- ನಾಗರಾಜ ಖಾರ್ವಿ ಕಂಚುಗೋಡು
ದಡದಲ್ಲಿ ನಿಂತು ನೋಡುವವನಿಗೆ ಕಡಲು ಮುದ ನೀಡುತ್ತದೆ. ಕಡಲಲೆಗಳ ಮೇಲಿಂದ ಬೀಸಿ ಬರುವ ಕುಳಿರ್ಗಾಳಿ ನವಿರಾಗಿ ಕಚಕುಳಿಯನ್ನು ನೀಡುತ್ತದೆ. ಕಡಲಿನ ಒಡಲಿನಲ್ಲಿ ದುಡಿಯುವವನಿಗೆ ಇದ್ಯಾವುದರ ಮುದ ಸಿಗದು. ನಿತ್ಯದ ಕಾಯಕದಿಂದ ಮನಸ್ಸು ಬೇಸರಗೊಂಡಿರುತ್ತದೆ. ದಂಡೆಯಲ್ಲಿ ನಿಂತು ನೋಡುವವನಿಗೆ ಭೋರ್ಗೆರೆಯುವ ಅಲೆಗಳು ಮನಸ್ಸನ್ನು ಸಂತೋಷಗೊಳಿಸುತ್ತದೆ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬಂತೆ..! ಅದೇ ಅಲೆಗಳ ಮೇಲೆ ಅನಿವಾರ್ಯದ ಸವಾರಿ ಮಾಡುವವನಿಗೆ ಕಡಲು ನೀಡುವ ಸವಾಲುಗಳನ್ನು ಗೆಲ್ಲಲೇಬೇಕು. ಸೋತವನಿಗೆ ಬದುಕಿಲ್ಲ. ಅದೇ ಕ್ಷಣ ಸಮುದ್ರ ಅವನನ್ನು ಆಪೋಶನ ಮಾಡಿಬಿಡುತ್ತದೆ. ಈಜು ತಿಳಿದಿರಲೇಬೇಕು. ಕೈಕಾಲು ಬಡಿಯುವಷ್ಟಲ್ಲ; ದಿನಗಟ್ಟಲೆ ಈಜುವ ಮನೋಬಲ, ದೇಹಬಲ ಹೊಂದಿರಬೇಕು. ಎಂತಹ ಕಠಿನತಮ ಸನ್ನಿವೇಶದಲ್ಲೂ ಸೋಲಲಾರೆನೆಂಬ ಆತ್ಮವಿಶ್ವಾಸವಿರಬೇಕು. ತಾನೊಬ್ಬನೇ ಅಲ್ಲ, ತನ್ನೊಂದಿಗಿರುವ ಇತರರಿಗೆ ಧೈರ್ಯ ತುಂಬುವಷ್ಟು ಆತ್ಮಬಲವಿರಬೇಕು; ವಿಷಮ ಪರಿಸ್ಥಿತಿಗೆ ಒಗ್ಗಿಕೊಳ್ಳಬೇಕು. ದೇಹ ಸ್ಪಂದಿಸದಿದ್ದರು, ದೇಹವನ್ನು ಸ್ಪಂದಿಸುವಂತೆ ತಯಾರು ಮಾಡಿಕೊಳ್ಳಬೇಕು. ಲವಣಯುಕ್ತ ಗಾಳಿಗೆ ಎದೆಯೊಡ್ಡಬೇಕು. ಇವೆಲ್ಲ ಇದ್ದರೆ ಮಾತ್ರ ಸಮುದ್ರರಾಜ ಪ್ರಸನ್ನನಾಗಿ ತನ್ನ ಮಡಿಲಲ್ಲಿ ದುಡಿಸಿಕೊಳ್ಳುತ್ತಾನೆ. ಇಲ್ಲದಿದ್ದರೆ ಸಮುದ್ರದಲ್ಲಿ ತೇಲುವ ಕಸ ಕಡ್ಡಿಯಂತೆ ಹೊರಗೆ ತಳ್ಳಿ ಬಿಡುತ್ತಾನೆ.
