ಲೇಖಕರು: ಹಕೀಮ್ ತೀರ್ಥಹಳ್ಳಿ.

ಸಾವಿರಾರು ವರ್ಷಗಳಿಂದ ಶೋಷಣೆಗೆ ಗುರಿಯಾಗಿದ್ದವರಿಗೆ ಬೆಳಕಿನ ಸನ್ಮಾರ್ಗ ತೋರಿಸಿ, ನಮ್ಮ ದೇಶದ ಭವ್ಯ ಭವಿಷ್ಯವನ್ನು ಬರೆದ, ದಲಿತರ, ಶೋಷಿತರ, ಬಡವರ ಪಾಲಿನ ಆಶಾಕಿರಣ, ಸಂವಿಧಾನದ ಮೂಲಕ ನಮ್ಮಂತ ಕೋಟ್ಯಾಂತರ ಜನರಿಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸದೃಢರಾಗಲು ಅವಕಾಶ ಮಾಡಿಕೊಟ್ಟ ಭಾರತ ಭಾಗ್ಯವಿಧಾತ, ಭಾರತ ರತ್ನ, ಸಂವಿಧಾನ ಶಿಲ್ಪಿ, ವಿಶ್ವ ಜ್ಞಾನಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ಜಯಂತಿಯ ನೆಪದಲ್ಲಿ ಅವರ ಬದುಕನ್ನು ಅರಿಯುವ ಪ್ರಯತ್ನ ಮಾಡೋಣ. ಅವರು ಇಂದು ನಮ್ಮ ಜೊತೆಗೆ ದೈಹಿಕವಾಗಿ ಇಲ್ಲದಿದ್ದರೂ ಅವರು ಹಾಕಿಕೊಟ್ಟಿರುವ ಬದುಕಿನ ಭದ್ರ ಬುನಾದಿ ಎಂದೆಂದಿಗೂ ಎಲ್ಲಾ ರಂಗದಲ್ಲೂ ಪ್ರಸ್ತುತ. ಬಾಬಾ ಸಾಹೇಬರು ಬಾಲ್ಯದಲ್ಲಿಯೇ ಪ್ರಬುದ್ಧತೆಯಿಂದ ಮೌಢ್ಯ, ಜಾತಿ ಶೋಷಣೆಯನ್ನು ಪ್ರಶ್ನಿಸುತ್ತಿದ್ದವರು. ಮುಂದೆ ಇದೇ ಅವರ ಹೋರಾಟಕ್ಕೆ ದಾರಿಯಾಯಿತು. ನಮ್ಮಲ್ಲಿದ್ದ ಮೌಡ್ಯ, ಶೋಷಣೆಯನ್ನು ವೈಚಾರಿಕ ದೃಷ್ಟಿಕೋನದಿಂದ ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡುತ್ತಿದ್ದರು. ತಮ್ಮ‌ ಜೀವಿತ ಕಾಲದಲ್ಲಿ ಅವರು ಜನರನ್ನು ಉದ್ದೇಶಿಸಿ ಹೆಚ್ಚು ಹೆಚ್ಚು ಸುಶಿಕ್ಷಿತರಾಗುವಂತೆ, ವಿದ್ಯಾವಂತರಾಗುವಂತೆ ಪ್ರೇರೇಪಿಸಿದರು ಮತ್ತು ಆ ಮೂಲಕ ತಮ್ಮ ಹಕ್ಕುಗಳನ್ನು ಮತ್ತು ಸಾಮಾಜಿಕ ಸಮಾನತೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಜನರನ್ನು ಪ್ರೋತ್ಸಾಹಿಸುತ್ತಿದ್ದರು. ಇದರ ಪರಿಣಾಮ ಎಂಬಂತೆ ಇಂದು ಹಲವಾರು ಶೋಷಿತ ಸಮಾಜ ಎಲ್ಲರಂತೆ ಸಮಾನತೆಯಿಂದ ಬದುಕಲು ಕಾರಣವಾಗಿದೆ.

