✒ ಕವನ ಉಪ್ಪಿನಂಗಡಿ
Philomena college Puttur first year B.A journalism
ಪರಿಸರ ಎಂದರೆ ನಮ್ಮ ಸುತ್ತಮುತ್ತಲಿನ ಎಲ್ಲಾ ವಸ್ತುಗಳನ್ನು ನಾವು ಪರಿಸರ ಎನ್ನುತ್ತೇವೆ. ಉದಾಹರಣೆಗೆ ಗಿಡಮರಗಳು, ನೀರು, ಗಾಳಿ, ಪ್ರಾಣಿಗಳು, ಪಕ್ಷಿಗಳು, ಸೂರ್ಯ ಚಂದ್ರ ಮುಂತಾದವುಗಳು ಪರಿಸರದ ಒಂದು ಭಾಗವಾಗಿದೆ.
ನಮ್ಮ ಹಿರಿಯರ ಕಾಲದಲ್ಲಿ ಪರಿಸರದ ಸೊಬಗನ್ನು ನೋಡಲು ಎರಡು ಕಣ್ಣುಗಳು ಸಾಲುತ್ತಿರಲಿಲ್ಲ. ತುಂಬಿ ಹರಿಯುತ್ತಿರುವ ನದಿ- ಕೆರೆಗಳನ್ನು ನೋಡುತ್ತಿದ್ದರೆ ಮಳೆಗಾಲವೋ ಬೇಸಿಗೆಕಾಲವೋ ಎಂದು ತಿಳಿಯುತ್ತಿರಲಿಲ್ಲ. ತುಂಬಿ ಹರಿಯುತ್ತಿದ್ದವು. ಮರಗಿಡಗಳಂತು. ಮರಗಿಡಗಳು ಕಾಡುಗಳು ಭೂಮಿಗೆ ಕಂಬಳಿ ಹೊದಿಸಿದಂತೆ ಕಾಣುತ್ತಿತ್ತು. ಒಂದು ಸ್ಥಳದಿಂದ ಮತ್ತೊಂದೆಡೆಗೆ ಜನರು ಸಾಗಬೇಕಾದರೆ ಎತ್ತಿನಗಾಡಿ ಸೈಕಲ್‍ನಂತಹ ವಾಹನಗಳನ್ನು ಬಳಸುತ್ತಿದ್ದರು. ಅದರಿಂದ ಹೆಚ್ಚಿನ ವ್ಯಾಯಾಮವಾಗುತ್ತಿತ್ತು. ಆದ್ದರಿಂದ ಅಂದಿನ ಜನಗಳು ಆರೋಗ್ಯಕರ ಜೀವನ ನಡೆಸುತ್ತಿದ್ದರು. ಅವರ ಆ ಜೀವನ ಶೈಲಿಯನ್ನು ನೋಡಿದರೆ ಈಗಿನ ಯುವ ಪೀಳಿಗೆ ಅದರ 25% ಭಾಗ ಕೂಡ ಆ ಸುಖಕರ ಜೀವನವನ್ನು ಅನುಭವಿಸುತ್ತಿಲ್ಲ. ಆಸ್ತಿ, ಅಂತಸ್ತು ಇದ್ದರೇನು ಬಂತು. ಸುಖಕರವಾದ ಜೀವನ, ಆರೋಗ್ಯಕರವಾದ ಜೀವನ ಯಾರಿಗೂ ಇಲ್ಲ. 60 ವರ್ಷ ಆಗುತ್ತಿದ್ದಂತೆ ಹಾಸಿಗೆ ಹಿಡಿಯಲು ಶುರುವಾಗಿದೆ. ಇದಕ್ಕೆಲ್ಲ ಕಾರಣವೇನೆಂದರೆ ನಮ್ಮ ಸುತ್ತಮುತ್ತಲಿನ ಸ್ವಚ್ಛಂದ ಪರಿಸರ, ಹಿರಿಯರು ಕಾಪಾಡಿಕೊಂಡು ಬಂದಿದ್ದ ನಮ್ಮ ಪರಿಸರವನ್ನು ನಮ್ಮ ಅತಿಯಾದ ಆಸೆಯನ್ನು ಪೂರೈಸಿಕೊಳ್ಳುವ ಸಲುವಾಗಿ ಹಾಗೂ ನಾವು ಸಮಾಜದಲ್ಲಿ ಶ್ರೇಷ್ಠ ಹಾಗೂ ಉನ್ನತ ವ್ಯಕ್ತಿ ಎಂದು ಎನಿಸಿಕೊಳ್ಳಲು ತಮ್ಮ ಶ್ರೀಮಂತಿಕೆಯನ್ನು ತೋರಿಸಿಕೊಳ್ಳಲು ನಾಶಮಾಡುತ್ತಿದ್ದೇವೆ.
