ಕೋಮು ಸಾಮರಸ್ಯ ಮತ್ತು ಇಸ್ಲಾಂ ಧರ್ಮ
ಭಾಗ – 04

ಲೇಖಕರು : ಶೌಕತ್ ಅಲಿ.ಕೆ ಮಂಗಳೂರು

ರಬ್ಬಿ ಮುಖೈರಿಕ್ ಉನ್ನತ ಯಹೂದಿ ವಿದ್ವಾಂಸರು ಮತ್ತು ತಲಾಬ್ ಗೋತ್ರದ ಶ್ರೀಮಂತ ನಾಯಕರಿವರು. ನಾವು ಉಹುದ್ ಯುದ್ಧದ ಬಗ್ಗೆ ಬಹಳಷ್ಟು ಪ್ರವಚನ ಭಾಷಣವನ್ನು ಕೇಳುತ್ತೇವೆ. ಆದರೆ ರಬ್ಬಿ ಮುಖೈರಿಕ್ ಬಗ್ಗೆ ಕೇಳಿದ್ದು ವಿರಳ.

ಈ ಮಹಾನುಭಾವರು ಪ್ರವಾದಿ ಸ ಪಾಳಯದಲ್ಲಿ ಪ್ರವಾದಿಯವರ ಪರವಾಗಿ ನಿಂತುಉಹುದ್ ಯುದ್ಧದಲ್ಲಿ ಪಾಲ್ಗೊಂಡು ಹುತಾತ್ಮರಾದವರು. ಮದೀನಾದಲ್ಲಿ ಪ್ರವಾದಿ ಮುಹಮ್ಮದ್ ಸ ರವರು ಸರ್ವಧರ್ಮೀಯರೊಂದಿಗೆ ಸಂಧಾನ ಸಹಕಾರ ಒಪ್ಪಂದ ಮಾಡಿದ್ದರು.
ರಬ್ಬಿ ಮುಖೈರಿಕ್ ತನ್ನ ಗೋತ್ರದವರೊಂದಿಗೆ ಮುಹಮ್ಮದ್ (ಸ)ರಿಗೆ ಉಹುದ್ ಯುದ್ಧದಲ್ಲಿ ಬೆಂಬಲಕ್ಕೆ ಬನ್ನಿ ಎಂದು ಕರೆದಾಗ ಅವರು ಇಂದು ಸಬ್ತ್ ಶನಿವಾರ ಎಂಬ ಧಾರ್ಮಿಕ ನೆಪ ನೀಡಿದರು. ರಬ್ಬಿ ಮುಖೈರಿಕ್ ಹೇಳಿದರು, ನಿಮಗೆ ಸಬ್ತ್ ನ ಬಗ್ಗೆ ಧರ್ಮದ ಆಳ ಹಿನ್ನೆಲೆ ತಿಳಿದಿಲ್ಲ ಎಂದು ಜರೆದು ತಾನು ಉಹುದ್ ಯುದ್ಧದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿ ತಾನು ಹುತಾತ್ಮನಾದರೆ ತನ್ನೆಲ್ಲ ಸಂಪತ್ತನ್ನು ಮುಹಮ್ಮದ್ (ಸ) ರಿಗೆ ನೀಡಬೇಕೆಂದು ಸಾರಿ ಆ ಸಾತ್ವಿಕ ಯಹೂದಿ ಹುತಾತ್ಮರಾದರು.

ಉಹುದ್ ಯುದ್ಧದಲ್ಲಿ ಗಾಯಾಳು ಆಗಿ ರಕ್ತದ ಮಡುವಿನಲ್ಲಿ ಇದ್ದ ಪ್ರವಾದಿಯವರಿಗೆ ಸಂಗಾತಿಗಳು ರಬ್ಬಿ ಮುಖೈರಿಕ್ ರವರ ಮರಣ ವಾರ್ತೆ ತಿಳಿಸಿದಾಗ ಪ್ರವಾದಿ (ಸ) ಹೇಳಿದರು, “ಯಹೂದಿಗಳ ಪೈಕಿ ಅತ್ಯುತ್ತಮ ವ್ಯಕ್ತಿ ರಬ್ಬಿ ಮುಖೈರಿಕ್” ಎಂದು ದುಃಖ ವ್ಯಕ್ತ ಪಡಿಸಿದರು.