ಅಂಬೇಡ್ಕರ್ ಅವರು ಬಾಲ್ಯದಲ್ಲಿ ಅನುಭವಿಸಿದ ನೋವುಗಳು ಒಂದೆರಡಲ್ಲ. ಒಮ್ಮೆ ಅಂಬೇಡ್ಕರ್ ಎಳೆಂಟು ವರ್ಷದ ಪುಟ್ಟ ಬಾಲಕನಾಗಿದ್ದಾಗ ತಂದೆಯನ್ನು ನೋಡಲು ಎತ್ತಿನಗಾಡಿಯಲ್ಲಿ ಕುಳಿತು ಸಾಗುತ್ತಿದ್ದರು, ಗಾಡಿ ಸ್ವಲ್ಪ ದೂರ ಸಾಗಿತ್ತಷ್ಟೆ, ಎತ್ತಿನ ಗಾಡಿಯವನಿಗೆ ಈ ಹುಡುಗ ದಲಿತ ಎಂಬುದು ತಿಳಿದು ಕೂಡಲೇ ಗಾಡಿಯನ್ನು ನಿಲ್ಲಿಸಿ ಆ ಪುಟ್ಟ ಬಾಲಕನನ್ನು ಕೆಳಕ್ಕೆ ತಳ್ಳಿ ಮುಂದೆ ಸಾಗಿಬಿಟ್ಟ. ಇನ್ನೊಮ್ಮೆ ಕೆರೆಯಲ್ಲಿ ನೀರು ಕುಡಿದ ಎಂಬ ಕಾರಣಕ್ಕೆ ಗ್ರಾಮಸ್ಥರೆಲ್ಲ ಸೇರಿ ಅಂಬೇಡ್ಕರ್ ಗೆ ಥಳಿಸಿದರು. ಒಮ್ಮೆ ಕ್ಷೌರಿಕ ಕ್ಷೌರ ಮಾಡದೆ ಹಿಂದೆ ಕಳಿಸಿದ್ದನಂತೆ. ಮಳೆ ಬಂದ ಕಾರಣಕ್ಕೆ ರಸ್ತೆ ಬದಿಯಲ್ಲಿದ್ದ ಮನೆಯೊಂದರ ಜಗಲಿಯ ಮೇಲೆ ನಿಂತಿದ್ದಕ್ಕೆ ಮನೆಯ ಯಜಮಾನಿ ಕೋಪದಿಂದ ಜಗಲಿಯಿಂದ ತಳ್ಳಿದ್ದಳಂತೆ. ಹೀಗೆ ನೂರಾರು ಅವಮಾನ, ಹಿಂಸೆಯನ್ನು ಅಂಬೇಡ್ಕರ್ ಬಾಲ್ಯದಲ್ಲಿ ಸಹಿಸಿದವರು. ಬಹುಶಃ ಅಂದು ಆ ಬಾಲಕ ಅಸ್ಪೃಶ್ಯತೆ, ಬಡತನ, ಅವಮಾನ, ಹಿಂಸೆಯನ್ನು ಮೆಟ್ಟಿ ನಿಂತು ವಿದ್ಯಾಭ್ಯಾಸ ಮಾಡದೆ ಹೋಗಿದ್ದರೆ ಇವತ್ತು ಈ ಅಖಂಡ ಭಾರತದಲ್ಲಿ ಮರೆಯಲಾರದ ಚೇತನವೊಂದು ಸೃಷ್ಟಿಯಾಗುತ್ತಿರಲಿಲ್ಲವೇನೋ? ಎಂದೆನಿಸುತ್ತದೆ.

