• ತೌಸೀಫ್ ಮಡಿಕೇರಿ, ನಿರ್ದೇಶಕರು, ಕೇರ್

ದೇಶದ 24000 ಮದ್ರಸಾಗಳಲ್ಲಿ ಶಾಲಾ – ಕಾಲೇಜುಗಳನ್ನು ತೆರೆದರೆ ಮುಸ್ಲಿಮರ ಶೈಕ್ಷಣಿಕ ಅಭಿವೃದ್ಧಿ ಸಾಧ್ಯ

ಮದ್ರಸಾಗಳು ಸದಾ ಚರ್ಚೆಯಾಗುವ ವಿಷಯ. ರಾಜಕಾರಣಿಗಳು, ಶಿಕ್ಷಣ ತಜ್ಞರು ಮತ್ತು ಸಾಮಾಜಿಕ ಹೋರಾಟಗಾರರು ಮದ್ರಸಾಗಳ ಶೈಕ್ಷಣಿಕ ಪರಿಸ್ಥಿತಿಯ ಬಗ್ಗೆ ಚರ್ಚೆ ಮಾಡುವುದು ಸಾಮಾನ್ಯವಾಗಿದೆ. ಇತ್ತೀಚೆಗೆ ಅಂತಹದ್ದೊಂದು ಘಟನೆ ನಡೆದದ್ದು ಅಸ್ಸಾಂನಲ್ಲಿ, ಏಪ್ರಿಲ್ 2021 ನಲ್ಲಿ ಜಾರಿಗೆ ಬಂದ ‘ಅಸ್ಸಾಂ ಮದ್ರಸಾ ಕಾಯ್ದೆ-2020’. ಈ ಕಾಯ್ದೆಯಲ್ಲಿ ಅಸ್ಸಾಂನ ಸರಕಾರಿ ಸ್ವಾಯತ್ವದಲ್ಲಿರುವ ಮದ್ರಸಾಗಳನ್ನು ಶಾಲೆಗಳಾಗಿ ಪರಿವರ್ತಿಸುವ ನಿಯಮವಿದೆ. ಅಂದು ಅಸ್ಸಾಂ ರಾಜ್ಯದ ಶಿಕ್ಷಣ ಸಚಿವರಾಗಿದ್ದ ಮತ್ತು ಇಂದಿನ ಮುಖ್ಯಮಂತ್ರಿ ಹೇಮಂತ್ ಬಿಸ್ವ ಶರ್ಮ ರವರು ಈ ಬಿಲ್ ಅನ್ನು ಸದನದಲ್ಲಿ ಮಂಡಿಸುವಾಗ ಹೀಗಂದಿದ್ದರು, “ಕೇವಲ ಧಾರ್ಮಿಕ ಬೋಧನೆ ಮಾಡುತ್ತಿದ್ದ ಮದ್ರಸಾಗಳಲ್ಲಿ ನಾವು ಆಧುನಿಕ ಶಿಕ್ಷಣ ನೀಡುತ್ತೇವೆ, ಆದ್ದರಿಂದ ಅವುಗಳನ್ನು ಶಾಲೆಗಳಾಗಿ ಪರಿವರ್ತಿಸಲಾಗಿದೆ. ಇನ್ನು ಹತ್ತು ವರ್ಷಗಳಲ್ಲಿ ಈ ಮದ್ರಸಾಗಳಿಂದ ಡಾಕ್ಟರ್ ಮತ್ತು ಇಂಜಿನಿಯರ್ ಗಳು ಹೊರಬರುತ್ತಾರೆ, ನಾವು ಮುಸ್ಲಿಂ ಸಮುದಾಯದ ಅಭಿವೃದ್ದಿಗಾಗಿ ಇದನ್ನು ಮಾಡುತ್ತಿದ್ದೇವೆ”. ಅವರು ರಾಜಕೀಯ ಉದ್ದೇಶಕ್ಕೆ ಮಾಡಿದರೋ ಅಥವಾ ಮುಸ್ಲಿಂ ಸಮುದಾಯದ ಬಗ್ಗೆ ಅವರಿಗಿದ್ದ ಕಾಳಜಿಯೋ ಎಂಬುದುರ ಬಗ್ಗೆ ಇಲ್ಲಿ ಚರ್ಚಿಸುವ ಅಗತ್ಯವಿಲ್ಲ. ಆದರೆ ಅವರು ಹೇಳಿದ ಮಾತುಗಳು ಸತ್ಯ, ಆಧುನಿಕ ಶಿಕ್ಷಣದ ಕೊರತೆಯಿಂದ ಮದ್ರಸಾಗಳಲ್ಲಿ ವಿದ್ಯಾಭ್ಯಾಸ ಪಡೆಯುವ ಬಡ ವಿದ್ಯಾರ್ಥಿಗಳು ಒಂದೋ ಮದ್ರಸಗಳಲ್ಲಿ ನಾಲ್ಕೈದು ಸಾವಿರ ಸಂಬಳಕ್ಕೆ ಅಧ್ಯಾಪಕರಾಗಿ ಅಥವಾ ಮಸೀದಿಗಳಲ್ಲಿ ನಮಾಜ್ ನೇತೃತ್ವ ವಹಿಸುವ ಮತ್ತು ಅಝಾನ್ ನೀಡುವ ಕೆಲಸಕ್ಕೆ ಮಾತ್ರ ಸೀಮಿತರಾಗಿದ್ದಾರೆ.ಇದಲ್ಲದೇ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದಾರೆ. ಮದ್ರಸಾಗಳಲ್ಲಿ ಸಮಕಾಲೀನ ಶಿಕ್ಷಣದೊಂದಿಗೆ ಧಾರ್ಮಿಕ ಶಿಕ್ಷಣ ನೀಡಿದರೆ ಅಲ್ಲಿ ಕಲಿಯುವ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಬೆಳಕು ಮೂಡಬಹುದು.

ಇಸ್ಲಾಮಿನಲ್ಲಿ ಲೌಕಿಕ ಮತ್ತು ಧಾರ್ಮಿಕ ಶಿಕ್ಷಣ:
ದಶಕಗಳಿಂದ ಮದ್ರಸಾಗಳು ಲೋಕದ ಪರಿಜ್ಞಾನವಿಲ್ಲದ ಸಂಕುಚಿತ ಮನೋಭಾವದ ಕೆಲವೊಂದು ಧರ್ಮಗುರುಗಳ, ಪುರೋಹಿತರ ಕೈಗಳಲ್ಲಿ ಸಿಲುಕಿ ಕೇವಲ ಧಾರ್ಮಿಕ ಶಿಕ್ಷಣ ಕೇಂದ್ರಗಳಾಗಿ ಹೋಗಿವೆ. ಇಸ್ಲಾಮಿನಲ್ಲಿ ಜ್ಞಾನದ ಬಗ್ಗೆ ಧಾರ್ಮಿಕ ಶಿಕ್ಷಣ ಮತ್ತು ಲೌಕಿಕ ಶಿಕ್ಷಣ ಎಂಬ ವಿಂಗಡಣೆಯಿಲ್ಲ. ಮದ್ರಸಾವೆಂದರೆ ಶಿಕ್ಷಣ ನೀಡುವ ಕೇಂದ್ರವೆಂದರ್ಥ. ಹಿಂದೆ ಭಾರತದ ಮದ್ರಸಾಗಳಲ್ಲಿ ಎಲ್ಲಾ ರೀತಿಯ ಶಿಕ್ಷಣ ನೀಡಲಾಗುತ್ತಿತ್ತು. ಎಲ್ಲಾ ವರ್ಗ, ಜಾತಿ ಮತ್ತು ಧರ್ಮದ ಜನರು ಮದ್ರಸಾದಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಹಿಂದಿಯ ಪ್ರಸಿದ್ಧ ಕವಿ ಮುನ್ಷಿ ಪ್ರೇಮಚಂದ್, ಭಾರತದ ಪ್ರಥಮ ರಾಷ್ಟ್ರಪತಿ ಡಾ ರಾಜೇಂದ್ರ ಪ್ರಸಾದ್ ಮತ್ತು ಪ್ರಸಿದ್ಧ ಸಾಮಾಜಿಕ ಚಳುವಳಿಗಾರ ರಾಜ ರಾಮ್ ಮೋಹನ್ ರಾಯ್ ರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮದ್ರಸಾದಲ್ಲೇ ಗಳಿಸಿದರು. ಅಂದು ಮದ್ರಸಾದಲ್ಲಿ ವಿಜ್ಞಾನ, ಗಣಿತ ಮತ್ತು ಭಾಷೆಗಳು ಸೇರಿ ವಿವಿಧ ವಿಷಯಗಳ ಅಧ್ಯಯನ ನಡೆಯುತಿತ್ತು. ನಮ್ಮ ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ 1472ರಲ್ಲಿ ಬಹಮನಿ ರಾಜವಂಶದ ಮಹಮೂದ್ ಗವಾನ್ ಸ್ಥಾಪಿಸಿರುವ ಗವಾನ್ ಮದ್ರಸಾವಿದೆ. ಅದು ಆ ಕಾಲದ ಪ್ರಸಿದ್ಧಅಂತರಾಷ್ಟ್ರೀಯ ಮದ್ರಸಾವಾಗಿತ್ತು. ಒಂದು ವಿಶ್ವವಿದ್ಯಾಲಯದಲ್ಲಿ ಇರಬೇಕಾದ ಸೌಲಭ್ಯಗಳು ಆ ಮದ್ರಸದಲ್ಲಿತ್ತು. ಈ ಮದರಸಾ ಒಂದು ಕಾಲದಲ್ಲಿ ಸುಮಾರು 1000 ವಿದ್ಯಾರ್ಥಿಗಳಿಗೆ ಉಚಿತ ವಸತಿ ಸೌಕರ್ಯಗಳೊಂದಿಗೆ ಕಲಿಯುವ ಪ್ರಮುಖ ಕೇಂದ್ರವಾಗಿತ್ತು. ವಿದ್ಯಾರ್ಥಿಗಳು ಧರ್ಮಶಾಸ್ತ್ರ, ತತ್ವಶಾಸ್ತ್ರ, ಖಗೋಳವಿಜ್ಞಾನ, ಗಣಿತ, ಅರೇಬಿಕ್ ಮತ್ತು ಪರ್ಷಿಯನ್ ಭಾಷೆಗಳನ್ನು ಅಧ್ಯಯನ ಮಾಡುತ್ತಿದ್ದರು. ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ವಿದೇಶಿಯರು. ಇದು 3000 ಪುಸ್ತಕಗಳ ಗ್ರಂಥಾಲಯ, ಮಸೀದಿ, ಉಪನ್ಯಾಸ ಸಭಾಂಗಣಗಳು, ಪ್ರಾಧ್ಯಾಪಕರ ಮನೆಗಳು ಮತ್ತು ವಿದ್ಯಾರ್ಥಿಗಳ ವಸತಿನಿಲಯ ಹೊಂದಿತ್ತು.

ಮುಸ್ಲಿಮರ ಶೈಕ್ಷಣಿಕ ಸ್ಥಿತಿಗತಿ:
ಇಂದು ಮುಸ್ಲಿಮರ ಶೈಕ್ಷಣಿಕ ಸ್ಥಿತಿಗತಿ ಅತ್ಯಂತ ಶೋಚನೀಯವಾಗಿದೆ. ಮುಸಲ್ಮಾನರ ಶೈಕ್ಷಣಿಕ ಪರಿಸ್ಥಿತಿಯ ಬಗ್ಗೆ ಹೊಸದಾಗಿ ವಸ್ತುನಿಷ್ಠ ಅಧ್ಯಯನವೇನೂ ನಡೆದಿಲ್ಲ. 2006 ರ ಸಾಚಾರ್ ಸಮಿತಿ ಸಾಕಷ್ಟು ವಿಚಾರಗಳನ್ನು