ಅವರಿಂದ ಬಳುವಳಿಯಾಗಿ ಸಿಕ್ಕಿದ ಏಳು ತೋಟ ಮತ್ತು ಇತರ ಸಂಪತ್ತನ್ನು ಪ್ರವಾದಿ (ಸ) ರವರು ಮದೀನಾದ ಬಡವರ ಕಲ್ಯಾಣಕ್ಕಾಗಿ ವಿನಿಯೋಗಿಸಿದರು.
ಪ್ರವಾದಿ ಸ ಮತ್ತು ರಬ್ಬಿ ಮುಖೈರಿಕ್ ರವರ ಸಂಬಂಧ ಮತ್ತು ವಿಶ್ವಾಸದಲ್ಲಿ
ಧಾರ್ಮಿಕ ವೈಷಮ್ಯಪೂರಿತ ಸಮಾಜಕ್ಕೆ ಬಹಳಷ್ಟು ಪಾಠವಿದೆ. ಪರಸ್ಪರ ಧರ್ಮಾನುಯಾಯಿಗಳು ಸತ್ಯ ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಒಗ್ಗಟ್ಟಾಗಬೇಕು ಅವರೊಂದಿಗೆ ಹೇಗೆ ಸಂಬಂಧ ಬೆಳೆಸಬೇಕು ಎಂದು ಪ್ರವಾದಿಯವರ ಜೀವನದಲ್ಲಿ ಅತ್ಯುತ್ತಮ ಮಾದರಿ ಇದೆ.

ರಬ್ಬಿ ಮುಖೈರಿಕ್ ರಂತಹವರ ಬಗ್ಗೆ ಕುರಾನ್ ಹೇಳುತ್ತದೆ,
ಗ್ರಂಥದವರಲ್ಲಿ ಕೆಲವರು ಅಲ್ಲಾಹನ ಮೇಲೆ ವಿಶ್ವಾಸ ಇಡುತ್ತಾರೆ. ನಿಮ್ಮ ಕಡೆಗೆ ಕಳುಹಿಸಲ್ಪಟ್ಟ ಗ್ರಂಥದ ಮೇಲೂ ಇದಕ್ಕಿಂತ ಮುಂಚೆ ಸ್ವತಃ ಅವರ ಕಡೆಗೆ ಕಳುಹಿಸಿದ ಗ್ರಂಥದ ಮೇಲೂ ವಿಶ್ವಾಸ ಇಡುತ್ತಾರೆ. ಅಲ್ಲಾಹನ ಮುಂದೆ ಬಾಗಿರುತ್ತಾರೆ. ಅಲ್ಲಾಹನ ಸೂಕ್ತಗಳನ್ನು ಅವರು ಅಲ್ಪ ಬೆಲೆಗೆ ಮಾರಿ ಬಿಡುವುದಿಲ್ಲ. ಅವರ ಪ್ರತಿಫಲ ಅವರ ಪ್ರಭುವಿನ ಬಳಿ ಇದ್ದೇ ಇದೆ ಮತ್ತು ಅಲ್ಲಾಹನು ಲೆಕ್ಕ ತೀರಿಸುವುದರಲ್ಲಿ ಅತಿ ಶೀಘ್ರನು (3:199)

ಒಪ್ಪಂದ ಮಾಡಿಕೊಂಡವರ ಹತ್ಯೆ ಮಾಡಿದವ ಸ್ವರ್ಗದಿಂದ ದೂರ

ಪ್ರವಾದಿ ಮುಹಮ್ಮದ್(ಸ) ಹೀಗೆ ಹೇಳಿರುವರು : “ಯಾರಾದರೂ, ಒಪ್ಪಂದ ಮಾಡಿಕೊಂಡ ಮುಸ್ಲಿಮೇತರನ ಹತ್ಯೆ ಮಾಡಿದರೆ, ಅವನು ನಲ್ವತ್ತು ವಷ೯ ಪ್ರಯಾಣಿಸಿ ಹೋಗಬೇಕಾದಷ್ಟು ದೂರದವರೆಗೂ ಹಬ್ಬುವಂತಹ ಸ್ವಗ೯ದ ಪರಿಮಳವನ್ನು ಕೂಡ ಅನುಭವಿಸಲಾರನು.” (ಅಬ್ದುಲ್ಲಾ ಬಿನ್ ಅಮ್ರ್ – ಬುಖಾರಿ)