ಅಂದಿನ ದಿನದಲ್ಲಿ ಕೆಳಜಾತಿಯ ಹುಡುಗನೊಬ್ಬ ಶಾಲೆಗೆ ಹೋಗಿ ಅಕ್ಷರ ಕಲಿಯುವುದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. ಆದರೆ ಅಂಬೇಡ್ಕರ್ ಅವರಿಗೆ ಬಾಲ್ಯದಲ್ಲಿಯೆ ಓದಬೇಕು, ಸಾಧಿಸಬೇಕು ಎಂಬ ಛಲ ಇತ್ತು. ಇದಕ್ಕೆ ಹೆತ್ತವರು ನೀರೆರೆದು ಪೋಷಿಸಿದರು. ಮುಂದೆ ವಿದೇಶದಲ್ಲಿ ಕಲಿತು, ತಮ್ಮ ಸತತ ಅಧ್ಯಯನದ ಮೂಲಕ ಹಲವಾರು ಡಾಕ್ಟರೇಟ್ ಪದವಿಗಳನ್ನು ಗಳಿಸಿದರು. ಅಂಬೇಡ್ಕರ್ ಉನ್ನತ ಶಿಕ್ಷಣ ಪಡೆದು ಭಾರತಕ್ಕೆ ಬಂದ ನಂತರವೂ ಇಲ್ಲಿ ಅದೇ ಅಸ್ಪೃಶ್ಯತೆ ಅವರನ್ನು ಅಪಮಾನಿಸಿತು. ನಂತರ ಅಂಬೇಡ್ಕರ್ ‘ಮೂಕನಾಯಕ’ ಎಂಬ ಪತ್ರಿಕೆ ಆರಂಭಿಸಿ ಅದರ ಮೂಲಕ‌ ಜನಜಾಗೃತಿಗೆ ಮುಂದಾದರು. ‘ಬಹಿಷ್ಕೃತ ಹಿತಕಾರಿಣಿ’ ಸಭಾದಂತಹ ಸಂಘಟನೆಗಳನ್ನು ಕಟ್ಟಿ ಅಸ್ಪೃಶ್ಯತೆ ವಿರುದ್ಧ ಸಮಾನತೆಗಾಗಿ ಬೀದಿಗಿಳಿದು ಹಲವು ಹೋರಾಟ ಮಾಡಿದರು. ಇವರು ಮಾಡಿದ ಚೌದರ್ ಕೆರೆ ಚಳವಳಿಯಂತೂ ಭಾರತದ ಇತಿಹಾಸದಲ್ಲಿ ದಾಖಲಿಸುವಂಥದ್ದು. 1927 ರ ಮಾರ್ಚ್ ನಲ್ಲಿ ಮುಂಬೈನ ಕೋಲಾಬಾ ಜಿಲ್ಲೆಯ ಮಹಾಡ್ ಕೆರೆಯ ನೀರನ್ನು ಮುಟ್ಡುವುದರ ಮೂಲಕವಾಗಿ ಜಡ್ಡುಗಟ್ಟಿದ ವ್ಯವಸ್ಥೆಗೆ ದೊಡ್ಡಪೆಟ್ಟು ಕೊಟ್ಟರು. ನಂತರದಲ್ಲಿ ಮನುಸ್ಮೃತಿಯ ಎಲ್ಲಾ ಭಾಗಗಳು ಖಂಡನರ್ಹಾವಾಗಿದೆ ಎಂದು ಮನುಸ್ಮೃತಿಯನ್ನು ಬಹಿರಂಗವಾಗಿಯೇ ಸುಟ್ಟರು. ದಲಿತರನ್ನು ಅಮಾನವೀಯ ವ್ಯವಸ್ಥೆಯಿಂದ ಹೊರ ತರಲು ದಲಿತರಿಗೆ ಕುಡಿಯಲು ನಿರಾಕರಿಸಿದ ಬಾವಿಯಿಂದ ನೀರು ತರುವುದು, ಪರಿಶಿಷ್ಟರಿಗೆ ನಿರಾಕರಿಸಿದ ದೇವಾಲಯ ಪ್ರವೇಶಿಸುವುದು ಇಂತಹ ಅಮೂಲಾಗ್ರ ಕ್ರಾಂತಿಗೆ ಮುನ್ನುಡಿ ಬರೆದರು.

ಸ್ವಾತಂತ್ರ್ಯ ಸಮಾನತೆ ಹಾಗೂ ಭ್ರಾತೃತ್ವ ಭಾವನೆ ಮೂಲಕ ಭಾರತದ ಪ್ರತಿಯೊಬ್ಬ ಪ್ರಜೆಗೂ ಸಮಾನ ಸ್ಥಾನಮಾನ ಕಲ್ಪಿಸಿಕೊಟ್ಟರುವ ಅಂಬೇಡ್ಕರ್ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಉದ್ದೇಶದ ಅಡಿಯಲ್ಲಿ ಜಗತ್ತಿನ ಅತಿದೊಡ್ಡ ಲಿಖಿತ ಸಂವಿಧಾನ ರಚಿಸಿದರು, ಅದನ್ನು 1950ರ ಜನವರಿ 26ರಂದು ಭಾರತದಲ್ಲಿ ಜಾರಿಗೊಳಿಸಲಾಯಿತು. ಅವರಿಗೆ ನಾವೆಲ್ಲಾ ದೊಡ್ಡ ಸಲಾಂ ಹೇಳುವುದರ ಮೂಲಕ ಅವರ ವಿಚಾರಗಳನ್ನು ಓದಿಕೊಂಡು, ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗೋಣ‌. ದೇಶದ ಸಂವಿಧಾನದ ವಿರುದ್ಧವಾಗಿ ನಡೆಯುವವರನ್ನು, ಸಮಾನತೆ ಮತ್ತು ಸಹೋದರತೆಯ ವಿರುದ್ಧವಾಗಿ ನಡೆಯುವವರನ್ನು ಒಗ್ಗಟ್ಟಿನಿಂದ ಹಿಮ್ಮೆಟ್ಟಿಸೋಣ. ಅವರ ಬದುಕಿನ ವಿಚಾರಗಳು ನಮ್ಮ ಬದುಕಿನ ಅದರ್ಶವಾಗಲಿ.

LEAVE A REPLY

Please enter your comment!
Please enter your name here