ಪರಿಸರ ನಾಶವಾಗಲು ಹಲವಾರು ಕಾರಣಗಳಿವೆ. ಅವುಗಳೆಂದರೆ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ಅತಿಯಾದ ಪ್ಲಾಸ್ಟಿಕ್ ಬಳಕೆ, ಕಾಡುಗಳ ನಾಶ, ಮರಗಳನ್ನು ಕಡಿಯುವುದು, ಕಾರ್ಖಾನೆಗನ್ನು ನಿರ್ಮಿಸುವುದು ಇಂತಹ ಹಲವಾರು ವಿಷಯಗಳಿಂದ ನಿರ್ಮಲವಾದ ಪರಿಸರ ನಾಶವಾಗುತ್ತಿದೆ.
ಹೆಚ್ಚುತ್ತಿರುವ ವಾಹನಗಳ ಸಂಖ್ಯೆ:
ಆಧುನಿಕ ಯುಗದ ಪೀಳಿಗೆಯವರು ವಾಹನಗಳನ್ನು ಬಳಸುವುದರಲ್ಲಿ ಮಿತಿಯೇ ಇಲ್ಲ. ಒಂದು ಮನೆಯಲ್ಲಿ 2ಕ್ಕಿಂತ ಕಡಿಮೆ ವಾಹನಗಳಿರುವ ಮನೆಗಳು ತುಂಬಾ ಕಡಿಮೆ. ಕನಿಷ್ಠ ಒಂದಾದರೂ ವಾಹನ ಒಂದು ಮನೆಯಲ್ಲಿ ಇದ್ದೇ ಇರುತ್ತದೆ. ಒಂದು ಮನೆಯಲ್ಲಿ ಒಂದು ವಾಹನ ಇರಲಿ ಅದು ಅನಿವಾರ್ಯ ಹಾಗೂ ಅಗತ್ಯ ಕೂಡ. ಆದರೆ ಈಗ ನೋಡಿದರೆ ಒಂದು ಮನೆಯಲ್ಲಿ ಒಬ್ಬ ವ್ಯಕ್ತಿಗೆ ಒಂದು ವಾಹನ, ಮನೆಯಿಂದ 5 ನಿಮಿಷದ ದಾರಿ ಇದ್ದರೂ ಕೂಡ ವಾಹನದ ಸಹಾಯದಿಂದ ಹೋಗುತ್ತಾರೆ. ಇದರಿಂದಾಗಿ ವಾಹನಗಳಿಂದ ಹೊರಬರುವ ಹೊಗೆಯಿಂದ ಮಾನವ ಹೊಟ್ಟೆಗೆ ಕಲುಷಿತವಾದ ಹೊಗೆ ಹೋಗಿ ಕಾಯಿಲೆಗಳು ಶುರುವಾಗುತ್ತದೆ. ಇದರಿಂದ ಹೊರಬರುವ ಹೊಗೆಯು ಮರಗಿಡಗಳ, ತಿಂಡಿ ತಿನಿಸುಗಳ ಮೇಲೆ, ನೀರಿನಲ್ಲಿ ಪಸರಿ ಪರಿಸರ ಮಾಲಿನ್ಯವು ಉಂಟಾಗುತ್ತದೆ. ಜನರು ಉಬ್ಬಸ, ಉಸಿರಾಟದ ತೊಂದರೆ ಶ್ವಾಶಕೊಶದ ತೊಂದರೆ ಅನುಭವಿಸುವಂತಾಗುತ್ತದೆ ಮತ್ತು ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀಳುತ್ತದೆ.