ಮೇಲಿನ ಪ್ರವಾದಿ ವಚನದಲ್ಲಿ ಒಪ್ಪಂದಕ್ಕೆ ‘ಮುಆಹಿದ್’ ಎಂಬ ಪದವನ್ನು ಪ್ರಯೋಗಿಸಲಾಗಿದೆ. ಇದು ಪ್ರವಾದಿ ಮುಹಮ್ಮದ್ (ಸ) ಕಾಲದಲ್ಲಿ ಅವರಿಗೆ ಅಧಿಕಾರ ಪ್ರಾಪ್ತವಾದಾಗ ಆ ರಾಷ್ಟ್ರದಲ್ಲಿ ಪೌರರಾಗಿರುವ ವಿವಿಧ ಧರ್ಮಗಳ ಪೌರರು ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತರು ಶಾಂತಿ ಮತ್ತು ಸೌಹಾರ್ದದ ಒಪ್ಪಂದ ಮಾಡಿಕೊಂಡ ಕರಾರುಬದ್ಧ ಪ್ರಜೆಗಳ ಕುರಿತು ಹೇಳುವ ಪದವಾಗಿದೆ. ಮುಆಹಿದ್ ಎಂದರೆ ಒಪ್ಪಂದ ಬದ್ಧ ಎಂಬುದು ಇದರ ಅರ್ಥವಾಗಿದೆ.

ಈ ಒಪ್ಪಂದದಲ್ಲಿ ಆ ಪೌರರಿಗೆ ಎಲ್ಲ ರೀತಿಯ ರಿಯಾಯಿತಿ ಇತ್ತು. ಸಾಧಾರಣವಾಗಿ ಹಿಂದಿನ ಕಾಲದಲ್ಲಿ ಪರಸ್ಪರ ಸೇನಾಕ್ರಮಣ ಆಗುವಾಗ ಅನ್ಯ ಧರ್ಮೀಯ ವ್ಯಕ್ತಿ ಅಥವಾ ಅನ್ಯ ದೇಶೀಯ ವ್ಯಕ್ತಿ ಎಂದು ಯಾವುದೇ ಕಿಡಿಗೇಡಿ ವ್ಯಕ್ತಿಗಳು ಅಥವಾ ಗುಂಪು, ಈ ಒಪ್ಪಂದ ಬದ್ದ ಮುಸ್ಲಿಮೇತರರ ಮೇಲೆ ಆಕ್ರಮಣ ಮಾಡಬಹುದು. ಅಥವಾ ವಿರೋಧಿ ಬಣ ಎಂದು ತಪ್ಪುಗ್ರಹಿಕೆ ಆಗಿ ಅತಿಕ್ರಮ ಗಡಿಬಿಡಿ ಮಾಡುವ ಸಾಧ್ಯತೆ ಆ ಕಾಲದಲ್ಲಿ ಧಾರಾಳವಾಗಿತ್ತು.
ಉದಾ : ಈಗಿನ ಕಾಲದಲ್ಲಿ ಸಂವಿಧಾನದ ಮೂಲಕ ನಾವು ಒಪ್ಪಂದ ಮಾಡುತ್ತೇವೆ. ಒಮ್ಮೆ ಅಮೆರಿಕದಲ್ಲಿ ಎಲ್ಲೋ ಒಂದು ಕಡೆ ಯಾರೋ ಭಯೋತ್ಪಾದಕ ಕೃತ್ಯ ಎಸಗಿದರು ಎಂದು ಕ್ರೋಧದಿಂದ ಓರ್ವ ಒಪ್ಪಂದ ಬದ್ಧ ಅಮಾಯಕ ಸಿಖ್ ವ್ಯಕ್ತಿಯನ್ನು ಕಿಡಿಗೇಡಿಗಳು ಹಲ್ಲೆ ಮಾಡಿ ಕೊಂದಿದ್ದರು. ಸಿಖ್ ಅಲ್ಲ ಯಾವುದೇ ಧರ್ಮದ ಅಮಾಯಕನ ಮೇಲೆ ಹಲ್ಲೆ ದೊಡ್ಡ ತಪ್ಪೇ. ದೊಡ್ಡ ಅಪರಾಧವೇ..
ಇದೊಂದು ಉದಾಹರಣೆ ಮಾತ್ರ. ಇಂತಹುದು ಬಹಳ ಕಡೆ ನಡೆಯುತ್ತದೆ.