ಮುಂದಿಟ್ಟು, ಕೆಲವೊಂದು ಯೋಜನೆಗಳ ಶಿಫಾರಿಸಿನೊಂದಿಗೆ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು, ಅದರ ನಂತರ ಅಷ್ಟೊಂದು ಸಮಗ್ರ ಅಧ್ಯಯನ ನಡೆಯಲಿಲ್ಲ. ನ್ಯಾಷನಲ್ ಸ್ಯಾಂಪಲ್ ಸರ್ವೇ ಆಫೀಸ್ (ಎನ್.ಎಸ್. ಎಸ್. ಓ.) ನ ವರದಿಯ ಪ್ರಕಾರ 3 ರಿಂದ 35 ವರ್ಷ ವಯಸ್ಸಿನವರಲ್ಲಿ ಶಾಲೆಗೆ ಹೋಗದೇ ಹೊರಗುಳಿದವರ ಸಂಖ್ಯೆ ಮುಸ್ಲಿಂ ಪುರುಷರಲ್ಲಿ ಶೇ. 17% ಇದೆ, ಇದು ಇತರೆಲ್ಲಾ ಹಿಂದುಳಿದ ಸಮುದಾಯಗಳಿಗೆ ಹೋಲಿಸಿದರೆ ಅತೀ ಹೆಚ್ಚಿನ ಸಂಖ್ಯೆಯಾಗಿದೆ. ಅದೇ ರೀತಿ ಪಿಯುಸಿ ಹಂತದಲ್ಲಿ ಮುಸ್ಲಿಮರ ಒಟ್ಟು ಹಾಜರಾತಿ ಪ್ರಮಾಣ ಶೇ 48.3% ಆಗಿದೆ ಇದು ಕೂಡಾ ಇತರೆಲ್ಲಾ ಸಮುದಾಯಗಳಿಗಿಂತ ಕಡಿಮೆಯಾಗಿದೆ. 2019-20 ರ ಆಲ್ ಇಂಡಿಯಾ ಸರ್ವೇ ಆನ್ ಹೈಯರ್ ಎಜುಕೇಶನ್ (ಎ.ಐ.ಎಸ್.ಎಚ್.ಇ) ಪ್ರಕಾರ ಉನ್ನತ ಶಿಕ್ಷಣದಲ್ಲಿ ಮುಸ್ಲಿಮರ ದಾಖಲಾತಿ ಸಂಖ್ಯೆ ಶೇ. 5.45% ಇದೆ, ಇದು ಪ್ರತೀ ವರ್ಷ ಹೆಚ್ಚಾಗುತ್ತಿದೆ ಆದರೆ ಮುಸ್ಲಿಮರ ಜನಸಂಖ್ಯೆಗೆ ಹೋಲಿಸಿದರೆ ಈ ಸಂಖ್ಯೆ ಕೂಡಾ ತೀರಾ ಕಡಿಮೆ. ಇಂತಹ ಪರಿಸ್ಥಿತಿಯಲ್ಲಿ ಶೈಕ್ಷಣಿಕ ಬದಲಾವಣೆಗೆ ಮುಸ್ಲಿಂ ಸಮುದಾಯ ಹೊಸ ರೂಪುರೇಷವನ್ನು ರಚಿಸುವುದು ಅತ್ಯಗತ್ಯ. ಕೇವಲ ಸರ್ಕಾರದ ಯೋಜನೆಗಳಿಂದ ಅಥವಾ ಸಹಕಾರದಿಂದ ಶೈಕ್ಷಣಿಕ ಬದಲಾವಣೆ ಸಾಧ್ಯವಿಲ್ಲ ಅದಕ್ಕಾಗಿ ಸಮುದಾಯದ ಯುವ ಪೀಳಿಗೆ ದಿಟ್ಟ ಹೆಜ್ಜೆ ಇಡುವುದು ಅಗತ್ಯ. ಆ ದಿಟ್ಟ ಹೆಜ್ಜೆ ಮದರಸಾಗಳ ಸುಧಾರಣೆಯ ಕಡೆಗಾದರೆ ಅದು ಬದಲಾವಣೆ ತರುವ ಸಾಧ್ಯತೆ ಖಂಡಿತ ಇದೆ.
ಮದ್ರಸಾಗಳ ಸುಧಾರಣೆ ಹೇಗೆ?