ಕರ್ನಾಟಕದ ಕಾರವಾರ, ತದಡಿ, ಭಟ್ಕಳ , ಹೊನ್ನಾವರ, ಗಂಗೊಳ್ಳಿ, ಮಲ್ಪೆ, ಮಂಗಳೂರು ಮುಂತಾದ ಹೆಸರುವಾಸಿ ಬಂದರುಗಳಲ್ಲದೆ ಇನ್ನು ಹತ್ತಾರು ಕಿರುಬಂದರುಗಳಿವೆ. ನದಿ ಮತ್ತು ಸಮುದ್ರ ಸಂಗಮಗೊಳ್ಳುವ ಸ್ಥಳವನ್ನು ಅಳಿವೆ ಎಂದು ಕರೆಯುತ್ತಾರೆ. ಅಗಾಧ ಪ್ರಮಾಣದಲ್ಲಿ ಹರಿದು ಬರುವ ನದಿ ನೀರು, ಸಮುದ್ರವನ್ನು ಹಲವು ಕಿ.ಮೀ.ಗಳವರೆಗೆ ಅರ್ಧಚಂದ್ರಾಕೃತಿಯಲ್ಲಿ ಒತ್ತಿಕೊಂಡು ಹೋಗುತ್ತದೆ. ಸಂಗಮದ ಸ್ಥಳದಲ್ಲಿ ನೀರಿನ ಒತ್ತಡ ಹೇಗಿರಬಹುದೆಂದು ಊಹಿಸಿ. ಕರಾವಳಿಯಲ್ಲಿ ಒಂದು ಮಾತಿದೆ, ‘ಅಳಿವೆಯಲ್ಲಿ ಬಿದ್ದವ, ಉಳಿಯುವುದು ಕಷ್ಟ’. ಪ್ರತಿನಿತ್ಯ ಸಾವಿರಾರು ದೋಣಿಗಳು, ಬೋಟುಗಳು ಇದೇ ಅಳಿವೆಯ ಮೂಲಕ ಸಮದ್ರವನ್ನು ಪ್ರವೇಶಿಸುತ್ತವೆ. ನದಿಯಲ್ಲೋ, ಸಮುದ್ರದಲ್ಲೋ ಹೋಗುವಾಗ ಮಾತನಾಡುತ್ತಾ, ನಗುತ್ತಾ, ಕೆಲಸ ಮಾಡುತ್ತಾ ಸಾಗುವ ನಾವಿಕರು, ಅಳಿವೆಯ ಬಳಿ ಬಂದಾಗ ಸ್ತಬ್ಧರಾಗಿ ಬಿಡುತ್ತಾರೆ; ಮೌನಕ್ಕೆ ಶರಣಾಗುತ್ತಾರೆ; ಯಾವ ಅನಿವಾರ್ಯದ ಕಾರ್ಯಚಟುವಟಿಕೆ ಇದ್ದರೂ ಒಮ್ಮೆ ನಿಲ್ಲಿಸಿ, ಅಳಿವೆ ದಾಟುವವರೆಗೆ ಉಸಿರು ಬಿಗಿ ಹಿಡಿದಿರುತ್ತಾರೆ. ಕಾರಣ, ಈ ಸ್ಥಳದಲ್ಲಿ ಇರುವ ನೀರಿನ ಸೆಳೆತ ಮತ್ತು ಒತ್ತಡ. ಆ ಒತ್ತಡಕ್ಕೆ ಏಳುವ ರಾಕ್ಷಸಗಾತ್ರದ ಅಲೆಗಳು. ಆಳ ಕಡಿಮೆಯಾದಷ್ಟು ತೆರೆಗಳು ಹೆಚ್ಚು. ಸಮುದ್ರದಲ್ಲಿ ಭರತವಿದ್ದರೆ ನದಿಯೆಡೆಗೆ ಸಾಗುವ ನೀರು ಮತ್ತು ಇಳಿತವಿದ್ದಾಗ ನದಿಯಿಂದ ಸಮುದ್ರದ ಕಡೆ ನುಗ್ಗುವ ನೀರು ಈ ಮಾರ್ಗವಾಗಿಯೇ ಒಳಹೊರಗೆ ಹೋಗುವುದು. ಸಾಮಾನ್ಯವಾಗಿ ಒಂದರ ಹಿಂದೆ ಒಂದರಂತೆ ಏಳು ಬೃಹತ್ ಅಲೆಗಳು ಬಂದ ನಂತರ ಸಮುದ್ರ ಒಂದರ್ಧ ನಿಮಿಷ ಸ್ವಲ್ಪ ಶಾಂತವಾಗುತ್ತದೆ. ಆ ಕ್ಷಣದಲ್ಲಿ ಅಳಿವೆ ದಾಟಿ ಬಿಡಬೇಕು. ಆದರೆ ಸಮುದ್ರ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತದೆ ಎಂದೇನಿಲ್ಲ. ಕೆಲವು ಬಾರಿ ನಮ್ಮ ಎಣಿಕೆ ವ್ಯತ್ಯಾಸವಾಗಿ ರಾಕ್ಷಸ ಗಾತ್ರದ ಅಲೆಗಳು ಮೇಲೇರಿ ಬರಲಾರಂಭಿಸುತ್ತವೆ. ಅದರ ನಾಲಿಗೆಗೆ ದೋಣಿ ಸಿಕ್ಕರೆ, ಆಗ ದೋಣಿಯ ವೇಗ ಊಹೆಗೂ ಸಿಗದು. ರಾಕೆಟ್ ವೇಗದಲ್ಲಿ ದೋಣಿಯನ್ನು ಕೊಂಡೊಯ್ದು ಬಿಡುತ್ತದೆ. ಹೀಗೆ ರಭಸವಾಗಿ ಕೊಂಡೊಯ್ದು, ಅಲೆಗಳು ಮಡಚಿಕೊಳ್ಳುವ ಸಮಯದಲ್ಲಿ ದೋಣಿಯನ್ನು ಅಡ್ಡಕ್ಕೆ ಹಾಕಿಬಿಡುತ್ತದೆ. ಆಗ ನಡೆಯಬಾರದ ಅವಘಡ ನಡೆದು ಬಿಡುವುದು.
ಅದರ ರಭಸಕ್ಕೆ ಎಷ್ಟೋ ದೋಣಿಗಳ ಔಟ್ ಬೋರ್ಡ್ ಎಂಜಿನ್‌ಗಳು ಕಿತ್ತುಕೊಂಡು ಹೋಗಿ ಸಮುದ್ರ ಪಾಲಾಗಿದ್ದೂ ಇವೆ. ಕೆಲವು ಬಾರಿ ಬಂಡೆ, ತಡೆಗೋಡೆ, ಅಥವಾ ಮರಳಿನ ದಿಬ್ಬಕ್ಕೆ ಬಡಿದು ದೋಣಿ ಪುಡಿ ಪುಡಿಯಾಗುತ್ತದೆ. ಇಲ್ಲವೆ ಇಬ್ಭಾಗವಾಗುವುದು. ಹಿಂದೆಲ್ಲ ದೋಣಿಗಳ ಹಿಂಭಾಗದಲ್ಲಿ ಅಗಲವಾದ ಹಲಗೆಯ ಚುಕ್ಕಾಣಿ ಇರುತ್ತಿದ್ದವು. ಚುಕ್ಕಾಣಿ ಹಿಡಿದರೆ ಸಾಮಾನ್ಯವಾಗಿ ಅಲೆಗಳ ರಭಸಕ್ಕೆ ದೋಣಿಗಳು ಮಗುಚಿ ಬೀಳಲಾರವು. ಆದರೆ ಈಗ ಪ್ರಬಲ ಶಕ್ತಿಯ ಎಂಜಿನ್‌ಗಳು ಇರುವುದರಿಂದ ಚುಕ್ಕಾಣಿಯನ್ನು ಯಾರೂ ಬಳಸುವುದಿಲ್ಲ. ಅಳಿವೆಯಲ್ಲಿ ದುರಂತ ಸಂಭವಿಸಿದಾಗ ದೂರದಲ್ಲಿರುವ ಯಾವ ದೋಣಿಯವರಿಗೂ ಆ ಸ್ಥಳಕ್ಕೆ ತಲುಪಲಾಗದು. ಆದರೂ ಕೆಲವರು ಪ್ರಾಣದ ಹಂಗು ತೊರೆದು ಸಹಾಯಕ್ಕಾಗಿ ಅವರ ಬಳಿ ಹೋಗುತ್ತಾರೆ. ಹೀಗೆ ಹೋದವರು ಅಪಾಯಕ್ಕೆ ಸಿಲುಕಿದ ನೂರಾರು ಉದಾಹರಣೆಗಳುಂಟು.
