ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ 26-12-2021 ರ ಭಾನುವಾರ ನಡೆದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ) ಪ್ರಶ್ನೆಪತ್ರಿಕೆಯಲ್ಲಿ ಏಕಾಏಕಿ ಹಿಂದಿ ಪ್ರಶ್ನೆಗಳು ಎದುರಾಗಿದ್ದು ಅಭ್ಯರ್ಥಿಗಳು ಗೊಂದಲಕ್ಕೆ ಸಿಲುಕಿದರು. ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಹಿಂದಿ ಭಾಷೆಯ ಪ್ರಶ್ನೆಗಳು ಬಂದದ್ದರಿಂದ ಸುಮಾರು ಎರಡು ಗಂಟೆಗಳ ಕಾಲ ತಾಂತ್ರಿಕ ಸಮಸ್ಯೆ ನೀಡಿ ಪರೀಕ್ಷೆಯನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ನಂತರ ಮತ್ತೆ ಪರೀಕ್ಷೆ ಆರಂಭವಾಯಿತಾದರೂ ಅನೇಕ ಅಭ್ಯರ್ಥಿಗಳ ಪರೀಕ್ಷಾ ವೆಬ್ಸೈಟ್ ತೆರೆದುಕೊಳ್ಳಲೇ ಇಲ್ಲ.
ಎನ್.ಇ.ಟಿ. ಆನ್‌ಲೈನ್‌ನಲ್ಲಿ ನಡೆಸುವ ಪರೀಕ್ಷೆಯಾಗಿದೆ. ಸಾಮಾನ್ಯ ಜ್ಞಾನ ಪ್ರಶ್ನೆಪತ್ರಿಕೆಯಲ್ಲಿ 50 ಪ್ರಶ್ನೆಗಳಿರುತ್ತವೆ. ಈ ಪತ್ರಿಕೆಯು ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿರುತ್ತದೆ. ಇಷ್ಟು ವರ್ಷ ಅಭ್ಯರ್ಥಿಯ ಆಯ್ಕೆಯ ಭಾಷೆ ಮಾತ್ರ ಕಂಪ್ಯೂಟರ್ ಪರದೆಯಲ್ಲಿ ಬರುತ್ತಿತ್ತು. ಆದರೆ ಈ ವರ್ಷ ಅಭ್ಯರ್ಥಿಯ ಆಯ್ಕೆಯ ಭಾಷೆಯ ಜೊತೆಗೆ ಹಿಂದಿಯಲ್ಲೂ ಪ್ರಶ್ನೆಗಳು ಒಟ್ಟೊಟ್ಟಿಗೆ ಬರುತ್ತಿತ್ತು. ಇದು ಕೂಡ ಒಂದು ರೀತಿಯಲ್ಲಿ ಸಮಸ್ಯೆಯೇ. ಹೀಗೆ ಮಾಡಿದ್ದರಿಂದ ಸರಿಯಾಗಿ ಕೇಳಿದ ಪ್ರಶ್ನೆಯನ್ನು ಗ್ರಹಿಸಲು ಸಾಧ್ಯವಾಗದೆ ಅಭ್ಯರ್ಥಿಗಳ ಸಮಯವನ್ನು ಹಾಳು ಮಾಡಿತು. ಕೇಂದ್ರ ಸರ್ಕಾರಗಳು ನಡೆಸುವ ಪರೀಕ್ಷೆಯಲ್ಲಿ ಹಿಂದಿಯನ್ನು ಪ್ರಮುಖ ಭಾಷೆಯಾಗಿ ಪರಿಗಣಿಸುವ ಬದಲು ರಾಜ್ಯ ಭಾಷೆಯಲ್ಲಿಯೇ ಪ್ರಶ್ನೆಗಳನ್ನು ಕೇಳಿದರೆ ದಕ್ಷಿಣ ಭಾರತದ ವಿದ್ಯಾರ್ಥಿಗಳಿಗೆ ಆಗುವ ಅನ್ಯಾಯವನ್ನು ತಡೆಯಬಹುದು.