*ಅತಿಯಾದ ಪ್ಲಾಸ್ಟಿಕ್ ಬಳಕೆ:*
ಈಗಿನ ಕಾಲದಲ್ಲಿ ನಮಗೆ ಪಟ್ಟಣದಿಂದ(ಪೇಟೆಯಿಂದ) ಒಂದು ಸಣ್ಣ ವಸ್ತು ತರಬೇಕಾದರೂ ನಾವು ಪ್ಲಾಸ್ಟಿಕ್ ಕೊಡಿ ಎಂದು ಕೇಳಿ ಪಡೆಯುತ್ತೇವೆ ಹಾಗೂ ನಾವು ತಿನ್ನುವ ತಿಂಡಿಗಳ ಪ್ಲಾಸ್ಟಿಕ್‍ಗಳನ್ನು ರಸ್ತೆ ಬದಿಯಲ್ಲಿ ಎಸೆದು ಹೋಗುತ್ತೇವೆ. ಇದರಿಂದ ಭೂಮಿಯಲ್ಲಿ ಪ್ಲಾಸ್ಟಿಕ್ ಕರಗದೆ ಭೂಮಿ ಮಾಲಿನ್ಯವಾಗುತ್ತದೆ. “ಮಾನವನು ಬಳಸಿ ಎಸೆದ ಅಥವಾ ಉಪಯೋಗಿಸಿದ ರಾಸಾಯನಿಕಗಳು ನೈಸರ್ಗಿಕ ಮಣ್ಣಿನಲ್ಲಿ ಸೇರಿಕೊಂಡಾಗ, ಮಣ್ಣು ತನ್ನ ನೈಜ ಗುಣವನ್ನು ಕಳೆದುಕೊಳ್ಳುವುದಕ್ಕೆ ನೆಲ ಮಾಲಿನ್ಯ ಎನ್ನುತ್ತಾರೆ.” ಪ್ಲಾಸ್ಟಿಕ್ ಮೆದುವಾದ ಮತ್ತು ವಿವಿಧ ಆಕಾರಗಳ ಘನ ಕಾರ್ಯಗಳನ್ನು ಹೊಂದಿರುವ ಸಿಂತೆಟಿಕ್ ವಸ್ತು. ನಿರುಪಯುಕ್ತ ಪ್ಲಾಸ್ಟಿಕನ್ನು ಸಿಕ್ಕ ಸಿಕ್ಕಲ್ಲಿ ಎಸೆಯುವುದರಿಂದ ವಿಲೇವಾರಿಯ ವ್ಯವಸ್ಥೆ ಸಮರ್ಪಕವಾಗಿಲ್ಲದಿರುವುದರಿಂದ ಅದರ ದುಷ್ಪರಿಣಾಮಗಳಿಗೆ ಕಾರಣವಾಗಿದೆ. ಇದಕ್ಕೆ ಮುನ್ಸಿಪಾಲಿಟಿ ಮತ್ತು ಕಾರ್ಪುರೇಷನ್ ರವರ ಅಜಾಗರೂಕತೆಯೇ ಕಾರಣ ಎಂದರೆ ತಪ್ಪಾಗಲಾರದು.
ಕಾಡುಗಳ ನಾಶ:
ಅರರ್ಣಯ ನಾಶ ಎಂದರೆ ನೈಸರ್ಗಿಕವಾಗಿ ಕಾಣಸಿಗುವ ಅರಣ್ಯಗಳನ್ನು ಮಾನವ ಚಟುವಟಿಕೆಗಳಾದ ಕತ್ತರಿಸುವಿಕೆ ಹಾಗೂ ಬೆಂಕಿಯಿಂದ ಅರಣ್ಯ ಪ್ರದೇಶದ ಮರಗಿಡಗಳನ್ನು ನಾಶಕ್ಕೊಳಪಡುವ ಕ್ರಿಯೆಯಾಗಿದೆ. ಅರಣ್ಯ ನಾಶಕ್ಕೆ ಹಲವಾರು ಕಾರಣಗಳಿವೆ.