ಶರಾವತಿ ನದಿಯು ಬಹು ವಿಸ್ತಾರವಾದ ನದಿಪಾತ್ರವನ್ನು ಹೊಂದಿರುವುದರಿಂದ ಹೊನ್ನಾವರದ ಅಳಿವೆಯೂ ಸಹ ವಿಸ್ತಾರವಾಗಿದೆ. ಇಲ್ಲಿ ದೋಣಿಗಳು ಮುಳುಗಿದರೆ ಈಜಿಕೊಂಡು ದಡ ಸೇರುವುದು ಅಸಾಧ್ಯದ ಮಾತು. ಉಡುಪಿಯ ಹಂಗಾರಕಟ್ಟೆ ಅಳಿವೆ ಇದಕ್ಕೆ ಹೊರತಾಗಿಲ್ಲ. ಸದಾ ಉಗ್ರ ರೂಪದಲ್ಲಿಯೇ ಇರುತ್ತದೆ. ಗಂಗೊಳ್ಳಿಗೆ ಐದು ನದಿಗಳಾದ ಖೇಟ, ಚಕ್ರ, ಸೌಪರ್ಣಿಕ, ವಾರಾಹಿ ಮತ್ತು ಕುಬ್ಜ ನದಿಗಳು ಬೇರೆ ಬೇರೆ ಭಾಗಗಳಿಂದ ಹರಿದು ಬಂದರೂ, ಸಮುದ್ರ ಸೇರುವ ಮೊದಲು ಐದು ನದಿಗಳು ಒಂದಾಗಿ ಪಂಚಗಂಗಾವಳಿ ಎಂಬ ಹೆಸರು ಪಡೆದು ನಂತರ ಸಮುದ್ರ ಸೇರುತ್ತದೆ. ಈ ಐದು ನದಿಗಳ ಸಂಗಮ ಸ್ಥಳ, ಅಳಿವೆಯಿಂದ ಕೇವಲ ಐನೂರು ಮೀಟರ್ ದೂರದಲ್ಲಿದೆ. ಬಹುಶಃ ಇಂತಹ ವಿಶೇಷತೆ ಜಗತ್ತಿನ ಯಾವ ಬಂದರಿನಲ್ಲಿ ಕಾಣಸಿಗದು. ಈ ಅಳಿವೆಯಲ್ಲಿ ನೀರಿನ ಒತ್ತಡ ಎಷ್ಟಿರಬಹುದು ಅಲ್ಲವೆ? ವರ್ಷಂಪ್ರತಿ ಈ ಐದೂ ನದಿಗಳು ಹೊತ್ತು ತರುವ ಅಪಾರ ಪ್ರಮಾಣದ ಮಣ್ಣಿನಿಂದಾಗಿ ಅಳಿವೆಯಲ್ಲಿ ಆಳ ಕಡಿಮೆಯಾಗಿ ಸದಾ ಹೆದ್ದೆರೆಗಳು ಘರ್ಜಿಸುತ್ತಿರುತ್ತವೆ. ಅಳಿವೆಗಳಲ್ಲಿ ಹೂಳು(ಮಣ್ಣು) ತುಂಬಿಕೊಳ್ಳುವುದರಿಂದಲೇ ಹೆಚ್ಚಿನ ಅಳಿವೆಗಳು ಮರಣಬಾವಿಗಳಾಗಿ ಪರಿಣಮಿಸುವುದು ವಿಪರ್ಯಾಸ.