ಕೇಂದ್ರೀಯ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಮಾಹಿತಿ ಪ್ರಕಾರ ದೇಶದಲ್ಲಿ ಒಟ್ಟು 24010 ಮದ್ರಸಾಗಳಿವೆ. ಅವುಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವುಗಳಲ್ಲಿ ಹೆಚ್ಚಿನ ಮದ್ರಸಾಗಳಲ್ಲಿ ಕೇವಲ ಧಾರ್ಮಿಕ ಶಿಕ್ಷಣ ನೀಡಲಾಗುತ್ತದೆ. ಒಮ್ಮೆ ಆಲೋಚಿಸಿ ಈ 24010 ಮದ್ರಸಾಗಳಲ್ಲಿ ಧಾರ್ಮಿಕ ಶಿಕ್ಷಣದೊಂದಿಗೆ, ಸಮಕಾಲೀನ ಶಿಕ್ಷಣವನ್ನು ನೀಡಲು ಪ್ರಾರಂಭಿಸಿದರೆ ಮುಸ್ಲಿಂ ಸಮಾಜದ ಶೈಕ್ಷಣಿಕ ಸ್ಥಿತಿಗತಿ ಏನಾಗಬಹುದು. ಇವುಗಳಲ್ಲಿ ಹೆಚ್ಚಿನ ಮದ್ರಸಾಗಳು ಉತ್ತರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಹರ್ಯಾಣದಲ್ಲಿವೆ. ಈ ಎಲ್ಲಾ ರಾಜ್ಯಗಳಲ್ಲಿ ಮುಸ್ಲಿಮರು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ. ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಕೇರಳ ಮತ್ತು ತಮಿಳುನಾಡಿನಲ್ಲಿ ಹೆಚ್ಚಿನ ಮದ್ರಸಾಗಳು ಧಾರ್ಮಿಕ ಶಿಕ್ಷಣದೊಂದಿಗೆ ಸಮಕಾಲೀನ ವಿಷಯಗಳನ್ನು ಕಲಿಸುತ್ತಿವೆ. 2013-14 ರಲ್ಲಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಶೇಷನ್ ಆಫ್ ಇಂಡಿಯಾ (ಎಸ್.ಐ. ಓ.) ಇದರ ಕರ್ನಾಟಕ ಶಾಖೆ ನಡೆಸಿದ ಸಮೀಕ್ಷೆಯ ಪ್ರಕಾರ ರಾಜ್ಯದ ಶೇ. 80ರಷ್ಟು ಮದ್ರಸಾಗಳಲ್ಲಿ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳನ್ನು ಕಲಿಸುತ್ತಿಲ್ಲ. ರಾಜ್ಯದಲ್ಲಿ ಕೆಲವೊಂದು ಉತ್ತಮ ಮದ್ರಸಗಳು ಇವೆ ಎಂಬುದನ್ನು ಕೂಡಾ ಎಸ್.ಐ.ಓ. ವರದಿ ತಿಳಿಸಿದೆ. ಅದರಲ್ಲಿ ಸಿಂಧಗಿಯ ಬೈತುಲ್ ಉಲೂಮ್ ಮದ್ರಸಾ, ಕಂಡ್ಳೂರಿನ ಝಿಯಾ ಉಲ್ ಉಲೂಮ್ ಮದ್ರಸಾ, ಅಲಿಪುರದ ಬಕ್ಹೀರುಲ್ ಉಲೂಮ್ ಮತ್ತು ಭಟ್ಕಳದ ಜಾಮಿಯಾ ಇಸ್ಲಾಮಿಯಾದ ಹೆಸರನ್ನು ಆ ವರದಿಯಲ್ಲಿ ಕಾಣಬಹುದು.