ಕಾರಣ:
ಮರಗಳು ಅಥವಾ ಅದರಿಂದ ದೊರಕುವ ಇದ್ದಿಲನ್ನು ಇಂಧನಕ್ಕಾಗಿ ಅಥವಾ ಮಾನವರಿಂದ ಬಳಕೆಯಾಗಲ್ಪಡುವ ಉತ್ಪನ್ನಗಳಾಗಿ ಮಾರಾಟ ಮಾಡಲಾಗುತ್ತದೆ. ಜೊತೆಗೆ ತೆರವುಗೊಂಡ ಭೂಮಿಯನ್ನು ಮಾನವರು ಜಾನವಾರುಗಳ ಮೇವಿಗಾಗಿ ವಾಣಿಜ್ಯ ಉತ್ಪನ್ನಗಳನ್ನು ಪಡೆಯಲು ಹಾಗೂ ವಾಸಯೋಗ್ಯ ಸ್ಥಳಗಳಿಗಾಗಿ ಬಳಕೆ ಮಾಡಲಾಗುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಅರಣ್ಯ ಪುನರ್ ನಿರ್ಮಾಣ ಮಾಡದೇ ಜನರು ಮರಗಳನ್ನು ಕಡಿದು ಹಾಕುತ್ತಿದ್ದಾರೆ. ಇದರಿಂದಾಗಿ ಅರಣ್ಯ ನಾಶವಾಗುತ್ತದೆ.
ಕಾರ್ಖಾನೆಗಳ ನಿರ್ಮಾಣ:
ಕಾರ್ಖಾನೆಗಳ ನಿರ್ಮಾಣದಿಂದ ಕಾರ್ಖಾನೆಗಳಿಂದ ಹೊರ ಬರುವ ಹೊಗೆಯನ್ನು ನಾವು ಸೇವಿಸುವುದರಿಂದ ಮಾರಣಾಂತಿಕ ಕಾಯಿಲೆಯನ್ನು ನಾವು ಎದುರಿಸಬೇಕಾಗುತ್ತದೆ. ಕಾರ್ಖಾನೆಯಿಂದ ಹೊರಬರುವ ಹೊಗೆಯು ಎತ್ತರದಿಂದ ಹೊರಬರುವುದರಿಂದ ನಮ್ಮ ಓಝೋನ್ ಪದರವು ತೂತು ಬೀಳುತ್ತದೆ ಇದರಿಂದಾಗಿ ಸೂರ್ಯನ ಬೆಳಕು ನೇರವಾಗಿ ಭೂಮಿಗೆ ಬೀಳುವುದರಿಂದ ಭೂಮಿಯ ತಾಪಮಾನ ಹೆಚ್ಚುತ್ತದೆ. ಅರಣ್ಯಸಂಕುಲ ಕ್ಷೀಣಿಸುತ್ತಾ ಹೋಗುತ್ತದೆ. ಹಾಗೆಯೇ ಬರಗಾಲ ಹೆಚ್ಚುತ್ತದೆ ಹಾಗೂ ಕಾರ್ಖಾನೆಯಿಂದ ಹೊರಬರುವ ನೀರನ್ನು ಗೊತ್ತಿಲ್ಲದೇ ಜನಸಾಮಾನ್ಯರು ಬಳಸುವುದರಿಂದ ಅವರಿಗೆ ರೋಗಗಳು ಶುರುವಾಗುತ್ತದೆ.
ಪರಿಹಾರ:
ನಾವು ವಾಹನಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಬೇಕು. ಆದಷ್ಟು ಸಾರ್ವಜನಿಕ ವಾಹನದಲ್ಲಿ ಪ್ರಯಾಣಿಸಬೇಕು. ಇದರಿಂದ ವಾಯುಮಾಲಿನ್ಯವು ಅರ್ಧದಷ್ಟು ಕಡಿಮೆಯಾಗುತ್ತದೆ ಹಾಗೂ ಇಂಧನಗಳ ಬಳಕೆಯು ಕಡಿಮೆಯಾಗುತ್ತದೆ.
ಈ ಪರಿಸರದ ಬಗ್ಗೆ ಹಲವಾರು ಘೋಷಣೆಗಳಿವೆ.
ಅವುಗಳೆಂದರೆ:
1) ಗಿಡ ನೆಟ್ಟು ಬರ ಅತ್ತು
2) ಮನೆಗೊಂದು ಗಿಡ ಊರಿಗೊಂದು ವನ
3) ಹಸಿರೇ ಉಸಿರು
4) ಕುಡಿಯಿರಿ ಶುದ್ಧಜಲ ಕೊಲ್ಲದಿರಿ ಅಂತರ್ಜಲ
5) ಮರು ಬಳಕೆ ವಸ್ತುಗಳ ಬಳಕೆ ಭೂಮಿಗೆ ಮರುಜೀವ
6) ನೈಸರ್ಗಿಕ ಆಹಾರ ನೈಜ ಪರಿಸರ.