ಇತ್ತೀಚಿಗೆ ಉಪ್ಪುಂದ ಸಮೀಪದ ಕೊಡೇರಿಯ ಅಳಿವೆಯಲ್ಲಿ ಸಂಭವಿಸಿದ ದೋಣಿ ದುರಂತ ನೋಡಿದ್ದೀರಿ. ನಾಲ್ಕು ಅಮೂಲ್ಯ ಜೀವಗಳನ್ನು, ಕಣ್ಣು ಮುಚ್ಚಿ ತೆರೆಯುವುದರಲ್ಲಿ ಸಮುದ್ರ ನುಂಗಿಬಿಟ್ಟಿತ್ತು. ಕೆಲವು ಬಾರಿ ಎಂತಹ ಅದ್ಭುತ ಈಜುಗಾರನಾದರೂ ದೋಣಿಯಲ್ಲಿದ್ದ ಬಲೆ ಮೈಮೇಲೆ ಬಿದ್ದಾಗ, ಈಜಲಾರದೆ ಸೋತವನು ಹಿಡಿದುಕೊಂಡಾಗ ಎಷ್ಟೇ ಪ್ರಯತ್ನ ಪಟ್ಟರೂ ಈಜಲಾರನು. ಕೊಡೇರಿಯಂತಹ ಬ್ರೇಕ್ ವಾಟರ್ ತಡೆಗೋಡೆ ನಿರ್ಮಿತ ಕಿರುಬಂದರುಗಳು ಕರ್ನಾಟಕದ ಕರಾವಳಿಯಲ್ಲಿ ಹಲವು ಕಡೆಗಳಲ್ಲಿ ಇವೆ. ಎಲ್ಲಾ ಅಳಿವೆಗಳಲ್ಲಿ ಒಂದಲ್ಲ ಒಂದು ಕಾರಣಕ್ಕೆ ಜೀವನಷ್ಟ ಆಗುತ್ತಲೇ ಇವೆ.
ಉತ್ತರ ಕನ್ನಡದ ಕಾರವಾರ ಬಂದರು ಅತ್ಯಂತ ಪುರಾತನ ಮತ್ತು ಅತ್ಯಂತ ಸುರಕ್ಷಿತ ಸ್ವಾಭಾವಿಕ ಬಂದರು. ಎಂತಹ ಗಾಳಿ ಮಳೆಯಿದ್ದರೂ ನೀರು ಒಂದಿನಿತು ಮಿಸುಕಾಡದು. ದಕ್ಷಿಣ ಕನ್ನಡದ ನವಮಂಗಳೂರು ಸಹ ಅತ್ಯಂತ ಸುರಕ್ಷಿತ ಬಂದರಾಗಿದ್ದರೂ ಇವುಗಳಲ್ಲಿ ಹಡಗುಗಳು ಹೋಗಿಬರಲು ಮಾತ್ರ ಅನುಮತಿ ಇದೆ. ಉಳಿದಂತೆ ಸಣ್ಣ ಬೋಟ್‌ಗಳಿಗೆ ಮತ್ತು ನಾಡದೋಣಿಗಳಿಗೆ ಹಳೆ ಬಂದರೇ ಗತಿ. ಇದೂ ಸಹ ಅಪಾಯಕಾರಿ ಅಳಿವೆಯಾಗಿದ್ದು ಆಗಾಗ ಒಂದೊಂದು ಮಹಾ ದುರಂತ ಸಂಭವಿಸುತ್ತಿರುತ್ತವೆ. ಭಟ್ಕಳದ ಅಳಿವೆಯು ಉತ್ತರ ಭಾಗದ ಎತ್ತರದ ಗುಡ್ಡದಿಂದಾಗಿ ಸ್ವಲ್ಪ ಮಟ್ಟಿಗೆ ನೈಸರ್ಗಿಕವಾಗಿ ರಕ್ಷಿಸಲ್ಪಟ್ಟಿದೆ. ಅದೇ ಗುಡ್ಡದ ಮೇಲೆ ದೀಪಸ್ತಂಭವೂ ಇರುವುದರಿಂದ ಮೀನುಗಾರರಿಗೆ ಅನುಕೂಲಕರವಾಗಿದೆ. ಹಾಗಂತ ಅಪಾಯ ಇಲ್ಲವೇ ಇಲ್ಲವೆಂದೇನಿಲ್ಲ. ದಕ್ಷಿಣದ ಗಾಳಿಯಿಂದಾಗುವ ತೂಫಾನಿಗೆ, ಬೃಹತ್ ಅಲೆಗಳು ಏಳಲಾರಂಭಿಸುತ್ತವೆ. ಉಡುಪಿ ಜಿಲ್ಲೆಯಲ್ಲಿರುವ ಬಂದರುಗಳಲ್ಲಿ ಸ್ವಲ್ಪ ಮಟ್ಟಿಗೆ ಸುರಕ್ಷಿತ ಬಂದರೆಂದರೆ ಮಲ್ಪೆ ಬಂದರು. ಸಮುದ್ರದ ಮಧ್ಯದವರೆಗೆ ಕಲ್ಲುಗಳನ್ನು ಹಾಕಿ ಅದನ್ನು ಸೀ ವಾಕ್ ಮಾಡಿ ಪ್ರವಾಸೋದ್ಯಮಕ್ಕೆ ಅನುಕೂಲ ಮಾಡಲಾಗಿದೆ. ಇದು ಕರ್ನಾಟಕದ ಮೊದಲ ‘ಸೀ ವಾಕ್’. ಗಂಗೊಳ್ಳಿಯಲ್ಲೂ ಇದೇ ರೀತಿಯ ಸೀ ವಾಕ್ ನಿರ್ಮಾಣ ಮಾಡಲಾಗಿದೆ. ಸೀ ವಾಕ್ ಮೇಲ್ಗಡೆ ಸಮುದ್ರದ ಕಡೆ ನಡೆಯುತ್ತಾ ಸೌಂದರ್ಯ ಅನುಭವಿಸಬಹುದು.
ದೇಶದ ಆದಾಯದಲ್ಲಿ ಮೀನುಗಾರಿಕೆ ಮತ್ತು ಅದರ ಸಂಬಂಧಿತ ಉದ್ಯಮಗಳಿಂದ ದೊಡ್ಡ ಮಟ್ಟದ ಕೊಡುಗೆ ಇರುವುದರಿಂದ ಈ ಕ್ಷೇತ್ರದ ಅಭಿವೃದ್ಧಿ ಅತ್ಯಗತ್ಯ. ಅಳಿವೆಯಲ್ಲಿ ತತ್ ಕ್ಷಣ ಕಾರ್ಯವೆಸಗಲು ಸಜ್ಜಾಗಿರುವ ಜಲಪಡೆಯನ್ನು ನಿಯೋಜನೆ ಮಾಡಬೇಕು. ಸುರಕ್ಷಿತ ಮಾರ್ಗ ತೋರುವ ದೊಡ್ಡ ದೊಡ್ಡ ತೇಲುವ ಬ್ಯಾರೆಲ್ ಗಳನ್ನು ಮಾರ್ಗದುದ್ದಕ್ಕೂ ಸಮರ್ಪಕವಾಗಿ ಅಳವಡಿಸಬೇಕು. ಎಲ್ಲಾ ಮೀನುಗಾರರಿಗೆ ಈಜು ಜ್ಯಾಕೆಟ್ ಕೊಟ್ಟು, ಜೊತೆಗೆ ಅದರ ಬಳಕೆಯ ಕುರಿತು ಆಗಾಗ ತಿಳಿವಳಿಕೆ ನೀಡುವುದು; ಮಳೆಗಾಲ ಪ್ರಾರಂಭಕ್ಕೂ ಮೊದಲು ಅಳಿವೆಯ ಹೂಳನ್ನು(ಮಣ್ಣನ್ನು) ಸಮರ್ಪಕವಾಗಿ ತೆಗೆಯುವುದರ ಮೂಲಕ ಭವಿಷ್ಯದಲ್ಲಿ ಅಳಿವೆಗಳಲ್ಲಾಗುವ ದುರಂತಗಳನ್ನು ತಪ್ಪಿಸಬಹುದು.