ಇಂತಹ ಅನ್ಯ ಧರ್ಮೀಯ ದೇಶಬಾಂಧವ ಸಹೋದರರನ್ನು ಅಥವಾ ಒಪ್ಪಂದ ಬದ್ದ ಯಾರನ್ನೇ ಆಗಲಿ ಅನ್ಯಾಯವಾಗಿ ಕೊಲ್ಲುವುದನ್ನು ತಡೆಯುವ ಸಲುವಾಗಿಯೇ ಪ್ರವಾದಿಯವರು ಗಂಭೀರವಾಗಿ ಈ ಮಾತನ್ನು ಹೇಳಿರುವರು. ತನ್ನ ಸಮುದಾಯಕ್ಕೆ ಈ ಬಗ್ಗೆ ಎಚ್ಚರಿಸಿದರು. ಇದು ಒಪ್ಪಂದದ ಉಲ್ಲಂಘನೆ ಎನಿಸಿ ಕೊಳ್ಳತ್ತದೆ ಮತ್ತು ಈ ಕೃತ್ಯ ಎಸಗಿದವನು ಸ್ವಗ೯ ಪ್ರವೇಶಕ್ಕೆ ಅಯೋಗ್ಯನೆನಿಸುತ್ತಾನೆ.

ಇಸ್ಲಾಮಿನ ಉದ್ದೇಶ ಎಲ್ಲರ ಜೀವ ಸೊತ್ತುಗಳ ರಕ್ಷಣೆ. ಈ ರಕ್ಷಣೆಗಾಗಿ ಎಲ್ಲಿಯವರೆಗೆ ಇಸ್ಲಾಮ್ ಚಿಂತಿಸುತ್ತದೆ ಎಂದರೆ ಆ ಒಪ್ಪಂದ ಬದ್ದ ಸಮುದಾಯಕ್ಕೆ ಸೇನಾ ಹೋರಾಟದಲ್ಲಿ ಭಾಗಿಯಾಗುವುದಕ್ಕೆ ರಿಯಾಯತಿ ನೀಡಲಾಗಿದೆ. ಆದರೂ ಅವರ ಸೊತ್ತು ವಿತ್ತ ಜೀವಗಳ ಧಾರ್ಮಿಕ ಅಸ್ಮಿತೆಗಳ ರಕ್ಷಣೆ ಮುಹಮ್ಮದ್ (ಸ) ರವರ ಅನುಯಾಯಿಗಳಿಗೆ ಪರಮ ಕಡ್ಡಾಯವಾಗಿದೆ.

ಅಲ್ಲದೆ ಈ ಹದೀಸ್, ಒಪ್ಪಂದದ ಪಾಲನೆ ಮತ್ತು ವಾಗ್ದಾನದ ರಕ್ಷಣೆಗೆ ಪ್ರವಾದಿ ಮುಹಮ್ಮದ್(ಸ) ಎಷ್ಟು ಮಹತ್ವ ಕೊಡುತ್ತಿದ್ದರು ಎಂಬುದನ್ನು ಸೂಚಿಸುತ್ತದೆ.

ಧರ್ಮ ನಿಂದಕರಿಗೆ ನೀಡಿದ ಉತ್ತರ

ಪ್ರವಾದಿ (ಸ) ಕಾಲದಲ್ಲಿ ಓರ್ವ ಮುಸ್ಲಿಮೇತರ ಮಹಿಳೆ ಪ್ರವಾದಿಯವರ ದಾರಿಯಲ್ಲಿ ಹೋಗುವಾಗ ಕಸ ಎಸೆಯುತ್ತಿದ್ದಳು. ಪ್ರವಾದಿ (ಸ) ಒಮ್ಮೆಯೂ ಆಕೆಯನ್ನು ಶಪಿಸಲಿಲ್ಲ ಮತ್ತು ಜರೆಯಲಿಲ್ಲ.

ಒಮ್ಮೆ ಪ್ರವಾದಿ ಸ ಬರುವಾಗ ಕಸ ಮೈಮೇಲೆ ಬೀಳಲಿಲ್ಲ. ಆಕೆ ರೋಗಪೀಡಿತಳಾಗಿದ್ದಾಳೆಂಬುದು ತಿಳಿಯಿತು. ಪ್ರವಾದಿ (ಸ) ಆಕೆಯನ್ನು ಕೂಡಲೇ ಸಂದರ್ಶನ ಮಾಡಿ ಆಕೆಯ ಕ್ಷೇಮ ವಿಚಾರಿಸಿದರು. ಆಕೆಗೆ ಪಶ್ಚಾತ್ತಾಪ ಆಯಿತು. ಆಕೆ ಪ್ರವಾದಿವರ್ಯರನ್ನು ದೇವ ಪ್ರವಾದಿ ಎಂದು ಒಪ್ಪಿಕೊಂಡಳು.

ಅಬೂಬಕರ್ .ರ. ಆಡಳಿತ ಕಾಲದಲ್ಲಿ ಮುಸ್ಲಿಮರನ್ನು ನಿಂದಿಸಿ ಕವಿತೆಗಳನ್ನು ಹಾಡಿದ ಓರ್ವ ಹೆಂಗಸಿನ ಹಲ್ಲು ಕೀಳಲಾಯಿತು. ಖಲೀಫರಿಗೆ ಈ ವಿಷಯ ತಿಳಿದಾಗ ತಮ್ಮ ಅಧಿಕಾರಿ ಮುಹಾಜಿರ್ ಬಿನ್ ಉಮಯ್ಯಾರಿಗೆ ಹೀಗೆ ಪತ್ರ ಬರೆಯುತ್ತಾರೆ.

ಮುಸ್ಲಿಮರನ್ನು ನಿಂದಿಸಿ ಕವಿತೆ ಹಾಡಿದಾಕೆಯ ಹಲ್ಲು ಕೀಳಲಾಗಿದೆ ಎಂದು ಸುದ್ದಿ ಸಿಕ್ಕಿದೆ. ಆಕೆ ಮುಸ್ಲಿಮಳಾಗಿದ್ದರೆ ಛೀಮಾರಿ ಸಾಕು. ದಂಡ ಅಂಗಛೇದನ ಬೇಡ. ಇನ್ನು ಆಕೆ ಮುಸ್ಲಿಮೇತರ ಆಗಿದ್ದರೆ ಆಕೆಯ ಶಿರ್ಕ್ ನಂತಹ ಘೋರ ಪಾಪ ನಮಗೆ ಸಹ್ಯವಾಗಿರುವಾಗ ಇದೇನು ಮಹಾ.
ನಾನು ಈ ಕುರಿತು ಮೊದಲೇ ನಿಮ್ಮನ್ನು ಎಚ್ಚರಿಸುತ್ತಿದ್ದರೆ ಬಹುಶಃ ಆ ಶಿಕ್ಷೆಯನ್ನು ನೀವೇ ಅನುಭವಿಸಬೇಕಾಗುತ್ತಿತ್ತು.

ಸಾಮಾನ್ಯ ಜನರಿಗೆ ಶಿಕ್ಷೆ ಕೊಡುವ ಬಗ್ಗೆ ಇಸ್ಲಾಂ ಬಹಳ ಮೃದು ಧೋರಣೆ ಹೊಂದಿದೆ. ಶಿಕ್ಷೆ ನೀಡುವ ಅಧಿಕಾರ ಕೇವಲ ಸರಕಾರಕ್ಕೆ ಅಥವಾ ನ್ಯಾಯಾಧೀಶರಿಗೆ ಮಾತ್ರ ಇರುವುದಾಗಿದೆ. ಆದರೆ ಶಿಕ್ಷೆ ನೀಡುವ ಮುಂಚೆ ಆ ತಪ್ಪು ಯಾರಿಂದ, ಹೇಗೆ, ಅದರ ಸನ್ನಿವೇಶ, ವಾತಾವರಣ, ಹಿನ್ನೆಲೆ ಎಲ್ಲವನ್ನೂ ಪರಿಗಣಿಸಲಾಗುತ್ತದೆ.

Source : Quran, Ibn Kathir The Life of Prophet Muhammed, The History of al-Tabari: The Foundation of the Community.

LEAVE A REPLY

Please enter your comment!
Please enter your name here