ಮದ್ರಸಾಗಳ ಸುಧಾರಣೆಗಾಗಿ ಮುಸ್ಲಿಂ ಸಮುದಾಯದ ಶಿಕ್ಷಣ ತಜ್ಞರು, ನಾಯಕರು ಮತ್ತು ಸಂಘಟನೆಗಳ ಮುಖಂಡರುಗಳು ಜೊತೆಗೂಡಿ ಯೋಜನೆ ರೂಪಿಸುವ ಅಗತ್ಯವಿದೆ. ಈ ಮದ್ರಸಾಗಳು ಸಮುದಾಯದ ದಾನಿಗಳಿಂದ ಸಂಗ್ರಹಿಸಲ್ಪಡುವ ದೇಣಿಗೆಯಿಂದ ನಡೆಯುತ್ತಿವೆ. ದೇಣಿಗೆ ನೀಡಿ ಸುಮ್ಮನೆ ಕೂರದೆ ಸಮುದಾಯದ ಮಹನೀಯರು ಮದ್ರಸಾದ ಪಠ್ಯಕ್ರಮದಲ್ಲಿ ಮೂಗುತೂರಿಸುವ ಅಗತ್ಯವಿದೆ. ಸಮಾಜದ ಪರೋಹಿತರನ್ನು, ಧರ್ಮಗುರುಗಳನ್ನು ಎದುರಿಸಿ ಅವರ ಮನವೊಲಿಸುವುದು ಅಷ್ಟು ಸುಲಭದ ಕೆಲಸವಲ್ಲ, ಆದರೆ ಸಮುದಾಯದ ಯುವ ಪೀಳಿಗೆ ಇದನ್ನು ಸವಾಲಾಗಿ ತೆಗೆದುಕೊಂಡು, ಮದ್ರಸಾಗಳ ಉನ್ನತಿಗಾಗಿ ಕಾರ್ಯಪ್ರವೃತ್ತರಾಗಬೇಕಾಗಿದೆ. ಮದ್ರಸಾಗಳಿಗೆ ದೇಣಿಗೆ ನೀಡುವ ಸಾರ್ವಜನಿಕರಿಗೆ ಅಲ್ಲಿಯ ಶಿಕ್ಷಣ ಮತ್ತು ಇತರ ವ್ಯವಸ್ಥೆಯ ಗುಣಮಟ್ಟವನ್ನು ಉನ್ನತೀಕರಿಸಲು ಮದ್ರಸಾಗಳ ಆಡಳಿತ ಮಂಡಳಿಗೆ ಸಲಹೆ ನೀಡುವ ನೈತಿಕ ಅಧಿಕಾರವಿರುತ್ತದೆ.
ಪ್ರಪ್ರಥಮವಾಗಿ ಎಲ್ಲಾ ಮದ್ರಸಾಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣದೊಂದಿಗೆ ಎಸ್ ಎಸ್ ಎಲ್ ಸಿ ವರೆಗಿನ ಶಿಕ್ಷಣ ಪಡೆಯಲು ಬೇಕಾದ ಎಲ್ಲಾ ವ್ಯವಸ್ಥೆ ಮಾಡುವುದು. ಇನ್ನು ಮೂಲಭೂತ ಸೌಕರ್ಯ ಮತ್ತು ಸವಲತ್ತುಗಳಿರುವ ಮದ್ರಸಾಗಳಲ್ಲಿ ಪದವಿ ಪೂರ್ವ ಶಿಕ್ಷಣ ನೀಡಲು ಬೇಕಾದ ಕ್ರಮ ಕೈಗೊಳ್ಳುವುದು. ಅದೇ ರೀತಿ ದೇಶದಲ್ಲಿ ಕೆಲವೊಂದು ದೊಡ್ಡ ಮತ್ತು ಪ್ರತಿಷ್ಠಿತ ಮದ್ರಸಾಗಳಿವೆ, ಅಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಅಂತಹ ಕನಿಷ್ಠ ಹತ್ತು ಮದ್ರಸಾಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಶಿಕ್ಷಣ ಪ್ರಾರಂಭಿಸಲು ಕ್ರಮ ಕೈಗೊಳ್ಳುವುದು. ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಮತ್ತು ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯಗಳು ದೇಶದ 10 ಅಗ್ರಗಣ್ಯ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿದೆ. ಈ ಎರಡು ವಿಶ್ವವಿದ್ಯಾಲಯಗಳಲ್ಲಿ ಅಲ್ಪಸಂಖ್ಯಾತ ಸ್ಥಾನಮಾನದಿಂದಾಗಿ ಶೇ. 50ಕ್ಕಿಂತ ಹೆಚ್ಚು ಮುಸ್ಲಿಂ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಮದ್ರಸಾಗಳು ಸುಧಾರಣೆಗೊಂಡರೆ ದೇಶದಲ್ಲಿ ಇಂತಹ 10 -15 ವಿಶ್ವವಿದ್ಯಾಲಯಗಳು ಹೊಸದಾಗಿ ಸೇರ್ಪಡೆಯಾಗಲಿವೆ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು.

LEAVE A REPLY

Please enter your comment!
Please enter your name here