವಿವೇಚನೆಯ ಮೂಲಕ ವ್ಯವಹರಿಸಬೇಕಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರದಿಂದ ಇಲ್ಲಿಯವರೆಗಿನ ಕಾಲಘಟ್ಟವನ್ನು ಗಮನಿಸಿದರೆ ದೇಶದ ಪ್ರತಿಯೊಂದು ಸಮುದಾಯದ ಜನಸಂಖ್ಯೆಯೂ 3 ರಿಂದ 4 ಪಟ್ಟು ಹೆಚ್ಚಾಗಿದೆ. ಆದರೆ ಇತ್ತಿಚಿನ ಅಂಕಿಅಂಶಗಳನ್ನು ಗಮನಿಸಿದರೆ ಕಳೆದ ಎರಡು ದಶಕದಿಂದ ಜನಸಂಖ್ಯಾ ಪ್ರಮಾಣ ಎಲ್ಲ ರಾಜ್ಯ, ಸಮುದಾಯಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಕಳೆದ 5 ವರ್ಷಗಳ ಗಂಡು ಹೆಣ್ಣಿನ ಅನುಪಾತ ವ್ಯತ್ಯಯ ಆತಂಕಕಾರಿಯಾಗಿದೆ. ಇದು ಹೀಗೆ ದೀರ್ಘಕಾಲ ಮುಂದುವರಿದರೆ ಅದು ಅತ್ಯಂತ ಅಪಾಯಕಾರಿ ಎಂಬುದು ಸರ್ವರಿಗೂ ತಿಳಿದ ವಿಚಾರ. ಈಗಾಗಲೇ ಸ್ವಯಂಪ್ರೇರಿತರಾಗಿ ವಿಧಿಸಿಕೊಂಡಿರುವ ಕುಟುಂಬ ನಿಯಂತ್ರಣ ವಿಧಾನವನ್ನು ಕಾಯ್ದೆಯ ಮೂಲಕ ಮುದ್ರೆಯೊತ್ತುವ ಅವಶ್ಯಕತೆ ಇಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತಿದೆ. ಇಷ್ಟಾಗಿಯೂ ಸರ್ಕಾರ ಅದರ ಕುರಿತು ಶಾಸನ ರೂಪಿಸಿದರೆ ಎಲ್ಲರೂ ಮುಕ್ತ ಮನಸ್ಸಿನಿಂದ ಒಪ್ಪುವುದರ ಮೂಲಕ ಬದ್ಧತೆ ಪ್ರದರ್ಶಿಸಬೇಕು. ಈ ಶಾಸನ ವಿಧಿಸಿದ ಶಿಕ್ಷೆಯ ಬಗ್ಗೆ ಜ್ಞಾನ ಮೂಡಲು ಬಹಳ ದಿನವೇನೂ ಕಾಯಬೇಕಾಗಿಲ್ಲ ಎಂಬುದು ಚೀನಾದಲ್ಲಿ ಕಾಣುತ್ತಿದ್ದೇವೆ. ಭಾರತದಂತಹ ಭಾವನೆಗಳ ಬುನಾದಿಯ ಮೇಲೆಯೇ ಬದುಕು ಸವೆಸುವ ಸಮಾಜವಿರುವ ರಾಷ್ಟ್ರದಲ್ಲಿ, ಚೀನಾದಲ್ಲಿನ ಜನಸಂಖ್ಯಾ ನೀತಿಯಿಂದಾದ ಪಶ್ಚಾತ್ ಕಂಪನಗಳು ಇಲ್ಲಿಯೂ ಸಂಭವಿಸಿದರೆ, ನಮ್ಮ ಸಾಮಾಜಿಕ ಮನಸ್ಥಿತಿಯೇ ವ್ಯಾವಹಾರಿಕವಾಗಿ ಸಹಜ ಸಂವೇದನೆಯನ್ನು ಕಳೆದುಕೊಳ್ಳುವ ಅಪಾಯವೂ ಇದೆ. ನಾವು ನಮ್ಮ ಬಾಳ ಮುಸ್ಸಂಜೆಯ ದಿನಗಳನ್ನು ವೃದ್ಧಾಶ್ರಮಗಳಲ್ಲಿ ಕಾಣುವಂತಾಗುವ ದುರ್ದಿನಗಳು ಬಾರದಂತೆ ತಡೆಯಬೇಕಿದ್ದರೆ ರಾಜಕಾರಣದ ವಿಷವರ್ತುದೊಳಗೆ ಸಿಲುಕದೆ, ಪೂರ್ವಾಗ್ರಹಪೀಡಿತರಾಗದೆ ಸ್ವಲ್ಪ ಮುಕ್ತ ಮನಸ್ಸಿನಿಂದ ಈ ವಿಚಾರದ ಕುರಿತು ಆಲೋಚಿಸಬೇಕಿದೆ.

LEAVE A REPLY

Please enter your comment!
Please enter your name here