ಈ ಮೇಲಿನ ಘೋಷಣೆಗಳನ್ನು ಅರ್ಥೈಸಿಕೊಂಡು ಅದನ್ನು ಪಾಲಿಸಿದರೆ ನಮ್ಮ ಪರಿಸರವು ಮೊದಲಿನ ಹಾಗೆ ಸ್ವಚ್ಛಂದ ಪರಿಸರ ಆಗುವುದರಲ್ಲಿ ಎರಡು ಮಾತಿಲ್ಲ.
ಕಾಡುಗಳ ನಾಶವನ್ನು ನಿಷೇಧಿಸಬೇಕು. ‘ವಂದನಾಶಿವ’ ಎಂಬ ಒಬ್ಬ ಗೃಹಿಣಿಯು ತನ್ನ ಪತಿ ಮರ ಕಡಿದು ವ್ಯಾಪಾರ ಮಾಡುವುದನ್ನು ಖಂಡಿಸಿದಳು. ಈ ಮಹಿಳೆಯಂತೆ ಒಂದು ಮನೆಯಲ್ಲಿ ಯಾರಾದರೂ ಒಬ್ಬರು ಈ ಕೃತ್ಯವನ್ನು ತಡೆದಲ್ಲಿ ನಾವು ಕಾಡುಗಳ ಸಂರಕ್ಷಣೆ ಮಾಡಬಹುದು.
ಸಾಲುಮರದ ತಿಮ್ಮಕ್ಕನಂತಹ ಮಹಿಳೆಯರು ನಮ್ಮಲ್ಲಿ ಇನ್ನೂ ಹುಟ್ಟಿಬರಬೇಕು. ಏಕೆಂದರೆ ಅವರು ತಮಗೆ ಸಂತಾನ ಭಾಗ್ಯ ಸಿಗುವುದಿಲ್ಲ ಎಂದು ಕೊರಗದೆ ಗಿಡಗಳನ್ನು ತನ್ನ ಮಕ್ಕಳಂತೆ ಪ್ರೀತಿಸಿ ಪಾಲನೆ ಪೋಷಣೆ ಮಾಡಿದರು. ಹೀಗೆಯೇ ನಾವು ಕೂಡಾ ಮರ ಗಿಡಗಳ ಪಾಲನೆ ಪೋಷಣೆ ಮಾಡಬೇಕು.
ಕಾರ್ಖಾನೆಗಳಿಂದ ಹೊರಬರುವ ನೀರನ್ನು ಶುದ್ಧಗೊಳಿಸಿ ಬೇರೆಡೆಗೆ ರವಾನೆ ಮಾಡಬೇಕು. ಇಲ್ಲದಿದ್ದಲ್ಲಿ ಆ ನೀರು ಹೋಗಲು ಒಂದು ಸೂಕ್ತ ಸ್ಥಳವನ್ನು ನಿರ್ಮಿಸಿ ಅಲ್ಲಿಗೆ ಆ ನೀರು ಹೋಗುವಂತೆ ಮಾಡಬೇಕು.
ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು. ಹಾಗೂ ಪ್ಲಾಸ್ಟಿಕನ್ನು ರೀ ಸೈಕ್ಲಿಂಗ್ ಮಾಡಬೇಕು. ಹಸಿಕಸ-ಒಣಕಸ ಬೇರೆ ಬೇರೆ ಮಾಡಿ ವಿಂಗಡಿಸಬೇಕು. ಆಗ ಪ್ಲಾಸ್ಟಿಕನ್ನು ಮರುತ್ಪಾದನೆ ಮಾಡಲು ಸಾಧ್ಯ.
ಇವೆಲ್ಲವನ್ನು ನಾವು ಚಾಚುತಪ್ಪದೇ ಮಾಡಿದಲ್ಲಿ ನಮ್ಮದೂ ಕೂಡ ಸ್ವಚ್ಛಂದ ಪರಿಸರ ಆಗಲು ಸಾಧ್ಯ.