ಹಿಂದಿ ಭಾಷೆಯ ಹೇರಿಕೆ ಸ್ಪಷ್ಟವಾಗಿ ಗೋಚರಿಸಿದ್ದು ಕನ್ನಡ ಭಾಷೆಯನ್ನು ಅಧ್ಯಯನ ಮಾಡಿ ಎನ್.ಇ.ಟಿ. ಅರ್ಹತೆ ಪಡೆಯಲು ಬರೆದ ಕನ್ನಡ ಭಾಷೆಯ ಪ್ರಶ್ನೆ ಪತ್ರಿಕೆಯಲ್ಲಿ. ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ 100 ಪ್ರಶ್ನೆಗಳಿರುತ್ತವೆ. ಇದರಲ್ಲಿ ಮೊದಲ ಹತ್ತು ಪ್ರಶ್ನೆಗಳು ಮಾತ್ರ ಕನ್ನಡದಲ್ಲಿದ್ದವು. ಉಳಿದ ಪ್ರಶ್ನೆಗಳೆಲ್ಲ ಹಿಂದಿ ಭಾಷೆಯದ್ದಾಗಿದ್ದವು. ಹೀಗಾಗಿ ಪರೀಕ್ಷಾ ಅಭ್ಯರ್ಥಿಗಳಿಗೆ ಗೊಂದಲ ಉಂಟಾಯಿತು. ಇದರಿಂದ ಸಾಕಷ್ಟು ದೂರದಿಂದ ಪರೀಕ್ಷಾ ಕೇಂದ್ರ ತಲುಪಿದ್ದ ವಿದ್ಯಾರ್ಥಿಗಳು ಕೇಂದ್ರದಲ್ಲಿಯೆ ಆಕ್ರೋಶವನ್ನು ಹೊರಹಾಕಿದರು. ಮತ್ತೆ ಹೆಚ್ಚುವರಿ ಸಮಯ ನೀಡಿ ಪರೀಕ್ಷೆ ನಡೆಸಿದರೂ ಮತ್ತೊಂದು ಸಮಸ್ಯೆಯಾಗಿತ್ತು. ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಪ್ರಶ್ನೆಗಳು ಪುನಾರಾವರ್ತನೆಯಾಗಿದ್ದವು. ಈ ರೀತಿ ಆಗಿದ್ದು ನಿಜಕ್ಕೂ ಅನ್ಯಾಯವೇ. ಬೇರೆ ಭಾಷೆಗಳಿಗೆ ಆಗದ ತೊಂದರೆ ಕನ್ನಡ ಭಾಷೆಗೆ ಮಾತ್ರ ಯಾಕೆ ಎಂದು ಆಲೋಚಿಸಬೇಕಾಗುತ್ತದೆ. ಹಿಂದಿ ಭಾಷೆಯ ಹೇರಿಕೆಯ ಬಗ್ಗೆ ಚರ್ಚೆಯಾಗುತ್ತಿರುವಾಗಲೆ ಈ ರೀತಿಯಾಗಿದ್ದು ನಿಜಕ್ಕೂ ಇದು ಕನ್ನಡ ಭಾಷೆಗಾದ ಅನ್ಯಾಯ ಎನ್ನುವುದರಲ್ಲಿ ಸಂಶಯವಿಲ್ಲ.
ಇಲ್ಲಿಯವರೆಗೂ ಬೇರೆ ವಿಷಯಗಳ ಪರೀಕ್ಷೆಗಳು ಸುವ್ಯವಸ್ಥಿತವಾಗಿ ನಡೆದಿವೆ. ಆದರೆ ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ದೋಷ ಕಂಡು ಬಂದು ಅಭ್ಯರ್ಥಿಗಳು ಆಕ್ರೋಶ ಹೊರಹಾಕಿದ್ದರಿಂದ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಹೊಸ ನೋಟಿಫಿಕೇಷನ್ ಹೊರಡಿಸಿ, ಮರು ಪರೀಕ್ಷೆ ನಡೆಸುವುದಾಗಿ ತಿಳಿಸಿದೆ. ನಿಜ ಸಮಸ್ಯೆ ಇರುವುದೇ ಇಲ್ಲಿ. ಈ ವರ್ಷ ಪರೀಕ್ಷೆಯ ಕೇಂದ್ರವನ್ನು ಅಭ್ಯರ್ಥಿಗಳು ಮೊದಲೇ ಕೇಳಿದ್ದ ಸ್ಥಳದಲ್ಲಿ ನೀಡದೆ, ಸಮಯ ಮತ್ತು ಹಣ ಎರಡೂ ವ್ಯರ್ಥವಾಗುವ ರೀತಿಯಲ್ಲಿ ಕೇಳದ ಸ್ಥಳದಲ್ಲಿ ಪರೀಕ್ಷೆ ನಡೆಸಿದ್ದಾರೆ. ಇವರಿಗೆ ಹೇಳುವವರು ಇಲ್ಲ. ಕೇಳುವವರು ಇಲ್ಲ. ಈಗ ಮತ್ತೊಮ್ಮೆ ಮರು ಪರೀಕ್ಷೆ ಎಂದರೆ ಅಲ್ಲಿಗೆ ಹೋಗಲು ತಗಲುವ ವೆಚ್ಚವನ್ನು ನೀಡುವವರು ಯಾರು ಎಂದು ಈ ಪರೀಕ್ಷೆ ನಡೆಸುವವರಿಗೆ ಕೇಳ ಬೇಕಾಗುತ್ತದೆ. ಇವರ ಈ ಬೇಜವಾಬ್ದಾರಿ ತನವನ್ನು ಪ್ರಶ್ನಿಸಿ, ಕನ್ನಡ ಭಾಷೆಯ ಪರೀಕ್ಷೆಯನ್ನು ಎದುರಿಸಿದ ಅಭ್ಯರ್ಥಿಗಳ ಸಮಸ್ಯೆಯನ್ನು ಸರಿಪಡಿಸುವ ಗಟ್ಟಿತನವನ್ನು ಯಾರು ಪ್ರದರ್ಶಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.